×
Ad

ಮಕ್ಕಳ ಸೋಷಿಯಲ್ ಮೀಡಿಯಾ ಖಾತೆಗಳ ಮೇಲೆ ಪೋಷಕರ ಕಣ್ಣು: ಮೆಟಾ ತಂದ ಹೊಸ ಫೀಚರ್‌ ಗಳು ನಿಜಕ್ಕೂ ಕೆಲಸ ಮಾಡುತ್ತಿದೆಯಾ?

Update: 2026-05-19 22:28 IST

ಸಾಂದರ್ಭಿಕ ಚಿತ್ರ


ಮಕ್ಕಳು ಫೇಸ್ಬುಕ್, ಇನ್ಸ್ಟಾಗ್ರಾಮ್, ಮೆಸೆಂಜರ್ ಮತ್ತು ಹೊರೈಜನ್ (Horizon) ಆಪ್‌ ಗಳನ್ನು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ಪೋಷಕರು ಇನ್ನು ಮುಂದೆ ಮತ್ತಷ್ಟು ಹತ್ತಿರದಿಂದ ಗಮನಿಸಬಹುದು. ಇದಕ್ಕಾಗಿ 'ಮೆಟಾ' (Meta) ಹೊಸ ಸುರಕ್ಷತಾ ಫೀಚರ್‌ ಗಳನ್ನು ಪರಿಚಯಿಸಿದೆ. ಇದಕ್ಕೂ ಮುನ್ನ, ಮೆಟಾ ಸಂಸ್ಥೆಯು ಹದಿಹರೆಯದ ಮಕ್ಕಳ ಸುರಕ್ಷತೆಗಾಗಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿತ್ತು. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ 13 ರಿಂದ 17 ವರ್ಷದೊಳಗಿನ ಬಳಕೆದಾರರನ್ನು ಗುರುತಿಸಿ, ಅವರಿಗಾಗಿ ಪ್ರತ್ಯೇಕ 'ಟೀನ್ ಅಕೌಂಟ್ಸ್' ನಿಯಮಗಳನ್ನು ಜಾರಿಗೆ ತರುತ್ತಿರುವುದಾಗಿ ಅದು ಘೋಷಿಸಿತ್ತು. ಆಸ್ಟ್ರೇಲಿಯಾದಲ್ಲಿ ಕಳೆದ 2025ರಲ್ಲೇ ಈ ನಿಯಮವನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಇದರ ಜೊತೆಗೆ, ಅಪ್ರಾಪ್ತ ವಯಸ್ಕರು ಸುಳ್ಳು ವಯಸ್ಸು ಹೇಳಿ ಖಾತೆ ತೆರೆಯುವುದನ್ನು ತಡೆಯಲು ವಯಸ್ಸಿನ ಪರಿಶೀಲನೆ ಮತ್ತು ಅಂತಹ ಖಾತೆಗಳನ್ನು ಸುಲಭವಾಗಿ ಡಿಲೀಟ್ ಮಾಡಲು ಹೊಸ ರಿಪೋರ್ಟಿಂಗ್ ವ್ಯವಸ್ಥೆಯನ್ನು ಮೆಟಾ ಜಾರಿಗೆ ತರುತ್ತಿದೆ.

ಪ್ರಪಂಚದಾದ್ಯಂತ ಮಕ್ಕಳ ಆನ್ಲೈನ್ ಸುರಕ್ಷತೆಗಾಗಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಮೆಟಾ ಸಂಸ್ಥೆಯ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಒತ್ತಡ ಕೇಳಿಬರುತ್ತಿರುವ ಬೆನ್ನಲ್ಲೇ ಈ ಬದಲಾವಣೆಗಳು ಆಗುತ್ತಿವೆ.

ಹಾಗಾದರೆ, ಮೆಟಾ ತರುತ್ತಿರುವ ಈ ಹೊಸ ಬದಲಾವಣೆಗಳು ಏನೇನು? ಆನ್ಲೈನ್ ನಲ್ಲಿ ಮಕ್ಕಳಿಗೆ ಆಗುವ ತೊಂದರೆಗಳನ್ನು ತಡೆಯಲು ಇವು ನಿಜಕ್ಕೂ ಸಹಾಯ ಮಾಡುತ್ತವೆಯೇ ಎಂಬುದರ ಬಗ್ಗೆ ದಿ ವೈರ್ನಲ್ಲಿ ಪ್ರಕಟವಾಗಿರುವ ವರದಿ ಇಲ್ಲಿದೆ.

ವಯಸ್ಸು ಪತ್ತೆ ಹಚ್ಚಲು AI ಮೊರೆ ಹೋದ ಮೆಟಾ

ಮೂಲ ದಾಖಲೆಗಳಿಲ್ಲದೆ ಬಳಕೆದಾರರ ನಿಜವಾದ ವಯಸ್ಸನ್ನು ಪತ್ತೆ ಹಚ್ಚಲು ಮೆಟಾ ಸಂಸ್ಥೆಯು ಇನ್ಮುಂದೆ ದೃಶ್ಯ ಸುಳಿವುಗಳನ್ನು ಬಳಸಿಕೊಳ್ಳಲಿದೆ. ಅಂದರೆ, ಪ್ರೊಫೈಲ್‌ ನಲ್ಲಿರುವ ಫೋಟೋಗಳನ್ನು ನೋಡಿ ವ್ಯಕ್ತಿಯ ಎತ್ತರ ಮತ್ತು ಮೂಳೆಯ ರಚನೆಯನ್ನು ಅಂದಾಜಿಸುವುದು ಮಾತ್ರವಲ್ಲದೆ, ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಪೋಸ್ಟ್ ಗಳು ಹಾಗೂ ಇತರರೊಂದಿಗಿನ ಒಡನಾಟವನ್ನು ಆಧರಿಸಿ ವಯಸ್ಸನ್ನು ಲೆಕ್ಕ ಹಾಕಲಾಗುತ್ತದೆ.

ಇದಕ್ಕಾಗಿ ಮೆಟಾ ಸಂಸ್ಥೆಯು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಈ AI ತಂತ್ರಜ್ಞಾನವು ಬಳಕೆದಾರರ ಪ್ರೊಫೈಲ್‌ ನಲ್ಲಿರುವ ಫೋಟೋಗಳು, ವಿಡಿಯೊಗಳು, ಬಯೋ (Bio), ಕ್ಯಾಪ್ಷನ್ಗಳು ಮತ್ತು ಕಾಮೆಂಟ್ಗಳನ್ನು ಸೂಕ್ಷ್ಮವಾಗಿ ಸ್ಕ್ಯಾನ್ ಮಾಡುತ್ತದೆ. ಉದಾಹರಣೆಗೆ, ಪೋಸ್ಟ್ಗಳಲ್ಲಿ ಎಲ್ಲಾದರೂ ಬರ್ತ್ಡೇ ಪಾರ್ಟಿ ಅಥವಾ ಶಾಲೆಯ ತರಗತಿಗಳ ಬಗ್ಗೆ ಪ್ರಸ್ತಾಪವಾಗಿದ್ದರೆ, ಆ ಸುಳಿವುಗಳನ್ನು ಹಿಡಿದು ಅವರ ವಯಸ್ಸನ್ನು ಅಂದಾಜಿಸಲಾಗುತ್ತದೆ. ಈ ಮೂಲಕ 13 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಖಾತೆ ಹೊಂದಿದ್ದರೆ, ಅದನ್ನು ಪತ್ತೆ ಹಚ್ಚಿ ಡಿಲೀಟ್ ಮಾಡಲು ಮೆಟಾ ಪ್ಲಾನ್ ಮಾಡಿದೆ.

ಆದರೆ, ವಯಸ್ಸನ್ನು ಪತ್ತೆ ಹಚ್ಚುವ ಇಂತಹ ತಂತ್ರಜ್ಞಾನಗಳಿಗೆ ಕೆಲವು ಮಿತಿಗಳಿವೆ. ಇತ್ತೀಚೆಗೆ ಆಸ್ಟ್ರೇಲಿಯಾ ಸರ್ಕಾರ ಸೋಷಿಯಲ್ ಮೀಡಿಯಾ ನಿಷೇಧ ಜಾರಿಗೊಳಿಸಿದಾಗಲೂ ಇಂತಹದ್ದೇ ಗೊಂದಲಗಳು ಎದುರಾಗಿದ್ದವು. ನಿಯಮಗಳಿದ್ದರೂ ಸಹ ಸಾಕಷ್ಟು ಅಪ್ರಾಪ್ತ ವಯಸ್ಕರು ಇಂದಿಗೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಈಗಿರುವ ದೊಡ್ಡ ಪ್ರಶ್ನೆಯೆಂದರೆ, ಹದಿಹರೆಯದ ಮಕ್ಕಳು ತಮ್ಮ ಪ್ರೊಫೈಲ್‌ ನಲ್ಲಿ ತಾವೊಬ್ಬ ವಯಸ್ಕರಂತೆ ಬಿಂಬಿಸಿಕೊಳ್ಳುವ ಕಂಟೆಂಟ್ ಗಳನ್ನು ಪೋಸ್ಟ್ ಮಾಡುವ ಮೂಲಕ ಮೆಟಾದ ಈ ಹೊಸ ‘AI ಸುಳಿವು’ಗಳನ್ನು ಸುಲಭವಾಗಿ ಮರುಳು ಮಾಡಿ ತಪ್ಪಿಸಿಕೊಳ್ಳಬಹುದಲ್ಲವೇ? ಎಂಬುದು.

►ಸುಲಭವಾದ ರಿಪೋರ್ಟಿಂಗ್ ವ್ಯವಸ್ಥೆ

ಬಹುಶಃ ಇದೇ ಆತಂಕವನ್ನು ದೂರ ಮಾಡಲು ಮೆಟಾ ಸಂಸ್ಥೆಯು ಅಪ್ರಾಪ್ತ ವಯಸ್ಕರ ಖಾತೆಗಳನ್ನು ರಿಪೋರ್ಟ್ ಮಾಡಲು ಹೊಸದೊಂದು ಸುಲಭ ವ್ಯವಸ್ಥೆಯನ್ನು ತರುತ್ತಿದೆ.

ಕೇವಲ AI ಸ್ಕ್ಯಾನಿಂಗ್ ಮೇಲೆ ಮಾತ್ರ ನಂಬಿಕೆ ಇಡದ ಮೆಟಾ, ಬಳಕೆದಾರರೇ ನೇರವಾಗಿ ಇಂತಹ ಖಾತೆಗಳನ್ನು ರಿಪೋರ್ಟ್ ಮಾಡಲು ಅವಕಾಶ ನೀಡುತ್ತಿದೆ. ಇದಕ್ಕಾಗಿ ಕೃತಕ ಬುದ್ಧಿಮತ್ತೆ ಮತ್ತು ಮನುಷ್ಯರ ಜಂಟಿ ಮೇಲ್ವಿಚಾರಣೆಯನ್ನು ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಯಾವುದೇ ತಪ್ಪು ವರದಿ ಬಂದರೂ ಅದನ್ನು ಅತ್ಯಂತ ವೇಗವಾಗಿ ಮತ್ತು ನಿಖರವಾಗಿ ಪರಿಶೀಲಿಸಲು ಸಾಧ್ಯವಾಗುತ್ತದೆ ಎಂದು ಮೆಟಾ ಹೇಳಿದೆ.

ಇದೇ ವೇಳೆ, ಯಾರಾದರೂ ತಪ್ಪಾಗಿ ಇನ್ನೊಬ್ಬರ ಖಾತೆಯನ್ನು 'ಅಪ್ರಾಪ್ತ ವಯಸ್ಕರ ಖಾತೆ' ಎಂದು ರಿಪೋರ್ಟ್ ಮಾಡಿದರೆ, ಅಂತಹ ಬಳಕೆದಾರರು ತಮ್ಮ ವಯಸ್ಸಿನ ಪುರಾವೆಯನ್ನು ಒದಗಿಸಿ ತಮ್ಮ ಖಾತೆಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಬಹುದು ಎಂದು ಮೆಟಾ ಸ್ಪಷ್ಟಪಡಿಸಿದೆ.

►'ಫ್ಯಾಮಿಲಿ ಸೆಂಟರ್' ನಿಯಮಗಳು ಹೇಗಿರಲಿವೆ?

ಮಕ್ಕಳ ಸೋಷಿಯಲ್ ಮೀಡಿಯಾ ಖಾತೆಗಳನ್ನು ಪೋಷಕರು ಒಂದೇ ಜಾಗದಿಂದ ಮೇಲ್ವಿಚಾರಣೆ ನಡೆಸಲು ಮೆಟಾ, "ಫ್ಯಾಮಿಲಿ ಸೆಂಟರ್" (Family Centre) ಎಂಬ ಹೊಸ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. ಫೇಸ್ ಬುಕ್, ಇನ್ಸ್ಟಾಗ್ರಾಮ್, ಮೆಸೆಂಜರ್ ಮತ್ತು ಹೊರೈಜನ್ ಆಪ್‌ ಗಳಿಗೆ ಸಂಬಂಧಿಸಿದ ಪೋಷಕರ ಎಲ್ಲಾ ನಿಯಂತ್ರಣ ಪರಿಕರಗಳು ಇನ್ಮುಂದೆ ಇಲ್ಲೇ ಸಿಗಲಿವೆ.

'ಫ್ಯಾಮಿಲಿ ಸೆಂಟರ್' ಮೂಲಕ, ಹದಿಹರೆಯದ ಮಕ್ಕಳು ಸೋಷಿಯಲ್ ಮೀಡಿಯಾದಲ್ಲಿ ಫೋಟೋಗ್ರಫಿ, ಸ್ಪೋರ್ಟ್ಸ್ ಅಥವಾ ಬ್ಯೂಟಿಯಂತಹ ಯಾವುದೇ ಹೊಸ ವಿಷಯ ಮತ್ತು ಆಸಕ್ತಿಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡ ತಕ್ಷಣ ಪೋಷಕರಿಗೆ ನೋಟಿಫಿಕೇಶನ್ ಹೋಗುತ್ತದೆ. ಇದರಿಂದಾಗಿ ಮಕ್ಕಳು ಯಾವ ರೀತಿಯ ವಿಷಯಗಳನ್ನು ಫಾಲೋ ಮಾಡುತ್ತಿದ್ದಾರೆ ಎಂಬುದನ್ನು ಪೋಷಕರು ತಿಳಿದುಕೊಳ್ಳಬಹುದು ಮತ್ತು ಅವರ ಜೊತೆ ಅರ್ಥಪೂರ್ಣವಾಗಿ ಚರ್ಚಿಸಲು ಸಾಧ್ಯವಾಗುತ್ತದೆ ಎಂದು ಮೆಟಾ ಹೇಳಿದೆ.

ಆದರೆ, ಇತ್ತೀಚಿನ ಆಸ್ಟ್ರೇಲಿಯಾದ ಕಠಿಣ ನಿಯಮಗಳ ಪ್ರಕಾರ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಖಾತೆ ಹೊಂದಲು ಅವಕಾಶವೇ ಇಲ್ಲ.

ಹಾಗಾಗಿ ಆಸ್ಟ್ರೇಲಿಯಾದಲ್ಲಿ, ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಬಳಸುವ 16 ಮತ್ತು 17 ವರ್ಷದ ಹದಿಹರೆಯದ ಮಕ್ಕಳ ಪೋಷಕರಿಗೆ ಮಾತ್ರ 'ಮಕ್ಕಳ ಆಸಕ್ತಿಗಳನ್ನು ತಿಳಿಯುವ ಅವಕಾಶ' ಲಭ್ಯವಿರುತ್ತದೆ. ಆದರೆ, ಈ ಮೇಲ್ವಿಚಾರಣೆ ತಾನಾಗಿಯೇ ಸಕ್ರಿಯಗೊಳ್ಳುವುದಿಲ್ಲ. ಪೋಷಕರು ಮೊದಲು ತಮ್ಮ ಮಕ್ಕಳಿಗೆ ಆಮಂತ್ರಣ ಕಳುಹಿಸಬೇಕು. ಅದನ್ನು ಮಕ್ಕಳು ಒಪ್ಪಿಕೊಂಡರೆ ಮಾತ್ರ ಪೋಷಕರಿಗೆ ಅವರ ಖಾತೆಗಳನ್ನು ಗಮನಿಸಲು ಸಾಧ್ಯವಾಗುತ್ತದೆ.

ಇದರರ್ಥ, ಮಕ್ಕಳು ಪೋಷಕರ ಈ ಆಮಂತ್ರಣವನ್ನು ತಿರಸ್ಕರಿಸಬಹುದು ಮತ್ತು ತಮ್ಮ ಆಸಕ್ತಿಗಳು ಪೋಷಕರಿಗೆ ಕಾಣಿಸದಂತೆ ತಡೆಯಬಹುದು.

►ಮಕ್ಕಳ ಗೌಪ್ಯತೆಯ ಹಕ್ಕು

ಇದು ಮೆಟಾದ ಹೊಸ ನಿಯಮದಲ್ಲಿರುವ ಒಂದು ಪ್ರಮುಖ ಮಿತಿಯಾಗಿದೆ. ಮಕ್ಕಳು ಬಯಸಿದರೆ ತಮ್ಮ ಖಾತೆಯ ಗೌಪ್ಯತೆಯನ್ನು ತಾವೇ ಉಳಿಸಿಕೊಳ್ಳಬಹುದು. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಪ್ಪಂದದ 16ನೇ ವಿಧಿ ಪ್ರಕಾರ, ಪ್ರತಿಯೊಂದು ಮಗುವಿಗೂ ತನ್ನದೇ ಆದ ಗೌಪ್ಯತೆಯ ಹಕ್ಕಿರುತ್ತದೆ ಹಾಗೂ ಇಂಟರ್ನೆಟ್ ಸೇರಿದಂತೆ ವಿವಿಧ ಮೂಲಗಳಿಂದ ಮಾಹಿತಿ ಪಡೆಯುವ ಮುಕ್ತ ಸ್ವಾತಂತ್ರ್ಯ ಇರುತ್ತದೆ.

ಪೋಷಕರ ಇನ್ವಿಟೇಷನ್ ಒಪ್ಪಿಕೊಳ್ಳುವ ಮಕ್ಕಳ ವಿಷಯಕ್ಕೆ ಬಂದರೆ, ಮೆಟಾದ ಈ ಹೊಸ ಬದಲಾವಣೆಗಳು ಅವರ ವೈಯಕ್ತಿಕ ಗೌಪ್ಯತೆಗೆ ಸಣ್ಣ ಮಟ್ಟದ ಅಪಾಯವನ್ನು ತಂದೊಡ್ಡಬಹುದು. ಆದರೆ ಇಲ್ಲಿ ಪೋಷಕರಿಗೆ ಮಕ್ಕಳು ಫಾಲೋ ಮಾಡುವ ಸಾಮಾನ್ಯ ವಿಷಯಗಳ ಮಾಹಿತಿ ಮಾತ್ರ ಸಿಗಲಿದೆಯೇ ಹೊರತು, ಅವರ ವೈಯಕ್ತಿಕ ಚಾಟ್ಗಳು ಅಥವಾ ಅವರು ನೋಡುವ ನಿರ್ದಿಷ್ಟ ಕಂಟೆಂಟ್ಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಈ ಮೂಲಕ ಮೆಟಾ ಮಕ್ಕಳ ಗೌಪ್ಯತೆಯನ್ನು ಒಂದಿಷ್ಟು ಉಳಿಸಿಕೊಂಡಿದೆ.

►ಪೋಷಕರು ಜಾಗೃತರಾಗುವುದು ಅನಿವಾರ್ಯ

ಮೆಟಾ ತಂದಿರುವ ಈ ಹೊಸ ಮೇಲ್ವಿಚಾರಣಾ ಫೀಚರ್ ಯಶಸ್ವಿಯಾಗಬೇಕಾದರೆ ಪೋಷಕರು ಮತ್ತು ಮಕ್ಕಳಿಬ್ಬರೂ ಇದನ್ನು ಬಳಸಲು ಮುಂದೆ ಬರಬೇಕು. ಪೋಷಕರೇ ಇಲ್ಲಿ ಹೆಚ್ಚು ಜಾಗೃತರಾಗಿ ಮಕ್ಕಳಿಗೆ ಇನ್ವಿಟೇಷನ್ ಕಳುಹಿಸಬೇಕಾಗುತ್ತದೆ. ಮಕ್ಕಳು ಅದಕ್ಕೆ ಒಪ್ಪಿಗೆ ನೀಡಿದರೆ ಮಾತ್ರ ಅವರು ಫಾಲೋ ಮಾಡುವ ವಿಷಯಗಳನ್ನು ಗಮನಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ, ಆ ವಿಷಯಗಳ ಅಡಿಯಲ್ಲಿ ಮಕ್ಕಳು ಎಂತಹ ವಿಷಯಗಳು ಅಥವಾ ಪೋಸ್ಟ್ಗಳನ್ನು ನೋಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಪೋಷಕರೇ ಮಕ್ಕಳ ಜೊತೆ ಮುಕ್ತವಾಗಿ ಮಾತನಾಡಬೇಕಾಗುತ್ತದೆ.

ಉದಾಹರಣೆಗೆ, ಕಳೆದ 2025ರ ಅಧ್ಯಯನವೊಂದು ಸೋಷಿಯಲ್ ಮೀಡಿಯಾದ ವಿಪರೀತ ಬಳಕೆಯಿಂದ ಮಕ್ಕಳಲ್ಲಿ ತಮ್ಮ ದೇಹದ ಅಂದದ ಬಗ್ಗೆ ನಕಾರಾತ್ಮಕ ಆಲೋಚನೆಗಳು ಮೂಡುತ್ತಿರುವುದನ್ನು ಸಾಬೀತುಪಡಿಸಿತ್ತು. ಇಂತಹ ದುಷ್ಪರಿಣಾಮಗಳನ್ನು ತಡೆಯಲು "ಪೋಷಕರ ಬೆಂಬಲ ಅತ್ಯಗತ್ಯ" ಎಂದು ಆ ವರದಿ ಒತ್ತಿಹೇಳಿತ್ತು.

ಮೆಟಾ ಕಳುಹಿಸುವ ನೋಟಿಫಿಕೇಶನ್ನಲ್ಲಿ ಕೇವಲ "ಬ್ಯೂಟಿ" ಎಂಬ ಸಾಮಾನ್ಯ ವಿಷಯವಷ್ಟೇ ಪೋಷಕರಿಗೆ ಕಾಣಿಸುತ್ತದೆ. ಆ ಕಂಟೆಂಟ್ ಮೇಕಪ್ ಬಗ್ಗೆ ಒಳ್ಳೆಯ ಟಿಪ್ಸ್ ನೀಡುತ್ತಿದೆಯೇ ಅಥವಾ ಹದಿಹರೆಯದವರ ಮನಸ್ಸಿನ ಮೇಲೆ ಕೆಟ್ಟ ಪ್ರಭಾವ ಬೀರುವ ಕೃತಕ ಸೌಂದರ್ಯದ ಭ್ರಮೆಯನ್ನು ಬಿತ್ತುತ್ತಿದೆಯೇ ಎಂಬುದನ್ನು ಈ ಫೀಚರ್ ಗುರುತಿಸುವುದಿಲ್ಲ. ಅದೇ ರೀತಿ, ಕ್ರೀಡೆ ಎಂಬ ವಿಷಯದ ಅಡಿಯಲ್ಲಿ ಯುವ ಕ್ರೀಡಾಪಟುಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಲಿಂಗ ತಾರತಮ್ಯದ ಕಂಟೆಂಟ್ ಇದ್ದರೂ ಅದನ್ನು ಪತ್ತೆ ಹಚ್ಚಲು ಮೆಟಾಗೆ ಸಾಧ್ಯವಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಅಡಗಿರುವ ಇಂತಹ ಆನ್ಲೈನ್ ಅಪಾಯಗಳನ್ನು ಅರ್ಥಮಾಡಿಕೊಳ್ಳಬೇಕಾದರೆ, ಪೋಷಕರೇ ಖುದ್ದಾಗಿ ಆ ಕಂಟೆಂಟ್ಗಳನ್ನು ನೋಡಿ, ತಮ್ಮ ಮಕ್ಕಳ ಜೊತೆ ಚರ್ಚಿಸಬೇಕಾಗುತ್ತದೆ.

"ನಾವು ಎಷ್ಟೇ ಸುರಕ್ಷತಾ ನಿಯಂತ್ರಣಗಳನ್ನು ರೂಪಿಸಿದರೂ, ಪೋಷಕರು ಅವುಗಳನ್ನು ಬಳಸುತ್ತಲೇ ಇಲ್ಲ" ಎನ್ನುವ ಮೂಲಕ 2024ರಲ್ಲಿ ಮೆಟಾ ಸಂಸ್ಥೆಯ ಆಗಿನ ಜಾಗತಿಕ ವ್ಯವಹಾರಗಳ ಮುಖ್ಯಸ್ಥ Nick Clegg ಅವರೇ ಇದನ್ನು ಒಪ್ಪಿಕೊಂಡಿದ್ದರು.

2023ರ ವರದಿಯೊಂದರ ಪ್ರಕಾರ, ಡಿಜಿಟಲ್ ಜ್ಞಾನ ಹೆಚ್ಚಿರುವ ಪೋಷಕರು ಇಂತಹ ಸುರಕ್ಷತಾ ಫೀಚರ್‌ ಗಳನ್ನು ಬಳಸುವ ಸಾಧ್ಯತೆ ಹೆಚ್ಚು ಎಂಬುದು ನಿಜ. ಆದರೆ ಅದರ ಫಲಿತಾಂಶ ಮಾತ್ರ ಮಿಶ್ರವಾಗಿದೆ. ಕೆಲವು ಕಡೆ ಇದರಿಂದ ಸೈಬರ್ ಬುಲ್ಲಿಂಗ್ನಂತಹ ಅಪಾಯಗಳು ಕಡಿಮೆಯಾಗಿರುವುದು ಕಂಡುಬಂದಿದ್ದರೆ, ಇನ್ನು ಕೆಲವು ಕಡೆ ಇಂತಹ ಕಟ್ಟುನಿಟ್ಟುಗಳಿಂದಾಗಿ ಕುಟುಂಬದಲ್ಲಿ ಮಕ್ಕಳು ಮತ್ತು ಪೋಷಕರ ನಡುವೆ ಜಗಳ, ಭಿನ್ನಾಭಿಪ್ರಾಯಗಳು ಹೆಚ್ಚಾಗಿವೆ.

ಆಸ್ಟ್ರೇಲಿಯಾದ ಸೋಷಿಯಲ್ ಮೀಡಿಯಾ ನಿಷೇಧದ ನಿಯಮಗಳನ್ನು ಸರಿಯಾಗಿ ಪಾಲಿಸದ ಕಾರಣಕ್ಕೆ ಅಲ್ಲಿನ 'ಇ-ಸೇಫ್ಟಿ ಕಮಿಷನರ್' ಈಗಾಗಲೇ ಹಲವು ಸೋಷಿಯಲ್ ಮೀಡಿಯಾ ಕಂಪನಿಗಳಿಗೆ ನೋಟಿಸ್ ನೀಡಿದ್ದಾರೆ. ಇಂತಹ ಕಾನೂನು ಒತ್ತಡಗಳ ನಡುವೆ ಮೆಟಾ ಸಂಸ್ಥೆ ಈ ಹೊಸ ಬದಲಾವಣೆಗಳನ್ನು ತರುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

ಆದರೆ, ಈ ಎಲ್ಲಾ ಫೀಚರ್ ಗಳ ಯಶಸ್ಸು ಅಂತಿಮವಾಗಿ ನಿಂತಿರುವುದು ಪೋಷಕರ ಸಾಮರ್ಥ್ಯ ಮತ್ತು ಈ ನಿಯಮಗಳಿಗೆ ಒಗ್ಗಿಕೊಳ್ಳಲು ಮಕ್ಕಳಿಗಿರುವ ಮನಸ್ಸಿನ ಮೇಲೆ ಮಾತ್ರ. ವಯಸ್ಸನ್ನು ಪತ್ತೆ ಹಚ್ಚುವ ತಂತ್ರಜ್ಞಾನದಲ್ಲಿರುವ ಲೋಪದೋಷಗಳು ಮತ್ತು ಹೇಗಾದರೂ ಮಾಡಿ ಸೋಷಿಯಲ್ ಮೀಡಿಯಾ ಬಳಸಲೇಬೇಕು ಎಂಬ ಹದಿಹರೆಯದ ಮಕ್ಕಳ ಹಠವನ್ನು ನೋಡಿದರೆ, ಮೆಟಾದ ಈ ಹೊಸ ಫೀಚರ್‌ ಗಳು ಮಕ್ಕಳ ರಕ್ಷಣೆಗೆ ಸಂಪೂರ್ಣ ಪರಿಹಾರವನ್ನು ನೀಡುವುದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News