×
Ad

ʼನಿಯಾಂಡರ್ತಲ್ಸ್ʼ ಎಂಬ ಆದಿಮಾನವರಿಗೆ ದಂತ ಚಿಕಿತ್ಸೆ ತಿಳಿದಿತ್ತು!

ಪುರಾತತ್ವ ಶಾಸ್ತ್ರಜ್ಞರು ದಿಗ್ಭ್ರಮೆಗೊಂಡಿದ್ದೇಕೆ?

Update: 2026-05-21 17:18 IST

Photo Credit: University of Ferrara, Italy

ಮಾನವ ಪೂರ್ವ ಯುಗದಲ್ಲಿ ‘ರೂಟ್ ಕೆನಾಲ್’ ಇರುವ ಸಾಧ್ಯತೆಯು ಪುರಾತತ್ವ ಶಾಸ್ತ್ರಜ್ಞರನ್ನು ದಿಗ್ಭ್ರಮೆಗೊಳಿಸಿದೆ.

ನಿಯಾಂಡರ್ತಲ್ಸ್ ಎಂದು ಕರೆಯಲಾಗುವ ಆದಿ ಮಾನವರಿಗೆ ದಂತ ವೈದ್ಯ ತಿಳಿದಿತ್ತು! ಇವು ಆಧುನಿಕ ಮಾನವರ (ಹೋಮೋ ಸೇಪಿಯನ್) ಸಮೀಪದ ವಿಕಸನೀಯ ಸಂಬಂಧಗಳಾಗಿದ್ದು, ಅನೇಕ ಅಂಶಗಳಲ್ಲಿ ಆಧುನಿಕ ಮಾನವರಿಗೆ ಹೋಲಿಕೆ ಇತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ದಕ್ಷಿಣ ಸೈಬೀರಿಯಾದ ಗುಹೆಯೊಂದರಲ್ಲಿ ಪತ್ತೆಯಾದ ದವಡೆ ಹಲ್ಲು ಮಾನವ ಜನಾಂಗವು ಭೂಮಿ ಮೇಲೆ ಆಧುನಿಕ ಆವಿಷ್ಕಾರ ಮಾಡುವ ಮೊದಲೇ ದಂತ ಚಿಕಿತ್ಸೆಗಳು ಇದ್ದವು ಎಂದು ವಿಜ್ಞಾನಿಗಳು ನಂಬುವಂತೆ ಮಾಡಿದೆ.

ಮಾನವ ಪೂರ್ವ ಯುಗದಲ್ಲಿ ‘ರೂಟ್ ಕೆನಾಲ್’ ಇರುವ ಸಾಧ್ಯತೆಯು ಪುರಾತತ್ವ ಶಾಸ್ತ್ರಜ್ಞರನ್ನು ದಿಗ್ಭ್ರಮೆಗೊಳಿಸಿದೆ. ಹಲ್ಲಿನ ಸಮಸ್ಯೆ ಇದ್ದ ರೋಗಿಗಳನ್ನು ನೋಡಿಕೊಳ್ಳುವಲ್ಲಿ ‘ನಿಯಾಂಡರ್ತಲ್ಸ್’ ಬಳಸಿದ್ದ ಮುಂದುವರಿದ ತಂತ್ರಜ್ಞಾನವು ವಿಜ್ಞಾನಿಗಳನ್ನು ಚಕಿತಗೊಳಿಸಿದೆ.

ಪ್ಲಸ್ ಒನ್ ಜರ್ನಲ್ನಲ್ಲಿ ಪ್ರಕಟವಾದ ಲೇಖನದಲ್ಲಿ ಪ್ರಾಚೀನ ಮಾನವರ ವೈದ್ಯಕೀಯ ಜ್ಞಾನವು ಬಹಳ ಹಿಂದಿನಿಂದಲೂ ಅದ್ಭುತವಾಗಿತ್ತು ಎಂದು ಪುರಾತತ್ವ ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಲ್ಲುಗಳ ನಡುವೆ ಉಳಿದ ಆಹಾರ ತೆಗೆದು ಹಾಕಲು ಮತ್ತು ಕೆಲವೊಮ್ಮೆ ಉರಿಯೂತದಿಂದ ನೋವು ನಿವಾರಿಸಲು ಟೂತ್ ಪಿಕ್ಗಳನ್ನು ಪ್ರಾಚೀನ ಮಾನವರು ಬಳಸುತ್ತಿದ್ದರು ಎಂದು ಅಧ್ಯಯನ ವಿವರಿಸಿದೆ.

ನಿಯಾಂಡರ್ತಲ್ಸ್ ಎಂದರೆ ಯಾರು?

ನಿಯಾಂಡರ್ತಲ್ಸ್’ ಮತ್ತು ಹೋಮೋ ಸೇಪಿಯನ್ಗಳು ಮನುಷ್ಯರ ಪೂರ್ವಜರಿಗೆ ನಿಕಟ ಸಂಬಂಧ ಹೊಂದಿದವರಾಗಿದ್ದರು. ಸುಮಾರು ನಾಲ್ಕು ಲಕ್ಷ ವರ್ಷಗಳ ಹಿಂದೆ ಒಂದೇ ಸಾಮಾನ್ಯ ಪೂರ್ವಜರಿಂದ ಕವಲೊಡೆದು ಬೇರೆಯಾದರು. ಹೋಮೋ ಸೇಪಿಯನ್ಸ್ ಆಫ್ರಿಕದಲ್ಲಿ ವಿಕಸನಗೊಂಡು ಪ್ರಪಂಚದಾದ್ಯಂತ ಹರಡಿದರೆ, ಯುರೇಷಿಯದ ಶೀತ ವಾತಾವರಣಕ್ಕೆ ಹೊಂದಿಕೊಂಡಿದ್ದ ‘ನಿಯಾಂಡರ್ತಲ್ಸ್’ ಸುಮಾರು 40,000 ವರ್ಷಗಳ ಹಿಂದೆ ನಿರ್ನಾಮವಾದರು.

ಹಿಂಭಾಗದಿಂದ ಮನುಷ್ಯರಂತೆ ಕಾಣುತ್ತಿದ್ದ ಅವರ ಮುಖ ಭಿನ್ನವಾಗಿತ್ತು. ಉದ್ದ, ಸಣ್ಣ ತಲೆಬುರುಡೆ, ಕಣ್ಣುಗಳ ಮೇಲೆ ಎದ್ದು ಕಾಣುವ ಹುಬ್ಬು, ಚಾಚಿಕೊಂಡ ಮುಖ ಮತ್ತು ದಪ್ಪ ಮೂಗು ಅವರಿಗಿತ್ತು. ಅಲ್ಲದೆ ಅವರಿಗೆ ಗಲ್ಲ ಇರಲಿಲ್ಲ. ಶೀತ ವಾತಾವರಣಕ್ಕೆ ಹೊಂದಿಕೊಂಡಿದ್ದರು.

‘ನಿಯಾಂಡರ್ತಲ್ಸ್’ ಗುಹಾ ಮಾನವರಾಗಿದ್ದರೂ ಬುದ್ಧಿವಂತರಾಗಿದ್ದರು ಎಂದು ಇತ್ತೀಚೆಗಿನ ಅಧ್ಯಯನಗಳು ಹೇಳುತ್ತಿವೆ. ಉಪಯುಕ್ತ ಸಾಧನ ತಯಾರಿಸುವಲ್ಲಿ ಪರಿಣತರಾಗಿದ್ದರು. ಸಾಮಾಜಿಕ ಮೌಲ್ಯ ಬೆಳೆಸಿಕೊಂಡಿದ್ದರು. ಪ್ರೀತಿಪಾತ್ರರು ಅನಾರೋಗ್ಯದಿಂದ ಬಳಲಿದಾಗ ನೋಡಿಕೊಳ್ಳುತ್ತಿದ್ದರು. ಅವಶೇಷಗಳನ್ನು ಹೂಳುತ್ತಿದ್ದರು.

ದವಡೆ ಹಲ್ಲುಗಳ ಆವಿಷ್ಕಾರ

ಪುರಾತತ್ವ ಶಾಸ್ತ್ರಜ್ಞರು ಇತ್ತೀಚೆಗೆ ಸೈಬೀರಿಯದ ಚಾಗಿರ್ಸ್ಕಾಯ ಗುಹೆಯಿಂದ ನಿಯಾಂಡರ್ತಲ್ಸ್ ದವಡೆ ಹಲ್ಲನ್ನು ಪತ್ತೆಹಚ್ಚಿದ್ದರು. ಗುಹೆಯಿಂದ 26 ಹಲ್ಲುಗಳ ಮಾದರಿಗಳನ್ನು ಒಳಗೊಂಡಂತೆ ಸುಮಾರು 70 ಪಳೆಯುಳಿಕೆಗಳನ್ನು ಹೊರತೆಗೆಯಲಾಗಿತ್ತು.

ಆ ಹಲ್ಲಿನ ಒಳಗೆ ದೊಡ್ಡ ಅನಿಯಮಿತ ಆಕಾರದ ಆಳವಾದ ರಂಧ್ರವನ್ನು ವಿಜ್ಞಾನಿಗಳು ಗಮನಿಸಿದ್ದರು. ಅದು ಸಹಜ ರಂಧ್ರವೇ? ಅಥವಾ ವೈದ್ಯಕೀಯ ಉದ್ದೇಶಕ್ಕೆ ಮಾಡಲಾಗಿದೆಯೇ ಎಂದು ಅಧ್ಯಯನಕಾರರು ಸಂಶಯಪಟ್ಟರು.

ಸೂಕ್ಷ್ಮ ದರ್ಶೀಯ ವಿಶ್ಲೇಷಣೆ ಬಳಿಕ ಇದು ವಯಸ್ಕ ನಿಯಾಂಡರ್ತಲ್ನ ಎರಡನೇ ದವಡೆ ಹಲ್ಲು ಎಂದು ಕಂಡುಕೊಂಡರು. ಆದರೆ ಅದು ಬಲ ಅಥವಾ ಎಡ ದವಡೆಯ ಹಲ್ಲೇ ಎಂಬುದು ಗೊಂದಲವಾಗಿತ್ತು. ಇತರ ಹಲ್ಲುಗಳ ಜೊತೆಗೆ ಹೋಲಿಕೆ, ಸ್ಕ್ಯಾನಿಂಗ್ ಮಾಡಿದ ಬಳಿಕ ಹಲ್ಲಿನ ಹುಳುಕನ್ನು ತೆಗೆದು ಹಾಕುವ ಉದ್ದೇಶಪೂರ್ವಕ ರಂಧ್ರ ಮಾಡಲಾಗಿತ್ತು ಎಂಬ ನಿರ್ಣಯಕ್ಕೆ ವಿಜ್ಞಾನಿಗಳು ಬಂದರು.

ಹಲ್ಲಿನ ಕುಳಿಯ ಸುತ್ತಲಿನ ಅಂಚುಗಳು ಸಹ ನಯವಾಗಿದ್ದು, ದುಂಡಾದ ಆಕಾರ ಹೊಂದಿವೆ. ಇದು ದಂತ ಚಿಕಿತ್ಸೆಯ ಆರಂಭಿಕ ಪುರಾವೆಯಾಗಿ ಉಳಿದಿವೆ ಎಂದು ಸಂಶೋಧಕರು ಹೇಳಿದ್ದಾರೆ.

ಮಾಹಿತಿ ಕೃಪೆ: deccanherald.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News