ಕೆ.ಟಿ.ರಾಮರಾವ್ | Photo Credit ; thesouthfirst.com

ಹೈದರಾಬಾದ್: ತೆಲಂಗಾಣದ ಹಿತಾಸಕ್ತಿಗೆ ಆದ್ಯತೆ ನೀಡುವ ದೃಷ್ಟಿಯಿಂದ, ನ. 30ರಂದು ಲೋಕಸಭೆಯ ವಿಶೇಷ ಅಧಿವೇಶನದಲ್ಲಿ ಮರು ಮಂಡನೆಯಾಗಲಿರುವ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಬೆಂಬಲಿಸಲು ಭಾರತ ರಾಷ್ಟ್ರ ಸಮಿತಿ (BRS) ನಿರ್ಧರಿಸಿದೆ ಎಂದು ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಘೋಷಿಸಿದ್ದಾರೆ.

ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಬೆಂಬಲಿಸುವುದಾಗಿ ಡಿಎಂಕೆ ಘೋಷಿಸಿದ ಬೆನ್ನಲ್ಲೇ BRS ಕೂಡ ತನ್ನ ನಿಲುವು ಪ್ರಕಟಿಸಿದೆ. ಆದರೆ, ದಕ್ಷಿಣ ಭಾರತದ ಸಂಸದೀಯ ಪ್ರಾತಿನಿಧ್ಯದಲ್ಲಿ ಹಾಲಿ ಶೇ. 24ರಷ್ಟು ಪಾಲನ್ನು ರಕ್ಷಿಸಬೇಕು ಎಂದು ಕೆ.ಟಿ.ರಾಮರಾವ್ ಆಗ್ರಹಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ದಕ್ಷಿಣ ಭಾರತದಲ್ಲಿನ ಸಂಸದೀಯ ಪ್ರಾತಿನಿಧ್ಯದಲ್ಲಿ ಯಾವುದೇ ಇಳಿಕೆಯಾಗಬಾರದು. ತೆಲಂಗಾಣಕ್ಕೆ ಯಾವುದೇ ಅನ್ಯಾಯವನ್ನು ಸಹಿಸುವುದಿಲ್ಲ” ಎಂದು ಎಚ್ಚರಿಸಿದ್ದಾರೆ.

“2051ರವರೆಗೆ ಅಂತಾರಾಜ್ಯ ಪ್ರಾತಿನಿಧ್ಯದಲ್ಲಿ ಬದಲಾವಣೆ ಮಾಡುವುದಿಲ್ಲ ಎಂಬುದು ಪ್ರಮುಖ ರಕ್ಷಣಾಕವಚವಾಗಿದೆ. ಈ ಪ್ರಸ್ತಾವನೆಯಿಂದ ಪ್ರಮುಖ ಕಳವಳಗಳು ನಿವಾರಣೆಯಾಗಿದ್ದು, ಲೋಕಸಭೆಯಲ್ಲಿ ತೆಲಂಗಾಣದ ಪ್ರಾತಿನಿಧ್ಯ 17ರಿಂದ 26ಕ್ಕೆ ಏರಿಕೆಯಾಗಲಿದೆ” ಎಂದು ಅವರು ತಿಳಿಸಿದ್ದಾರೆ.

ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆ ಎಂದು ಬಣ್ಣಿಸಿರುವ ಇಂಡಿಯಾ ಮೈತ್ರಿಕೂಟ, ಅದರ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ನಿರ್ಧರಿಸಿದೆ. ಈ ರಾಜಕೀಯ ಬೆಳವಣಿಗೆಯ ನಡುವೆಯೇ BRS ತನ್ನ ನಿರ್ಧಾರ ಪ್ರಕಟಿಸಿದೆ. ಎನ್ಸಿಪಿ (ಶರದ್ ಪವಾರ್ ಬಣ) ಕೂಡ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ಸೂಚಿಸುವ ಸುಳಿವು ನೀಡಿದೆ.

ಇನ್ನೊಂದೆಡೆ, ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ನೀಡಲು ಇಂಡಿಯಾ ಮೈತ್ರಿಕೂಟವು ಸರಕಾರದ ಮುಂದೆ ಮೂರು ಪ್ರಮುಖ ಬೇಡಿಕೆಗಳನ್ನು ಇರಿಸಿದೆ. ಲೋಕಸಭೆಯ ಹಾಲಿ ಸದಸ್ಯ ಬಲವನ್ನು ಕಾಯ್ದುಕೊಳ್ಳಬೇಕು, ಪ್ರಸ್ತುತ ಸದಸ್ಯ ಬಲದ ಆಧಾರದಲ್ಲಿ ಮಹಿಳೆಯರಿಗೆ ಮೀಸಲಾತಿ ಒದಗಿಸಬೇಕು ಹಾಗೂ ಎಲ್ಲ ರಾಜ್ಯಗಳಲ್ಲಿನ ಲೋಕಸಭಾ ಸ್ಥಾನಗಳ ಹಾಲಿ ಹಂಚಿಕೆಯನ್ನು ಮುಂದಿನ 25 ವರ್ಷಗಳವರೆಗೆ ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂಬುದು ಮೈತ್ರಿಕೂಟದ ಪ್ರಮುಖ ಬೇಡಿಕೆಗಳಾಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸದಾನಂದ ಗಂಗನಬೀಡು , ವಾರ್ತಾಭಾರತಿ

contributor