ಚಿನ್ನ-ಬೆಳ್ಳಿ ಕುಸಿತ | ಖರೀದಿಸುವ ಸಮಯ ಬಂದಿದೆಯೆ?
ಸಾಂದರ್ಭಿಕ ಚಿತ್ರ | Photo Credit : freepik
ತೀವ್ರ ಏರಿಕೆಯ ನಂತರ ಚಿನ್ನದ ಬೆಲೆಯಲ್ಲಿ ಸಹಜವಾದ ಕುಸಿತ ಕಂಡು ಬಂದಿದೆ. ಆದರೆ ಇದರಿಂದ ಚಿನ್ನ ಕುಸಿತದ ಹಾದಿಯಲ್ಲಿದೆ ಎಂದು ತಿಳಿಯಬೇಕಾಗಿಲ್ಲ.
ಬುಧವಾರ-ಗುರುವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದಾಖಲೆ ಏರಿಕೆ ಕಂಡ ನಂತರ ಶುಕ್ರವಾರ ಕುಸಿತ ಕಂಡಿವೆ. ಹಾಗಿದ್ದರೆ ಇದು ಖರೀದಿಸುವ ಸಮಯವೆ ಅಥವಾ ಇನ್ನೂ ಕಾಯಬೇಕೆ?
ದೇಶಿ ಮಾರುಕಟ್ಟೆಯಲ್ಲಿ ಎಂಸಿಎಕ್ಸ್ ಚಿನ್ನ ದಾಖಲೆ ಬೆಲೆಯೇರಿಕೆಯಾದ 1,80,779 ತಲುಪಿದ ನಂತರ ಇದೀಗ 1,63,000 ರೂ. –1,80,500 ರೂ. ವ್ಯಾಪ್ತಿಯಲ್ಲಿದೆ. ಬೆಳ್ಳಿಯ ಬೆಲೆಯೂ ಬರೋಬ್ಬರಿ ಏರಿಕೆ ಕಂಡು 4,20,000 ರೂ. ಮೀರಿ ಬೆಳೆದಿದೆ.
ಎನ್ರಿಚ್ ಮನಿಯ ಸಿಇಒ ಪೊನ್ಮುದಿ ಪ್ರಕಾರ, ಇತ್ತೀಚೆಗೆ ತೀವ್ರ ಏರಿಕೆ ಕಂಡ ಮೇಲೆ ಹೀಗೆ ಹಿಮ್ಮುಖವಾಗಿ ಬೆಲೆ ಇಳಿಯುವುದು ಅಸಹಜವೇನೂ ಅಲ್ಲ. “ಚಿನ್ನ ನಿರೀಕ್ಷೆಗಿಂತ ವೇಗವಾಗಿ ಏರಿಕೆ ಕಂಡಿದೆ. ಹೀಗಾಗಿ ಇಳಿಕೆಯ ಹಾದಿಯಲ್ಲಿರುವುದು ಆರೋಗ್ಯಕರ ಬೆಳವಣಿಗೆ. ಈಗಲೂ ಬೆಲೆ ಇಳಿದಾಗಲೆಲ್ಲ ಸ್ಥಿರವಾದ ಖರೀದಿಯನ್ನು ನಾವು ಕಂಡಿದ್ದೇವೆ. ಹೀಗಾಗಿ ಖರೀದಿಯ ಟ್ರೆಂಡ್ ಇನ್ನೂ ಮುಂದುವರಿದಿದೆ ಎನ್ನುವುದು ತಿಳಿದುಬರುತ್ತದೆ” ಎನ್ನುತ್ತಾರೆ ಪೊನ್ಮುದಿ.
ಇಂದು ಚಿನ್ನ-ಬೆಳ್ಳಿ ಬೆಲೆ ಇಳಿದಿರುವುದೇಕೆ?
ಈಗಿನ ಕುಸಿತ ಲಾಭ ಮಾಡಿಕೊಳ್ಳುವ ಪ್ರಯತ್ನವಾಗಿದೆ. ಜಾಗತಿಕವಾಗಿ ಮತ್ತು ಭಾರತದಲ್ಲಿ ಲಾಭ ಗಳಿಕೆಯ ಪ್ರಯತ್ನದಲ್ಲಿ ಬೆಲೆ ಕುಸಿತವಾಗಿದೆ. ಕಡಿಮೆ ಇರುವಾಗ ಚಿನ್ನ ಖರೀದಿಸಿದವರು ಇದೀಗ ತಮ್ಮ ಪಾಲನ್ನು ಮಾರುವ ಮೂಲಕ ಹಣಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಬೆಲೆಯಲ್ಲಿ ಸಹಜವಾದ ಕುಸಿತ ಕಂಡು ಬಂದಿದೆ. ಆದರೆ ಇದರಿಂದ ಚಿನ್ನ ಕುಸಿತದ ಹಾದಿಯಲ್ಲಿದೆ ಎಂದುಕೊಳ್ಳಬೇಕಾಗಿಲ್ಲ.
ಅಂತಾರಾಷ್ಟ್ರೀಯ COMEX ವಿನಿಮಯದಲ್ಲಿ ಚಿನ್ನ 5,160–5,320 ಡಾಲರ್ ವಲಯಕ್ಕೆ ಇಳಿದಿದೆ. ವಿಪರೀತ 5,600 ಡಾಲರ್ ಏರಿಕೆಯ ನಂತರ ಈಗಿನ ಇಳಿಕೆ ಕಂಡುಬಂದಿದೆ. ಪೊನ್ಮುದಿ ಪ್ರಕಾರ ಸಂವೇದನೆಯಲ್ಲಿ ಬದಲಾವಣೆ ಬಂದಿಲ್ಲ, ತಾಂತ್ರಿಕ ಮರುಸ್ಥಾಪನೆಯಷ್ಟೇ ಆಗಿರುತ್ತದೆ. “ಪ್ರಮುಖ ಸರಕುಗಳ ಚಲನೆಗೆ ಹೋಲಿಸಿದರೆ ಚಿನ್ನ ಮೇಲ್ಮುಖವಾಗೇ ಇದೆ. ಹೀಗಾಗಿ ಮಾರುಕಟ್ಟೆ ಸ್ಥಿರತೆಗೆ ಪ್ರಯತ್ನಿಸುತ್ತಿದೆಯೇ ವಿನಾ ಹಿಮ್ಮುಖವಾಗಿಲ್ಲ. 5,050–5,150 ಡಾಲರ್ ಸುತ್ತಮುತ್ತ ಬಲವಾದ ಖರೀದಿಯ ಪ್ರವೃತ್ತಿ ಕಂಡುಬಂದಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬೆಳ್ಳಿ ಕೂಡ ಅದೇ ರೀತಿಯ ಪ್ರವೃತ್ತಿಯನ್ನು ತೋರಿಸುತ್ತಿದೆ. ಕಾಮೆಕ್ಸ್ ಸಿಲ್ವರ್ 108–111 ಡಾಲರ್ಗಳ ಸಮೀಪದಲ್ಲಿ ಸಾಗುತ್ತಿದೆ. ವಿಪರೀತ 121.6 ಡಾಲರ್ ಏರಿಕೆಯ ನಂತರ ಈಗಿನ ಇಳಿಕೆ ಸಹಜವಾಗೇ ಇದೆ. “ಬೆಳ್ಳಿ ಕೂಡ ಏರಿಳಿತ ಕಾಣುತ್ತಿದೆ. ಆದರೆ ಬೆಲೆಗಳು ಪ್ರಮುಖ ಬೆಂಬಲ ವಲಯಗಳಿಗಿಂತ ಹೆಚ್ಚಿರುವವರೆಗೂ ಚಂಚಲತೆ ಸಕಾರಾತ್ಮಕವಾಗಿರುತ್ತದೆ” ಎನ್ನುತ್ತಾರೆ ಪೊನ್ಮುದಿ.
ದೇಶಿ ಮಾರುಕಟ್ಟೆಯಲ್ಲಿಯೂ ಚಿನ್ನದ ರೀತಿಯಲ್ಲಿಯೇ ಬೆಳ್ಳಿ 3,55,000 ರೂ. - 3,60,000 ರೂ, ನಡುವೆ ಎಳೆದಾಡುತ್ತಿದೆ. ಪ್ರತಿಬಾರಿ ಬೆಲೆ ಇಳಿಕೆಯಾದಾಗಲೂ ಖರೀದಿದಾರರು ಖರೀದಿಗೆ ಮುಂದಾಗುತ್ತಿದ್ದಾರೆ.
ಹಾಗಿದ್ದರೆ ಇದು ಖರೀದಿಯ ಸಮಯವೆ?
ಗ್ರಾಹಕರು ಮತ್ತು ಸಣ್ಣ ಹೂಡಿಕೆದಾರರಿಗೆ ಇದೇ ಪ್ರಶ್ನೆ ಏಳುತ್ತಿದೆ. ಪ್ರಸ್ತುತ ಟ್ರೆಂಡ್ ಗಮನಿಸಿದಲ್ಲಿ ವಿಶ್ಲೇಷಕರು ಖರೀದಿಗೆ ಸಮಯ ಎನ್ನುತ್ತಿದ್ದಾರೆ. ಕುಸಿತದ ಸಂದರ್ಭ ಬಂದಾಗಲೆಲ್ಲ ಖರೀದಿಗೆ ಅವಕಾಶದ ಬಾಗಿಲು ತೆರೆದಿರುತ್ತದೆ. ಆದರೆ ನಿಧಾನವಾಗಿ ಖರೀದಿಸುತ್ತಾ ಹೋಗಬೇಕಿದೆ. “ದೀರ್ಘಕಾಲೀನ ಉಳಿಕೆಗಾಗಿ ಚಿನ್ನ ಮತ್ತು ಬೆಳ್ಳಿ ಖರೀದಿಸುತ್ತಿದ್ದಲ್ಲಿ, ಒಂದೇ ಬಾರಿ ಖರೀದಿಸುವ ಬದಲಾಗಿ ನಿಧಾನವಾಗಿ ಖರೀದಿಸುತ್ತಾ ಹೋಗುವುದು ಉತ್ತಮ. ಹೀಗಾಗಿ ಬೆಲೆಯ ಬೆನ್ನಟ್ಟಿ ಹೋಗದೆ ಅಗತ್ಯದ ಖರೀದಿಯಾಗಿರುತ್ತದೆ” ಎನ್ನುತ್ತಾರೆ ಪೊನ್ಮುದಿ.
ಅಲ್ಪಾವಧಿ ಹೂಡಿಕೆದಾರರು ಚಂಚಲತೆಯ ಜೊತೆಗೆ ವ್ಯವಹರಿಸಬೇಕಾಗುತ್ತದೆ. ಎರಡೂ ಲೋಹಗಳು ಅತಿಯಾದ ಬೆಲೆಯಲ್ಲಿ ವ್ಯವಹರಿಸುತ್ತಿರುವಾಗ ತೀಕ್ಷ್ಣ ಚಂಚಲತೆ ಇದ್ದೇ ಇರುತ್ತದೆ. ದೀರ್ಘಾವಧಿ ಪ್ರವೃತ್ತಿ ಮೇಲ್ಮುಖವಾಗೇ ಇದೆ. ಹೀಗಾಗಿ ಹಂತ ಹಂತವಾಗಿ ಖರೀದಿಸುವುದು ಉತ್ತಮ. ಆತಂಕ ಪಟ್ಟು ಖರೀದಿಸಲು ಹೋಗಬಾರದು ಮತ್ತು ಅಂತ್ಯವಿಲ್ಲದ ಕಾಯುವಿಕೆಯೂ ಸಲ್ಲದು.
ಈ ಲೇಖನದಲ್ಲಿ ತಜ್ಞರು/ಮಧ್ಯವರ್ತಿಗಳು ವ್ಯಕ್ತಪಡಿಸಿದ ಮುನ್ನೋಟಗಳು, ಅಭಿಪ್ರಾಯಗಳು, ಶಿಫಾರಸುಗಳು ಮತ್ತು ಅಲಹೆಗಳು ಅವರ ಸ್ವಂತ ಅಭಿಪ್ರಾಯವಾಗಿರುತ್ತದೆ ಮತ್ತು ವಾರ್ತಾಭಾರತಿ ಸಮೂಹದ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಯಾವುದೇ ನಿಜವಾದ ಹೂಡಿಕೆ ಅಥವಾ ವ್ಯಾಪಾರ ಆಯ್ಕೆಗಳನ್ನು ಮಾಡುವ ಮೊದಲು ಅರ್ಹ ಹೂಡಿಕೆ ಸಂಸ್ಥೆ ಅಥವಾ ಹಣಕಾಸು ಸಲಹೆಗಾರರನ್ನು ಸಂಪರ್ಕಿಸುವುದು ಸೂಕ್ತ.