ರಾಜಸ್ಥಾನದ ಮರ್ಯಾದೆಗೇಡು ಹತ್ಯೆ ತಡೆ ಮಸೂದೆಯಲ್ಲೇನಿದೆ?; ಅದನ್ನು ರಾಜ್ಯಪಾಲರು ವಾಪಸ್ ಕಳಿಸಿದ್ದೇಕೆ?
ಅಶೋಕ್ ಗೆಹ್ಲೋಟ್ | Photo Credit : PTI
ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರದ 2018-23ರ ಅವಧಿಯಲ್ಲಿ ಅಂಗೀಕರಿಸಲಾದ ಮರ್ಯಾದೆಗೇಡು ಹತ್ಯೆಗಳನ್ನು ತಡೆಯುವ ಮಸೂದೆಯನ್ನು ರಾಜ್ಯಪಾಲ ಹರಿಭಾವು ಬಗಾಡೆ ಬುಧವಾರ (ಜನವರಿ 28) ವಾಪಸ್ ಕಳುಹಿಸಿದ್ದಾರೆ. ಮಸೂದೆಯಲ್ಲಿನ ನಿಬಂಧನೆಗಳು ಏನು? ರಾಜ್ಯಪಾಲರು ಅದನ್ನು ಹಿಂತಿರುಗಿಸಿದ್ದೇಕೆ ಎಂಬುದನ್ನು ನೋಡೋಣ.
ರಾಜಸ್ಥಾನದ ಗೌರವ ಮತ್ತು ಸಂಪ್ರದಾಯದ ಹೆಸರಿನಲ್ಲಿ ವೈವಾಹಿಕ ಸಂಬಂಧದ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ನಿಷೇಧ ಮಸೂದೆಯು ಮರ್ಯಾದೆಗೇಡು ಹತ್ಯೆಗಳನ್ನು ತಡೆಯುವ ಆಶಯವನ್ನು ಹೊಂದಿತ್ತು. ಮಸೂದೆಯ ಹೇಳಿಕೆಯಲ್ಲಿ, ಆಗಿನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸ್ವಗೋತ್ರ ವಿವಾಹಗಳು ಮತ್ತು ಕುಟುಂಬ, ಜಾತಿ ಅಥವಾ ಸಮುದಾಯದ ಗೌರವವನ್ನು ಸಮರ್ಥಿಸುವ ಹೆಸರಿನಲ್ಲಿ ಇಬ್ಬರು ಸಮ್ಮತಿಯ ವಯಸ್ಕರ ನಡುವೆ ಅಂತರ್ಜಾತಿ, ಅಂತರ ಸಮುದಾಯ ಮತ್ತು ಅಂತರ ಧರ್ಮೀಯ ವಿವಾಹಗಳ ವಿರುದ್ಧ ಒತ್ತಡ ಹೇರಲು ಸ್ವಯಂ-ನೇಮಿತ ಸಂಸ್ಥೆಗಳಿಂದ ಕಾನೂನುಬಾಹಿರ ಬೆದರಿಕೆ ಹೆಚ್ಚಾಗಿದೆ ಎಂದು ಗಮನಿಸಿದ್ದರು. ಹಲವಾರು ಪ್ರಕರಣಗಳಲ್ಲಿ, ಅಂತಹ ಸಂಸ್ಥೆಗಳು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದು ನವವಿವಾಹಿತ ದಂಪತಿಗಳು ಅಥವಾ ಮದುವೆಯಾಗಲು ಬಯಸುವ ವ್ಯಕ್ತಿಗಳನ್ನು ಬೆದರಿಕೆ ಮತ್ತು ಹಿಂಸಾಚಾರಕ್ಕೆ ಒಳಪಡಿಸಲಾಗಿದೆ. ಇದರ ಪರಿಣಾಮವಾಗಿ ಅವರನ್ನು ಅವರ ಮನೆಗಳಿಂದ ಹೊರಗೆ ಓಡಿಸಲಾಗಿದೆ. ಕೆಲವೊಮ್ಮೆ ಕೊಲೆ ಮಾಡಲಾಗಿದೆ. ಈ ಹಿಂಸಾಚಾರವು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಅಪರಾಧವಾಗಿದ್ದರೂ, ಅಂತಹ ಸಂಬಂಧಗಳನ್ನು ಖಂಡಿಸಲು ಸಭೆ ಸೇರುವುದನ್ನು ತಡೆಯುವುದು ಹಾಗೂ ಅಂಥಾ ಹಿಂಸಾಚಾರ ಮತ್ತು ಕ್ರಿಮಿನಲ್ ಬೆದರಿಕೆಗಳನ್ನು ಕಠಿಣವಾಗಿ ಶಿಕ್ಷಿಸುವುದು ಅಗತ್ಯವಾಗಿದೆ ಎಂದು ಹೇಳಿಕೆ ತಿಳಿಸಿದೆ.
► ಅದರ ನಿಬಂಧನೆಗಳೇನು?
ಮಸೂದೆಯು ಕಾನೂನುಬಾಹಿರ ಸಭೆ, ಸ್ವಾತಂತ್ರ್ಯಕ್ಕೆ ಅಪಾಯ ತರುವುದು ಮತ್ತು ಅಂತಹ ಕೃತ್ಯಗಳನ್ನು ತಡೆಯಲು ಕ್ರಿಮಿನಲ್ ಬೆದರಿಕೆಯನ್ನು ವ್ಯಾಖ್ಯಾನಿಸಿದೆ. ಎಲ್ಲಾ ಅಪರಾಧಗಳು ಗಂಭೀರ ಸ್ವರೂಪದ, ಜಾಮೀನು ರಹಿತ ಮತ್ತು ರಾಜಿ ಮಾಡಿಕೊಳ್ಳಲಾಗದವು.
ಕಾನೂನುಬದ್ಧ ವಿವಾಹವು ತಮ್ಮ ಜಾತಿ, ಸಮುದಾಯ ಅಥವಾ ಕುಟುಂಬ ಸಂಪ್ರದಾಯಗಳನ್ನು "ಅವಮಾನಿಸುತ್ತದೆ" ಎಂದು ನಂಬುವ ಕಾರಣ ಅದನ್ನು ಟೀಕಿಸುವ ಅಥವಾ ದಾಳಿ ಮಾಡುವ ಗುರಿಯೊಂದಿಗೆ ಜನ ಗುಂಪು ಸೇರುವುದನ್ನು ಈ ಮಸೂದೆ ಕಾನೂನುಬಾಹಿರಗೊಳಿಸಿದೆ. ಸಂಗಾತಿಯ ಆಯ್ಕೆಗಾಗಿ ದಂಪತಿಗಳನ್ನು ಶಿಕ್ಷಿಸಲು ಅಥವಾ ಅವಮಾನಿಸಲು ಗುಂಪುಗಳು (ಸಮುದಾಯ ನ್ಯಾಯಾಲಯಗಳಂತೆ) ಸಭೆ ಸೇರುವುದನ್ನು ತಡೆಯಲು ಕಾನೂನು ಪ್ರಯತ್ನಿಸುತ್ತಿತ್ತು.
ಸ್ವಾತಂತ್ರ್ಯಕ್ಕೆ ಅಪಾಯ ಎಂದರೆ ವ್ಯಕ್ತಿಗಳು "ವಿವಾಹವನ್ನು ತಡೆಯಲು ಅಥವಾ ನಿರಾಕರಿಸಲು ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳ ಮೇಲೆ ಬಹಿರಂಗವಾಗಿ ಅಥವಾ ಬೇರೆ ರೀತಿಯಲ್ಲಿ ಸಲಹೆ ನೀಡುವುದು, ಪ್ರಚೋದಿಸುವುದು ಅಥವಾ ಒತ್ತಡ ಹೇರುವುದು" ಎಂದು ವ್ಯಾಖ್ಯಾನಿಸಲಾಗಿದೆ.
ಮಸೂದೆಯು, ದಂಪತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆನ್‌ಲೈನ್ ಗುಂಪುಗಳು ಸಂಘಟಿತರಾಗುವುದನ್ನು ನಿಷೇಧಿಸಿದೆ. ಸಮುದಾಯದ ಗೌರವದ ಹೆಸರಿನಲ್ಲಿ ಅವರನ್ನು ಅವರ ಮನೆಗಳಿಂದ ಹೊರಹಾಕುವುದು, ಅವರ ಆಸ್ತಿಯನ್ನು ವಶಪಡಿಸಿಕೊಳ್ಳುವುದು ಅಥವಾ ದಂಡ ವಿಧಿಸುವುದನ್ನು ಅಪರಾಧವೆಂದು ಮಸೂದೆ ಹೇಳಿದೆ. ಪ್ರಸ್ತಾವಿತ ಮಸೂದೆಯು ಅಂತಹ ಕಾನೂನುಬಾಹಿರ ಸಭೆಗಳನ್ನು ನಿಷೇಧಿಸುವುದು ಸೇರಿದಂತೆ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿ ಅಥವಾ ಎಸ್‌ಡಿಎಂಗೆ ನಿರ್ದೇಶನ ನೀಡಿತ್ತು.
► ಮಸೂದೆಯಲ್ಲಿ ಯಾವ ಶಿಕ್ಷೆಗಳಿದ್ದವು?
ಮಸೂದೆಯಲ್ಲಿ ವ್ಯಾಖ್ಯಾನಿಸಲಾದ ಕಾನೂನುಬಾಹಿರ ಸಭೆಯಲ್ಲಿ ಭಾಗಿಯಾದವರಿಗೆ ಆರು ತಿಂಗಳಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು. "ಹಗೆತನದ ವಾತಾವರಣವನ್ನು ಸೃಷ್ಟಿಸುವ" ಮೂಲಕ ಅಂತಹ ದಂಪತಿಗಳು ಅಥವಾ ಅವರ ಬೆಂಬಲಿಗರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದು ಎರಡರಿಂದ ಐದು ವರ್ಷಗಳವರೆಗೆ ಮತ್ತು 1 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು. ಕ್ರಿಮಿನಲ್ ಬೆದರಿಕೆಗಾಗಿ ಏಳು ವರ್ಷಗಳವರೆಗೆ ಶಿಕ್ಷೆ ವಿಧಿಸುವ ಪ್ರಸ್ತಾಪವನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
ಅಂತಹ ಸಂದರ್ಭದಲ್ಲಿ ನೋವು ಉಂಟುಮಾಡಿದ್ದಕ್ಕಾಗಿ, ಶಿಕ್ಷೆ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು. "ತೀವ್ರ ನೋವು" ಉಂಟುಮಾಡಿದ್ದರೆ ಅದಕ್ಕೆ ಶಿಕ್ಷೆ ಕನಿಷ್ಠ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆಯಾಗಿತ್ತು, ಇದನ್ನು ಜೀವಾವಧಿ ಶಿಕ್ಷೆಗೆ ವಿಸ್ತರಿಸಬಹುದು, ಜೊತೆಗೆ 3 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು. ದಂಪತಿಗಳ ಅಥವಾ ಅವರಲ್ಲಿ ಒಬ್ಬರ ಸಾವಿಗೆ ಕಾರಣವಾದರೆ, ಅಪರಾಧಿಗೆ "ಮರಣ, ಜೀವಾವಧಿ ಶಿಕ್ಷೆ ಮತ್ತು 5 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು.
► ರಾಜ್ಯಪಾಲರು ಮಸೂದೆಯನ್ನು ಹಿಂತಿರುಗಿಸಿದ್ದೇಕೆ?
ಪ್ರಸ್ತುತ ಭಜನ್ ಲಾಲ್ ಶರ್ಮಾ ಸರ್ಕಾರವು 2019 ರ ಮಸೂದೆಯು ರದ್ದುಗೊಂಡಿರುವ ಭಾರತೀಯ ದಂಡ ಸಂಹಿತೆ (IPC) ಮತ್ತು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (CrPC) ಕೆಲವು ವಿಭಾಗಗನ್ನು ಉಲ್ಲೇಖಿಸುತ್ತದೆ ಎಂದು ಹೇಳಿದೆ. ಹೊಸ ಭಾರತೀಯ ನ್ಯಾಯ ಸಂಹಿತೆ ಕಾನೂನು (BNS, 2023) ಈಗಾಗಲೇ ಮರ್ಯಾದಾ ಹತ್ಯೆಗಳನ್ನು ಶಿಕ್ಷಿಸಲು ಸಾಕಷ್ಟು ಪ್ರಬಲವಾಗಿದೆ ಎಂದು ಅವರು ವಾದಿಸುತ್ತಾರೆ. ಬಿಎನ್‌ಎಸ್ ಸೆಕ್ಷನ್ 103 ರ ಪ್ರಕಾರ, ಕೊಲೆಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಬಹುದು.
►ದೇಶದಲ್ಲಿ ಬೇರೆಲ್ಲಿಯಾದರೂ ಅಂತಹ ಕಾನೂನು ಇದೆಯೇ?
ಪ್ರಸ್ತುತ, ಯಾವುದೇ ರಾಜ್ಯದಲ್ಲಿ ಅಂತಹ ಕಾನೂನು ಇಲ್ಲ. ಇತ್ತೀಚೆಗೆ, ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮದುವೆಯಲ್ಲಿ ಆಯ್ಕೆಯ ಸ್ವಾತಂತ್ರ್ಯವನ್ನು ರಕ್ಷಿಸುವುದರ ಜೊತೆಗೆ "ಮರ್ಯಾದೆಗೇಡು ಹತ್ಯೆಗಳನ್ನು" ಒಂದು ನಿರ್ದಿಷ್ಟ ವರ್ಗವಾಗಿ ಅಪರಾಧವಾಗಿ ನಿಭಾಯಿಸುವ ಕಾನೂನನ್ನು ಪ್ರಸ್ತಾಪಿಸಿದೆ. ಮಸೂದೆ ಪ್ರಸ್ತುತ ಕರಡು ಹಂತದಲ್ಲಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆಗಳನ್ನು ತಡೆಗಟ್ಟಲು ಕಾನೂನು ಮತ್ತು ನೀತಿ ಕ್ರಮಗಳನ್ನು ಶಿಫಾರಸು ಮಾಡಲು ಆಯೋಗವನ್ನು ರಚಿಸುವುದಾಗಿ ಘೋಷಿಸಿದ್ದರು.
2011 ರಲ್ಲಿ, ಭಾರತದ ಕಾನೂನು ಆಯೋಗವು ಕಾನೂನುಬಾಹಿರ ಸಭೆ ನಿಷೇಧ (ವೈವಾಹಿಕ ಸಂಬಂಧ ಸ್ವಾತಂತ್ರ್ಯದ ಮೇಲೆ ಹಸ್ತಕ್ಷೇಪ) ಮಸೂದೆಯ ಕರಡನ್ನು ಪ್ರಸ್ತಾಪಿಸಿತು. ಆದರೆ ಅದನ್ನು ಎಂದಿಗೂ ಜಾರಿಗೆ ತರಲಿಲ್ಲ.
► ಮರ್ಯಾದೆಗೇಡು ಹತ್ಯೆ ಪ್ರಕರಣಗಳಲ್ಲಿ ಹೆಚ್ಚಳ
Dalit Human Rights Defenders Network (DHRDNet) ಮತ್ತು ರಾಷ್ಟ್ರೀಯ ಮಹಿಳಾ ನಾಯಕಿಯರ ಮಂಡಳಿಯ (NCWL) ಸಹಯೋಗದೊಂದಿಗೆ 2023ರಲ್ಲಿ ಪ್ರಕಟವಾದ ವರದಿಯು, ಹರಿಯಾಣ, ಗುಜರಾತ್, ಬಿಹಾರ, ರಾಜಸ್ಥಾನ, ತಮಿಳುನಾಡು, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ - ಏಳು ರಾಜ್ಯಗಳಿಂದ ಜಾತಿ ಆಧಾರಿತ ಮರ್ಯಾದೆಗೇಡು ಹತ್ಯೆಗಳ ಸೂಕ್ಷ್ಮ ವಿವರಗಳನ್ನೊಳಗೊಂಡಿದೆ.
ವರದಿಯಲ್ಲಿ 2012 ಮತ್ತು 2021 ರ ನಡುವೆ ನಡೆದ 24 ಪ್ರಕರಣಗಳ ಪೈಕಿ ಬಹುತೇಕ ಎಲ್ಲಾ ಪ್ರಕರಣಗಳಲ್ಲಿ, ಸಂತ್ರಸ್ತರು ಸಂಬಂಧ ಅಥವಾ ಮದುವೆಯನ್ನು ವಿರೋಧಿಸಿದ ಕುಟುಂಬದ ಸದಸ್ಯರಿಂದ ತೀವ್ರ ಹಿಂಸೆಯನ್ನು ಎದುರಿಸಿದ್ದಾರೆ ಎಂದು ಹೇಳರಾಗಿದೆ.
ಇಂಥಹ ಹಿಂಸಾಚಾರಕ್ಕೆ ಒಳಗಾದವರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿ ಸಮುದಾಯಗಳಿಗೆ ಸೇರಿದವರು. 20 ದಲಿತ ಪುರುಷರು ಪ್ರಬಲ ಜಾತಿಗೆ ಸೇರಿದ ತಮ್ಮ ಸಂಗಾತಿಗಳ ಕುಟುಂಬಗಳಿಂದ ಕೊಲೆಯಾಗಿದ್ದಾರೆ ಅಥವಾ ಗಂಭೀರ ಗಾಯಗೊಂಡಿದ್ದಾರೆ.
ಹಲವು ಸಂದರ್ಭಗಳಲ್ಲಿ, ದಾಳಿಗೆ ಒಳಗಾಗುವವರು ಒಬ್ಬ ವ್ಯಕ್ತಿ ಮಾತ್ರವಲ್ಲ, ಅವರ ಕುಟುಂಬದ ಸದಸ್ಯರು ಕೂಡ ಎಂದು ವರದಿ ಉಲ್ಲೇಖಿಸಿದೆ. ಹರಿಯಾಣದ ಒಂದು ಪ್ರಕರಣದಲ್ಲಿ, ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಇಡೀ ಕುಟುಂಬವನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎಂದು ವರದಿಯಲ್ಲಿದೆ. ತಮಿಳುನಾಡಿನಲ್ಲಿ ಮತ್ತೊಂದು ಪ್ರಕರಣದಲ್ಲಿ, ಅಂತರ್ಜಾತಿ ಸಂಬಂಧದಲ್ಲಿದ್ದ ದಂಪತಿಗಳು ಓಡಿಹೋಗಿ ತಲೆಮರೆಸಿಕೊಂಡಿದ್ದರು . ದಂಪತಿ ಪತ್ತೆಯಾಗದ ಕಾರಣ, ಹುಡುಗಿಯ ಕುಟುಂಬವು ಹುಡುಗನ ಸಹೋದರಿಯನ್ನು ಅಪಹರಿಸಿ ಕೊಲ್ಲುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ಆ ವ್ಯಕ್ತಿ ಪರಿಶಿಷ್ಟ ಜಾತಿಯ ಹಿನ್ನೆಲೆಯವರಾಗಿದ್ದು, ಮಹಿಳೆ ತೇವರ್ ಜಾತಿಗೆ ಸೇರಿದವಳು.
2018 ರಲ್ಲಿ, ಶಕ್ತಿ ವಾಹಿನಿ vs ಭಾರತ ಒಕ್ಕೂಟ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮರ್ಯಾದೆಗೇಡು ಹತ್ಯೆಯನ್ನು ಗಂಭೀರ ವಿಷಯವೆಂದು ಗುರುತಿಸಿತು. ಈ ಹತ್ಯೆಗಳನ್ನು ನಿಲ್ಲಿಸಲು, ದಂಪತಿಗಳನ್ನು ರಕ್ಷಿಸಲು ಮತ್ತು ಮದುವೆಯಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸುವ ಯಾರನ್ನಾದರೂ ಶಿಕ್ಷಿಸಲು ಪೊಲೀಸರು ಮತ್ತು ಸರ್ಕಾರವು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ನ್ಯಾಯಾಲಯ ಆದೇಶಿಸಿತ್ತು. ಖಾಪ್ ಪಂಚಾಯತ್‌ಗಳಿಗೆ ಆದೇಶಗಳನ್ನು ಹೊರಡಿಸಲು ಅಥವಾ ಕಾನೂನುಗಳನ್ನು ಜಾರಿಗೆ ತರಲು ಯಾವುದೇ ಅಧಿಕಾರವಿಲ್ಲ ಎಂದಿತ್ತು ಸುಪ್ರೀಂಕೋರ್ಟ್
2019 ರಲ್ಲಿ, ರಾಜಸ್ಥಾನವು 2012 ರ ಕಾನೂನು ಆಯೋಗದ ವರದಿಯ ಮಾದರಿಯಲ್ಲಿ ರಾಜ್ಯ ಶಾಸಕಾಂಗದಲ್ಲಿ ಮರ್ಯಾದೆಗೇಡು ಹತ್ಯೆಗೆ ಕಡಿವಾಣ ಹಾಕಲು ಮಸೂದೆಯನ್ನು ಪರಿಚಯಿಸಿತು. ಇದನ್ನು ಆಗಸ್ಟ್ 2019 ರಲ್ಲಿ ರಾಜಸ್ಥಾನ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಆದಾಗ್ಯೂ, ಇದು ಕಾಯಿದೆಯಾಗಿ ಮಾರ್ಪಟ್ಟಿಲ್ಲ ಏಕೆಂದರೆ ಇದಕ್ಕೆ ರಾಜ್ಯಪಾಲರು ಸಹಿ ಹಾಕಿಲ್ಲ.
► ಅತೀ ಹೆಚ್ಚು ಮರ್ಯಾದೆಗೇಡು ಹತ್ಯೆ ನಡೆದಿದ್ದು ಜಾರ್ಖಂಡ್ ನಲ್ಲಿ
2023 ರಲ್ಲಿ ಅತಿ ಹೆಚ್ಚು ಮರ್ಯಾದೆಗೇಡು ಹತ್ಯೆಗಳು ಜಾರ್ಖಂಡ್ ನಲ್ಲಿ ನಡೆದಿದೆ, ನಂತರದ ಸ್ಥಾನದಲ್ಲಿ ಹರ್ಯಾಣ ಇದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿ ಅಂಶಗಳು ತೋರಿಸಿದೆ.
2023 ರಲ್ಲಿ ಜಾರ್ಖಂಡ್ 9, ಹರಿಯಾಣ 6 ಪ್ರಕರಣಗಳನ್ನು ದಾಖಲಿಸಿದೆ. 2023 ರಲ್ಲಿ ಮಧ್ಯಪ್ರದೇಶ ಮತ್ತು ಪಂಜಾಬ್ ತಲಾ ಐದು ಪ್ರಕರಣಗಳನ್ನು ದಾಖಲಿಸಿದ್ದರೆ, ಉತ್ತರ ಪ್ರದೇಶದಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ.
2023 ರ NCRB ವರದಿಯ ಪ್ರಕಾರ, ಭಾರತದಲ್ಲಿ ವರದಿಯಾದ 38 ಮರ್ಯಾದೆಗೇಡು ಹತ್ಯೆಗಳಲ್ಲಿ ಅರ್ಧಕ್ಕಿಂತ ಹೆಚ್ಚು (58%) ಪ್ರಕರಣಗಳು ಮಧ್ಯಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಛತ್ತೀಸ್‌ಗಢ ಮತ್ತು ಕರ್ನಾಟಕದಲ್ಲಿ ನಡೆದಿದೆ.
ಜಾರ್ಖಂಡ್ ನಲ್ಲಿ 2020ರಲ್ಲಿ 4, 2021ರಲ್ಲಿ 8 ಮತ್ತು 2022 ರಲ್ಲಿ 4 , 2023 ರಲ್ಲಿ ಒಂಬತ್ತು ಪ್ರಕರಣಗಳನ್ನು ದಾಖಲಿಸಿದೆ ಎಂದು ವರದಿ ತೋರಿಸುತ್ತದೆ.
2020 ಮತ್ತು 2023 ರ ನಡುವೆ, ಮರ್ಯಾದೆಗೇಡು ಹತ್ಯೆ ಪ್ರಕರಣಗಳ ಸಂಖ್ಯೆಯಲ್ಲಿ ಪಂಜಾಬ್ ಎರಡನೇ ಸ್ಥಾನದಲ್ಲಿದೆ. ಇಲ್ಲಿ 21 ಪ್ರಕರಣಗಳು ವರದಿಯಾಗಿದ್ದು 19 ಪ್ರಕರಣಗಳೊಂದಿಗೆ ಮಧ್ಯಪ್ರದೇಶ ಮೂರನೇ ಸ್ಥಾನದಲ್ಲಿದೆ.
ಮರ್ಯಾದೆಗೇಡು ಹತ್ಯೆ ಅಪರಾಧಕ್ಕೆ ಕುಖ್ಯಾತವಾಗಿರುವ ಹರ್ಯಾಣದಲ್ಲಿ 2020 ಮತ್ತು 2021 ರಲ್ಲಿ ತಲಾ ನಾಲ್ಕು ಪ್ರಕರಣ ವರದಿಯಾಗಿವೆ. ಆದರೆ 2022 ರಲ್ಲಿ ಶೂನ್ಯ ಪ್ರಕರಣ ಮತ್ತು 2023ರಲ್ಲಿ ಆರು ಪ್ರಕರಣಗಳು ವರದಿಯಾಗಿವೆ.
ನಾಲ್ಕು ವರ್ಷಗಳ ಅವಧಿಯಲ್ಲಿ (2020-2023), ಉತ್ತರ ಮತ್ತು ಮಧ್ಯ ಭಾರತದ ರಾಜ್ಯಗಳು ಅತಿ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿವೆ. 2022 ರಲ್ಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲವಾದರೂ, 2023 ರಲ್ಲಿ ಚಂಡೀಗಢದಲ್ಲಿ ಒಂದು ಪ್ರಕರಣ ವರದಿಯಾಗಿದೆ.