ಪಿಝಾ ಡೆಲಿವರಿ ಹುಡುಗನನ್ನು ಅವಮಾನಿಸಿದ ಯುವತಿ!; ವೈರಲ್ ವೀಡಿಯೋ ಹಿಂದಿನ ಸತ್ಯಾಂಶವೇನು?
Screengrab : X \ @zoo_bear
ಸಹಪಾಠಿಗೆ ಅವಮಾನಿಸಿದ ಯುವತಿಯ ವೀಡಿಯೋ ಹಿಂದಿನ ಸತ್ಯಾಂಶವೇನು? ನಾಲ್ವರು ಯುವಜನರ ತಮಾಷೆಯ ವೀಡಿಯೋ ವೈರಲ್ ಆಗಿದ್ದು ಹೇಗೆ?
‘ಕ್ಲಾಸ್‌ಮೇಟ್‌ಗೆ ಅವಮಾನಿಸಿದ ಯುವತಿ’ ಎನ್ನುವ ಶೀರ್ಷಿಕೆಯಲ್ಲಿ ವೈರಲ್ ಆದ ವಿಡಿಯೋ ಒಂದು ಇದೀಗ ಪೂರ್ವಯೋಜಿತವಾಗಿ ರಚಿಸಲಾಗಿದೆ ಎನ್ನುವುದು ಬಹಿರಂಗವಾಗಿದೆ. ವೈರಲ್ ಆದ ವೀಡಿಯೋ ಒಂದರಲ್ಲಿ ಯುವತಿಗೆ ಸಹಪಾಠಿಯೊಬ್ಬ ದಾರಿ ಮಧ್ಯೆ ಸಿಗುತ್ತಾನೆ. ಅವರಿಬ್ಬರ ನಡುವಿನ ಮಾತುಕತೆಯನ್ನು ಅ ಯುವತಿ ವೀಡಿಯೋ ರೆಕಾರ್ಡಿಂಗ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾಳೆ. ವೀಡಿಯೋ ತಕ್ಷಣ ವೈರಲ್ ಆಗಿದೆ. ಈ ವೀಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಆ ಯುವತಿಯ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕೆಳಗಿನ ಲಿಂಕ್ ನಲ್ಲಿ ವೀಡಿಯೋ ಇದೆ:
ವೀಡಿಯೋದಲ್ಲಿ ಯುವತಿಗೆ ತನ್ನ ಮಾಜಿ ಕ್ಲಾಸ್‌ಮೇಟ್ ಹುಡುಗನೋರ್ವ ಪಿಝಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವಾಗಲೇ ದಾರಿ ಮಧ್ಯೆ ಸಿಕ್ಕಿದ್ದಾನೆ. ಆಕೆ ಆತನನ್ನು ನಗುನಗುತ್ತಾ ಮಾತನಾಡುತ್ತಲೇ ಅವಮಾನಿಸಿದ್ದಾಳೆ. “ಇವನು ನನ್ನ ಗೆಳೆಯ. ಇವತ್ತು ಅವನು ನಮಗೆ ಸಿಕ್ಕಿದ್ದಾನೆ. ಓದುವ ಸಮಯದಲ್ಲಿ ಅವನು ನಮಗೆ ಬಹಳ ಪ್ರೇರಣೆ ನೀಡ್ತಾ ಇದ್ದ. ಇದಾಗಿ 3 ವರ್ಷ ಆಯ್ತು, ಆದರೆ ಅವನು ಈಗ ಡೊಮಿನೋಸ್ ಪಿಝಾ ಮಾರುವವನು ಆಗಿದ್ದಾನೆ” ಎಂದು ಹೇಳುತ್ತಾಳೆ. ಜೊತೆಗೆ “ಡೊಮಿನೋಸ್ ಪಿಝಾ ಡೆಲಿವರಿ ಬಾಯ್ ಆಗಿದ್ದಕ್ಕೆ ಹೇಗೆ ಅನಿಸ್ತಿದೆ, ತುಂಬಾ ಖುಷಿ ಆಗ್ತಿದ್ಯಾ” ಎಂದು ಅವಮಾನಿಸುತ್ತಾಳೆ. ಆಕೆಯ ಮಾತು ಕೇಳಿ ಬೇಸರ ಹಾಗೂ ನಾಚಿಕೆಯಿಂದ ಒಂದು ಮಾತನ್ನು ಆಡದೇ ಆ ಹುಡುಗ ಬೇರೆಡೆ ತಿರುಗುತ್ತಾನೆ. ನಂತರ ಆಕೆ “ಶಾಲಾ ದಿನಗಳು ನೆನಪಾಗುತ್ತಿದ್ಯಾ” ಎಂದು ಆತನ ಬಳಿ ಕೇಳುತ್ತಾಳೆ. “ಹಾ ಬಹಳ ನೆನಪಾಗುತ್ತಿದೆ” ಎಂದು ಆತ ಹೇಳುತ್ತಾನೆ.
ಈ ಸಂವಹನದ ವೀಡಿಯೋ ವೈರಲ್ ಆಗಿದ್ದು, ಅನೇಕರು ವೀಡಿಯೋ ನೋಡಿ ಬಹಳ ಬೇಸರ ವ್ಯಕ್ತಪಡಿಸಿದ್ದಾರೆ. “ಹುಡುಗರ ಜೀವನ ಸುಲಭವಲ್ಲ, ಕೆಲವೊಮ್ಮೆ ವಯಸ್ಸಿಗೂ ಮೊದಲೇ ಜವಾಬ್ದಾರಿ ಬಂದು ಬಿಡುತ್ತದೆ. ಕನಸುಗಳು ಸಮಾಧಿಯಾಗುತ್ತವೆ. ಸ್ವಾಭಿಮಾನವನ್ನು ಪರೀಕ್ಷಿಸಲಾಗುತ್ತದೆ. ಪಿಝಾ ಡೆಲಿವರಿ ಮಾಡುವುದು ನಾಚಿಕೆಗೇಡಿನ ಸಂಗತಿಯಲ್ಲ. ಯಾರದ್ದೋ ಹೋರಾಟವನ್ನು ಅಣಕಿಸುವುದು ಸರಿಯಲ್ಲ” ಎಂದು ಒಬ್ಬರು ಬರೆದುಕೊಂಡಿದ್ದಾರೆ. “ಪ್ರಾಮಾಣಿಕತೆಯಿಂದ ಮಾಡುವ ಯಾವ ಕೆಲಸವೂ ಕೆಟ್ಟದಲ್ಲ, ಆದರೆ ಸಾರ್ವಜನಿಕವಾಗಿ ಒಬ್ಬರನ್ನು ಅವಮಾನಿಸುವುದು ಕೆಟ್ಟದು” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಸಿನಿಮಾ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರೂ ಪ್ರತಿಕ್ರಿಯೆ ನೀಡಿ, “ಆತ ನಿಜವಾದ ಹೀರೋ. ನೀನು ಯಾರೇ ಆಗಿದ್ದರೂ ನಿಜವಾದ ಹೀರೋ! ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೀಯ! ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವೆ. ಸ್ವಂತ ಗಳಿಕೆ ಮಾಡುತ್ತಿದ್ದೀಯ, ಯಾರಿಗೂ ಹೊರೆಯಾಗಿಲ್ಲ. ಯಾವುದೇ ಕೆಲಸ ಸಣ್ಣದಲ್ಲ, ನಿನಗೆ ನನ್ನ ಗೌರವವಿದೆ” ಎಂದು ಬರೆದಿದ್ದರು.
ಆದರೆ ಇದೀಗ ಲಕ್ಷಾಂತರ ವೀಕ್ಷಣೆಗಳನ್ನು ಕಂಡಿರುವ ಸಂಪೂರ್ಣ ವೀಡಿಯೋ ಪೂರ್ವಯೋಜಿತವಾಗಿ ರಚಿಸಿರುವುದು ಎಂದು ಬಹಿರಂಗವಾಗಿದೆ. ಇಬ್ಬರು ಯುವತಿಯರು ಮತ್ತು ಇಬ್ಬರು ಯುವಕರು ಸೇರಿ ಈ ವಿಡಿಯೋವನ್ನು ರಚಿಸಿದ್ದರು. ಅವರು ಪಿಝಾ ಸೇವಿಸಿ ಹೊರಗೆ ಬಂದು ನಿಂತಿದ್ದಾಗ ಈ ವೀಡಿಯೋವನ್ನು ರಚಿಸಿರುವುದಾಗಿ ತಿಳಿಸಿದ್ದಾರೆ. ವೈರಲ್ ಆದ ವೀಡಿಯೋ ನಂತರ ಮತ್ತೊಂದು ವೀಡಿಯೋವನ್ನು ಹಾಕಿರುವ ಯುವಕರು ಸತ್ಯಾಂಶವನ್ನು ಬಹಿರಂಗಪಡಿಸಿದ್ದಾರೆ.
“ನಾವು ತಮಾಷೆಗಾಗಿ ಈ ವೀಡಿಯೋ ಚಿತ್ರೀಕರಣ ಮಾಡಿದ್ದೆವು. ಆದರೆ ನಂತರ ನಮ್ಮನ್ನು ವಿಭಿನ್ನವಾಗಿ ಟ್ರೋಲ್ ಮಾಡಲಾಗುತ್ತಿದೆ. ಇದರಿಂದ ತುಂಬಾ ನೋವಾಗಿದೆ. ಈ ಯುವಕ ವೀಡಿಯೋದಲ್ಲಿ ಹೇಳಿದಂತೆ 30 ವರ್ಷದ ವ್ಯಕ್ತಿಯಲ್ಲ. ಈತನಿಗೆ 22 ವರ್ಷ ವಯಸ್ಸಾಗಿದೆಯಷ್ಟೆ” ಎಂದು ಅವರು ಹೇಳಿದ್ದಾರೆ. “ಈ ಯುವಕ ಉತ್ತಮವಾಗಿ ನಟಿಸುತ್ತಾನೆ. ಹೀಗಾಗಿ ಆತನ ಪ್ರತಿಕ್ರಿಯೆ ನಿಜವೆಂದು ಅನ್ನಿಸುವ ರೀತಿ ಇದೆ” ಎಂದು ಯುವತಿ ಮತ್ತೊಂದು ವೀಡಿಯೋದಲ್ಲಿ ವಿವರಿಸಿದ್ದಾಳೆ.