ಪ್ರತಿಭಟನೆಗಳ ವೇಳೆ ಪೊಲೀಸರು ತಮ್ಮ ಗುರುತನ್ನು ಮರೆಮಾಚಬಹುದೇ?; ಸಾದಾ ಉಡುಪಿನಲ್ಲಿರುವ ಅಧಿಕಾರಿಗಳ ಬಗ್ಗೆ ಭಾರತೀಯ ಕಾನೂನು ಏನು ಹೇಳುತ್ತದೆ?

Update: 2026-07-22 18:44 IST

Photo Credit : PTI 

2025 ಫೆಬ್ರವರಿ 10ರಂದು, ಅಮೆರಿಕದ ಮೆಂಫಿಸ್‌ನಲ್ಲಿರುವ 'ಟ್ಯಾಕೋಂಗಾನಾಸ್' ಎಂಬ ಜನಪ್ರಿಯ ಫುಡ್ ಟ್ರಕ್ ಮೇಲಿನ ದಾಳಿಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಸಾದಾ ಉಡುಪಿನಲ್ಲಿದ್ದ ನಾಲ್ವರು ವ್ಯಕ್ತಿಗಳು, ಅಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳನ್ನು ಕರೆದುಕೊಂಡು ಹೋಗುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಆ ವ್ಯಕ್ತಿಗಳ ಬಳಿ ಯಾವುದೇ ಬ್ಯಾಡ್ಜ್‌ಗಳು, ಹೆಸರು ಬರೆದ ನೇಮ್‌ಪ್ಲೇಟ್‌ಗಳು ಅಥವಾ ತಮ್ಮ ಗುರುತನ್ನು ಸ್ಪಷ್ಟಪಡಿಸುವ ಸೂಕ್ತ ದಾಖಲೆಗಳು ಇರಲಿಲ್ಲ.

ಆರ್ಮಡ್ ಕ್ರಿಮಿನಲ್‌ಗಳು ತಮ್ಮ ಉದ್ಯೋಗಿಗಳನ್ನು ಅಪಹರಿಸಿದ್ದಾರೋ ಅಥವಾ ಕಾನೂನು ಜಾರಿ ಸಂಸ್ಥೆಗಳು ಬಂಧಿಸಿವೆಯೋ ಎಂಬುದು ತಮಗೆ ತಿಳಿಯುತ್ತಿಲ್ಲ ಎಂದು ಹೇಳಿ ಫುಡ್ ಟ್ರಕ್ ಮಾಲಕರು ಈ ದೃಶ್ಯಾವಳಿಯನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಶೀಘ್ರದಲ್ಲೇ ವೈರಲ್ ಆಯಿತು. ಇದರ ಬೆನ್ನಲ್ಲೇ ಈ ಕಾರ್ಯಾಚರಣೆಯನ್ನು 'ಇಮಿಗ್ರೇಷನ್ ಆಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್' (ICE) ನಡೆಸಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಸಾಮಾನ್ಯ ಕಾರ್ಯಾಚರಣೆಗಳ ಸಮಯದಲ್ಲಿ ಕಾನೂನು ಜಾರಿ ಅಧಿಕಾರಿಗಳು ತಮ್ಮ ಗುರುತನ್ನು ಮರೆಮಾಚಲು ಅನುಮತಿಸಬೇಕೇ ಎಂಬ ಬಗ್ಗೆ ಈ ಘಟನೆಯು ಅಮೆರಿಕದಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿತು. ಅಂದಿನಿಂದ ಹಲವಾರು ರಾಜ್ಯಗಳು ಮತ್ತು ಫೆಡರಲ್ ಸಂಸದರು ಈ ಅಭ್ಯಾಸವನ್ನು ನಿರ್ಬಂಧಿಸಲು ಅಥವಾ ನಿಯಂತ್ರಿಸಲು ಕ್ರಮ ಕೈಗೊಂಡಿದ್ದಾರೆ.

ಇದಾಗಿ ಒಂದು ವರ್ಷ, ಐದು ತಿಂಗಳು ಮತ್ತು ಹತ್ತು ದಿನಗಳ ನಂತರ, ಸುಮಾರು 12,800 ಕಿಲೋಮೀಟರ್ ದೂರದ ದಿಲ್ಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಗಳ ವೇಳೆ ದಿಲ್ಲಿ ಪೊಲೀಸ್ ಮತ್ತು ರ‍್ಯಾಪಿಡ್ ಆಕ್ಷನ್ ಫೋರ್ಸ್ (RAF) ಸಿಬ್ಬಂದಿ ಸಾಮಾನ್ಯ ಉಡುಪಿನಲ್ಲಿ ಅಥವಾ ಹೆಸರು ಬರೆದ ನೇಮ್‌ಪ್ಲೇಟ್ ಇಲ್ಲದೆ ಕಾಣಿಸಿಕೊಂಡ ವಿಡಿಯೊಗಳು ವೈರಲ್ ಆಗಿವೆ. ಇದು ಪೊಲೀಸರ ಗುರುತು ಹಾಗೂ ಹೊಣೆಗಾರಿಕೆಯ ಕುರಿತು ಇಂಥದ್ದೇ ಚರ್ಚೆಯನ್ನು ಹುಟ್ಟುಹಾಕಿದೆ.

ಸೋಮವಾರ ನಡೆದ ಸಿಜೆಪಿ ಪ್ರತಿಭಟನೆಗಳ ವೇಳೆ ಏನಾಯಿತು?

ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ಆಯೋಜಿಸಿದ್ದ ಪ್ರತಿಭಟನೆ ಸೋಮವಾರ ನಿರೀಕ್ಷೆಗೂ ಮೀರಿ ತೀವ್ರಗೊಂಡಿತು. ಪ್ರತಿಭಟನಾಕಾರರು ಸಂಸತ್ತಿನತ್ತ ಮೆರವಣಿಗೆ ಹೊರಟಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಇದು ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಹಿಂಸಾತ್ಮಕ ಸಂಘರ್ಷಕ್ಕೆ ಕಾರಣವಾಯಿತು. ಘಟನೆಯಲ್ಲಿ ಹಾಗೂ ಪ್ರತಿಭಟನಾಕಾರರು ಪೊಲೀಸರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸಂಜೆ ವೇಳೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೊಗಳಲ್ಲಿ, ಸಾದಾ ಉಡುಪಿನಲ್ಲಿದ್ದ ಗುರುತು ಸಿಗದ ವ್ಯಕ್ತಿಗಳು ಪೊಲೀಸರ ಬಳಿ ಇರುವಂತಹ ಲಾಠಿಗಳನ್ನು ಹಿಡಿದು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸುವುದು ಕಂಡುಬಂದಿದೆ. "ಸಾದಾ ಉಡುಪಿನಲ್ಲಿ ಲಾಠಿ ಹಿಡಿದಿರುವ ಈ ಗೂಂಡಾಗಳು ಯಾರು? ನಮ್ಮ ಮೇಲೆ ಹಲ್ಲೆ ನಡೆಸಲು ಯಾರನ್ನು ಬಾಡಿಗೆಗೆ ತಂದಿದ್ದೀರಿ?" ಎಂದು ಕಾಕ್ರೋಚ್ ಜನತಾ ಪಾರ್ಟಿ ಸಾಮಾಜಿಕ ಜಾಲತಾಣಗಳಲ್ಲಿ ದಿಲ್ಲಿ ಪೊಲೀಸರನ್ನು ಪ್ರಶ್ನಿಸಿದೆ.

ಇತರ ಕೆಲವು ವಿಡಿಯೊಗಳಲ್ಲಿ, ಸಮವಸ್ತ್ರದಲ್ಲಿದ್ದ ದಿಲ್ಲಿ ಪೊಲೀಸ್ ಮತ್ತು ರ‍್ಯಾಪಿಡ್ ಆಕ್ಷನ್ ಫೋರ್ಸ್ (RAF) ಸಿಬ್ಬಂದಿ ನೇಮ್‌ಪ್ಲೇಟ್ ಇಲ್ಲದೆ ಕಾಣಿಸಿಕೊಂಡಿದ್ದಾರೆ. ವಿಡಿಯೊ ಚಿತ್ರೀಕರಿಸಿದ ಪ್ರತಿಭಟನಾಕಾರರು, "ನಿಮ್ಮ ನೇಮ್‌ಪ್ಲೇಟ್ ಎಲ್ಲಿದೆ? ದಯವಿಟ್ಟು ಉತ್ತರಿಸಿ" ಎಂದು ಕೇಳಿದರೂ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಆರೋಪಗಳು ಹಾಗೂ ವೈರಲ್ ವಿಡಿಯೊಗಳಿಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿಲ್ಲ.

ಗುರುತನ್ನು ಮರೆಮಾಚುವುದು ಕಾನೂನುಬದ್ಧವೇ?

ಗುಪ್ತಚರ ಮಾಹಿತಿ ಸಂಗ್ರಹಣೆಯಂತಹ ಕೆಲವು ವಿಶೇಷ ಕಾರ್ಯಾಚರಣೆಗಳಲ್ಲಿ ಗುರುತನ್ನು ಮರೆಮಾಚುವುದು ಅಥವಾ ಮಾರುವೇಷದಲ್ಲಿರುವುದು ಅನಿವಾರ್ಯವಾಗಿದ್ದರೂ, ಸಾಮಾನ್ಯ ಪೊಲೀಸ್ ವ್ಯವಸ್ಥೆಯು ಶಾಸನಬದ್ಧ ನಿಯಮಗಳು ಹಾಗೂ ನ್ಯಾಯಾಲಯದ ಮಾರ್ಗದರ್ಶಿ ಸೂತ್ರಗಳಿಗೆ ಬದ್ಧವಾಗಿರುತ್ತದೆ.

ಸಾರ್ವಜನಿಕ ಸುವ್ಯವಸ್ಥೆ ಮತ್ತು ಶಾಂತಿಯ ನಿರ್ವಹಣೆಯು ಬಿಎನ್‌ಎಸ್‌ಎಸ್ (BNSS) ಅಧ್ಯಾಯ XI (ಸೆಕ್ಷನ್ 148 ರಿಂದ 160, ಈವರೆಗಿನ CrPC ಅಧ್ಯಾಯ X) ಅಡಿಯಲ್ಲಿ ಬರುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟ ಸನ್ನಿವೇಶಗಳಲ್ಲಿ ಪೊಲೀಸರು ಅಥವಾ ಸಶಸ್ತ್ರ ಪಡೆಗಳ ಸಿಬ್ಬಂದಿ ತಮ್ಮ ಗುರುತನ್ನು ಬಹಿರಂಗಪಡಿಸಬೇಕೇ ಎಂಬುದನ್ನು ಇದು ಸ್ಪಷ್ಟವಾಗಿ ಉಲ್ಲೇಖಿಸುವುದಿಲ್ಲ. ಆದರೆ, ಮ್ಯಾಜಿಸ್ಟ್ರೇಟ್ ಅಥವಾ "ಪೊಲೀಸ್ ಅಧಿಕಾರಿಗೆ" ಮಾತ್ರ ಗುಂಪನ್ನು ಚದುರಿಸಲು ಕಾನೂನು ಅನುಮತಿಸುತ್ತದೆ ಎಂದರೆ, ಅಲ್ಲಿ ಅಧಿಕಾರಿಗಳ ಗುರುತು ಅತ್ಯಗತ್ಯ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಗುರುತು ಸಿಗದ ಸಶಸ್ತ್ರ ವ್ಯಕ್ತಿಗಳ ಗುಂಪು ಕಾನೂನುಬದ್ಧವಾಗಿ ಸಾರ್ವಜನಿಕ ಸಭೆಯನ್ನು ಚದುರಲು ಆದೇಶಿಸಲು ಸಾಧ್ಯವಿಲ್ಲ ಎಂಬುದು ಇಲ್ಲಿನ ಪ್ರಮುಖ ವಾದ. "ಪೊಲೀಸ್ ಅಧಿಕಾರಿಯನ್ನು ಗುರುತಿಸಲು ಸಾಧ್ಯವಾಗದಿದ್ದರೆ, ಗುಂಪನ್ನು ಚದುರಿಸಲು ಅವರು ನೀಡುವ ಆದೇಶಕ್ಕೆ ಕಾನೂನುಬದ್ಧ ಮೌಲ್ಯವಿರುವುದಿಲ್ಲ" ಎಂದು ದಿಲ್ಲಿಯ ಅಪರಾಧ ವಿಭಾಗದ ವಕೀಲರೊಬ್ಬರು ಹೇಳಿರುವುದಾಗಿ ʼದಿ ಇಂಡಿಯನ್ ಎಕ್ಸ್‌ಪ್ರೆಸ್ʼ ವರದಿ ಉಲ್ಲೇಖಿಸಿದೆ.

'ಡಿ.ಕೆ. ಬಸು ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ' (1997) ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಬಂಧನ ಮತ್ತು ವಶಕ್ಕೆ ಪಡೆಯುವ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ವಿವರವಾದ ಭದ್ರತಾ ಕ್ರಮಗಳನ್ನು ರೂಪಿಸಿತ್ತು. ಇದರಲ್ಲಿ ಬಂಧಿಸುವ ಅಧಿಕಾರಿಯು ಸ್ಪಷ್ಟ ಮತ್ತು ಕಾಣುವಂತಹ ಗುರುತಿನ ಚೀಟಿಯನ್ನು ಹೊಂದಿರಬೇಕು ಎಂಬ ನಿಯಮವೂ ಸೇರಿತ್ತು. ಈ ತೀರ್ಪು ಗುಂಪು ನಿಯಂತ್ರಣಕ್ಕಿಂತ ಹೆಚ್ಚಾಗಿ ಬಂಧನಗಳಿಗೆ ಸಂಬಂಧಿಸಿದ್ದಾಗಿದ್ದರೂ, ಪೊಲೀಸರು ತಮ್ಮ ಅಧಿಕಾರವನ್ನು ಬಳಸುವಾಗ ಅವರ ಗುರುತು ಸ್ಪಷ್ಟವಾಗಿರಬೇಕು ಎಂಬ ನ್ಯಾಯಾಂಗದ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ವಕೀಲರು ಹೇಳುತ್ತಾರೆ.

2025 ಆಗಸ್ಟ್ ನಲ್ಲಿ, ವೈಎಸ್‌ಆರ್‌ಸಿಪಿ ಶಾಸಕ ನಲ್ಲಪರೆಡ್ಡಿ ಪ್ರಸನ್ನ ಕುಮಾರ್ ರೆಡ್ಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಆಂಧ್ರಪ್ರದೇಶ ಹೈಕೋರ್ಟ್, ಸಾದಾ ಉಡುಪಿನಲ್ಲಿದ್ದ ಸಿಬ್ಬಂದಿ ಕರ್ತವ್ಯ ನಿರ್ವಹಿಸುವಾಗ ನಾಗರಿಕರು ಅವರನ್ನು ಪೊಲೀಸರು ಎಂದು ಹೇಗೆ ಗುರುತಿಸಲು ಸಾಧ್ಯ ಎಂದು ಪ್ರಶ್ನಿಸಿತ್ತು. ಪೊಲೀಸ್ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿದ್ದ ರೆಡ್ಡಿ, ಆ ಅಧಿಕಾರಿಗಳು ಸಮವಸ್ತ್ರದಲ್ಲಿ ಇರಲಿಲ್ಲ ಎಂದು ವಾದಿಸಿದ್ದರು.

ಪೊಲೀಸರು ತಮ್ಮ ಗುರುತನ್ನು ಬಹಿರಂಗಪಡಿಸಲು ಏಕೆ ಹಿಂಜರಿಯುತ್ತಾರೆ?

ತಮ್ಮ ಹೆಸರು ಮತ್ತು ಗುರುತು ಸ್ಪಷ್ಟವಾಗಿ ಕಂಡರೆ, ತಮಗೆ ದೀರ್ಘಾವಧಿಯ ಕಾನೂನು ಸಂಕಷ್ಟಗಳು, ಸಾಮಾಜಿಕ ಜಾಲತಾಣಗಳಲ್ಲಿ ಕಿರುಕುಳ ಹಾಗೂ ಕುಟುಂಬ ಸದಸ್ಯರಿಗೆ ಬೆದರಿಕೆಗಳು ಎದುರಾಗುವ ಸಾಧ್ಯತೆಯಿದೆ ಎಂದು ಪೊಲೀಸ್ ಅಧಿಕಾರಿಗಳು ವಾದಿಸುತ್ತಾರೆ.

"ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಹಾಗೂ ಛತ್ತೀಸ್‌ಗಢದಂತಹ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಈ ಅಭ್ಯಾಸ ಆರಂಭವಾಯಿತು. ಅಲ್ಲಿ ಉಗ್ರರ ದಾಳಿಗೆ ಸುಲಭವಾಗಿ ಬಲಿಯಾಗದಿರಲು ಸಿಬ್ಬಂದಿ ತಮ್ಮ ನೇಮ್‌ಪ್ಲೇಟ್ ಅಥವಾ ಹುದ್ದೆಯ ಲಾಂಛನಗಳನ್ನು ಧರಿಸುವುದನ್ನು ತಪ್ಪಿಸುತ್ತಿದ್ದರು. ಕಾಲಕ್ರಮೇಣ, ಈ ಅಭ್ಯಾಸ ಸಾಮಾನ್ಯ ಪೊಲೀಸ್ ವ್ಯವಸ್ಥೆಗೂ ವ್ಯಾಪಿಸಿದಂತೆ ಕಾಣುತ್ತದೆ" ಎಂದು ದಿಲ್ಲಿ ಪೊಲೀಸ್ ಇಲಾಖೆಯ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಶೇಷ ಭದ್ರತಾ ಸನ್ನಿವೇಶಗಳಲ್ಲಿ ಈ ನಡೆ ಸಮಂಜಸ ಎನಿಸಿದರೂ, ಸಾಮಾನ್ಯ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಯ ಕರ್ತವ್ಯಗಳಿಗೂ ಇದನ್ನು ವಿಸ್ತರಿಸುವುದು ವಿವಾದಾಸ್ಪದವಾಗಿದೆ ಎಂದು ಅವರು ತಿಳಿಸಿದ್ದಾರೆ.

►ಐಸಿಇ ಕಾರ್ಯಾಚರಣೆಗೆ ಇದನ್ನು ಹೇಗೆ ಹೋಲಿಸಬಹುದು?*

ದಿಲ್ಲಿ ಪೊಲೀಸರ ನಿಯೋಜನೆ ಕುರಿತಾದ ಚರ್ಚೆಯು ಅಮೆರಿಕದಲ್ಲಿ 'ಇಮಿಗ್ರೇಷನ್ ಆಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್' ಕಾರ್ಯಾಚರಣೆ ಸುತ್ತ ಎದ್ದಿರುವ ವಿವಾದವನ್ನು ಹೋಲುತ್ತದೆ.

ಎರಡೂ ಪ್ರಕರಣಗಳಲ್ಲಿ ಪ್ರಮುಖ ಕಳಕಳಿ ಎಂದರೆ ಹೊಣೆಗಾರಿಕೆ. ಅಂದರೆ, ಅಧಿಕಾರ ಚಲಾಯಿಸುವ ಕಾನೂನು ಜಾರಿ ಸಿಬ್ಬಂದಿ ಸಾರ್ವಜನಿಕರಿಗೆ ಸ್ಪಷ್ಟವಾಗಿ ಗುರುತು ಸಿಗುವಂತೆ ಇರಬೇಕೇ ಎನ್ನುವುದೇ ಇಲ್ಲಿನ ಮುಖ್ಯ ಪ್ರಶ್ನೆ. ಸಾದಾ ಉಡುಪಿನಲ್ಲಿರುವ ಅಥವಾ ಗುರುತು ಸಿಗದ ಸಿಬ್ಬಂದಿ ಬಲಪ್ರಯೋಗ ಮಾಡುವ ವಿಡಿಯೊಗಳು ಸಹಜವಾಗಿಯೇ ಮೇಲ್ವಿಚಾರಣೆ, ಹೊಣೆಗಾರಿಕೆಯನ್ನು ನಿಗದಿಪಡಿಸುವುದು ಹಾಗೂ ಕಾನೂನು ಪರಿಹಾರಗಳ ಕುರಿತು ಹಲವು ಪ್ರಶ್ನೆಗಳನ್ನು ಎತ್ತುತ್ತವೆ.

ಪ್ರಕರಣಗಳ ಹಿನ್ನೆಲೆ ವಿಭಿನ್ನವಾಗಿದೆ. ಅಮೆರಿಕದ ಐಸಿಇ ವಿವಾದವು ಬಂಧನ ಒಳಗೊಂಡ ವಲಸೆ ನಿಯಂತ್ರಣ ಕಾರ್ಯಾಚರಣೆಗೆ ಸಂಬಂಧಿಸಿದ್ದಾದರೆ, ದಿಲ್ಲಿಯ ವಿಡಿಯೊಗಳು ಪ್ರತಿಭಟನೆಯ ವೇಳೆ ಗುಂಪು ನಿಯಂತ್ರಿಸುವ ಸಾರ್ವಜನಿಕ ಸುವ್ಯವಸ್ಥೆಯ ಸನ್ನಿವೇಶದಿಂದ ಹೊರಬಂದಿವೆ.

ಅಮೆರಿಕದಲ್ಲಿ ಐಸಿಇ ತೀವ್ರ ಸ್ವರೂಪದ ಕಾರ್ಯಾಚರಣೆಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಮತ್ತು ಶಾಸನಬದ್ಧ ಕ್ರಮಗಳು ಜರುಗಿದವು. ಯುಎಸ್ ಕಾಂಗ್ರೆಸ್ 'Stop Hiding Behind Masks and Plainclothes Act' ಕಾಯ್ದೆಯನ್ನು ಪರಿಚಯಿಸಿತು. ಇದು ಸಾಮಾನ್ಯ ಕಾರ್ಯಾಚರಣೆಗಳ ಸಮಯದಲ್ಲಿ ಮುಖ ಮುಚ್ಚಿಕೊಳ್ಳುವುದನ್ನು ನಿಷೇಧಿಸುವುದರ ಜೊತೆಗೆ, ಇಲಾಖೆಯ ಸಿಬ್ಬಂದಿ ತಮ್ಮ ಬ್ಯಾಡ್ಜ್ ಸಂಖ್ಯೆ ಹಾಗೂ ಗುರುತನ್ನು ಕಡ್ಡಾಯವಾಗಿ ಪ್ರದರ್ಶಿಸುವುದನ್ನು ನಿಯಮವಾಗಿಸಲು ಹೊರಟಿದೆ. ಕ್ಯಾಲಿಫೋರ್ನಿಯಾ ರಾಜ್ಯವೂ ಸಹ ಫೆಡರಲ್ ವಲಸೆ ಅಧಿಕಾರಿಗಳು ತಮ್ಮ ಗುರುತನ್ನು ಮರೆಮಾಚುವುದನ್ನು ತಡೆಯುವ ಕಾನೂನನ್ನು ಜಾರಿಗೆ ತಂದಿದೆ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News