EPFO 3.0 : ಅಸಂಘಟಿತ ವಲಯ ಮತ್ತು ಗಿಗ್ ಕಾರ್ಮಿಕರಿಗೆ ಲಭಿಸಲಿದೆ ಪಿಂಚಣಿ ಸೌಲಭ್ಯ
Photo Credit : newsonair.gov.in
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ 3.0 ಸುಧಾರಣಾ ಹಂತದ ಭಾಗವಾಗಿ ಕೆಲವು ಪ್ರಮುಖ ಬದಲಾವಣೆಗಳಿಗೆ ಸಿದ್ಧತೆ ನಡೆಸಿದೆ. ಅವುಗಳೆಂದರೆ ವಾರ್ಷಿಕ ಪಾವತಿ ಅಥವಾ ನಿಯಮಿತ ಹಣ ಹಿಂಪಡೆಯುವ ಆಯ್ಕೆಯೊಂದಿಗೆ ಎಲ್ಲಾ ಕಾರ್ಮಿಕರಿಗೂ ಸಾರ್ವತ್ರಿಕ ಪಿಂಚಣಿ ರಕ್ಷಣೆ, ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರಿಗೆ ಮೊದಲ ಬಾರಿಗೆ ಸಾಮಾಜಿಕ ಭದ್ರತೆಯ ಕೊಡುಗೆ ಹಾಗೂ ಕೋರ್ ಬ್ಯಾಂಕಿಂಗ್ ಸೊಲ್ಯೂಷನ್ (CBS) ಅಳವಡಿಸಿಕೊಳ್ಳಲು ಸಾಫ್ಟ್‌ವೇರ್ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವುದನ್ನು ಸುಧಾರಣೆಯ ಭಾಗವಾಗಿ ಯೋಜಿಸುತ್ತಿರುವ ಪ್ರಮುಖ ಬದಲಾವಣೆಗಳಾಗಿವೆ.
ಕಳೆದ ಒಂದು ವರ್ಷದಲ್ಲಿ, 'EPFO 2.0' ಅಡಿಯಲ್ಲಿ ಚಂದಾದಾರರಿಗೆ ಹಣದ ಲಭ್ಯತೆಯನ್ನು ಸುಲಭಗೊಳಿಸುವುದು ಮತ್ತು ಕ್ಷಿಪ್ರವಾಗಿ ಕ್ಲೈಮ್ ಗಳನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಸಂಸ್ಥೆಯು ಕೆಲಸ ಮಾಡಿದೆ. ಇದರ ಫಲವಾಗಿ 123 ಪ್ರಾದೇಶಿಕ ಡೇಟಾಬೇಸ್‌ಗಳನ್ನು ವಿಲೀನಗೊಳಿಸಿ ಕೇಂದ್ರೀಕೃತ ವ್ಯವಸ್ಥೆ ರೂಪಿಸಲಾಗಿದೆ. ಹೊಸ ವೆಬ್ ಪೋರ್ಟಲ್ ಕೂಡ ರೂಪುಗೊಂಡಿದ್ದು, ಇದು ಸದಸ್ಯರಿಗೆ ಸಮಯಕ್ಕೆ ಸರಿಯಾಗಿ ಬಡ್ಡಿ ಜಮಾ ಮಾಡಲು ಮತ್ತು ಹಿಂಪಡೆಯಲು ಲಭ್ಯವಿರುವ ನಿಖರ ಬಾಕಿ ಹಣದ ಮಾಹಿತಿಯನ್ನು ನೀಡುತ್ತಿದೆ.
EPFO ಈಗ CBS-ಆಧಾರಿತ ಸಾಫ್ಟ್‌ವೇರ್ ತಂತ್ರಜ್ಞಾನದ ಮೂಲಕ ಮುಂದಿನ ಹಂತದ ಸುಧಾರಣೆಗಳಿಗೆ ಕಾಲಿಡಲು ಸಜ್ಜಾಗಿದೆ. ಭಾರತದ ಒಟ್ಟು 60 ಕೋಟಿಗೂ ಹೆಚ್ಚು ಶ್ರಮಿಕ ವರ್ಗಕ್ಕೆ ಸಾಮಾಜಿಕ ಭದ್ರತಾ ಯೋಜನೆಗಳ ಹಣ ರವಾನಿಸಲು ಈ ತಾಂತ್ರಿಕ ಬದಲಾವಣೆ ಅತ್ಯಗತ್ಯವಾಗಿದೆ. ಈ ಪೈಕಿ ಸುಮಾರು ಮುಕ್ಕಾಲು ಭಾಗದಷ್ಟು ಜನರು ಅಸಂಘಟಿತ ವಲಯದಲ್ಲಿದ್ದು, ಕನಿಷ್ಠ ಅಥವಾ ಯಾವುದೇ ಪಿಂಚಣಿ ಸೌಲಭ್ಯವನ್ನು ಹೊಂದಿಲ್ಲ.
CBS ಎಂಬುದು ಭಾರತದಲ್ಲಿ ಬ್ಯಾಂಕುಗಳ ಬೆನ್ನೆಲುಬಾಗಿರುವ ಕೇಂದ್ರೀಕೃತ ಪಾವತಿ ಸಾಫ್ಟ್‌ವೇರ್ ಆಗಿದೆ. ಇದು ಎಲ್ಲಾ ಶಾಖೆಗಳಾದ್ಯಂತ ನೈಜ ಸಮಯದಲ್ಲಿ ಹಣವನ್ನು ಠೇವಣಿ ಮಾಡುವುದು ಮತ್ತು ಹಿಂಪಡೆಯುವುದಕ್ಕೆ ಸಹಾಯ ಮಾಡುತ್ತದೆ.
ಎಲ್ಲರಿಗೂ ಪಿಂಚಣಿ ಭದ್ರತೆ
ಹೊಸ ಪಿಂಚಣಿ ಯೋಜನೆಯು 'ನಿಗದಿತ ಕೊಡುಗೆ' ಮಾದರಿಯಲ್ಲಿ ಕೆಲಸ ಮಾಡಲಿದೆ. ಇದಕ್ಕೆ ಕಾರ್ಮಿಕರು, ಮಾಲೀಕರು, ಕಡಿಮೆ ಆದಾಯದ ಕಾರ್ಮಿಕರಿಗೆ ಸರ್ಕಾರದ ಸಹ ಕೊಡುಗೆ, ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರಿಗೆ ನೆರವಾಗುವ ಆ್ಯಪ್ ಆಧಾರಿತ ಸಂಸ್ಥೆಗಳು, CSR ಹಾಗೂ ಇತರ ಮೂರನೇ ವ್ಯಕ್ತಿಯ ನಿಧಿಗಳಿಂದ ಹಣ ಸಂಗ್ರಹವಾಗಲಿದೆ. ಇಂತಹ ವೈವಿಧ್ಯಮಯ ಕೊಡುಗೆಗಳು ಮತ್ತು ನಿವೃತ್ತಿ ಸಮಯದಲ್ಲಿನ ಹಣ ಹಿಂಪಡೆಯುವಿಕೆ ವ್ಯವಸ್ಥೆಯನ್ನು EPFO ಪರಿಗಣಿಸುತ್ತಿರುವುದು ಇದೇ ಮೊದಲು. ಪ್ರಸ್ತುತ, ಸೇವಾ ಅವಧಿಯಲ್ಲಿ ಶಿಕ್ಷಣ, ಅನಾರೋಗ್ಯ, ವಸತಿ ಮತ್ತು ಮದುವೆಯಂತಹ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಮುಂಗಡ ಹಣ ಪಡೆಯಲು ಅಥವಾ ನಿವೃತ್ತಿ ಸಮಯದಲ್ಲಿ ಒಟ್ಟಾರೆಯಾಗಿ ಅಂತಿಮ ಹಣ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ.
ಸಂಗ್ರಹವಾಗುವ ಕೊಡುಗೆಗಳು ಕಾಲಕ್ರಮೇಣ ಬೆಳೆಯಲಿದ್ದು, ಇವುಗಳನ್ನು ಸರ್ಕಾರಿ ಬೆಂಬಲಿತ ಭದ್ರತಾ ಪತ್ರಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಪ್ರತಿವರ್ಷ ಬಡ್ಡಿ ಜಮೆಯಾಗುವ ಈ ಹಣವು, ನಿವೃತ್ತಿಯ ವೇಳೆಗೆ 'ಟಾರ್ಗೆಟ್ ರಿಟೈರ್‌ಮೆಂಟ್ ಸಮ್' (TRS) ಆಗಿ ಪರಿವರ್ತನೆಯಾಗುತ್ತದೆ. ನಿವೃತ್ತಿ ಸಮಯದಲ್ಲಿ ಈ ಒಟ್ಟು ಮೊತ್ತವನ್ನು ಬಳಸಿಕೊಳ್ಳಲು ಎರಡು ಆಯ್ಕೆಗಳಿರುತ್ತವೆ. ಅವುಗಳೆಂದರೆ ಅಂದಿನ ದರಗಳಿಗೆ ಅನುಗುಣವಾಗಿ ಮಾಸಿಕ ಪಿಂಚಣಿ ಪಡೆಯುವುದು ಅಥವಾ ಹಂತ-ಹಂತವಾಗಿ ಹಣ ಹಿಂಪಡೆಯುವ ವ್ಯವಸ್ಥೆ (SWP) ಆಯ್ಕೆ ಮಾಡಿಕೊಳ್ಳುವುದು.
"ನಿವೃತ್ತಿಯ ತನಕ ಇದು ಪಿಎಫ್ ರೀತಿಯಲ್ಲೇ ಕೆಲಸ ಮಾಡುತ್ತದೆ. ಹಣ ಸಂಗ್ರಹವಾಗುತ್ತಾ ಸಾಗುತ್ತದೆ. ನಿವೃತ್ತಿಯ ಹಂತ ತಲುಪಿದಾಗ ಇದನ್ನು ಮಾಸಿಕ ಪಿಂಚಣಿ ಅಥವಾ ಹಂತ-ಹಂತವಾಗಿ ಹಣ ಹಿಂಪಡೆಯುವ ಯೋಜನೆಗೆ ಬದಲಾಯಿಸಿಕೊಳ್ಳಬಹುದು," ಎಂದು ಅಧಿಕಾರಿಯೊಬ್ಬರು 'ದಿ ಇಂಡಿಯನ್ ಎಕ್ಸ್‌ಪ್ರೆಸ್'ಗೆ ತಿಳಿಸಿದ್ದಾರೆ.
ಚಂದಾದಾರರು ಆಯ್ಕೆ ಮಾಡಿಕೊಳ್ಳುವ ಪಿಂಚಣಿ ಗುರಿ ಮತ್ತು ನಿರೀಕ್ಷಿತ ನಿವೃತ್ತಿಯ ವಯಸ್ಸಿನ ಆಧಾರದ ಮೇಲೆ ಸಿಸ್ಟಮ್ ಸ್ವಯಂಚಾಲಿತವಾಗಿ TRS ಮೊತ್ತವನ್ನು ಲೆಕ್ಕಹಾಕುತ್ತದೆ. ಸದಸ್ಯರಿಗೆ ವೈಯಕ್ತಿಕ ಡ್ಯಾಶ್‌ಬೋರ್ಡ್ ಸಿಗಲಿದ್ದು, ಅದರಲ್ಲಿ ಒಟ್ಟು ವಂತಿಗೆ, ಪ್ರಸ್ತುತ ಇರುವ ಹಣದ ವಿವರ ಮತ್ತು ನಿಗದಿಪಡಿಸಿದ ಗುರಿ ತಲುಪಲು ಇರುವ ಪ್ರಗತಿಯನ್ನು ಯಾವುದೇ ಸಮಯದಲ್ಲಿ ವೀಕ್ಷಿಸಬಹುದು. ಪ್ರಸ್ತಾವಿತ TRS ತಲುಪಲು ಎಷ್ಟು ಹಣ ಮತ್ತು ಎಷ್ಟು ಅವಧಿಗೊಮ್ಮೆ ವಂತಿಗೆ ನೀಡಬೇಕು ಎಂಬುದನ್ನೂ ಸಿಸ್ಟಮ್ ತೋರಿಸುತ್ತದೆ.
"ಸದಸ್ಯರು ತಮ್ಮ TRS ಗುರಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಅದಕ್ಕೆ ತಕ್ಕಂತೆ ಪಾವತಿಸಬೇಕಾದ ಕೊಡುಗೆಯ ಮೊತ್ತವೂ ಮರುಲೆಕ್ಕಾಚಾರವಾಗುತ್ತದೆ. ಚಂದಾದಾರರು, ಮಾಲೀಕರು ಅಥವಾ ಮೂರನೇ ವ್ಯಕ್ತಿಗಳಿಂದ ಬರುವ ವಿಭಿನ್ನ ವಂತಿಗೆಗಳನ್ನು ಸ್ವೀಕರಿಸಿ, ವರ್ಗೀಕರಿಸಿ, ಸದಸ್ಯರ ಪಿಂಚಣಿ ಖಾತೆಗೆ ಜಮೆ ಮಾಡಲು ಈ ಸಿಸ್ಟಮ್ ಸಹಕಾರಿಯಾಗುತ್ತದೆ," ಎಂದು ಅಧಿಕಾರಿ ಹೇಳಿದ್ದಾರೆ.
ಸಿಂಗಾಪುರ ಮಾದರಿ ಮತ್ತು ಹಣದುಬ್ಬರಕ್ಕೆ ತಕ್ಕಂತೆ ಅಂದಾಜು ಲೆಕ್ಕಾಚಾರ
ಸಿಂಗಾಪುರ ಮಾದರಿಯಂತಹ ಜಾಗತಿಕ ವ್ಯವಸ್ಥೆಗಳನ್ನು ಆಧರಿಸಿ ಹೊಸ ಸೌಲಭ್ಯಗಳನ್ನು ರೂಪಿಸಲು ಅಧ್ಯಯನ ನಡೆಸಲಾಗುತ್ತಿದೆ. ಸಿಂಗಾಪುರದ 'ವಿಳಂಬಿತ ವಾರ್ಷಿಕ ಪಾವತಿ' (Deferred Annuity) ಯೋಜನೆಯಲ್ಲಿ ನಿವೃತ್ತಿಯ ಜೊತೆಗೆ ವಸತಿ ಮತ್ತು ಆರೋಗ್ಯ ರಕ್ಷಣೆಗೂ ಉಳಿತಾಯದ ಹಣ ಮೀಸಲಿಡಲಾಗುತ್ತದೆ.
ಸಿಂಗಾಪುರದ 'ಸೆಂಟ್ರಲ್ ಪ್ರಾವಿಡೆಂಟ್ ಫಂಡ್' (CPF) ಸಾಮಾಜಿಕ ಭದ್ರತಾ ಯೋಜನೆಯು ಕೇವಲ ವ್ಯಕ್ತಿಯ ಸ್ವಂತ ಕೊಡುಗೆಯನ್ನಷ್ಟೇ ನೆಚ್ಚಿಕೊಂಡಿಲ್ಲ. ಸರ್ಕಾರಿ ಜಾಲತಾಣದ ಮಾಹಿತಿಯ ಪ್ರಕಾರ, ಉದ್ಯೋಗಿಯ ಶೇಕಡಾ 20ರಷ್ಟು ವೇತನದ ಕೊಡುಗೆಯ ಜೊತೆಗೆ ಮಾಲೀಕರು, ಕುಟುಂಬದವರು ಮತ್ತು ಸರ್ಕಾರವೂ ಇದಕ್ಕೆ ನೆರವು ನೀಡುತ್ತದೆ. ಇತರ ದೇಶಗಳ ಪಿಂಚಣಿ ಯೋಜನೆಗಳಿಗೆ ಹೋಲಿಸಿದರೆ, CPF ವಿವಿಧ ಬಡ್ಡಿದರಗಳನ್ನು ನೀಡುತ್ತದೆ. 55 ವರ್ಷ ಮೇಲ್ಪಟ್ಟವರಿಗೆ ಶೇಕಡಾ 6ರವರೆಗೆ ಹಾಗೂ 55 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಶೇಕಡಾ 5ರವರೆಗೆ ಬಡ್ಡಿ ದೊರೆಯುತ್ತದೆ.
ಪಿಂಚಣಿ ಹಣವನ್ನು ಎಷ್ಟು ಪಡೆಯಬೇಕು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನು ಚಂದಾದಾರರಿಗೇ ನೀಡಲಾಗುತ್ತದೆ. ಜೊತೆಗೆ ಹಣದುಬ್ಬರಕ್ಕೆ ಅನುಗುಣವಾಗಿ ಭವಿಷ್ಯದ ಪಿಂಚಣಿ ಲೆಕ್ಕಾಚಾರ ಮಾಡುವ ಸೌಲಭ್ಯವೂ ಇರಲಿದೆ. 'EPFO 3.0' ವ್ಯವಸ್ಥೆಯಲ್ಲಿ ಬಳಕೆದಾರರು ತಮ್ಮ ವಯಸ್ಸು, ಒಟ್ಟು ಹೂಡಿಕೆ, ಬಡ್ಡಿದರ ಮತ್ತು ನಿವೃತ್ತಿಯ ವಯಸ್ಸಿನಂತಹ ಅಂಶಗಳನ್ನು ನಮೂದಿಸಿ ತಮಗೆ ಬರಬಹುದಾದ ಪಿಂಚಣಿ ಮೊತ್ತವನ್ನು ಲೆಕ್ಕಹಾಕಬಹುದು. ಸ್ವಯಂಪ್ರೇರಿತ ವಂತಿಗೆಗಳು ಮತ್ತು ಪಾವತಿಯ ಅವಧಿಯನ್ನು ಆಯ್ಕೆ ಮಾಡಲು ಹೆಚ್ಚುವರಿ ಅವಕಾಶಗಳಿರುತ್ತವೆ.
ಹಣದುಬ್ಬರವನ್ನು ಪರಿಗಣಿಸಿ ಬರುವ ಭವಿಷ್ಯದ ಅಂದಾಜು ಮೊತ್ತ, ನಿವೃತ್ತಿಯ ವೇಳೆಗೆ ಸಿಗುವ ಒಟ್ಟು ಹಣ ಮತ್ತು ವಿವಿಧ ಆಯ್ಕೆಗಳ ಹೋಲಿಕೆಯ ಚಿತ್ರಣಗಳು ಡ್ಯಾಶ್‌ಬೋರ್ಡ್‌ನಲ್ಲಿ ಕಾಣಿಸುತ್ತವೆ. ಇದರಿಂದ ಚಂದಾದಾರರು ವಿಭಿನ್ನ ಕೊಡುಗೆ ಮತ್ತು ಉದ್ಯೋಗದ ಸಂದರ್ಭಗಳನ್ನು ಹೋಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು.
ಹಂತ-ಹಂತವಾಗಿ ಹಣ ಹಿಂಪಡೆಯುವ ಯೋಜನೆಯಲ್ಲಿ ಪಡೆಯುವ ಮೊತ್ತವನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಚಂದಾದಾರರಿಗೆ ಅವಕಾಶವಿದೆ. "ಉದಾಹರಣೆಗೆ, ಶೇಕಡಾ 8ರಷ್ಟು ಬಡ್ಡಿ ನಿಗದಿಯಾಗಿದೆ ಎಂದಿಟ್ಟುಕೊಳ್ಳೋಣ. 1 ಕೋಟಿ ರೂ. ನಿಧಿಗೆ ಶೇಕಡಾ 8ರಂತೆ ವರ್ಷಕ್ಕೆ 8 ಲಕ್ಷ ರೂ. ಬಡ್ಡಿ ಸಿಗುತ್ತದೆ. ಅದನ್ನು 12 ತಿಂಗಳಿಗೆ ಹಂಚಿದರೆ ಅದು ನಿಮ್ಮ ಮಾಸಿಕ ಪಿಂಚಣಿ ಆಗುತ್ತದೆ. ಆರಂಭದ ದಿನಗಳಲ್ಲೇ ಹೆಚ್ಚಿನ ಹಣ ಬೇಕಿದ್ದರೆ ನಿಮ್ಮ ಅಸಲು ಮೊತ್ತದಿಂದ ಹಣ ಪಡೆಯಬಹುದು. ಒಂದು ವೇಳೆ ಆರಂಭದಲ್ಲಿ ಕಡಿಮೆ ಹಣ ಪಡೆದರೆ, ಉಳಿದ ಬಡ್ಡಿ ಹಣವು ನಿಮ್ಮ ಅಸಲಿಗೆ ಸೇರಿಕೊಳ್ಳುತ್ತದೆ. ಹೀಗಾಗಿ, ವಯಸ್ಸಾದಂತೆ ಹೆಚ್ಚಿನ ಹಣ ಪಡೆಯಲು ಇದು ಹಣದುಬ್ಬರ-ಸಂಯೋಜಿತ ಯೋಜನೆಯಂತೆ ಸಹಾಯ ಮಾಡುತ್ತದೆ" ಎಂದು ಅಧಿಕಾರಿ ವಿವರಿಸಿದ್ದಾರೆ.
ವಾರ್ಷಿಕ ಪಾವತಿ ಮಾದರಿಯು ಈಗಾಗಲೇ 'ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ' (NPS)ಯಲ್ಲಿ ಜಾರಿಯಲ್ಲಿದೆ. ಆದರೆ, 2025ರ ಡಿಸೆಂಬರ್‌ನಲ್ಲಿ ಸರ್ಕಾರೇತರ NPS ಚಂದಾದಾರರಿಗೆ ಕಡ್ಡಾಯ ವಾರ್ಷಿಕ ಪಾವತಿ ನಿಯಮವನ್ನು ಶೇಕಡಾ 20ಕ್ಕೆ ಇಳಿಸಲಾಗಿದ್ದು, ಒಟ್ಟಾರೆ ಹಣ ಹಿಂಪಡೆಯುವಿಕೆಯನ್ನು ಸುಲಭಗೊಳಿಸಲಾಗಿದೆ (ಈ ಮೊದಲು ಇದು 60:40 ಅನುಪಾತದಲ್ಲಿತ್ತು). ಪ್ರಸ್ತಾವಿತ EPFO ಪಿಂಚಣಿ ಯೋಜನೆಯು NPSಗಿಂತಲೂ ಹೆಚ್ಚು ಸುಲಭ ಮತ್ತು ನಮ್ಯವಾಗಿರಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರಿಗೆ ಪಿಂಚಣಿ ಭದ್ರತೆ
EPFO ಮುಂದಿನ ಐದು ವರ್ಷಗಳಲ್ಲಿ ಸುಮಾರು 2.5 ಕೋಟಿ ಗಿಗ್ ಕಾರ್ಮಿಕರು ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು (BOCW) ತನ್ನ ಯೋಜನೆಗೆ ಸೇರಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಇದೇ ಮೊದಲ ಬಾರಿಗೆ ಇವರನ್ನು ಸಾಮಾಜಿಕ ಭದ್ರತೆಯ ಅಡಿಯಲ್ಲಿ ತರಲು ಈ ಪಿಂಚಣಿ ಯೋಜನೆಯನ್ನು ವಿನ್ಯಾಸಗೊಳಿಸಲಾಗುತ್ತಿದೆ. ಈ ಯೋಜನೆಯಲ್ಲಿ 'one-to-many mapping' ವ್ಯವಸ್ಥೆ ಇರಲಿದ್ದು, ಒಂದೇ UAN (ಯೂನಿವರ್ಸಲ್ ಅಕೌಂಟ್ ನಂಬರ್) ಸಂಖ್ಯೆಯು ಹಲವು ಮಾಲೀಕರು ಮತ್ತು ಆ್ಯಪ್ ಆಧಾರಿತ ಸಂಸ್ಥೆಗಳೊಂದಿಗೆ ನೋಂದಣಿಯಾಗಲಿದೆ. ಇದರಿಂದ ಪ್ರತಿಯೊಬ್ಬ ಮಾಲೀಕರ ವಿವರದೊಂದಿಗೆ, ವಿವಿಧ ಮೂಲಗಳಿಂದ ಬಂದ ಒಟ್ಟು ಪಿಎಫ್ ಮತ್ತು ಪಿಂಚಣಿ ಕೊಡುಗೆಗಳನ್ನು ಕಾರ್ಮಿಕರು ಕಾಣಬಹುದು.
ದಾನಿ ಸಂಸ್ಥೆಗಳು, ಎನ್‌ಜಿಒಗಳು, ವ್ಯಕ್ತಿಗಳು ಮತ್ತು CSR ನಿಧಿಗಳಿಂದ ಬರುವ ಮೂರನೇ ವ್ಯಕ್ತಿಯ ಕೊಡುಗೆಗಳನ್ನು ಸ್ವೀಕರಿಸಲು EPFO ಯೋಜಿಸಿದೆ. ನಿಗದಿತ ಗರಿಷ್ಠ ಮಿತಿಯೊಳಗೆ ಪ್ರತಿ UAN ಅಡಿಯಲ್ಲಿ ಬರುವ ಎಲ್ಲ ಕೊಡುಗೆಗಳನ್ನು ಇದು ಟ್ರ್ಯಾಕ್ ಮಾಡಲಿದೆ. ಹೊಸ ಪಿಂಚಣಿ ಯೋಜನೆಯು ನಮ್ಯವಾದ ಸಹ-ಕೊಡುಗೆ ಮಾದರಿಗಳ ಮೂಲಕ ಡೆಲಿವರಿ ಸಿಬ್ಬಂದಿ, ಚಾಲಕರು ಮತ್ತು ಇತರ ಪ್ಲಾಟ್‌ಫಾರ್ಮ್ ಕಾರ್ಮಿಕರನ್ನು ಒಳಗೊಳ್ಳಲಿದೆ.
ಈ ಯೋಜನೆಯು ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೂ (BOCW) ಪಿಂಚಣಿ ಸೌಲಭ್ಯ ವಿಸ್ತರಿಸುವ ಗುರಿ ಹೊಂದಿದೆ. ಭಾರತದಲ್ಲಿ 3.5 ಕೋಟಿಗೂ ಹೆಚ್ಚು ನೋಂದಾಯಿತ ನಿರ್ಮಾಣ ಕಾರ್ಮಿಕರಿದ್ದು, ರಾಜ್ಯ ಕಲ್ಯಾಣ ಮಂಡಳಿಗಳಲ್ಲಿ 70,000 ಕೋಟಿ ರೂ.ಗೂ ಹೆಚ್ಚು ಸೆಸ್ ಹಣ ಸಂಗ್ರಹವಾಗಿದೆ. "ಹೊಸ ಯೋಜನೆಯು ಈ ಸಂಪನ್ಮೂಲಗಳನ್ನು ಸುಸ್ಥಿರ ಪಿಂಚಣಿಗಳಾಗಿ ಪರಿವರ್ತಿಸಲು ಸೂಕ್ತ ಮಾರ್ಗ ಒದಗಿಸಲಿದ್ದು, ಕಾರ್ಮಿಕರಿಗೆ ಎಲ್ಲೇ ಹೋದರೂ ಪಿಂಚಣಿ ಸೌಲಭ್ಯ ತಲುಪುವಂತೆ ಮಾಡುತ್ತದೆ," ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಯೋಜನೆಯು ಪತಿ/ಪತ್ನಿ, ಮಕ್ಕಳು ಮತ್ತು ಅನಾಥರಿಗಾಗಿ ಕುಟುಂಬ ಹಾಗೂ ಜೀವಿತೋತ್ತರ ಪಿಂಚಣಿ ಸೌಲಭ್ಯವನ್ನು ಪ್ರಸ್ತಾಪಿಸುತ್ತದೆ. ಇದನ್ನು 'ಕುಟುಂಬ ಕಲ್ಯಾಣ ನಿಧಿ' (Family Benefit Fund) ಮೂಲಕ ನಿರ್ವಹಿಸಲಾಗುತ್ತದೆ. EPF, GPF ಹಾಗೂ ಇತರೆ ಪ್ರಾವಿಡೆಂಟ್ ಫಂಡ್ ಸದಸ್ಯರು ತಮ್ಮ ಖಾತೆಯಲ್ಲಿರುವ ಹಣವನ್ನು ಈ ಹೊಸ ಪಿಂಚಣಿ ಯೋಜನೆಗೆ ವರ್ಗಾಯಿಸಿಕೊಳ್ಳಲು ಅವಕಾಶ ನೀಡುವ ಸಾಧ್ಯತೆಯಿದೆ.
EPFO 3.0 ವೈಶಿಷ್ಟ್ಯಗಳು
EPFO 3.0 ಹಂತವು ಅಸಂಘಟಿತ ವಲಯದ ಕಾರ್ಮಿಕರು ಮತ್ತು ಗಿಗ್ ಕಾರ್ಮಿಕರಿಗೂ ಪಿಎಫ್ ಕೊಡುಗೆ ಲಭ್ಯವಾಗುವಂತೆ ಮಾಡಲಿದೆ. ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರನ್ನು ಇದೇ ಮೊದಲ ಬಾರಿಗೆ ಸಾಮಾಜಿಕ ಭದ್ರತೆಯ ವ್ಯಾಪ್ತಿಗೆ ತರುವ 'ಸಾಮಾಜಿಕ ಭದ್ರತಾ ಸಂಹಿತೆ'ಗೆ ಅನುಗುಣವಾಗಿ ಇದನ್ನು ರೂಪಿಸಲಾಗುತ್ತಿದೆ. ಈ ಸಂಹಿತೆಯ ಪ್ರಕಾರ, ಆ್ಯಪ್ ಆಧಾರಿತ ಸಂಸ್ಥೆಗಳು ತಮ್ಮ ವಾರ್ಷಿಕ ವಹಿವಾಟಿನ ಶೇಕಡಾ 1ರಿಂದ 2ರಷ್ಟು ಹಣವನ್ನು ಸಾಮಾಜಿಕ ಭದ್ರತೆಗೆ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಒಟ್ಟು ಕೊಡುಗೆಯು ಸಂಸ್ಥೆಯು ಕಾರ್ಮಿಕರಿಗೆ ಪಾವತಿಸಬೇಕಾದ ಮೊತ್ತದ ಶೇಕಡಾ 5 ಅನ್ನು ಮೀರಬಾರದು.
EPFO ತನ್ನ ತಂತ್ರಜ್ಞಾನ ವ್ಯವಸ್ಥೆಯಲ್ಲಿ 'ಕೋರ್ ಬ್ಯಾಂಕಿಂಗ್ ಸೊಲ್ಯೂಷನ್' (CBS) ಸಾಫ್ಟ್‌ವೇರ್ ಅಳವಡಿಸಿಕೊಳ್ಳಲಿದೆ. ಮುಂದಿನ ಹಂತದಲ್ಲಿ ದೇಶದ 60 ಕೋಟಿಗೂ ಹೆಚ್ಚು ಕಾರ್ಮಿಕರು ಇದರ ಅಡಿಯಲ್ಲಿ ಬರಲಿದ್ದು, ಬೃಹತ್ ಪ್ರಮಾಣದ ವಹಿವಾಟುಗಳನ್ನು ನಿರ್ವಹಿಸಲು EPFO ಸಜ್ಜಾಗುತ್ತಿದೆ.
"ಇಷ್ಟೊಂದು ದೊಡ್ಡ ಪ್ರಮಾಣದ ವಹಿವಾಟಿಗೆ ಸಿದ್ಧರಾಗಲು, ರಿಸರ್ವ್ ಬ್ಯಾಂಕ್‌ನಿಂದ ಅನುಮೋದಿಸಲ್ಪಟ್ಟ ಮತ್ತು ನಿಯಂತ್ರಿಸಲ್ಪಡುವ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯು ನಮಗೆ ಅತ್ಯಂತ ಭದ್ರವಾದ ತಳಹದಿಯಾಗಲಿದೆ. ಹೀಗಾಗಿ ಇದನ್ನೇ ಅಡಿಪಾಯವಾಗಿ ಬಳಸಿಕೊಳ್ಳಲಾಗುತ್ತಿದೆ" ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ 'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಉಲ್ಲೇಖಿಸಿದೆ.
ಪ್ರಸ್ತುತ ಇರುವ ಪಿಎಫ್ ಮತ್ತು ಪಿಂಚಣಿ ಯೋಜನೆಗಳ ಮೂಲ ರಚನೆ ಹಾಗೆಯೇ ಇರಲಿದೆ. ಆದರೆ, ಆ್ಯಪ್ ಆಧಾರಿತ ಸಂಸ್ಥೆಗಳಿಗೆ ಪ್ರಸ್ತುತ ಇರುವ 'ಸ್ಪ್ಲಿಟ್-ಪೇಮೆಂಟ್' (ವಿಭಜಿತ ಪಾವತಿ) ಮಾದರಿಯ ಆಧಾರದ ಮೇಲೆಯೇ ಕೊಡುಗೆಗಳ ಸಲ್ಲಿಕೆ ವಿಧಾನದಲ್ಲಿ ಬದಲಾವಣೆ ಮಾಡಲು ಈ ತಂತ್ರಜ್ಞಾನ ಅವಕಾಶ ನೀಡಲಿದೆ.
"ನಾವು ಇದರ ಮೇಲೆ ಭವಿಷ್ಯಕ್ಕೆ ಅಗತ್ಯವಿರುವ ಎಲ್ಲ ಪರಿಕಲ್ಪನೆಗಳನ್ನು ರೂಪಿಸಲು ಪ್ರಯತ್ನಿಸಿದ್ದೇವೆ. ಉದಾಹರಣೆಗೆ, ಅಸಂಘಟಿತ ವಲಯದ ಕಾರ್ಮಿಕರಿಗೆ ಯಾವುದೇ ನಿಗದಿತ ಕೊಡುಗೆ ಇರುವುದಿಲ್ಲ. ಅವರೇ ಸ್ವತಃ ಹಣ ಪಾವತಿಸಬಹುದು ಅಥವಾ ಮೂರನೇ ವ್ಯಕ್ತಿ ಅವರಿಗಾಗಿ ಹಣ ನೀಡಬಹುದು. ಅಥವಾ ಅದು ದೇಣಿಗೆ, ಬಕ್ಷೀಸು ಹಾಗೂ ಪಾವತಿಗೆ ಸಂಬಂಧಿಸಿದ ಹಣದ ವರ್ಗಾವಣೆಯ ಭಾಗವೂ ಆಗಿರಬಹುದು. ಉದಾಹರಣೆಗೆ, ಫುಡ್ ಡೆಲಿವರಿ ಆ್ಯಪ್ ಮೂಲಕ ಆಹಾರ ಆರ್ಡರ್ ಮಾಡುವಾಗ ಡೆಲಿವರಿ ಬಾಯ್ ಅಥವಾ ಹೋಟೆಲ್‌ಗೆ ದೇಣಿಗೆ ನೀಡುವ ಆಯ್ಕೆ ಇರುತ್ತದೆ. ಅಲ್ಲಿ ಒಂದೇ ಪಾವತಿಯು ಹಲವು ಭಾಗಗಳಾಗಿ ವಿಂಗಡಣೆಯಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ, ಅದರಲ್ಲಿ ಶೇಕಡಾ 5ರಷ್ಟು ಹಣವನ್ನು ಸಾಮಾಜಿಕ ಭದ್ರತೆಗೆ ವರ್ಗಾಯಿಸಲು ಅವಕಾಶವಿದ್ದರೆ, ಅದಕ್ಕೂ ನಾವಿಲ್ಲಿ ಸೂಕ್ತ ವ್ಯವಸ್ಥೆ ಮಾಡಿದ್ದೇವೆ" ಎಂದು ಅಧಿಕಾರಿ ವಿವರಿಸಿದ್ದಾರೆ.
ಸೌಜನ್ಯ: indianexpress.com