ಸಂಸತ್ತಿಗೆ CJP ಮೆರವಣಿಗೆ | ಹೊಸದಿಲ್ಲಿಯಲ್ಲಿ ಕರ್ಫ್ಯೂ ಜಾರಿಗೆ ತರಲು ಬಳಸಿದ ಕಾನೂನು ಯಾವುದು? ಅದನ್ನು ಹೇಗೆ ಬಳಸಲಾಗುತ್ತದೆ?
Photo: x.com/nabilajamal
ನೀಟ್-ಯುಜಿ (NEET-UG) ಪರೀಕ್ಷೆಯಲ್ಲಿನ ಅಕ್ರಮಗಳು ಹಾಗೂ ಹಲವು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಸೋಮವಾರ (ಜುಲೈ 21) ಸುಮಾರು 12,000 ಪ್ರತಿಭಟನಾಕಾರರು ಜಂತರ್ ಮಂತರ್‌ನಿಂದ ಸಂಸತ್ತಿಗೆ ಮೆರವಣಿಗೆ ನಡೆಸಲು ಯತ್ನಿಸಿದರು. ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳಿಂದಾಗಿ ಈಗಾಗಲೇ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರತಿಭಟನಾ ಮೆರವಣಿಗೆಯ ಹಿನ್ನೆಲೆಯಲ್ಲಿ, ದಿಲ್ಲಿ ಪೊಲೀಸರು ಹೊಸದಿಲ್ಲಿಯಾದ್ಯಂತ 'ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ' (BNSS)ಯ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದರು. ಈ ಮೆರವಣಿಗೆಗೆ ಯಾವುದೇ ಅನುಮತಿ ಕೇಳಿರಲಿಲ್ಲ ಮತ್ತು ನೀಡಲೂ ಇಲ್ಲ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಉಪ ಪೊಲೀಸ್ ಆಯುಕ್ತ (DCP) ಸಚಿನ್ ಶರ್ಮಾ ಎಚ್ಚರಿಸಿದ್ದರು.
ಪ್ರತಿಭಟನಾಕಾರರು ಸಂಸತ್ತಿನತ್ತ ಸಾಗಲು ಯತ್ನಿಸಿದಾಗ, ಪಾರ್ಲಿಮೆಂಟ್ ಸ್ಟ್ರೀಟ್‌ಗೆ ತಲುಪುವ ಮುನ್ನವೇ ಪೊಲೀಸರು ಹಲವು ಕಡೆ ಬ್ಯಾರಿಕೇಡ್‌ಗಳನ್ನು ಹಾಕಿ ಅವರನ್ನು ತಡೆದರು. "ಯಾವುದೇ ಅಹಿತಕರ ಘಟನೆ ನಡೆದಿಲ್ಲ ಮತ್ತು ಪ್ರತಿಭಟನೆಯನ್ನು ವೃತ್ತಿಪರವಾಗಿ ನಿರ್ವಹಿಸಲಾಗುತ್ತಿದೆ" ಎಂದು ದಿಲ್ಲಿ ಪೊಲೀಸರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದರು. ಆದರೆ, ಪ್ರತಿಭಟನಾ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳ ಪ್ರಕಾರ, ಜನಸಂದಣಿಯನ್ನು ಹಿಂದೆ ತಳ್ಳಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ (CJP) ವಕ್ತಾರರ ಪ್ರಕಾರ, ಸರ್ಕಾರದ ಪ್ರತಿನಿಧಿಗಳು ನಂತರ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಇನ್ನೊಂದೆಡೆ, 21 ದಿನಗಳ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪೂರ್ಣಗೊಳಿಸಿದ ನಂತರ ಶನಿವಾರ ದಿಲ್ಲಿ ಪೊಲೀಸರು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರು ಇಂದಿಗೂ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ.
ಸೋಮವಾರ ನಡೆದ ಘಟನೆಗಳು BNSSನ ಸೆಕ್ಷನ್ 163 ಅನ್ನು ಮತ್ತೆ ಮುನ್ನೆಲೆಗೆ ತಂದಿವೆ. ಈ ಕಾಯಿದೆಯು ಮುಖ್ಯವಾಗಿ ಪ್ರತಿಭಟನೆಗಳು ಮತ್ತು ಸಾರ್ವಜನಿಕ ಸಭೆಗಳ ಮೇಲಿನ ನಿರ್ಬಂಧಗಳೊಂದಿಗೆ ಗುರುತಿಸಿಕೊಂಡಿದೆ. ಆದರೆ ದಿಲ್ಲಿಯಲ್ಲಿ ಇದರ ಬಳಕೆಯ ಕುರಿತು ನಡೆದ ಅಧ್ಯಯನವೊಂದು, ಪ್ರತಿಭಟನೆಗೆ ಸಂಬಂಧಿಸಿದ ಆದೇಶಗಳು ಈ ಸೆಕ್ಷನ್‌ನ ಒಟ್ಟು ಬಳಕೆಯ ಅತ್ಯಲ್ಪ ಭಾಗವನ್ನು ಮಾತ್ರ ಹೊಂದಿವೆ ಎಂಬುದನ್ನು ತೋರಿಸುತ್ತದೆ.
ತುರ್ತು ಅಧಿಕಾರ
ಹಿಂಸಾಚಾರ ಅಥವಾ ಅಶಾಂತಿಯ ಅಪಾಯವಿದ್ದು, "ತಕ್ಷಣದ ತಡೆಗಟ್ಟುವಿಕೆ ಅಥವಾ ಶೀಘ್ರ ಪರಿಹಾರ ಅಗತ್ಯ" ಎಂದು ಭಾವಿಸಿದಾಗ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್‌ಗೆ ಕ್ರಮ ಕೈಗೊಳ್ಳಲು ಅಧಿಕಾರ ನೀಡುತ್ತಿದ್ದ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 144ರ ಬದಲಿಗೆ ಈಗ ಸೆಕ್ಷನ್ 163 ಜಾರಿಗೆ ಬಂದಿದೆ.
ಕಾನೂನುಬದ್ಧವಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಗೆ ತೊಂದರೆ, ಕಿರಿಕಿರಿ ಅಥವಾ ಗಾಯವಾಗುವುದನ್ನು ತಡೆಯಲು, ಮಾನವ ಜೀವ, ಆರೋಗ್ಯ ಅಥವಾ ಸುರಕ್ಷತೆಗೆ ಇರುವ ಅಪಾಯವನ್ನು ತಪ್ಪಿಸಲು, ಸಾರ್ವಜನಿಕ ಶಾಂತಿಗೆ ಭಂಗ ಅಥವಾ ದಂಗೆಯನ್ನು ತಡೆಗಟ್ಟಲು ಮ್ಯಾಜಿಸ್ಟ್ರೇಟ್ ಬಲಿಷ್ಠ ಲಿಖಿತ ಆದೇಶ ಹೊರಡಿಸಬಹುದು. ಈ ಆದೇಶವು "ಯಾವುದೇ ವ್ಯಕ್ತಿಯು ನಿರ್ದಿಷ್ಟ ಕೃತ್ಯದಿಂದ ದೂರವಿರಲು ಅಥವಾ ನಿರ್ದಿಷ್ಟ ಸ್ವತ್ತಿಗೆ ಸಂಬಂಧಿಸಿದಂತೆ ಕೆಲವು ಕ್ರಮಗಳನ್ನು ಕೈಗೊಳ್ಳಲು" ನಿರ್ದೇಶಿಸುತ್ತದೆ.
ಮ್ಯಾಜಿಸ್ಟ್ರೇಟ್ ತಕ್ಷಣದ ಮತ್ತು ನಿರ್ದಿಷ್ಟ ಘಟನೆಗೆ ಸ್ಪಂದಿಸುತ್ತಿದ್ದಾರೆ. ಅವರ ಆದೇಶವು ಆ ನಿರ್ದಿಷ್ಟ ಬೆದರಿಕೆಗೆ ಮಾತ್ರ ಸೀಮಿತವಾಗಿದೆ. ಆ ಅಪಾಯ ಮುಗಿದ ತಕ್ಷಣ ಅಥವಾ ಗರಿಷ್ಠ ಎರಡು ತಿಂಗಳಲ್ಲಿ ಈ ಆದೇಶ ರದ್ದಾಗುತ್ತದೆ ಎಂಬುದು ಈ ಕಾಯಿದೆಯ ಮುಖ್ಯ ಆಶಯವಾಗಿದೆ. ಪ್ರತಿಭಟನೆಗಳು ಮತ್ತು ಸಾರ್ವಜನಿಕ ಸಭೆಗಳನ್ನು ತಡೆಯಲು ಇದನ್ನು ಬಳಸಲಾಗುತ್ತಿರುವುದರಿಂದ ಜನರಿಗೆ ಈ ಕಾಯಿದೆ ಹೆಚ್ಚು ಪರಿಚಿತವಾಗಿದೆ. ಆದರೆ ದಿಲ್ಲಿಯಲ್ಲಿ ಇದು ಕಾರ್ಯನಿರ್ವಹಿಸುವ ರೀತಿಯ ಕುರಿತಾದ ದತ್ತಾಂಶಗಳು ಬೇರೆಯದೇ ಕಥೆಯನ್ನು ಹೇಳುತ್ತವೆ.
ಡೇಟಾ ಏನು ಹೇಳುತ್ತದೆ?
ಮಾರ್ಚ್ 2023ರಲ್ಲಿ ವಕೀಲರಾದ ಬೃಂದಾ ಭಂಡಾರಿ, ಅಭಿನವ್ ಸೇಕ್ರಿ, ನತಾಶಾ ಮಹೇಶ್ವರಿ ಮತ್ತು ಮಾಧವ್ ಅಗರ್ವಾಲ್ ಅವರು RTI ಅರ್ಜಿಗಳನ್ನು ಸಲ್ಲಿಸಿ, ದಿಲ್ಲಿಯ 18 ಜಿಲ್ಲೆಗಳು ಹಾಗೂ ಪೊಲೀಸ್ ಘಟಕಗಳ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಪರಿಶೀಲನೆ ನಡೆಸಿದರು. "ಸಿಆರ್‌ಪಿಸಿಯ ಸೆಕ್ಷನ್ 144ರ ಬಳಕೆ ಮತ್ತು ದುರುಪಯೋಗ" ಶೀರ್ಷಿಕೆಯ ಈ ವರದಿಯು, ಜನವರಿ 2021ರಿಂದ 2022ರ ನಡುವೆ ಸಿಆರ್‌ಪಿಸಿಯ ಸೆಕ್ಷನ್ 144ರ ಅಡಿಯಲ್ಲಿ ಹೊರಡಿಸಲಾದ 6,100 ಆದೇಶಗಳ ಪೈಕಿ ಸುಮಾರು 5,400 ಆದೇಶಗಳನ್ನು ಅಧ್ಯಯನ ಮಾಡಿದೆ.
ಈ ಪೈಕಿ ಕೇವಲ 81 ಆದೇಶಗಳು (ಶೇಕಡಾ 1.5) ಮಾತ್ರ ಕಾನೂನುಬಾಹಿರ ಸಮಾವೇಶಗಳನ್ನು ನಿಷೇಧಿಸಿದ್ದವು ಎಂಬುದನ್ನು ಅವರು ಕಂಡುಕೊಂಡರು. ದಿಲ್ಲಿಯ 18 ಪೊಲೀಸ್ ಜಿಲ್ಲೆಗಳು ಮತ್ತು ಘಟಕಗಳಲ್ಲಿ ಐದು ಜಿಲ್ಲೆಗಳು ಅಧ್ಯಯನದ ಅವಧಿಯಲ್ಲಿ ಜನಸಂದಣಿ ನಿಷೇಧಿಸುವ ಒಂದೇ ಒಂದು ಆದೇಶವನ್ನೂ ಹೊರಡಿಸಿರಲಿಲ್ಲ.
ಆದರೆ, ಯಾವುದೇ ತಕ್ಷಣದ ತುರ್ತು ಪರಿಸ್ಥಿತಿ ಇಲ್ಲದ ವಿಷಯಗಳಿಗೆ ಈ ಕಾಯಿದೆಯನ್ನು ವ್ಯಾಪಕವಾಗಿ ಬಳಸಲಾಗಿತ್ತು. ಹೊರಡಿಸಲಾದ ಆದೇಶಗಳಲ್ಲಿ ಶೇಕಡಾ 25.6ರಷ್ಟು ಆದೇಶಗಳು ಹೋಟೆಲ್‌ಗಳು, ಬ್ಯಾಂಕ್‌ಗಳು, ಎಟಿಎಂಗಳು, ಮದ್ಯದ ಅಂಗಡಿಗಳು ಮತ್ತು ಸಿನೆಮಾ ಹಾಲ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ದೇಶಿಸಿದ್ದವು. ಶೇಕಡಾ 43ರಷ್ಟು ಆದೇಶಗಳು ಕೊರಿಯರ್ ಸೇವೆಗಳಿಂದ ಹಿಡಿದು ಸೈಬರ್ ಕೆಫೆಗಳು ಮತ್ತು ಹಳೆಯ ವಸ್ತುಗಳ ವ್ಯಾಪಾರಿಗಳವರೆಗೆ ತಮ್ಮ ಗ್ರಾಹಕರು ಅಥವಾ ಉದ್ಯೋಗಿಗಳ ವಿವರಗಳನ್ನು ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಿದ್ದವು. ಇನ್ನುಳಿದ ಸಣ್ಣ ಪ್ರಮಾಣದ ಆದೇಶಗಳು ಮಾಂಜಾ, ಶಾಲೆಗಳ ಬಳಿ ಪಾನ್ ಅಂಗಡಿಗಳು, ಡ್ರೋನ್‌ಗಳು ಮತ್ತು ಹಾಟ್ ಏರ್ ಬಲೂನ್‌ಗಳನ್ನು ನಿಷೇಧಿಸಿದ್ದವು.
"ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಬಳಸುವ ವಿನಾಯಿತಿ ಕ್ರಮವಾಗುವ ಬದಲು, ಸಿಆರ್‌ಪಿಸಿಯ ಸೆಕ್ಷನ್ 144ರ ಅಡಿಯ ಆದೇಶಗಳು ಸಾಮಾನ್ಯ ಕಾನೂನು ಚೌಕಟ್ಟಿನ ಭಾಗವಾಗಿಬಿಟ್ಟಿವೆ. ಎರಡು ತಿಂಗಳ ಅವಧಿ ಮುಗಿದ ತಕ್ಷಣ ಇವುಗಳನ್ನು ನಿಯಮಿತವಾಗಿ ಮತ್ತೆ ಹೊರಡಿಸಲಾಗುತ್ತಿದೆ" ಎಂದು ವರದಿ ಹೇಳುತ್ತದೆ.
ಇದಲ್ಲದೆ, ಈ ಕಾಯಿದೆಯು ಇಂದಿನ ಜಿಲ್ಲಾಡಳಿತದ ಅಂದರೆ ಪೊಲೀಸರ ಕೈಯಲ್ಲಿ ಊಹಿಸಿಕೊಳ್ಳಲೂ ಸಾಧ್ಯವಾಗದ ಮಟ್ಟಿಗೆ ಸೂಕ್ಷ್ಮ ಹಂತದ ಆಡಳಿತ ನಡೆಸುವ ಒಂದು ಅಸ್ತ್ರವಾಗಿ ಬದಲಾಗಿದೆ ಎಂದು ವರದಿ ಹೇಳುತ್ತದೆ.
ಮರುಪರಿಶೀಲನೆಯಿಲ್ಲದೆ ಸತತ ನವೀಕರಣ
ಈ ಆದೇಶಗಳು ಎಷ್ಟು ಕಾಲ ಜಾರಿಯಲ್ಲಿದ್ದವು ಎಂಬುದನ್ನೂ ಅಧ್ಯಯನವು ಪರಿಶೀಲಿಸಿದೆ. ಕಾನೂನಿನ ಪ್ರಕಾರ ನಿಗದಿತ ಎರಡು ತಿಂಗಳ ಅವಧಿ ಮುಗಿದ ತಕ್ಷಣವೇ ಅಧ್ಯಯನಕ್ಕೆ ಒಳಪಟ್ಟ ಬಹುತೇಕ ಪ್ರತಿಯೊಂದು ಆದೇಶವನ್ನು ಮರುಹೊರಡಿಸಲಾಗಿತ್ತು ಎಂಬುದನ್ನು ವರದಿ ಕಂಡುಕೊಂಡಿದೆ. ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಆರಂಭಿಕ ಆದೇಶಕ್ಕೆ ಕಾರಣವಾಗಿದ್ದ ಪರಿಸ್ಥಿತಿಗಳು ಇಲ್ಲದಿದ್ದಾಗಲೂ, ಇಡೀ ನಗರದಾದ್ಯಂತ ಒಂದೇ ಮಾದರಿಯ ಆದೇಶಗಳನ್ನು ಯಾಂತ್ರಿಕವಾಗಿ ಮರುಸೃಷ್ಟಿಸಿ ಹೊರಡಿಸಲಾಗಿತ್ತು.
ಉದಾಹರಣೆಗೆ, ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಹಲವು ಸಂಸ್ಥೆಗಳು ಮುಚ್ಚಲ್ಪಟ್ಟಿದ್ದಾಗಲೂ ಹೆಣ್ಮಕ್ಕಳ ಶಾಲೆಗಳು, ಪಿಜಿಗಳು, ಮದ್ಯದ ಅಂಗಡಿಗಳು ಮತ್ತು ಎಟಿಎಂಗಳಿಗೆ ಸಂಬಂಧಿಸಿದ ಸಿಸಿಟಿವಿ ಆದೇಶಗಳನ್ನು ನಿಗದಿತ ವೇಳಾಪಟ್ಟಿಯಂತೆಯೇ ನವೀಕರಿಸಲಾಗಿತ್ತು.
ಮನೆಮಾಲೀಕರು ತಮ್ಮ ಬಾಡಿಗೆದಾರರ ವಿವರಗಳನ್ನು ಪೊಲೀಸರಿಗೆ ನೀಡಬೇಕೆಂಬ ಆದೇಶವನ್ನು ಸತತವಾಗಿ ಮರುಹೊರಡಿಸಲಾಗಿತ್ತು. ಸೆಕ್ಷನ್ 144 ಅನ್ನು "ಪದೇಪದೇ ವಿಸ್ತರಿಸಲಾಗುವುದಿಲ್ಲ" ಮತ್ತು ಎರಡು ತಿಂಗಳ ಒಳಗೆ ಅದು ರದ್ದಾಗಬೇಕು ಎಂಬ ಭನ್ವರ್ ಸಿಂಗ್ ಪ್ರಕರಣದ ದೆಹಲಿ ಹೈಕೋರ್ಟ್ ತೀರ್ಪಿನ ಹೊರತಾಗಿಯೂ ಹೀಗೆ ಮಾಡಲಾಗಿತ್ತು.
ಲಾಕ್‌ಡೌನ್ ಇರಲಿ ಇಲ್ಲದಿರಲಿ, ಸೈಬರ್ ಕೆಫೆ ನಿರ್ವಾಹಕರು ಭೇಟಿ ನೀಡುವವರ ದಾಖಲೆಗಳನ್ನು ನಿರ್ವಹಿಸುವುದು ಮತ್ತು ಗ್ರಾಹಕರ ಫೋಟೋ ತೆಗೆಯುವುದನ್ನು ಕಡ್ಡಾಯಗೊಳಿಸಲಾಗಿತ್ತು. ಲೋಹದ ಮಾಂಜಾದಿಂದ ಗಾಳಿಪಟ ಹಾರಿಸುವುದು ಅಥವಾ ಸಾರ್ವಜನಿಕ ಉದ್ಯಾನವನಗಳಿಗೆ ಟಿಫಿನ್ ಬಾಕ್ಸ್‌ಗಳನ್ನು ಒಯ್ಯುವುದರ ಮೇಲಿನ ನಿಷೇಧವನ್ನು ಪ್ರತಿ ಎರಡು ತಿಂಗಳಿಗೊಮ್ಮೆ ಅದೇ ರೀತಿ ನವೀಕರಿಸಲಾಗುತ್ತಿತ್ತು.
ಮೂಲ ಕಾನೂನು ವ್ಯವಸ್ಥೆಯನ್ನು ಹಾಗೆಯೇ ಉಳಿಸಿಕೊಳ್ಳಲು ನಗರದಾದ್ಯಂತ ಒಂದೇ ರೀತಿಯ ಆದೇಶಗಳನ್ನು ಯಾಂತ್ರಿಕವಾಗಿ ಹೊರಡಿಸುವ ಪ್ರಕ್ರಿಯೆ ಇದಾಗಿದ್ದು, ತುರ್ತು ಅಧಿಕಾರವೊಂದು ತಾನಾಗಿಯೇ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತಿರುವಂತೆ ಕಾಣುತ್ತಿದೆ ಎಂದು ಅಧ್ಯಯನ ಹೇಳಿದೆ.
ನ್ಯಾಯಾಲಯಗಳು ಏನು ಹೇಳಿವೆ?
ಸೆಕ್ಷನ್ 144 ಎಂಬುದು ದೈನಂದಿನ ಆಡಳಿತಕ್ಕಾಗಿ ಬಳಸುವ ಸಾಧನವಲ್ಲ, ಬದಲಿಗೆ ಇದೊಂದು ವಿಶೇಷ ಮುಂಜಾಗ್ರತಾ ಅಧಿಕಾರ ಎಂದು ಸುಪ್ರೀಂ ಕೋರ್ಟ್ ಪದೇಪದೇ ಹೇಳಿದೆ.
1961ರ 'ಬಾಬುಲಾಲ್ ಪರಾಟೆ vs ಮಹಾರಾಷ್ಟ್ರ ಸರ್ಕಾರ' ಪ್ರಕರಣದಲ್ಲಿ, ಈ ಕಾಯಿದೆಯ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದ ನ್ಯಾಯಾಲಯ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ನಿರ್ದಿಷ್ಟ ಬೆದರಿಕೆಗಳನ್ನು ತಡೆಯಲು ತುರ್ತು ಸಂದರ್ಭಗಳಲ್ಲಿ ಮಾತ್ರ ಇದನ್ನು ಬಳಸಬೇಕು ಎಂದು ಒತ್ತಿಹೇಳಿತ್ತು. ಈ ಅಧಿಕಾರವು ಕಾಯಿದೆಯಲ್ಲಿ ವಿವರಿಸಲಾದ ಸಂದರ್ಭಗಳಿಗೆ ಮಾತ್ರ ಸೀಮಿತವಾಗಿದ್ದು, ಇದು "ಅನಿಯಮಿತ ಅಥವಾ ಯಾವುದೇ ನಿರ್ಬಂಧಗಳಿಲ್ಲದ ಅಧಿಕಾರವಲ್ಲ" ಎಂದು ಕೋರ್ಟ್ ಹೇಳಿತ್ತು.
2018ರ 'ಮಜ್ದೂರ್ ಕಿಸಾನ್ ಶಕ್ತಿ ಸಂಘಟನ್ vs ಭಾರತ ಸರ್ಕಾರ' ಪ್ರಕರಣದಲ್ಲಿ, ಜಂತರ್ ಮಂತರ್ ರಸ್ತೆಯಲ್ಲಿ ಎಲ್ಲ ರೀತಿಯ ಪ್ರತಿಭಟನೆಗಳನ್ನು ನಿಷೇಧಿಸಿದ್ದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (NGT) ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಕಡ್ಡಾಯವಾಗಿ ಸಂಪೂರ್ಣ ನಿಷೇಧ ಹೇರುವುದು ಅಗತ್ಯಕ್ಕಿಂತ ಮೀರಿದ ಕ್ರಮವಾಗಿದೆ ಎಂದು ಅದು ಅಭಿಪ್ರಾಯಪಟ್ಟಿತ್ತು. "ಪ್ರತಿಭಟನೆಗಳನ್ನು ಸಂಪೂರ್ಣವಾಗಿ ನಿಷೇಧಿಸುವುದು ಪರಿಹಾರವಲ್ಲ" ಎಂದು ಗಮನಿಸಿದ ಕೋರ್ಟ್, ಅದಕ್ಕೆ ಬದಲಾಗಿ ನಿಯಮಗಳ ಅಡಿಯಲ್ಲಿ ಅನುಮತಿ ನೀಡುವ ವ್ಯವಸ್ಥೆಯನ್ನು ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿತ್ತು.
ಸಂಸತ್ತಿನ ಬಳಿ ಜನ ಸೇರುವುದನ್ನು ನಿರ್ಬಂಧಿಸುವ ಸೆಕ್ಷನ್ 144 ಆದೇಶಗಳನ್ನು ಪ್ರಶ್ನಿಸಿದ ಮತ್ತೊಂದು ಪ್ರಕರಣದಲ್ಲಿ, ಆ ಆದೇಶಗಳು ಮೇಲ್ನೋಟಕ್ಕೆ ಸರಿಯಾಗಿಯೇ ಇವೆ ಎಂದು ಕೋರ್ಟ್ ಹೇಳಿತ್ತು. ಜೊತೆಗೆ, 'ಅನುಮತಿ ಪಡೆಯಬೇಕು' ಎಂಬ ನಿಯಮವನ್ನೇ ಮುಂದಿಟ್ಟುಕೊಂಡು ವಾಸ್ತವದಲ್ಲಿ ಯಾರಿಗೂ ಅನುಮತಿಯನ್ನೇ ನೀಡದೆ ಪೊಲೀಸರು ಸಂಪೂರ್ಣ ನಿಷೇಧ ಹೇರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್, ಸೂಕ್ತ ಮಾರ್ಗಸೂಚಿಗಳ ಮೂಲಕ ಇದನ್ನು ಸರಿಪಡಿಸುವಂತೆ ನಿರ್ದೇಶನ ನೀಡಿತ್ತು.
ಸೌಜನ್ಯ: indianexpress.com