CUET- UG ಪರೀಕ್ಷೆ ಆಯೋಜನೆಯಲ್ಲೂ ವೈಫಲ್ಯ : ಹಲವು ಕೇಂದ್ರಗಳಲ್ಲಿ ವಿಳಂಬವಾಗಿ ಆರಂಭ
ಭವಿಷ್ಯ ಕಳೆದುಕೊಂಡ ಮಕ್ಕಳಿಗೆ ಉತ್ತರ ಹೇಳುವವರು ಯಾರು?: ಕೇಂದ್ರದ ವಿರುದ್ಧ ವಿಪಕ್ಷಗಳು ವಾಗ್ದಾಳಿ
ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ, ಮೇ 30: ನೀಟ್ ಮತ್ತು ಸಿಬಿಎಸ್‌ಇ ಪರೀಕ್ಷೆಗಳ ವೈಫಲ್ಯದ ಬಳಿಕ, ಕೇಂದ್ರ ಸರಕಾರ ಶನಿವಾರ ಇನ್ನೊಂದು ಪ್ರವೇಶ ಪರೀಕ್ಷೆ ಅಯೋಜನೆಯಲ್ಲೂ ಎಡವಿದೆ. ದೇಶಾದ್ಯಂತ ಹಲವಾರು ಕೇಂದ್ರಗಳಲ್ಲಿ ಶನಿವಾರ ನಡೆಯಬೇಕಾಗಿದ್ದ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ- ಪದವಿ (ಸಿಯುಇಟಿ-ಯುಜಿ) 2026ರ ಪರೀಕ್ಷೆ ವಿಳಂಬವಾಗಿ ನಡೆದಿದೆ.
ವಿಳಂಬಕ್ಕೆ ‘ತಾಂತ್ರಿಕ ದೋಷ’ ಕಾರಣ ಎಂಬುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಬಳಿಕ ಹೇಳಿಕೆ ನೀಡಿದೆ.
ಸಿಯುಇಟಿ ಪರೀಕ್ಷಾ ಅವ್ಯವಸ್ಥೆಯು ವಾರಗಳ ಅಂತರದಲ್ಲಿ ಕಾಣಿಸಿಕೊಂಡ ಎನ್‌ಟಿಎಯ ಎರಡನೇ ವೈಫಲ್ಯವಾಗಿದೆ. ಇದಕ್ಕೂ ಮೊದಲು, ಅದು ನಡೆಸಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿಯ ಪಶ್ನೆಪತ್ರಿಕೆ ಸೋರಿಕೆಯಾಗಿತ್ತು. ಹಾಗಾಗಿ, ಮೇ 3ರಂದು ನಡೆದ ಪರೀಕ್ಷೆಯನ್ನು ಬಳಿಕ ರದ್ದುಗೊಳಿಸಲಾಗಿತ್ತು.
ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಸಿಬಿಐ ತನಿಖೆಗೆ ಶಿಕ್ಷಣ ಸಚಿವಾಲಯವು ಆದೇಶ ನೀಡಿದೆ. ನೀಟ್-ಯುಜಿ ಮರುಪರೀಕ್ಷೆಯನ್ನು ಜೂನ್ 21ಕ್ಕೆ ನಿಗದಿಪಡಿಸಿದೆ. ಮೇ 3ರಂದು 22 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ತಾಂತ್ರಿಕ ದೋಷದಿಂದಾಗಿ ವಿಳಂಬ: ಎನ್‌ಟಿಎ
ದೇಶಾದ್ಯಂತ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ನಡೆಸುವ ಸಿಯುಇಟಿ-ಯುಜಿ 2026 ಪರೀಕ್ಷೆಯು ತಾಂತ್ರಿಕ ದೋಷದಿಂದಾಗಿ ಕೆಲವು ಕೇಂದ್ರಗಳಲ್ಲಿ ವಿಳಂಬವಾಯಿತು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತಿಳಿಸಿದೆ.
ಬಳಿಕ ಸಮಸ್ಯೆಯನ್ನು ಬಗೆಹರಿಸಲಾಗಿದೆ ಹಾಗೂ ಅಭ್ಯರ್ಥಿಗಳಿಗೆ ಹೆಚ್ಚುವರಿ ಸಮಯವನ್ನು ಒದಗಿಸಿ ಪರೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ ಹಾಗೂ ಯಾವುದೇ ಅಭ್ಯರ್ಥಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗಿದೆ ಎಂದು ಎನ್‌ಟಿಎ ತಿಳಿಸಿದೆ.
‘‘ಶನಿವಾರ ಕೆಲವು ಕೇಂದ್ರಗಳಲ್ಲಿ ಸಿಯುಇಟಿ ಯುಜಿ 2026 ಪರೀಕ್ಷೆಯ ಆರಂಭ ವಿಳಂಬವಾಗಿದೆ ಹಾಗೂ ಇದಕ್ಕೆ ತನ್ನ ಕಡೆಯಿಂದ ಆಗಿರುವ ತಾಂತ್ರಿಕ ದೋಷ ಕಾರಣ ಎಂಬುದಾಗಿ ಟಿಸಿಎಸ್ ಹೇಳಿದೆ. ಬಳಿಕ ಸಮಸ್ಯೆಯನ್ನು ಬಗೆಹರಿಸಲಾಗಿದೆ’’ ಎಂದು ಎನ್‌ಟಿಎ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹೇಳಿದೆ.
ಮೊದಲು ನೀಟ್, ನಂತರ ಸಿಬಿಎಸ್‌ಇ, ಈಗ ಸಿಯುಇಟಿ...
ಸಿಯುಇಟಿ ಪರೀಕ್ಷೆ ವಿಳಂಬದ ಹಿನ್ನೆಲೆಯಲ್ಲಿ ಆಪ್ ನಾಯಕಿ ಹಾಗೂ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಆತಿಶಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪರೀಕ್ಷೆಯಲ್ಲಿ ಆಗಿರುವ ವಿಳಂಬವು ರಾಷ್ಟ್ರೀಯ ಮಟ್ಟದ ಪರೀಕ್ಷೆಗಳ ನಿರ್ವಹಣೆ ವೈಫಲ್ಯಕ್ಕೆ ಇನ್ನೊಂದು ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.
‘‘ಮೊದಲು ನೀಟ್, ನಂತರ ಸಿಬಿಎಸ್‌ಇ, ಈಗ ಸಿಯುಇಟಿ’’ ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಾಕಿದ ಸರಣಿ ಸಂದೇಶಗಳಲ್ಲಿ ಹೇಳಿದ್ದಾರೆ.
‘‘ಇಂದು ಸಿಯುಇಟಿ ಪರೀಕ್ಷೆಯು ‘ತಾಂತ್ರಿಕ ದೋಷ’ದ ಕಾರಣಕ್ಕಾಗಿ ವಿಳಂಬವಾಗಿ ನಡೆಯಿತು. ಇಂದು ಭಾರತದ ಎಲ್ಲಾ ಭಾಗಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಬೇಕಾಗಿತ್ತು. ಗಂಟೆಗಟ್ಟಲೆ ಕಾದ ಬಳಿಕ, ಎಲ್ಲಾ ಕೇಂದ್ರಗಳ ಹೊರಗೆ ‘ತಾಂತ್ರಿಕ ದೋಷ’ದ ನೋಟಿಸ್‌ಗಳನ್ನು ಹಾಕಲಾಗಿದೆ. ಅದ್ಭುತ ಅಸಾಮರ್ಥ್ಯ’’ ಎಂಬುದಾಗಿ ಆತಿಶಿ ಬರೆದಿದ್ದಾರೆ.
ಒಂದು ಪರೀಕ್ಷೆಯನ್ನೂ ಸರಿಯಾಗಿ ಮಾಡಲು ಅಸಮರ್ಥರು: ರಾಹುಲ್
‘‘ವಿಶ್ವ ಗುರು’’ ಎಂಬುದಾಗಿ ಹೇಳಿಕೊಳ್ಳುವ ಸರಕಾರಕ್ಕೆ ಒಂದು ಪರೀಕ್ಷೆಯನ್ನು ನೆಟ್ಟಗೆ ಮಾಡಲು ಬರುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ದೇಶದ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾಳುಗೆಡವಿದ್ದಾರೆ ಎಂಬುದಾಗಿಯೂ ಅವರು ಆರೋಪಿಸಿದ್ದಾರೆ.
‘‘ನೀಟ್, ಸಿಬಿಎಸ್‌ಇ, ಎಸ್‌ಎಸ್‌ಸಿ ಮತ್ತು ಇಂದು ಸಿಯುಇಟಿ. ನಾಲ್ಕು ಪರೀಕ್ಷೆಗಳು, ಒಂದು ಕೋಟಿ ವಿದ್ಯಾರ್ಥಿಗಳು. ಈ ಸರಕಾರಕ್ಕೆ ಒಂದೇ ಒಂದು ಪರೀಕ್ಷೆಯನ್ನು ಸರಿಯಾಗಿ ಮಾಡಲು ಸಾಧ್ಯವಾಗಲಿಲ್ಲ’’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.
ಘಟನೆ ನಡೆದ ಬಳಿಕವಷ್ಟೇ ಪ್ರಧಾನಿ ಪರಿಶೀಲನೆ ಯಾಕೆ? ಪವನ್ ಶರ್ಮಾ
ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ತಾನು ಪರಿಶೀಲನೆ ನಡೆಸುತ್ತಿದ್ದೇನೆ ಎಂಬುದಾಗಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಸುಪ್ರೀಂ ಕೋರ್ಟ್‌ಗೆ ನೀಡಿರುವ ಹೇಳಿಕೆಯ ಬಗ್ಗೆ ಕಾಂಗ್ರೆಸ್ ನಾಯಕ ಪವನ್ ಖೇರಾ ಶನಿವಾರ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಘಟನೆಗಳು ನಡೆಯುತ್ತಲೇ ಇವೆ ಎಂದು ಹೇಳಿದ ಅವರು, ಇಂಥ ಘಟನೆಗಳು ನಡೆದ ಬಳಿಕವಷ್ಟೇ ಪ್ರಧಾನಿ ಯಾಕೆ ಎಚ್ಚೆತ್ತುಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.
‘‘ಒಂದು ಘಟನೆ ನಡೆದ ಬಳಿಕವಷ್ಟೇ ಪ್ರಧಾನಿ ಅದರ ಮೇಲೆ ಒಂದು ಕಣ್ಣು ಇಡಲು ಯಾಕೆ ಆರಂಭಿಸುತ್ತಾರೆ? ಪ್ರಶ್ನೆಪತ್ರಿಕೆ ಸೋರಿಕೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಅದು 2024ರಲ್ಲೂ ನಡೆದಿತ್ತು. ಆಗಲೂ ಪ್ರಧಾನಿಯವರು ಅದರ ಮೇಲೆ ನಿಗಾ ಇಟ್ಟಿದ್ದರು. ಈಗ, 2026ರಲ್ಲಿ ಅದು ಮತ್ತೆ ಸೋರಿಕೆಯಾಗಿದೆ. ಹಾಗಾದರೆ, ಇನ್ನು ಪ್ರಶ್ನೆಪತ್ರಿಕೆ ಸೋರಿಕೆಯಾದಾಗಲೆಲ್ಲ ಪ್ರಧಾನಿಯವರು ರಾಜೀನಾಮೆ ಕೊಡಬೇಕಲ್ಲವೇ? ಜವಾಬ್ದಾರಿಯನ್ನು ವಹಿಸಿಕೊಳ್ಳಿ’’ ಎಂದು ಪವನ್ ಖೇರಾ ಹೇಳಿದ್ದಾರೆ.
‘‘ಕೇಂದ್ರ ಸರಕಾರದಲ್ಲಿ ಉತ್ತರದಾಯಿತ್ವವೇ ಇಲ್ಲ. ಇನ್ನು ಮುಂದೇ ಏನೇ ಆದರೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ರನ್ನು ಅದಕ್ಕೆ ಹೊಣೆಯಾಗಿಸುವುದಿಲ್ಲ. ಗತ ವರ್ಷಗಳಿಗೆ ನೆಹರೂ ಉತ್ತರದಾಯಿಯಾದರೆ, ಇಂದಿನ ಕಾಲಕ್ಕೆ ಯಾರು? ಅದನ್ನು 2047ರಲ್ಲಿ ಕೇಳಿ. ಭವಿಷ್ಯ ಕಳೆದುಕೊಂಡ ಮಕ್ಕಳಿಗೆ ಉತ್ತರ ಹೇಳುವವರು ಯಾರು?’’ ಎಂದು ಖೇರಾ ಪ್ರಶ್ನಿಸಿದ್ದಾರೆ.