ಪರಿವರ್ತಿತ ಪಿಂಚಣಿ: ಪಿಂಚಣಿದಾರರ ಬೇಡಿಕೆಗಳನ್ನು ತಿರಸ್ಕರಿಸಿದ ರಾಜ್ಯ ಸರಕಾರ
ಬೆಂಗಳೂರು : ಪರಿವರ್ತಿತ ಪಿಂಚಣಿ ಮೌಲ್ಯದ ವಸೂಲಿಗೆ ಅವಧಿ ಪೂರ್ಣಗೊಳ್ಳುವ ಮೊದಲೇ ಈ ವಸೂಲಾತಿ ನಿಲ್ಲಿಸಬೇಕು ಮತ್ತು ಮರು ಸ್ಥಾಪನಾ ಅವಧಿ ಕಡಿತಗೊಳಿಸಿರುವ ಉದಾಹರಣೆಗಳನ್ನು ಅನುಸರಿಸಬೇಕು ಎಂದು ನಿವೃತ್ತ ಸರಕಾರಿ ನೌಕರರು ಮತ್ತು ಪಿಂಚಣಿದಾರರ ಸಂಘಗಳ ಬೇಡಿಕೆಯನ್ನು ರಾಜ್ಯ ಸರಕಾರವು ಒಪ್ಪಿಕೊಂಡಿಲ್ಲ.
ಅಲ್ಲದೇ ಪಿಂಚಣಿಯ ಪರಿವರ್ತನೆಯಿಂದ ಪಾವತಿಸುವ ಇಡಿಗಂಟು ಮೊತ್ತಕ್ಕಾಗಿ ಸರಕಾರವು ಸಾಕಷ್ಟು ಆರ್ಥಿಕ ಹೊರೆ ಎದುರಿಸುತ್ತಿದೆ ಎಂದು ಸಮಜಾಯಿಷಿ ನೀಡಿದೆ. ಈ ಸಂಬಂಧ ಆರ್ಥಿಕ ಇಲಾಖೆಯು 2026ರ ಫೆ.25ರಂದೇ ಸುತ್ತೋಲೆ ಹೊರಡಿಸಿದೆ. ಇದರ ಪ್ರತಿಯು "the-file.in"ಗೆ ಲಭ್ಯವಾಗಿದೆ.
ಪರಿವರ್ತಿತ ಪಿಂಚಣಿ ಮೌಲ್ಯದ ವಸೂಲಿಗಾಗಿ ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 376 (14)ರಡಿ ನಿಗದಿಪಡಿಸಿರುವ ಅವಧಿಯನ್ನು ಕಡಿತಗೊಳಿಸುವ ಕುರಿತು ನಿವೃತ್ತ ಸರಕಾರಿ ನೌಕರರು ಸರಕಾರಕ್ಕೆ ಹಲವು ಮನವಿಗಳನ್ನು ಸಲ್ಲಿಸಿದ್ದರು. ಈ ಮನವಿಗಳನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ‘ಚಾಲ್ತಿಯಲ್ಲಿರುವ ಶಾಸನಬದ್ಧ ನಿಯಮಗಳು, ನ್ಯಾಯಾಂಗ ತೀರ್ಪುಗಳು, ದೃಢವಾದ ಆರ್ಥಿಕ ತತ್ವಗಳು ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವ್ಯತಿರಿಕ್ತವಾಗಿರು ಈ ಬೇಡಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ,’ ಎಂದು ಪ್ರತಿಪಾದಿಸಿದೆ.
ಈ ಸುತ್ತೋಲೆಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಅನುಮೋದಿಸಿದ್ದರು. ಇದನ್ನು ಬದಲಾಯಿಸಬೇಕು ಎಂದು ನಿವೃತ್ತ ಸರಕಾರಿ ನೌಕರರು ಹಾಲಿ ಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್ ಅವರ ಕಚೇರಿಯ ಕದ ತಟ್ಟಿದ್ದಾರೆ.
ಪರಿವರ್ತಿತ ಪಿಂಚಣಿ ಇಡಿಗಂಟು ಮೊತ್ತವನ್ನು ಹೇಗೆ ಪಡೆಯಬಹುದು?
ಕರ್ನಾಟಕ ನಾಗರಿಕ ಸೇವಾ ನಿಯಮಗಳು 376 ಪರಿವರ್ತಿತ ಪಿಂಚಣಿಗೆ ಪರಿವರ್ತನೆಗೆ ಸಂಬಂಧಿಸಿದೆ. ಸರಕಾರಿ ನೌಕರರು ನಿವೃತ್ತಿ ಸಂದರ್ಭದಲ್ಲಿ ತಮ್ಮ ಪಿಂಚಣಿಯ ಗರಿಷ್ಠ ಮೂರನೇ ಒಂದು ಭಾಗದವರೆಗೆ ಪರಿವರ್ತನೆ ಮಾಡಿಕೊಂಡು ನಿಯಮಗಳಡಿ ನಿಗದಿಪಡಿಸಿರುವ ಪರಿವರ್ತನೆ ಪ್ರಕಾರ ಪರಿವರ್ತಿತ ಪಿಂಚಣಿಯ ಇಡಿಗಂಟು ಪಡೆಯಬಹುದು.
ನಿಯಮ 376 (14)ರಲ್ಲಿ ಪಿಂಚಣಿಯ ಪರಿವರ್ತಿತ ಭಾಗವನ್ನು ಪರಿವರ್ತನೆಯ ದಿನಾಂಕದಿಂದ ಹದಿನೈದು ವರ್ಷಗಳ ಅವಧಿ ಮುಗಿದ ನಂತರದ ತಿಂಗಳ ಮೊದಲ ದಿನದಿಂದ ಮರುಸ್ಥಾಪಿಸಬೇಕು ಎಂದು ಷರತ್ತು ವಿಧಿಸಿದೆ. ಈ ವಿಧಾನವು ಹಲವು ದಶಕಗಳಿಂದಲೂ ಜಾರಿಯಲ್ಲಿದೆ. ರಾಜ್ಯದಲ್ಲಿ ಪಿಂಚಣಿ ನಿರ್ವಹಣೆಯನ್ನು ನಿಯಂತ್ರಿಸುವ ಕಾನೂನುಬದ್ಧ ಚೌಕಟ್ಟಿನ ಭಾಗವಾಗಿದೆ. ಪಿಂಚಣಿಯ ಪರಿವರ್ತಿತ ಭಾಗವನ್ನು ಮರು ಸ್ಥಾಪಿಸಲು 15 ವರ್ಷಗಳ ಅವಧಿ ನಿಗದಿಪಡಿಸಿರುವುದು ಪಿಂಚಣಿದಾರರ ಹಿತಾಸಕ್ತಿ ಇದೆ. ಅಲ್ಲದೇ ಸರಕಾರದ ಆರ್ಥಿಕ ಸ್ಥಿರತೆಯ ನಡುವಿನ ಸಮತೋಲನವನ್ನು ಕಾಪಾಡುವ ಆರ್ಥಿಕ ಮತ್ತು ಆಡಳಿತಾತ್ಮಕ ಪರಿಗಣನೆಗಳ ಮೇಲೆ ಆಧಾರಿತ ಕ್ರಮವಾಗಿದೆ ಎಂದು ಆರ್ಥಿಕ ಇಲಾಖೆಯು ವಿವರಿಸಿರುವುದು ಸುತ್ತೋಲೆಯಿಂದ ತಿಳಿದು ಬಂದಿದೆ.
ಮನವಿಗಳಲ್ಲಿನ ವಾದಾಂಶವೇನು?
ಸರಳ ಬಡ್ಡಿ ಲೆಕ್ಕಾಚಾರದ ಪ್ರಕಾರ ಬಡ್ಡಿಯೊಂದಿಗೆ ಪರಿವರ್ತಿತ ಮೊತ್ತವೂ 15 ವರ್ಷಗಳ ಮುನ್ನವೇ ವಸೂಲಾಗುತ್ತದೆ ಎಂದು ಹೇಳಲಾಗಿದೆ. ಅದರ ನಂತರದ ವಸೂಲಿ ಹೆಚ್ಚುವರಿ ವಸೂಲಿಯಾಗಿದೆ ಎಂದು ತಿಳಿಸಲಾಗಿದೆ. ಆಯಷ್ಯಾವಧಿ ಗಣನೀಯವಾಗಿ ಹೆಚ್ಚಿರುವುದರಿಂದ ಮರಣಾಂಶದ ಅಪಾಯ ಕಡಿಮೆಯಾಗಿದೆ. ಸರಳ ಬಡ್ಡಿ ಅನ್ವಯಿಸಿ 15 ವರ್ಷ ಪೂರೈಸಿದ ಪಿಂಚಣಿದಾರರಿಗ ಪಿಂಚಣಿಯ ಪರಿವರ್ತಿತ ಮೌಲ್ಯವನ್ನು ಮರು ಪಾವತಿಸಬೇಕು ಎಂದು ಕೋರಲಾಗಿದೆ. ಪರಿವರ್ತನೆ ಮೌಲ್ಯ ಮತ್ತು ಮರು ಸ್ಥಾಪನೆ ಅವಧಿಗೆ ಯಾವುದೇ ಕ್ರಮಬದ್ಧ ಆಧಾರವಿಲ್ಲ ಎಂದು ತಿಳಿಸಿದೆ.
ನ್ಯಾಯಾಂಗದ ಪೂರ್ವ ನಿದರ್ಶನಗಳೇನು?
ಪಿಂಚಣಿಯ ಪರಿವರ್ತಿತ ಮೌಲ್ಯವನ್ನು ವಸೂಲು ಮಾಡುವ ಅವಧಿಯನ್ನು ಪಿಂಚಣಿದಾರರು ಪ್ರಶ್ನಿಸಿದ್ದಾರೆ. ಆದರೆ ಈ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಮತ್ತು ರಾಜ್ಯಗಳ ಉಚ್ಛ ನ್ಯಾಯಾಲಯಗಳು ಅನೇಕ ಬಾರಿ ಪರಿಶೀಲನೆ ಮಾಡಿವೆ ಮತ್ತು ಹಲವು ತೀರ್ಮಾನಗಳನ್ನು ನೀಡಿವೆ ಎಂದು ಆರ್ಥಿಕ ಇಲಾಖೆಯು ಪ್ರಮುಖ ತೀರ್ಪುಗಳನ್ನು ಸುತ್ತೋಲೆಯಲ್ಲಿ ಉಲ್ಲೇಖಿಸಿದೆ.