×
Ad

ಕಾರ್ಪೊರೇಟ್ ಹಿಡಿತ; ಗ್ರಾಮೀಣ ಆರ್ಥಿಕತೆಯ ನಾಶ

ಹೆಚ್ಚುತ್ತಿರುವ ಕಾರ್ಪೊರೇಟ್‌ಗಳ ಹೆಜ್ಜೆಗುರುತುಗಳಿಂದ ಗ್ರಾಮೀಣ ಆರ್ಥಿಕತೆ ನಡುಗುತ್ತಿದೆ. ಈ ಕಾರ್ಪೊರೇಟೀಕರಣವು ಅಸಂಘಟಿತ ವಲಯದ ಆರ್ಥಿಕತೆಯ ಮಹತ್ವವನ್ನು ದುರ್ಬಲಗೊಳಿಸುತ್ತಿರುವುದರಿಂದ, ಈಗಾಗಲೇ ಇರುವ ನಿರುದ್ಯೋಗ ಮತ್ತು ಹಣದುಬ್ಬರದ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಪ್ರಸಕ್ತ ಗ್ರಾಮೀಣ ಪ್ರದೇಶಗಳಲ್ಲಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಳಿಕೊಳ್ಳಬೇಕಿರುವ ಪ್ರಶ್ನೆಯೆಂದರೆ, ಕಷ್ಟದ ಸಮಯದಲ್ಲಿ ಜಾಗತಿಕ ಆರ್ಥಿಕತೆಯು ಸಹಾಯ ಮಾಡುತ್ತದೆಯೇ ಅಥವಾ ಸ್ಥಳೀಯ ಆರ್ಥಿಕತೆಯು ನೆರವಿಗೆ ಒದಗುತ್ತದೆಯೇ ಎಂಬುದು.

Update: 2023-11-13 11:47 IST

Photo: PTI

ಇಪ್ಪತ್ತನೇ ಶತಮಾನದ ಕಳೆದ ಐದು ದಶಕದ ಅತ್ಯಂತ ಮಹತ್ವದ ಬದ್ಧತೆಗಳಾಗಿದ್ದ ಆರ್ಥಿಕ ಬೆಳವಣಿಗೆ ಮತ್ತು ವ್ಯಾಪಾರ ವಿಸ್ತರಣೆ ಎರಡನ್ನೂ ಸಾಧಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಜಾಗತಿಕ ಆರ್ಥಿಕ ಉತ್ಪಾದನೆಯು 1950ರಲ್ಲಿ 3,80,000 ಕೋಟಿ ಡಾಲರ್ ಇದ್ದದ್ದು 1992ರಲ್ಲಿ 18,90,000 ಕೋಟಿ ಡಾಲರ್‌ಗೆ ಹೆಚ್ಚಿತು. ಅಂದರೆ, ಇದು ಸುಮಾರು ಐದು ಪಟ್ಟು ಹೆಚ್ಚಳ. ಇಂಥ ಆರ್ಥಿಕ ಬೆಳವಣಿಗೆ ಮತ್ತು ವ್ಯಾಪಾರ ವಿಸ್ತರಣೆಯನ್ನು ಸಾಧಿಸಲು, ಆರ್ಥಿಕತೆಗಳನ್ನು ಗಡಿರಹಿತ ಮತ್ತು ರಾಷ್ಟ್ರೀಯ ಮತ್ತು ಸಾರ್ವಭೌಮ ಆರ್ಥಿಕತೆಯನ್ನು ಜಾಗತಿಕ ಆರ್ಥಿಕತೆಯನ್ನಾಗಿ ಪರಿವರ್ತಿಸಲು ಈ ವಲಯಗಳು ಮಹತ್ವದ ಪಾತ್ರವನ್ನು ವಹಿಸಿವೆ. ಇದರಲ್ಲಿ ಜಾಗತೀಕರಣವು ಅದರ ಕೇಂದ್ರವಾಗಿದೆ. ಜಾಗತೀಕರಣದ ಕಲ್ಪನೆಯು ಮುಕ್ತ ಮಾರುಕಟ್ಟೆ ಮತ್ತು ಮುಕ್ತ ಮಾರುಕಟ್ಟೆ ನೀತಿಗಳಿಂದ ನಡೆಯುವಂಥದ್ದು. ಜಾಗತೀಕರಣವು ಮಾನವೀಯತೆಯ ಸುವರ್ಣಯುಗ ಎಂದು ಹೇಳುವ ಮೂಲಕ ಜಾಗತೀಕರಣದ ಕಲ್ಪನೆಗೆ ಪ್ರಚಾರ ಕೊಡಲಾಯಿತು. ಆರ್ಥಿಕ ಬೆಳವಣಿಗೆ, ಹೊಸ ಉದ್ಯೋಗಾವಕಾಶಗಳು, ಹಸಿವು ಮತ್ತು ಬಡತನ ಮುಕ್ತ ಸಮಾಜ, ಜಾಗತಿಕ ಅಂತರ್‌ಸಂಪರ್ಕ ಇತ್ಯಾದಿಗಳ ವಿಷಯದಲ್ಲಿ ಜಾಗತೀಕರಣದ ನೀತಿಗಳು, ಮಾರುಕಟ್ಟೆ ಚಾಲಿತ ಆರ್ಥಿಕತೆ ಮತ್ತು ಅಂತರ್‌ರಾಷ್ಟ್ರೀಯ ಸಂಸ್ಥೆಗಳ ನಿಷ್ಪಕ್ಷಪಾತ ನಡೆ ಎಂಬುದೆಲ್ಲ ಪದೇ ಪದೇ ಪ್ರಶ್ನೆಗೆ ಒಳಗಾಗಿದೆ. ಏಕೆಂದರೆ ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿಯೂ ಹೆಚ್ಚಿನ ಮಟ್ಟದ ನಿರುದ್ಯೋಗ, ವೇತನ ಸ್ಥಿರತೆ ಅಥವಾ ಕುಸಿತ, ನಿಷ್ಪ್ರಯೋಜಕ ಅರೆಕಾಲಿಕ ಉದ್ಯೋಗಗಳ ಮೇಲಿನ ಹೆಚ್ಚಿನ ಅವಲಂಬನೆ, ಮಧ್ಯಮ ವರ್ಗದ ದುರ್ಬಲತೆ ಮತ್ತು ಕುಗ್ಗುವಿಕೆ, ಸಮಾಜದ ದೊಡ್ಡ ವರ್ಗದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯ ಕೊರತೆ ಕಾಡಿದೆ. ಆ ಎಲ್ಲಾ ಪ್ರಶ್ನೆಗಳು ಜಾಗತೀಕರಣಗೊಂಡ ಆರ್ಥಿಕ ಮಾದರಿ ಮತ್ತು ಮುಕ್ತ ಮಾರುಕಟ್ಟೆ ಆರ್ಥಿಕತೆ, ಕೋವಿಡ್ ಹೊತ್ತಿನಲ್ಲಿ ಹೆಚ್ಚು ಗಮನಕ್ಕೆ ಬಂದಿವೆ. ಬಿಕ್ಕಟ್ಟಿನ ಸಮಯವನ್ನು ಎದುರಿಸಲು ಏನು ಮಾಡಬೇಕೆಂದು ಯೋಚಿಸುವಂತೆ ಮಾಡಿದೆ. ಕೇಳಿಕೊಳ್ಳಬೇಕಿರುವ ಪ್ರಶ್ನೆಯೆಂದರೆ, ಕಷ್ಟದ ಸಮಯದಲ್ಲಿ ಜಾಗತಿಕ ಆರ್ಥಿಕತೆಯು ಸಹಾಯ ಮಾಡುತ್ತದೆಯೇ ಅಥವಾ ಸ್ಥಳೀಯ ಆರ್ಥಿಕತೆಯು ನೆರವಿಗೆ ಒದಗುತ್ತದೆಯೇ?

ಕಳೆದ 5 ದಶಕಗಳ ಜಾಗತೀಕರಣ ಮತ್ತು ಮಾರುಕಟ್ಟೆ ನೀತಿಗಳು ಪ್ರಪಂಚದಾದ್ಯಂತ ಕಾರ್ಪೊರೇಟ್ ಮತ್ತು ಬಹುರಾಷ್ಟ್ರೀಯ ಕಂಪೆನಿಗಳನ್ನು ಉತ್ತೇಜಿಸಿವೆ. ಇದರಿಂದಾಗಿ ಇಂದು ಜಗತ್ತಿನಾದ್ಯಂತ ಕಾರ್ಪೊರೇಟ್ ಮತ್ತು ಬಹುರಾಷ್ಟ್ರೀಯ ಕಂಪೆನಿಗಳು ಆರ್ಥಿಕ ನೀತಿಗಳನ್ನು ನಿಯಂತ್ರಿಸುತ್ತಿವೆ. ಇಡೀ ರಾಜಕೀಯ, ನೀತಿಗಳು ಮತ್ತು ಚುನಾವಣಾ ವ್ಯವಸ್ಥೆಯು ಕಾರ್ಪೊರೇಟ್‌ಗಳ ಸುತ್ತಲೇ ಸುತ್ತುತ್ತದೆ. ಕಳೆದ ದಶಕದಲ್ಲಿ ಕಾರ್ಪೊರೇಟ್ ಜಗತ್ತು ವಿಶ್ವದ ರಾಜಕೀಯದಲ್ಲಿ ತನ್ನ ಹಸ್ತಕ್ಷೇಪವನ್ನು ಮಾಡುವುದು ಬಹಳ ವೇಗವಾಗಿ ಹೆಚ್ಚಿದೆ. ಪರಿಣಾಮವಾಗಿ, ಪ್ರಪಂಚದ ಹೆಚ್ಚಿನ ಪ್ರಜಾಪ್ರಭುತ್ವಗಳಲ್ಲಿ, ಚುನಾವಣಾ ಪ್ರಕ್ರಿಯೆಯಲ್ಲಿ ಹಣದ ಪ್ರಾಮುಖ್ಯತೆ ಮತ್ತು ಜನರಿಗೆ ರಾಜಕೀಯ ಪ್ರತಿನಿಧಿಗಳ ಉತ್ತರದಾಯಿತ್ವ ಇಲ್ಲವಾಗಿದೆ. ಬದಲಾಗಿ, ಕ್ರೋನಿ ಬಂಡವಾಳಶಾಹಿಗಳು ಅಥವಾ ಅವರ ಉಸ್ತುವಾರಿಗಳು ಅಧಿಕಾರದಲ್ಲಿರುವವರ ರಕ್ಷಕರಾದರು. ಇದರಿಂದಾಗಿ ಪ್ರಜಾಪ್ರಭುತ್ವದಲ್ಲಿ ಸಾಮಾಜಿಕ ಶಕ್ತಿಯು ಹಿನ್ನೆಲೆಗೆ ಸರಿದು, ರಾಜಕೀಯ ಅಧಿಕಾರವು ಪ್ರಾಬಲ್ಯ ಸಾಧಿಸಿದೆ. ಸಾರ್ವಜನಿಕರಿಗೆ ಸಂಬಂಧಿಸಿದ ಸಮಸ್ಯೆಗಳು ಕಡೆಗಣನೆಗೆ ಒಳಗಾಗಿವೆ.

ಪಾಶ್ಚಿಮಾತ್ಯ ದೇಶಗಳು ತಮ್ಮನ್ನು ಪ್ರಜಾಪ್ರಭುತ್ವದ ಶ್ರೇಷ್ಠ ರಕ್ಷಕರು ಎಂದು ಹೇಳಿಕೊಳ್ಳುವುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಜಾಗತೀಕರಣದ ನೀತಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯೊಂದಿಗೆ ಹೊಂದಿಕೆಯಾಗುವುದಿಲ್ಲ. ಸ್ಪಷ್ಟವಾಗಿ ನೋಡಿದರೆ, ಜಾಗತೀಕರಣದ ನೀತಿಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿವೆ. ಏಕೆಂದರೆ ಪ್ರಜಾಪ್ರಭುತ್ವದ ತಳಹದಿ ಸಾಮಾಜಿಕ ವ್ಯವಸ್ಥೆಯ ಮೇಲೆ ನಿಂತಿದೆ. ಮತ್ತೊಂದೆಡೆ ಜಾಗತೀಕರಣ ವ್ಯವಸ್ಥೆಯು ಮುಕ್ತ ಮತ್ತು ತೆರೆದ ಮಾರುಕಟ್ಟೆಯ ನೀತಿಗಳನ್ನು ಆಧರಿಸಿದೆ. ಆದ್ದರಿಂದ, ಏಕಕಾಲದಲ್ಲಿ ಪ್ರಜಾಪ್ರಭುತ್ವ, ರಾಷ್ಟ್ರೀಯ ಸ್ವಯಂ ನಿರ್ಣಯ ಮತ್ತು ಆರ್ಥಿಕ ಜಾಗತೀಕರಣವನ್ನು ಮುಂದುವರಿಸುವುದು ಸಮರ್ಥನೀಯವಾಗಿರುವುದಿಲ್ಲ. ಪ್ರಜಾಪ್ರಭುತ್ವಗಳ ಸಾಮಾಜಿಕ ವ್ಯವಸ್ಥೆಗಳು ಮತ್ತು ಜಾಗತೀಕರಣದ ಅಂತರ್‌ರಾಷ್ಟ್ರೀಯ ಬೇಡಿಕೆಗಳ ನಡುವೆ ಅನಿವಾರ್ಯವಾಗಿ ಘರ್ಷಣೆ ತಲೆದೋರಿದಾಗ, ರಾಷ್ಟ್ರೀಯ ಆದ್ಯತೆಗಳಿಗೆ ಪ್ರಾಮುಖ್ಯತೆ ನೀಡಬೇಕು. ಸಾಮಾಜಿಕ ವ್ಯವಸ್ಥೆಯೊಂದಿಗೆ ಜಾಗತೀಕರಣದ ನೀತಿಗಳು ಹೊಂದಿಕೆಯಾಗದ ಕಾರಣ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಬೆಳೆಯುತ್ತಲೇ ಇತ್ತು. ಏಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾಜಿಕ ಆರ್ಥಿಕತೆಯು ಮುಖ್ಯವಾಗಿದೆ. ಇದರಲ್ಲಿ ಸ್ಥಳೀಯ ಆರ್ಥಿಕತೆಯು ಸರಕಾರ, ಕಾರ್ಪೊರೇಟ್ ಮತ್ತು ಸಮಾಜದ ನಡುವೆ ವಿಕೇಂದ್ರೀಕೃತ ಆರ್ಥಿಕ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಿಂದಾಗಿ ವ್ಯಾಪಾರವೂ ನಡೆಯುತ್ತದೆ ಮತ್ತು ಸಂಪತ್ತು ಮತ್ತು ಸಂಪನ್ಮೂಲಗಳ ಕ್ರೋಡೀಕರಣದ ಸಾಧ್ಯತೆಯು ಕಡಿಮೆಯಾಗಿದೆ. ಜಾಗತೀಕರಣಗೊಂಡ ಆರ್ಥಿಕ ಮಾದರಿಯು ಹಣದ ಆರ್ಥಿಕತೆಯ ಮೇಲೆ ಕಾರ್ಯನಿರ್ವಹಿಸುತ್ತದೆ. ಅಂದರೆ ಜಾಗತೀಕರಣಗೊಂಡ ಆರ್ಥಿಕ ಮಾದರಿಯು ಸಮಾಜವನ್ನು ಆರ್ಥಿಕ ಮಾದರಿಯಿಂದ ಪ್ರತ್ಯೇಕಿಸುತ್ತದೆ ಮತ್ತು ಅದನ್ನು ಮಾರುಕಟ್ಟೆಯ ಚೌಕಟ್ಟಿನಲ್ಲಿ ಮಾತ್ರ ಇರಿಸುತ್ತದೆ. ಅದಕ್ಕಾಗಿ ಕೆಲವೊಮ್ಮೆ ಕಾರ್ಪೊರೇಟ್ ಉದ್ದೇಶಪೂರ್ವಕವಾಗಿ ಸರಕುಗಳಿಗೆ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ. ಆದ್ದರಿಂದ, ಆರ್ಥಿಕ ಗಡಿಗಳು ರಾಜಕೀಯ ಗಡಿಗಳೊಂದಿಗೆ ಹೊಂದಿಕೆಯಾಗಬೇಕು. ಇಲ್ಲದಿದ್ದರೆ, ಪ್ರಜಾಪ್ರಭುತ್ವವು ಟೊಳ್ಳಾಗುತ್ತದೆ. ಆರ್ಥಿಕತೆಯು ಜಾಗತಿಕವಾಗಿ ಮತ್ತು ಸರಕಾರಗಳು ರಾಷ್ಟ್ರೀಯವಾದಾಗ, ಕಾರ್ಪೊರೇಟ್ ಮತ್ತು ಸಂಸ್ಥೆಗಳು ಸಾರ್ವಜನಿಕ ಹೊಣೆಗಾರಿಕೆಯ ವ್ಯಾಪ್ತಿಯನ್ನು ಮೀರಿ ಕಾರ್ಯನಿರ್ವಹಿಸುತ್ತವೆ. ಹೀಗಾಗಿ, ಹೆಚ್ಚಿನ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ ಮತ್ತು ಬಡವರು ಬಡವರಾಗುತ್ತಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಧ್ಯಮ ವರ್ಗ, ಕಾರ್ಮಿಕರು ಮತ್ತು ಸೇವಾ ವರ್ಗದ ಮೇಲೆ ಹವಾಮಾನ ಬದಲಾವಣೆ ಮತ್ತು ಆದಾಯದ ಹೆಚ್ಚುತ್ತಿರುವ ಬಿಕ್ಕಟ್ಟು, ಆರೋಗ್ಯ, ಶಿಕ್ಷಣ, ನೀರು, ಆಹಾರ ಮುಂತಾದ ಮೂಲಭೂತ ಸೌಕರ್ಯಗಳ ಮೇಲಿನ ಕಾರ್ಪೊರೇಟ್ ನಿಯಂತ್ರಣ ಇಂದು ಹೆಚ್ಚಿನ ಜನರ ಪಾಲಿಗೆ ಸಂಕಷ್ಟವನ್ನು ತಂದಿಟ್ಟಿದೆ.

ಜಾಗತೀಕರಣ ಮತ್ತು ಮಾರುಕಟ್ಟೆ ಆರ್ಥಿಕತೆಯು ಮಧ್ಯಮ ಮತ್ತು ಕೆಳವರ್ಗದ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಗ್ರಾಮೀಣ ಆರ್ಥಿಕತೆಯನ್ನು ಹೇಗೆ ಶೋಷಿಸಿತು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು. ಪ್ರಸಕ್ತ ಯುರೋಪ್‌ನ ಅರ್ಧದಷ್ಟು ಜನರು ಬೀದಿಗಿಳಿದು ಹಣದುಬ್ಬರ, ಜೀವನ ವೆಚ್ಚದ ಬಿಕ್ಕಟ್ಟು, ವೇತನ ಹೆಚ್ಚಳ ಮತ್ತು ವಿದ್ಯುತ್ ಬಿಲ್‌ಗಳು ಮತ್ತು ಇಂಧನ ಬಿಲ್‌ಗಳಿಗೆ ಪರಿಹಾರಕ್ಕಾಗಿ ಒತ್ತಾಯಿಸುತ್ತಿದ್ದಾರೆ. 2022ರ ಡಿಸೆಂಬರ್ 15ರಿಂದ, ಇಂಗ್ಲೆಂಡ್‌ನ ಶುಶ್ರೂಷಕರು, ಅಂಚೆ ಸೇವೆಗಳು, ರೈಲ್ವೆ ಯೂನಿಯನ್‌ಗಳು, ಟ್ರೇಡ್ ಯೂನಿಯನ್‌ಗಳು, ಹವಾಮಾನ ಬದಲಾವಣೆ ಕಾರ್ಯಕರ್ತರು, ವಿದ್ಯಾರ್ಥಿಗಳು, ಪಿಂಚಣಿದಾರರು ಮತ್ತು ಜನತೆ ತಾವು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. 40,000 ರೈಲ್ವೆ ಉದ್ಯೋಗಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ, 25,000 ದಾದಿಯರು ವೃತ್ತಿಯನ್ನೇ ಬದಲಿಸಲು ಬಯಸುತ್ತಿದ್ದಾರೆ. ಭಾರತದಲ್ಲಿ ನಿರುದ್ಯೋಗ ಪರಿಸ್ಥಿತಿಯು 45 ವರ್ಷಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಇಂಗ್ಲೆಂಡ್‌ನ ಹಣದುಬ್ಬರವು 41 ವರ್ಷಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಇದು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಧ್ಯಮ ವರ್ಗ, ಕಾರ್ಮಿಕರು ಮತ್ತು ಸೇವಾ ವರ್ಗವು ಆರ್ಥಿಕ ನೀತಿಗಳಿಂದ ಬಳಲುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಪ್ರತಿಭಟನೆಯು ಇಂಗ್ಲೆಂಡಿಗೆ ಮಾತ್ರ ಸೀಮಿತವಾಗಿಲ್ಲ. ಇಟಲಿ, ರೊಮೇನಿಯಾ, ಜರ್ಮನಿ, ಫ್ರಾನ್ಸ್ ಮುಂತಾದ ದೇಶಗಳ ಕೆಲವು ನಗರಗಳಲ್ಲಿಯೂ ಇದೇ ಸ್ಥಿತಿಯಿದೆ.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿಯೂ ಜಾಗತೀಕರಣದ ನೀತಿಗಳು ಜನರ ಮೂಲಭೂತ ಅಗತ್ಯಗಳನ್ನು ಪೂರೈಸಲು ಅಸಮರ್ಥವಾಗಿವೆ ಎಂದು ಯುರೋಪಿನ ಪ್ರಸ್ತುತ ಪರಿಸ್ಥಿತಿ ಮತ್ತು ಹೆಚ್ಚುತ್ತಿರುವ ಜನರ ಆಕ್ರೋಶದಿಂದ ನಾವು ಅರ್ಥ ಮಾಡಿಕೊಳ್ಳಬಹುದು. ಆದರೂ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜಾಗತೀಕರಣ ಮತ್ತು ಮುಕ್ತ ಮಾರುಕಟ್ಟೆ ನೀತಿಗಳು ತಮ್ಮ ಉತ್ತುಂಗ ಸ್ಥಿತಿಯಲ್ಲಿವೆ. ಇದು ಯುರೋಪ್‌ನಲ್ಲಿನ ಸನ್ನಿವೇಶ ಮಾತ್ರವಲ್ಲ. ಅಮೆರಿಕದಲ್ಲಿಯೂ ಇದನ್ನೇ ಕಾಣಬಹುದಾಗಿದೆ. ಅಮೆರಿಕದಲ್ಲಿ 7,000 ದಾದಿಯರು ಮುಷ್ಕರ ನಡೆಸುತ್ತಿದ್ದಾರೆ. ವೇತನ ಹೆಚ್ಚಳ ಮತ್ತು ಆಸ್ಪತ್ರೆಯಲ್ಲಿ ಸಿಬ್ಬಂದಿಯನ್ನು ಹೆಚ್ಚಿಸಲು ಒತ್ತಾಯಿಸಿದ್ದಾರೆ. ನ್ಯೂಯಾರ್ಕ್ ಸ್ಟೇಟ್ ನರ್ಸ್ ಅಸೋಸಿಯೇಷನ್ ಹೇಳಿಕೆಯ ಪ್ರಕಾರ, ಆಸ್ಪತ್ರೆಗಳು ಕಡಿಮೆ ಸಿಬ್ಬಂದಿ ಮತ್ತು ಕಡಿಮೆ ನೇಮಕಾತಿಗಳ ಮೂಲಕ ಲಾಭಕ್ಕಾಗಿ ಲೆಕ್ಕಹಾಕುತ್ತಿವೆ. ಕಾರ್ಪೊರೇಟ್ ಮತ್ತು ಖಾಸಗಿ ಉದ್ಯಮಿಗಳ ನಿಯಂತ್ರಣದಲ್ಲಿರುವ ಆರ್ಥಿಕ ಮಾದರಿಯ ಮೂಲಭೂತ ಉದ್ದೇಶವು ಹೇಗಾದರೂ ಮಾಡಿ ಲಾಭವನ್ನು ಗಳಿಸುವುದಾಗಿದೆ ಎಂಬುದನ್ನೇ ಪಾಶ್ಚಿಮಾತ್ಯ ದೇಶದಾದ್ಯಂತದ ಪ್ರತಿಭಟನೆಗಳು ಬಯಲಿಗೆಳೆಯುತ್ತಿವೆ.

ಭಾರತದ ವಿಷಯಕ್ಕೆ ಬರುವುದಾದರೆ, ಭಾರತದ ಆರ್ಥಿಕ ದಿಕ್ಕು ಕೂಡ ಕಾರ್ಪೊರೇಟ್ ನಿಯಂತ್ರಣದ ಆರ್ಥಿಕ ಮಾದರಿಯತ್ತ ವೇಗವಾಗಿ ಸಾಗುತ್ತಿದೆ. ಸಣ್ಣ ಕಂಪೆನಿಗಳನ್ನು ಕಾರ್ಪೊರೇಟ್ ಸ್ವಾಧೀನಪಡಿಸಿಕೊಳ್ಳುವ ರೀತಿಯಲ್ಲಿ. ಕಳೆದ 5-6 ವರ್ಷಗಳಲ್ಲಿ ಭಾರತದ ಅಸಂಘಟಿತ ಆರ್ಥಿಕತೆಯು ಮೂರು ಕಾರಣಗಳಿಂದ ಸಂಪೂರ್ಣವಾಗಿ ನಾಶವಾಗಿದೆ. ಅವೆಂದರೆ, ನೋಟು ಅಮಾನ್ಯ, ಜಿಎಸ್‌ಟಿ, ಕೋವಿಡ್.

ನೋಟು ಅಮಾನ್ಯ ಮತ್ತು ಜಿಎಸ್‌ಟಿಯು ಕಾರ್ಪೊರೇಟ್ ಸಂಸ್ಥೆಗಳು ಅಸಂಘಟಿತ ವಲಯಕ್ಕೆ ಪ್ರವೇಶಿಸುವುದಕ್ಕೆ ಅನುವು ಮಾಡಿಕೊಡುವ ನೀತಿಯೆಡೆಗಿನ ಸರಕಾರದ ಒಲವಿಗೆ ಉದಾಹರಣೆಗಳಾಗಿವೆ. ಏಕೆಂದರೆ ನೋಟು ಅಮಾನ್ಯ ಮತ್ತು ಜಿಎಸ್‌ಟಿ ಭಾರತೀಯ ಆರ್ಥಿಕತೆಯನ್ನು ಕೇಂದ್ರೀಕೃತ ನಿಯಂತ್ರಣದ ಆರ್ಥಿಕತೆಯತ್ತ ತಿರುಗಿಸಿತು. ನೋಟು ಅಮಾನ್ಯ ಮತ್ತು ಜಿಎಸ್‌ಟಿಯಿಂದಾಗಿ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಕಿರಾಣಿ ಅಂಗಡಿಗಳು ತಮ್ಮ ಅಸ್ತಿತ್ವಕ್ಕಾಗಿ ಒದ್ದಾಡುವಂತಾಗಿದೆ. ಸಣ್ಣ ಉದ್ಯಮಗಳ ವಿಚಾರದಲ್ಲಿಯೂ ಇದೇ ಆಗಿದೆ. ಏಕೆಂದರೆ ದೊಡ್ಡ ಮೀನುಗಳು ಹರಾಜು ಪ್ರಕ್ರಿಯೆಯಿಂದ ಮಾರುಕಟ್ಟೆ ಪ್ರವೇಶದವರೆಗೂ ನವೋದ್ಯಮಗಳಿಗೆ ಅವಕಾಶವನ್ನೇ ಬಿಡುತ್ತಿಲ್ಲ. ಇದಲ್ಲದೆ, ಹರಾಜು ಪ್ರಕ್ರಿಯೆ ಮತ್ತು ನೀತಿಯು ಕೆಲವು ಕಾರ್ಪೊರೇಟ್ ಪ್ರಬಲರಿಗೆ ಅನುಕೂಲಕರ. ಈ ಪರಿಸ್ಥಿತಿಯು ಕಾರ್ಪೊರೇಟ್ ಕೈಯಲ್ಲಿ ಆರ್ಥಿಕತೆಯ ಕೇಂದ್ರೀಕರಣದ ಉದಾಹರಣೆಯಾಗಿದೆ.

ಈಗ ಕಾರ್ಪೊರೇಟ್ ಹೆಜ್ಜೆಗುರುತುಗಳು ಗ್ರಾಮೀಣ ಭಾರತದಲ್ಲಿಯೂ ಪ್ರವೇಶಿಸುತ್ತಿವೆ. ಗ್ರಾಮೀಣ ಆರ್ಥಿಕತೆಯ ವಾಲ್ಮಾರ್ಟೈಸೇಶನ್ (ಜಾಗತಿಕ ಮಟ್ಟದ ಅಂಗಡಿಗಳ ಸರಪಣಿ ವ್ಯವಸ್ಥೆಯು ಒಂದು ಪ್ರದೇಶಕ್ಕೆ ಕಾಲಿಟ್ಟು, ಅಲ್ಲಿನ ಸ್ಥಳೀಯ ವ್ಯಾಪಾರಗಳನ್ನು ಇಲ್ಲವಾಗಿಸಿ ಆಕ್ರಮಿಸಿಕೊಳ್ಳುವ ವ್ಯವಸ್ಥೆ) ಮೂಲಕ, ಕೃಷಿ ಮತ್ತು ಚಿಲ್ಲರೆ ವ್ಯಾಪಾರಿಗಳ ಕಾರ್ಪೊರೇಟೀಕರಣದ ಮೂಲಕ ಇಂಥದೊಂದು ಆಪೋಷಣೆ ನಡೆಯುತ್ತಿದೆ.

ಆಯಕಟ್ಟಿನ ರೀತಿಯಲ್ಲಿ ಕಾರ್ಪೊರೇಟ್ ಮತ್ತು ಸರಕಾರದ ನೀತಿಗಳು ಗ್ರಾಮೀಣ ಜನರನ್ನು ತಮ್ಮ ಸಾಂಪ್ರದಾಯಿಕ ಕೆಲಸಗಳಾದ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಂದ ದೂರವಿಡಲು ಬಯಸುತ್ತವೆ. ಜಿಡಿಪಿಯಲ್ಲಿ ಕೃಷಿ ಕೊಡುಗೆಯನ್ನು ಈಗಿರುವ ಶೇ.16ರಿಂದ ಶೇ.6ಕ್ಕೆ ಕಡಿಮೆ ಮಾಡಬೇಕು ಎಂದು ಹೇಳುವ ನೀತಿ ಆಯೋಗದ ವರದಿಯಲ್ಲಿ ಈ ಕಾರ್ಯತಂತ್ರದ ಹಿಕಮತ್ತುಗಳನ್ನು ನಾವು ನೋಡಬಹುದಾಗಿದೆ. ಅಂದರೆ ಕೃಷಿಯ ಕಾರ್ಪೊರೇಟೀಕರಣಕ್ಕಾಗಿ ಉದ್ದೇಶಪೂರ್ವಕವಾಗಿ ನಷ್ಟವನ್ನು ಮಾಡಲಾಗುತ್ತಿದೆ. ಇದರಿಂದಾಗಿ ರೈತರು ತಾವಾಗಿಯೇ ಕೃಷಿಯನ್ನು ಬಿಟ್ಟುಬಿಡುವಂಥ ಸನ್ನಿವೇಶವನ್ನು ಸೃಷ್ಟಿಸಲಾಗುತ್ತದೆ. ಆನಂತರ ಕಾರ್ಪೊರೇಟ್ ವಲಯವು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾರಂಭಿಸುತ್ತದೆ. ಮೂಲಭೂತವಾಗಿ, ಕಾರ್ಪೊರೇಟ್ ವ್ಯವಸ್ಥೆ ಹಸಿವಿನ ವ್ಯಾಪಾರ ಮಾಡಲು ಬಯಸಿದಂತೆ ಭೂಮಿಯನ್ನು ಉತ್ಪಾದನಾ ಘಟಕವನ್ನಾಗಿಯೂ, ಬೆಳೆಯನ್ನು ಸರಕನ್ನಾಗಿಯೂ ಪರಿವರ್ತಿಸಲು ಬಯಸುತ್ತದೆ.

ಹೀಗಾಗಿ, ಹೆಚ್ಚುತ್ತಿರುವ ಕಾರ್ಪೊರೇಟ್‌ಗಳ ಹೆಜ್ಜೆಗುರುತುಗಳಿಂದ ಗ್ರಾಮೀಣ ಆರ್ಥಿಕತೆ ನಡುಗುತ್ತಿದೆ. ಈ ಕಾರ್ಪೊರೇಟೀಕರಣವು ಅಸಂಘಟಿತ ವಲಯದ ಆರ್ಥಿಕತೆಯ ಮಹತ್ವವನ್ನು ದುರ್ಬಲಗೊಳಿಸುತ್ತಿರುವುದರಿಂದ, ಹೆಚ್ಚುತ್ತಿರುವ ಕಾರ್ಪೊರೇಟೀಕರಣವು ನಿರುದ್ಯೋಗ ಮತ್ತು ಹಣದುಬ್ಬರದ ಪರಿಸ್ಥಿತಿಯನ್ನು ಪಾಶ್ಚಿಮಾತ್ಯ ದೇಶಗಳು ಸಹ ನೋಡುತ್ತಿರುವಂತೆ ಇನ್ನಷ್ಟು ಹದಗೆಡಿಸುತ್ತದೆ. ಪ್ರಸಕ್ತ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ಪರಿಸ್ಥಿತಿಯು ಭಾರತವು ಅಮೆರಿಕದ ಬದಲಾಗಿ ಬ್ರೆಝಿಲ್ ಆಗುವ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಇದರಲ್ಲಿ ಭಾರತದ ಶೇ.75ರಷ್ಟು ಜನರು ಜಿಲ್ಲಾ ಕೇಂದ್ರಗಳಲ್ಲಿನ ಕೊಳೆಗೇರಿಗಳಲ್ಲಿ ಕಾಣುತ್ತಾರೆ. ಹಸಿವು, ಅಸಮಾನತೆ ಮತ್ತು ಜೀವನೋಪಾಯದ ಸಮಾನತೆ ನಿಯಂತ್ರಣ ತಪ್ಪುತ್ತದೆ. ಆಗ ಗ್ರಾಮೀಣ ಭಾರತದ ಮೇಲೆ ಮಾತ್ರವಲ್ಲದೆ, ಇಡೀ ಭಾರತದ ಸಮೃದ್ಧಿ, ಏಕತೆ ಮತ್ತು ಸಮಗ್ರತೆಯ ಮೇಲೂ ಭಾರೀ ಪರಿಣಾಮ ಉಂಟಾಗುತ್ತದೆ.

ಆದ್ದರಿಂದ, 2030ರ ವೇಳೆಗೆ, ಗ್ರಾಮೀಣ ಭಾರತವನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಮೌಲ್ಯ ಮತ್ತು ನೈತಿಕ ಬದಲಾವಣೆಯನ್ನು ಮಾಡಬೇಕಾಗಿದೆ. ಏಕೆಂದರೆ ಆರ್ಥಿಕ ಅಸಮಾನತೆಯು ಆರ್ಥಿಕ ಅನ್ಯಾಯವನ್ನು ಉಂಟುಮಾಡುತ್ತದೆ. ಇದರಿಂದಾಗಿ ಸಂಪನ್ಮೂಲಗಳು ಮತ್ತು ಸಂಪತ್ತಿನ ಕೇಂದ್ರೀಕರಣವಾಗಿ, ಸಮಾಜದ ದೊಡ್ಡ ವರ್ಗವು ಮೂಲಭೂತ ಸೌಲಭ್ಯಗಳನ್ನು ಸಹ ಪಡೆಯಲು ಸಾಧ್ಯವಾಗದೆ ಹೋಗುತ್ತದೆ. ಸಾಮಾಜಿಕ ವ್ಯವಸ್ಥೆಯು ಬದಲಾಗಲು ಶುರುವಾಗುತ್ತದೆ ಮತ್ತು ಸಮಾಜದ ಹೆಚ್ಚಿನ ಭಾಗವು ಅಸ್ಪಶ್ಯ ಭಾವನೆಯಿಂದ ನರಳತೊಡಗುತ್ತದೆ. ಉದಾಹರಣೆಗೆ, ಗ್ರಾಮೀಣ ಭಾರತದಲ್ಲಿ ಸಾಮಾಜಿಕ ಪರಿಸ್ಥಿತಿಗಳು ಹದಗೆಡುತ್ತಿವೆ. ಏಕೆಂದರೆ ಆರ್ಥಿಕ ಭದ್ರತೆಯ ಕೊರತೆಯಿಂದಾಗಿ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಮದುವೆಯಾಗುವುದಕ್ಕೂ ಹಿಂಜರಿಯುತ್ತಿದ್ದಾರೆ ಅಥವಾ ಅವರ ಮದುವೆಗಳು ನಡೆಯುತ್ತಿಲ್ಲ. ಇದು ಮುಂಬರುವ ದಿನಗಳಲ್ಲಿ ಭಾರತದ ಜನಸಂಖ್ಯಾ ಲಾಭಾಂಶದ ಮೇಲೆ ನೇರ ಪರಿಣಾಮ ಬೀರುತ್ತದೆ. ಮದುವೆಯಾಗದೆ ಇರುವ ಈ ಸ್ಥಿತಿ ಸದ್ಯದ ಪರಿಸ್ಥಿತಿಯಲ್ಲಿ ಪೋಷಕರ ಮೇಲೂ ಮಾನಸಿಕ ಒತ್ತಡ ಹೆಚ್ಚಾಗಲು ಕಾರಣವಾಗುತ್ತಿದ್ದು, ಇದು ಯಾರ ಗಮನಕ್ಕೂ ಬರುತ್ತಿಲ್ಲ. ಗ್ರಾಮೀಣ ಭಾರತದ ಹೆಚ್ಚುತ್ತಿರುವ ಆರ್ಥಿಕ ಒತ್ತಡವನ್ನು ನಾವು ಗಂಭೀರವಾಗಿ ನೋಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ಇದಕ್ಕಾಗಿ ಗ್ರಾಮೀಣ ಭಾರತವನ್ನು ದೇಶದ ಆರ್ಥಿಕ ನೀತಿಗಳ ಕೇಂದ್ರವನ್ನಾಗಿ ಮಾಡಬೇಕಿದೆ.

ಇದಲ್ಲದೆ, ಉತ್ಪಾದನೆಯ ದೊಡ್ಡ ಭಾಗವನ್ನು ಕಾರ್ಪೊರೇಟ್ ನಿಯಂತ್ರಿಸಿದರೆ ಕಡಿಮೆ ಆದಾಯದ ಗುಂಪುಗಳಿಗೆ ಇದು ದೊಡ್ಡ ಸವಾಲಾಗುತ್ತದೆ. ಆದ್ದರಿಂದ, ನಾವು ಘನತೆಯಿಂದ ಬದುಕಬೇಕಾದರೆ ಈ ಕಾರ್ಪೊರೇಟೀಕರಣವನ್ನು ನಿಲ್ಲಿಸಲು ಒಟ್ಟಾಗಿ ನಿಲ್ಲಬೇಕಾಗಿದೆ. ಈ ಆತಂಕಕಾರಿ ಪರಿಸ್ಥಿತಿಯಲ್ಲಿ, ಹೆಚ್ಚುತ್ತಿರುವ ಕಾರ್ಪೊರೇಟೀಕರಣದ ವಿರುದ್ಧ ಧ್ವನಿ ಎತ್ತಲು ಒಗ್ಗೂಡಬೇಕಾಗಿದೆ ಮತ್ತು ಭಾರತದ ಹಳ್ಳಿಗಳಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಲು ಹೊಸ ಕಾನೂನುಗಳಿಗಾಗಿ ಒತ್ತಾಯಿಸಬೇಕಿರುವ ಹೊತ್ತು ಇದಾಗಿದೆ.

(ಕೃಪೆ:countercurrents.org)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ತರುಣ್ ಕುಮಾರ್

contributor

Similar News