ಬಿಜೆಪಿಯ ಪ್ರಮುಖ ನಗರ ಮತದಾರರ ನೆಲೆಗೆ ಬಿರುಕು? ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶಗಳು ಬಹಿರಂಗಪಡಿಸುವುದೇನು?
►ಸುಶೀಮ್ ಮುಕುಲ್ – Indiatoday. in ವರದಿ
Photo Credit : X/@BhajanlalBjp
ರಾಜಸ್ಥಾನದ ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಒಟ್ಟು 10,235 ಘೋಷಿತ ವಾರ್ಡ್ ಗಳ ಪೈಕಿ 4,179 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅಧಿಕಾರಕ್ಕೇರಿದೆ. ಕಾಂಗ್ರೆಸ್ 3,613 ಸ್ಥಾನಗಳನ್ನು ಗಳಿಸಿದೆ. ಹಿಂದಿನ ಚುನಾವಣೆಗಳಿಗೆ (2019ರಿಂದ 2021) ಹೋಲಿಸಿದರೆ ಬಿಜೆಪಿಯ ಸ್ಥಾನಗಳ ಹಂಚಿಕೆಯು ಶೇಕಡಾ 35.7ರಿಂದ ಶೇಕಡಾ 40.8ಕ್ಕೆ ಏರಿಕೆಯಾಗಿದೆ. ಆದರೆ ಕಾಂಗ್ರೆಸ್ ಶೇಕಡಾ 40.7ರಿಂದ ಶೇಕಡಾ 35.3ಕ್ಕೆ ಕುಸಿದಿದೆ. ಪ್ರಧಾನಿ ನರೇಂದ್ರ ಮೋದಿ ಇದನ್ನು ‘ಸುಳ್ಳಿನ ಅಬ್ಬರದ ವಿರುದ್ಧ ಸತ್ಯದ ವಿಜಯ’ ಎಂದು ಬಣ್ಣಿಸಿದ್ದಾರೆ. ಆದರೆ ರಾಜಸ್ಥಾನದ ನಗರಗಳು ಮತ್ತು ಪಟ್ಟಣಗಳಲ್ಲಿ ಬಿಜೆಪಿಯ ಈ ಗೆಲುವಿನ ಹಿಂದೆ ಬಿಜೆಪಿಗೆ ದೊಡ್ಡ ತೊಂದರೆ ಎದುರಾಗುವ ಮುನ್ಸೂಚನೆ ಅಡಗಿರಬಹುದು.
ಈ ಗೆಲುವು ಬಿಜೆಪಿಯ ಸಾಂಪ್ರದಾಯಿಕ ನಿಷ್ಠಾವಂತ ನಗರ ಮತದಾರರ ವಲಯದಲ್ಲಿನ ಅತೃಪ್ತಿಯನ್ನು ಬಹಿರಂಗಪಡಿಸುತ್ತದೆ. ಬಲವಾದ ನಗರ ಸಂಘಟನೆಯ ಬೆಂಬಲವಿರುವ ಆಡಳಿತಾರೂಢ ಸರ್ಕಾರದಿಂದ ನಿರೀಕ್ಷಿಸಬಹುದಾದಂತಹ ಸ್ಪಷ್ಟ ಹಾಗೂ ದೊಡ್ಡ ಮಟ್ಟದ ನಗರಾಡಳಿತದ ಗೆಲುವು ಇದಾಗಿರಲಿಲ್ಲ.
ಬಿಜೆಪಿಯು ಹೆಚ್ಚಿನ ಸಂಖ್ಯೆಯಲ್ಲಿ ವಾರ್ಡ್ ಗಳನ್ನು ಗೆದ್ದಿರುವುದು ಮತ್ತು ಕಾಂಗ್ರೆಸ್ ಗಿಂತ ಮುನ್ನಡೆ ಸಾಧಿಸಿರುವುದು ಅದರ ಗೆಲುವಿಗೆ ಕಾರಣವಾದರೂ, ಭರತ್ ಪುರ, ಪಾಲಿ, ಅಜ್ಮೇರ್, ಬಿಕಾನೇರ್, ಜೋಧ್ಪುರ ಮತ್ತು ಅಲ್ವಾರ್ ಜಿಲ್ಲೆಗಳ ಮುನ್ಸಿಪಲ್ ಕಾರ್ಪೊರೇಷನ್ ಗಳಲ್ಲಿ ಪಕ್ಷವು ಸ್ಪಷ್ಟ ಬಹುಮತ ಗಳಿಸುವಲ್ಲಿ ವಿಫಲವಾಗಿರುವುದು ಸ್ಪಷ್ಟ ಎಚ್ಚರಿಕೆಯ ಗಂಟೆಯಾಗಿದೆ.
2024ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಎಲ್ಲಾ 7 ಲೋಕಸಭಾ ಕ್ಷೇತ್ರಗಳು ಬಿಜೆಪಿಯ ಪಾಲಾಗಿದ್ದವು. ಇವುಗಳಲ್ಲಿ ಹಲವು ಕ್ಷೇತ್ರಗಳು ಬಿಜೆಪಿಯ ಭದ್ರಕೋಟೆಗಳಾಗಿವೆ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ, ರಾಜ್ಯ ಬಿಜೆಪಿ ಅಧ್ಯಕ್ಷ ಮದನ್ ರಾಥೋಡ್, ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ವಸುಂಧರಾ ರಾಜೆ ಮತ್ತು ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್, ಗಜೇಂದ್ರ ಸಿಂಗ್ ಶೇಖಾವತ್, ಭೂಪೇಂದರ್ ಯಾದವ್ ಹಾಗೂ ಭಾಗೀರಥ್ ಚೌಧರಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರೊಂದಿಗೆ ನಿಕಟ ನಂಟನ್ನು ಹೊಂದಿವೆ.
ಮತ್ತೊಂದೆಡೆ, ಪಕ್ಷೇತರರು 2,273 ವಾರ್ಡ್ ಗಳನ್ನು ಗೆದ್ದಿದ್ದಾರೆ. ಆದರೆ 2019–21ರ ಚುನಾವಣಾ ಅವಧಿಯಲ್ಲಿದ್ದ ಶೇಕಡಾ 22.4ರಷ್ಟು ಮತಗಳಿಕೆಗೆ ಹೋಲಿಸಿದರೆ, ಈ ಬಾರಿ ಅವರ ಪಾಲು ಶೇಕಡಾ 22.2ರಷ್ಟಿದ್ದು, ಸುಮಾರು ಬದಲಾವಣೆ ಇಲ್ಲದೆ ಉಳಿದಿದೆ.
ಆದ್ದರಿಂದ, ಈ ಚುನಾವಣಾ ಫಲಿತಾಂಶಗಳು ಬಿಜೆಪಿಯ ಸಾಂಪ್ರದಾಯಿಕ ನಿಷ್ಠಾವಂತ ನಗರ ಮತದಾರರ ನೆರೆಯು ಪಕ್ಷವನ್ನು ಸಂಪೂರ್ಣವಾಗಿ ಕೈಬಿಟ್ಟಿದೆ ಎಂಬುದನ್ನು ತೋರಿಸುವುದಿಲ್ಲ; ಬದಲಿಗೆ, ಅದರಲ್ಲಿ ಕಳವಳಕಾರಿ ಬಿರುಕುಗಳು ಮೂಡಿರುವುದನ್ನು ಸೂಚಿಸುತ್ತವೆ.
ಜನಸಂಘದ ಕಾಲದಿಂದ ರೂಪುಗೊಂಡು, 1980ರ ದಶಕದಿಂದೀಚೆಗೆ ಬಿಜೆಪಿಯಿಂದ ದೃಢವಾಗಿರುವ ರಾಜಸ್ಥಾನದ ನಗರ ಮತದಾರರ ನೆಲೆಯಲ್ಲಿ ವ್ಯಾಪಾರಿಗಳು, ಅಂಗಡಿ ಮಾಲೀಕರು, ಬನಿಯಾ–ವೈಶ್ಯ ಹಾಗೂ ಜೈನ ಸಮುದಾಯಗಳು, ವೇತನದಾರ ಮಧ್ಯಮ ವರ್ಗದ ಕೆಲವು ವಿಭಾಗಗಳು ಮತ್ತು ಆರ್ಎಸ್ಎಸ್ ಜಾಲದೊಂದಿಗೆ ನಂಟಿರುವ ಮತದಾರರು ಸೇರಿದ್ದಾರೆ. ಪಕ್ಷವು ಗ್ರಾಮೀಣ ಕ್ಷೇತ್ರಗಳಲ್ಲಿ ಹಿನ್ನಡೆ ಎದುರಿಸಿದಾಗಲೂ, ಈ ಜನರ ಬೆಂಬಲವು ರಾಜಸ್ಥಾನದ ನಗರಗಳನ್ನು ಬಿಜೆಪಿಯ ಭದ್ರಕೋಟೆಗಳನ್ನಾಗಿ ಮಾಡಲು ಸಹಾಯ ಮಾಡಿದೆ.
ರಾಜಸ್ಥಾನದ 309 ನಗರ ಸ್ಥಳೀಯ ಸಂಸ್ಥೆಗಳಿಗೆ ಸೆಪ್ಟೆಂಬರ್ 9 ಮತ್ತು 11ರಂದು ಮತದಾನ ನಡೆದಿತ್ತು. ಹಿಂದಿನ ಚುನಾವಣೆಯು 2019ರ ನವೆಂಬರ್ ನಿಂದ 2021ರ ಜನವರಿ ನಡುವಿನ ನಾಲ್ಕು ಹಂತಗಳಲ್ಲಿ ನಡೆದಿತ್ತು. 2026ರ ಚುನಾವಣೆಗೂ ಮುನ್ನ ನಡೆದ ವಾರ್ಡ್ ಮರುವಿಂಗಡನೆಯಿಂದಾಗಿ 2,770 ಹೊಸ ವಾರ್ಡ್ ಗಳು ಸೇರ್ಪಡೆಗೊಂಡಿರುವುದರಿಂದ, ಎರಡೂ ಚುನಾವಣೆಗಳನ್ನು ನೇರವಾಗಿ ಹೋಲಿಸುವುದು ಕಷ್ಟ. ಆದರೂ, 7,474 ವಾರ್ಡ್ ಗಳಲ್ಲಿ 2,666 ಸ್ಥಾನಗಳಲ್ಲಿದ್ದ ಬಿಜೆಪಿಯ ಗೆಲುವು, ಪ್ರಸ್ತುತ 10,235 ಘೋಷಿತ ವಾರ್ಡ್ ಗಳಲ್ಲಿ 4,179 ಸ್ಥಾನಗಳಿಗೆ ಏರಿಕೆಯಾಗಿರುವುದು, ಅದರ ಸ್ಥಾನಗಳ ಹಂಚಿಕೆಯಲ್ಲಿ ಶೇಕಡಾ ಐದರಷ್ಟು ಸುಧಾರಣೆಯಾಗಿರುವುದನ್ನು ತೋರಿಸುತ್ತದೆ. ಕಾಂಗ್ರೆಸ್ ಪಕ್ಷದ ಸ್ಥಾನಗಳ ಪಾಲು ಸರಿಸುಮಾರು ಅದೇ ಪ್ರಮಾಣದಲ್ಲಿ ಕುಸಿದಿದೆ.
►ಬಿಜೆಪಿ ಗೆದ್ದಿದೆ, ಆದರೆ ಇದು ಭರ್ಜರಿ ಜಯವಲ್ಲ
ನಗರ ಪ್ರದೇಶದ ರಾಜಸ್ಥಾನವು ಸಾಂಪ್ರದಾಯಿಕವಾಗಿ ಬಿಜೆಪಿಗೆ ವಿಶ್ವಾಸಾರ್ಹ ರಾಜಕೀಯ ನೆಲೆಯನ್ನು ಒದಗಿಸಿದೆ. ವ್ಯಾಪಾರಿಗಳು, ಅಂಗಡಿ ಮಾಲೀಕರು, ವೇತನದಾರ ಮಧ್ಯಮ ವರ್ಗದವರು ಹಾಗೂ ಬನಿಯಾ–ವೈಶ್ಯ, ಜೈನ ಮತ್ತು ಇತರ ‘ಮೇಲ್ವರ್ಗದ’ ಸಮುದಾಯಗಳ ಕೆಲವು ವಿಭಾಗಗಳು ಇದರ ಭಾಗವಾಗಿವೆ. ಬಿಜೆಪಿಯ ಸಾಂಸ್ಥಿಕ ಜಾಲ, ಸಿದ್ಧಾಂತದ ಆಕರ್ಷಣೆ ಮತ್ತು ನಗರದ ಹಿಂದೂ ಮತದಾರರ ಅಚ್ಚುಮೆಚ್ಚಿನ ಪಕ್ಷವೆಂಬ ಖ್ಯಾತಿಯು ಸ್ಥಳೀಯ ಅತೃಪ್ತಿಯನ್ನು ಎದುರಿಸಲು ಸಾಮಾನ್ಯವಾಗಿ ಅದಕ್ಕೆ ನೆರವಾಗಿವೆ.
ಆದರೂ ಸಹ, 2026ರಲ್ಲಿ ಈ ಸಮುದಾಯಗಳು ಬಿಜೆಪಿಯಿಂದ ದೂರ ಸರಿದಿವೆ ಎಂದು ದೃಢಪಡಿಸುವ ಯಾವುದೇ ಜಾತಿವಾರು ಚುನಾವಣೋತ್ತರ ಸಮೀಕ್ಷೆ ಲಭ್ಯವಿಲ್ಲ. ಅಭ್ಯರ್ಥಿ, ಸ್ಥಳೀಯ ಆಡಳಿತದ ಕಾರ್ಯಕ್ಷಮತೆ, ನಾಗರಿಕ ಮೂಲಸೌಕರ್ಯಗಳ ಸ್ಥಿತಿ ಮತ್ತು ಬಣ ರಾಜಕೀಯದ ಸಮೀಕರಣಗಳನ್ನು ಅವಲಂಬಿಸಿ ನಿಷ್ಠೆಯು ಸ್ವಲ್ಪ ಮಟ್ಟಿಗೆ ಸಡಿಲಗೊಂಡಿದೆ ಎಂದು ತರ್ಕಬದ್ಧವಾಗಿ ತೀರ್ಮಾನಿಸಬಹುದು.
ಬಿಜೆಪಿಯು ಶೇಕಡಾ 40.8ರಷ್ಟು ವಾರ್ಡ್ ಗಳನ್ನು ಗೆದ್ದುಕೊಂಡಿದೆ, ಆದರೆ ಕಾಂಗ್ರೆಸ್ ಗಿಂತ ಅದರ ಮತಗಳ ಮುನ್ನಡೆಯು ಕೇವಲ ಶೇಕಡಾ 0.94ರಷ್ಟಷ್ಟೇ ಇತ್ತು. ಪಕ್ಷವು ಜೈಪುರ, ಕೋಟಾ, ಉದಯಪುರ ಮತ್ತು ಭಿಲ್ವಾರಾದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ಪಷ್ಟ ಬಹುಮತ ಗಳಿಸಿದೆ, ಆದರೆ 10 ನಗರ ನಿಗಮಗಳ ಪೈಕಿ ಕೇವಲ ನಾಲ್ಕರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಮತ್ತೊಂದೆಡೆ, ಶ್ರೀ ಕರ್ಣಿ ಸೇನೆ ನೇತೃತ್ವದಲ್ಲಿ UGC ಜಾತಿ ಸಮಾನತೆಯ ಮಾನದಂಡಗಳ ವಿರುದ್ಧ ಭಾರಿ ಪ್ರತಿಭಟನೆ ನಡೆದಿದ್ದ ಬಿಕಾನೇರ್ನಲ್ಲಿ ಕಾಂಗ್ರೆಸ್ ಜಯಗಳಿಸಿದೆ.
►ಬಿಜೆಪಿ, ಕಾಂಗ್ರೆಸ್ ನಲ್ಲಿ ಬಂಡಾಯ: ಕಣಕ್ಕಿಳಿದ ಪಕ್ಷೇತರರು
ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಅವರ ತವರು ಕ್ಷೇತ್ರವಾದ ಭರತ್ ಪುರವನ್ನು ಪಕ್ಷೇತರರು ಗೆದ್ದುಕೊಂಡಿದ್ದಾರೆ. ಅಜ್ಮೇರ್, ಅಲ್ವಾರ್, ಜೋಧ್ಪುರ ಮತ್ತು ಪಾಲಿಯಂತಹ ಪ್ರಮುಖ ನಗರಗಳಲ್ಲಿ ನಡೆದ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಳು ಸ್ಪಷ್ಟ ಬಹುಮತವಿಲ್ಲದ ಫಲಿತಾಂಶವನ್ನು ನೀಡಿವೆ. ಈ ರಾಜಕೀಯವಾಗಿ ಮಹತ್ವದ ನಿಗಮಗಳ ಫಲಿತಾಂಶಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿದಾಗ ಚಿತ್ರಣವು ಇನ್ನಷ್ಟು ಸ್ಪಷ್ಟವಾಗುತ್ತದೆ.
ಭರತ್ಪುರದಲ್ಲಿ 65 ವಾರ್ಡ್ ಗಳ ಪೈಕಿ ಪಕ್ಷೇತರರು 36 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದಿದ್ದಾರೆ. ಬಿಜೆಪಿ 20 ಮತ್ತು ಕಾಂಗ್ರೆಸ್ 7 ಸ್ಥಾನಗಳನ್ನು ಮಾತ್ರ ಗಳಿಸಿವೆ. ಈ ಫಲಿತಾಂಶವು ತೀವ್ರ ಸ್ಥಳೀಯ ಬಂಡಾಯವನ್ನು ತೋರಿಸುತ್ತದೆ. ಇದರ ರಾಜಕೀಯ ಪ್ರಭಾವದಿಂದಾಗಿ, ಪುರಸಭೆ ಚುನಾವಣೆಯಲ್ಲಿ ಸಾಮಾನ್ಯ ಹಿನ್ನಡೆಯಾಗುವುದಕ್ಕಿಂತ ಬಿಜೆಪಿಗೆ ಇಲ್ಲಿ ಸೋಲುಂಟಾಗಿರುವುದು ಹೆಚ್ಚು ರಾಜಕೀಯ ನಷ್ಟವನ್ನುಂಟು ಮಾಡಿದೆ.
ಈ ಹಿಂದೆ ಭರತ್ಪುರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. 2019ರಲ್ಲಿ ಅದು 65ರ ಪೈಕಿ ಕೇವಲ 18 ವಾರ್ಡ್ ಗಳನ್ನು ಗೆದ್ದಿದ್ದರೂ, ಪಕ್ಷೇತರರು ಮತ್ತು ಬಿಎಸ್ಪಿ ಕೌನ್ಸಿಲರ್ಗಳ ಬೆಂಬಲದೊಂದಿಗೆ ಮಂಡಳಿಯನ್ನು ರಚಿಸುವಲ್ಲಿ ಯಶಸ್ವಿಯಾಗಿತ್ತು.
ಚುನಾವಣೆಗೂ ಮುನ್ನ ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡರಲ್ಲೂ ವ್ಯಾಪಕ ಅಸಮಾಧಾನವಿತ್ತು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಉಭಯ ಪಕ್ಷಗಳಿಂದ ಟಿಕೆಟ್ ನಿರಾಕರಿಸಲ್ಪಟ್ಟ ಹಲವು ಆಕಾಂಕ್ಷಿಗಳು ಪಕ್ಷೇತರರಾಗಿ ಕಣಕ್ಕಿಳಿದಿದ್ದರು.
►ರಾಜ್ಯ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಭದ್ರಕೋಟೆಗಳಲ್ಲಿ ಬಿಜೆಪಿಗೆ ಮುಖಭಂಗ
ಪಾಲಿಯಲ್ಲಿ ಕಾಂಗ್ರೆಸ್ 29 ವಾರ್ಡ್ ಗಳನ್ನು, ಬಿಜೆಪಿ 21 ಮತ್ತು ಪಕ್ಷೇತರರು 15 ಸ್ಥಾನಗಳನ್ನು ಗೆದ್ದಿದ್ದಾರೆ. ಪಾಲಿ ಕ್ಷೇತ್ರವು ಬಿಜೆಪಿ ರಾಜ್ಯ ಅಧ್ಯಕ್ಷ ಮದನ್ ರಾಥೋಡ್ ಅವರೊಂದಿಗೆ ನಂಟನ್ನು ಹೊಂದಿದೆ. ಇಲ್ಲಿ ಪಕ್ಷವು ಅತಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲು ವಿಫಲವಾಗಿರುವುದು ಟಿಕೆಟ್ ಹಂಚಿಕೆ, ಸ್ಥಳೀಯ ನಾಯಕತ್ವ ಮತ್ತು ಸಾಂಸ್ಥಿಕ ಒಗ್ಗಟ್ಟಿನ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಝಾಲಾವರ್ನಲ್ಲಿ ಬಿಜೆಪಿ 13 ವಾರ್ಡ್ ಗಳನ್ನು ಗೆದ್ದರೆ, ಕಾಂಗ್ರೆಸ್ ಒಟ್ಟು 45 ಮುನ್ಸಿಪಲ್ ಕೌನ್ಸಿಲ್ ವಾರ್ಡ್ ಗಳ ಪೈಕಿ 29ರಲ್ಲಿ ಜಯಗಳಿಸಿದೆ. ಝಾಲಾವರ್ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ರಾಜಕೀಯ ಭದ್ರಕೋಟೆಯಾಗಿದೆ. ಆದರೆ ಬಿಜೆಪಿ ಪ್ರತ್ಯೇಕ ಝಾಲ್ರಾಪಟನ್ ಪುರಸಭೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಫಲಿತಾಂಶವು ಕೇವಲ ಬಿಜೆಪಿ ಎಂಬ ಹೆಸರಿನ ಬಲದಿಂದ ಮಾತ್ರ ಸ್ಥಳೀಯ ಆಡಳಿತ ವಿರೋಧಿ ಅಲೆಯನ್ನು ಮೀರಿ ನಿಲ್ಲಲು ಸಾಧ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ.
ಅಜ್ಮೇರ್ನಲ್ಲೂ 80 ವಾರ್ಡ್ ಗಳ ಪೈಕಿ ಕಾಂಗ್ರೆಸ್ 37 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 32 ಮತ್ತು ಪಕ್ಷೇತರರು 11 ಸ್ಥಾನಗಳನ್ನು ಗಳಿಸಿದ್ದಾರೆ. ಅಜ್ಮೇರ್ ಬಹಳಕಾಲದಿಂದ ಬಲವಾದ ಬಿಜೆಪಿ–ಆರ್ಎಸ್ಎಸ್ ನೆಲೆ ಹೊಂದಿದ್ದು, ಹಿಂದೆ ಬಿಜೆಪಿ ನಿಯಂತ್ರಣದಲ್ಲಿತ್ತು. ಅಜ್ಮೇರ್ನಲ್ಲಿನ ಸೋಲಿಗೆ ಬಿಜೆಪಿಯ ಮಾಜಿ ಮೇಯರ್ ಧರ್ಮೇಂದ್ರ ಗೆಹ್ಲೋಟ್ ಅವರ ಬಂಡಾಯವೂ ಕಾರಣವಾಗಿರಬಹುದು. ಇದು ಪಕ್ಷದ ಸ್ಥಳೀಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ. ‘ವಸುಂಧರಾ ರಾಜೆ ಅವರಿಗೆ ಆಪ್ತರೆಂದು ಪರಿಗಣಿಸಲ್ಪಟ್ಟಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ದಕ್ಷಿಣ ಅಜ್ಮೇರ್ ಶಾಸಕಿ ಅನಿತಾ ಭಾಡೆಲ್ ಅವರೊಂದಿಗೆ ನಂಟಿರುವ ಕ್ಷೇತ್ರಗಳಲ್ಲಿ ಬಿಜೆಪಿ ಕಳಪೆ ಪ್ರದರ್ಶನ ನೀಡಿದೆ’ ಎಂದು ‘ರಾಜಸ್ಥಾನ ತಕ್’ನ ಶರತ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಜೋಧ್ಪುರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 44 ವಾರ್ಡ್ ಗಳನ್ನು ಗೆಲ್ಲುವ ಮೂಲಕ ಸಮಬಲ ಸಾಧಿಸಿವೆ. ಇದರಿಂದಾಗಿ ಮಂಡಳಿ ರಚನೆಯಲ್ಲಿ ಪಕ್ಷೇತರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಅಲ್ವಾರ್ನಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸ್ಪಷ್ಟ ಬಹುಮತ ಗಳಿಸುವಲ್ಲಿ ವಿಫಲವಾಗಿದೆ. ಜೋಧ್ಪುರ ಮತ್ತು ಅಲ್ವಾರ್ ಕ್ಷೇತ್ರಗಳು ಕ್ರಮವಾಗಿ ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಭೂಪೇಂದರ್ ಯಾದವ್ ಅವರೊಂದಿಗೆ ನಂಟನ್ನು ಹೊಂದಿರುವುದರಿಂದ, ಈ ಅನಿರ್ದಿಷ್ಟ ಫಲಿತಾಂಶಗಳು ವ್ಯಾಪಕ ರಾಜಕೀಯ ಮಹತ್ವವನ್ನು ಪಡೆದುಕೊಂಡಿವೆ. ಅಲ್ಲದೆ, ಇದು ಹಿರಿಯ ನಾಯಕರ ಭದ್ರಕೋಟೆಗಳಲ್ಲಿ ಬಿಜೆಪಿಗೆ ಎದುರಾದ ಗಮನಾರ್ಹ ಹಿನ್ನಡೆಯಾಗಿದೆ.
ಜೋಧ್ ಪುರ ಮತ್ತು ಅಲ್ವಾರ್ ನಲ್ಲಿ ಬಿಜೆಪಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡದಿರಲು ಆ ಎರಡು ಕ್ಷೇತ್ರಗಳ ಕೇಂದ್ರ ಸಚಿವರ ಮೇಲಿನ ಅತೃಪ್ತಿಯೇ ಕಾರಣ ಎಂದು ‘ರಾಜಸ್ಥಾನ ತಕ್’ನ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಹಾಗಿದ್ದರೂ, ಕಾಂಗ್ರೆಸ್ ಇದರ ಪ್ರಯೋಜನ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದಿದ್ದಾರೆ ಅವರು.
‘ಗಜೇಂದ್ರ ಸಿಂಗ್ ಶೇಖಾವತ್ ಕಠಿಣ ಪರಿಶ್ರಮ ಪಟ್ಟಿದ್ದಾರೆ. ಆದರೆ ಪೊಖ್ರಾನ್ ನಲ್ಲಿ ಸ್ಪಷ್ಟ ಬಹುಮತ ಗಳಿಸಲು ಅಥವಾ ಜೋಧ್ಪುರದಲ್ಲಿ ಸ್ಪರ್ಧೆಯನ್ನು ಸರಿಪಡಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅಲ್ವಾರ್ನಲ್ಲಿ ಭೂಪೇಂದರ್ ಯಾದವ್ ವಿರುದ್ಧ ಅಸಮಾಧಾನವಿದೆ, ಆದರೆ ಇದರಿಂದ ಕಾಂಗ್ರೆಸ್ ಗೆ ಲಾಭವಾಗದೆ ಪಕ್ಷೇತರರಿಗೆ ಏಕೆ ಪ್ರಯೋಜನವಾಯಿತು? ಆ ಬಗ್ಗೆ ಕಾಂಗ್ರೆಸ್ ಗಂಭೀರವಾಗಿ ಯೋಚಿಸಬೇಕು’ ಎಂದು ಶರತ್ ಕುಮಾರ್ ಹೇಳಿದ್ದಾರೆ.
►UGC ಸಮಾನತೆಯ ಮಾನದಂಡಗಳ ವಿರುದ್ಧ ಕರ್ಣಿ ಸೇನೆ ಪ್ರತಿಭಟನೆ ಬಿಜೆಪಿಯ ಮತಗಳನ್ನು ಕಸಿದುಕೊಂಡಿತೇ?
ಬಿಕಾನೇರ್ನಲ್ಲಿ 80 ವಾರ್ಡ್ ಗಳ ಪೈಕಿ ಕಾಂಗ್ರೆಸ್ 42 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದಿದೆ, ಆದರೆ ಬಿಜೆಪಿ ಬಹಳ ಹಿಂದುಳಿದಿದೆ. ಈ ನಗರವು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರೊಂದಿಗೆ ನಂಟನ್ನು ಹೊಂದಿದ್ದು, ಇಲ್ಲಿಯವರೆಗೆ ಬಿಜೆಪಿ ನಿಯಂತ್ರಣದಲ್ಲಿದ್ದ ನಿಗಮವಾಗಿತ್ತು. UGCಯ 2026ರ ಜಾತಿ ಸಮಾನತೆಯ ನಿಯಮಗಳ ವಿರುದ್ಧ ರಜಪೂತ್ ಸಮುದಾಯದ ‘ಶ್ರೀ ರಜಪೂತ್ ಕರ್ಣಿ ಸೇನೆ’ಯು ತೀವ್ರ ಪ್ರತಿಭಟನೆ ನಡೆಸಿತ್ತು ಎಂಬುದನ್ನು ಗಮನಿಸಬೇಕು. ಅಲ್ಲದೆ, ಬಿಜೆಪಿಗೆ ಮತ ಹಾಕುವುದಿಲ್ಲವೆಂದು ಆ ಗುಂಪು ಶಪಥ ಮಾಡಿತ್ತು.
ಚುನಾವಣಾ ಫಲಿತಾಂಶಗಳ ನಂತರ, ಕರ್ಣಿ ಸೇನೆಯ ಮುಖ್ಯಸ್ಥ ಮಹಿಪಾಲ್ ಸಿಂಗ್ ಮಕ್ರಾನ್, ತಮ್ಮ ‘ಸ್ವರ್ಣ ನ್ಯಾಯ ಮಂಚ್’ 1,500ಕ್ಕೂ ಹೆಚ್ಚು ಪಕ್ಷೇತರರನ್ನು ಬೆಂಬಲಿಸಿತ್ತು ಮತ್ತು ಬಿಕಾನೇರ್ನಲ್ಲಿ ಬಿಜೆಪಿ ಸೋಲಲು ಈ ಅಭಿಯಾನವು ಕಾರಣವಾಯಿತು ಎಂದು ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಉಲ್ಲೇಖಿಸಿದೆ. ಆದರೆ ಬಿಜೆಪಿ ಈ ವಾದವನ್ನು ತಳ್ಳಿಹಾಕಿದ್ದು, ರಾಜಸ್ಥಾನದ ಪುರಸಭೆ ಚುನಾವಣೆಯಲ್ಲಿ ಪಕ್ಷೇತರರು ಸಾಂಪ್ರದಾಯಿಕವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ ಹಾಗೂ ಅವರ ಯಶಸ್ಸಿಗೆ ಕರ್ಣಿ ಸೇನೆಯ ಅಭಿಯಾನವೇ ಕಾರಣವಲ್ಲ ಎಂದು ವಾದಿಸಿದೆ.
►ರಸ್ತೆಗಳು, ಚರಂಡಿಗಳು ಮತ್ತು ಬಂಡಾಯಗಾರರು ಕೂಡ ನಿರ್ಣಾಯಕ ಪಾತ್ರ ವಹಿಸಿದರು. ಸಿಜೆಪಿ ಕೂಡ ಒಂದು ಅಂಶವೇ?
ರಾಜಸ್ಥಾನದಲ್ಲಿ ನಾಗರಿಕ ಸೌಲಭ್ಯಗಳ ಕೊರತೆ ಮತ್ತು ಕಳಪೆ ನಿರ್ವಹಣೆಯ ಬಗ್ಗೆ ಸಾರ್ವಜನಿಕವಾಗಿ ಕೇಳಿಬಂದ ತೀವ್ರ ದೂರುಗಳ ನಡುವೆಯೇ ಈ ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆದಿವೆ. ಹೊಂಡಗಳಿಂದ ಕೂಡಿದ ರಸ್ತೆಗಳು, ಜಲಾವೃತಗೊಂಡ ಪ್ರದೇಶಗಳು, ಉಕ್ಕಿ ಹರಿಯುವ ಚರಂಡಿಗಳು, ಕಸದ ರಾಶಿಗಳು ಮತ್ತು ಕಳಪೆ ಪೌರ ಸೇವೆಗಳ ಬಗ್ಗೆ ‘ಖುರ್ಪೆಂಚ್’ (ತಪ್ಪುಗಳನ್ನು ಎತ್ತಿ ತೋರಿಸುವ ಎಕ್ಸ್ ಹ್ಯಾಂಡಲ್) ಆಗಾಗ್ಗೆ ಧ್ವನಿ ಎತ್ತಿತ್ತು.
ಚುನಾವಣೆಯ ಸಮಯವು ಬಿಜೆಪಿಗೆ ಮತ್ತಷ್ಟು ಸವಾಲನ್ನು ತಂದೊಡ್ಡಿತು. ಈ ಕೊರತೆಗಳನ್ನು ಮುಚ್ಚಿಹಾಕುವುದು ಕಷ್ಟವಾಗಿದ್ದ ಮುಂಗಾರು ಮಳೆಯ ಅವಧಿಯಲ್ಲೇ ಚುನಾವಣೆಗಳು ನಡೆದವು. ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗಳಂತೆ ಅಲ್ಲದೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಕಟ್ಟುನಿಟ್ಟಾಗಿ ಸ್ಥಳೀಯ ವಿಷಯಗಳನ್ನು ಅವಲಂಬಿಸಿರುತ್ತವೆ. ಮತದಾರರು ತಾವು ವಾಸಿಸುವ ಮನೆಯ ಮುಂದಿನ ರಸ್ತೆ, ಚರಂಡಿ ಹಾಗೂ ಸ್ಥಳೀಯ ಕೌನ್ಸಿಲರ್ ಕೆಲಸವನ್ನು ಗಮನಿಸಿ, ಪಕ್ಷದ ಸಿದ್ಧಾಂತದ ಬಗ್ಗೆ ಯೋಚಿಸುವ ಮುನ್ನವೇ ಅಭ್ಯರ್ಥಿಯನ್ನು ನಿರ್ಣಯಿಸುತ್ತಾರೆ.
ಟಿಕೆಟ್ ನಿರಾಕರಣೆಯು ಹಲವು ಬಂಡಾಯಗಾರರನ್ನು ಸೃಷ್ಟಿಸಿತು. ಇವರಲ್ಲಿ ಅನೇಕರು ಪಕ್ಷೇತರರಾಗಿ ಕಣಕ್ಕಿಳಿದು, ಸಾಂಪ್ರದಾಯಿಕ ಬಿಜೆಪಿ ಮತದಾರರಿಗೆ ಕಾಂಗ್ರೆಸ್ ಗೆ ಮತ ಹಾಕದೆಯೇ ಅಧಿಕೃತ ಅಭ್ಯರ್ಥಿಯನ್ನು ವಿರೋಧಿಸಲು ಒಂದು ಮಾರ್ಗವನ್ನು ಮಾಡಿಕೊಟ್ಟರು. ಭರತ್ಪುರ ಮತ್ತು ಇತರ ಕೆಲವು ಅತಂತ್ರ ಸ್ಥಳೀಯ ಸಂಸ್ಥೆಗಳ ಫಲಿತಾಂಶವನ್ನು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಹಾಗಂದ ಮಾತ್ರಕ್ಕೆ ಇದು ರಾಜ್ಯವ್ಯಾಪಿ ಪಕ್ಷೇತರರ ಅಲೆಯಾಗಿದೆ ಎಂದರ್ಥವಲ್ಲ. ಈ ಬಾರಿ ಪಕ್ಷೇತರರು ಶೇಕಡಾ 22.21ರಷ್ಟು
ಚುನಾವಣೆಗೂ ಮುನ್ನ ಸಿಜೆಪಿಯ ‘ಸ್ಕೂಲ್ ಠೀಕ್ ಕರೋ’ (ಶಾಲೆಗಳನ್ನು ಸರಿಪಡಿಸಿ) ಅಭಿಯಾನವು ಕುಸಿದುಬಿದ್ದ ಸರ್ಕಾರಿ ಶಾಲೆಗಳ ಕುರಿತು ಯುವಕರ ಆಕ್ರೋಶವನ್ನು ಹೆಚ್ಚಿಸಿತ್ತು. ಇದರ ಬೆನ್ನಲ್ಲೇ ರಾಜಸ್ಥಾನ ಸರ್ಕಾರವು ಮೂರು ವರ್ಷಗಳ ಅವಧಿಯ 12,500 ಕೋಟಿ ರೂಪಾಯಿಗಳ ಮೂಲಸೌಕರ್ಯ ಯೋಜನೆಯನ್ನು ಘೋಷಿಸಿತ್ತು.
ಫಲಿತಾಂಶಗಳ ನಂತರ, ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರ ತವರು ಜಿಲ್ಲೆಯಾದ ಭರತ್ಪುರದಲ್ಲಿ ಬಿಜೆಪಿಗೆ ಎದುರಾದ ಹಿನ್ನಡೆಯನ್ನು ಸಿಜೆಪಿ ಉಲ್ಲೇಖಿಸಿದ್ದು, ಶಿಕ್ಷಣ ಮತ್ತು ಉದ್ಯೋಗವನ್ನು ನಿರ್ಲಕ್ಷಿಸುವುದರಿಂದ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ನಷ್ಟವಾಗಬಹುದು ಎಂದು ಎಚ್ಚರಿಸಿದೆ.
ಇದಲ್ಲದೆ, ಕುಮಾವತ್ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ, ಒಬಿಸಿ ಮತದಾರರ ಕೆಲವು ವಿಭಾಗಗಳಲ್ಲಿ ಮೂಡಿರುವ ಅತೃಪ್ತಿಯನ್ನು ಶರತ್ ಕುಮಾರ್ ಎತ್ತಿ ತೋರಿಸಿದ್ದಾರೆ. ಕುಮ್ಹಾರ್–ಪ್ರಜಾಪತ್ಗಳೊಂದಿಗೆ ಗುರುತಿಸಿಕೊಳ್ಳುವ ಕುಮಾವತ್ಗಳು ಪ್ರಮುಖ ಒಬಿಸಿ ಸಮುದಾಯವಾಗಿದ್ದು, ಜೈಪುರ ಹಾಗೂ ಅಜ್ಮೇರ್, ಭಿಲ್ವಾರಾ, ನಾಗೌರ್, ಸೀಕರ್ ಮತ್ತು ಪಾಲಿ ಭಾಗಗಳಲ್ಲಿ ಗಮನಾರ್ಹ ಜನಸಂಖ್ಯೆಯನ್ನು ಹೊಂದಿದ್ದಾರೆ.
ರಾಜಕೀಯ ಸ್ಥಾನಮಾನ ಕಲ್ಪಿಸದೆ ಬಿಜೆಪಿ ‘ಮೂಲ ಒಬಿಸಿ’ ಸಮುದಾಯಗಳನ್ನು ಶಾಶ್ವತ ಮತಬ್ಯಾಂಕ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕುಮಾರ್ ಎಚ್ಚರಿಸಿದ್ದಾರೆ.
ಚುನಾವಣೆಗೂ ಮುನ್ನ, ರಾಜಸ್ಥಾನ ಒಬಿಸಿ ಆಯೋಗದ ಸಮೀಕ್ಷೆಯು ಜಾಟ್ ಮತ್ತು ಗುರ್ಜರ್ ಸಂಘಟನೆಗಳಿಂದ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ರಾಜಕೀಯ ಸ್ಥಾನಮಾನಕ್ಕೆ ಸಂಬಂಧಿಸಿದ ಸಂಪೂರ್ಣ ವರದಿಯನ್ನು ಮುಚ್ಚಿಹಾಕಿ ಸರ್ಕಾರವು ಆಯ್ದ ದತ್ತಾಂಶವನ್ನು ಮಾತ್ರ ಬಿಡುಗಡೆ ಮಾಡಿದೆ ಎಂದು ಆ ಸಂಘಟನೆಗಳು ಆರೋಪಿಸಿದ್ದವು. ಈ ವಿವಾದ ಹಾಗೂ ಕುಮಾವತ್ ಮುಂತಾದ ಸಮುದಾಯಗಳಿಗೆ ಸೂಕ್ತ ಅವಕಾಶ ಸಿಕ್ಕಿಲ್ಲ ಎಂಬ ದೂರುಗಳು, ಒಬಿಸಿ ಮತಬ್ಯಾಂಕ್ ಮೇಲಿನ ಬಿಜೆಪಿಯ ಹಿಡಿತವನ್ನು ದುರ್ಬಲಗೊಳಿಸಿರಬಹುದು.
►ಕಾಂಗ್ರೆಸ್ ನ ಹಿನ್ನಡೆಯ ಲಾಭ ಪಡೆದ ಆಪ್ ಮತ್ತು ಆರ್ಎಲ್ಪಿ?
ಕುತೂಹಲಕಾರಿ ಸಂಗತಿಯೆಂದರೆ, ಬಿಜೆಪಿಗೆ ಎದುರಾದ ಹಿನ್ನಡೆಯು ಕಾಂಗ್ರೆಸ್ ಗೆ ನಿರ್ಣಾಯಕ ಲಾಭವಾಗಿ ಪರಿಣಮಿಸಲಿಲ್ಲ. ಬದಲಿಗೆ, ಹಲವೆಡೆ ಆಡಳಿತ ಪಕ್ಷದ ವಿರುದ್ಧದ ಅತೃಪ್ತಿಯಿಂದ ಸೃಷ್ಟಿಯಾದ ಜಾಗವನ್ನು ಸಣ್ಣ ಪಕ್ಷಗಳು ಮತ್ತು ಪಕ್ಷೇತರರು ಆಕ್ರಮಿಸಿಕೊಂಡವು. ಆಮ್ ಆದ್ಮಿ ಪಕ್ಷವು 42 ವಾರ್ಡ್ ಗಳಲ್ಲಿ ಜಯಗಳಿಸಿತು. ಇದರಲ್ಲಿ ಬಾರಾನ್ ಮುನ್ಸಿಪಲ್ ಕೌನ್ಸಿಲ್ ನ 60 ವಾರ್ಡ್ ಗಳ ಪೈಕಿ 31 ಸ್ಥಾನಗಳನ್ನು ಗೆಲ್ಲುವ ಮೂಲಕ, ಅಲ್ಲಿ ಕಳೆದ 15 ವರ್ಷಗಳಿಂದ ಕಾಂಗ್ರೆಸ್ನಲ್ಲಿದ್ದ ನಿಯಂತ್ರಣವನ್ನು ಆಪ್ ಅಂತ್ಯಗೊಳಿಸಿತು. ಮತ್ತೊಂದೆಡೆ, ಸಿಪಿಎಂ ಪಕ್ಷವು ನೋಖಾದ 45 ವಾರ್ಡ್ ಗಳ ಪೈಕಿ 29ನ್ನು ತನ್ನದಾಗಿಸಿಕೊಂಡರೆ, ನಾಗೌರ್ ಸಂಸದ ಹನುಮಾನ್ ಬೇನಿವಾಲ್ ನೇತೃತ್ವದ ‘ಆರ್ಎಲ್ಪಿ’ ಪಕ್ಷವು 2019–21ರ ಅವಧಿಯಲ್ಲಿದ್ದ 14 ವಾರ್ಡ್ ಗಳ ಗೆಲುವನ್ನು ಈ ಬಾರಿ 63ಕ್ಕೆ ಏರಿಸಿಕೊಂಡಿದೆ.
ಆರ್ಎಲ್ಪಿ ಪಕ್ಷದ ಈ ಗೆಲುವು ಹೆಚ್ಚಾಗಿ ಮಧ್ಯ–ಪಶ್ಚಿಮ ರಾಜಸ್ಥಾನದಲ್ಲಿ ಕಂಡುಬಂದಿದೆ. ಅಲ್ಲಿ ಅದರ ನಾಯಕ ಹನುಮಾನ್ ಬೇನಿವಾಲ್ ಅವರು ಜಾಟ್ ಮತದಾರರ ಕೆಲವು ವಿಭಾಗಗಳ ಬೆಂಬಲವನ್ನು ಹೊಂದಿದ್ದಾರೆ. ಇದು ಆ ಪ್ರದೇಶದಲ್ಲಿ ಆರ್ಎಲ್ಪಿ ಗೆಲುವಿಗೆ ನೆರವಾಯಿತು; ಆದರೆ, ಈ ಅಂಶವು ಬಿಜೆಪಿಗೆ ಪ್ರತಿಕೂಲವಾಗಿ ಪರಿಣಮಿಸಿರಬಹುದು.
ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದಂತೆ ರಾಜಸ್ಥಾನದ ಜಾಟ್ ಸಮುದಾಯದವರು ರೈತ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬೇಕು. ಅವರು ಕೇಂದ್ರ ಒಬಿಸಿ ಸ್ಥಾನಮಾನಕ್ಕೂ ಬೇಡಿಕೆ ಇಟ್ಟಿದ್ದಾರೆ. ಪ್ರತ್ಯೇಕ ಜಾಟ್ ರೆಜಿಮೆಂಟ್ಗೆ ಆಗ್ರಹಿಸಿರುವ ಬೇಡಿಕೆಯು ರಾಜಸ್ಥಾನದ ಆ ಸಮುದಾಯದ ಕೆಲವು ವಿಭಾಗಗಳಲ್ಲಿ ರಾಜಕೀಯ ಅಸಮಾಧಾನ ಮುಂದುವರಿಯುವಂತೆ ಮಾಡಿದೆ. ಈ ಎಲ್ಲಾ ಅಂಶಗಳು ಹಾಗೂ ಬೇನಿವಾಲ್ ಮತ್ತು ಆರ್ಎಲ್ಪಿ ಪಕ್ಷದ ಉದಯವು ಆ ಪ್ರದೇಶದಲ್ಲಿ ಬಿಜೆಪಿಯ ಪ್ರದರ್ಶನದ ಮೇಲೆ ಪರಿಣಾಮ ಬೀರಿರಬಹುದು.
ರಾಜಸ್ಥಾನದ ನಗರಗಳು ಮತ್ತು ಪಟ್ಟಣಗಳ ಈ ತೀರ್ಪು ಸದ್ಯಕ್ಕೆ ಮತದಾರರ ದೊಡ್ಡ ಮಟ್ಟದ ರಾಜಕೀಯ ಧ್ರುವೀಕರಣ ಅಥವಾ ಬದಲಾವಣೆ ಎನ್ನಲಾಗದು. ಆದರೆ, ನಾಗರಿಕ ಸೌಲಭ್ಯಗಳ ವೈಫಲ್ಯ, ಜನಪ್ರಿಯವಲ್ಲದ ಅಭ್ಯರ್ಥಿಗಳು, ಪಕ್ಷದೊಳಗಿನ ಬಣ ರಾಜಕೀಯ ಹಾಗೂ ಜಾತಿ ಗುಂಪುಗಳ ಪ್ರಾತಿನಿಧ್ಯದ ಬೇಡಿಕೆಗಳನ್ನು ಬಿಜೆಪಿ ನಿರ್ವಹಿಸಿದ ರೀತಿ, ಅದರ ಬೆಂಬಲಿಗರಲ್ಲಿ ಕೆಲವರು ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸುವಂತೆ ಮಾಡಿದೆ. ಆದರೆ, ಆ ಅತೃಪ್ತಿಯನ್ನು ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಇದರಿಂದಾಗಿ ಆಪ್, ಆರ್ಎಲ್ಪಿ, ಸಿಪಿಎಂ ಮತ್ತು ಪಕ್ಷೇತರರು ಬಿಜೆಪಿಗೆ ರಾಜಕೀಯವಾಗಿ ಪ್ರಾಮುಖ್ಯವಿರುವ ಪ್ರಮುಖ ಪ್ರದೇಶಗಳಲ್ಲಿ ನೆಲೆಯನ್ನು ಕಂಡುಕೊಳ್ಳಲು ಅವಕಾಶವಾಯಿತು.
ಸೌಜನ್ಯ: Indiatoday.in