ಸಾಂದರ್ಭಿಕ ಚಿತ್ರ | Photo Credit : magnific.com

ಕೊತ್ತಂಬರಿ ಪುಡಿಯನ್ನು ಬ್ರಾಂಡ್‌ ಇಲ್ಲದೆ ಲೂಸ್ ಆಗಿ ಮಾರಾಟ ಮಾಡುವುದನ್ನು ಬಳಸಬೇಡಿ. ವಿಶ್ವಾಸಾರ್ಹ ಮೂಲದಿಂದ ಬರುವ ಪ್ಯಾಕ್‌ ಅನ್ನೇ ಆರಿಸಿ. ನಿಮ್ಮ ಮನೆಯಲ್ಲಿರುವ ಉತ್ಪನ್ನವು ಬಾಧಿತವಾಗಿದೆಯೇ ಎಂಬ ಅನುಮಾನವಿದ್ದರೆ FSSAI ವೆಬ್‌ಸೈಟ್‌ ನಲ್ಲಿ ಹಿಂಪಡೆದ ಉತ್ಪನ್ನಗಳು ಮತ್ತು ಅವುಗಳ ವಿವರಗಳನ್ನು ಪರಿಶೀಲಿಸಬಹುದು.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಇಬ್ಬರು ಆಹಾರ ಉದ್ಯಮ ನಿರ್ವಾಹಕರಿಗೆ (FBO) 2006ರ FSS ಕಾಯ್ದೆಯ ಅಡಿಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಆದೇಶ ಹೊರಡಿಸಿದೆ.

ಪ್ರಯೋಗಾಲಯದ ಪರೀಕ್ಷೆ ಮತ್ತು ಮೌಲ್ಯಮಾಪನಗಳ ನಂತರ ಕೊತ್ತಂಬರಿ ಪುಡಿಯಲ್ಲಿ ಕಲಬೆರಕೆ ಇರುವುದು ಮತ್ತು ಕ್ಯಾರಜಿನನ್‌ ನಲ್ಲಿ ಕ್ಯಾಡ್ಮಿಯಂ ಅಂಶದ ಪ್ರಮಾಣ ತೃಪ್ತಿಕರವಾಗಿಲ್ಲ ಎಂಬುದು ಪತ್ತೆಯಾದ ಹಿನ್ನೆಲೆಯಲ್ಲಿ ಈ ಎರಡೂ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ FSSAI ಆದೇಶಿಸಿದೆ.

ಈ ಬಗ್ಗೆ FSSAI ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿರುವಂತೆ, “FSS (ಆಹಾರ ಹಿಂಪಡೆಯುವಿಕೆ ಪ್ರಕ್ರಿಯೆ) ನಿಯಮಾವಳಿಗಳು-2017ರ ಪ್ರಕಾರ ಈ ಎರಡೂ ಸಂಸ್ಥೆಗಳು ತಕ್ಷಣವೇ ಮಾರುಕಟ್ಟೆಯಿಂದ ತಮ್ಮ ಉತ್ಪನ್ನಗಳನ್ನು ಹಿಂಪಡೆಯುವ ಕ್ರಮ ಕೈಗೊಳ್ಳಬೇಕಿದೆ” ಎಂದು ಹೇಳಿದೆ.

ಶಾಲಿಮಾರ್ಸ್ ಶೆಫ್ ಬ್ರಾಂಡ್‌ನ ಅಡಿಯಲ್ಲಿ ಮಾರಾಟವಾಗುವ ಕೊತ್ತಂಬರಿ ಪುಡಿಯ ನಿಯಂತ್ರಕ ಮಾದರಿಯನ್ನು ವಿಶ್ಲೇಷಿಸಿದಾಗ ಕೀಟನಾಶಕದ ಅವಶೇಷಗಳು ನಿಗದಿತ ಮಿತಿಗಿಂತ ಹೆಚ್ಚಿರುವುದು ಕಂಡುಬಂದಿದೆ. ಅಲ್ಲದೆ, ಇದು FSS ನಿಯಮಾವಳಿಗಳು-2011 (ಆಹಾರ ಉತ್ಪನ್ನಗಳ ಗುಣಮಟ್ಟ ಮತ್ತು ಆಹಾರ ಸೇರ್ಪಡೆಗಳು) ಹಾಗೂ FSS ನಿಯಮಾವಳಿಗಳು-2022 (ಮಾಲಿನ್ಯಕಾರಕಗಳು, ವಿಷಕಾರಿ ವಸ್ತುಗಳು ಮತ್ತು ಅವಶೇಷಗಳು) ಅಡಿಯಲ್ಲಿನ ನಿಗದಿತ ಮಾನದಂಡಗಳಿಗೆ ಅನುಗುಣವಾಗಿಲ್ಲ. ಹೀಗಾಗಿ ಸಲ್ಲಿಸಿದ ಮಾದರಿ ಅಸುರಕ್ಷಿತವಾಗಿರುವುದಾಗಿ ಆಹಾರ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ ಎಂದು FSSAI ತಿಳಿಸಿದೆ.

ಕೊತ್ತಂಬರಿ ಹೇಗೆ ಮಲಿನಗೊಳ್ಳುತ್ತದೆ?

ಮಧುಮೇಹ ಶಿಕ್ಷಣ ತಜ್ಞೆ ಮತ್ತು ಸಮಾಲೋಚಕ ಆಹಾರ ತಜ್ಞೆ ಕನಿಕಾ ಮಲ್ಹೋತ್ರ ಅವರು ಮಾಧ್ಯಮಗಳಿಗೆ ತಿಳಿಸಿರುವ ಪ್ರಕಾರ, ಕೊತ್ತಂಬರಿ ಒಂದು ಬೆಳೆಯಾಗಿರುವ ಕಾರಣ ಕೃಷಿ ಚಟುವಟಿಕೆಗಳ ಸಮಯದಲ್ಲಿ ಕೀಟನಾಶಕದ ಅವಶೇಷಗಳು ಸೇರಿಕೊಳ್ಳಬಹುದು. ಅಧಿಕ ಪ್ರಮಾಣದ ಅಥವಾ ಅನುಮೋದಿತವಲ್ಲದ ಕೀಟನಾಶಕ ಬಳಸಿದಾಗ ಅಥವಾ ಕೀಟನಾಶಕ ಸಿಂಪಡಿಸಿದ ತಕ್ಷಣವೇ ಬೆಳೆ ಕಟಾವು ಮಾಡಿದರೆ ಹೀಗಾಗಬಹುದು. ಕೊತ್ತಂಬರಿಯನ್ನು ಒಣಗಿಸಿ ಪುಡಿ ಮಾಡುವ ಮೊದಲು ಕೀಟನಾಶಕದ ಅವಶೇಷಗಳು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗದಿದ್ದರೂ ಮಾಲಿನ್ಯ ಉಂಟಾಗಬಹುದು.

ಕ್ಯಾರಜಿನನ್ ಎಂದರೇನು?

ಕ್ಯಾರಜಿನನ್ ಎಂಬುದು ರೆಡ್ ಸೀವೀಡ್‌ ನಿಂದ ಪಡೆಯಲಾದ ಪ್ರಕೃತಿಜನ್ಯ ದಪ್ಪಗಾಗಿಸುವ ವಸ್ತು. ಆಹಾರದ ಹದ ಮತ್ತು ರಚನೆಯನ್ನು ಉತ್ತಮಗೊಳಿಸಲು ಇದನ್ನು ಬಳಸಲಾಗುತ್ತದೆ. ಪೌಷ್ಠಿಕಾಂಶ ನೀಡುವುದು ಇದರ ಉದ್ದೇಶವಲ್ಲ. ಐಸ್‌ಕ್ರೀಮ್, ಫ್ಲೇವರ್ಡ್ ಹಾಲು ಮತ್ತು ಪನೀರ್ ಪರ್ಯಾಯ ಉತ್ಪನ್ನಗಳಂತಹ ಆಹಾರಗಳಲ್ಲಿ ಕಂಪೆನಿಗಳು ಇದನ್ನು ಬಳಸುತ್ತವೆ. ಚಾಕೊಲೇಟ್ ಪಾನೀಯಗಳಿಗೆ ನಯವಾದ ಮತ್ತು ಕ್ರೀಮಿ ಹದ ನೀಡಲು ಕೂಡ ಇದನ್ನು ಬಳಸಬಹುದು. ಆಹಾರದ ಲೇಬಲ್‌ ನಲ್ಲಿ ಇದನ್ನು E407 ಎಂದು ಗುರುತಿಸಬಹುದು.

ಏಕೆ ಅಸುರಕ್ಷಿತ ಎಂದು ಗುರುತಿಸಲಾಗಿದೆ?

ಕ್ಯಾರಜಿನನ್ ಅಥವಾ ಕೊತ್ತಂಬರಿ ಪುಡಿಯೇ ಅಪಾಯಕಾರಿ ಎಂದು FSSAI ಹೇಳಿಲ್ಲ. ನಿರ್ದಿಷ್ಟವಾಗಿ ಪರೀಕ್ಷಿಸಲಾದ ಉತ್ಪನ್ನಗಳಲ್ಲಿ ಮಾತ್ರ ಸುರಕ್ಷತಾ ಮಾನದಂಡ ಉಲ್ಲಂಘನೆ ಕಂಡುಬಂದಿದೆ. ಕ್ಯಾರಜಿನನ್ ಉತ್ಪನ್ನದಲ್ಲಿ ಕ್ಯಾಡ್ಮಿಯಂ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿರುವುದು ಪತ್ತೆಯಾಗಿದೆ. ಕೊತ್ತಂಬರಿ ಪುಡಿಯ ಮಾದರಿಯಲ್ಲಿ ಕೀಟನಾಶಕದ ಅವಶೇಷಗಳು ನಿಗದಿತ ಮಿತಿಗಿಂತ ಹೆಚ್ಚಿರುವುದು ಕಂಡುಬಂದಿದೆ.

ನಿಗದಿತ ಮಿತಿಯೊಳಗಿನ ಕೀಟನಾಶಕದ ಪ್ರಮಾಣವನ್ನು ದೇಹವು ಸಂಸ್ಕರಿಸಿ ಹೊರಹಾಕಬಹುದು. ಆದರೆ ಅನುಮತಿಸಲಾದ ಮಿತಿಗಿಂತ ಹೆಚ್ಚಿನ ಅವಶೇಷಗಳಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ದೀರ್ಘಕಾಲದಲ್ಲಿ ಯಕೃತ್ತು, ಹಾರ್ಮೋನ್‌ ಗಳು ಮತ್ತು ನರಮಂಡಲದ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳಿದ್ದಾರೆ. ಕಲುಷಿತ ಉತ್ಪನ್ನದ ಬ್ಯಾಚ್‌ ಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಅಪಾಯ ಹೆಚ್ಚಾಗಬಹುದು.

ಜನರು ಏನನ್ನು ಗಮನದಲ್ಲಿರಿಸಬೇಕು?

ಲೇಬಲ್‌ನಲ್ಲಿ ಕ್ಯಾರಜಿನನ್ ಇದೆ ಎಂದಾಕ್ಷಣ ಅದನ್ನು ತ್ಯಜಿಸುವ ಅಗತ್ಯವಿಲ್ಲ. ಈ ರಿಕಾಲ್ ನಿರ್ದಿಷ್ಟ ಉತ್ಪನ್ನದ ಬ್ಯಾಚ್‌ ಗೆ ಸಂಬಂಧಿಸಿದ್ದು, ನಿಮ್ಮ ಮನೆಯಲ್ಲಿರುವ ಉತ್ಪನ್ನವು ಬಾಧಿತವಾಗಿದೆಯೇ ಎಂಬ ಅನುಮಾನವಿದ್ದರೆ FSSAI ವೆಬ್‌ಸೈಟ್‌ನಲ್ಲಿ ಹಿಂಪಡೆದ ಉತ್ಪನ್ನಗಳು ಮತ್ತು ಅವುಗಳ ವಿವರಗಳನ್ನು ಪರಿಶೀಲಿಸಬಹುದು.

ಉತ್ಪನ್ನದ ಲೇಬಲ್‌ನಲ್ಲಿರುವ ಪದಾರ್ಥಗಳ ಪಟ್ಟಿಯಲ್ಲಿ ಕ್ಯಾರಜಿನನ್ ಅಥವಾ E407 ಇದೆಯೇ ಎಂದು ಗಮನಿಸಿ. ನಿಗದಿತ ಮಿತಿಯೊಳಗೆ ಬಳಕೆಗೆ ಕ್ಯಾರಜಿನನ್ ಅನುಮೋದನೆ ಪಡೆದಿದೆ. ಆದ್ದರಿಂದ ಕ್ಯಾರಜಿನನ್ ಇರುವ ಪ್ರತಿಯೊಂದು ಉತ್ಪನ್ನವನ್ನೂ ತ್ಯಜಿಸುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಕೊತ್ತಂಬರಿ ಪುಡಿಯ ವಿಚಾರದಲ್ಲಿ ವಿಶ್ವಾಸಾರ್ಹ ಮೂಲದಿಂದ ಬರುವ ಪ್ಯಾಕ್‌ ಅನ್ನೇ ಆರಿಸುವುದು ಉತ್ತಮ. ಲೂಸ್ ಆಗಿ, ಬ್ರಾಂಡ್‌ ಇಲ್ಲದೆ ಮಾರಾಟವಾಗುವ ಕೊತ್ತಂಬರಿ ಪುಡಿಯ ಬದಲು ವಿಶ್ವಾಸಾರ್ಹ ಮೂಲದ ಪ್ಯಾಕ್‌ ಮಾಡಲಾದ ಪುಡಿಯನ್ನು ಆಯ್ಕೆ ಮಾಡಬಹುದು. ಕೊತ್ತಂಬರಿ ಬೀಜಗಳನ್ನು ಖರೀದಿಸಿ ಮನೆಯಲ್ಲಿ ತಾಜಾವಾಗಿ ಪುಡಿ ಮಾಡಿಕೊಳ್ಳುವುದೂ ಮತ್ತೊಂದು ಆಯ್ಕೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor