ಕೆಲಸ ಕಳೆದುಕೊಂಡಿದ್ದನ್ನು ಪೋಷಕರಿಗೆ ಹೇಳಲಾಗದೇ ನಿತ್ಯವೂ ಕೆಲಸಕ್ಕೆ ಹೊರಟಂತೆ ನಟಿಸುವ ಯುವಕ!
Photo Credit : .reddit.com
ಕೆಲಸ ಕಳೆದುಕೊಂಡ ವಿಷಯವನ್ನು ಪೋಷಕರಿಗೆ ಹೇಳುವ ಧೈರ್ಯವಿಲ್ಲದೆ ಪ್ರತಿದಿನ ಕೆಲಸಕ್ಕೆ ಹೋಗುತ್ತಿರುವಂತೆ ನಟಿಸುತ್ತಿರುವುದಾಗಿ ತಿಳಿಸಿದ ವ್ಯಕ್ತಿಯ ಪೋಸ್ಟ್ ಒಂದು ಇದೀಗ ವೈರಲ್ ಆಗಿದೆ
ಗುರುಗ್ರಾಂನ ವ್ಯಕ್ತಿಯೊಬ್ಬರು ಕೆಲಸ ಕಳೆದುಕೊಂಡಿರುವ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಇದೀಗ ವೈರಲ್ ಆಗಿದೆ. ಕಂಪನಿಯಿಂದ ಕೆಲಸ ಕಳೆದುಕೊಂಡ ವಿಷಯ ಪೋಷಕರಿಗೆ ಹೇಳುವ ಧೈರ್ಯವಿಲ್ಲದೆ ಪ್ರತಿದಿನ ಕೆಲಸಕ್ಕೆ ಹೋಗುವಂತೆ ನಟಿಸಿ ಮನೆಯಿಂದ ಹೊರಹೋಗುತ್ತಿರುವುದಾಗಿ ಅವರು ತಮ್ಮ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.
ವ್ಯಕ್ತಿ ಕಳೆದ ಏಳು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಬಹುರಾಷ್ಟ್ರೀಯ ಕಂಪನಿಯೊಂದರಿಂದ ವಜಾಗೊಂಡಿದ್ದರು. “ಗುರುಗ್ರಾಂನ ಸೈಬರ್ ಸಿಟಿಯಲ್ಲಿರುವ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ 7 ವರ್ಷಗಳ ಕಾಲ ಕೆಲಸ ಮಾಡಿದ ನಂತರ ಸೆಪ್ಟೆಂಬರ್ 10ರಂದು ನನ್ನನ್ನು ಕೆಲಸದಿಂದ ವಜಾಗೊಳಿಸಲಾಯಿತು. ಆದರೆ ಈ ವಿಚಾರ ಪೋಷಕರಿಗೆ ಹೇಳುವ ಧೈರ್ಯ ನನಗೆ ಬಂದಿಲ್ಲ” ಎಂದು ಪೋಸ್ಟ್ ನಲ್ಲಿ ಅವರು ಬರೆದುಕೊಂಡಿದ್ದಾರೆ.
ತಮ್ಮ ಲ್ಯಾಪ್ಟಾಪ್ ಹಿಡಿದು ದಿನವಿಡೀ ಸ್ಟಾರ್ಬಕ್ಸ್ ನಲ್ಲಿ ಕುಳಿತು ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದು ಮತ್ತು ಪ್ರೋಗ್ರಾಮಿಂಗ್ ಕಲಿಕೆಯಲ್ಲಿ ತೊಡಗಿಸಿಕೊಂಡಿರುವುದಾಗಿ ಅವರು ಬರೆದುಕೊಂಡಿದ್ದಾರೆ. “ಪ್ರತಿದಿನ ಬೆಳಿಗ್ಗೆ ನನ್ನ ವೈಯಕ್ತಿಕ ಲ್ಯಾಪ್ಟಾಪ್ ಹಿಡಿದು ಹೊರಡುತ್ತಿದ್ದೇನೆ. ನನ್ನ ಕಚೇರಿಯ ಲ್ಯಾಪ್ಟಾಪ್ ಇಲ್ಲದಿರುವುದನ್ನು ತಾಯಿ ಗಮನಿಸಿಲ್ಲ ಎಂಬ ನಿರಾಳತೆ ಮನಸ್ಸಿನಲ್ಲಿದೆ. ಸ್ಟಾರ್ಬಕ್ಸ್ ನಲ್ಲಿ ಕುಳಿತು ಉದ್ಯೋಗಗಳಿಗೆ ಅರ್ಜಿ ಸಲ್ಲಿಸುತ್ತಾ ಪೈಥಾನ್ ಕಲಿಯುತ್ತಾ ದಿನ ಕಳೆದಯುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.
“ಅದಾದ ನಂತರ ಸಂಜೆ 5 ಗಂಟೆಗೆ ಮನೆಗೆ ಮರಳುವ ಮೊದಲು ವಸಂತ್ ಕುಂಜ್ ಮತ್ತು ಹೌಜ್ ಖಾಸ್ನಲ್ಲಿರುವ ಮಕ್ಕಳಿಗೆ ಪಾಠ ಮಾಡುತ್ತೇನೆ. ಇದೊಂದು ರೀತಿಯಲ್ಲಿ ಆಯಾಸದಾಯಕ ಡಬಲ್ ಲೈಫ್ ಆಗಿದೆ. ಎಷ್ಟು ಕಾಲ ಇದನ್ನು ಮುಂದುವರಿಸುತ್ತೇನೆ ಎನ್ನುವುದು ತಿಳಿದಿಲ್ಲ” ಎಂದು ಅವರು ಬರೆದಿದ್ದಾರೆ.
ಈ ಪೋಸ್ಟ್ ಜನರ ಗಮನ ಸೆಳೆದಂತೆ ಸಾಮಾಜಿಕ ಜಾಲತಾಣದ ಬಳಕೆದಾರರು ವ್ಯಕ್ತಿಯ ಪರಿಸ್ಥಿತಿ ಅರ್ಥಮಾಡಿಕೊಂಡು ಕೆಲಸ ಕಳೆದುಕೊಂಡ ವಿಷಯವನ್ನು ತಮ್ಮ ಪೋಷಕರೊಂದಿಗೆ ಹಂಚಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಕೆಲಸ ಕಳೆದುಕೊಂಡ ಸಮಯದಲ್ಲಿ ಎಲ್ಲರ ವಿಶ್ವಾಸದ ಅಗತ್ಯವಿದೆ ಎಂದು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. “ನಾನೂ ಇದೇ ಸ್ಥಿತಿಯಲ್ಲಿದ್ದೆ. ಹೊಸತನ್ನು ಕಲಿಯುವ ಮೂಲಕ ಸಮಯ ಸದುಪಯೋಗಪಡಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಒಳ್ಳೆಯದು. ಇದರಿಂದ ನಿಮ್ಮ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಬಹುದು” ಎಂದು ವ್ಯಕ್ತಿಯೊಬ್ಬರು ಹೇಳಿದರೆ, ಮತ್ತೊಬ್ಬರು, “ನಿಮ್ಮ ಪೋಷಕರಿಗೆ ಏಕೆ ಹೇಳಬಾರದು? ನಿಮಗೆ ಎಲ್ಲರ ಬೆಂಬಲದ ಅಗತ್ಯವಿದೆ. ಕೆಲಸ ಕಳೆದುಕೊಳ್ಳುವುದು ನಿಮ್ಮ ವ್ಯಕ್ತಿತ್ವಕ್ಕೆ ಕಳಂಕವಲ್ಲ. ಅಪರಾಧಿ ಭಾವನೆ ಬಿಟ್ಟುಬಿಡಿ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಮೊದಲನೆಯದಾಗಿ ನೀವು ಈ ವಿಚಾರವನ್ನು ಒಬ್ಬರೇ ಎದುರಿಸಲು ನಿರ್ಧರಿಸಿರುವ ಧೈರ್ಯ ಶ್ಲಾಘನೀಯ” ಎಂದು ಮತ್ತೊಬ್ಬರು ಹೇಳಿದರೆ, ಮಗದೊಬ್ಬರು, “ನನ್ನನ್ನೂ ಇತ್ತೀಚೆಗೆ ಕೆಲಸದಿಂದ ತೆಗೆದು ಹಾಕಿದ್ದಾರೆ. ನನ್ನ ಕುಟುಂಬದವರು ಚಿಂತಿಸಬಾರದು ಎಂಬ ಕಾರಣಕ್ಕೆ ವಿಷಯ ಮುಚ್ಚಿಡಲು ಬಯಸಿದ್ದೆ. ಆದರೆ 10 ದಿನಗಳ ಕಾಲ ಮುಚ್ಚಿಟ್ಟ ಬಳಿಕ ತಿಳಿಸುವುದೇ ಸೂಕ್ತ ಎಂದು ನಿರ್ಧರಿಸಿದೆ” ಎಂದು ಹೇಳಿದ್ದಾರೆ.