ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಅವರನ್ನು ಆಸ್ಪತ್ರೆಗೆ ಕರೆತಂದಿದ್ದ ಮಹಿಳೆ ಯಾರು?
2020ರ ಪೊಲೀಸ್ ಹೇಳಿಕೆಯಲ್ಲಿ ‘ಇಬ್ಬರು ಪುರುಷರು, ಒಬ್ಬ ಮಹಿಳೆ’ ಎಂಬ ಉಲ್ಲೇಖ
ದಿಶಾ ಸಾಲಿಯನ್ | Photo Credit : NDTV
ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಸಾವಿನ ಪ್ರಕರಣದ ತನಿಖೆಯಲ್ಲಿ ಹೊಸದೊಂದು ಪ್ರಶ್ನೆ ಎದುರಾಗಿದೆ. ದಿಶಾ ಅವರನ್ನು ಆಸ್ಪತ್ರೆಗೆ ಕರೆತಂದ ಮೂವರಲ್ಲಿ ಮಹಿಳೆಯೊಬ್ಬರೂ ಇದ್ದರು ಎಂದು 2020ರಲ್ಲೇ ದಾಖಲಾದ ಪೊಲೀಸ್ ಹೇಳಿಕೆಯಲ್ಲಿ ಉಲ್ಲೇಖವಾಗಿದೆ. ಆದರೆ ಆ ಮಹಿಳೆ ಯಾರು ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ.
2020ರ ಜೂನ್ 8ರ ರಾತ್ರಿ ಮುಂಬೈನ ಮಲಾಡ್ ನಲ್ಲಿರುವ ವಸತಿ ಕಟ್ಟಡವೊಂದರ 14ನೇ ಮಹಡಿಯಿಂದ ಬಿದ್ದು ದಿಶಾ ಮೃತಪಟ್ಟಿದ್ದರು. ಬಳಿಕ ಅವರನ್ನು ಶತಬ್ದಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಈ ಕುರಿತು ಜೂನ್ 15, 2020ರಂದು ಪೊಲೀಸ್ ಕಾನ್ಸ್ಟೇಬಲ್ ಸಂತೋಷ್ ಕಚಿರತ್ ಗುಂಗುನೆ ಅವರ ಹೇಳಿಕೆ ದಾಖಲಾಗಿತ್ತು. ಆಸ್ಪತ್ರೆಯ ವೈದ್ಯರೊಬ್ಬರು ದಿಶಾ ಅವರನ್ನು ‘ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆ’ ಆಸ್ಪತ್ರೆಗೆ ಕರೆತಂದಿದ್ದರು ಎಂದು ತಮಗೆ ತಿಳಿಸಿದ್ದಾಗಿ ಕಾನ್ಸ್ಟೇಬಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದಿಶಾ ಅವರ ನಿಶ್ಚಿತಾರ್ಥದ ಸಂಗಾತಿ ರೋಹನ್ ರೈ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇತರರು, ದಿಶಾ ಅವರನ್ನು ಆಸ್ಪತ್ರೆಗೆ ಕರೆದೊಯ್ದವರು ಅವರ ಸ್ನೇಹಿತರಾದ ಹಿಮಾಂಶು ಶಿಖರೆ ಮತ್ತು ಇಂದ್ರನೀಲ್ ವೈದ್ಯ ಎಂದು ಹೇಳಿದ್ದಾರೆ. ಈ ಇಬ್ಬರು ಪುರುಷರ ಹೆಸರುಗಳು ಬಹಿರಂಗವಾಗಿವೆ. ಆದರೆ, ಮೂರನೇ ವ್ಯಕ್ತಿಯಾಗಿದ್ದ ಮಹಿಳೆ ಯಾರು ಎಂಬುದು ದಾಖಲೆಗಳಲ್ಲಿ ಸ್ಪಷ್ಟವಾಗಿಲ್ಲ.
ಆ ಮಹಿಳೆ ದಿಶಾ ಅವರ ಸ್ನೇಹಿತರಲ್ಲೊಬ್ಬರೇ, ಘಟನೆಗೆ ಸಾಕ್ಷಿಯಾಗಿದ್ದವರೇ ಅಥವಾ ಬೇರೆ ವ್ಯಕ್ತಿಯೇ ಎಂಬುದೂ ಸದ್ಯಕ್ಕೆ ತಿಳಿದುಬಂದಿಲ್ಲ. ಆಸ್ಪತ್ರೆಯ ಪ್ರವೇಶದ್ವಾರ, ಪಾರ್ಕಿಂಗ್ ಸ್ಥಳ ಅಥವಾ ತುರ್ತು ಚಿಕಿತ್ಸಾ ವಿಭಾಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆಯೇ ಎಂಬುದೂ ಸ್ಪಷ್ಟವಾಗಿಲ್ಲ.
►CBI FIR ನಲ್ಲಿ ಹಲವು ಹೆಸರು
ಈ ವಿವರವು ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (CBI) FIR ದಾಖಲಿಸಿದ ಕೆಲವೇ ದಿನಗಳ ಬಳಿಕ ಮುನ್ನೆಲೆಗೆ ಬಂದಿದೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೆ ಮತ್ತು ಸಂಬಂಧಿತ ಅಪರಾಧಗಳಿಗೆ ಸಂಬಂಧಿಸಿದ ಸೆಕ್ಷನ್ ಗಳ ಅಡಿಯಲ್ಲಿ CBI ಸೋಮವಾರ FIR ದಾಖಲಿಸಿದೆ. ಶಿವಸೇನೆ (UBT) ಶಾಸಕ ಆದಿತ್ಯ ಠಾಕ್ರೆ, ನಟರಾದ ಡಿನೋ ಮೋರಿಯಾ, ಸೂರಜ್ ಪಂಚೋಲಿ ಮತ್ತು ರಿಯಾ ಚಕ್ರವರ್ತಿ, ವೈದ್ಯರು ಹಾಗೂ ಇತರ ವೈದ್ಯಕೀಯ ಸಿಬ್ಬಂದಿಯನ್ನು ‘ತನಿಖೆಯ ಅಗತ್ಯವಿರುವ ವ್ಯಕ್ತಿಗಳು’ ಎಂದು FIR ನಲ್ಲಿ ಪಟ್ಟಿ ಮಾಡಲಾಗಿದೆ.
ಆದಿತ್ಯ ಠಾಕ್ರೆ ಸೇರಿದಂತೆ ಇತರರು ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ನಿರಾಕರಿಸಿದ್ದಾರೆ.
ಆದಿತ್ಯ ಠಾಕ್ರೆ ಅವರ ತಂದೆ ಹಾಗೂ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಇತರರು ದಿಶಾ ಅವರ ಸಾವಿನ ಕುರಿತ ಪಿತೂರಿ ಹಾಗೂ ಬಳಿಕ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು CBI FIRನಲ್ಲಿ ಆರೋಪಿಸಲಾಗಿದೆ.
ಪ್ರಕರಣದ ದಾಖಲೆಗಳು, ಕಡತಗಳು ಹಾಗೂ ಇತರ ಸಾರ್ವಜನಿಕ ದಾಖಲೆಗಳನ್ನು ನಾಶಪಡಿಸಿರುವುದು ಅಥವಾ ಮುಚ್ಚಿಹಾಕಿರುವುದು, ಅಧಿಕೃತ ದಾಖಲೆಗಳನ್ನು ತಿರುಚಿರುವುದು ಮತ್ತು ಅಪರಾಧಿಗಳನ್ನು ರಕ್ಷಿಸಲು ಸಾರ್ವಜನಿಕ ಹಣ, ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಂಡಿರುವ ಆರೋಪಗಳ ಬಗ್ಗೆಯೂ ತನಿಖೆ ನಡೆಸಬೇಕಾಗಿದೆ ಎಂದು FIRನಲ್ಲಿ ತಿಳಿಸಲಾಗಿದೆ.
FIR ದಾಖಲಿಸುವ ಮುನ್ನ ದಿಶಾ ಅವರ ಸಾವಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಮತ್ತು ಮಾಹಿತಿಗಳನ್ನು ಒದಗಿಸುವಂತೆ CBI ಮುಂಬೈ ಪೊಲೀಸರಿಗೆ ಪತ್ರ ಬರೆದಿತ್ತು.
►ಸುಶಾಂತ್ ಸಾವಿನೊಂದಿಗೆ ಸಂಬಂಧವಿಲ್ಲ ಎಂದಿದ್ದ ಪೊಲೀಸರು
ದಿಶಾ ಅವರ ಸಾವಿಗೂ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು 2020ರಲ್ಲಿ ಮುಂಬೈ ಪೊಲೀಸರು ಹೇಳಿದ್ದರು. ದಿಶಾ ಮೃತಪಟ್ಟ ಕೆಲವೇ ದಿನಗಳಲ್ಲಿ ಸುಶಾಂತ್ ಅವರು ಬಾಂದ್ರಾದ ತಮ್ಮ ಫ್ಲಾಟ್ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ದಿಶಾ ಅವರ ಸಾವಿನ ತನಿಖೆಯಲ್ಲಿ ಮುಂಬೈ ಪೊಲೀಸರು ಲೋಪವೆಸಗಿದ್ದಾರೆ ಎಂದು ಆರೋಪಿಸಿ ಅವರ ತಂದೆ ಸತೀಶ್ ಸಾಲಿಯನ್ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸೆಪ್ಟೆಂಬರ್ 2ರಂದು CBI ತನಿಖೆಗೆ ಆದೇಶಿಸಿತು. ಆರು ವರ್ಷಗಳಾದರೂ FIR ದಾಖಲಿಸದಿದ್ದಕ್ಕಾಗಿ ನ್ಯಾಯಾಲಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು.
ತನಿಖೆಯು ‘ಉತ್ತರಗಳಿಗಿಂತ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ’ ಎಂದು ಹೇಳಿದ ನ್ಯಾಯಾಲಯ, ಪ್ರಕರಣದಲ್ಲಿನ ‘ಸ್ಪಷ್ಟ ವೈರುಧ್ಯಗಳನ್ನು’ ಉಲ್ಲೇಖಿಸಿತ್ತು.
ದಿಶಾ ಮೃತಪಟ್ಟ ಆರು ವರ್ಷಗಳಾದರೂ ಅವರ ಕುಟುಂಬಕ್ಕೆ ಮರಣೋತ್ತರ ಪರೀಕ್ಷಾ ವರದಿ ಮತ್ತು ಆಕಸ್ಮಿಕ ಸಾವು ವರದಿಯ (ADR) ಪ್ರತಿಗಳನ್ನು ನೀಡಿಲ್ಲ ಎಂಬುದನ್ನೂ ನ್ಯಾಯಾಲಯ ಗಮನಿಸಿತು.
ಪೊಲೀಸರು ADR ದಾಖಲಿಸಿ, ತನಿಖೆಯ ಬಳಿಕ ದಿಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು. ಆದರೆ, ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಸತೀಶ್ ಸಾಲಿಯನ್ ಕಳೆದ ವರ್ಷ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಕಳೆದ ವಾರ ಸತೀಶ್ ಸಾಲಿಯನ್ ಅವರು CBI ಮುಂದೆ ಹೇಳಿಕೆ ದಾಖಲಿಸಿದರು. ಉದ್ಧವ್ ಠಾಕ್ರೆ ಮತ್ತು ಆದಿತ್ಯ ಠಾಕ್ರೆ ಸೇರಿದಂತೆ ಹಲವರು ಸಂಚು ಹಾಗೂ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಆರೋಪಿಸಿದರು.