Photo Credit : aljazeera.com

ಟೆಲ್ ಅವಿವ್: ಇಸ್ರೇಲ್ ಚುನಾವಣೆಯಲ್ಲಿ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳೆರಡೂ ಬಹುಮತ ಗಳಿಸುವಲ್ಲಿ ವಿಫಲವಾಗಿವೆ. ಸರ್ಕಾರ ರಚಿಸಲು ಅರಬ್ ಪಕ್ಷಗಳ ಬೆಂಬಲ ನಿರ್ಣಾಯಕವಾಗಿದ್ದರೂ, ಅವುಗಳೊಂದಿಗೆ ಕೈಜೋಡಿಸಲು ಎರಡೂ ಬಣಗಳು ಹಿಂದೇಟು ಹಾಕುತ್ತಿವೆ. ಹೀಗಾಗಿ, ಅರಬ್ ಪಕ್ಷಗಳೊಂದಿಗಿನ ಮೈತ್ರಿ ಕುರಿತ ರಾಜಕೀಯ ನಿಷೇಧವನ್ನು ಮುರಿಯಬೇಕೇ ಅಥವಾ ಮತ್ತೊಂದು ಚುನಾವಣೆ ಎದುರಿಸಬೇಕೇ ಎಂಬ ಸಂದಿಗ್ಧತೆ ಎದುರಾಗಿದೆ.

ಮಂಗಳವಾರ ನಡೆದ ಚುನಾವಣೆಯಲ್ಲಿ ಶೇ 77.7ರಷ್ಟು ಮತದಾನ ದಾಖಲಾಗಿದೆ. ಇದು 1999ರ ಬಳಿಕದ ಅತ್ಯಧಿಕ ಪ್ರಮಾಣ. 2023ರ ಅಕ್ಟೋಬರ್ 7ರಂದು ಹಮಾಸ್ ನೇತೃತ್ವದಲ್ಲಿ ನಡೆದ ದಾಳಿಯ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.

ಬುಧವಾರ ಮಧ್ಯಾಹ್ನದ ವೇಳೆಗೆ ಶೇ. 80ರಷ್ಟು ಮತಗಳ ಎಣಿಕೆ ಪೂರ್ಣಗೊಂಡಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಲಿಕುಡ್ ಪಕ್ಷದ ಮೈತ್ರಿಕೂಟ 54 ಸ್ಥಾನಗಳನ್ನು ಪಡೆದಿತ್ತು. ಸರ್ಕಾರ ರಚಿಸಲು 61 ಸ್ಥಾನಗಳ ಅಗತ್ಯವಿದೆ. ಸೇನೆಯ ಮಾಜಿ ಮುಖ್ಯಸ್ಥ ಗಡಿ ಐಸೆನ್‌ ಕೋಟ್ ನೇತೃತ್ವದ ವಿರೋಧಿ ಬಣ 49 ಸ್ಥಾನಗಳನ್ನು ಗಳಿಸಿದೆ. 120 ಸದಸ್ಯ ಬಲದ ನೆಸ್ಸೆಟ್ ನಲ್ಲಿ ಬಹುಮತ ಪಡೆಯಲು ಈ ಎರಡೂ ಬಣಗಳಿಗೆ ಸಾಧ್ಯವಾಗಿಲ್ಲ.

ಅರಬ್ ಪಕ್ಷಗಳಾದ ರಾಮ್ ಮತ್ತು ಜಾಯಿಂಟ್ ಲಿಸ್ಟ್ ಒಟ್ಟು 17 ಸ್ಥಾನಗಳನ್ನು ಹೊಂದಿವೆ. ಈ ಪಕ್ಷಗಳ ಬೆಂಬಲದಿಂದ ಸರ್ಕಾರ ರಚಿಸಲು ಸಾಧ್ಯವಿದ್ದರೂ, ಅವುಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಅಡ್ಡಿಯಾಗಿವೆ. ಶುಕ್ರವಾರದ ವೇಳೆಗೆ ಮತ ಎಣಿಕೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ನವೆಂಬರ್ 4ರಂದು ಅಧಿಕೃತ ಫಲಿತಾಂಶ ಪ್ರಕಟವಾಗಲಿದೆ.

►ಅರಬ್ ಮತದಾರರ ಸಕ್ರಿಯ ಪಾಲ್ಗೊಳ್ಳುವಿಕೆ

ಇಸ್ರೇಲ್ ನ ಒಟ್ಟು ಜನಸಂಖ್ಯೆಯ ಐದನೇ ಒಂದು ಭಾಗದಷ್ಟಿರುವ ಫೆಲೆಸ್ತೀನ್ ಮೂಲದ ನಾಗರಿಕರ ಮತದಾನ ಪ್ರಮಾಣವೂ ಸುಮಾರು ಶೇ. 80ಕ್ಕೆ ತಲುಪಿದೆ. ಇದು 1999ರ ಪ್ರಮಾಣಕ್ಕಿಂತ ಹೆಚ್ಚಾಗಿದೆ ಎಂದು ಕೆಲವು ಅಂದಾಜುಗಳು ತಿಳಿಸಿವೆ.

ನೆತನ್ಯಾಹು ನೇತೃತ್ವದ ಸರ್ಕಾರವು ಅರಬ್ ಅಲ್ಪಸಂಖ್ಯಾತರ ವಿರುದ್ಧ ಕಠಿಣ ನಿಲುವು ತಳೆದಿದ್ದರಿಂದ ಅವರಲ್ಲಿ ರಾಜಕೀಯವಾಗಿ ಸಕ್ರಿಯರಾಗುವ ಪ್ರವೃತ್ತಿ ಹೆಚ್ಚಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಗಾಝಾದಲ್ಲಿ ಇಸ್ರೇಲ್ ನಡೆಸಿದ ಯುದ್ಧವೂ ಈ ಬೆಳವಣಿಗೆಗೆ ಕಾರಣವಾಗಿದೆ.

ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗ್ವಿರ್ ಮತ್ತು ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಅವರಂತಹ ತೀವ್ರ ಬಲಪಂಥೀಯ ನಾಯಕರನ್ನು ಒಳಗೊಂಡಿದ್ದ ನೆತನ್ಯಾಹು ಸರ್ಕಾರವು ಫೆಲೆಸ್ತೀನಿಯನ್ನರ ವಿರುದ್ಧದ ಕಠಿಣ ನೀತಿಗಳಿಗಾಗಿ ಟೀಕೆಗೆ ಗುರಿಯಾಗಿತ್ತು.

ಎಸೆಕ್ಸ್ ವಿಶ್ವವಿದ್ಯಾಲಯದ ಉಪನ್ಯಾಸಕ ರೋಯಿ ಜುರ್ ಅವರ ಪ್ರಕಾರ, ಅರಬ್ ಪಕ್ಷಗಳು ಸಂಘಟಿತ ಪ್ರಚಾರ ನಡೆಸಿ ಮತಗಳನ್ನು ಕ್ರೋಡೀಕರಿಸುವಲ್ಲಿ ಯಶಸ್ವಿಯಾಗಿವೆ. ವಿಶೇಷವಾಗಿ ಇಸ್ಲಾಮಿಸ್ಟ್ ಪಕ್ಷವಾದ ʼರಾಮ್ʼ ಈ ಬಾರಿ ಪರಿಣಾಮಕಾರಿಯಾಗಿ ಪ್ರಚಾರ ನಡೆಸಿದೆ. ಅಕ್ಟೋಬರ್ 7ರ ದಾಳಿ ಮತ್ತು ಬಳಿಕದ ಯುದ್ಧದ ಹಿನ್ನೆಲೆಯಲ್ಲಿ ಇಸ್ರೇಲಿನ ಸಮಾಜದೊಂದಿಗಿನ ತಮ್ಮ ಸಂಬಂಧದ ಬಗ್ಗೆ ಮತದಾರರ ಗ್ರಹಿಕೆಯಲ್ಲೂ ಬದಲಾವಣೆಯಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

►ಅರಬ್ ಪಕ್ಷಗಳೊಂದಿಗೆ ಮೈತ್ರಿಗೆ ವಿರೋಧ

ಲಿಕುಡ್ ಪಕ್ಷವು ಚುನಾವಣಾ ಪ್ರಚಾರದ ವೇಳೆ, ವಿರೋಧ ಪಕ್ಷಗಳು ಅರಬ್ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಲು ಯೋಜಿಸಿವೆ ಎಂದು ಆರೋಪಿಸಿತ್ತು. ಜಾಯಿಂಟ್ ಲಿಸ್ಟ್ ಮೈತ್ರಿಕೂಟ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಲು ಕೂಡ ಪ್ರಯತ್ನಿಸಿತ್ತು.

ವಿರೋಧ ಪಕ್ಷದ ನಾಯಕ ಅವಿಗ್ಡರ್ ಲೈಬರ್ಮನ್ ಅವರು ಅರಬ್ ಮತ್ತು ಅಲ್ಟ್ರಾ ಆರ್ಥೊಡಾಕ್ಸ್ (ಹರೆಡಿ) ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್ ಕೂಡ ಅರಬ್ ಪಕ್ಷಗಳೊಂದಿಗೆ ಸರ್ಕಾರ ರಚಿಸುವ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, 2021–22ರಲ್ಲಿ ಬೆನೆಟ್ ನೇತೃತ್ವದ ಸರ್ಕಾರಕ್ಕೆ ʼರಾಮ್ʼ ಪಕ್ಷ ಬೆಂಬಲ ನೀಡಿತ್ತು.

ನೆತನ್ಯಾಹು ಅವರನ್ನು ಅಧಿಕಾರದಿಂದ ಕೆಳಗಿಳಿಸುವುದನ್ನೇ ಗುರಿಯಾಗಿಸಿಕೊಂಡ ವಿರೋಧ ಪಕ್ಷಗಳು, ಪರ್ಯಾಯ ಆಡಳಿತದ ಬಗ್ಗೆ ಸ್ಪಷ್ಟ ನೀತಿ ಮತ್ತು ಭರವಸೆಗಳನ್ನು ನೀಡುವಲ್ಲಿ ವಿಫಲವಾಗಿವೆ ಎಂದು ಸರ್ಕಾರದ ಮಾಜಿ ಸಲಹೆಗಾರ ಡೇನಿಯಲ್ ಲೆವಿ ಅಭಿಪ್ರಾಯಪಟ್ಟಿದ್ದಾರೆ. ನೆತನ್ಯಾಹು ವಿರೋಧಿ ನಿಲುವಿಗಿಂತ ಜನಾಂಗೀಯ-ಕೇಂದ್ರಿತ ಝಿಯೋನಿಸಂ ಸಿದ್ಧಾಂತದ ಬಗೆಗಿನ ಬದ್ಧತೆ ಬಲವಾಗಿರುವುದು ವಿರೋಧ ಪಕ್ಷಗಳ ಹಿನ್ನಡೆಗೆ ಕಾರಣವಾಗಿದೆ ಎಂಬುದು ಅವರ ವಿಶ್ಲೇಷಣೆ.

►ಸರ್ಕಾರ ರಚನೆಗೆ ನಾಲ್ಕು ಸಾಧ್ಯತೆ

ಲೆವಿ ಅವರ ಪ್ರಕಾರ, ಚುನಾವಣೆಯ ಬಳಿಕ ನಾಲ್ಕು ಸಾಧ್ಯತೆಗಳಿವೆ. ಮೊದಲನೆಯದು, ಇಸ್ರೇಲ್ನಲ್ಲಿ ಮತ್ತೆ ಚುನಾವಣೆ ನಡೆಯಬಹುದು. ಎರಡನೆಯದು, ಲಿಕುಡ್ ಪಕ್ಷವು ವಿರೋಧಿ ಬಣದಲ್ಲಿರುವ ಬಲಪಂಥೀಯ ಪಕ್ಷಗಳ ಕೆಲವು ಸದಸ್ಯರ ಬೆಂಬಲ ಪಡೆದು ಸರ್ಕಾರ ರಚಿಸಬಹುದು. ಮೂರನೆಯದು, ನೆತನ್ಯಾಹು ನೇತೃತ್ವದಲ್ಲಿ ವಿವಿಧ ಪಕ್ಷಗಳನ್ನು ಒಳಗೊಂಡ ಮೈತ್ರಿ ಸರ್ಕಾರ ರಚನೆಯಾಗಬಹುದು. ನಾಲ್ಕನೆಯದು, ಐಸೆನ್ ಕೋಟ್ ನೇತೃತ್ವದ ಬಣವು ಅರಬ್ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚಿಸಬಹುದು. ಆದರೆ, ಆ ಪಕ್ಷಗಳು ಸರ್ಕಾರದಲ್ಲಿ ನೇರವಾಗಿ ಭಾಗವಹಿಸದೆ ಹೊರಗಿನಿಂದ ಬೆಂಬಲ ನೀಡಬಹುದು.

ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರು ಪಕ್ಷಗಳ ನಾಯಕರೊಂದಿಗೆ ಸಮಾಲೋಚನೆ ನಡೆಸಿ, ಸರ್ಕಾರ ರಚಿಸಲು ಹೆಚ್ಚಿನ ಅವಕಾಶ ಹೊಂದಿರುವ ಅಭ್ಯರ್ಥಿಯನ್ನು ಪ್ರಧಾನಿಯಾಗಿ ನೇಮಿಸಲಿದ್ದಾರೆ. ಆ ಅಭ್ಯರ್ಥಿಗೆ ಮೈತ್ರಿ ರಚಿಸಲು 28 ದಿನಗಳ ಕಾಲಾವಕಾಶ ದೊರೆಯಲಿದ್ದು, ಅಗತ್ಯವಿದ್ದರೆ ಇನ್ನೂ 14 ದಿನಗಳ ವಿಸ್ತರಣೆ ನೀಡಬಹುದು. ಪ್ರಯತ್ನ ವಿಫಲವಾದರೆ ಮತ್ತೊಬ್ಬ ಸಂಸದರಿಗೆ ಅವಕಾಶ ನೀಡಬಹುದು. ಅವರೂ ವಿಫಲರಾದರೆ ನೆಸ್ಸೆಟ್ ವಿಸರ್ಜನೆಯಾಗಿ ಮತ್ತೆ ಚುನಾವಣೆ ನಡೆಯುವ ಸಾಧ್ಯತೆಯಿದೆ.

►ಮಿಲಿಟರಿ ಸೇವೆ ವಿಚಾರವೂ ಅಡ್ಡಿ

ಹರೆಡಿ ಸಮುದಾಯದ ಯುವಕರಿಗೆ ಕಡ್ಡಾಯ ಮಿಲಿಟರಿ ಸೇವೆಯಿಂದ ವಿನಾಯಿತಿ ನೀಡುವ ವಿಚಾರವು ಐಸೆನ್‌ ಕೋಟ್ ಬಣ ಮತ್ತು ನೆತನ್ಯಾಹು ಬಣದ ನಡುವಿನ ಪ್ರಮುಖ ಭಿನ್ನಾಭಿಪ್ರಾಯವಾಗಿದೆ. ಅಕ್ಟೋಬರ್ 7ರ ದಾಳಿಗೂ ಮುನ್ನ ಸರ್ಕಾರದ ಭದ್ರತಾ ವೈಫಲ್ಯಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕೆಂಬ ಬೇಡಿಕೆಯನ್ನೂ ಐಸೆನ್‌ ಕೋಟ್ ಮುಂದಿಟ್ಟಿದ್ದಾರೆ.

ಕ್ರೈಸಿಸ್ ಗ್ರೂಪ್ ನ ವಿಶ್ಲೇಷಕಿ ಮೈರಾವ್ ಝೋನ್ಸ್ಜೆನ್ ಅವರ ಪ್ರಕಾರ, ಈ ಬೇಡಿಕೆಗಳ ಹಿನ್ನೆಲೆಯಲ್ಲಿ ಐಸೆನ್‌ ಕೋಟ್ ಅವರು ನೆತನ್ಯಾಹು ಬಣದೊಂದಿಗೆ ಕೈಜೋಡಿಸುವ ಸಾಧ್ಯತೆ ಕಡಿಮೆ. ಆದರೆ, ಬೆನೆಟ್ ಮತ್ತು ಲೈಬರ್ಮನ್ ಅವರ ನಿಲುವು ವಿಭಿನ್ನವಾಗಿರುವುದರಿಂದ ಇತರ ರಾಜಕೀಯ ಸಂಯೋಜನೆಗಳ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿ, ತುರ್ತು ಪರಿಸ್ಥಿತಿಯ ನೆಪದಲ್ಲಿ ರಾಜಕೀಯ ಲಾಭ ಪಡೆಯಲು ನೆತನ್ಯಾಹು ಸರ್ಕಾರ ಪ್ರಯತ್ನಿಸಬಹುದು ಎಂಬ ಊಹಾಪೋಹಗಳೂ ಇವೆ. ಆದರೆ, ಮುಂದಿನ ಸರ್ಕಾರದ ಸ್ವರೂಪವು ಮುಖ್ಯವಾಗಿ ಮೈತ್ರಿ ರಚನೆಯ ಸಾಧ್ಯತೆ ಮತ್ತು ಸ್ಥಾನಗಳ ಲೆಕ್ಕಾಚಾರವನ್ನು ಅವಲಂಬಿಸಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸೌಜನ್ಯ: Aljazeera.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor