SIR | ಹಳೆಯ ಮತದಾರರನ್ನು ಹೊಸಬರೆಂದು ಪರಿಗಣಿಸಿದ್ದಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ
ಕರಡು ಪಟ್ಟಿಯಿಂದ ಹೆಸರು ಕೈಬಿಟ್ಟವರಿಗೆ ಫಾರ್ಮ್ 6 ಸಲ್ಲಿಸುವಂತೆ ಸೂಚಿಸಿದ್ದಕ್ಕೆ ಅಸಮಾಧಾನ
ಸುಪ್ರೀಂ ಕೋರ್ಟ್ | Photo Credit : PTI
SIR ವಿರೋಧಿ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಪದೇ ಪದೇ ಒಂದು ಪ್ರಶ್ನೆಯನ್ನು ಎತ್ತುತ್ತಿದ್ದರು. ಹಾಗಿದ್ದರೂ ಚುನಾವಣಾ ಆಯೋಗ ಕಿವುಡನಂತೆ ವರ್ತಿಸುತ್ತಿತ್ತು. SIRನಿಂದಾಗಿ ಮತದಾರರ ಪಟ್ಟಿಯಿಂದ ಹೊರದಬ್ಬಲ್ಪಟ್ಟವರು ಫಾರ್ಮ್ 6 ಸಲ್ಲಿಸಲು ಹೇಗೆ ಸಾಧ್ಯ? ಮೊದಲ ಬಾರಿಗೆ ಮತದಾನದ ಹಕ್ಕು ಪಡೆಯುವವರಿಗೆ ಮಾತ್ರ ಫಾರ್ಮ್ 6 ಅನ್ವಯಿಸುತ್ತದೆ. ತಾವು ಈ ಹಿಂದೆ ಎಲ್ಲೂ ಮತ ಚಲಾಯಿಸಿಲ್ಲ ಎಂಬ ಪ್ರಮಾಣಪತ್ರವನ್ನು SIRನಿಂದಾಗಿ ಹೊರಹೋದ ಮತದಾರರು ನೀಡಿದರೆ, ಅವರು ಸುಳ್ಳು ಹೇಳಿದಂತೆ ಆಗುತ್ತಲ್ಲವೇ? ಅದು ಕ್ರಿಮಿನಲ್ ಅಪರಾಧವಲ್ಲವೇ ಎಂಬುದೇ ಆ ಪ್ರಶ್ನೆ. ಇದೀಗ ಸುಪ್ರೀಂ ಕೋರ್ಟ್ ಆ ಪ್ರಶ್ನೆಯನ್ನು ಕೇಳಿದೆ.
ದಿಲ್ಲಿಯ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಹೆಸರು ಕಳೆದುಕೊಂಡ ಮತದಾರರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಭಾರತೀಯ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದೆ.
ಈಗಾಗಲೇ 2026ರ ಮತದಾರರ ಪಟ್ಟಿಯಲ್ಲಿದ್ದವರನ್ನು ಕರಡು ಪಟ್ಟಿಯಿಂದ ಕೈಬಿಟ್ಟು, ಮತ್ತೆ ಹೆಸರು ಸೇರಿಸಲು ಫಾರ್ಮ್ 6 ಸಲ್ಲಿಸುವಂತೆ ಸೂಚಿಸಿರುವುದು ನ್ಯಾಯಪೀಠದ ಅಸಮಾಧಾನಕ್ಕೆ ಕಾರಣವಾಯಿತು.
ಮೊದಲ ಬಾರಿಗೆ ಮತದಾನದ ಹಕ್ಕು ಪಡೆಯುವವರಿಗೆ ಮಾತ್ರ ಫಾರ್ಮ್ 6 ಅನ್ವಯಿಸುತ್ತದೆ. ತಾವು ಈ ಹಿಂದೆ ಎಲ್ಲೂ ಮತ ಚಲಾಯಿಸಿಲ್ಲ ಎಂಬ ಪ್ರಮಾಣಪತ್ರವನ್ನು ಅದರಲ್ಲಿ ನೀಡಬೇಕಾಗುತ್ತದೆ.
ಹಳೆಯ ಮತದಾರರಿಂದ ಇಂತಹ ಸುಳ್ಳು ಘೋಷಣೆಯನ್ನು ಹೇಗೆ ಬರೆಸಲು ಸಾಧ್ಯ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯಿಮಾಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠ ಪ್ರಶ್ನಿಸಿದೆ.
ರಾಜಧಾನಿ ದಿಲ್ಲಿ ನಿರಂತರ ಜನಸಂಚಾರವಿರುವ ನಗರ. ಕೆಲಸದ ನಿಮಿತ್ತ ತಾತ್ಕಾಲಿಕವಾಗಿ ಹೊರಗಡೆ ಹೋದವರು ಅಥವಾ ಮನೆ ಬದಲಾಯಿಸಿದವರು ಇಲ್ಲಿ ಅಪಾರ ಸಂಖ್ಯೆಯಲ್ಲಿದ್ದಾರೆ.
ಮನೆ ಬಾಗಿಲಿಗೆ ಬಂದ ಗಣತಿ ನಮೂನೆ ಸಿಗಲಿಲ್ಲ ಎಂದ ಮಾತ್ರಕ್ಕೆ ಅವರನ್ನು ಕಾಯಂ ಆಗಿ ಸ್ಥಳಾಂತರಗೊಂಡವರು ಎಂದು ತೀರ್ಮಾನಿಸುವುದು ಸರಿಯಲ್ಲ. ಇಂತಹ ಮತದಾರರಿಗೆ ವಿಳಾಸ ಬದಲಾವಣೆಯ ಫಾರ್ಮ್ 8 ಅಥವಾ ಗಣತಿ ಪತ್ರ ತುಂಬಲು ಅವಕಾಶ ನೀಡದೆ, ಹೊಸ ಮತದಾರರಂತೆ ಪರಿಗಣಿಸಿರುವುದು ರಚನಾತ್ಮಕ ದೋಷ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಕರಡು ಪಟ್ಟಿಯಿಂದ ಕೈಬಿಡಲಾದ 47 ಲಕ್ಷ ಮತದಾರರಲ್ಲಿ ಸುಮಾರು 43 ಲಕ್ಷ ಜನರನ್ನು ಗೈರುಹಾಜರಿ ಅಥವಾ ಸ್ಥಳಾಂತರಗೊಂಡವರು ಎಂದು ಗುರುತಿಸಲಾಗಿದೆ ಎಂದು ವಿವರಿಸಿದರು.
ಇವರಲ್ಲಿ ಬಹುತೇಕರಿಗೆ ಗಣತಿ ನಮೂನೆ ತಲುಪಿಯೇ ಇಲ್ಲ. ಈಗ ಇವರಿಗೆ ವಿಳಾಸ ತಿದ್ದುಪಡಿಯ ಫಾರ್ಮ್ 8 ಸಲ್ಲಿಸಲು ಆಯೋಗ ಅವಕಾಶ ನಿರಾಕರಿಸುತ್ತಿದೆ. ತಾವು ಎಂದಿಗೂ ಮತ ಚಲಾಯಿಸಿಲ್ಲ ಎಂದು ಫಾರ್ಮ್ 6 ಮೂಲಕ ಕಡ್ಡಾಯವಾಗಿ ಸುಳ್ಳು ಘೋಷಣೆ ಮಾಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ನ್ಯಾಯಪೀಠಕ್ಕೆ ತಿಳಿಸಿದರು.
ಈ ವಾದಕ್ಕೆ ಧ್ವನಿಗೂಡಿಸಿದ ನ್ಯಾಯಮೂರ್ತಿ ಬಾಗ್ಚಿ, ಮತದಾನದ ಹಕ್ಕು ಸಂವಿಧಾನ ನೀಡಿರುವ ಮಹತ್ವದ ಹಕ್ಕು ಎಂದು ನೆನಪಿಸಿದರು. ಮತದಾರನಿಂದ ಪ್ರತಿಕ್ರಿಯೆ ಬಾರದ ಕಾರಣಕ್ಕೆ ಆತನ ಮತದಾನದ ಹಕ್ಕನ್ನು ಶಾಶ್ವತವಾಗಿ ಕಸಿದುಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.
2026ರ ಪಟ್ಟಿಯನ್ನೇ ಆಧಾರವಾಗಿಟ್ಟುಕೊಂಡು ಪರಿಷ್ಕರಣೆ ನಡೆಸುವಾಗ, ವ್ಯಕ್ತಿಯೊಬ್ಬ ಸ್ಥಳ ಬದಲಾಯಿಸಿದ್ದರೆ ಫಾರ್ಮ್ 8 ಸಲ್ಲಿಸಲು ಆಯೋಗವೇ ವ್ಯವಸ್ಥೆ ಮಾಡಬೇಕು. ಕೇವಲ ಒಂದು ತಿಂಗಳು ಹೊರಗೆ ಹೋಗಿ ಬಂದ ವ್ಯಕ್ತಿಯನ್ನು ಶಾಶ್ವತವಾಗಿ ಸ್ಥಳಾಂತರಗೊಂಡವನೆಂದು ಪರಿಗಣಿಸಿ ಮತದಾರರ ಪಟ್ಟಿಯಿಂದ ಹೊರಗಿಡುವುದು ಆಡಳಿತಾತ್ಮಕ ವೈಫಲ್ಯವನ್ನು ತೋರಿಸುತ್ತದೆ ಎಂದರು.
ಚುನಾವಣಾ ಆಯೋಗದ ಪರ ಹಾಜರಾದ ಹಿರಿಯ ವಕೀಲ ದಾಮ ಶೇಷಾದ್ರಿ ನಾಯ್ಡು, ಈ ಪ್ರಕ್ರಿಯೆಯಲ್ಲಿ ಯಾವುದೇ ಮತದಾರರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಸಮರ್ಥಿಸಿಕೊಂಡರು.
ವಿಶೇಷ ಸಮಗ್ರ ಪರಿಷ್ಕರಣೆಯ ಕರಡು ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಅವರನ್ನು ತಾಂತ್ರಿಕವಾಗಿ ಹೊಸ ಮತದಾರರೆಂದು ಪರಿಗಣಿಸಲಾಗಿತ್ತು ಎಂದರು. ಆದರೆ, ನ್ಯಾಯಾಲಯ ನೀಡಿದ ಸಲಹೆಗಳನ್ನು ಒಪ್ಪಿಕೊಂಡ ಆಯೋಗ, ವಲಸೆ ಹೋದ ಅಥವಾ ತಾತ್ಕಾಲಿಕವಾಗಿ ಲಭ್ಯವಿಲ್ಲದ ಮತದಾರರಿಗಾಗಿ ಪ್ರತ್ಯೇಕ ವರ್ಗ ರೂಪಿಸಲು ಸಿದ್ಧವಿರುವುದಾಗಿ ತಿಳಿಸಿತು. ಇವರಿಗೆ ಫಾರ್ಮ್ 6 ಹೊರತುಪಡಿಸಿ ಪರ್ಯಾಯ ನಮೂನೆ ಒದಗಿಸುವ ಭರವಸೆಯನ್ನೂ ನೀಡಿತು.
ದಿಲ್ಲಿಯಲ್ಲಿ ತಕ್ಷಣಕ್ಕೆ ಚುನಾವಣೆಗಳು ಇಲ್ಲದಿರುವುದರಿಂದ ಆಯೋಗ ಆತುರಪಡುವ ಅಗತ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳು ಸಲಹೆ ನೀಡಿದರು. ಕೈಬಿಡಲಾದ 43 ಲಕ್ಷ ಮತದಾರರ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು.
ಗಣತಿ ನಮೂನೆ ಸಲ್ಲಿಸಲು ಕಾಲಾವಕಾಶ ವಿಸ್ತರಿಸಬೇಕು. ನಾಗರಿಕರು ಹತ್ತಿರದ ಬೂತ್ ಮಟ್ಟದ ಅಧಿಕಾರಿಯನ್ನು ಸಂಪರ್ಕಿಸಿ ಫಾರ್ಮ್ 8 ಅಥವಾ ಗಣತಿ ಪತ್ರ ಸಲ್ಲಿಸಲು ಜಾಗೃತಿ ಮೂಡಿಸಬೇಕು ಎಂದು ಪೀಠ ಸೂಚಿಸಿತು.
ಈ ವಿಚಾರಣೆ ಚುನಾವಣಾ ಪ್ರಕ್ರಿಯೆಯಲ್ಲಿ ಆಡಳಿತಾತ್ಮಕ ಚೌಕಟ್ಟು ನಾಗರಿಕರ ಮೂಲಭೂತ ಹಕ್ಕನ್ನು ಹೇಗೆ ಕಸಿದುಕೊಳ್ಳಬಹುದು ಎಂಬುದನ್ನು ತೆರೆದಿಟ್ಟಿದೆ.
ಕಾಗದಪತ್ರಗಳ ತಾಂತ್ರಿಕ ನಿಯಮಗಳಿಗಿಂತ ನಾಗರಿಕರ ಮತದಾನದ ಹಕ್ಕು ಮುಖ್ಯ ಎಂಬ ಸಂದೇಶವನ್ನು ನ್ಯಾಯಾಲಯ ರವಾನಿಸಿದೆ. ಆಯೋಗವು ಕೈಗೊಳ್ಳುವ ಪರಿಹಾರ ಕ್ರಮಗಳ ಪರಿಶೀಲನೆಗಾಗಿ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಲಾಗಿದೆ.