Photo Credit : aljazeera.com

ಮುತ್ತಿಗೆ, ಬೆಲೆ ಏರಿಕೆ, ಇಂಧನದ ಅಭಾವ... ಯೆಮೆನ್ ನ ತೈಝ್ ನಗರದ ಜನರು ಬದುಕುಳಿಯಲು ಹೋರಾಡುತ್ತಿದ್ದಾರೆ. ಮೂರು ವಾರಗಳಿಂದ ಹೊರಜಗತ್ತಿನ ಸಂಪರ್ಕ ಕಡಿತಗೊಂಡಿರುವ ನಗರದಲ್ಲಿ ಆಹಾರ ಮತ್ತು ಇಂಧನದ ಬೆಲೆ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ. ನೀರಿನ ಉತ್ಪಾದನೆ ಅರ್ಧದಷ್ಟು ಕುಸಿದಿದೆ. ಆಸ್ಪತ್ರೆಗಳಲ್ಲಿ ಔಷಧ, ಆಮ್ಲಜನಕ ಮತ್ತು ವೈದ್ಯಕೀಯ ಸಾಮಗ್ರಿಗಳ ಕೊರತೆ ಎದುರಾಗಿದೆ. ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿರುವ ಕುಟುಂಬಗಳು ಅಡುಗೆಗೂ ಕಟ್ಟಿಗೆಯ ಮೊರೆ ಹೋಗಿವೆ.

ಸುಮಾರು 10 ಲಕ್ಷ ಜನರು ವಾಸಿಸುವ ತೈಝ್ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳನ್ನು ಮುಚ್ಚಲಾಗಿದೆ. ಅಕ್ಟೋಬರ್ 4ರಂದು ಹೂತಿ ಬಂಡುಕೋರರು ಅಲ್-ತುರ್ಬಾ ಪಟ್ಟಣವನ್ನು ವಶಪಡಿಸಿಕೊಂಡ ಬಳಿಕ ತೈಝ್–ಅಲ್-ತುರ್ಬಾ–ಏಡನ್ ರಸ್ತೆ ಸಂಪರ್ಕ ಕಡಿತಗೊಂಡಿತು. ಇದಕ್ಕೂ ಒಂದು ದಿನ ಮೊದಲು ಸರಕಾರಕ್ಕೆ ನಿಷ್ಠವಾಗಿರುವ ಪಡೆಗಳು ಪೂರ್ವದ ಅಲ್-ಹೌಬಾನ್ ಮಾರ್ಗವನ್ನು ಮುಚ್ಚಿದ್ದವು. ಹೂತಿಗಳು ಈ ಮಾರ್ಗದ ಮೂಲಕ ಒಳನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಇದಕ್ಕೆ ನೀಡಿದ ಕಾರಣ.

ನಾಲ್ವರು ಮಕ್ಕಳ ತಂದೆ ಯೂಸೆಫ್ ಫರ್ಹಾನ್ ಹಿಂದೆ ಶಾಲೆಯ ಎದುರು ಸೌತೆಕಾಯಿ ಮಾರಾಟ ಮಾಡಿ ದಿನಕ್ಕೆ 4,000ರಿಂದ 5,000 ಯೆಮೆನಿ ರಿಯಾಲ್ ಗಳಿಸುತ್ತಿದ್ದರು. ಶಾಲೆ ಮುಚ್ಚಿದ ಬಳಿಕ ಆದಾಯದ ಮೂಲವೂ ನಿಂತುಹೋಯಿತು. ಈಗ ಐದು ತಿಂಗಳಿಂದ ಐದು ವರ್ಷದೊಳಗಿನ ಅವರ ಮಕ್ಕಳು ಅನ್ನ ಅಥವಾ ಬೀನ್ಸ್ ತಿಂದು ದಿನ ಕಳೆಯುತ್ತಿದ್ದಾರೆ. ಅಡುಗೆ ಅನಿಲ ಖರೀದಿಸಲು ಸಾಧ್ಯವಾಗದೆ ಕುಟುಂಬ ಕಟ್ಟಿಗೆಯನ್ನು ಬಳಸುತ್ತಿದೆ. ಫಿರಂಗಿ ದಾಳಿಯಿಂದ ಮನೆ ತೊರೆದಿದ್ದ ಫರ್ಹಾನ್ ಕುಟುಂಬ ವಾದಿ ಅಲ್-ಖಾದಿ ಪ್ರದೇಶದ ಶಾಲೆಯಲ್ಲಿ ವಾಸಿಸುತ್ತಿದೆ. ನೆರೆಹೊರೆಯ ಪ್ರದೇಶದ ಮೇಲೆ ದಾಳಿ ನಡೆದ ಬಳಿಕ ಅವರ ಸಹೋದರಿ ಮತ್ತು ಆಕೆಯ ಮಗು ಕೂಡ ಅವರೊಂದಿಗೆ ಆಶ್ರಯ ಪಡೆದಿದ್ದಾರೆ.

20 ಲೀಟರ್ ಪೆಟ್ರೋಲ್ ಬೆಲೆ 30,000 ಯೆಮೆನಿ ರಿಯಾಲ್ ಗಳಿಂದ 1,20,000 ರಿಯಾಲ್ ಗಳಿಗೆ ಏರಿಕೆಯಾಗಿದೆ. ಅಂದರೆ, ಪ್ರತಿ ಲೀಟರ್ ಗೆ ಸುಮಾರು 2,418 ರೂ. ಡೀಸೆಲ್ ಬೆಲೆ 46,000ರಿಂದ 90,000 ರಿಯಾಲ್ ಗಳಿಗೆ ಹೆಚ್ಚಿದೆ. ಅಡುಗೆ ಅನಿಲದ ಸಿಲಿಂಡರ್ ಬೆಲೆ 11,400ರಿಂದ 40,000 ರಿಯಾಲ್ ಗಳಿಗೆ ತಲುಪಿದೆ. ಬಸ್ ಪ್ರಯಾಣ ದರವೂ 200ರಿಂದ 500 ರಿಯಾಲ್ ಗಳಿಗೆ ಏರಿಕೆಯಾಗಿದೆ. ಅಕ್ಟೋಬರ್ 5ರಿಂದ ನಗರದ ಇಂಧನ ಕೇಂದ್ರಗಳು ಬಂದ್ ಆಗಿವೆ.

ಡೀಸೆಲ್ ಕೊರತೆಯಿಂದ ನೀರಿನ ಪಂಪ್ ಗಳ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಟ್ಯಾಂಕರ್ ಗಳ ಮೂಲಕ ಪೂರೈಸುವ ನೀರಿನ ಬೆಲೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಕುಡಿಯುವ ನೀರಿನ ಪ್ರಮುಖ ಮೂಲವಾದ ಅಲ್-ಧಬಾಬ್ ಜಲಾನಯನ ಪ್ರದೇಶದಿಂದ ನೀರು ತರುವ ಟ್ಯಾಂಕರ್ ಗಳ ನಗರ ಪ್ರವೇಶಕ್ಕೂ ನಿರ್ಬಂಧ ವಿಧಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

 

►ಮಕ್ಕಳ ಶಿಕ್ಷಣಕ್ಕೂ ಕುತ್ತು

40 ವರ್ಷದ ಸಯ್ಯುನ್ ಬುರ್ಹಾನ್ ಅವರ ಪತಿ ಅನಾರೋಗ್ಯದಿಂದಾಗಿ ಕೆಲಸ ಹುಡುಕಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮನೆ ಬಾಡಿಗೆ, ಆಹಾರ, ನೀರು ಮತ್ತು ಅಡುಗೆ ಅನಿಲದ ವೆಚ್ಚ ಭರಿಸುವುದೇ ಸಯ್ಯುನ್ ಬುರ್ಹಾನ್ ಅವರ ಕುಟುಂಬಕ್ಕೆ ಕಷ್ಟವಾಗಿದೆ. ಶಾಲೆಗಳು ಮುಚ್ಚಿರುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಭದ್ರತೆಯ ಆತಂಕದಿಂದ ಮಕ್ಕಳನ್ನು ಹೊರಗೆ ಕಳುಹಿಸಲೂ ಪೋಷಕರು ಹೆದರುತ್ತಿದ್ದಾರೆ. ಇದರಿಂದ ಮಕ್ಕಳು ಆಟೋಟಗಳಿಂದಲೂ ವಂಚಿತರಾಗಿದ್ದಾರೆ.

ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ 55 ವರ್ಷದ ಫಾತಿಮಾ ಖಾಲಿದ್ ಅವರು ಅಲ್-ಝುಮ್ಹುರಿ ಜನರಲ್ ಆಸ್ಪತ್ರೆಯ ಡಯಾಲಿಸಿಸ್ ವಿಭಾಗದ ನೆಲದ ಮೇಲೆಯೇ ಮಲಗುತ್ತಿದ್ದಾರೆ. ತಮ್ಮ ಹಳ್ಳಿಯಿಂದ ಆಸ್ಪತ್ರೆಗೆ ಪದೇಪದೇ ಬರುವುದು ಆರ್ಥಿಕವಾಗಿ ಸಾಧ್ಯವಾಗದ ಕಾರಣ ಅಲ್ಲಿಯೇ ಉಳಿದಿದ್ದಾರೆ. ರಸ್ತೆ ಬಂದ್ ಆಗಿರುವುದರಿಂದ ಚಿಕಿತ್ಸೆಗಾಗಿ ಪ್ರಯಾಣಿಸುವುದೂ ದುಬಾರಿಯಾಗಿದೆ.

ತೈಝ್ ನ 42 ಆರೋಗ್ಯ ಕೇಂದ್ರಗಳಲ್ಲಿ ಇಂಧನ, ಆಮ್ಲಜನಕ, ಔಷಧ ಮತ್ತು ವೈದ್ಯಕೀಯ ಸಾಮಗ್ರಿಗಳ ತೀವ್ರ ಕೊರತೆಯಿದೆ ಎಂದು ಅಕ್ಟೋಬರ್ 22ರಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿತ್ತು. ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಯೆಮೆನ್ ಸರಕಾರವನ್ನು ಬೆಂಬಲಿಸುವ ಸೌದಿ ನೇತೃತ್ವದ ಮೈತ್ರಿಕೂಟವು ಹೂತಿ ಬಂಡುಕೋರರ ವಿರುದ್ಧ ಹಲವು ವರ್ಷಗಳಿಂದ ದಾಳಿ ನಡೆಸುತ್ತಿದೆ. ಸ್ವಲ್ಪಮಟ್ಟಿಗೆ ತಣ್ಣಗಾಗಿದ್ದ ಸಂಘರ್ಷ ಜುಲೈನಲ್ಲಿ ಮತ್ತೆ ತೀವ್ರಗೊಂಡಿತು. ಕಳೆದ ತಿಂಗಳು ಹೂತಿಗಳು ಕೆಂಪು ಸಮುದ್ರದ ಕರಾವಳಿ ಪ್ರದೇಶವನ್ನು ವಶಪಡಿಸಿಕೊಂಡ ಬಳಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.

ಮುತ್ತಿಗೆ ಮುಂದುವರಿದಂತೆ ಆಹಾರ, ನೀರು, ಇಂಧನ ಮತ್ತು ಆರೋಗ್ಯ ಸೇವೆಗಳ ಕೊರತೆ ತೀವ್ರಗೊಂಡಿದ್ದು, ತೈಝ್ ನ ಕುಟುಂಬಗಳಿಗೆ ದಿನದ ಊಟದ ವ್ಯವಸ್ಥೆಯೇ ದೊಡ್ಡ ಸವಾಲಾಗಿದೆ.

ಸೌಜನ್ಯ: Aljazeera.com

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor