ನಿರ್ಬಂಧದ ನಡುವೆಯೂ ಸ್ಕ್ರೀನಿಂಗ್; ಐದು ರಾಜ್ಯಗಳ ಗುರುದ್ವಾರಗಳಲ್ಲಿ ‘Satluj ’ ಉಚಿತ ಪ್ರದರ್ಶನಕ್ಕೆ ತೀರ್ಮಾನ
ಜಸ್ವಂತ್ ಸಿಂಗ್ ಖಲ್ರಾ ಅವರ ಕತೆಯನ್ನು ಪ್ರೇಕ್ಷಕರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಅನೇಕ ರಾಜ್ಯಾದ್ಯಂತ ಸಿಖ್ ಧಾರ್ಮಿಕ ಸಂಸ್ಥೆಗಳು ಸಮುದಾಯ ಪ್ರದರ್ಶನಗಳನ್ನು ಪ್ರಾರಂಭಿಸಿರುವುದಾಗಿ ವರದಿಯಾಗಿದೆ.
ಭಾರತದಲ್ಲಿ ‘ಸಟ್ಲಜ್’ ಸಿನಿಮಾದ ಒಟಿಟಿ ಪ್ರಸಾರಕ್ಕೆ ಅವಕಾಶ ನೀಡದೆ ಇರುವ ಕಾರಣದಿಂದ ಮಾನವ ಹಕ್ಕುಗಳ ಕಾರ್ಯಕರ್ತ ಜಸ್ವಂತ್ ಸಿಂಗ್ ಖಲ್ರಾ ಅವರ ಕತೆಯನ್ನು ಪ್ರೇಕ್ಷಕರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಅನೇಕ ರಾಜ್ಯಾದ್ಯಂತ ಸಿಖ್ ಧಾರ್ಮಿಕ ಸಂಸ್ಥೆಗಳು ಸಮುದಾಯ ಪ್ರದರ್ಶನಗಳನ್ನು ಪ್ರಾರಂಭಿಸಿವೆ.
ಬಿಡುಗಡೆಯಾದ 48 ಗಂಟೆಗಳ ಒಳಗೆ ದಿಲ್ಜಿತ್ ದೋಸಾಂಜ್ ಅಭಿನಯದ ಸಿನಿಮಾವನ್ನು ZEE5ನಿಂದ ತೆಗೆದು ಹಾಕಿದ ಕ್ರಮವು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದೀಗ ಪಂಜಾಬ್, ಹರಿಯಾಣ, ರಾಜಸ್ಥಾನ, ದಿಲ್ಲಿ ಮತ್ತು ಜಮ್ಮುವಿನ ಗುರುದ್ವಾರಗಳು ಸಿನಿಮಾದ ಸಮುದಾಯ ಪ್ರದರ್ಶನಗಳನ್ನು ಆಯೋಜಿಸಲಿವೆ!
ದೇಶಾದ್ಯಂತ ಗುರುದ್ವಾರ ಸಮಿತಿಗಳು ಹನಿ ಟ್ರೆಹಾನ್ ನಿರ್ದೇಶನದ ಸಿನಿಮಾದ ಪ್ರದರ್ಶನಗಳನ್ನು ಆಯೋಜಿಸಲು ಒಗ್ಗೂಡಿವೆ ಎಂದು ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ (SGPC) ಸದಸ್ಯರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಈ ಮೊದಲು ‘ಪಂಜಾಬ್ 95’ ಎಂದು ಹೆಸರಿಸಲಾಗಿದ್ದ ‘ಸಟ್ಲಜ್’ ಸಿನಿಮಾವನ್ನು ಜಮ್ಮುವಿನಲ್ಲಿ ಜುಲೈ 10ರಿಂದ 13ರ ನಡುವೆ ನಾಲ್ಕು ಗುರುದ್ವಾರಗಗಳಲ್ಲಿ ಪ್ರದರ್ಶಿಸಲು ನಿರ್ಧರಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿರುವ ಪೋಸ್ಟರ್ ಒಂದರಲ್ಲಿ ಜುಲೈ 11ರಂದು ಸಿನಿಮಾದ ಸಾರ್ವಜನಿಕ ಪ್ರದರ್ಶನವನ್ನು ಘೋಷಿಸಿದ್ದು, ಜೈಪುರದ ಚಂಡಿ ಕಿ ತಕ್ಸಲ್ ಗುರುದ್ವಾರದಲ್ಲಿರುವ ಬಾಬಾ ಫತೇಹ್ ಸಿಂಗ್ ಅಡಿಟೋರಿಯಂನಲ್ಲಿ ಭಾಗವಹಿಸಲು ಜನರನ್ನು ಆಹ್ವಾನಿಸಿದೆ ಎಂದು ವರದಿಯಾಗಿದೆ.
ದೆಹಲಿಯ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ (DSGMC) ಅಧ್ಯಕ್ಷ ಹರ್ಮಿತ್ ಸಿಂಗ್ ಕಲ್ಕಾ ಅವರು ಝೀ5ನಲ್ಲಿ ಸಿನಿಮಾವನ್ನು ಮರುಸ್ಥಾಪಿಸುವ ಬೇಡಿಕೆಯನ್ನು ಪುನರುಚ್ಛರಿಸಿದ್ದಾರೆ ಮತ್ತು ಸಮುದಾಯ ಪ್ರದರ್ಶನಗಳಿಗೆ ಬೆಂಬಲ ನೀಡಿದ್ದಾರೆ.
“ಸಿನಿಮಾ ಆನ್ಲೈನ್ನಲ್ಲಿ ಲಭ್ಯವಿಲ್ಲದ ಕಾರಣ ಸಮುದಾಯವು ಈ ಕತೆ ಕಣ್ಮರೆಯಾಗುವುದನ್ನು ಬಯಸುವುದಿಲ್ಲ. ಜನರು ಅದನ್ನು ಒಟಿಟಿಯಲ್ಲಿ ವೀಕ್ಷಿಸಲು ಸಾಧ್ಯವಾಗದಿದ್ದರೆ, ಗುರುದ್ವಾರಗಳು ಸ್ಕ್ರೀನಿಂಗ್ಗೆ ಬಾಗಿಲು ತೆರೆಯುತ್ತವೆ. ಜಸ್ವಂತ್ ಸಿಂಗ್ ಖಲ್ರಾ ಕತೆ ನೋಡಲು ಅರ್ಹವಾಗಿದೆ” ಎಂದು SGPC ಮೂಲಗಳು ತಿಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಮಾನವ ಹಕ್ಕುಗಳ ಕಾರ್ಯಕರ್ತ ಜಸ್ವಂತ್ ಸಿಂಗ್ ಖಲ್ರಾ ಅವರ ಜೀವನವನ್ನು ಆಧರಿಸಿದ ಬಯೋಪಿಕ್ ಜುಲೈ 3ರಂದು ಝೀ5ನಲ್ಲಿ ಮೊತ್ತಮೊದಲ ಬಾರಿಗೆ ಪ್ರದರ್ಶನಗೊಳಿಸಲಾಗಿದೆ. ಆದರೆ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳ ಅಡಿಯಲ್ಲಿ ಭದ್ರತಾ ಕಾಳಜಿ ಉಲ್ಲೇಖಿಸಿ ಕೇಂದ್ರ ಸರ್ಕಾರ ಸಿನಿಮಾವನ್ನು ತೆಗೆದು ಹಾಕುವಂತೆ ವೇದಿಕೆಗೆ ನಿರ್ದೇಶಿಸಿದೆ. ಹೀಗಾಗಿ ಬಿಡುಗಡೆಯಾದ ಎರಡು ದಿನಗಳಲ್ಲೇ ಸಿನಿಮಾವನ್ನು ಒಟಿಟಿ ವೇದಿಕೆಯಿಂದ ತೆಗೆಯಲಾಗಿದೆ. ಸಿನಿಮಾವು ಅಶಾಂತಿ ಪ್ರಚೋದಿಸಬಹುದು ಎಂದು ಸರ್ಕಾರ ಕಳವಳ ವ್ಯಕ್ತಪಡಿಸಿದೆ ಎಂದು ತೆಗೆದು ಹಾಕುವಿಕೆಗೆ ಕಾರಣಗಳಲ್ಲಿ ಒಂದೆಂದು ಉಲ್ಲೇಖಿಸಲಾಗಿದೆ.
ಹನಿ ಟ್ರೆಹಾನ್ ನಿರ್ದೇಶನ ‘ಸಟ್ಲಜ್’ ಸಿನಿಮಾದಲ್ಲಿ ದಿಲ್ಜಿತ್ ದೋಸಾಂಜ್, ಅರ್ಜುನ್ ರಾಂಪಾಲ್, ಸುವಿಂದರ್ ವಿಕ್ಕಿ ಮತ್ತು ಗೀತಿಕಾ ವಿದ್ಯಾ ಓಹ್ಲ್ಯಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.