×
Ad

ಮಾತುಕತೆಯ ನಡುವೆಯೇ ಇರಾನ್ ಮೇಲೆ ಅಮೆರಿಕದಿಂದ ದಾಳಿ | ಕದನ ವಿರಾಮ ಮುಗಿದಿದೆ ಎಂದ ಟ್ರಂಪ್; ಮುಂದೇನು?

ಮತ್ತೆ ತೈಲ ಬಿಕ್ಕಟ್ಟು ಎದುರಾಗುವ ಸಾಧ್ಯತೆ!

Update: 2026-07-09 07:10 IST

Photo: https://x.com/Iran_TVv

ವಾಷಿಂಗ್ಟನ್: ಇರಾನ್‌ನೊಂದಿಗೆ ನಡೆಯುತ್ತಿರುವ ರಾಜತಾಂತ್ರಿಕ ಮಾತುಕತೆಗಳ ನಡುವೆಯೇ ಅಮೆರಿಕ ಇರಾನ್ ಮೇಲಿನ ಮಿಲಿಟರಿ ದಾಳಿಗಳನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಿದೆ. ಪೂರ್ಣ ಪ್ರಮಾಣದ ಯುದ್ಧಕ್ಕೆ ಮರಳುವ ಉದ್ದೇಶವಿಲ್ಲ ಎಂದು ಹೇಳಿದರೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೊಸ ಸುತ್ತಿನ ದಾಳಿಗಳು ನಡೆಯಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇರಾನ್‌ನೊಂದಿಗೆ ಮಾಡಿಕೊಂಡಿದ್ದ ಕದನ ವಿರಾಮ ಮುಗಿದಿದೆ ಎಂದು ಟ್ರಂಪ್ ಹೇಳಿದ್ದಾರೆ. ಇನ್ನು ಮುಂದೆ ಹೊಸ ಒಪ್ಪಂದದ ಬಗ್ಗೆ ತಮಗೆ ವಿಶ್ವಾಸವಿಲ್ಲ ಎಂದಿರುವ ಅವರು, ಅಮೆರಿಕ "ಕೆಲಸವನ್ನು ಪೂರ್ಣಗೊಳಿಸಬೇಕು" ಎಂದು ಪ್ರತಿಪಾದಿಸಿದ್ದಾರೆ. ಆದರೆ ನಿರಂತರ ದಾಳಿಗಳು ಯುದ್ಧಕ್ಕೆ ಸಂಪೂರ್ಣವಾಗಿ ಮರಳುವುದನ್ನು ಅಥವಾ ದೀರ್ಘಾವಧಿಯ ಸೇನಾ ಕಾರ್ಯಾಚರಣೆಯನ್ನು ಸೂಚಿಸುವುದಿಲ್ಲ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.

ಆದರೆ ಟ್ರಂಪ್ ಅವರ ಈ ಮಿಶ್ರ ಸಂದೇಶಗಳು ಹಾಗೂ ಸತತ ಸೇನಾ ಕಾರ್ಯಾಚರಣೆಗೆ ನೀಡಿರುವ ಅನುಮೋದನೆ ಸಂಘರ್ಷದ ಮುಂದಿನ ಹಂತದ ಬಗ್ಗೆ ಅನಿಶ್ಚಿತತೆಯನ್ನು ಹೆಚ್ಚಿಸಿವೆ. ದೀರ್ಘಕಾಲದ ವೈರಾಗ್ಯ ಹೊಂದಿರುವ ಎರಡೂ ದೇಶಗಳ ನಡುವೆ ಕೆಲವೇ ವಾರಗಳ ಹಿಂದೆ ತಲುಪಿದ್ದ ಆರಂಭಿಕ ಒಪ್ಪಂದದ ಭವಿಷ್ಯದ ಮೇಲೂ ಪ್ರಶ್ನೆಗಳು ಮೂಡಿವೆ.

ಅಮೆರಿಕದ ಈ ಕ್ರಮವು ಹಾರ್ಮುಝ್ ಜಲಸಂಧಿಯಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ಸಾಗಿಸುವ ಹಡಗುಗಳ ಮೇಲೆ ಇರಾನ್ ನಡೆಸುತ್ತಿರುವ ದಾಳಿಗಳನ್ನು ತಡೆಯುವುದು ಹಾಗೂ ತನ್ನ ಪರಮಾಣು ಕಾರ್ಯಕ್ರಮದ ಕುರಿತು ಅಮೆರಿಕದ ಬೇಡಿಕೆಗಳಿಗೆ ಟೆಹ್ರಾನ್ ಮಣಿಯುವಂತೆ ಒತ್ತಡ ಹೇರುವ ತಂತ್ರವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ಮಾದರಿಯ ತಂತ್ರವನ್ನು ಟ್ರಂಪ್ ಈ ಹಿಂದೆಯೂ ಅನುಸರಿಸಿದ್ದರು.

ಇದು ಮಾತುಕತೆಯಲ್ಲಿ ಮೇಲುಗೈ ಸಾಧಿಸುವ ಪ್ರಯತ್ನವಾಗಿರಲಿ ಅಥವಾ ಸಂಘರ್ಷದ ಮತ್ತಷ್ಟು ಉಲ್ಬಣದ ಸೂಚನೆಯಾಗಿರಲಿ, ಮಧ್ಯವರ್ತಿಗಳು ತಾತ್ಕಾಲಿಕ ಕದನ ವಿರಾಮವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಆದರೆ ಈ ಬೆಳವಣಿಗೆಗಳು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುವ ಅಪಾಯವಿದೆ. ತೈಲ ಮತ್ತು ಅನಿಲದ ಬೆಲೆ ಏರಿಕೆಯಾದರೆ ಅಮೆರಿಕದಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷಕ್ಕೂ ಅದರ ಪರಿಣಾಮ ಎದುರಾಗುವ ಸಾಧ್ಯತೆ ಇದೆ.

ಪೂರ್ಣ ಪ್ರಮಾಣದ ಯುದ್ಧಕ್ಕೆ ಮರಳುವುದಿಲ್ಲ ಎಂಬ ಸಂದೇಶ ನೀಡಲು ಟ್ರಂಪ್ ಪ್ರಯತ್ನಿಸಿದರೂ, "ಏನಾದರೂ ಸಂಭವಿಸುವುದು ಬಹಳ ವೇಗವಾಗಿ ನಡೆಯಲಿದೆ. ನಾವು ಹೆಚ್ಚು ಸಮಯ ಕಾಯುವುದಿಲ್ಲ" ಎಂದು ಬುಧವಾರ ಎಚ್ಚರಿಕೆ ನೀಡಿದರು.

ಅದರ ಕೆಲವೇ ಗಂಟೆಗಳ ಬಳಿಕ, ಹಾರ್ಮುಝ್ ಜಲಸಂಧಿಯಲ್ಲಿ ಸಂಚಾರ ಸ್ವಾತಂತ್ರ್ಯಕ್ಕೆ ಬೆದರಿಕೆ ಒಡ್ಡುವ ಇರಾನ್‌ ನ ಸಾಮರ್ಥ್ಯವನ್ನು ಮತ್ತಷ್ಟು ಕುಗ್ಗಿಸುವ ಉದ್ದೇಶದಿಂದ ಹೊಸ ದಾಳಿಗಳನ್ನು ಆರಂಭಿಸಿರುವುದಾಗಿ ಅಮೆರಿಕ ಸೇನೆ ಘೋಷಿಸಿತು.

ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ತೊಡಗಿರುವ ಪ್ರಾದೇಶಿಕ ಗುಪ್ತಚರ ಅಧಿಕಾರಿಯೊಬ್ಬರ ಪ್ರಕಾರ, ಎರಡೂ ದೇಶಗಳ ನಡುವಿನ ಅಪನಂಬಿಕೆ ತೀವ್ರಗೊಂಡಿದ್ದು, ಸಂಘರ್ಷ ನಿರ್ಣಾಯಕ ಹಂತ ತಲುಪಿದೆ. ಆದರೂ ಕದನ ವಿರಾಮವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ದಿನದ 24 ಗಂಟೆಯೂ ಉನ್ನತ ಮಟ್ಟದ ಸಂಪರ್ಕ ಮುಂದುವರಿದಿದೆ. ತೆರೆಮರೆಯ ಮಾತುಕತೆಗಳ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಅನಾಮಧೇಯತೆಯ ಷರತ್ತಿನ ಮೇಲೆ ಅವರು ಈ ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನ ಮತ್ತು ಖತರ್‌ ನ ವಿದೇಶಾಂಗ ಸಚಿವರು ಹಾಗೂ ಈಜಿಪ್ಟ್‌ ನ ಗುಪ್ತಚರ ಮುಖ್ಯಸ್ಥರು ಮಧ್ಯಸ್ಥಿಕೆ ಪ್ರಯತ್ನಗಳಿಗೆ ನೇತೃತ್ವ ವಹಿಸಿದ್ದಾರೆ. ಬುಧವಾರ ಮುಕ್ತಾಯಗೊಂಡ NATO ಶೃಂಗಸಭೆಯ ಆತಿಥ್ಯ ವಹಿಸಿದ್ದ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಮತ್ತು ಸೌದಿ ಅರೇಬಿಯಾದ ನಾಯಕರು ಸಹ ಈ ಪ್ರಯತ್ನಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳ ಮೇಲಿನ ದಾಳಿಗಳ ಬಗ್ಗೆ ಅಮೆರಿಕ ಅಸಮಾಧಾನ ವ್ಯಕ್ತಪಡಿಸಿದ್ದು, ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಕುರಿತು ನಿಧಾನಗತಿಯ ಮಾತುಕತೆ ನಡೆಸುತ್ತಿದೆ ಎಂದು ಆರೋಪಿಸಿದೆ. ಕಳೆದ ತಿಂಗಳು ಘೋಷಿಸಿದ್ದ ಮಧ್ಯಂತರ ಒಪ್ಪಂದವನ್ನು ಶಾಶ್ವತ ಶಾಂತಿ ಒಪ್ಪಂದವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಪರಮಾಣು ಮಾತುಕತೆ ಮುಂದಿನ ಪ್ರಮುಖ ಹಂತವಾಗಿತ್ತು.

ಆದರೆ ಟೆಹ್ರಾನ್‌ ನ ಆರೋಪ ಭಿನ್ನವಾಗಿದೆ. ಜಲಸಂಧಿಗೆ ಸಂಬಂಧಿಸಿದ ಒಪ್ಪಂದವನ್ನು ವಾಷಿಂಗ್ಟನ್ ಉಲ್ಲಂಘಿಸಿದೆ. ಲೆಬನಾನ್‌ ನಿಂದ ಇಸ್ರೇಲಿ ಪಡೆಗಳನ್ನು ಹಿಂತೆಗೆದುಕೊಳ್ಳುವುದು ಸೇರಿದಂತೆ ಕದನ ವಿರಾಮದ ಷರತ್ತುಗಳನ್ನು ಜಾರಿಗೆ ತರಲು ಅಮೆರಿಕ ವಿಫಲವಾಗಿದೆ ಎಂದು ಇರಾನ್ ಆರೋಪಿಸಿದೆ.

ವಾಷಿಂಗ್ಟನ್ ಇನ್‌ಸ್ಟಿಟ್ಯೂಟ್ ಫಾರ್ ನಿಯರ್ ಈಸ್ಟ್ ಪಾಲಿಸಿಯ ಮಿಲಿಟರಿ ಮತ್ತು ಭದ್ರತಾ ಅಧ್ಯಯನ ಕಾರ್ಯಕ್ರಮದ ಅಮೆರಿಕದ ಮಾಜಿ ಮಿಲಿಟರಿ ವಿಶ್ಲೇಷಕ ಮೈಕೆಲ್ ಐಸೆನ್‌ಸ್ಟಾಡ್ಟ್, "ಅಧ್ಯಕ್ಷರು ಏನೇ ಹೇಳಿದರೂ ನಾವು ಇನ್ನೂ ಮಾತುಕತೆ ಪ್ರಕ್ರಿಯೆಯಲ್ಲಿದ್ದೇವೆ. ತಿಳುವಳಿಕೆ ಪತ್ರ ಮುಗಿದಿದೆ ಎಂದು ಘೋಷಿಸುವುದೂ ಮಾತುಕತೆಯ ಭಾಗವೇ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಟ್ರಂಪ್ ತಮ್ಮ ಸಾರ್ವಜನಿಕ ಹೇಳಿಕೆಗಳಲ್ಲಿ, "ಕದನ ವಿರಾಮ ಮುಗಿದಿದೆ ಎಂದು ನಾನು ಭಾವಿಸುತ್ತೇನೆ. ನಾವು ಕಾರ್ಯಚರಣೆ ಮಾಡಬಹುದು. ಆದರೆ ನನಗೆ ಹೊಸ ಒಪ್ಪಂದ ಬೇಕಿಲ್ಲ. ಅಮೆರಿಕ ಸೇನೆ ಕೆಲಸವನ್ನು ಪೂರ್ಣಗೊಳಿಸಬಹುದು" ಎಂದು ಹೇಳಿದ್ದಾರೆ.

ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಘರ್ ಖಲೀಬಾಫ್, ಟ್ರಂಪ್ ಆಡಳಿತ ಆರಂಭಿಕ ಒಪ್ಪಂದದ ನಿಯಮಗಳನ್ನು ಹಲವು ಬಾರಿ ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ.

"ಬೆದರಿಕೆ ಮತ್ತು ಸುಲಿಗೆಯ ರಾಜಕೀಯ ಮುಗಿದಿದೆ. ಅದರಿಂದ ಯಾವುದೇ ಪ್ರಯೋಜನವಿಲ್ಲ. ನಾವು ಮಣಿಯುವುದಿಲ್ಲ" ಎಂದು ಅವರು ಎಕ್ಸ್‌ನಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ ತಿಳಿಸಿದ್ದಾರೆ.

ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನ, ಹೊಸ ಸಂಘರ್ಷ ಯಾರ ಹಿತಾಸಕ್ತಿಗೂ ಅನುಕೂಲಕರವಲ್ಲ ಎಂದು ಹೇಳಿದೆ.

"ಈ ಪ್ರದೇಶದಲ್ಲಿ ಶಾಂತಿ ಸಾಧಿಸಲು ನಿರಂತರ ಸಂವಾದ ಮತ್ತು ರಾಜತಾಂತ್ರಿಕ ಪ್ರಯತ್ನಗಳೇ ಪರ್ಯಾಯವಿಲ್ಲದ ಮಾರ್ಗ" ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಟ್ರಂಪ್ ಇತ್ತೀಚೆಗೆ ಇರಾನ್ ನಾಯಕತ್ವವನ್ನು "ತರ್ಕಬದ್ಧ" ಮತ್ತು "ನಿಭಾಯಿಸಲು ಸುಲಭ" ಎಂದು ಬಣ್ಣಿಸಿದ್ದರು. ಆದರೆ ಈಗ ಅವರನ್ನು "ಕಲ್ಮಷ" ಮತ್ತು "ಅನಾರೋಗ್ಯಪೀಡಿತ ಜನರು" ಎಂದು ಟೀಕಿಸಿದ್ದಾರೆ.

ಮಿಲ್ವಾಕಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್, "ಇರಾನ್ ಸುಮಾರು ಒಂದು ವಾರದಿಂದ ಉತ್ತಮವಾಗಿ ವರ್ತಿಸುತ್ತಿತ್ತು. ಆದರೆ ಈಗ ಮತ್ತೆ ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ದಾಳಿ ಆರಂಭಿಸಿದೆ. ಅವರು ಹಡಗುಗಳ ಮೇಲೆ ಗುಂಡು ಹಾರಿಸಿದರೆ, ನಾವು ಅವರನ್ನು ಹೊಡೆದುರುಳಿಸುತ್ತೇವೆ" ಎಂದು ಹೇಳಿದ್ದಾರೆ.

ಎಪ್ರಿಲ್‌ ನಲ್ಲಿ ಮೊದಲ ಎರಡು ವಾರಗಳ ಕದನ ವಿರಾಮಕ್ಕೂ ಮುನ್ನ ಟ್ರಂಪ್, ಇರಾನ್‌ನ ಸೇತುವೆಗಳು, ರಸ್ತೆಗಳು ಮತ್ತು ವಿದ್ಯುತ್ ಸ್ಥಾವರಗಳ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. "ಇಡೀ ನಾಗರಿಕತೆ ಇಂದು ರಾತ್ರಿ ನಾಶವಾಗಬಹುದು, ಮತ್ತೆಂದೂ ಹಿಂದಿರುಗುವುದಿಲ್ಲ" ಎಂಬ ಕಠಿಣ ಹೇಳಿಕೆಯನ್ನೂ ಮಾಡಿದ್ದರು. ಕಳೆದ ತಿಂಗಳು 60 ದಿನಗಳ ತಾತ್ಕಾಲಿಕ ಒಪ್ಪಂದಕ್ಕೂ ಮುನ್ನವೂ ಇದೇ ರೀತಿಯ ಬೆದರಿಕೆಗಳನ್ನು ಅವರು ಪುನರಾವರ್ತಿಸಿದ್ದರು.

ವಿಶ್ಲೇಷಕರ ಪ್ರಕಾರ, ಟ್ರಂಪ್ ಪ್ರಭಾವ ಬಳಸಿ ಮಾತುಕತೆ ನಡೆಸಲು ಹೊಸ ದಾಳಿಗಳನ್ನು ಒತ್ತಡದ ಸಾಧನವಾಗಿ ಬಳಸುತ್ತಿದ್ದಾರೆ. ಆದರೆ ಕದನ ವಿರಾಮ ಮುಗಿದಿದೆ ಎಂಬ ಅವರ ಸ್ಪಷ್ಟ ಹೇಳಿಕೆ ಇರಾನ್‌ಗೆ ಮಿಲಿಟರಿ ಪ್ರತಿಕ್ರಿಯೆ ನೀಡಲು ಅವಕಾಶ ಕಲ್ಪಿಸಬಹುದು. ಪರಿಣಾಮವಾಗಿ ತೈಲ ಬೆಲೆಗಳು ಹಾಗೂ ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿ ಮತ್ತೆ ಅಸ್ಥಿರತೆ ಉಂಟಾಗುವ ಸಾಧ್ಯತೆ ಇದೆ.

ಅಂತರರಾಷ್ಟ್ರೀಯ ಬಿಕ್ಕಟ್ಟು ಗುಂಪಿನ ಇರಾನ್ ನಿರ್ದೇಶಕ ಅಲಿ ವೇಜ್, "ರಾಜತಾಂತ್ರಿಕ ಅವಕಾಶವನ್ನು ಮುಚ್ಚದೆ ಮಿಲಿಟರಿ ಒತ್ತಡ ಹೆಚ್ಚಿಸುವ ಪ್ರಯತ್ನ ಇದು. ಆದರೆ ಬಲವಂತದ ಚೌಕಾಶಿ ಅಪಾಯಕಾರಿ ಆಟ. ಒಂದು ಹಂತದಲ್ಲಿ ಈ ಒತ್ತಡವೇ ತಪ್ಪಿಸಲು ಉದ್ದೇಶಿಸಿರುವ ಯುದ್ಧಕ್ಕೆ ಕಾರಣವಾಗಬಹುದು" ಎಂದು ಎಚ್ಚರಿಸಿದ್ದಾರೆ.

ಆದರೂ ಮಧ್ಯಂತರ ಒಪ್ಪಂದದಡಿ ಭರವಸೆ ನೀಡಲಾದ ಆರ್ಥಿಕ ಪರಿಹಾರ ಇರಾನ್‌ಗೆ ಅತ್ಯಗತ್ಯವಾಗಿರುವುದರಿಂದ, ಟೆಹ್ರಾನ್ ಮತ್ತೆ ಮಾತುಕತೆ ಮೇಜಿಗೆ ಮರಳಲು ಇನ್ನೂ ಎಲ್ಲ ಕಾರಣಗಳಿವೆ ಎಂದು ಅವರು ಹೇಳಿದ್ದಾರೆ.

ಟ್ರಂಪ್ ಕೂಡ ಈ ಬೆಳವಣಿಗೆಗಳ ಪರಿಣಾಮದ ಬಗ್ಗೆ ಮಿಶ್ರ ಸಂದೇಶಗಳನ್ನು ನೀಡಿದ್ದಾರೆ. ಅಮೆರಿಕದ ಜನರಿಗೆ ಏರುತ್ತಿರುವ ಇಂಧನ ಬೆಲೆಗಳು ತಮ್ಮ ನಿರ್ಧಾರಗಳಿಗೆ ಕಾರಣವಾಗುವುದಿಲ್ಲ ಎಂದು ಅವರು ಈ ಹಿಂದಿನಿಂದಲೂ ಹೇಳುತ್ತಿದ್ದರು. ಆದರೆ ಮಧ್ಯಂತರ ಒಪ್ಪಂದಕ್ಕೆ ಒಪ್ಪಿಕೊಂಡ ಕಾರಣಗಳಲ್ಲಿ ಒಂದು "ಆರ್ಥಿಕ ವಿಪತ್ತು" ತಪ್ಪಿಸುವುದೂ ಆಗಿತ್ತು ಎಂದು ಬಳಿಕ ಒಪ್ಪಿಕೊಂಡಿದ್ದರು. ಒಪ್ಪಂದದ ನಂತರ ತೈಲದ ಬೆಲೆ ಕುಸಿಯುತ್ತಿದೆ ಎಂದು ಕೂಡ ಅವರು ಪ್ರಚಾರ ಮಾಡಿದ್ದರು.

ಇದೀಗ ಅವರು ಮತ್ತೆ ಇರಾನ್‌ ನ ವಿದ್ಯುತ್ ಸ್ಥಾವರಗಳು, ಉಪ್ಪುನೀರಿನ ಸಂಸ್ಕರಣಾ ಘಟಕಗಳು ಹಾಗೂ ಖಾರ್ಗ್ ದ್ವೀಪದ ತೈಲ ಉತ್ಪಾದನಾ ಕೇಂದ್ರವನ್ನು ಗುರಿಯಾಗಿಸುವ ಎಚ್ಚರಿಕೆ ನೀಡಿದ್ದಾರೆ.

"ನಾವು ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳಬಹುದು. ಅದನ್ನು ತಡೆಯಲು ಅವರಿಗೆ ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.

ಮಧ್ಯಂತರ ಚುನಾವಣೆಗಳಿಗೆ ನಾಲ್ಕು ತಿಂಗಳಿಗೂ ಕಡಿಮೆ ಅವಧಿ ಉಳಿದಿರುವ ಹಿನ್ನೆಲೆಯಲ್ಲಿ, ಯುದ್ಧದ ಅನಿಶ್ಚಿತತೆಯಿಂದ ತೈಲ ಬೆಲೆಗಳು ಮತ್ತೆ ಏರಿದರೆ ಅಮೆರಿಕದ ಜನರು ಇಂಧನಕ್ಕಾಗಿ ಹೆಚ್ಚಿನ ಹಣ ಪಾವತಿಸಬೇಕಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.

ಈ ಆತಂಕವನ್ನು ತಗ್ಗಿಸಲು ಪ್ರಯತ್ನಿಸಿದ ಟ್ರಂಪ್, "ನಾವು ದಾಳಿ ನಡೆಸಿದಾಗಲೆಲ್ಲಾ ತೈಲದ ಬೆಲೆ ಸ್ವಲ್ಪ ಮಾತ್ರ ಏರುತ್ತದೆ. ಇರಾನ್ ಪರಮಾಣು ಶಸ್ತ್ರಾಸ್ತ್ರ ಪಡೆಯುವುದನ್ನು ತಡೆಯುವುದು ಅದಕ್ಕಿಂತ ಮುಖ್ಯ. ಎಲ್ಲವೂ ಸರಿಯಾಗುತ್ತದೆ" ಎಂದು ಹೇಳಿದ್ದಾರೆ.

ಆದರೆ, "ತೈಲದ ಬೆಲೆ ಏರಿದಂತೆ ಉಳಿದ ಎಲ್ಲದರ ಬೆಲೆಯೂ ಏರುತ್ತದೆ" ಎಂಬುದನ್ನು ಅವರು ಒಪ್ಪಿಕೊಂಡಿದ್ದು, ಮಧ್ಯಪ್ರಾಚ್ಯದ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಜಾಗತಿಕ ತೈಲ ಮಾರುಕಟ್ಟೆ ಮತ್ತು ವಿಶ್ವ ಆರ್ಥಿಕತೆಯ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.

ಸೌಜನ್ಯ: NDTV

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News