ಇರಾನ್ ಜತೆಗಿನ ಕದನ ವಿರಾಮ ಕೊನೆಗೊಂಡಿದೆ ಎಂದು ಟ್ರಂಪ್ ಹೇಳಿದ ನಂತರ ಅಮೆರಿಕದಿಂದ ಮತ್ತೆ ದಾಳಿ; ಭಾರತದ ಮೇಲೆ ಪರಿಣಾಮ ಬೀರಲಿದೆಯೇ?
Screengrab : X
ಜೂನ್ ಮಧ್ಯದಲ್ಲಿ ಇರಾನ್ ಜೊತೆಗಿನ ಹೋರಾಟವನ್ನು ಕೊನೆಗೊಳಿಸಿದ್ದ ತಿಳುವಳಿಕಾ ಒಪ್ಪಂದದ ಬಗ್ಗೆ ಬುಧವಾರ (ಜುಲೈ 8) ಮಾತನಾಡಿದ ಡೊನಾಲ್ಡ್ ಟ್ರಂಪ್, "ಎಲ್ಲವೂ ಮುಗಿದಿದೆ" ಎಂದು ಹೇಳಿದರು. ಇದರ ಮರುದಿನವೇ, ಯುಎಸ್ ಮಿಲಿಟರಿ ಇರಾನ್ ಮೇಲೆ ಎರಡನೇ ದಿನದ ದಾಳಿಯನ್ನು ಆರಂಭಿಸಿದ್ದು, ಇದು ಮತ್ತೆ ಪೂರ್ಣ ಪ್ರಮಾಣದ ಯುದ್ಧಕ್ಕೆ ಕಾರಣವಾಗುವ ಭೀತಿಯನ್ನು ಹುಟ್ಟುಹಾಕಿದೆ.
ಪ್ರಮುಖ ತೈಲ ಸಾಗಣೆ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಟೆಹ್ರಾನ್ (ಇರಾನ್) ಹಡಗುಗಳ ಮೇಲಿನ ದಾಳಿಯನ್ನು ಮುಂದುವರಿಸಿದರೆ "ಇನ್ನೂ ಭೀಕರ ಪರಿಣಾಮ" ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಯುಎಸ್ ಮತ್ತು ಇರಾನ್ ಮತ್ತೆ ಯುದ್ಧವನ್ನು ಆರಂಭಿಸಿದರೆ ಭಾರತ ಮೇಲೆ ಇದು ಯಾವ ರೀತಿ ಪರಿಣಾಮ ಬೀರಲಿದೆ ?
►ಇರಾನ್ ಕದನ ವಿರಾಮ ಮುಗಿದಿದೆ ಎಂದ ಟ್ರಂಪ್
ಬುಧವಾರದಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ "ಇರಾನ್ ಜೊತೆಗಿನ ಕದನ ವಿರಾಮ ಕೊನೆಗೊಂಡಿದೆ" ಎಂದು ಘೋಷಿಸಿದರು. ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ನಡೆದ ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆಯ (NATO) ಶೃಂಗಸಭೆಯಲ್ಲಿ ಮಾತನಾಡಿದ ಅವರು "ನನಗೆ ಇನ್ನು ಮುಂದೆ ಅವರೊಂದಿಗೆ ಯಾವುದೇ ವ್ಯವಹಾರ ಬೇಡ. ಅವರು ಅತ್ಯಂತ ಕೆಟ್ಟವರು" ಎಂದು ಹೇಳಿದರು.
"ನನ್ನ ಮಟ್ಟಿಗೆ ಹೇಳುವುದಾದರೆ, ಎಲ್ಲವೂ ಮುಗಿದಿದೆ" ಎಂದಿದ್ದರು ಟ್ರಂಪ್.
ಹಾರ್ಮುಝ್ ಜಲಸಂಧಿಯಲ್ಲಿ ಇತ್ತೀಚೆಗೆ ಮೂರು ಹಡಗುಗಳ ಮೇಲೆ ನಡೆದ ದಾಳಿಗೆ ಪ್ರತಿಯಾಗಿ ಯುಎಸ್ ಮಿಲಿಟರಿ ಇರಾನ್ ಮೇಲೆ ಹೊಸ ದಾಳಿಗಳನ್ನು ನಡೆಸಿ, 80 ಗುರಿಗಳ ಮೇಲೆ ದಾಳಿ ಮಾಡಿದ ನಂತರ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ದಾಳಿಯ ನಂತರ ಯುಎಸ್ ಸೆಂಟ್ರಲ್ ಕಮಾಂಡ್, "ಇರಾನಿನ ಪಡೆಗಳ ಅನಗತ್ಯ ಆಕ್ರಮಣಶೀಲತೆಯು ಕದನ ವಿರಾಮದ ಸ್ಪಷ್ಟ ಹಾಗೂ ಅಪಾಯಕಾರಿ ಉಲ್ಲಂಘನೆಯಾಗಿದೆ . ಇದು ನೌಕಾಯಾನದ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ" ಎಂದು ಹೇಳಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಯುಎಸ್ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ ಬಹರೇನ್ ಹಾಗೂ ಕುವೈತ್‌ನಲ್ಲಿರುವ 85 ಯುಎಸ್ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ತಿಳಿಸಿದೆ. ಇರಾನ್ ಸಂಸತ್ತಿನ ಸ್ಪೀಕರ್ ಎಂ ಬಿ ಘಲಿಬಾಫ್, ಯುಎಸ್ ನಡೆಸಿದ ದಾಳಿಗಳು ಶಾಂತಿ ಒಪ್ಪಂದವನ್ನು ಉಲ್ಲಂಘಿಸಿವೆ ಎಂದು ಹೇಳಿದ್ದಾರೆ.
►ಇರಾನ್ ವಿರುದ್ಧ ಎರಡನೇ ದಿನವೂ ದಾಳಿ ಮುಂದುವರಿಸಿದ ಅಮೆರಿಕ
ಟ್ರಂಪ್ ಅವರ ಹೇಳಿಕೆಗಳ ಬೆನ್ನಲ್ಲೇ, ಅಮೆರಿಕ ಗುರುವಾರ ಇರಾನ್ ವಿರುದ್ಧ ಹೊಸ ವೈಮಾನಿಕ ದಾಳಿಗಳನ್ನು ಪ್ರಾರಂಭಿಸಿತು. ಈ ದಾಳಿಗಳು ಮೊದಲಿನದ್ದಕ್ಕಿಂತಲೂ ಹೆಚ್ಚು ವ್ಯಾಪಕವಾಗಿ ಕಂಡುಬಂದವು. ಜಲಸಂಧಿಯಲ್ಲಿ "ನೌಕಾಯಾನದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ" ಇರಾನ್‌ನ ಸಾಮರ್ಥ್ಯವನ್ನು ಇನ್ನಷ್ಟು ಕುಗ್ಗಿಸುವ ಉದ್ದೇಶದಿಂದ ಈ ಇತ್ತೀಚಿನ ದಾಳಿಗಳನ್ನು ನಡೆಸಲಾಗಿದೆ ಎಂದು ಯುಎಸ್ ಮಿಲಿಟರಿ ಅಧಿಕಾರಿಗಳು ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಯುಎಸ್ ಸೆಂಟ್ರಲ್ ಕಮಾಂಡ್ (Centcom) ಸಾಮಾಜಿಕ ಮಾಧ್ಯಮದಲ್ಲಿ ಹೀಗೆ ಹೇಳಿದೆ: "ಮುಖ್ಯ ಕಮಾಂಡರ್ ಅವರ ನಿರ್ದೇಶನದ ಮೇರೆಗೆ, ಹಾರ್ಮುಝ್ ಜಲಸಂಧಿಯಲ್ಲಿ ನೌಕಾಯಾನದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಇರಾನ್ ಸಾಮರ್ಥ್ಯವನ್ನು ಇನ್ನಷ್ಟು ಕುಗ್ಗಿಸಲು ಯುಎಸ್ ಸೆಂಟ್ರಲ್ ಕಮಾಂಡ್ ಪಡೆಗಳು ಇರಾನ್ ವಿರುದ್ಧ ಹೆಚ್ಚುವರಿ ದಾಳಿಗಳನ್ನು ನಡೆಸಲು ಪ್ರಾರಂಭಿಸಿವೆ.
ಪ್ರಮುಖ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಮುಕ್ತವಾಗಿ ಸಂಚರಿಸುವ ವಾಣಿಜ್ಯ ಹಡಗುಗಳು ಮತ್ತು ನಾಗರಿಕ ಸಿಬ್ಬಂದಿಗಳ ಮೇಲೆ ಇತ್ತೀಚೆಗೆ ನಡೆದ ಅಸಮರ್ಥನೀಯ ಆಕ್ರಮಣಕ್ಕೆ ಅಮೆರಿಕ ಇರಾನ್ ಅನ್ನು ಹೊಣೆಗಾರನನ್ನಾಗಿ ಮಾಡುತ್ತಿದೆ."
ಹೊರ್ಮೊಜ್ಗಾನ್ ಮತ್ತು ಮಹ್‌ಶಹರ್ ಪ್ರಾಂತ್ಯಗಳ ಕರಾವಳಿ ನೆಲೆಗಳು ಹಾಗೂ ನಾಗರಿಕ ಸೌಲಭ್ಯಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಇರಾನ್ ಮಿಲಿಟರಿ ತಿಳಿಸಿದೆ. ತದನಂತರ ಬಂದರ್ ಅಬ್ಬಾಸ್ ಮತ್ತು ಬುಶೆಹರ್‌ನಲ್ಲಿ ನಿಯೋಜನೆಗೊಂಡಿದ್ದ ಎಂಟು ಇರಾನ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಅದು ಹೇಳಿದೆ. ಕೊಲ್ಲಿಯಲ್ಲಿ ವಿವಾದಿತ ಅಬು ಮೂಸಾ ದ್ವೀಪಕ್ಕೆ ಎರಡು ಕ್ಷಿಪಣಿಗಳು ಅಪ್ಪಳಿಸಿವೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಕೊನಾರಕ್ ಮತ್ತು ಚಬಹಾರ್ ಪ್ರದೇಶಗಳಲ್ಲಿ ಹಲವಾರು ಸ್ಫೋಟಗಳು ಕೇಳಿಬಂದಿವೆ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ವರದಿ ಮಾಡಿದ್ದು, ಚಬಹಾರ್‌ನ ಕೆಲವು ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಐಆರ್‌ಎನ್‌ಎ (IRNA) ತಿಳಿಸಿದೆ.
ಹೊಸ ದಾಳಿಗಳಿಗೆ ಪ್ರತಿಕ್ರಿಯಿಸಿದ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ವಿಡಿಯೊಗಳನ್ನು ಪೋಸ್ಟ್ ಮಾಡಿದ್ದು, ಪರಿಸ್ಥಿತಿ "ಇನ್ನಷ್ಟು ಹದಗೆಡಬಹುದು" ಎಂದು ಹೇಳಿದ್ದಾರೆ. "ನಿನ್ನೆ ಇರಾನ್ ಹಡಗುಗಳ ಮೇಲೆ ನಡೆಸಿದ ಬಾಂಬ್ ದಾಳಿಗೆ ಪ್ರತೀಕಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇದು ಮತ್ತೆ ಸಂಭವಿಸಿದರೆ, ಪರಿಸ್ಥಿತಿ ಇನ್ನೂ ಭೀಕರವಾಗಲಿದೆ!" ಎಂದು ಟ್ರಂಪ್ ಬರೆದಿದ್ದಾರೆ.
ಇತ್ತೀಚಿನ ಯುದ್ಧವು "ದೀರ್ಘಾವಧಿಯ" ಮಿಲಿಟರಿ ಕ್ರಮಕ್ಕೆ ಕಾರಣವಾಗುವುದಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ. ಏನೇ ಸಂಭವಿಸಿದೂ ಅದು ಅತಿ ವೇಗವಾಗಿ ಸಂಭವಿಸಲಿದೆ. ಆದರೆ ಯುಎಸ್ ಮಿಲಿಟರಿ "ಕೆಲಸವನ್ನು ಪೂರ್ತಿಯಾಗಿ ಮುಗಿಸಿಬಿಡಬಹುದು" ಎಂದಿದ್ದಾರೆ ಟ್ರಂಪ್.
►ಟ್ರಂಪ್ ಹೇಳಿಕೆಗಳು ಮತ್ತು ಯುಎಸ್ ಮಿಲಿಟರಿ ಕ್ರಮದ ತಕ್ಷಣದ ಪರಿಣಾಮ
ಇರಾನ್ ಕದನ ವಿರಾಮ ಕೊನೆಗೊಂಡಿದೆ ಎಂದು ಟ್ರಂಪ್ ಉಲ್ಲೇಖಿಸಿದ ಬೆನ್ನಲ್ಲೇ, ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ 80 ಡಾಲರ್ ಗಿಂತ ಹೆಚ್ಚಾದವು. ಅಂತರರಾಷ್ಟ್ರೀಯ ಮಾನದಂಡದ ಬ್ರೆಂಟ್ ನಾರ್ತ್ ಸೀ ಕಚ್ಚಾ ತೈಲ ಬೆಲೆ ಶೇಕಡಾ ಎಂಟರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 80.12 ಡಾಲರ್ ಗೆ ತಲುಪಿತು. ಮತ್ತೊಂದೆಡೆ ಯುಎಸ್ ತೈಲ ಒಪ್ಪಂದದ ಮಾನದಂಡವಾದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ (WTI) ಶೇಕಡಾ 4.4 ರಷ್ಟು ಗಳಿಸಿ ಪ್ರತಿ ಬ್ಯಾರೆಲ್‌ಗೆ 73.52 ಡಾಲರ್ ಗೆ ತಲುಪಿತು.
ಆದರೆ, ಅದು ಆ ಗಳಿಕೆಯಲ್ಲಿ ಕೆಲವನ್ನು ಕಳೆದುಕೊಂಡಿತು. ಗುರುವಾರ ಬ್ರೆಂಟ್ ಕಚ್ಚಾ ತೈಲ ಬೆಲೆಗಳು 78 ಸೆಂಟ್ಸ್ ಅಥವಾ ಶೇಕಡಾ ಒಂದರಷ್ಟು ಹೆಚ್ಚಾಗಿ ಬ್ಯಾರೆಲ್‌ಗೆ 78.80 ಡಾಲರ್ ಗೆ ತಲುಪಿದವು, ಹಾಗೆಯೇ ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ ಕಚ್ಚಾ ತೈಲವು 74 ಸೆಂಟ್ಸ್ ಅಥವಾ ಶೇಕಡಾ 1.01 ರಷ್ಟು ಗಳಿಸಿ 74.26 ಡಾಲರ್ ನಲ್ಲಿ ವಹಿವಾಟು ನಡೆಸಿತು.
ಯುಎಸ್ ಮತ್ತು ಇರಾನ್ ನಡುವೆ ಮತ್ತೆ ಯುದ್ಧ ಪ್ರಾರಂಭವಾಗುವ ಸಾಧ್ಯತೆಯು ಪ್ರಪಂಚದಾದ್ಯಂತದ ಮಾರುಕಟ್ಟೆಗಳ ರಕ್ತಪಾತಕ್ಕೆ ಕಾರಣವಾಯಿತು. ಪ್ಯಾರಿಸ್ ಮತ್ತು ಫ್ರಾಂಕ್‌ಫರ್ಟ್ ಎರಡೂ ಮಾರುಕಟ್ಟೆಗಳು ದಿನದ ಅಂತ್ಯಕ್ಕೆ ಶೇಕಡಾ ಎರಡಕ್ಕಿಂತ ಹೆಚ್ಚು ಕುಸಿದವು, ಇತ್ತ ಲಂಡನ್ ಶೇಕಡಾ 1.6 ರಷ್ಟು ಕುಸಿತ ಕಂಡಿತು. ವಾಲ್ ಸ್ಟ್ರೀಟ್‌ನಲ್ಲಿ, ಡೌ ಜೋನ್ಸ್ ಶೇಕಡಾ 1.1 ರಷ್ಟು ಕೆಳಗೆ ಮುಕ್ತಾಯವಾಯಿತು ಮತ್ತು S&P 500 ಶೇಕಡಾ 0.3 ರಷ್ಟು ನಷ್ಟ ಅನುಭವಿಸಿತು. ತಂತ್ರಜ್ಞಾನ ಆಧಾರಿತ ನಾಸ್ಡಾಕ್ ಕಾಂಪೋಸಿಟ್ ಮಾತ್ರ ಶೇಕಡಾ 0.2 ರಷ್ಟು ಮೇಲಕ್ಕೆ ಏರಿತು.
►ಭಾರತ ಆತಂಕಪಡಬೇಕೇ?
ಭಾರತಕ್ಕೆ, ಇರಾನ್ ಜೊತೆಗಿನ ಕದನ ವಿರಾಮ ಮುಕ್ತಾಯದ ಕುರಿತಾದ ಟ್ರಂಪ್ ಅವರ ಘೋಷಣೆ ಆತಂಕಕಾರಿಯಾಗಿದೆ. ಇರಾನ್ ಮತ್ತು ಯುಎಸ್ ಮತ್ತೆ ಯುದ್ಧವನ್ನು ಆರಂಭಿಸಿದರೆ, ಹಾರ್ಮುಝ್ ಜಲಸಂಧಿಯು ಮತ್ತೊಮ್ಮೆ ಮುಚ್ಚಲ್ಪಟ್ಟು, ಭಾರತದ ತೈಲ ಮತ್ತು ಅನಿಲ ಪೂರೈಕೆಯ ಮೇಲೆ ಪರಿಣಾಮ ಬೀರಬಹುದು.
ಫೆಬ್ರವರಿಯಲ್ಲಿ ಸಂಘರ್ಷ ಪ್ರಾರಂಭವಾಗುವ ಮೊದಲು, ಈ ಪ್ರಮುಖ ಜಲಮಾರ್ಗವು ಭಾರತದ ಕಚ್ಚಾ ತೈಲ ಆಮದಿನ ಸುಮಾರು ಶೇಕಡಾ 40 ರಷ್ಟು ಮತ್ತು ಅದರ ಎಲ್‌ಎನ್‌ಜಿ ಆಮದಿನ ಸುಮಾರು ಶೇಕಡಾ 60 ರಷ್ಟನ್ನು ನಿರ್ವಹಿಸುತ್ತಿತ್ತು. ಭಾರತವು ತನ್ನ ಕಚ್ಚಾ ತೈಲ ಆಮದು ಬೇರೆ ಕಡೆಯಿಂದ ಮಾಡಿದರೂ ಅದರ ಎಲ್‌ಎನ್‌ಜಿ ಮತ್ತು ಎಲ್‌ಪಿಜಿ (LPG) ಆಮದುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾದ ಅಗತ್ಯವಿದೆ.
ಮಾರ್ಚ್‌ನಲ್ಲಿ ನಡೆದಂತೆ ಜಲಸಂಧಿಯು ಮತ್ತೊಮ್ಮೆ ಸಂಪೂರ್ಣವಾಗಿ ನಿರ್ಬಂಧಿಸಲ್ಪಟ್ಟರೆ, ಇಂಧನ ಬೆಲೆಗಳು ಹೆಚ್ಚಾಗಬಹುದು. ಇದು ಇಂಧನ, ಆಹಾರ ಮತ್ತು ರಸಗೊಬ್ಬರ ವೆಚ್ಚಗಳನ್ನು ಹೆಚ್ಚಿಸುತ್ತದೆ. ಅಸ್ಥಿರವಾದ ಎಲ್ ನಿನೋ ಮುಂಗಾರಿನೊಂದಿಗೆ ಇದೂ ಕೂಡಾ ಸೇರಿದರೆ ದೇಶೀಯ ಹಣದುಬ್ಬರವು ಮತ್ತಷ್ಟು ತೀವ್ರಗೊಳ್ಳಲಿದೆ
ಹಾರ್ಮುಝ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರದಲ್ಲಿ ಮತ್ತೊಮ್ಮೆ ಅಡಚಣೆಯಾದರೆ ಭಾರತವು ತುಂಬಾ ಕಳವಳಗೊಳ್ಳುತ್ತದೆ, ಏಕೆಂದರೆ ಇದರಿಂದ ಆಮದು ಬಿಲ್ ಹೆಚ್ಚಾಗುವುದು ಮಾತ್ರವಲ್ಲದೆ, ಸಾಮಾನ್ಯ ಜನರಿಗೆ ಇದು ಅಡುಗೆ ಅನಿಲ ಸಿಲಿಂಡರ್‌ಗಳ ಲಭ್ಯತೆ ಮತ್ತು ಬೆಲೆಯ ಆತಂಕದಲ್ಲಿ ಪ್ರತಿಫಲಿಸುತ್ತದೆ ಎಂದು ಸೊಸೈಟಿ ಫಾರ್ ಪಾಲಿಸಿ ಸ್ಟಡೀಸ್‌ನ ನಿರ್ದೇಶಕರಾದ ಸಿ ಉದಯ್ ಭಾಸ್ಕರ್ ಹೇಳಿರುವುದಾಗಿ ʼಲೈವ್ ಮಿಂಟ್ʼ ಉಲ್ಲೇಖಿಸಿದೆ.
ಹೆಚ್ಚಿನ ಇಂಧನ ವೆಚ್ಚಗಳು ಪ್ಲಾಸ್ಟಿಕ್ ಪ್ಯಾಕೇಜಿಂಗ್ ಮತ್ತು ಸೋಪುಗಳು ಹಾಗೂ ಕ್ರೀಮ್‌ಗಳಲ್ಲಿ ಬಳಸುವ ಕಚ್ಚಾ ತೈಲ ಆಧಾರಿತ ಕಚ್ಚಾ ಸಾಮಗ್ರಿಗಳ ಬೆಲೆಗಳನ್ನು ಹೆಚ್ಚಿಸಬಹುದು ಎಂದು ಭಾರತೀಯ ಗ್ರಾಹಕ ಕಂಪನಿಗಳು ಆತಂಕ ವ್ಯಕ್ತಪಡಿಸಿವೆ. ನಿರಂತರ ಹಣದುಬ್ಬರವು ಗ್ರಾಹಕರನ್ನು ತಮ್ಮ ಐಚ್ಛಿಕ ವೆಚ್ಚಗಳನ್ನು ಕಡಿತಗೊಳಿಸುವಂತೆ ಮಾಡಬಹುದು ಮತ್ತು ದಿನಬಳಕೆಯ ಅಗತ್ಯ ವಸ್ತುಗಳ ಮೇಲೂ ಕಡಿಮೆ ಖರ್ಚು ಮಾಡಲು ಪ್ರೇರೇಪಿಸಬಹುದು. ರಫ್ತುಗಳ ಬಗೆಗೂ ಆತಂಕವಿದೆ. ಯುದ್ಧವು ಪುನರಾರಂಭಗೊಂಡರೆ ಪಶ್ಚಿಮ ಏಷ್ಯಾಕ್ಕೆ ಭಾರತದ ರಫ್ತು ಮೇಲೆ ಹೊಡೆತ ಬೀಳಬಹುದು. ʼಲೈವ್ ಮಿಂಟ್ʼ ವರದಿ ಪ್ರಕಾರ, ನವೀಕೃತ ಹಡಗು ಸಂಚಾರ ಅಡಚಣೆಗಳು ಉಡುಪುಗಳಂತಹ ರಫ್ತು ಆಧಾರಿತ ವಲಯಗಳಿಗೆ ಭೀತಿಯನ್ನು ಉಂಟುಮಾಡುತ್ತವೆ, ಇವು ಈಗಾಗಲೇ ಕಳೆದ ವರ್ಷ ಯುಎಸ್ ವಿಧಿಸಿದ ಸುಂಕಗಳ ಪರಿಣಾಮಗಳೊಂದಿಗೆ ಸೆಣಸಾಡುತ್ತಿವೆ.
ಇರಾನ್ ಕದನ ವಿರಾಮದ ಮುಕ್ತಾಯವು ಇರಾನ್‌ನಿಂದ ತೈಲವನ್ನು ಖರೀದಿಸುವ ಭಾರತದ ಯೋಜನೆಗಳನ್ನು ಗೊಂದಲಕ್ಕೆ ತಳ್ಳಿದೆ. ಯುಎಸ್ ಇರಾನ್‌ನೊಂದಿಗೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದಾಗ, ಅದು ಇರಾನಿನ ತೈಲದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿತ್ತು. ಯುಎಸ್ ಹಣಕಾಸು ಇಲಾಖೆಯ ವಿದೇಶಿ ಆಸ್ತಿ ನಿಯಂತ್ರಣ ಕಚೇರಿಯು ಜೂನ್ 22 ರಂದು ನಿರ್ಬಂಧಗಳ ಮೇಲೆ 60 ದಿನಗಳ ವಿನಾಯಿತಿಯನ್ನು ನೀಡಿತ್ತು, ಇದು ಇರಾನಿನ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದನೆ, ಮಾರಾಟ ಮತ್ತು ಸಾಗಣೆಗೆ ಅನುಮತಿ ನೀಡಿತ್ತು.
ಭಾರತವು ಇನ್ನೂ ಟೆಹ್ರಾನ್‌ನೊಂದಿಗೆ ತೈಲ ಒಪ್ಪಂದವನ್ನು ಅಂತಿಮಗೊಳಿಸಿಲ್ಲ. ಅವರು ಭವಿಷ್ಯದ ಯೋಜನೆಗಳನ್ನು ಪರಿಶೀಲಿಸುತ್ತಿದ್ದರು. ಆದರೆ, ಈ ನಿರ್ಧಾರವನ್ನು ಈಗ ತಡೆಹಿಡಿಯಲಾಗುತ್ತದೆ. "ರಿಫೈನರಿಗಳು ಇನ್ನೂ ಕಾದು ನೋಡುವ ತಂತ್ರದಲ್ಲಿದ್ದು, ಹೆಚ್ಚಿನ ಸ್ಪಷ್ಟತೆಗಾಗಿ ಕಾಯುತ್ತಿವೆ. ಇರಾನ್‌ನಿಂದ ಆಮದು ಮಾಡಿಕೊಳ್ಳುವ ಕುರಿತಾದ ಮಾತುಕತೆಗಳ ಮೇಲೆ ಈಗ ಪರಿಣಾಮ ಬೀರಬಹುದು. ಭಾರತವು ನಿರ್ಬಂಧ ಹೇರಲಾದ ತೈಲವನ್ನು ಯಾವುದೇ ಕಾರಣಕ್ಕೂ ಖರೀದಿಸುವುದಿಲ್ಲ," ಎಂದು ಭಾರತೀಯ ತೈಲ ಸಂಸ್ಕರಣಾ ಸಂಸ್ಥೆಯ ಅಧಿಕಾರಿಯೊಬ್ಬರು ʼಲೈವ್ ಮಿಂಟ್ʼಗೆ ತಿಳಿಸಿದ್ದಾರೆ.
ಸಿಎನ್‌ಬಿಸಿ ವರದಿಯ ಪ್ರಕಾರ, ಭಾರತವು 50 ಬಿಲಿಯನ್ ಡಾಲರ್ ಮೌಲ್ಯದ ಷೇರು ಮಾರುಕಟ್ಟೆ ಕೊಡುಗೆಗಳ ಸುರಿಮಳೆಗೆ ಸಜ್ಜಾಗುತ್ತಿತ್ತು. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತಿಳಿಯಾದ ನಂತರ ಈ ಐಪಿಒಗಳ ಯೋಜನೆಗಳನ್ನು ಕಳೆದ ತಿಂಗಳು ಘೋಷಿಸಲಾಗಿತ್ತು. ಆದರೆ, ಇತ್ತೀಚಿನ ದಾಳಿಗಳು ಯುದ್ಧವು ಪುನರಾರಂಭಗೊಳ್ಳುವ ಭೀತಿಯನ್ನು ಹೆಚ್ಚಿಸಿರುವುದರಿಂದ, ಈ ಷೇರು ಲಿಸ್ಟಿಂಗ್ಸ್ ಅನಿಶ್ಚಿತತೆಯಲ್ಲಿವೆ."
ಈ ದಾಳಿಗಳು ಕೇವಲ ಒತ್ತಡ ಹೇರುವ ತಂತ್ರವೇ ಅಥವಾ ಮಾತುಕತೆಗಳ ಸಂಪೂರ್ಣ ವೈಫಲ್ಯವೇ ಎಂಬುದನ್ನು ಕಾದು ನೋಡಬೇಕಾಗಿದೆ. ಜಗತ್ತು ಮತ್ತು ಭಾರತವು ಇದು ಮಾತುಕತೆಯ ವೈಫಲ್ಯವಾಗಿರಬಾರದು ಮತ್ತು ಯುದ್ಧವು ಮತ್ತೆ ಶುರುವಾಗಬಾರದು ಎಂದು ಆಶಿಸುತ್ತವೆ.