×
Ad

ಕೇವಲ 90 ದಿನಗಳಲ್ಲಿ 3,700 ಸ್ಟಾಕ್ ವಹಿವಾಟುಗಳನ್ನು ಮಾಡಿದ ಡೊನಾಲ್ಡ್ ಟ್ರಂಪ್; ದಿಗ್ಭ್ರಮೆಗೊಳಗಾದ ವಾಲ್ ಸ್ಟ್ರೀಟ್!

►ಆರೋಪ ನಿರಾಕರಿಸಿದ ಶ್ವೇತಭವನ

Update: 2026-05-18 18:32 IST

ಡೊನಾಲ್ಡ್ ಟ್ರಂಪ್ | Photo Credit : PTI 

2026 ರ ಮೊದಲ ಮೂರು ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಥವಾ ಅವರ ಸಲಹೆಗಾರರು ಹತ್ತಾರು ಮಿಲಿಯನ್ ಡಾಲರ್‌ಗಳಷ್ಟು ಮೌಲ್ಯದ 3,700 ಕ್ಕೂ ಹೆಚ್ಚು ಸ್ಟಾಕ್ ವಹಿವಾಟುಗಳನ್ನು ಮಾಡಿದ್ದಾರೆ ಎಂದು ಹಣಕಾಸು ವರದಿಗಳು ಬಹಿರಂಗಪಡಿಸಿವೆ. ಈ ವಿಷಯದ ಬಗ್ಗೆ ಬ್ಲೂಮ್‌ಬರ್ಗ್ ಮೊದಲು ವರದಿ ಮಾಡಿದ್ದು, ಇದರ ಪ್ರಕಾರ, ತಂತ್ರಜ್ಞಾನ ಹಣಕಾಸು, ಏರೋಸ್ಪೇಸ್ ಮತ್ತು ಮಾಧ್ಯಮ ವಲಯಗಳಾದ್ಯಂತ ಪ್ರಮುಖ ಕಂಪನಿಗಳಲ್ಲಿ ಹತ್ತಾರು ಮಿಲಿಯನ್ ಡಾಲರ್‌ಗಳನ್ನು ಒಳಗೊಂಡಿರುವ ವ್ಯಾಪಾರ ಚಟುವಟಿಕೆಗಳು ಇದರಲ್ಲಿದೆ. ಈ ಚಟುವಟಿಕೆಗಳು ವಾಲ್ ಸ್ಟ್ರೀಟ್ ತಜ್ಞರನ್ನು ಆಘಾತಗೊಳಿಸಿದ್ದು ಹಿತಾಸಕ್ತಿ ಸಂಘರ್ಷದ ಕಳವಳಗಳನ್ನು ಮತ್ತೆ ಹುಟ್ಟುಹಾಕಿದೆ.

ಸರಳವಾಗಿ ಹೇಳುವುದಾದರೆ, ಈ ವರ್ಷದ ಜನವರಿ ಮತ್ತು ಮಾರ್ಚ್ ನಡುವೆ ಟ್ರಂಪ್ ದಿನಕ್ಕೆ ಸರಾಸರಿ 40 ಕ್ಕೂ ಹೆಚ್ಚು ವಹಿವಾಟುಗಳನ್ನು ನಡೆಸಿದ್ದಾರೆ. ಇದು ಹಿಂದಿನ ತ್ರೈಮಾಸಿಕಕ್ಕಿಂತ ಸಿಕ್ಕಾಪಟ್ಟೆ ಅಧಿಕವಾಗಿದೆ. 2025 ರ ಕೊನೆಯ ಮೂರು ತಿಂಗಳಲ್ಲಿ ಸುಮಾರು 380 ವಹಿವಾಟುಗಳು ನಡೆದಿದೆ ಎಂದು ವರದಿ ಬಹಿರಂಗಪಡಿಸಿದೆ. .

ದಿಗ್ಭ್ರಮೆಗೊಳಗಾದ ವಾಲ್ ಸ್ಟ್ರೀಟ್

ಬ್ಲೂಮ್‌ಬರ್ಗ್‌ ಜತೆ ಮಾತನಾಡಿದ ಟಟಲ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮ್ಯಾಥ್ಯೂ ಟಟಲ್, ಇದು ದೊಡ್ಡ ಮಟ್ಟದ ವಹಿವಾಟು ಎಂದು ಹೇಳಿದ್ದಾರೆ. ಇದು ಬಹುತೇಕ ಬೃಹತ್ ಅಲ್ಗಾರಿದಮಿಕ್ ವಹಿವಾಟುಗಳನ್ನು ಹೊಂದಿರುವ ಹೆಡ್ಜ್ ಫಂಡ್‌ನಂತಿದೆ ಎಂದು ಹೇಳಿದ್ದಾರೆ. ಇತರ ವಾಲ್ ಸ್ಟ್ರೀಟ್ ವೃತ್ತಿಪರರು ಸಹ ಈ ವ್ಯಾಪಾರ ಚಟುವಟಿಕೆ ಅಸಾಮಾನ್ಯವೆಂದು ಬಣ್ಣಿಸಿದ್ದಾರೆ.

ನನಗೆ ಗೊಂದಲವಾಗಿದೆ. ವಾಲ್ ಸ್ಟ್ರೀಟ್‌ನಲ್ಲಿರುವ ನನ್ನ 40-ಕ್ಕೂ ಹೆಚ್ಚು ವರ್ಷದ ಅನುಭವದಲ್ಲಿ, ಯಾವುದೇ ಮಾನದಂಡಗಳ ಪ್ರಕಾರ ಇದು ಅಸಾಮಾನ್ಯ ಪ್ರಮಾಣದ ವಹಿವಾಟು ಎಂದು ʼದಿ ವೆಲ್ತ್ ಅಲೈಯನ್ಸ್‌ʼನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎರಿಕ್ ಡಿಟನ್ ಪ್ರತಿಕ್ರಿಯಿಸಿದ್ದಾರೆ.

50 ಪಾರ್ಕ್ ಇನ್ವೆಸ್ಟ್‌ಮೆಂಟ್ಸ್‌ನ ಸಂಸ್ಥಾಪಕ ಆಡಮ್ ಸರ್ಹಾನ್, ಇಷ್ಟು ಹೆಚ್ಚಿನ ಪ್ರಮಾಣದ ವಹಿವಾಟಿನ ಹಿಂದಿನ ತಂತ್ರ ಮತ್ತು ಆ ಎಲ್ಲಾ ವಹಿವಾಟುಗಳ ನಂತರ ಅದು ನಿಜವಾಗಿಯೂ ಅರ್ಥಪೂರ್ಣ ಲಾಭವನ್ನು ನೀಡುತ್ತದೆಯೇ ಎಂದು ಪ್ರಶ್ನಿಸಿದರು.

ಪ್ರಮುಖ ವಹಿವಾಟುಗಳಲ್ಲಿ NVIDIA, MICROSOFT ಮತ್ತು BOEING:

ತ್ರೈಮಾಸಿಕದಲ್ಲಿ ಟ್ರಂಪ್ ಅವರು ಎನ್ವಿಡಿಯಾ, ಒರಾಕಲ್, ಮೈಕ್ರೋಸಾಫ್ಟ್, ಬೋಯಿಂಗ್ ಮತ್ತು ಕಾಸ್ಟ್ಕೊದ ತಲಾ 1 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ಫೈಲಿಂಗ್‌ಗಳು ಬಹಿರಂಗಪಡಿಸಿವೆ. ಅವರ ವ್ಯಾಪಾರದ ಪ್ರಮಾಣವು ಅಮೆಝಾನ್, ಮೆಟಾ, ಉಬರ್, ಇಬೇ, ಅಬಾಟ್ ಲ್ಯಾಬೋರೇಟರೀಸ್, ಎಟಿ & ಟಿ ಮತ್ತು ಡಾಲರ್ ಟ್ರೀಗಳನ್ನು ಸಹ ವ್ಯಾಪಿಸಿದೆ. ಫೆಬ್ರವರಿ 10 ರಂದು ಮೈಕ್ರೋಸಾಫ್ಟ್, ಮೆಟಾ ಮತ್ತು ಅಮೆಜಾನ್‌ನಲ್ಲಿನ 5 ಮಿಲಿಯನ್ ಅಮೆರಿಕನ್ ಡಾಲರ್ ನಿಂದ 25 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಸ್ಟಾಕ್ಸ್ ಮಾರಾಟ ಮಾಡಲಾಗಿದೆ.

ಹೆಚ್ಚುವರಿಯಾಗಿ, ಬಹಿರಂಗಪಡಿಸುವಿಕೆಗಳು ಮಾಧ್ಯಮ ದೈತ್ಯ ಕಂಪನಿಗಳಾದ ನೆಟ್‌ಫ್ಲಿಕ್ಸ್, ವಾರ್ನರ್ ಬ್ರದರ್ಸ್ ಡಿಸ್ಕವರಿ ಮತ್ತು ಪ್ಯಾರಾಮೌಂಟ್ ಗ್ಲೋಬಲ್‌ನಲ್ಲಿ ಹೂಡಿಕೆಗಳನ್ನು ತೋರಿಸಿದೆ.

►ಹಿತಾಸಕ್ತಿ ಸಂಘರ್ಷದ ಪ್ರಶ್ನೆಗಳನ್ನು ಹುಟ್ಟುಹಾಕಿದ ಚಟುವಟಿಕೆ

ಈ ವ್ಯಾಪಾರ ಚಟುವಟಿಕೆಯು ನಿರ್ಣಾಯಕ ಹಿತಾಸಕ್ತಿ ಸಂಘರ್ಷದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇದರಲ್ಲಿರುವ ಅನೇಕ ಕಂಪನಿಗಳು ಫೆಡರಲ್ ನೀತಿಗಳು, ನಿಯಮಗಳು ಮತ್ತು ಭೌಗೋಳಿಕ ರಾಜಕೀಯ ಕಾರ್ಯತಂತ್ರದಿಂದ ಹೆಚ್ಚು ಪ್ರಭಾವಿತವಾಗಿರುವ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ, ಚೀನಾಕ್ಕೆ AI ಚಿಪ್‌ಗಳನ್ನು ರಫ್ತು ಮಾಡಲು Nvidia ವಾಷಿಂಗ್ಟನ್‌ನ ಅನುಮೋದನೆಯನ್ನು ಬಯಸುತ್ತದೆ. ಬೋಯಿಂಗ್ ಸರ್ಕಾರಿ ರಕ್ಷಣಾ ಒಪ್ಪಂದಗಳನ್ನು ಅವಲಂಬಿಸಿದೆ ಮತ್ತು ಮೈಕ್ರೋಸಾಫ್ಟ್, ಅಮೆಝಾನ್ ಮತ್ತು ಮೆಟಾದಂತಹ ತಂತ್ರಜ್ಞಾನ ದೈತ್ಯರು ನಂಬಿಕೆ ವಿರೋಧಿ ತನಿಖೆಗಳು, AI ನಿಯಂತ್ರಣ ಚರ್ಚೆಗಳು ಮತ್ತು ಫೆಡರಲ್ ನೀತಿ ನಿರ್ಧಾರಗಳಿಂದ ಪ್ರಭಾವಿತವಾಗಿವೆ.

ಕಾನೂನುಬದ್ಧವಾಗಿದ್ದರೂ ಸಹ, ಹಾಲಿ ಅಧ್ಯಕ್ಷರಿಂದ ಇಂತಹ ವ್ಯಾಪಾರವು ತೀವ್ರವಾದ ನೈತಿಕ ಕಾಳಜಿಗಳನ್ನು ಸೃಷ್ಟಿಸುತ್ತದೆ. ಇದು ಶ್ವೇತಭವನದ ವ್ಯವಹಾರ ವ್ಯವಸ್ಥೆಗಳ ಮೇಲೆ ದೀರ್ಘಕಾಲದ ಟೀಕೆಗಳನ್ನು ಪುನರುಜ್ಜೀವನಗೊಳಿಸಿವೆ ಎಂದು ವಿಮರ್ಶಕರು ವಾದಿಸುತ್ತಾರೆ.

ಹಿಂದಿನ ಅಧ್ಯಕ್ಷರಿಗಿಂತ ಭಿನ್ನವಾಗಿ, ಟ್ರಂಪ್ ತಮ್ಮ ವ್ಯವಹಾರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಬಿಟ್ಟುಕೊಡಲಿಲ್ಲ ಅಥವಾ ಕುಟುಂಬದ ಒಳಗೊಳ್ಳುವಿಕೆ ಇಲ್ಲದೆ ಸ್ವತಂತ್ರವಾಗಿ ನಿರ್ವಹಿಸಲ್ಪಡುವ ಸಾಂಪ್ರದಾಯಿಕ ಬ್ಲೈಂಡ್ ಟ್ರಸ್ಟ್‌ಗೆ ವರ್ಗಾಯಿಸಲಿಲ್ಲ. (ಬ್ಲೈಂಡ್ ಟ್ರಸ್ಟ್ ಎನ್ನುವುದು ಹಣಕಾಸಿನ ವ್ಯವಸ್ಥೆಯಾಗಿದ್ದು, ಇದರಲ್ಲಿ ಒಬ್ಬ ಸಾರ್ವಜನಿಕ ಅಧಿಕಾರಿಯು ತಮ್ಮ ಸ್ವತ್ತುಗಳ ಸಂಪೂರ್ಣ ನಿಯಂತ್ರಣವನ್ನು ಸ್ವತಂತ್ರ ಟ್ರಸ್ಟಿಗೆ ವರ್ಗಾಯಿಸುತ್ತಾರೆ. ಹಿತಾಸಕ್ತಿ ಸಂಘರ್ಷಗಳನ್ನು ತಡೆಗಟ್ಟಲು ಅವರು ಯಾವ ಷೇರುಗಳನ್ನು ಹೊಂದಿದ್ದಾರೆಂದು ಅವರಿಗೆ ಸಂಪೂರ್ಣವಾಗಿ ತಿಳಿದಿರುವುದಿಲ್ಲ)

ಬ್ಲೂಮ್‌ಬರ್ಗ್ ಪ್ರಕಾರ, ಟ್ರಂಪ್ ಅವರ ವ್ಯವಹಾರವು ಫೆಡರಲ್ ನೀತಿಯಿಂದ ಹೆಚ್ಚು ಪ್ರಭಾವಿತವಾದ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿವೆ, ಅವರ ಪುತ್ರರು ಟ್ರಂಪ್ ಸಂಘಟನೆಯ ಹೆಚ್ಚಿನ ಭಾಗವನ್ನು ನೋಡಿಕೊಳ್ಳುತ್ತಿದ್ದಾರೆ.

►ಇರಾನ್ ಬಗ್ಗೆ ಪ್ರತಿಕ್ರಿಯೆ ಮತ್ತು ಮಾರುಕಟ್ಟೆ ಬೆಟ್ಟಿಂಗ್‌

ತೈಲ ಮತ್ತು ಷೇರು ಮಾರುಕಟ್ಟೆಗಳಲ್ಲಿ ಅಸಾಮಾನ್ಯ ಚಟುವಟಿಕೆಯ ನಂತರ ಈ ಬಹಿರಂಗಪಡಿಸುವಿಕೆಗಳು ನಡೆದಿವೆ. ಇದು ಇರಾನ್ ಕುರಿತು ಟ್ರಂಪ್ ಅವರ ಸಾರ್ವಜನಿಕ ಹೇಳಿಕೆಗಳ ಬಗ್ಗೆ ಕೆಲವು ಹೂಡಿಕೆದಾರರು ಆಂತರಿಕ ಮಾಹಿತಿಯನ್ನು ಹೊಂದಿದ್ದಾರೆ ಎಂಬ ಊಹಾಪೋಹಗಳಿಗೆ ಉತ್ತೇಜನ ನೀಡಿತು.

ಈ ವರ್ಷದ ಆರಂಭದಲ್ಲಿ, ಟ್ರಂಪ್ ಇರಾನ್ ಜೊತೆಗಿನ ರಾಜತಾಂತ್ರಿಕ ಪ್ರಗತಿಯ ಬಗ್ಗೆ ಸಾರ್ವಜನಿಕವಾಗಿ ಸುಳಿವು ನೀಡುವ ಕೆಲವೇ ಕ್ಷಣಗಳು ಮೊದಲು ತೈಲ ಬೆಲೆ ಕುಸಿಯುತ್ತದೆ ಮತ್ತು ಅಮೆರಿಕದ ಷೇರುಗಳು ಏರಿಕೆಯಾಗುತ್ತವೆ ಎಂದು ವ್ಯಾಪಾರಿಗಳು ಬೆಟ್ಟಿಂಗ್ ಮಾಡಿದ್ದರು.

ಈ ಹೇಳಿಕೆಗಳ ನಂತರ ತೈಲ ಬೆಲೆಗಳು ಕುಸಿದವು ಮತ್ತು ಷೇರುಗಳು ತೀವ್ರವಾಗಿ ಏರಿದವು. ಪ್ರಮುಖ ರಾಜತಾಂತ್ರಿಕ ಬೆಳವಣಿಗೆಯ ಮುಂದೆ ವಹಿವಾಟುಗಳು ಅಸಾಧಾರಣವಾಗಿ ಉತ್ತಮ ಸ್ಥಾನದಲ್ಲಿದ್ದ ಕಾರಣ, ನಿಖರವಾದ ಸಮಯವು ಮಾರುಕಟ್ಟೆ-ಸೂಕ್ಷ್ಮ ರಾಜಕೀಯ ದತ್ತಾಂಶಗಳ ಪ್ರವೇಶದ ಕುರಿತು ವ್ಯಾಪಕ ಚರ್ಚೆಗೆ ನಾಂದಿ ಹಾಡಿತು.

ಟ್ರಂಪ್ ಅವರನ್ನು ಆ ವ್ಯವಹಾರಗಳಿಗೆ ನೇರವಾಗಿ ಸಂಪರ್ಕಿಸುವ ಯಾವುದೇ ಪುರಾವೆಗಳಿಲ್ಲದಿದ್ದರೂ, ಈ ಘಟನೆಯು ಸೂಕ್ಷ್ಮ ರಾಜಕೀಯ ಬೆಳವಣಿಗೆಗಳು ಮತ್ತು ಹಣಕಾಸು ಮಾರುಕಟ್ಟೆಗಳ ಬಗ್ಗೆ ವ್ಯಾಪಕ ಕಳವಳಗಳನ್ನು ತೀವ್ರಗೊಳಿಸಿತು.

►ಕುಶ್ನರ್ ಅವರ ಗಲ್ಫ್ ನಂಟು

ಈ ವಿವಾದವು ಟ್ರಂಪ್ ಅವರ ಅಳಿಯ ಮತ್ತು ಮಧ್ಯಪ್ರಾಚ್ಯ ರಾಯಭಾರಿ ಜೇರೆಡ್ ಕುಶ್ನರ್ ಅವರ ಮೇಲೆ ಗಮನವಿರಿಸುವಂತೆ ಮಾಡಿದೆ. ಬ್ಲೂಮ್‌ಬರ್ಗ್ ಪ್ರಕಾರ, ಟ್ರಂಪ್ ಆಡಳಿತಕ್ಕಾಗಿ ಪ್ರಾದೇಶಿಕ ರಾಜತಾಂತ್ರಿಕತೆಯನ್ನು ಸಕ್ರಿಯವಾಗಿ ಮುನ್ನಡೆಸುವಾಗ ಕುಶ್ನರ್ ತನ್ನ ಗಲ್ಫ್-ಸಂಬಂಧಿತ ಆರ್ಥಿಕ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುತ್ತಾರೆ. ಅವರ ಹೂಡಿಕೆ ಸಂಸ್ಥೆ, ಅಫಿನಿಟಿ ಪಾರ್ಟ್‌ನರ್ಸ್, ಸೌದಿ ಅರೇಬಿಯಾದ ಗಮನಾರ್ಹ ಬಂಡವಾಳ ಸೇರಿದಂತೆ ಮಧ್ಯಪ್ರಾಚ್ಯ ಸಾರ್ವಭೌಮ ಸಂಪತ್ತು ನಿಧಿಗಳಿಂದ ಭಾರೀ ಬೆಂಬಲಿತವಾದ ಶತಕೋಟಿ ಡಾಲರ್‌ಗಳನ್ನು ನಿರ್ವಹಿಸುತ್ತದೆ ಎಂದು ವರದಿಯಾಗಿದೆ.

ರಾಜತಾಂತ್ರಿಕ ಪ್ರಭಾವ ಮತ್ತು ಖಾಸಗಿ ಹೂಡಿಕೆಯ ನಡುವಿನ ಹರಡುವಿಕೆ ಟ್ರಂಪ್ ಅವರ ಆಂತರಿಕ ವಲಯದಲ್ಲಿ ವಿಶಾಲವಾದ ಹಿತಾಸಕ್ತಿ ಸಂಘರ್ಷದ ಮಾದರಿಯನ್ನು ಸೂಚಿಸುತ್ತದೆ ಎಂದು ವಿಮರ್ಶಕರು ವಾದಿಸುತ್ತಾರೆ. ಕುಶ್ನರ್ ತಪ್ಪು ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲದೇ ಇದ್ದರೂ, ಸೂಕ್ಷ್ಮ ವಿದೇಶಾಂಗ ನೀತಿ ಮಾತುಕತೆಗಳಲ್ಲಿ ಅವರ ನಿರಂತರ ಪಾಲ್ಗೊಳ್ಳುವಿಕೆಯನ್ನು ಗಮನಿಸಿದರೆ, ಅವರ ಆಳವಾದ ಆರ್ಥಿಕ ಸಂಬಂಧಗಳು ಕಟ್ಟುನಿಟ್ಟಾದ ಸಾರ್ವಜನಿಕ ಮೇಲ್ವಿಚಾರಣೆಯನ್ನು ಬಯಸುತ್ತವೆ ಎಂದು ರಾಜಕೀಯ ವಿಮರ್ಶಕರು ವಾದಿಸುತ್ತಾರೆ.

►ಆರೋಪ ನಿರಾಕರಿಸಿದ ಶ್ವೇತಭವನ

ಬ್ಲೂಮ್‌ಬರ್ಗ್‌ ಜತೆ ಮಾತನಾಡಿದ ಶ್ವೇತಭವನದ ವಕ್ತಾರರು ಟ್ರಂಪ್ "ಅಮೆರಿಕದ ಸಾರ್ವಜನಿಕರ ಹಿತಾಸಕ್ತಿಗಾಗಿ ಮಾತ್ರ ಕಾರ್ಯನಿರ್ವಹಿಸುತ್ತಾರೆ.ಇಲ್ಲಿ "ಯಾವುದೇ ಹಿತಾಸಕ್ತಿ ಸಂಘರ್ಷಗಳಿಲ್ಲ" ಎಂದಿದ್ದಾರೆ. ಪ್ರತ್ಯೇಕವಾಗಿ, ಟ್ರಂಪ್ ಸಂಘಟನೆಯ ವಕ್ತಾರರು ಅಧ್ಯಕ್ಷರ ಹೂಡಿಕೆಗಳನ್ನು ಮೂರನೇ ವ್ಯಕ್ತಿಯ ಹಣಕಾಸು ಸಂಸ್ಥೆಗಳು ಸ್ವತಂತ್ರವಾಗಿ ನಿರ್ವಹಿಸುತ್ತವೆ ಎಂದು ಹೇಳಿದ್ದಾರೆ. ಅಂದರೆ ಟ್ರಂಪ್ ಅಥವಾ ಅವರ ಕುಟುಂಬವು ವೈಯಕ್ತಿಕ ವಹಿವಾಟುಗಳ ನೇರ ಮೇಲ್ವಿಚಾರಣೆಯನ್ನು ಹೊಂದಿಲ್ಲ. ಹಲವಾರು ಫೈಲಿಂಗ್‌ಗಳು ಫೆಡರಲ್ ಗಡುವನ್ನು ತಪ್ಪಿಸಿಕೊಂಡಿವೆ ಎಂದು ವರದಿ ಬಹಿರಂಗಪಡಿಸಿವೆ. ಆದರೂ ತಡವಾಗಿ ಸಲ್ಲಿಸಿದ್ದಕ್ಕಾಗಿ ದಂಡಗಳು ಅತ್ಯಲ್ಪವಾಗಿದ್ದು, ಪ್ರತಿ ಫಾರ್ಮ್‌ಗೆ ಕೇವಲ 200 ಅಮೆರಿಕನ್ ಡಾಲರ್ ಮಾತ್ರವಾಗಿರುತ್ತದೆ.

►ವಾಷಿಂಗ್ಟನ್‌ನಲ್ಲಿ ಈಗ ಉದ್ಭವಿಸುತ್ತಿರುವ ದೊಡ್ಡ ಪ್ರಶ್ನೆಗಳು

ಬ್ಲೂಮ್‌ಬರ್ಗ್ ವರದಿಯಲ್ಲಿ ಉಲ್ಲೇಖಿಸಲಾದ ನೀತಿಶಾಸ್ತ್ರ ತಜ್ಞರು, ಜಾರ್ಜ್ ಹೆಚ್.ಡಬ್ಲ್ಯೂ. ಬುಷ್ ಮತ್ತು ಬಿಲ್ ಕ್ಲಿಂಟನ್ ಸೇರಿದಂತೆ ಅಮೆರಿಕದ ಮಾಜಿ ಅಧ್ಯಕ್ಷರು ಸಂಘರ್ಷಗಳು ಕಾಣಿಸಿಕೊಳ್ಳುವುದನ್ನು ತಪ್ಪಿಸಲು ನಿರ್ದಿಷ್ಟವಾಗಿ ಬ್ಲೈಂಡ್ ಟ್ರಸ್ಟ್‌ಗಳನ್ನು ಬಳಸಿಕೊಂಡರು ಎಂದು ಗಮನಿಸಿದ್ದಾರೆ. ಏತನ್ಮಧ್ಯೆ, ಅಮೆರಿಕದ ಹಾಲಿ ಅಧ್ಯಕ್ಷರು ಸರ್ಕಾರದ ನೀತಿ ನಿರ್ಧಾರಗಳಿಂದ ನೇರವಾಗಿ ಪರಿಣಾಮ ಬೀರುವ ಕಂಪನಿಗಳ ಷೇರುಗಳನ್ನು ಸಕ್ರಿಯವಾಗಿ ಖರೀದಿಸಿ ಮಾರಾಟ ಮಾಡಬೇಕೇ? ಎಂಬುದು ವಾಷಿಂಗ್ಟನ್‌ನಲ್ಲಿ ರಾಜಕೀಯ ಚರ್ಚೆಯನ್ನು ಮತ್ತೆ ಹುಟ್ಟುಹಾಕಿವೆ.

ಕೃಪೆ: indiatoday.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News