ಕಾಶ್ಮೀರದ ಯುವಕರ ಬದುಕನ್ನೇ ನುಂಗಿ ಹಾಕುತ್ತಿರುವ ಮಾದಕ ವ್ಯಸನ
ಕಾಶ್ಮೀರ ಕಣಿವೆಯಲ್ಲಿ ಚಿಕಿತ್ಸೆಗಾಗಿ ಬರುತ್ತಿರುವ ರೋಗಿಗಳು ಆರೋಗ್ಯ, ಹಣ ಎಲ್ಲವನ್ನೂ ಕಳೆದುಕೊಂಡ ನಂತರ ಆಸ್ಪತ್ರೆಯ ಮೆಟ್ಟಿಲೇರುವರು. ಇಮ್ಹಾನ್ಸ್‌ನಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಯಾಸೀರ್ ಹಸನ್ ರಾಥರ್ ಪ್ರಕಾರ, ಮಾದಕ ವ್ಯಸನಿಗಳ ಕುರಿತ ಅಂಕಿಅಂಶ ನಿಜವಾದ ಸಂಖ್ಯೆಯ ಶೇ.10ರಷ್ಟನ್ನು ಮಾತ್ರ ತೋರಿಸುತ್ತದೆ. ಉಳಿದ ಶೇ.90ರಷ್ಟು ಜನರು ಇನ್ನೂ ಚಿಕಿತ್ಸೆಗೆ ಒಳಪಟ್ಟಿಲ್ಲ. ಈಚೆಗಂತೂ ಡಿ-ಅಡಿಕ್ಷನ್ ಕೇಂದ್ರಗಳತ್ತ ಬರುವ ಮಾದಕ ವ್ಯಸನಿಗಳ ಸಂಖ್ಯೆಯಲ್ಲಿ ಆಘಾತಕಾರಿ ಏರಿಕೆ ಕಾಣಿಸುತ್ತಿದೆ. 2015ರಲ್ಲಿ ಸುಮಾರು 500 ಮಾದಕ ವ್ಯಸನಿಗಳು ಇಮ್ಹಾನ್ಸ್‌ಗೆ ಚಿಕಿತ್ಸೆಗಾಗಿ ಬಂದಿದ್ದರು. 2021ರ ಹೊತ್ತಿಗೆ ಆ ಸಂಖ್ಯೆ 24,000ಕ್ಕೆ ಏರಿತು. ಕಳೆದ ವರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವ್ಯಸನಿಗಳ ಸಂಖ್ಯೆ 44,000ಕ್ಕೆ ಏರಿತ್ತು. ದಿನವೂ ಸುಮಾರು 100ರಿಂದ 200 ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ ಎನ್ನುತ್ತಾರೆ ಡಾ. ರಾಥರ್.
ಸಫ್ವತ್ ಝರ್ಗರ್
ಕಳೆದ ಡಿಸೆಂಬರ್‌ನಲ್ಲಿ ಹಿರಿಯ ಕಾಶ್ಮೀರಿ ವೈದ್ಯರೊಬ್ಬರು ಶ್ರೀನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾದಕ ವ್ಯಸನಿ ಯುವಕನೊಬ್ಬನ ಬಗ್ಗೆ ಟ್ವೀಟ್ ಮಾಡಿದ್ದರು.
ಅಜಾಗರೂಕತೆಯಿಂದ ಮಾದಕದ್ರವ್ಯ ಚುಚ್ಚಿಕೊಂಡ ಪರಿಣಾಮ ಆತನ ತೋಳು ಗ್ಯಾಂಗ್ರಿನ್‌ಗೆ ತುತ್ತಾಗಿತ್ತು. ಕೈಯಲ್ಲಿರುವ ಅಂಗಾಂಶ ಸತ್ತಿದ್ದು, ಇನ್ನೂ ಪದವಿಪೂರ್ವ ವಿದ್ಯಾರ್ಥಿಯಾಗಿದ್ದ ಆತ ಜೀವನವಿಡೀ ಅಂಗವಿಕಲನಾಗಿರುವ ವಿಚಾರವನ್ನು ಡಾ.ಮುಹಮ್ಮದ್ ಸಲೀಂ ಖಾನ್ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದರು.
ಕಳೆದ ಕೆಲವು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದ ಯುವಕರಲ್ಲಿ ಭಯಾನಕ ಬಿಕ್ಕಟ್ಟಾಗಿ ಮಾದಕ ವ್ಯಸನ ತೀವ್ರ ಗತಿಯಲ್ಲಿ ಹಬ್ಬುತ್ತಿದೆ. ರಾಜಕೀಯ ಪಕ್ಷಗಳೂ ಗಮನಿಸುತ್ತಿವೆ. ಇತ್ತೀಚೆಗೆ ರಾಜಕೀಯ ಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್, ಮಾದಕ ವ್ಯಸನ ಪರಿಶೀಲಿಸಲೆಂದು 11 ಸದಸ್ಯರ ಸಮಿತಿಯನ್ನು ರಚಿಸಿತು. ದೇಶದಲ್ಲಿ ಮಾದಕ ವ್ಯಸನಕ್ಕೆ ಸಂಬಂಧಿಸಿದ ಪ್ರಶ್ನೆಗೆ ಮಾರ್ಚ್‌ನಲ್ಲಿ ಲೋಕಸಭೆಯಲ್ಲಿ ಉತ್ತರಿಸಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರು ಕಾಶ್ಮೀರದಲ್ಲಿ ಸುಮಾರು 10 ಲಕ್ಷ ಜನರು ಮಾದಕ ವ್ಯಸನಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಒಟ್ಟು ಜನಸಂಖ್ಯೆಯ ಅಂಕಿಅಂಶಗಳಿಗೆ ಹೋಲಿಸಿದರೆ, 2011ರ ಜನಗಣತಿಯ ಅಂಕಿಅಂಶಗಳನ್ವಯ ಇರುವ ಒಟ್ಟು ಜನಸಂಖ್ಯೆಯ ಸುಮಾರು ಶೇ.8ರಷ್ಟು ಮಂದಿ ಮಾದಕ ವ್ಯಸನಿಗಳಾಗಿದ್ದಾರೆ.
ಪಂಜಾಬ್, ಹಿಮಾಚಲ ಪ್ರದೇಶ, ಹರ್ಯಾಣ ಮತ್ತು ದಿಲ್ಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಮಾದಕ ದ್ರವ್ಯ ವ್ಯಸನಿಗಳನ್ನು ಹೊಂದಿರುವ ವರದಿಗಳಿವೆ. ಉದಾಹರಣೆಗೆ, ಹಿಮಾಚಲ ಪ್ರದೇಶದಲ್ಲಿ ಮಾದಕ ವ್ಯಸನಕ್ಕೆ ಒಳಗಾಗುವ ಜನಸಂಖ್ಯೆ ಸುಮಾರು 9 ಲಕ್ಷ.
ಜಮ್ಮು ಮತ್ತು ಕಾಶ್ಮೀರದಲ್ಲಿ ಗಾಂಜಾ ಅಥವಾ ಕೊಕೇನ್ ಬಳಕೆ ಕಡಿಮೆಯಿದ್ದರೂ, ಒಪಿಯಾಡ್ ಪ್ರಕರಣಗಳ ಹೊರೆ (5 ಲಕ್ಷಕ್ಕೂ ಹೆಚ್ಚು) ಗಮನಾರ್ಹ. ಪಂಜಾಬ್ (25 ಲಕ್ಷ) ಮತ್ತು ಹರ್ಯಾಣ (21 ಲಕ್ಷ) ರಾಜ್ಯಗಳಲ್ಲಿಯೂ ಹೆಚ್ಚಿನ ಸಂಖ್ಯೆಯ ಒಪಿಯಾಡ್ ವ್ಯಸನಿಗಳಿದ್ದಾರೆ.
ಅಮೆರಿಕದ ಸಂಶೋಧನಾ ಸಂಸ್ಥೆಯ ಪ್ರಕಾರ, ಒಪಿಯಾಡ್ ನೋವು ನಿವಾರಕ ಔಷಧಿಗಳ ರೂಪದಲ್ಲಿ ಕಾನೂನುಬದ್ಧವಾಗಿಯೇ ಲಭ್ಯವಿರುವ ಮಾದಕದ್ರವ್ಯ. ಅಕ್ರಮ ಹೆರಾಯಿನ್, ಫೆಂಟನಿಲ್‌ನಂಥವೂ ಇದರಲ್ಲೇ ಬರುತ್ತವೆ.
2022ರಲ್ಲಿ ಶ್ರೀನಗರದ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆಯ (ಇಮ್ಹಾನ್ಸ್) ವೈದ್ಯರು ಮಾದಕದ್ರವ್ಯ ಬಳಕೆಯ ಹರಡುವಿಕೆ ಮತ್ತು ಮಾದರಿಯ ಕುರಿತು ಅಧ್ಯಯನ ನಡೆಸಿದರು. ಕಾಶ್ಮೀರ ಕಣಿವೆಯ 10 ಜಿಲ್ಲೆಗಳಿಗೆ ಸೀಮಿತವಾಗಿದ್ದ ಈ ಅಧ್ಯಯನ 1,500 ಮಾದಕ ದ್ರವ್ಯ ವ್ಯಸನಿಗಳನ್ನು ಪರೀಕ್ಷಿಸಿತು. ಅವರಲ್ಲಿ 1,280 ಜನರು ಒಪಿಯಾಡ್ ವ್ಯಸನಿಗಳೇ ಆಗಿದ್ದರು. ಇಂಥವರಲ್ಲಿ ಶೇ.50ಕ್ಕಿಂತ ಹೆಚ್ಚು ಮಂದಿ ಚುಚ್ಚುಮದ್ದು ಮೂಲಕ ಹೆರಾಯಿನ್ ತೆಗೆದುಕೊಂಡವರು. ಹೆರಾಯಿನ್ ವ್ಯಸನಿಗಳ ಸರಾಸರಿ ವಯಸ್ಸು 22 ವರ್ಷಗಳು. ಇಲ್ಲಿನ ಜನಸಂಖ್ಯೆಯ ಶೇ.35ರಷ್ಟು ಮಂದಿ 15-34 ವಯೋ ಗುಂಪಿನವರು ಎಂಬ ವಿಚಾರ ಗಮನಿಸಿದರೆ ಮಾದಕ ವ್ಯಸನ ಇಲ್ಲಿ ತಂದಿಡಬಹುದಾದ ಅಪಾಯವನ್ನು ಊಹಿಸಬಹುದು.
ಕಾಶ್ಮೀರ ಕಣಿವೆಯಲ್ಲಿ ಚಿಕಿತ್ಸೆಗಾಗಿ ಬರುತ್ತಿರುವ ರೋಗಿಗಳು ಆರೋಗ್ಯ, ಹಣ ಎಲ್ಲವನ್ನೂ ಕಳೆದುಕೊಂಡ ನಂತರ ಆಸ್ಪತ್ರೆಯ ಮೆಟ್ಟಿಲೇರುವರು. ಇಮ್ಹಾನ್ಸ್‌ನಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಯಾಸೀರ್ ಹಸನ್ ರಾಥರ್ ಪ್ರಕಾರ, ಮಾದಕ ವ್ಯಸನಿಗಳ ಕುರಿತ ಅಂಕಿಅಂಶ ನಿಜವಾದ ಸಂಖ್ಯೆಯ ಶೇ.10ರಷ್ಟನ್ನು ಮಾತ್ರ ತೋರಿಸುತ್ತದೆ. ಉಳಿದ ಶೇ.90ರಷ್ಟು ಜನರು ಇನ್ನೂ ಚಿಕಿತ್ಸೆಗೆ ಒಳಪಟ್ಟಿಲ್ಲ.
ಈಚೆಗಂತೂ ಡಿ-ಅಡಿಕ್ಷನ್ ಕೇಂದ್ರಗಳತ್ತ ಬರುವ ಮಾದಕ ವ್ಯಸನಿಗಳ ಸಂಖ್ಯೆಯಲ್ಲಿ ಆಘಾತಕಾರಿ ಏರಿಕೆ ಕಾಣಿಸುತ್ತಿದೆ. 2015ರಲ್ಲಿ ಸುಮಾರು 500 ಮಾದಕ ವ್ಯಸನಿಗಳು ಇಮ್ಹಾನ್ಸ್‌ಗೆ ಚಿಕಿತ್ಸೆಗಾಗಿ ಬಂದಿದ್ದರು. 2021ರ ಹೊತ್ತಿಗೆ ಆ ಸಂಖ್ಯೆ 24,000ಕ್ಕೆ ಏರಿತು. ಕಳೆದ ವರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವ್ಯಸನಿಗಳ ಸಂಖ್ಯೆ 44,000ಕ್ಕೆ ಏರಿತ್ತು. ದಿನವೂ ಸುಮಾರು 100ರಿಂದ 200 ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ ಎನ್ನುತ್ತಾರೆ ರಾಥರ್.
ಶ್ರೀನಗರದ ಶೇರ್-ಇ-ಕಾಶ್ಮೀರ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಕೂಡ ಮಾದಕ ವ್ಯಸನದ ಚಿಕಿತ್ಸಾ ಸೌಲಭ್ಯ ಕಳೆದ ವರ್ಷದಿಂದ ಆರಂಭವಾಗಿದೆ. ಈಗಾಗಲೇ 1,800ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗೆ ಬಂದಿದ್ದಾರೆ. ದಿನವೂ 100ಕ್ಕಿಂತ ಹೆಚ್ಚು ರೋಗಿಗಳು ಬರುತ್ತಾರೆ. ಅವರಲ್ಲಿ ಮೂರರಿಂದ ಐದು ಹೊಸ ರೋಗಿಗಳು ಎನ್ನುತ್ತಾರೆ, ಆಸ್ಪತ್ರೆಯ ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅಬ್ದುಲ್ ಮಜೀದ್.
ಅವರೂ ಶೇ.80-85ರಷ್ಟು ವ್ಯಸನಿಗಳು ಇನ್ನೂ ಚಿಕಿತ್ಸೆಗೆ ಒಳಗಾಗಿಯೇ ಇಲ್ಲ ಎಂಬುದರಲ್ಲಿ ಸಂದೇಹವಿಲ್ಲ ಎಂದೇ ಅಭಿಪ್ರಾಯಪಡುತ್ತಾರೆ.
ವೈದ್ಯರ ಪ್ರಕಾರ, ಹೆರಾಯಿನ್ ಬಳಕೆದಾರರ ಸಂಖ್ಯೆಯೇ ಹೆಚ್ಚು. ಮತ್ತು ಒಮ್ಮೆ ಇದರ ವ್ಯಸನಕ್ಕೆ ಬಿದ್ದವರಿಗೆ ಅದರಿಂದ ಬಿಡಿಸಿಕೊಳ್ಳುವುದೇ ಬಹಳ ಕಷ್ಟ. ಬಿಡಲು ಯತ್ನಿಸಿದಾಗ ತೀವ್ರ ಹಿನ್ನಡೆ ಅನುಭವಿಸುತ್ತಾರೆ. ದೈಹಿಕ ನೋವು, ಚಡಪಡಿಕೆ, ಕಡೆಗೆ ಎದ್ದು ನಿಲ್ಲಲೂ ಆಗದು ಸತ್ತುಹೋಗುತ್ತೇವೆ ಎಂಬ ಸ್ಥಿತಿ ಅನುಭವಿಸುವಾಗ, ಅದನ್ನು ನೋಡಲಾಗದೆ ಪೋಷಕರೇ ಅವರಿಗೆ ಹೆರಾಯಿನ್ ಕೊಡಿಸುವುದೂ ಇದೆ ಎನ್ನುತ್ತಾರೆ ವೈದ್ಯರು.
ತಜ್ಞರು ಮತ್ತು ಅಧ್ಯಯನಗಳು ಗುರುತಿಸುವ ಪ್ರಕಾರ, ಮಾದಕ ವ್ಯಸನಕ್ಕೆ ತುತ್ತಾಗುವುದಕ್ಕೆ ಹಲವಾರು ಅಂಶಗಳು ಕಾರಣ. ಅತ್ಯಂತ ಸಾಮಾನ್ಯವಾದುದು ತೀವ್ರ ಒತ್ತಡ. ನಿರುದ್ಯೋಗಕ್ಕೂ ಮಾದಕ ದ್ರವ್ಯ ವ್ಯಸನಕ್ಕೂ ಸಂಭವನೀಯ ಸಂಬಂಧದ ಬಗ್ಗೆಯೂ ಅಧ್ಯಯನಗಳು ಹೇಳುತ್ತವೆ. ನಿರುದ್ಯೋಗಿಗಳಲ್ಲಿ ಮಾದಕ ದ್ರವ್ಯ ಬಳಕೆ ಹೆಚ್ಚಾಗಿದ್ದರೂ, ಕಾಶ್ಮೀರ ಕಣಿವೆಯಲ್ಲಿ ಈ ಕುರಿತು ಹೆಚ್ಚಿನ ಅಧ್ಯಯನಗಳು ಆಗಬೇಕಿದೆ.
ಸಂಘರ್ಷ ವಲಯದಲ್ಲಿನ ಜೀವನ, ಅಲ್ಲಿನ ಹಿಂಸೆ ಜನರ ಮನಸ್ಸಿನ ಮೇಲೆ ಶಾಶ್ವತವಾದ ಗಾಯವನ್ನು ಉಳಿಸಿಬಿಟ್ಟಿದೆ.
ಇದು ಜನರನ್ನು ಹೆಚ್ಚು ದುರ್ಬಲಗೊಳಿಸುತ್ತದೆ. ಒತ್ತಡವನ್ನು ನಿವಾರಿಸಲು ಅವರು ಹುಡುಕಿಕೊಳ್ಳುವ ಒಂದು ಸುಲಭದ ದಾರಿ ಮಾದಕ ವ್ಯಸನ. ಕಡೆಗೆ ಅದು ಬದುಕನ್ನೇ ತಿಂದುಬಿಡುತ್ತದೆ ಎನ್ನುತ್ತಾರೆ ಮಜೀದ್.
ಆದರೆ, ಹೆಚ್ಚುತ್ತಿರುವ ಮಾದಕ ವ್ಯಸನಕ್ಕೆ ಸಂಘರ್ಷ ಸನ್ನಿವೇಶವೊಂದೇ ಕಾರಣವಲ್ಲ ಎನ್ನುವುದೂ ಅಷ್ಟೇ ನಿಜ. ಎಂಥ ಒತ್ತಡವೂ ಇಲ್ಲದೆ, ಯಾವ ಆರ್ಥಿಕ ತೊಂದರೆಗಳೂ ಇಲ್ಲದೆ, ಬರೀ ಕುತೂಹಲಕ್ಕಾಗಿ ಒಮ್ಮೆ ತೆಗೆದುಕೊಂಡು ನೋಡಬೇಕೆಂದು ಹೊರಟವರೂ ಕಡೆಗೆ ಅದರಿಂದ ಬಿಡಿಸಿಕೊಳ್ಳಲಾರದ ಸ್ಥಿತಿ ತಲುಪಿದ್ದೂ ಇದೆ.
ಕಳೆದ ಕೆಲವು ವರ್ಷಗಳಿಂದ ಜಮ್ಮು-ಕಾಶ್ಮೀರ ಪೊಲೀಸರು ಕೋಟ್ಯಂತರ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ ಮತ್ತು ಹಲವರನ್ನು ಬಂಧಿಸಿದ್ದಾರೆ. ಮಾದಕವಸ್ತು ಕಳ್ಳಸಾಗಣೆದಾರರ ವಿರುದ್ಧ ನೂರಾರು ಪ್ರಕರಣಗಳು ದಾಖಲಾಗಿವೆ.
ಈ ನಡುವೆ, ಹೆರಾಯಿನ್ ಬೆಲೆ ದುಪ್ಪಟ್ಟಾಗಿದೆ. ಮೊದಲು ಒಂದು ಗ್ರಾಂ ಹೆರಾಯಿನ್ 3,000 ರೂ.ಗೆ ಸಿಗುತ್ತಿತ್ತು. ಈಗ ರೂ. 6,000ಕ್ಕೆ ಏರಿದೆ. ಇದು ಪೂರೈಕೆಯ ಮೇಲೆ ಪರಿಣಾಮ ಬೀರಿದೆ ಎನ್ನಲಾಗುತ್ತದೆ. ಇದೇ ವೇಳೆ, ಕಾಶ್ಮೀರ ಕಣಿವೆಯಲ್ಲಿ ಅಪರಾಧ ಮತ್ತು ಮಾದಕ ದ್ರವ್ಯ ಸೇವನೆಯ ನಡುವಿನ ಹೆಚ್ಚುತ್ತಿರುವ ಸಂಪರ್ಕವೂ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ವೈದ್ಯರು ಮತ್ತು ಅಧಿಕಾರಿಗಳು ಹೇಳುತ್ತಾರೆ.
ಕಾನೂನು ಜಾರಿ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಮಾದಕ ದ್ರವ್ಯದ ವಿರುದ್ಧದ ಯುದ್ಧದಲ್ಲಿ ಮುಂಚೂಣಿಯಲ್ಲಿದ್ದರೂ, ಬಿಕ್ಕಟ್ಟು ಅಷ್ಟು ಸುಲಭವಾಗಿ ತೊಡೆದುಹಾಕುವಂಥದ್ದಲ್ಲ. ಪ್ರತಿಯೊಬ್ಬರೂ ಭಾಗಿಯಾಗಬೇಕಾಗಿದೆ ಎಂದು ವೈದ್ಯರು ಹೇಳುತ್ತಾರೆ.
ಇದಕ್ಕೆ ಪೂರಕ ಎನ್ನುವಂತೆ, ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ನಂಥ ರಾಜಕೀಯ ಪಕ್ಷ ಮಾದಕ ದ್ರವ್ಯ ತಂದಿಟ್ಟಿರುವ ಆತಂಕದ ಬಗ್ಗೆ ಚಿಂತನೆಗೆ ಮುಂದಾಗಿರುವುದು ಸಾಮಾನ್ಯ ವಿಷಯವಲ್ಲ. ಅದು ರಚಿಸಿರುವ ಸಮಿತಿಯ ಭಾಗವಾಗಿರುವ ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನ ಹಿರಿಯ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಇಮ್ರಾನ್ ನಬಿ ದಾರ್, ಸಮಸ್ಯೆ ಅರ್ಥಮಾಡಿಕೊಳ್ಳಲು ಸಮಾಜದ ವಿವಿಧ ವರ್ಗಗಳು ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದ್ದೇವೆ ಎನ್ನುತ್ತಾರೆ.
ಮಾದಕ ವ್ಯಸನದ ವಿರುದ್ಧ ಮಾತನಾಡಲು ಧಾರ್ಮಿಕ ಮುಖಂಡರು ಕೂಡ ಮುಂದಾಗಬೇಕೆಂಬ ಒತ್ತಾಯವೂ ಈಗ ಕೇಳಿಬರುತ್ತಿದೆ.
(ಕೃಪೆ:scroll.in)