×
Ad

ವಿಶ್ವಕಪ್ ಅಧಿಕಾರಿಗಳ ಮೇಲೆ ದೂರು ನೀಡಿದ ಈಜಿಪ್ಟ್; FIFA ಕ್ರಮ ಕೈಗೊಳ್ಳುವುದೇ?

Update: 2026-07-09 22:28 IST

Photo Credit ; PTI 

ರೆಫ್ರಿ ಫ್ರಾಂಕೋಯಿಸ್ ಲೆಟೆಕ್ಸಿಯರ್ ಮತ್ತು ಇತರ ಅಧಿಕಾರಿಗಳನ್ನು ವಿಶ್ವಕಪ್‌ನ ಉಳಿದ ಪಂದ್ಯಗಳಿಂದ ದೂರವಿಡಬೇಕು ಎಂದು ದೂರು ನೀಡಿದ ಈಜಿಪ್ಟ್ ಫುಟ್ಬಾಲ್ ಸಂಘಟನೆ.

ಮಂಗಳವಾರ ಅರ್ಜೆಂಟೀನಾ ವಿರುದ್ಧದ ತಮ್ಮ ಕೊನೆಯ 16ರ ಘಟ್ಟದ ಪಂದ್ಯದ ಉಸ್ತುವಾರಿ ವಹಿಸಿಕೊಂಡ ಅಧಿಕಾರಿಗಳನ್ನು ತೆಗೆದುಹಾಕುವಂತೆ ಈಜಿಪ್ಟ್ ಫುಟ್ಬಾಲ್ ಅಸೋಸಿಯೇಶನ್ ನೀಡಿದ ದೂರನ್ನು ಸ್ವೀಕರಿಸಿರುವುದಾಗಿ ವಿಶ್ವಕಪ್ ಸಂಘಟಕರಾದ ಫಿಫಾ ಒಪ್ಪಿಕೊಂಡಿದೆ.

ಈಜಿಪ್ಟ್ 2-0 ಅಂತರದ ಮುನ್ನಡೆ ಹೊಂದಿದ್ದರೂ, ಕೊನೆಯ ಹಂತದಲ್ಲಿ ಅರ್ಜೆಂಟೀನಾ ತಂಡ 3-2ರಿಂದ ಪಂದ್ಯವನ್ನು ಗೆದ್ದು ಕ್ವಾರ್ಟರ್‌ಫೈನಲ್‌ಗೆ ತಲುಪಿತ್ತು. ಈ ಹಂತದಲ್ಲಿ ಫಿಫಾ ಮತ್ತು ಪಂದ್ಯದ ಅಧಿಕಾರಿಗಳು ಅರ್ಜೆಂಟೀನಾ ತಂಡದ ಪರವಾಗಿ ಬೆಂಬಲ ನೀಡಿದ್ದಾರೆ ಎಂದು ಈಜಿಪ್ಟ್ ಆಕ್ರೋಶ ವ್ಯಕ್ತಪಡಿಸಿದೆ.

‘ಈ ವಿಚಾರವಾಗಿ ಫುಟ್ಬಾಲ್‌ನ ವಿಶ್ವ ಆಡಳಿತ ಮಂಡಳಿಗೆ ದೂರು ಸಲ್ಲಿಸಲಾಗಿದೆ. ಪಂದ್ಯದ ವೇಳೆ ರೆಫ್ರಿ ಫ್ರಾಂಕೋಯಿಸ್ ಲೆಟೆಕ್ಸಿಯರ್ ಮತ್ತು ಇತರ ಅಧಿಕಾರಿಗಳು ತೋರಿಸಿರುವ "ಇಬ್ಬಗೆ ನೀತಿ" ಬಗ್ಗೆ ನಾವು ವಿವರಿಸಿದ್ದೇವೆ. ಈ ವಿಚಾರವಾಗಿ ತನಿಖೆ ನಡೆಸಬೇಕು’ ಎಂದು ಈಜಿಪ್ಟ್ ಫುಟ್ಬಾಲ್ ಸಂಘಟನೆ ತಿಳಿಸಿದೆ.

‘ಈಜಿಪ್ಟ್‌ನ ಫುಟ್ಬಾಲ್ ಸಂಘಟನೆಯು ರೆಫ್ರಿಯ ತಪ್ಪು ನಿರ್ಧಾರಗಳೆಂದು ವಿವರಿಸಿರುವ ವಿಚಾರದ ಬಗ್ಗೆ ಫಿಫಾಗೆ ಅಧಿಕೃತ ದೂರು ಸಲ್ಲಿಸಿದೆ. ಕೆಲವು ನಿರ್ಧಾರಗಳ ನ್ಯಾಯಸಮ್ಮತತೆ, ನಿರಂತರತೆ ಹಾಗೂ ಆಟದ ಪ್ರಮುಖ ಕ್ಷಣಗಳಲ್ಲಿ VAR ಬಳಕೆಯನ್ನು ಪ್ರಶ್ನಿಸಲಾಗಿದೆ’ ಎಂದು ಹೇಳಿಕೆ ತಿಳಿಸಿದೆ.

‘ರಾಷ್ಟ್ರೀಯ ತಂಡದ ಹಕ್ಕುಗಳನ್ನು ರಕ್ಷಿಸಲು ಹಾಗೂ ನ್ಯಾಯಯುತ ಆಟದ ತತ್ವಗಳನ್ನು ಮತ್ತು ಎಲ್ಲಾ ತಂಡಗಳನ್ನು ಸಮಾನವಾಗಿ ನೋಡುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಸಂಘಟನೆ ತನ್ನ ಬದ್ಧತೆಯನ್ನು ದೃಢಪಡಿಸುತ್ತದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರತಿ ವಿಶ್ವಕಪ್ ಪಂದ್ಯದ ಬಳಿಕ ಫಿಫಾ ನಿಯಮಿತವಾಗಿ ರೆಫ್ರಿಗಳ ಪ್ರದರ್ಶನವನ್ನು ಪರಿಶೀಲಿಸುತ್ತದೆ. ಆದರೆ ಪಂದ್ಯದ ಅಧಿಕಾರಿಗಳನ್ನು ಸಾರ್ವಜನಿಕವಾಗಿ ಟೀಕಿಸಿರುವುದು ವಿರಳವಾಗಿದೆ.

ಫಿಫಾ ದೂರನ್ನು ಗಂಭೀರವಾಗಿ ಪರಿಗಣಿಸಿದರೆ, ಲೆಟೆಕ್ಸಿಯರ್ ಮತ್ತು ಇತರ ಪಂದ್ಯದ ಅಧಿಕಾರಿಗಳನ್ನು ಕ್ವಾರ್ಟರ್‌ಫೈನಲ್, ಸೆಮಿಫೈನಲ್, ಮೂರನೇ ಸ್ಥಾನಕ್ಕಾಗಿ ನಡೆಯುವ ಪ್ಲೇಆಫ್ ಹಾಗೂ ಫೈನಲ್ ಪಂದ್ಯಗಳಿಗೆ ನಿಯೋಜಿಸುವ ಸಾಧ್ಯತೆಯಿಲ್ಲ. ಸಾಮಾನ್ಯವಾಗಿ ಪಂದ್ಯಕ್ಕೆ 24 ಅಥವಾ 48 ಗಂಟೆಗಳ ಮೊದಲು ಆಡಳಿತ ಮಂಡಳಿ ಅಧಿಕಾರಿಗಳನ್ನು ಘೋಷಿಸುತ್ತದೆ. ಅಧಿಕಾರಿಗಳನ್ನು ರೋಸ್ಟರ್‌ನಲ್ಲಿ ಇರಿಸುವುದು ಅಥವಾ ನಿಯೋಜಿಸದೆ ಇರುವುದರ ಬಗ್ಗೆ ಫಿಫಾ ಹೇಳಿಕೆ ನೀಡುವ ಸಾಧ್ಯತೆ ಕಡಿಮೆಯಿದೆ.

ಈ ನಡುವೆ, ಫ್ರಾನ್ಸ್ ಮತ್ತು ಮೊರಕ್ಕೊ ನಡುವಿನ ಕ್ವಾರ್ಟರ್‌ಫೈನಲ್ ಹಣಾಹಣಿಗೆ ಎಲ್ಲಾ ಅಧಿಕಾರಿಗಳು ಅರ್ಜೆಂಟೀನಾದವರಾಗಿರುತ್ತಾರೆ ಎಂಬ ಕಳವಳ ವ್ಯಕ್ತವಾಗಿದೆ. ಆದರೆ ಫ್ರಾನ್ಸ್ ಆಟಗಾರರು ಈ ಬಗ್ಗೆ ಹೆಚ್ಚು ಆತಂಕ ವ್ಯಕ್ತಪಡಿಸಿಲ್ಲ. ಮೊದಲ ಬಾರಿಗೆ ಪಂದ್ಯಕ್ಕೆ ನೇಮಕಗೊಂಡ ಎಲ್ಲ ಅಧಿಕಾರಿಗಳೂ ಒಂದೇ ದೇಶವಾದ ಅರ್ಜೆಂಟೀನಾದವರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಫ್ರಾನ್ಸ್ ಮತ್ತು ಅರ್ಜೆಂಟೀನಾ ನಡುವೆ ಕ್ರೀಡೆಗೆ ಸಂಬಂಧಿಸಿದಂತೆ ತೀವ್ರ ಪೈಪೋಟಿ ಇದೆ. ಹಿಂದಿನ ಎರಡು ಫೈನಲ್‌ಗಳಲ್ಲಿ ಅರ್ಜೆಂಟೀನಾದೊಂದಿಗೆ ಮುಖಾಮುಖಿಯಾಗಿ ಸೆಣಸಿರುವ ಹಿನ್ನೆಲೆಯಲ್ಲಿ ಈ ನೇಮಕಾತಿ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದೆ.

44 ವರ್ಷದ ಅನುಭವಿ ರೆಫ್ರಿ ಫಕುಂಡೊ ಟೆಲ್ಲೊ ಪಂದ್ಯದ ಜವಾಬ್ದಾರಿ ವಹಿಸಲಿದ್ದಾರೆ. ಜುವಾನ್ ಪ್ಯಾಬ್ಲೊ ಬೆಲಾಟ್ಟಿ ಮತ್ತು ಗೇಬ್ರಿಯಲ್ ಚೇಡ್ ಅವರ ಬೆಂಬಲದೊಂದಿಗೆ ಡೇರಿಯೋ ಹೆರೆರಾ ನಾಲ್ಕನೇ ಅಧಿಕಾರಿಯಾಗಿದ್ದಾರೆ. ಮೀಸಲು ಸಹಾಯಕ ರೆಫ್ರಿ ಕ್ರಿಸ್ಟಿಯನ್ ನವರೊ ಅವರೂ ಅರ್ಜೆಂಟೀನಾ ಮೂಲದವರಾಗಿದ್ದಾರೆ.

2024ರಲ್ಲಿ ಕೊಲಂಬಿಯಾ ವಿರುದ್ಧ ಅರ್ಜೆಂಟೀನಾ ಕೋಪಾ ಅಮೆರಿಕ ಫೈನಲ್ ಗೆದ್ದ ಬಳಿಕ, ಅವರ ಆಟಗಾರರು ಫ್ರಾನ್ಸ್‌ನ ಆಫ್ರಿಕನ್ ಮೂಲದ ಆಟಗಾರರನ್ನು ಉದ್ದೇಶಿಸಿ ಜನಾಂಗೀಯ ಪದಗಳನ್ನು ಹಾಡುತ್ತಿರುವ ದೃಶ್ಯಗಳು ಹೊರಬಂದಾಗ ಭಾರೀ ವಿವಾದ ಉಂಟಾಗಿತ್ತು. ಇದಾದ ಬಳಿಕ ಫ್ರಾನ್ಸ್‌ನ ಫುಟ್ಬಾಲ್ ಫೆಡರೇಶನ್ ಫಿಫಾಗೆ ದೂರು ಸಲ್ಲಿಸಿತ್ತು.

ಆದರೆ, ಈ ಬಾರಿ ಅರ್ಜೆಂಟೀನಾ ಅಧಿಕಾರಿಗಳು ನೇಮಕವಾಗಿರುವ ಬಗ್ಗೆ ಫ್ರಾನ್ಸ್ ಹೆಚ್ಚು ಒತ್ತು ನೀಡಿಲ್ಲ.

‘ನಾನು ರೆಫ್ರಿ ಯಾರಾಗಿರುತ್ತಾರೆ ಎಂಬುದರತ್ತ ಗಮನ ಕೇಂದ್ರೀಕರಿಸುವುದಿಲ್ಲ. ನಾವು ಎಂದಿಗೂ ಹಾಗೆ ಮಾಡಿಲ್ಲ. ನಮ್ಮ ಗಮನ ಮೊರಕ್ಕೊದ ಮೇಲಷ್ಟೇ ಕೇಂದ್ರೀಕರಿಸಲಿದ್ದೇವೆ’ ಎಂದು ಫ್ರಾನ್ಸ್ ತಂಡ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News