×
Ad

ಪತ್ರಿಕಾ ಸ್ವಾತಂತ್ರ್ಯ ಮತ್ತು ಗೌಪ್ಯತೆಯ ಹಕ್ಕು: ದೆಹಲಿ ಹೈಕೋರ್ಟ್ ಮಹತ್ವದ ತೀರ್ಪಿನಲ್ಲೇನಿದೆ?

Update: 2026-07-09 22:10 IST

ಸಾಂದರ್ಭಿಕ ಚಿತ್ರ | Photo Credit : magnific

ಭಾರತದ ಸಂವಿಧಾನವು ನಾಗರಿಕರಿಗೆ ಖಾತರಿಪಡಿಸಿರುವ ಮೂಲಭೂತ ಹಕ್ಕುಗಳನ್ನು ಸಾಂಪ್ರದಾಯಿಕವಾಗಿ ಸರ್ಕಾರದ ವಿರುದ್ಧ ರಕ್ಷಣಾ ಕವಚವಾಗಿ ನೋಡಲಾಗುತ್ತಿತ್ತು. ಆದರೆ, ದೆಹಲಿ ಹೈಕೋರ್ಟ್ ಬುಧವಾರ (ಜುಲೈ 9) ನೀಡಿರುವ ಮಹತ್ವದ ತೀರ್ಪಿನಲ್ಲಿ ಈ ಹಕ್ಕುಗಳ ವ್ಯಾಪ್ತಿಯನ್ನು ವಿಸ್ತರಿಸಿದೆ. ಖಾಸಗಿ ಮಾಧ್ಯಮ ಸಂಸ್ಥೆಗಳು ಸಹ 'ಸಾರ್ವಜನಿಕ ಹೊಣೆಗಾರಿಕೆ'ಯನ್ನು ನಿರ್ವಹಿಸುವುದರಿಂದ, ವ್ಯಕ್ತಿಯೊಬ್ಬರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಿದರೆ ಅವುಗಳ ವಿರುದ್ಧವೂ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಬಹುದು ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಲೈಂಗಿಕ ದೌರ್ಜನ್ಯಕ್ಕೊಳಗಾದ ಅಪ್ರಾಪ್ತ ಸಂತ್ರಸ್ತೆಯನ್ನು ಗುರುತಿಸಬಹುದಾದ ವಿವರಗಳನ್ನು ಬಿತ್ತರಿಸಿದ್ದಕ್ಕಾಗಿ 'ಟಿವಿ ಟುಡೇ ನೆಟ್‌ವರ್ಕ್' ಸಂಸ್ಥೆಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ 2013ರಲ್ಲಿ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಹೈಕೋರ್ಟ್‌ನ ದ್ವಿಸದಸ್ಯ ಪೀಠವು ಎತ್ತಿಹಿಡಿದಿದೆ. ನ್ಯಾಯಮೂರ್ತಿ ಸಿ. ಹರಿ ಶಂಕರ್ ಮತ್ತು ನ್ಯಾಯಮೂರ್ತಿ ಒ. ಪಿ. ಶುಕ್ಲಾ ಅವರನ್ನೊಳಗೊಂಡ ಪೀಠದ ಪರವಾಗಿ ನ್ಯಾಯಮೂರ್ತಿ ಸಿ. ಹರಿ ಶಂಕರ್ ಅವರು ತೀರ್ಪು ಬರೆದಿದ್ದಾರೆ. ಪತ್ರಿಕಾ ಸ್ವಾತಂತ್ರ್ಯ, ಗೌಪ್ಯತೆಯ ಹಕ್ಕು ಮತ್ತು ನಾಗರಿಕರು ಮಾಧ್ಯಮಗಳ ವಿರುದ್ಧ ಕಾನೂನು ಹೋರಾಟ ನಡೆಸುವ ಮಾರ್ಗಗಳ ಮೇಲೆ ಈ ಕಾನೂನು ತತ್ವಗಳು ತೀವ್ರ ಪ್ರಭಾವ ಬೀರುತ್ತವೆ.

ಪ್ರಕರಣ ಮತ್ತು ಕಾನೂನು ಪ್ರಶ್ನೆ

ಈ ಪ್ರಕರಣವು ಆಗಸ್ಟ್ 2005ಕ್ಕೆ ಸಂಬಂಧಿಸಿದ್ದಾಗಿದೆ. ಮಹಿಳೆಯೊಬ್ಬರು ತಮ್ಮ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪತಿಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದ 'ಆಜ್ ತಕ್' ಸುದ್ದಿ ವಾಹಿನಿಯ ಚಿತ್ರೀಕರಣ ತಂಡದೊಂದಿಗೆ ಮಾತನಾಡಲು ತಾಯಿ ಸ್ಪಷ್ಟವಾಗಿ ನಿರಾಕರಿಸಿದ್ದರು. ಆದರೆ, ವಾಹಿನಿಯು ಆರೋಪಿ ತಂದೆಯ ಹೆಸರು, ಆತನ ಅಧಿಕೃತ ಹುದ್ದೆ, ಅವರ ವಾಸಸ್ಥಳದ ವಿಳಾಸದ ಬೋರ್ಡ್, ಮನೆಯ ದೃಶ್ಯಗಳು ಮತ್ತು ತಾಯಿಯ ಧ್ವನಿಯನ್ನು ಒಳಗೊಂಡ ವರದಿಯನ್ನು ಬಿತ್ತರಿಸಿತ್ತು. ಇದರ ಬೆನ್ನಲ್ಲೇ, ತಾಯಿ ವಾಹಿನಿಯ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.

ಖಾಸಗಿ ಟಿವಿ ವಾಹಿನಿಯೊಂದರ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆಯೇ? ಎಂಬುದೇ ಹೈಕೋರ್ಟ್ ಮುಂದೆ ಇದ್ದ ಪ್ರಮುಖ ಕಾನೂನು ಪ್ರಶ್ನೆಯಾಗಿತ್ತು.

ಸಂವಿಧಾನದ 226ನೇ ವಿಧಿಯಡಿ ಮೂಲಭೂತ ಹಕ್ಕುಗಳ ಅನುಷ್ಠಾನಕ್ಕಾಗಿ ಹಾಗೂ ರಾಜ್ಯ ಸರ್ಕಾರ ಅಥವಾ ಸಾರ್ವಜನಿಕ ಕರ್ತವ್ಯಗಳನ್ನು ನಿರ್ವಹಿಸುವ ಸಂಸ್ಥೆಗಳ ವಿರುದ್ಧ ಯಾವುದೇ ಇತರ ಕಾನೂನು ಹಕ್ಕುಗಳ ರಕ್ಷಣೆಗಾಗಿ ರಿಟ್ ಆದೇಶಗಳನ್ನು ಹೊರಡಿಸುವ ಅಧಿಕಾರವನ್ನು ಹೈಕೋರ್ಟ್‌ಗಳು ಹೊಂದಿವೆ.

'ಸಾರ್ವಜನಿಕ ಸಂಸ್ಥೆ'ಯಾಗಿ ಮಾಧ್ಯಮ

ಖಾಸಗಿ ಮಾಲೀಕತ್ವದಲ್ಲಿದ್ದರೂ ಸಹ ಮಾಧ್ಯಮಗಳು 'ಸಾರ್ವಜನಿಕ ಹೊಣೆಗಾರಿಕೆ'ಯನ್ನು ನಿರ್ವಹಿಸುತ್ತವೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಾಲಯ, ಸುದ್ದಿಗಳನ್ನು ಪ್ರಸಾರ ಮಾಡುವ ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವ ಮಾಧ್ಯಮಗಳ ಪಾತ್ರವು ಸಮಾಜದಲ್ಲಿ ಅತ್ಯಂತ ಪ್ರಮುಖವಾಗಿದೆ. ಹೀಗಾಗಿ ಇದು ಸಾರ್ವಜನಿಕ ಕಾರ್ಯದ ವ್ಯಾಪ್ತಿಗೆ ಬರುತ್ತದೆ ಎಂದು ತರ್ಕಿಸಿದೆ. "ಮಾಧ್ಯಮಗಳು ಯಾವುದೇ ಸಾರ್ವಜನಿಕ ಕಾರ್ಯವನ್ನು ನಿರ್ವಹಿಸುವುದಿಲ್ಲ ಎಂದು ಹೇಳುವುದು ಅವಾಸ್ತವಿಕ" ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಈ ಪಾತ್ರದೊಂದಿಗೆ "ಸಾರ್ವಜನಿಕ ಕಾರ್ಯವನ್ನು ನಿರ್ವಹಿಸುವಾಗ ಸಾರ್ವಜನಿಕರ ಹಕ್ಕುಗಳಿಗೆ ಯಾವುದೇ ಧಕ್ಕೆ ಅಥವಾ ಹಾನಿ ಉಂಟಾಗದಂತೆ ನೋಡಿಕೊಳ್ಳುವ" ಸಾರ್ವಜನಿಕ ಕರ್ತವ್ಯವೂ ಮಾಧ್ಯಮಗಳ ಮೇಲಿದೆ ಎಂದು ಸ್ಪಷ್ಟಪಡಿಸಿದೆ.

ಇದರ ಆಧಾರದ ಮೇಲೆ, ನ್ಯಾಯಾಲಯವು ಗೌಪ್ಯತೆಯ ಮೂಲಭೂತ ಹಕ್ಕನ್ನು ಖಾಸಗಿ ವ್ಯಕ್ತಿಗಳ ನಡುವೆ ಅನ್ವಯಿಸಿದೆ. ಸಾಮಾನ್ಯವಾಗಿ ಮೂಲಭೂತ ಹಕ್ಕುಗಳನ್ನು ಸರ್ಕಾರ ಅಥವಾ ರಾಜ್ಯದ ವಿರುದ್ಧ ಮಾತ್ರ ಚಲಾಯಿಸಲಾಗುತ್ತದೆ. ಆದರೆ, ಈ ಸಮಾನಾಂತರ ಅನ್ವಯದ ಮೂಲಕವೇ ನಾಗರಿಕರು ಸರ್ಕಾರೇತರ ಅಥವಾ ಖಾಸಗಿ ಸಂಸ್ಥೆಗಳ ವಿರುದ್ಧವೂ ತಮ್ಮ ಹಕ್ಕುಗಳನ್ನು ಚಲಾಯಿಸಲು ಸಾಧ್ಯವಾಗುತ್ತದೆ. ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು 2023ರ 'ಕೌಶಲ್ ಕಿಶೋರ್' ತೀರ್ಪಿನಲ್ಲಿ ಈ ತತ್ವವನ್ನು ಪ್ರತಿಪಾದಿಸಿದ್ದು, ಕೆಲವು ಮೂಲಭೂತ ಹಕ್ಕುಗಳನ್ನು ಖಾಸಗಿ ವ್ಯಕ್ತಿಗಳ ವಿರುದ್ಧವೂ ಚಲಾಯಿಸಬಹುದು ಎಂದು ತೀರ್ಪು ನೀಡಿತ್ತು.

ದೆಹಲಿ ಹೈಕೋರ್ಟ್ ಈಗ ಇದೇ ತತ್ವವನ್ನು ಮಾಧ್ಯಮಗಳ ವಿರುದ್ಧದ ಗೌಪ್ಯತೆಯ ಹಕ್ಕಿಗೂ ವಿಸ್ತರಿಸಿದೆ. ಸಂತ್ರಸ್ತೆಯ ಒಪ್ಪಿಗೆಯಿಲ್ಲದೆ ವಾಹಿನಿಯು ಬಿತ್ತರಿಸಿದ ವರದಿಯು ಆಕೆಯ ಗೌಪ್ಯತೆಯ ಮೇಲಿನ ಕಾನೂನುಬಾಹಿರ ದಾಳಿ ಎಂದು ನ್ಯಾಯಾಲಯ ಹೇಳಿದೆ. ಈ ಕಾರಣಕ್ಕಾಗಿ ರಿಟ್ ನ್ಯಾಯಾಲಯದಲ್ಲಿ ಹಣದ ರೂಪದ ಪರಿಹಾರವನ್ನು ನೀಡುವುದು ನ್ಯಾಯಸಮ್ಮತವಾಗಿದೆ ಎಂದು ನ್ಯಾಯಾಲಯ ಸಮರ್ಥಿಸಿಕೊಂಡಿದೆ.

ಹೋರಾಟದ ಸ್ವರೂಪವನ್ನೇ ಸಂಪೂರ್ಣವಾಗಿ ಬದಲಾಯಿಸಬಹುದು

ಈ ತೀರ್ಪು ಭಾರತದಲ್ಲಿ ಮಾಧ್ಯಮಗಳ ವಿರುದ್ಧ ನಡೆಯುವ ಕಾನೂನು ಹೋರಾಟದ ಸ್ವರೂಪವನ್ನೇ ಸಂಪೂರ್ಣವಾಗಿ ಬದಲಾಯಿಸಬಹುದು ಎಂದು ಕಾನೂನು ತಜ್ಞರು ಹೇಳಿರುವುದಾಗಿ 'The Indian Express' ವರದಿ ಉಲ್ಲೇಖಿಸಿದೆ.

ಈ ತೀರ್ಪಿಗೆ ಸಂಬಂಧಿಸಿದ ಕಾನೂನು ಚೌಕಟ್ಟು ಮೊದಲೇ ಅಸ್ತಿತ್ವದಲ್ಲಿದ್ದರೂ ಸಹ, ಇಲ್ಲಿ ಅದನ್ನು ಬಳಸಿರುವ ವಿಧಾನವು ತೀರಾ ಹೊಸದಾಗಿದೆ ಎಂದು ಹಿರಿಯ ವಕೀಲೆ ಮಾಧವಿ ಗೋರಾಡಿಯಾ ದಿವನ್ ಅವರು ಅಭಿಪ್ರಾಯಪಟ್ಟಿದ್ದಾರೆ. 'ಕೌಶಲ್ ಕಿಶೋರ್' ಪ್ರಕರಣದ ತೀರ್ಪಿನಲ್ಲಿ ಮೂಲಭೂತ ಹಕ್ಕುಗಳ ಸಮಾನಾಂತರ ಅನ್ವಯಕ್ಕೆ ಸಂಬಂಧಿಸಿದ ಹೆಚ್ಚಿನ ಪ್ರಶ್ನೆಗಳು ವಾಕ್ ಸ್ವಾತಂತ್ರ್ಯದ ಸಂದರ್ಭದಲ್ಲೇ ಎದ್ದಿದ್ದವು. ಹೀಗಾಗಿ, ಕಾನೂನು ತತ್ವಗಳು ಮೊದಲೇ ಇದ್ದರೂ, ಮಾಧ್ಯಮಗಳ ಸಂದರ್ಭದಲ್ಲಿ ಅವುಗಳನ್ನು ಸಕ್ರಿಯವಾಗಿ ಒಟ್ಟುಗೂಡಿಸಿ ಅನ್ವಯಿಸುತ್ತಿರುವುದು ಇದೇ ಮೊದಲು ಎಂದು ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ರಾಷ್ಟ್ರೀಯ ನ್ಯಾಯಾಂಗ ವಿಜ್ಞಾನಗಳ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ಶಮೀಕ್ ಸೇನ್ ಅವರು, ಈ ತೀರ್ಪನ್ನು ಕೌಶಲ್ ಕಿಶೋರ್ ಪ್ರಕರಣದ "ತಾರ್ಕಿಕ ಮುಂದುವರಿಕೆ" ಎಂದು ಕರೆದಿದ್ದಾರೆ. ಆದರೆ, ಈ ಎರಡೂ ಪ್ರಕರಣಗಳ ಹಿನ್ನೆಲೆ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ. ಆ ಪ್ರಕರಣವು ಅಧಿಕಾರದಲ್ಲಿದ್ದ ಸಚಿವರೊಬ್ಬರು ನೀಡಿದ ಹೇಳಿಕೆಗಳಿಗೆ ಸಂಬಂಧಿಸಿದ್ದಾಗಿತ್ತು. ಆದರೆ ಮಾಧ್ಯಮಗಳು ಸಾಮಾನ್ಯವಾಗಿ ಸರ್ಕಾರದ ಮೇಲೆ ನಿಗಾ ಇಡುವ ಮತ್ತು ವ್ಯವಸ್ಥೆಯನ್ನು ನಿಯಂತ್ರಣದಲ್ಲಿಡುವ ಸಾಧನಗಳಾಗಿವೆ. ನೀವು ಮಾಧ್ಯಮಗಳನ್ನು ಸರ್ಕಾರಕ್ಕೆ ಸಮೀಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ ಅವರು.

ಪತ್ರಿಕೋದ್ಯಮದ ಯಾವುದೇ ಬೇಜವಾಬ್ದಾರಿತನಕ್ಕೆ ಮಾನನಷ್ಟ ಮೊಕದ್ದಮೆ ಅಥವಾ ಸಿವಿಲ್ ದಾವೆಗಳಂತಹ ಸಾಮಾನ್ಯ ಪರಿಹಾರಗಳೇ ಸೂಕ್ತ ಎಂದು ಸೇನ್ ತಿಳಿಸಿದ್ದಾರೆ. ಖಾಸಗಿ ಮಾಧ್ಯಮ ಸಂಸ್ಥೆಯ ವಿರುದ್ಧ ರಿಟ್ ಅರ್ಜಿಗೆ ಅವಕಾಶ ನೀಡುವ ಮೂಲಕ, ಖಾಸಗಿ ಕಾನೂನಿನ ವ್ಯಾಪ್ತಿಯಲ್ಲಿ ಬಗೆಹರಿಯಬೇಕಾಗಿದ್ದ ವಿವಾದಕ್ಕೆ ನ್ಯಾಯಾಲಯವು ಸಾಂವಿಧಾನಿಕ ಸ್ವರೂಪ ನೀಡುತ್ತಿದೆ ಎಂದು ಅವರು ಕಳಕಳಿ ವ್ಯಕ್ತಪಡಿಸಿದ್ದಾರೆ.

ಆದರೆ, ಭಾರತದ ಸಿವಿಲ್ ನ್ಯಾಯಾಂಗ ವ್ಯವಸ್ಥೆಯಲ್ಲಿನ ವಿಪರೀತ ವಿಳಂಬವೇ ನಾಗರಿಕರು ರಿಟ್ ನ್ಯಾಯಾಲಯಗಳತ್ತ ಮುಖ ಮಾಡಲು ಪ್ರಮುಖ ಕಾರಣ ಎಂದು ಮಾಧವಿ ದಿವನ್ ಹೇಳಿದ್ದಾರೆ. ಸಾಮಾನ್ಯವಾಗಿ ಇಂತಹ ವಿವಾದಗಳು ಸಿವಿಲ್ ಮೊಕದ್ದಮೆಗಳ ಮೂಲಕವೇ ಇತ್ಯರ್ಥವಾಗಬೇಕು. ನಮ್ಮಲ್ಲಿ ವಿಚಾರಣೆಗಳು ವರ್ಷಗಟ್ಟಲೆ ತೆಗೆದುಕೊಳ್ಳುವುದರಿಂದ, ಸುದೀರ್ಘ ವಿಚಾರಣೆಯ ನಂತರವೂ ನಷ್ಟ ಪರಿಹಾರ ಪಡೆಯಲು ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ ಎಂದು ಅವರು ಹೇಳಿದ್ದಾರೆ.

ಮುಕ್ತ ಪತ್ರಿಕೋದ್ಯಮಕ್ಕೆ ಹಿನ್ನಡೆಯಾಗಲಿದೆಯೇ?

ಈ ತೀರ್ಪಿನಿಂದಾಗಿ ಎದುರಾಗಬಹುದಾದ ಪ್ರಮುಖ ಆತಂಕವೆಂದರೆ, ಈ ಕಾನೂನನ್ನು ಮಾಧ್ಯಮಗಳ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ. ಖಾಸಗಿ ಮಾಧ್ಯಮ ಸಂಸ್ಥೆಗಳು ರಿಟ್ ನ್ಯಾಯವ್ಯಾಪ್ತಿಗೆ ಒಳಪಡುತ್ತವೆ ಎಂದಾದರೆ, ರಾಜಕಾರಣಿಗಳು, ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸಾರ್ವಜನಿಕ ರಂಗದ ಪ್ರಮುಖ ವ್ಯಕ್ತಿಗಳು ತಮ್ಮ ಗೌಪ್ಯತೆಗೆ ಧಕ್ಕೆಯಾಗಿದೆ ಎಂದು ವಾದಿಸಿ, ಮಾಧ್ಯಮಗಳ ವಿಮರ್ಶಾತ್ಮಕ ವರದಿಗಳನ್ನು ತಡೆಯಲು ಈ ನಿರ್ಧಾರವನ್ನು ದುರುಪಯೋಗಪಡಿಸಿಕೊಳ್ಳಬಹುದು.

ಭರುಚಾ ಆಂಡ್ ಪಾರ್ಟ್‌ನರ್ಸ್‌ ನ ಪಾಲುದಾರ ಕೌಶಿಕ್ ಮೊಯಿತ್ರಾ ಮಾತನಾಡಿ, ಎಲ್ಲಾ ಪತ್ರಿಕಾ ಚಟುವಟಿಕೆಗಳನ್ನು 'ಸಾರ್ವಜನಿಕ ಕಾರ್ಯ' ಎಂದು ಘೋಷಿಸುವ ಮೂಲಕ, ಈ ತೀರ್ಪು ಭವಿಷ್ಯದ ದೂರುದಾರರಿಗೆ ಮಾಧ್ಯಮಗಳ ವಿರುದ್ಧ ಮೊಕದ್ದಮೆ ಹೂಡಲು ಸುಲಭವಾದ ದಾರಿಯನ್ನು ಮಾಡಿಕೊಟ್ಟಿದೆ. ಇದು ಮುಂದಿನ ದಿನಗಳಲ್ಲಿ ಸುದ್ದಿ ಸಂಸ್ಥೆಗಳ ವಿರುದ್ಧ ಗೌಪ್ಯತೆಗೆ ಸಂಬಂಧಿಸಿದ ಹೆಚ್ಚಿನ ರಿಟ್ ಅರ್ಜಿಗಳು ಸಲ್ಲಿಕೆಯಾಗಲು ಕಾರಣವಾಗಬಹುದು ಎಂದಿದ್ದಾರೆ.

ಸುದ್ದಿ ಪ್ರಕಟಣೆಗೆ ಮುನ್ನವೇ ಅದನ್ನು ತಡೆಯುವ ರಿಟ್ ಅರ್ಜಿಗಳ ಸಂಖ್ಯೆ ಹೆಚ್ಚಾಗಬಹುದು ಮತ್ತು ಮಾನನಷ್ಟ ಮೊಕದ್ದಮೆಗಳ ಸ್ವರೂಪದ ದೂರುಗಳನ್ನು ಗೌಪ್ಯತೆ ಅಥವಾ ಘನತೆಯ ಹಕ್ಕಿನ ಉಲ್ಲಂಘನೆ ಎಂಬ ಹೊಸ ರೂಪದಲ್ಲಿ ದಾಖಲಿಸುವ ಸಾಧ್ಯತೆಗಳು ಇವೆ ಎಂದು ಅವರು ಎಚ್ಚರಿಸಿದ್ದಾರೆ. ಪ್ರಾಧ್ಯಾಪಕ ಶಮೀಕ್ ಸೇನ್ ಸಹ ಇದೇ ಕಳಕಳಿಯನ್ನು ವ್ಯಕ್ತಪಡಿಸಿದ್ದು, ಈ ಮಾದರಿಯು ಪತ್ರಿಕೋದ್ಯಮದ ಮೇಲೆ ತಣ್ಣೀರೆರಚಬಹುದು. ಸಾಂವಿಧಾನಿಕ ರಿಟ್ ಅರ್ಜಿಗಳನ್ನು ಎದುರಿಸಬೇಕಾಗಬಹುದು ಎಂಬ ಭಯದಿಂದ ಪತ್ರಕರ್ತರು ರಕ್ಷಣಾತ್ಮಕ ಧೋರಣೆ ತಳೆಯಬಹುದು ಮತ್ತು ಸಂಪಾದಕೀಯ ನಿಯಂತ್ರಣಗಳು ವಿಪರೀತ ಕಠಿಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅದೇನೇ ಇದ್ದರೂ, ಭವಿಷ್ಯದ ಪ್ರಕರಣಗಳಲ್ಲಿ ಆಯಾ ಘಟನೆಯ ಹಿನ್ನೆಲೆ ಮತ್ತು ಸಂದರ್ಭಗಳು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂಬುದನ್ನು ತಜ್ಞರು ಒಪ್ಪಿಕೊಂಡಿದ್ದಾರೆ. ದೆಹಲಿ ಹೈಕೋರ್ಟ್ ಒಪ್ಪಿಗೆಯ ವಿಷಯಕ್ಕೆ ಅಷ್ಟೊಂದು ಕಟ್ಟುನಿಟ್ಟಿನ ಒತ್ತು ನೀಡಲು ಕಾರಣ, ಅಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಅಪ್ರಾಪ್ತ ಸಂತ್ರಸ್ತೆಯ ಗೌಪ್ಯತೆಯ ಪ್ರಶ್ನೆ ಇತ್ತು. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ನೈಜ ತನಿಖಾ ಪತ್ರಿಕೋದ್ಯಮಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಮಾಧವಿ ದಿವನ್ ಸ್ಪಷ್ಟಪಡಿಸಿದ್ದಾರೆ.

ರಾಜಕಾರಣಿ ಅಥವಾ ಸಾರ್ವಜನಿಕ ರಂಗದ ಪ್ರಮುಖ ವ್ಯಕ್ತಿಯೊಬ್ಬರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಆಸ್ತಿ ಗಳಿಸಿದರೆ, ಅವರು ಗೌಪ್ಯತೆಯ ಹಕ್ಕಿನ ಹಿಂದೆ ಅಡಗಿಕೊಳ್ಳಲು ಸಾಧ್ಯವಿಲ್ಲ. ಅದು ತಮ್ಮ 'ವೈಯಕ್ತಿಕ ಸಂಪತ್ತು' ಎಂದು ಹೇಳಿ ಮಾಧ್ಯಮಗಳ ತನಿಖೆಯನ್ನು ತಡೆಯಲು ಬರುವುದಿಲ್ಲ. ಏಕೆಂದರೆ ಅಂತಹ ಸಂದರ್ಭಗಳಲ್ಲಿ ವೈಯಕ್ತಿಕ ಗೌಪ್ಯತೆಗಿಂತ ಸಾರ್ವಜನಿಕ ಹಿತಾಸಕ್ತಿಯೇ ಮೇಲುಗೈ ಸಾಧಿಸುತ್ತದೆ ಎಂದು ಅವರು ಹೇಳಿದ್ದಾರೆ.

ನ್ಯಾಯಾಲಯಗಳು ಗೌಪ್ಯತೆಯ ಹಕ್ಕನ್ನು ಮಾಧ್ಯಮಗಳ ವಿರುದ್ಧ ಮುಂಚಿತವಾಗಿಯೇ ನಿರ್ಬಂಧ ಹೇರುವ ಅಸ್ತ್ರವಾಗಿ ಬಳಸಲು ಬಿಡುವುದಿಲ್ಲ. ಭವಿಷ್ಯದಲ್ಲಿ ಪ್ರತಿ ಪ್ರಕರಣದಲ್ಲೂ ಸಾರ್ವಜನಿಕ ಹಿತಾಸಕ್ತಿಯನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಿವೆ ಎಂದು ಕೌಶಿಕ್ ಮೊಯಿತ್ರಾ ಸಹಮತ ವ್ಯಕ್ತಪಡಿಸಿದ್ದಾರೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News