ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದ ಎತ್ತಿನಹೊಳೆ ಯೋಜನೆ
►ಸಿಎಜಿ ವರದಿಯಲ್ಲಿ ಬಹಿರಂಗ ►ಅಧಿವೇಶನದಲ್ಲಿ ವರದಿ ಮಂಡನೆ
ಬೆಂಗಳೂರು : ಎತ್ತಿನಹೊಳೆ ಯೋಜನೆಗೆ 2018-19ರಿಂದ 2022-23ರವರೆಗಿನ ಆಯವ್ಯಯದಲ್ಲಿ ಕೇವಲ ಶೇ.25ರಿಂದ 54ರಷ್ಟನ್ನು ಅನುದಾನವನ್ನು ಮಾತ್ರ ಒದಗಿಸಿತ್ತು. ಹೀಗಾಗಿ ಇಡೀ ಯೋಜನೆಯು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತು. ಅಲ್ಲದೇ ಗುತ್ತಿಗೆದಾರರ ಆರ್ಥಿಕ ಸಾಮರ್ಥ್ಯ, ಬಿಡ್ ಸಾಮರ್ಥ್ಯ ಮತ್ತು ಕೆಲಸದ ಅನುಭವವನ್ನೇ ಮೌಲ್ಯಮಾಪನ ಮಾಡಿರಲಿಲ್ಲ. ಮೌಲ್ಯಮಾಪನ ಮಾಡದೆಯೇ ಶೇ.80ರಷ್ಟು ಕಾಮಗಾರಿಗಳನ್ನು ಅಸಮರ್ಥತೆ ಹೊಂದಿದ್ದ ಗುತ್ತಿಗೆಯನ್ನು ನೀಡಲಾಗಿತ್ತು.
2026ರ ಜನವರಿ 29ರಂದು ನಡೆದ ವಿಧಾನಸಭೆ ಅಧಿವೇಶನದಲ್ಲಿ ಮಂಡನೆಯಾಗಿರುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕ ಪರಿಶೋಧನೆಯು, ಇಡೀ ಯೋಜನೆಯನ್ನು ಪುನರ್ ಅವಲೋಕಿಸಿದೆ. ಮತ್ತು ಇದರ ಆರ್ಥಿಕ ಪರಿಣಾಮಗಳ ಮೇಲೆ ಬೆಳಕು ಚೆಲ್ಲಿದೆ.
ಬರಪೀಡಿತ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರು ಒದಗಿಸಲು ರೂಪಿಸಿರುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯು 12 ವರ್ಷಗಳಿಗೂ ಹೆಚ್ಚು ಕಾಲ ನೆನೆಗುದಿಗೆ ಬಿದ್ದಿದೆ. ಈ ಯೋಜನೆಯನ್ನು ಪೂರ್ಣಗೊಳಿಸಲು ಸರಕಾರವು ಯಾವುದೇ ಗಡುವನ್ನೂ ನಿಗದಿಪಡಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇಡೀ ಯೋಜನೆಯು ಬಳಲುತ್ತಿದೆ ಎಂದು ಕಾರ್ಯನಿರ್ವಹಣಾ ವರದಿಯಲ್ಲಿ ವಿಶ್ಲೇಷಿಸಿರುವುದು ತಿಳಿದು ಬಂದಿದೆ.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನೀರನ್ನು ಕೊಂಡ್ಯೊಯ್ಯಲು ಗುರುತ್ವಾಕರ್ಷಣಾ ಕಾಲುವೆ ಮತ್ತು ಸಮತೋಲನ ಜಲಾಶಯ ಕಾಮಗಾರಿಯು ಅತ್ಯಗತ್ಯವಾಗಿ ಪೂರ್ಣಗೊಳ್ಳಬೇಕಿತ್ತು. ಪೂರ್ಣಗೊಳ್ಳದ ಕಾರಣ, ಮೊದಲನೇ ಹಂತದಲ್ಲಿ 2,965.77 ಕೋಟಿ ರೂ.ಗಳಲ್ಲಿ ರಚಿಸಿದ್ದ ಸ್ವತ್ತುಗಳು ನಿಷ್ಕ್ರೀಯವಾಗಿದ್ದವು. ಪಂಪ್‌ಗಳು, ಮೋಟರ್‌ಗಳಂತಹ ಎಲೆಕ್ಟ್ರೋ ಮೆಕ್ಯಾನಿಕಲ್ ಉಪಕರಣಗಳನ್ನು ಪರೀಕ್ಷಿಸಲೂ ಸಹ ಸಾಧ್ಯವಾಗಲಿಲ್ಲ. ಈ ಉಪಕರಣಗಳ ಉಪಯುಕ್ತ ಜೀವಿತಾವಧಿಯ ಗಮನಾರ್ಹ ಭಾಗವನ್ನೂ ಸಹ ಬಳಸಲಾಗಲಿಲ್ಲ. ಹೀಗಾಗಿ ಈ ಉಪಕರಣಗಳು ನಿಷ್ಕ್ರೀಯವಾಗಿದ್ದವು ಎಂದು ಕಾರ್ಯನಿರ್ವಹಣಾ ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ. <ಸಿಎಜಿ ಗಮನಿಸಿರುವುದೇನು?: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಎರಡು ಬಾರಿ ಪರಿಷ್ಕರಿಸಲಾಗಿದೆ. 2012ರಲ್ಲಿ ಅನುಮೋದಿಸಿದ್ದ ಮೂಲ ಯೋಜನೆ ಮೊತ್ತ 8,323.50 ಕೋಟಿ ರೂ.ಯಿಂದ 2014ರ ಫೆಬ್ರವರಿಯಲ್ಲಿ 12,912.36 ಕೋಟಿ ರೂ.ಗೆ, 2023ರ ಜನವರಿಯಲ್ಲಿ 23,251.66 ಕೋಟಿ ರೂ.ಗಳಿಗೆ ಪರಿಷ್ಕರಿಸಲಾಗಿದೆ. ಎರಡು ಹಂತಗಳಲ್ಲಿ ಕಾರ್ಯಗತಗೊಳಿಸಲು ಉದ್ದೇಶಿಸಿದ್ದ ನಿಗಮವು, 2014ರ ಮಾರ್ಚ್‌ನಿಂದ ವಿವಿಧ ಪ್ಯಾಕೇಜ್‌ಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿತ್ತು. ಆದರೂ ಸಹ ಯೋಜನಾ ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿವೆ. ಮತ್ತು ಪೂರ್ಣಗೊಳ್ಳಲು ಹಾಗೂ ಉದ್ದೇಶಿತ ಯೋಜನೆಯ ಪ್ರಯೋಜನ ಆಗಬೇಕಾದರೆ ಇನ್ನೂ ಕಾಲಾವಕಾಶ ಬೇಕಿದೆ ಎಂದು ವರದಿ ಹೇಳಿದೆ.
ಅಲ್ಲದೇ ಈ ಕಾರ್ಯಸಾಧ್ಯತೆ (ಡಿಪಿಆರ್) ವರದಿಗಳು ಯೋಜನೆಯನ್ನು ಪೂರ್ಣಗೊಳಿಸಲು ಉದ್ದೇಶಿತ ದಿನಾಂಕವನ್ನು ನಿಗದಿಪಡಿಸಿಲ್ಲ. ಸಮತೋಲನ ಜಲಾಶಯದ ಸ್ಥಳವನ್ನು ಎರಡು ಬಾರಿ ಬದಲಾಯಿಸಲಾಗಿದೆ. ಮತ್ತು ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ಆರಂಭದಲ್ಲಿ ಪ್ರಸ್ತಾವಿಸಿದ್ದ ಹತ್ತು ಟಿಎಂಸಿಯಿಂದ ಎರಡು ಟಿಎಂಸಿಗೆ ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಮಳೆಗಾಲದ ತಿಂಗಳಲ್ಲಿ ಹೆಚ್ಚಿನ ನೀರನ್ನು ಪಂಪ್ ಮಾಡುವ ಅಗತ್ಯವಿದೆ. ವಿನ್ಯಾಸದಲ್ಲೇ ಬದಲಾವಣೆ ಮಾಡಿರುವ ಕಾರಣ 621.45 ಕೋಟಿ ರೂ.ಯಷ್ಟು ಹೆಚ್ಚುವರಿಯಾಗಿ ವೆಚ್ಚ ಮಾಡಬೇಕಾದ ಪರಿಸ್ಥಿತಿಗೆ ದೂಡಿದಂತಾಗಿರುವುದು ವರದಿಯಿಂದ ಗೊತ್ತಾಗಿದೆ.
ಫಲಪ್ರದವಾಗದ 2,965.77 ಕೋಟಿ ರೂ. ವೆಚ್ಚ : ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಲಿಫ್ಟ್ ಮಾಡಿದ ನೀರನ್ನು ಸಾಗಿಸಲು ಹಂತ-1ರಲ್ಲಿ ಲಿಫ್ಟಿಂಗ್ ಘಟಕ ಮತ್ತು ಇಲೆಕ್ಟ್ರೋ ಮೆಕ್ಯಾನಿಕಲ್ ಕಾಮಗಾರಿಗಳು, ಎರಡನೇ ಹಂತದಲ್ಲಿ ಗುರುತ್ವಾಕರ್ಷಣೆ, ಫೀಡರ್ ಕಾಲುವೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿತ್ತು. ಎರಡನೇ ಹಂತದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಭೂ ಸ್ವಾಧೀನಪಡಿಸಿಕೊಳ್ಳಬೇಕಿದ್ದ ವಿಜೆಎನ್‌ಎಲ್, ಪ್ರಸ್ತಾವನೆಗಳನ್ನು ನಿಗದಿತ ಅವಧಿಯೊಳಗೆ ಸಲ್ಲಿಸಲಿಲ್ಲ. ಭೂ ಸ್ವಾಧೀನದಲ್ಲಿನ ವಿಳಂಬ ಮತ್ತು ಸಾಮಾಜಿಕ ಪರಿಣಾಮ ಮೌಲ್ಯಮಾಪನ ಕಾಮಗಾರಿಗಳೂ ಸಹ ವಿಳಂಬವಾಗಿದ್ದವು.
ಈ ಅವಧಿ ಮಧ್ಯೆ ಪಂಪ್, ಮೋಟಾರ್‌ಗಳಂತಹ ಎಲೆಕ್ಟ್ರೋ ಮೆಕ್ಯಾನಿಕಲ್ ಉಪಕರಣಗಳಿಗಾಗಿ 2,965.77 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ನಿಗದಿತ ಅವಧಿಯಲ್ಲಿ ಪ್ರಕ್ರಿಯೆಗಳು ಆರಂಭವಾಗದ ಕಾರಣ, 2,965.77 ಕೋಟಿ ರೂ. ಮೊತ್ತದ ಉಪಕರಣಗಳನ್ನು ಬಳಸಲಾಗಲಿಲ್ಲ. ಅವುಗಳು ನಿಷ್ಕ್ರೀಯಯವಾಗಿದ್ದವು ಎಂದು ಸಿಎಜಿ ವರದಿಯಲ್ಲಿ ವಿಶ್ಲೇಷಿಸಿದೆ.
ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ ಯೋಜನೆ:
2018-19ರಿಂದ 2022-23ರ ಅವಧಿಯಲ್ಲಿ ಯೋಜನೆಗೆ ಆಯವ್ಯಯ ಅವಕಾಶದಲ್ಲಿ ಕೇವಲ ಶೆ.25ರಿಂದ 54ರಷ್ಟನ್ನು ಮಾತ್ರ ಸರಕಾರವು ಅನುದಾನ ಒದಗಿಸಿದೆ. ಹೀಗಾಗಿ ಈ ಯೋಜನೆಯು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತು. ಯೋಜನೆಯ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯವಾದ ಹೊಸ ಸಾಲ ಪಡೆಯಲು ವಿಜೆಎನ್‌ಎಲ್ ಕೋರಿತ್ತು. 2024ರ ಮಾರ್ಚ್‌ವರೆಗೆ ಸರಕಾರದ ಅನುಮೋದನೆಗೆ ಕಾಯ್ದಿರಿಸಲಾಗಿತ್ತು. ಹೀಗಾಗಿ 2024ರ ಮಾರ್ಚ್‌ನಲ್ಲಿದ್ದಂತೆ ಈ ಯೋಜನೆಯು ಪೂರ್ಣಗೊಳಿಸಲು ಅಗತ್ಯವಿರುವ 7,954.63 ಕೋಟಿ ರೂ.ಗಳ ಬಗ್ಗೆ ನಿಗಮವು ಆರ್ಥಿಕ ಅನಿಶ್ಚತೆಯಲ್ಲಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ.