ಬಾರಾಮತಿ ವಿಮಾನ ದುರಂತ: ಟೇಬಲ್‌ಟಾಪ್ ರನ್‌ವೇಗಳು ಎಷ್ಟು ಸುರಕ್ಷಿತ?
Photo Credit : NDTV
ಬುಧವಾರ ಬೆಳಿಗ್ಗೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ಲಿಯರ್‌ಜೆಟ್ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವು, ಮತ್ತೊಮ್ಮೆ ಟೇಬಲ್‌ಟಾಪ್ ರನ್‌ವೇಗಳ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜನವರಿ 28ರಂದು ಬೆಳಿಗ್ಗೆ ಬಾರಾಮತಿಯಲ್ಲಿ ಸಂಭವಿಸಿದ ಈ ವಿಮಾನ ದುರಂತದಲ್ಲಿ ಅಜಿತ್ ಪವಾರ್ ಸೇರಿದಂತೆ ಐವರು ಸಾವಿಗೀಡಾಗಿದ್ದರು. ಪವಾರ್ ಪ್ರಯಾಣಿಸುತ್ತಿದ್ದ ವಿಮಾನವು ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾಗ ಅಪಘಾತಕ್ಕೀಡಾಯಿತು.
ಬಾರಾಮತಿ ಏರ್‌ಸ್ಟ್ರಿಪ್ ಚಿಕ್ಕದಾಗಿದ್ದು, ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ILS) ಸೌಲಭ್ಯಗಳನ್ನು ಹೊಂದಿಲ್ಲ. ಪೈಲಟ್ ಹಸ್ತಚಾಲಿತ ಹಾಗೂ ದೃಶ್ಯ ಲ್ಯಾಂಡಿಂಗ್‌ಗೆ ಪ್ರಯತ್ನಿಸಬೇಕಾಯಿತು. ಲ್ಯಾಂಡಿಂಗ್ ಸಮಯದಲ್ಲಿ ವಿಮಾನವು ಟೇಬಲ್‌ಟಾಪ್ ರನ್‌ವೇಯ ಅಂಚಿನ ಬಳಿ ಅಪ್ಪಳಿಸಿತು. ಮುಂಬೈನಿಂದ ಹಾರಿದ್ದ ಲಿಯರ್‌ಜೆಟ್ 45, ಸುಧಾರಿತ ಲ್ಯಾಂಡಿಂಗ್ ಸಾಧನಗಳಿಲ್ಲದೆ, ಸರಾಸರಿ ಸಮುದ್ರ ಮಟ್ಟದಿಂದ 604 ಮೀಟರ್ ಎತ್ತರದಲ್ಲಿರುವ 1,770 ಮೀಟರ್ ರನ್‌ವೇಯಲ್ಲಿ ಇಳಿಯುವಾಗ ನಿಯಂತ್ರಣ ಕಳೆದುಕೊಂಡಿತು. ಹತ್ತಿರದ ಮೈದಾನಕ್ಕೆ ಡಿಕ್ಕಿ ಹೊಡೆದಾಗ ವಿಮಾನವು ಬೆಂಕಿಗೆ ಆಹುತಿಯಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮುಂಬೈನಿಂದ ಬೆಳಿಗ್ಗೆ 08.10ರ ಸುಮಾರಿಗೆ ಹೊರಟ ವಿಮಾನವು ಬಾರಾಮತಿ ವಿಮಾನ ನಿಲ್ದಾಣದ ಟೇಬಲ್‌ಟಾಪ್ ರನ್‌ವೇ ತಲುಪುತ್ತಿದ್ದಂತೆ ಬೆಳಿಗ್ಗೆ 08.44ರ ಸುಮಾರಿಗೆ ಅಪಘಾತಕ್ಕೀಡಾಯಿತು. ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದೆ.
ತನಿಖೆ ತ್ವರಿತವಾಗಿ ಪ್ರಗತಿಯಲ್ಲಿದೆ. ಅಪಘಾತಕ್ಕೊಳಗಾದ ವಿಮಾನದ ಬ್ಲಾಕ್ ಬಾಕ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ (MOCA) ತಿಳಿಸಿದ್ದು, AAIB ನಿಯಮಗಳು–2025ರ ನಿಯಮಗಳು 5 ಮತ್ತು 11ರ ಪ್ರಕಾರ ತನಿಖೆಯನ್ನು ಪ್ರಾರಂಭಿಸಲಾಗಿದೆ.
ಟೇಬಲ್‌ಟಾಪ್ ರನ್‌ವೇಗಳಲ್ಲಿ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಸಾಮಾನ್ಯ ರನ್‌ವೇಗಳಿಗಿಂತ ಹೆಚ್ಚು ಸವಾಲಿನದ್ದು ಎಂದು ತಜ್ಞರು ಹೇಳುತ್ತಾರೆ.
ಬಾರಾಮತಿ ವಾಯುನೆಲೆ ಸರಿಸುಮಾರು 2,000 ಅಡಿ ಎತ್ತರದಲ್ಲಿದೆ. ಇಲ್ಲಿ ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ILS) ಇಲ್ಲ. ಆದ್ದರಿಂದ ಪೈಲಟ್‌ಗಳು ಲ್ಯಾಂಡಿಂಗ್‌ಗೆ ಹಸ್ತಚಾಲಿತ ಹಾಗೂ ದೃಶ್ಯ ತಂತ್ರಗಳನ್ನೇ ಅವಲಂಬಿಸಬೇಕಾಗುತ್ತದೆ. ಕೆಲವು ಸಿಸಿಟಿವಿ ದೃಶ್ಯಾವಳಿಗಳು ವಿಮಾನವು ಅಪ್ಪಳಿಸುವ ಮೊದಲು ಸ್ವಲ್ಪ ಓರೆಯಾಗಿ ಬಳಿಕ ಬೆಂಕಿ ಹತ್ತಿಕೊಂಡಿರುವುದನ್ನು ತೋರಿಸಿದ್ದರೂ, ಆರಂಭಿಕ ತನಿಖೆಗಳು ಕಳಪೆ ಗೋಚರತೆಯೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಸೂಚಿಸಿವೆ.
ಡಿಜಿಸಿಎ ಮೂಲಗಳು ಬಾರಾಮತಿ ರನ್‌ವೇಯನ್ನು ಟೇಬಲ್‌ಟಾಪ್ ರನ್‌ವೇ ಎಂದು ಹೇಳಿದ್ದು, ಇಂತಹ ರನ್‌ವೇಗಳು ಎಷ್ಟು ಸುರಕ್ಷಿತ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಟೇಬಲ್‌ಟಾಪ್ ರನ್‌ವೇಗಳು ಎಂದರೆ?
ಹೆಸರೇ ಸೂಚಿಸುವಂತೆ, ಗುಡ್ಡಗಾಡು ಮೇಲ್ಮೈ ಮೇಲೆ ನಿರ್ಮಿಸಲಾದ ವಿಮಾನ ನಿಲ್ದಾಣವನ್ನು ಟೇಬಲ್‌ಟಾಪ್ ರನ್‌ವೇ ಎಂದು ಕರೆಯಲಾಗುತ್ತದೆ. ನಿಲ್ದಾಣದ ಎರಡೂ ಬದಿಗಳಲ್ಲಿ ಅಥವಾ ಒಂದು ಬದಿಯಲ್ಲಿ ಕಣಿವೆ ಇದ್ದು, ಎತ್ತರದ ಪ್ರದೇಶದಲ್ಲಿ ರನ್‌ವೇ ಇದ್ದರೆ ಅದನ್ನು ಟೇಬಲ್‌ಟಾಪ್ ರನ್‌ವೇ ಎಂದು ಗುರುತಿಸಲಾಗುತ್ತದೆ. ಗುಡ್ಡಗಳನ್ನು ಕಡಿದು ನಿರ್ಮಿಸಲಾದ ಈ ರನ್‌ವೇಗಳ ಒಂದು ತುದಿಯಲ್ಲಿ ಕಡಿದಾದ ಇಳಿಜಾರು ಇರುತ್ತದೆ. ಭಾರತದಲ್ಲಿ ಟೇಬಲ್‌ಟಾಪ್ ರನ್‌ವೇಗಳೆಂದು ಪರಿಗಣಿಸಲ್ಪಡುವ ವಿಮಾನ ನಿಲ್ದಾಣಗಳಲ್ಲಿ ಲೆಂಗ್‌ಪುಯಿ (ಮಿಜೋರಾಮ್), ಶಿಮ್ಲಾ ಮತ್ತು ಕುಲ್ಲು (ಹಿಮಾಚಲ ಪ್ರದೇಶ), ಪಾಕ್ಯೊಂಗ್ (ಸಿಕ್ಕಿಂ), ಮಂಗಳೂರು (ಕರ್ನಾಟಕ), ಕೋಯಿಕ್ಕೋಡ್ ಮತ್ತು ಕಣ್ಣೂರು (ಕೇರಳ) ಸೇರಿವೆ.
ಟೇಬಲ್‌ಟಾಪ್ ರನ್‌ವೇಗಳಲ್ಲಿ ಸಂಭವಿಸಿದ ಅಪಘಾತಗಳು
2010ರ ಮೇ 22ರಂದು ಮಂಗಳೂರಿನಲ್ಲಿ ನಡೆದ ಅಪಘಾತವು ಟೇಬಲ್‌ಟಾಪ್ ರನ್‌ವೇಗಳಲ್ಲಿನ ಅಪಾಯಗಳನ್ನು ಸ್ಪಷ್ಟವಾಗಿ ಎತ್ತಿ ತೋರಿಸಿತು. ದುಬೈನಿಂದ ಮಂಗಳೂರಿಗೆ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ರನ್‌ವೇ 24ರಲ್ಲಿ ಇಳಿಯುವಾಗ ರನ್‌ವೇ ದಾಟಿ ಹೋಗಿತ್ತು. ವಿಮಾನ IX-812 ಆಂಟೆನಾಕ್ಕೆ ಡಿಕ್ಕಿ ಹೊಡೆದು ಬಳಿಕ ಕಡಿದಾದ ಕಣಿವೆಗೆ ಜಾರಿ ಬೆಂಕಿಗಾಹುತಿಯಾಯಿತು. ವಿಮಾನದಲ್ಲಿದ್ದ 160 ಪ್ರಯಾಣಿಕರು ಮತ್ತು 6 ಸಿಬ್ಬಂದಿಗಳಲ್ಲಿ 158 ಮಂದಿ ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು. ಈ ಘಟನೆ, ಇಂತಹ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯ ಸ್ವರೂಪದ ಮೇಲೆ, ವಿಶೇಷವಾಗಿ ಅವುಗಳ ಚಿಕ್ಕ ರನ್‌ವೇಗಳ ಮೇಲೆ ಗಮನ ಸೆಳೆದಿತ್ತು.
2020ರ ಆಗಸ್ಟ್‌ನಲ್ಲಿ, ಮಾನ್ಸೂನ್ ಮಳೆ ಮತ್ತು ಕಳಪೆ ಗೋಚರತೆಯ ಕಾರಣದಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಬೋಯಿಂಗ್ 737 ವಿಮಾನವು ಕೋಝಿಕೋಡ್‌ನ ಟೇಬಲ್‌ಟಾಪ್ ರನ್‌ವೇಯನ್ನು ದಾಟಿ 35 ಅಡಿ ಆಳದ ಕಮರಿಗೆ ಉರುಳಿತು. ಈ ಅಪಘಾತದಲ್ಲಿ 21 ಮಂದಿ ಮೃತಪಟ್ಟರು. ಈ ಘಟನೆ ನಂತರ, ವಾಯುಯಾನ ಅಧಿಕಾರಿಗಳು ರನ್‌ವೇ ಕುಶನ್ ವಿಸ್ತರಣೆಗಳು ಹಾಗೂ ವೃದ್ಧಿಸಿದ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಶಿಫಾರಸು ಮಾಡಿದರು.
ಸವಾಲುಗಳೇನು?
ಅತ್ಯುತ್ತಮ ವಾಣಿಜ್ಯ ಪೈಲಟ್‌ಗಳಿಗೂ ಸಹ ಟೇಬಲ್‌ಟಾಪ್ ರನ್‌ವೇಗಳಲ್ಲಿ ವಿಮಾನವನ್ನು ಇಳಿಸುವುದು ಕಷ್ಟಕರವೆಂದು ಹೇಳಲಾಗುತ್ತದೆ. ಕೋಝಿಕೋಡ್ ವಿಮಾನ ನಿಲ್ದಾಣದಂತೆ ಗುಡ್ಡದ ತುದಿಯಲ್ಲಿ ಇರುವ ರನ್‌ವೇಗಳಲ್ಲಿ, ಪೈಲಟ್‌ಗಳು ಸರಿಯಾದ ದೂರದಲ್ಲಿ ವಿಮಾನವನ್ನು ನಿಲ್ಲಿಸಲು ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ಮಳೆಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ಜಟಿಲವಾಗುತ್ತದೆ. ಪೈಲಟ್‌ಗಳು ಸರಿಯಾದ ಲ್ಯಾಂಡಿಂಗ್ ಬಿಂದುಗಳನ್ನು ಗುರುತಿಸಲು ವಿಫಲರಾದರೆ, ವಿಮಾನವು ರನ್‌ವೇ ಬಿಟ್ಟು ಕೆಳಜಾರುವ ಅಪಾಯ ಉಂಟಾಗುತ್ತದೆ.
ಕೆಟ್ಟ ಹವಾಮಾನ
ಟೇಬಲ್‌ಟಾಪ್ ವಿಮಾನ ನಿಲ್ದಾಣಗಳಲ್ಲಿ ಇಳಿಯುವುದು ಸ್ವತಃ ಕಷ್ಟಕರವಾಗಿದ್ದರೂ, ಮಂಜು ಮತ್ತು ಮಳೆಯಂತಹ ಪ್ರತಿಕೂಲ ಹವಾಮಾನವು ಲ್ಯಾಂಡಿಂಗ್ ಮತ್ತು ಟೇಕ್‌ಆಫ್ ಎರಡನ್ನೂ ಮತ್ತಷ್ಟು ಅಪಾಯಕಾರಿಯಾಗಿಸುತ್ತದೆ. ವಿಮಾನ ಸಮೀಪಿಸುವಾಗ ವಿಂಡ್‌ಶೀಲ್ಡ್ ಮೇಲೆ ಇರುವ ನೀರಿನಿಂದ ಗೋಚರತೆ ವರದಿಯಾದ ಮಟ್ಟಕ್ಕಿಂತ ಕಡಿಮೆಯಾಗುತ್ತದೆ. ಜೊತೆಗೆ, ನೀರಿನಿಂದ ವಕ್ರೀಭವನ ದೋಷ ಉಂಟಾಗಿ ರನ್‌ವೇ ಕಡಿಮೆಯಾಗಿ ಕಾಣಬಹುದು. ಇತರ ಅಂಶಗಳನ್ನು ಅವಲಂಬಿಸಿ ಈ ದೋಷವು 5 ಡಿಗ್ರಿಗಳವರೆಗೆ ಇರಬಹುದು. ಇದರ ಪರಿಣಾಮವಾಗಿ ಅರ್ಧ ಮೈಲಿ ದೂರದಲ್ಲಿರುವ ರನ್‌ವೇ ಅಥವಾ ಭೂಪ್ರದೇಶದ ವೈಶಿಷ್ಟ್ಯವು ನಿಜಕ್ಕಿಂತ ಸುಮಾರು 250 ಅಡಿಗಳಷ್ಟು ಕಡಿಮೆಯಾಗಿ ಕಾಣುವ ಸಾಧ್ಯತೆ ಇದೆ. ನೀರಿನಿಂದ ಉಂಟಾಗುವ ರನ್‌ವೇ ಘರ್ಷಣಾ ಸಮಸ್ಯೆಯೂ ವಿಮಾನವನ್ನು ನಿಲ್ಲಿಸಲು ಬೇಕಾದ ದೂರವನ್ನು ಹೆಚ್ಚಿಸುತ್ತದೆ.
ಆಪ್ಟಿಕಲ್ ಭ್ರಮೆಗಳು
ಟೇಬಲ್‌ಟಾಪ್ ರನ್‌ವೇಗಳು ಅಪಾಯಕಾರಿ ದೃಶ್ಯ ಭ್ರಮೆಗಳನ್ನು ಸೃಷ್ಟಿಸಬಹುದು. ರನ್‌ವೇ ಬೆಟ್ಟ ಅಥವಾ ಪ್ರಸ್ಥಭೂಮಿಯ ಮೇಲೆ ಎತ್ತರದಲ್ಲಿರುವುದರಿಂದ ಅದು ಇನ್ನಷ್ಟು ಎತ್ತರವಾಗಿ ಕಾಣುತ್ತದೆ ಮತ್ತು ‘ಇನ್ಫಿನಿಟಿ ಪೂಲ್’ ಪರಿಣಾಮವನ್ನು ಉಂಟುಮಾಡುತ್ತದೆ. ಲ್ಯಾಂಡಿಂಗ್‌ಗೆ ಸಮೀಪಿಸುತ್ತಿರುವ ಪೈಲಟ್‌ಗೆ ರನ್‌ವೇ ನಿಜಕ್ಕಿಂತ ಹೆಚ್ಚು ಹತ್ತಿರವಾಗಿಯೂ ಎತ್ತರವಾಗಿಯೂ ಕಾಣಬಹುದು. ಇದರಿಂದ ಪೈಲಟ್ ತಪ್ಪು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಗ್ರಹಿಕೆ ಮತ್ತು ವಾಸ್ತವದ ನಡುವಿನ ಈ ಗೊಂದಲದಿಂದ ಕಠಿಣ ಲ್ಯಾಂಡಿಂಗ್, ಮಿತಿಗಿಂತ ಕಡಿಮೆ ಲ್ಯಾಂಡಿಂಗ್ ಅಥವಾ ಅಪಘಾತದ ಅಪಾಯ ಹೆಚ್ಚಾಗುತ್ತದೆ.