×
Ad

'ಪವಾರ್ ಬಹು’ವಿನ ಪವರ್ ಪಾಲಿಟಿಕ್ಸ್ : NCP ಸಾರಥ್ಯ ವಹಿಸಲಿದ್ದಾರೆಯೇ ಅಜಿತ್ ಪತ್ನಿ ಸುನೇತ್ರಾ ಪವಾರ್?

Update: 2026-01-29 20:46 IST

ಅಜಿತ್ ಪವಾರ್ , ಸುನೇತ್ರಾ ಪವಾರ್ | Photo Credit : PTI 

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಹಠಾತ್ ನಿಧನವು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (NCP)ವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಅಜಿತ್ ಪವಾರ್ ಬಣ ಮತ್ತು ಶರದ್ ಪವಾರ್ ಬಣ ಎಂದು ಎನ್‌ಸಿಪಿ ಇಬ್ಭಾಗವಾಗಿದ್ದರೂ, ಇತ್ತೀಚೆಗೆ ಈ ಬಣಗಳು ಮತ್ತೆ ಒಂದಾಗುವ ಸೂಚನೆ ನೀಡಿದ್ದವು. ಈ ಹೊತ್ತಿನಲ್ಲಿ ವಿಮಾನ ದುರಂತದಲ್ಲಿ ಅಜಿತ್ ಪವಾರ್ ಅವರನ್ನು ಕಳೆದುಕೊಂಡಿರುವುದು, ಎನ್‌ಸಿಪಿಯ ಅಜಿತ್ ಬಣದ ನಾಯಕ ಸ್ಥಾನಕ್ಕೆ ಅರ್ಹ ವ್ಯಕ್ತಿಯನ್ನು ತಂದುಕೂರಿಸುವ ಜವಾಬ್ದಾರಿಯನ್ನು ಪಕ್ಷದ ಮೇಲೆ ಹಾಕಿದೆ.

ಅಜಿತ್ ಪವಾರ್ ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ಸಿಗುವ ಮೊದಲ ಉತ್ತರ – ಅವರ ಪತ್ನಿ ಸುನೇತ್ರಾ ಪವಾರ್.

ಮಹಾರಾಷ್ಟ್ರದಾದ್ಯಂತ ಪ್ರೀತಿಯಿಂದ “ವಹಿನಿ” (ವೈಣಿ–ಅತ್ತಿಗೆ) ಎಂದು ಕರೆಯಲ್ಪಡುವ ಸುನೇತ್ರಾ ಪವಾರ್, ಮೂರು ದಶಕಗಳಿಗೂ ಹೆಚ್ಚು ಕಾಲ ಅಜಿತ್ ಪವಾರ್ ಅವರ ಜೊತೆ ಕುಟುಂಬ–ರಾಜಕೀಯದ ಪಯಣದಲ್ಲಿ ಜತೆಯಾಗಿದ್ದವರು. ಸುನೇತ್ರಾ ಬಾರಾಮತಿಯಲ್ಲಿ ಸಾಮಾಜಿಕ ಹಾಗೂ ಸಂಸ್ಥಾತ್ಮಕ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದರೂ, ಅವರ ಕೆಲಸವು ಮುಖ್ಯವಾಗಿ 2010ರಲ್ಲಿ ಅವರು ಸ್ಥಾಪಿಸಿದ ಎನ್ವಿರಾನ್ಮೆಂಟಲ್ ಫೋರಮ್ ಆಫ್ ಇಂಡಿಯಾ (EFOI) ಮತ್ತು ಸಾವಿರಾರು ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ನೀಡುವ ಬಾರಾಮತಿ ಹೈಟೆಕ್ ಜವಳಿ ಪಾರ್ಕ್ ಮೂಲಕ ಗುರುತಿಸಿಕೊಂಡಿದೆ.

ಸುನೇತ್ರಾ ಪವಾರ್ ಕುಟುಂಬ ಹಿನ್ನೆಲೆ

1963 ಅಕ್ಟೋಬರ್ 18ರಂದು ಜನಿಸಿದ ಸುನೇತ್ರಾ ಪವಾರ್, ಮರಾಠವಾಡದ ಧರಾಶಿವ್ ಮೂಲದವರು. ಅವರದ್ದು ರಾಜಕೀಯ ಕುಟುಂಬ. ಅವರ ತಂದೆ ಮಹಾರಾಷ್ಟ್ರದ ಮಾಜಿ ಸಚಿವ ಪದ್ಮಸಿಂಹ ಬಾಜಿರಾವ್ ಪಾಟೀಲ್. ಸುನೇತ್ರಾ ಅವರ ಸಹೋದರ ಪದ್ಮಸಿಂಹ ಪಾಟೀಲ್ ರಾಜ್ಯ ಸಚಿವರಾಗಿಯೂ, ಲೋಕಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.

1985ರಲ್ಲಿ ಅಜಿತ್ ಪವಾರ್ ಅವರನ್ನು ವಿವಾಹವಾದ ಸುನೇತ್ರಾ, ಪವಾರ್ ಕುಟುಂಬದ ಸೊಸೆ ಎಂಬ ಅರ್ಥದಲ್ಲಿ “ಪವಾರ್ ಬಹು” ಎಂದೇ ಪ್ರಸಿದ್ಧರಾಗಿದ್ದಾರೆ. ಅಜಿತ್ ಪವಾರ್ ಪ್ರಭಾವಿ ರಾಜಕಾರಣಿ, ತಂತ್ರಜ್ಞ ಹಾಗೂ ಡೀಲ್ ಮೇಕರ್ ಆಗಿದ್ದರೆ, ಅವರ ಪತ್ನಿ ಸುನೇತ್ರಾ ಹಲವು ವರ್ಷಗಳ ಕಾಲ ರಾಜಕೀಯದಿಂದ ದೂರವಿದ್ದರು. ಅಜಿತ್ ಪವಾರ್ ಬಾರಾಮತಿಯ ‘ದಾದಾ’ ಆಗಿ ಜನಪ್ರಿಯರಾದರೆ, ಸುನೇತ್ರಾ ಬಾರಾಮತಿ ಮತ್ತು ಮರಾಠವಾಡದಾದ್ಯಂತ ಸಾಮಾಜಿಕ, ಶೈಕ್ಷಣಿಕ ಹಾಗೂ ವ್ಯಾಪಾರ ಜಾಲಗಳನ್ನು ಬೆಳೆಸಿದರು. ಪವಾರ್ ಕುಟುಂಬಕ್ಕೆ ಹತ್ತಿರವಿರುವವರು, ಅವರನ್ನು ತೀಕ್ಷ್ಣ, ಶಿಸ್ತುಬದ್ಧ ಮತ್ತು ಮಹಾರಾಷ್ಟ್ರ ರಾಜಕೀಯದ ಕುರಿತು ಆಳವಾದ ತಿಳುವಳಿಕೆ ಹೊಂದಿರುವ ವ್ಯಕ್ತಿ ಎಂದು ವರ್ಣಿಸುತ್ತಾರೆ.

2024ರಲ್ಲಿ ಸುನೇತ್ರಾ ಪವಾರ್ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರ ಪ್ರತಿಸ್ಪರ್ಧಿ ಅತ್ತಿಗೆ ಸುಪ್ರಿಯಾ ಸುಳೆ. ಇದು ಕೇವಲ ಚುನಾವಣೆಯಲ್ಲ; ಪವಾರ್ ಕುಟುಂಬದ ವಿಭಜನೆಯ ಕುರಿತು ಜನಾಭಿಪ್ರಾಯ ಸಂಗ್ರಹವಾಗಿಯೂ ಪರಿಣಮಿಸಿತ್ತು. ಚುನಾವಣೆಯಲ್ಲಿ ಸುನೇತ್ರಾ ಪವಾರ್ ಸೋಲನ್ನಪ್ಪಿದರು. ಸುಪ್ರಿಯಾ ಸುಳೆ 7,32,312 ಮತಗಳನ್ನು ಪಡೆದರೆ, ಸುನೇತ್ರಾ ಪವಾರ್ 5,73,979 ಮತಗಳನ್ನು ಗಳಿಸಿದರು. ಮತಗಳ ಅಂತರ ನಿರ್ಣಾಯಕವಾಗಿತ್ತು.

ಲೋಕಸಭಾ ಚುನಾವಣೆಯಲ್ಲಿ ಸೋತರೂ, ಸುನೇತ್ರಾ ಪವಾರ್ ರಾಜಕೀಯದಿಂದ ಹಿಂದೆ ಸರಿಯಲಿಲ್ಲ. ಕೆಲವೇ ವಾರಗಳೊಳಗೆ ಅವರು ಮಹಾರಾಷ್ಟ್ರದಿಂದ ಅವಿರೋಧವಾಗಿ ರಾಜ್ಯಸಭಾ ಸಂಸದೆಯಾಗಿ ಆಯ್ಕೆಯಾದರು. ಈ ನಡೆ ಅವರಿಗೆ ರಾಷ್ಟ್ರ ರಾಜಕೀಯದಲ್ಲಿ ಗುರುತು ಮತ್ತು ಔಪಚಾರಿಕ ಅಧಿಕಾರವನ್ನು ನೀಡಿತು.

2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವೇಳೆ ಅವರು ಸಲ್ಲಿಸಿದ ಅಫಿಡವಿಟ್ ಪ್ರಕಾರ, ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ಆಸ್ತಿ ವಿವರಗಳ ಪ್ರಕಾರ, ಅವರ ಒಟ್ಟು ಆಸ್ತಿ ಮೌಲ್ಯ ರೂ.127.6 ಕೋಟಿ. ರೂ.16.9 ಕೋಟಿ ಲಾಯಬಿಲಿಟಿ ಇದ್ದು, ಒಟ್ಟು ಆದಾಯ ರೂ.5.1 ಕೋಟಿ. ರಾಜ್ಯಸಭಾ ಸಂಸದೆಯಾಗಿ ಅವರ ಹಾಜರಾತಿ ಶೇ.69ರಷ್ಟಿದೆ ಎಂದು ಪಿಆರ್‌ಎಸ್ ಇಂಡಿಯಾ ಅಂಕಿಅಂಶಗಳು ಸೂಚಿಸುತ್ತವೆ.

ಬಹುಮುಖ ಪ್ರತಿಭೆ

ಸುನೇತ್ರಾ ಪವಾರ್ ಅವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಕಾಮರ್ಸ್ (ಬಿ.ಕಾಂ) ಪದವಿ ಪಡೆದಿದ್ದಾರೆ. ರಾಜಕೀಯದ ಜೊತೆಗೆ ಅವರು ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಮಹಾರಾಷ್ಟ್ರದ ಗ್ರಾಮೀಣ ಉದ್ಯೋಗಕ್ಕೆ ಮಹತ್ವದ ಪಾತ್ರ ವಹಿಸುವ ಬಾರಾಮತಿ ಜವಳಿ ಕಂಪೆನಿಯ ಅಧ್ಯಕ್ಷೆಯಾಗಿರುವ ಇವರು, ಸಾವಯವ ಕೃಷಿ, ಸುಸ್ಥಿರತೆ ಮತ್ತು ಪರಿಸರ–ಗ್ರಾಮಗಳ ಮೇಲೆ ಕೇಂದ್ರೀಕರಿಸುವ ಭಾರತದ ಪರಿಸರ ವೇದಿಕೆಯನ್ನು ಸ್ಥಾಪಿಸಿದ್ದಾರೆ. ಪರಿಸರ ಸಂರಕ್ಷಣೆಗೆ ಅವರು ಮಾಡಿದ ಕಾರ್ಯಗಳು ರಾಜ್ಯದೊಳಗೆ ಮನ್ನಣೆಯನ್ನು ಗಳಿಸಿವೆ.

ಶರದ್ ಪವಾರ್ ಸ್ಥಾಪಿಸಿದ ಶಿಕ್ಷಣ ಟ್ರಸ್ಟ್ ವಿದ್ಯಾ ಪ್ರತಿಷ್ಠಾನದ ಟ್ರಸ್ಟಿಯಾಗಿಯೂ ಸುನೇತ್ರಾ ಪವಾರ್ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆ ಹತ್ತಾರು ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯೆಯಾಗಿಯೂ ಅವರು ವರ್ಷಗಳಿಂದ ಉನ್ನತ ಶಿಕ್ಷಣ ನೀತಿಯಲ್ಲಿ ತಮ್ಮ ಪಾತ್ರ ವಹಿಸಿದ್ದಾರೆ.

ಅಜಿತ್ ಪವಾರ್ ಕುಟುಂಬ

ಅಜಿತ್ ಪವಾರ್–ಸುನೇತ್ರಾ ದಂಪತಿಗೆ ಇಬ್ಬರು ಪುತ್ರರು – ಪಾರ್ಥ್ ಪವಾರ್ ಮತ್ತು ಜಯ್ ಪವಾರ್.

ಹಿರಿಯ ಪುತ್ರ ಪಾರ್ಥ್ ಪವಾರ್ 2019ರಲ್ಲಿ ಮಾವಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಚುನಾವಣಾ ರಾಜಕೀಯಕ್ಕೆ ಕಾಲಿಟ್ಟರು. ಪವಾರ್ ಕುಟುಂಬದ ದೀರ್ಘಕಾಲದ ರಾಜಕೀಯ ಪ್ರಾಬಲ್ಯ ಹಿನ್ನೆಲೆಯಲ್ಲಿ ಅವರ ಪ್ರವೇಶ ಗಮನ ಸೆಳೆದಿತ್ತು. ಆದರೆ ಅವರು ಚುನಾವಣೆಯಲ್ಲಿ ಭಾರೀ ಅಂತರದಿಂದ ಸೋಲನ್ನಪ್ಪಿದರು. ನಂತರ ಪಾರ್ಥ್ ಪವಾರ್ ಸಾರ್ವಜನಿಕವಾಗಿ ಕಡಿಮೆ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಯಾವುದೇ ಚುನಾಯಿತ ಹುದ್ದೆ ಅಥವಾ ಪಕ್ಷದ ಔಪಚಾರಿಕ ಪಾತ್ರ ಹೊಂದಿಲ್ಲ.

ಕಿರಿಯ ಪುತ್ರ ಜಯ್ ಪವಾರ್ ಚುನಾವಣಾ ರಾಜಕೀಯದಿಂದ ದೂರವಿದ್ದು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಇದುವರೆಗೂ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಅಥವಾ ಔಪಚಾರಿಕವಾಗಿ ರಾಜಕೀಯ ಜೀವನ ಪ್ರವೇಶಿಸಿಲ್ಲ. ಆದರೆ ಪ್ರಚಾರಗಳು ಮತ್ತು ಪ್ರಮುಖ ಸಾರ್ವಜನಿಕ ಕಾರ್ಯಕ್ರಮಗಳ ವೇಳೆ ಕುಟುಂಬ ಸದಸ್ಯರಿಗೆ ಬೆಂಬಲವಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಜಯ್ ಪವಾರ್ ಬಹ್ರೇನ್‌ನಲ್ಲಿ ರುತುಜಾ ಪಾಟೀಲ್ ಅವರನ್ನು ವಿವಾಹವಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News