ದೊಡ್ಡ ವಿಮಾನಗಳಿಗಿಂತ ಸಣ್ಣ ವಿಮಾನಗಳೇ ಹೆಚ್ಚು ಅಪಘಾತಕ್ಕೀಡಾಗಲು ಕಾರಣವೇನು?
ಸಾಂದರ್ಭಿಕ ಚಿತ್ರ | Photo Credit : freepik
ಜನವರಿ 28ರಂದು ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐವರು ಸಾವಿಗೀಡಾಗಿದ್ದಾರೆ. ಅಜಿತ್ ಪವಾರ್ ಮತ್ತು ಇತರ ನಾಲ್ವರು Bombardier Learjet 45 ಬ್ಯುಸಿನೆಸ್ ಜೆಟ್ ನಲ್ಲಿ ಪ್ರಯಾಣಿಸುತ್ತಿದ್ದು, ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಅಪಘಾತ ಸಂಭವಿಸಿದೆ. ಈ ವಿಮಾನ ಪತನವು ವಾಣಿಜ್ಯೇತರ ಸಣ್ಣ ವಿಮಾನಗಳ ಸುರಕ್ಷತೆಯ ಕುರಿತು ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಸಿಸಿಟಿವಿ ದೃಶ್ಯಾವಳಿಗಳು ವಿಮಾನ ಸ್ಫೋಟಗೊಳ್ಳುವುದನ್ನು ತೋರಿಸಿದ್ದು ಢಿಕ್ಕಿಯ ಸಮಯದಲ್ಲಿ ಪ್ರದೇಶದಾದ್ಯಂತ ವಿಮಾನದ ಅವಶೇಷಗಳು ಹರಡಿಕೊಂಡಿವೆ. ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನಿಖೆಯನ್ನು ಪ್ರಾರಂಭಿಸಿದೆ.
ಅಜಿತ್ ಪವಾರ್ ಪ್ರಯಾಣಿಸುತ್ತಿದ್ದದ್ದು ವಿಎಸ್ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿದ್ದ ಲಿಯರ್‌ಜೆಟ್ 45 ಅವಳಿ-ಎಂಜಿನ್ ಲೈಟ್ ಬ್ಯುಸಿನೆಸ್ ಜೆಟ್ ನಲ್ಲಿ. ಇದು ಸಣ್ಣ ವಿಮಾನವಾಗಿದ್ದು ಈ ರೀತಿಯ ಸಣ್ಣ ವಿಮಾನಗಳು ಹೆಚ್ಚಾಗಿ ಅಪಘಾತಕ್ಕೊಳಗಾಗುತ್ತವೆ ಎಂದು ತೋರಿಸುತ್ತಿದೆ ಜಾಗತಿಕ ವಾಯುಯಾನ ಡೇಟಾ.
ಸಣ್ಣ ವಿಮಾನಗಳು ಸಾಮಾನ್ಯ ವಾಯುಯಾನದ (GA) ಭಾಗವಾಗಿದೆ. ಇವು ಮೂಲತಃ ನಾಗರಿಕ ವಿಮಾನಗಳಾಗಿದ್ದು ಅವು ನಿಗದಿತ ವಾಣಿಜ್ಯ ವಿಮಾನಯಾನ ಸೇವೆ ಅಥವಾ ಮಿಲಿಟರಿ ಸ್ವರೂಪವನ್ನು ಹೊಂದಿರುವುದಿಲ್ಲ. ಅವು ಖಾಸಗಿಯಲ್ಲದ ಜೆಟ್‌ಗಳು, ಚಾರ್ಟರ್ಡ್ ವಿಮಾನಗಳು ಮತ್ತು ಜೆಟ್-ಎಂಜಿನ್ ಅಲ್ಲದ ಟರ್ಬೊಪ್ರೊಪ್‌ಗಳನ್ನು ಒಳಗೊಂಡಂತೆ ಏಕ ಎಂಜಿನ್ ವಿಮಾನಗಳನ್ನು ಸಹ ಒಳಗೊಂಡಿವೆ. ಈ ರೀತಿಯ ಸಣ್ಣ ವಿಮಾನಗಳು ದೊಡ್ಡ ವಿಮಾನಗಳಾದ ವಾಣಿಜ್ಯ ವಿಮಾನಗಳಿಗಿಂತ ಗಮನಾರ್ಹವಾಗಿ ಹೆಚ್ಚಿನ ಅಪಘಾತ ದರಗಳನ್ನು ದಾಖಲಿಸುತ್ತವೆ.
ವಾಯುಯಾನ ಶಕ್ತಿ ಕೇಂದ್ರವಾದ ಅಮೆರಿಕದಲ್ಲಿ ಸಾಮಾನ್ಯ ವಿಮಾನಯಾನವು 2019 ರಲ್ಲಿ 1,220 ಅಪಘಾತಗಳನ್ನು ದಾಖಲಿಸಿದೆ, ಅದರಲ್ಲಿ 233 ಗಂಭೀರ ಅಪಘಾತಗಳು. ಈ ಬಗ್ಗೆ ಡೇಟಾ ಪರಿಶೀಲಿಸಿದರೆ ವಾಣಿಜ್ಯ ವಿಮಾನಯಾನವು ಆ ವರ್ಷ 40 ಅಪಘಾತಗಳನ್ನು ವರದಿ ಮಾಡಿದೆ. ಅದರಲ್ಲಿ ಸಾವಿಗೀಡಾದವರು ಇಬ್ಬರು ಎಂದು ವಾಷಿಂಗ್ಟನ್ ಡಿಸಿ ಮೂಲದ ಮಾಧ್ಯಮ WUSA (ಚಾನೆಲ್ 9) ತಿಳಿಸಿದೆ.
ಅಮೆರಿಕನ್ ಏಜೆನ್ಸಿ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ದತ್ತಾಂಶವು ಅಪಾಯದಲ್ಲಿನ ತೀವ್ರ ಅಸಮಾನತೆಯನ್ನು ತೋರಿಸುತ್ತದೆ. ವಾಣಿಜ್ಯ ವಿಮಾನಗಳು 2019 ರಲ್ಲಿ 100,000 ಹಾರಾಟದ ಗಂಟೆಗೆ ಕೇವಲ 0.2 ಅಪಘಾತಗಳನ್ನು ದಾಖಲಿಸಿದರೆ, ಖಾಸಗಿ ವಿಮಾನಗಳು 100,000 ಗಂಟೆಗೆ 5.6 ಅಪಘಾತದ ಪ್ರಮಾಣವನ್ನು ದಾಖಲಿಸಿವೆ. ಇದು 25 ಪಟ್ಟು ಹೆಚ್ಚು.
ಸಣ್ಣ ಖಾಸಗಿ ವಿಮಾನಗಳು ಪ್ರಮುಖ ವಾಣಿಜ್ಯ ವಿಮಾನಗಳಿಗಿಂತ 32.9 ಪಟ್ಟು ಹೆಚ್ಚು ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ಹೇಳಿದ್ದಾರೆ. ಅದೇ ವೇಳೆ ಚಾರ್ಟರ್ ವಿಮಾನಗಳು 9.4 ಪಟ್ಟು ಅಪಾಯಕಾರಿ ಎಂದು ಯುಎಸ್ ಮೂಲದ ಕಾನೂನು ಸಂಸ್ಥೆಯಾದ SD ಲಿಟಿಗೇಷನ್ ಗಮನಿಸಿದೆ. ಇದಲ್ಲದೆ, ವಿಮಾನಯಾನ ವ್ಯಾಪಾರ ಸಂಘವಾದ ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಘ (IATA), 2024 ರಲ್ಲಿ ವಾಣಿಜ್ಯ ಜೆಟ್ ಅಪಘಾತ ದರಗಳು ಪ್ರತಿ ಮಿಲಿಯನ್ ಟೇಕಾಫ್ ಗಳಿಗೆ 0.23 ಗಂಭೀರ ಅಪಘಾತಗಳು ಸಂಭವಿಸಿವೆ ಎಂದು ವರದಿ ಮಾಡಿದೆ. ಬ್ಯುಸಿನೆಸ್ ಮತ್ತು ಖಾಸಗಿ ಜೆಟ್‌ಗಳು 2024 ರಲ್ಲಿ ಅಪಘಾತ ದರ ಸುಮಾರು 2.56 ಎಂದು 2025 ರ ASAP ಸುರಕ್ಷತಾ ಅವಲೋಕನ ಮತ್ತು ವಿಶ್ಲೇಷಣೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಣ್ಣ ವಿಮಾನಗಳಲ್ಲೇ ಅಪಘಾತ ಜಾಸ್ತಿ ಯಾಕೆ?
ವಿಮಾನವು ಚಿಕ್ಕದಾಗಿದ್ದು, ದುರ್ಬಲವಾಗಿರುವುದರಿಂದ ಮಾತ್ರವಲ್ಲ, ಕಾರ್ಯಾಚರಣೆಯಲ್ಲಿನ ಸಮಸ್ಯೆಗಳಿಂದಲೂ ಅಪಘಾತಕ್ಕೊಳಗಾಗುತ್ತದೆ. ಸಾಮಾನ್ಯವಾಗಿ, ದೂರದ ಪ್ರದೇಶಗಳಿಗೆ ನಿಗದಿತ ಮಾರ್ಗಗಳಲ್ಲಿ ಚಲಿಸುವ ಸಣ್ಣ ವಿಮಾನಗಳಿಗೆ ಸಡಿಲವಾದ ನಿಯಂತ್ರಕ ಮೇಲ್ವಿಚಾರಣೆ ಮತ್ತು ಪೈಲಟ್ ಗಳ ಅನುಭವವೂ ಪರಿಣಾಮ ಬೀರುತ್ತದೆ. ಆದಾಗ್ಯೂ, ಅಜಿತ್ ಪವಾರ್ ಅವರ ವಿಮಾನದ ವಿಷಯದಲ್ಲಿ ಇದು ಭಿನ್ನವಾಗಿದೆ, ಈ ವಿಮಾನ ವಿವಿಐಪಿಗಳನ್ನು ಹೊತ್ತುಕೊಂಡು ಪ್ರಮುಖ ವಿಮಾನ ನಿಲ್ದಾಣವಾದ ಮುಂಬೈನಿಂದ ಹಾರುತ್ತಿತ್ತು.
ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಥವಾ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವಷ್ಟು ವ್ಯವಸ್ಥೆಗಳು ಮತ್ತು ಮೂಲಸೌಕರ್ಯಗಳನ್ನು ಹೊಂದಿರದ ಸಣ್ಣ ವಿಮಾನ ನಿಲ್ದಾಣಗಳಲ್ಲಿ ಸಣ್ಣ ವಿಮಾನಗಳು ಕಾರ್ಯಾಚರಣೆ ಮಾಡುತ್ತದೆ.
ಇಲ್ಲಿ ಹವಾಮಾನ ಮತ್ತು ಕಡಿಮೆ ಸುರಕ್ಷತಾ ಕ್ರಮಗಳೂ ಅಪಘಾತಕ್ಕೆ ಕಾರಣವಾಗುತ್ತವೆ. ಅಜಿತ್ ಪವಾರ್ ಅವರ ವಿಮಾನ ಅಪಘಾತಕ್ಕೀಡಾದ ಬಾರಾಮತಿ ವಿಮಾನ ನಿಲ್ದಾಣ ಸಣ್ಣ ವಿಮಾನ ನಿಲ್ದಾಣವಾಗಿದೆ.
ಬಾರಾಮತಿ ವಾಯುನೆಲೆಯು ಸರಿಸುಮಾರು 2,000 ಅಡಿ ಎತ್ತರದಲ್ಲಿದೆ . ಅದು ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ILS) ಅನ್ನು ಹೊಂದಿಲ್ಲ. ಹೀಗಾಗಿ, ಪೈಲಟ್‌ಗಳು ಲ್ಯಾಂಡಿಂಗ್‌ಗಾಗಿ ಹಸ್ತಚಾಲಿತ ಮತ್ತು ದೃಶ್ಯ ತಂತ್ರಗಳನ್ನು ಅವಲಂಬಿಸಬೇಕಾಗುತ್ತದೆ.
ಪೈಲಟ್‌ಗಳ ಅನುಭವ ಕೂಡಾ ಪ್ರಧಾನ ಅಂಶವಾಗಿದೆ. ಸಣ್ಣ ವಿಮಾನ ಹಾರಾಟ ಮಾಡುವ ಪೈಲಟ್ ಗಳು ದೊಡ್ಡ ವಿಮಾನ ಹಾರಾಟ ಮಾಡುವ ಪೈಲಟ್‌ಗಳಿಗಿಂತ ಕಡಿಮೆ ಹಾರಾಟದ ಸಮಯವನ್ನು ದಾಖಲಿಸುತ್ತಾರೆ. ಸಣ್ಣ ವಿಮಾನಗಳ ಪೈಲಟ್ ಗಳ ಅನುಭವವೂ ಕಡಿಮೆ ಇರುತ್ತದೆ. ಅಧ್ಯಯನ ಮತ್ತು ತಜ್ಞರ ಪ್ರಕಾರ ವಿಶೇಷವಾಗಿ ಸಣ್ಣ, ಅನಿಯಂತ್ರಿತ ವಿಮಾನ ನಿಲ್ದಾಣಗಳಲ್ಲಿ ಇದು ನಿಯಂತ್ರಣ ನಷ್ಟದ ಘಟನೆಗಳು, ಸ್ಥಗಿತಗಳು ಮತ್ತು ಇಂಧನ ದುರುಪಯೋಗದ ಅಪಾಯಗಳನ್ನು ಹೆಚ್ಚಿಸುತ್ತದೆ. ಆದರೆ ಆರಂಭಿಕ ವರದಿಗಳ ಪ್ರಕಾರ, ಅಜಿತ್ ಪವಾರ್ ಅವರ ವಿಮಾನವನ್ನು ಹಾರಿಸಿದ ಇಬ್ಬರೂ ಪೈಲಟ್‌ಗಳು ಅನುಭವಿಗಳಾಗಿದ್ದರು.
ಸಣ್ಣ ವಿಮಾನ ನಿಲ್ದಾಣಗಳು ಸಣ್ಣ ವಿಮಾನಗಳ ಅಪಾಯವನ್ನು ಹೆಚ್ಚಿಸುತ್ತವೆಯೇ?
ಎಲ್ಲಾ ಸಿಂಗಲ್-ಎಂಜಿನ್ ವಿಮಾನಗಳು ಸಾಮಾನ್ಯವಾಗಿ ಸಣ್ಣ ವಿಮಾನಗಳಾಗಿವೆ. ಸಿಂಗಲ್-ಎಂಜಿನ್ ವಿಮಾನಗಳಲ್ಲಿನ ಎಂಜಿನ್ ವೈಫಲ್ಯವು ಬಹು-ಎಂಜಿನ್ ಜೆಟ್‌ಗಳಿಗಿಂತ ಹೆಚ್ಚು ಅಪಾಯಕಾರಿ. ವಿಶ್ಲೇಷಕರು ಸಾಮಾನ್ಯವಾಗಿ ಸಣ್ಣ-ವಿಮಾನ ಸುರಕ್ಷತೆಯನ್ನು ರಸ್ತೆ ಚಾಲನೆಗೆ ಹೋಲಿಸುತ್ತಾರೆ. ದೊಡ್ಡ ವಾಣಿಜ್ಯ ವಿಮಾನಯಾನ ಸಂಸ್ಥೆಯು ವೃತ್ತಿಪರ ಬಸ್ ಸೇವೆಯಂತೆ ಸುರಕ್ಷಿತವಾಗಿದ್ದರೂ ಸಣ್ಣ ಖಾಸಗಿ ವಿಮಾನದಲ್ಲಿ ಹಾರಾಟ ನಡೆಸುವುದು ಹೆದ್ದಾರಿಯಲ್ಲಿ ನಿಮ್ಮ ಸ್ವಂತ ಕಾರನ್ನು ಚಲಾಯಿಸುವಷ್ಟೇ ಅಪಾಯಕಾರಿ ಅಂತಾರೆ.
ಆದಾಗ್ಯೂ, ಅಜಿತ್ ಪವಾರ್ ಅವರ ವಿಮಾನವು ಡಬಲ್-ಎಂಜಿನ್ ಜೆಟ್ ವಿಮಾನವಾಗಿತ್ತು.
ಇದಲ್ಲದೆ, ಮಾನವ ದೋಷ ಮಾತ್ರ ಸುಮಾರು 75% ಸಾಮಾನ್ಯ ವಿಮಾನ ಅಪಘಾತಗಳಿಗೆ ಕಾರಣವಾಗಿದೆ ಎಂದು ಯುಎಸ್‌ನ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಮತ್ತು ಎನ್‌ಟಿಎಸ್‌ಬಿ ಅಂಕಿಅಂಶಗಳು ಹೇಳುತ್ತವೆ.
ಮತ್ತೊಂದೆಡೆ, ವಾಣಿಜ್ಯ ವಿಮಾನಗಳು ಮತ್ತು ನಾಗರಿಕ ವಿಮಾನಗಳು ಕಟ್ಟುನಿಟ್ಟಾದ ನಿಯಂತ್ರಕ ಚೌಕಟ್ಟಿನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಇದು ಡ್ಯುಯಲ್ ಪೈಲಟ್‌ಗಳು, ಸುಧಾರಿತ ಹವಾಮಾನ ರಾಡಾರ್, ರೆಜಿಮೆಂಟೆಡ್ ನಿರ್ವಹಣಾ ವೇಳಾಪಟ್ಟಿಗಳು ಮತ್ತು ಸಂಪ್ರದಾಯವಾದಿ ಗೋ/ನೋ-ಗೋ ನಿರ್ಧಾರಗಳನ್ನು ಕಡ್ಡಾಯಗೊಳಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಹೆಚ್ಚಿನ ಸಾಮಾನ್ಯ ವಿಮಾನವು ಏಕ-ಪೈಲಟ್ ಕಾರ್ಯಾಚರಣೆಗಳು ಮತ್ತು ಕನಿಷ್ಠ ಹವಾಮಾನ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತದೆ.
ಪವಾರ್ ಪ್ರಯಾಣಿಸುತ್ತಿದ್ದ ಲಿಯರ್‌ಜೆಟ್‌ನಂತಹ ವ್ಯಾಪಾರ ಜೆಟ್‌ಗಳು, ರಿಫೈನ್ಡ್ ಪಿಸ್ಟನ್-ಎಂಜಿನ್ ವಿಮಾನಗಳಿಗಿಂತ ಸುರಕ್ಷಿತವಾಗಿದ್ದು, ಉತ್ತಮ ಏವಿಯಾನಿಕ್ಸ್ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ. ಇದರಲ್ಲಿ ಇಬ್ಬರು ಪೈಲಟ್‌ಗಳೂ ಇದ್ದರು.
ಬಾರಾಮತಿಯಲ್ಲಿರುವ ಟೇಬಲ್‌ಟಾಪ್ ರನ್‌ವೇ ಬಗ್ಗೆ ಪರಿಚಿತವಾಗಿರುವ ಪೈಲಟ್ ಒಬ್ಬರು ಅಪಘಾತದ ಹಿಂದಿನ ಸಂಭಾವ್ಯ ಕಾರಣವೆಂದರೆ "ಶಾರ್ಟ್ ಫೈನಲ್ಸ್ ಹಂತ" ಎಂದು ಕರೆಯಲ್ಪಡುವ ಅಸ್ಥಿರವಾದ ಅಂತಿಮ ವಿಧಾನ ಎಂದು ಹೇಳಿದ್ದಾರೆ. ವಿಮಾನ ನಿಲ್ದಾಣದ ಎರಡೂ ಬದಿ ಅಥವಾ ಒಂದು ಬದಿಯಲ್ಲಿ ಕಣಿವೆ ಇದ್ದು, ಎತ್ತರದ ಪ್ರದೇಶದಲ್ಲಿ ರನ್‌ವೇ ಇದ್ದರೆ ಅದನ್ನು ಟೇಬಲ್ ಟಾಪ್ ರನ್‌ವೇ ಎಂದು ಕರೆಯಲಾಗುತ್ತದೆ. ಇದು ಲ್ಯಾಂಡಿಂಗ್ ಅನ್ನು ಇನ್ನಷ್ಟು ಸವಾಲಿನದ್ದಾಗಿ ಮಾಡುತ್ತದೆ.
ಜಾಗತಿಕವಾಗಿ ವಾಣಿಜ್ಯ ಹಾರಾಟವು ಸುರಕ್ಷಿತ ಸಾರಿಗೆ ವಿಧಾನಗಳಲ್ಲಿ ಒಂದಾಗಿದ್ದರೂ, ಅಜಿತ್ ಪವಾರ್ ಅವರ ವಿಮಾನವನ್ನು ಒಳಗೊಂಡ ಅಪಘಾತವು ಸಣ್ಣ ಮತ್ತು ಚಾರ್ಟರ್ಡ್ ವಿಮಾನಗಳು ಹೆಚ್ಚಿನ ಅಪಾಯಗಳನ್ನು ಹೊಂದುವುದನ್ನು ತೋರಿಸುತ್ತದೆ.
ಸಣ್ಣ ವಿಮಾನ ಅಪಘಾತಗಳು
ಜನವರಿ 10ರಂದು ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನವೊಂದು ರೂರ್‌ಕೇಲಾ ಬಳಿ ಅಪಘಾತಕ್ಕೀಡಾಗಿತ್ತು. ಇದರಲ್ಲಿ ಆರು ಮಂದಿ ಗಾಯಗೊಂಡಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಭುವನೇಶ್ವರದಿಂದ ರೂರ್‌ಕೇಲಾಗೆ ಪ್ರಯಾಣಿಕರನ್ನು ಕರೆದ್ದೊಯ್ಯುತ್ತಿದ್ದ ಒಂಬತ್ತು ಆಸನಗಳ ಇಂಡಿಯಾ ಒನ್ ವಿಮಾನಯಾನ ಸಂಸ್ಥೆಗೆ ಸೇರಿದ ಒನ್ ಎ–1 ವಿಮಾನ ದಾರಿ ಮಧ್ಯೆ ಅಪಘಾತಕ್ಕೀಡಾಗಿತ್ತು. ಈ ವೇಳೆ ವಿಮಾನದಲ್ಲಿ ನಾಲ್ವರು ಪ್ರಯಾಣಿಕರು, ಇಬ್ಬರು ಸಿಬ್ಬಂದಿ ಇದ್ದರು. ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕೂಡಲೇ ಪೈಲಟ್ ವಿಮಾನವನ್ನು ಜನವಸತಿ ಇಲ್ಲದ ಬಯಲು ಪ್ರದೇಶದಲ್ಲಿ ಇಳಿಸಿದ್ದರು. ಇದರಿಂದಾಗಿ ಭಾರೀ ಅನಾಹುತದಿಂದ ವಿಮಾನ ಪಾರಾಗಿತ್ತು.
2003ರಲ್ಲಿ VSR Venturesನ Learjet 45 ವಿಮಾನ ಮುಂಬೈನಲ್ಲಿ ಭಾರೀ ಮಳೆಯ ಸಮಯದಲ್ಲಿ ಗೋಚರತೆ ಕಡಿಮೆ ಆದ ಕಾರಣ ಮುಂಬೈ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ ವಿಮಾನ ಎರಡು ಭಾಗಗಳಾಗಿ ಮುರಿದಿದ್ದು ವಿಮಾನದಲ್ಲಿದ್ದ ಎಂಟು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದರು .
ಈಶಾನ್ಯ ಕೊಲಂಬಿಯಾದ ನಾರ್ಟೆ ಡಿ ಸ್ಯಾಂಟ್ಯಾಂಡರ್ ಪ್ರಾಂತ್ಯದ ಗ್ರಾಮೀಣ ಪ್ರದೇಶದಲ್ಲಿ ಬುಧವಾರ (ಜನವರಿ 28, 2026) ಸಣ್ಣ ವಿಮಾನವೊಂದು ಪತನಗೊಂಡು ಸಂಸದ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 15 ಜನರು ಸಾವಿಗೀಡಾಗಿದ್ದಾರೆ. ಸರ್ಕಾರಿ ವಿಮಾನಯಾನ ಸಂಸ್ಥೆ ಸಟೇನಾಗೆ ಸೇರಿದ ಈ ವಿಮಾನ ಕುಕುಟಾದಿಂದ ಟೇಕಾಫ್ ಆಗಿತ್ತು. ಒಕಾನೊ ಬಳಿ ಇಳಿಯಬೇಕಿದ್ದ ವಿಮಾನ ಲ್ಯಾಂಡಿಂಗ್‌ಗಿಂತ ಮೊದಲು ಸಂಪರ್ಕ ಕಡಿದುಕೊಂಡು ಅಪಘಾತಕ್ಕೀಡಾಗಿದೆ.