ಭಾರತದ ದುರ್ಬಲ ಮುಂಗಾರು, ʼEl Ninoʼ ಮತ್ತು ಮುಂದಿರುವ ಅಪಾಯಗಳು...

ʼಎಲ್ ನಿನೊʼ ಎಂದರೇನು? ಅದು ಭಾರತದ ಮುಂಗಾರಿನ ಮೇಲೆ ಏಕೆ ಪರಿಣಾಮ ಬೀರುತ್ತದೆ?

Update: 2026-07-18 20:59 IST

Photo Credit: PTI 

ಆರಂಭದಲ್ಲಿಯೇ ಮಂದಗತಿಯಲ್ಲಿದ್ದ ಭಾರತದ ನೈಋತ್ಯ ಮುಂಗಾರು ಮಾರುತಗಳು, ಈಗ ಅತಿ ದುರ್ಬಲ ಹಂತವನ್ನು ತಲುಪಿವೆ. ಇದು ಕೃಷಿ, ನೀರಿನ ಲಭ್ಯತೆ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯ ಬಗ್ಗೆ ಆತಂಕ ಮೂಡಿಸಿದೆ. ಜೂನ್ ತಿಂಗಳಿನಲ್ಲಿ ಮಳೆಯ ಕೊರತೆಯು ಸುಮಾರು ಶೇಕಡಾ 40 ರಷ್ಟಾಗಿತ್ತು. ಇದು ಹವಾಮಾನ ದಾಖಲೆ ಇತಿಹಾಸದಲ್ಲೇ ಅತ್ಯಂತ ಒಣ ಜೂನ್ ತಿಂಗಳುಗಳಲ್ಲಿ ಒಂದಾಗಿದೆ. ಜುಲೈ ತಿಂಗಳಿನಲ್ಲೂ ದೇಶದ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

ಇದೇ ಸಮಯದಲ್ಲಿ, ಭಾರತದ ಮುಂಗಾರು ಮಳೆಯನ್ನು ಕುಂಠಿತಗೊಳಿಸುವ 'ಎಲ್ ನಿನೊ' ಹವಾಮಾನ ವಿದ್ಯಮಾನವು ಈಗ ಸೃಷ್ಟಿಯಾಗಿದೆ ಎಂದು ವಿಶ್ವದ ವಿವಿಧ ಹವಾಮಾನ ಸಂಸ್ಥೆಗಳು ಎಚ್ಚರಿಸಿವೆ. ಇದು 2026 ರ ಕೊನೆಯಲ್ಲಿ ಮತ್ತು 2027 ರ ಆರಂಭದ ಅವಧಿಯಲ್ಲಿ ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ. ಈ ಬಾರಿಯ ಎಲ್ ನಿನೊ ಇತಿಹಾಸದಲ್ಲೇ ಅತ್ಯಂತ ಪ್ರಬಲವಾಗುವ ಸಾಧ್ಯತೆಯಿದೆ ಎಂದು ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲ ಆಡಳಿತ (NOAA) ತಿಳಿಸಿದೆ. ಇತ್ತ ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರವು (INCOIS), 2027 ರ ಮಾರ್ಚ್ ವರೆಗೆ ಎಲ್ ನಿನೊ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಶೇಕಡಾ 85 ರಿಂದ 98 ರಷ್ಟಿದೆ ಎಂದು ಅಂದಾಜಿಸಿದೆ.

ದುರ್ಬಲ ಮುಂಗಾರು ಈಗಾಗಲೇ ಖಾರಿಫ್ ಬೆಳೆಗಳ ಬಿತ್ತನೆಯ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ. ಕೇಂದ್ರ ಸರ್ಕಾರವು ದೇಶದ 315 ಜಿಲ್ಲೆಗಳನ್ನು ಪರಿಸ್ಥಿತಿಗೆ ತುತ್ತಾಗಬಹುದಾದ ಜಿಲ್ಲೆಗಳೆಂದು ಗುರುತಿಸಿದೆ. ಇವುಗಳಲ್ಲಿ 111 ಜಿಲ್ಲೆಗಳು ಕಳಪೆ ನೀರಾವರಿ ಸೌಲಭ್ಯವನ್ನು ಹೊಂದಿವೆ. ಮಳೆಯ ಕೊರತೆ ಹೀಗೆಯೇ ಮುಂದುವರಿದರೆ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಬಹುದು, ಆರ್ಥಿಕ ಬೆಳವಣಿಗೆ ಮಂದಗತಿಯಾಗಬಹುದು ಮತ್ತು ಗ್ರಾಮೀಣ ಭಾಗದ ಆದಾಯದ ಮೇಲೆ ಹೊಡೆತ ಬೀಳಬಹುದು ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.

ಎಲ್ ನಿನೊ ಎಂದರೇನು? ಅದು ಭಾರತದ ಮುಂಗಾರಿನ ಮೇಲೆ ಏಕೆ ಪರಿಣಾಮ ಬೀರುತ್ತದೆ?

ಎಲ್ ನಿನೊ ಎಂಬುದು ನೈಸರ್ಗಿಕವಾಗಿ ಸಂಭವಿಸುವ ಒಂದು ಹವಾಮಾನ ವೈಪರೀತ್ಯವಾಗಿದೆ. ಇದರಲ್ಲಿ ಪೆಸಿಫಿಕ್ ಮಹಾಸಾಗರದ ಮಧ್ಯ ಮತ್ತು ಪೂರ್ವ ಸಮಭಾಜಕ ಪ್ರದೇಶದ ಮೇಲ್ಮೈ ನೀರಿನ ತಾಪಮಾನವು ವಾಡಿಕೆಗಿಂತ ಹೆಚ್ಚಾಗಿ ಬಿಸಿಯಾಗುತ್ತದೆ. ಇದು ಪ್ರತಿ ಎರಡರಿಂದ ಏಳು ವರ್ಷಗಳಿಗೊಮ್ಮೆ ಸಂಭವಿಸುತ್ತದೆ ಮತ್ತು ಸಾಮಾನ್ಯವಾಗಿ ಒಂಬತ್ತರಿಂದ 12 ತಿಂಗಳುಗಳ ಕಾಲ ಇರುತ್ತದೆ.

ಈ ತಾಪಮಾನ ಏರಿಕೆಯು ಪೆಸಿಫಿಕ್ ವಾಣಿಜ್ಯ ಮಾರುತಗಳನ್ನು (ಟ್ರೇಡ್ ವಿಂಡ್ಸ್) ದುರ್ಬಲಗೊಳಿಸುತ್ತದೆ ಮತ್ತು ಜಾಗತಿಕ ಮಟ್ಟದಲ್ಲಿ ವಾಯುಮಂಡಲದ ಚಲನೆಯನ್ನು ಬದಲಾಯಿಸುತ್ತದೆ. ಈ ವಿದ್ಯಮಾನವು ಭಾರತದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿ ಸಂಭವಿಸಿದರೂ, ಇಲ್ಲಿನ ಬದಲಾವಣೆಗಳು ಭಾರತದ ಮುಂಗಾರು ಮಳೆಯನ್ನು ನಿಯಂತ್ರಿಸುವ ಮಾರುತಗಳ ಮೇಲೆ ಪ್ರಭಾವ ಬೀರುತ್ತವೆ.

ಸಾಮಾನ್ಯವಾಗಿ, ಎಲ್ ನಿನೊ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಮಳೆಯನ್ನು ಕಡಿಮೆ ಮಾಡುತ್ತದೆ ಮತ್ತು ಅಮೆರಿಕದ ಕೆಲವು ಭಾಗಗಳಲ್ಲಿ ಅತಿಯಾದ ಮಳೆಯನ್ನು ಉಂಟುಮಾಡುತ್ತದೆ. ಭಾರತದ ಸಂದರ್ಭದಲ್ಲಿ, ಇದು ನೈಋತ್ಯ ಮುಂಗಾರು ಮಳೆ ಕುಂಠಿತಗೊಳ್ಳಲು, ದೀರ್ಘಕಾಲದ ಒಣಹವೆಗೆ ಮತ್ತು ಹೆಚ್ಚಿನ ತಾಪಮಾನಕ್ಕೆ ಕಾರಣವಾಗುತ್ತದೆ.

ಈ ವರ್ಷ ಎಲ್ ನಿನೊ ಪರಿಸ್ಥಿತಿ ಸೃಷ್ಟಿಯಾಗಿದ್ದು, ಮುಂಬರುವ ತಿಂಗಳುಗಳಲ್ಲಿ ಇದು ತೀವ್ರಗೊಳ್ಳಬಹುದು ಎಂದು ಅಮೆರಿಕದ ಎನ್‌ಒಎಎ (NOAA) ಖಚಿತಪಡಿಸಿದೆ. ಹವಾಮಾನ ವಿಜ್ಞಾನಿ ಜೀಕ್ ಹೌಸ್‌ಫಾದರ್ ಅವರ ವಿಶ್ಲೇಷಣೆಯ ಪ್ರಕಾರ, ಪ್ರಸ್ತುತ ಮುನ್ಸೂಚನೆಗಳು ನಿಜವಾದರೆ ಈ ಬಾರಿಯ ವಿದ್ಯಮಾನವು 1982-83, 1997-98 ಮತ್ತು 2015-16ರ ಪ್ರಮುಖ ಎಲ್ ನಿನೊ ಅವಧಿಗಳಿಗಿಂತಲೂ ತೀವ್ರವಾಗಿರಲಿದೆ.

ಹವಾಮಾನ ತಜ್ಞರು ಸಾಮಾನ್ಯ ಎಲ್ ನಿನೊ ಮತ್ತು "ಸೂಪರ್ ಎಲ್ ನಿನೊ" ನಡುವಿನ ವ್ಯತ್ಯಾಸವನ್ನು ಗುರುತಿಸುತ್ತಾರೆ. ಇದಕ್ಕೆ ಜಾಗತಿಕವಾಗಿ ಯಾವುದೇ ತಾಂತ್ರಿಕ ವ್ಯಾಖ್ಯಾನವಿಲ್ಲದಿದ್ದರೂ, ಪೆಸಿಫಿಕ್ ಮಹಾಸಾಗರದಲ್ಲಿ ಅತಿಯಾದ ತಾಪಮಾನ ಏರಿಕೆಯಾಗುವುದನ್ನು ಸಾಮಾನ್ಯವಾಗಿ ಹೀಗೆ ಕರೆಯಲಾಗುತ್ತದೆ. ಕಳೆದ ಬಾರಿ 1997-98 ಮತ್ತು 2015-16ರಲ್ಲಿ ಸಂಭವಿಸಿದ ಸೂಪರ್ ಎಲ್ ನಿನೊ ವಿದ್ಯಮಾನಗಳು ವಿಶ್ವದ ಹಲವು ಭಾಗಗಳಲ್ಲಿ ಹವಾಮಾನ ಮತ್ತು ಕೃಷಿ ವಲಯಕ್ಕೆ ಭಾರೀ ಹಾನಿ ಉಂಟುಮಾಡಿದ್ದವು.

ಈ ವರ್ಷ ಮುಂಗಾರು ದುರ್ಬಲಗೊಳ್ಳಲು ಕಾರಣವೇನು?

ಈ ವರ್ಷ ಮುಂಗಾರು ದುರ್ಬಲಗೊಳ್ಳಲು 'ಎಲ್ ನಿನೊ' ಪ್ರಮುಖ ಕಾರಣ ಎಂದು ಅಂದಾಜಿಸಲಾಗಿದ್ದರೂ, ಸದ್ಯದ ಪರಿಸ್ಥಿತಿಯು 'ಬ್ರೇಕ್ ಮನ್ಸೂನ್' (ಮುಂಗಾರು ಬಿಡುವು) ಹಂತಕ್ಕೆ ಸಂಬಂಧಿಸಿದೆ ಎಂದು ಹವಾಮಾನ ತಜ್ಞರು ಹೇಳುತ್ತಾರೆ.

ಮುಂಗಾರು ಬಿಡುವಿನ ಅವಧಿಯಲ್ಲಿ, ಸಾಮಾನ್ಯವಾಗಿ ಉತ್ತರ ಭಾರತದಾದ್ಯಂತ ಹರಡಿಕೊಂಡಿರುವ ಕಡಿಮೆ ಒತ್ತಡದ ಪಟ್ಟಿಯು ಉತ್ತರದ ಕಡೆಗೆ ಅಂದರೆ ಹಿಮಾಲಯದ ಪಾದದ ಬೆಟ್ಟಗಳ ಕಡೆಗೆ ಚಲಿಸುತ್ತದೆ. ಇದರಿಂದಾಗಿ ಹಿಮಾಲಯ ಪ್ರದೇಶ ಮತ್ತು ಈಶಾನ್ಯ ಭಾರತದಲ್ಲಿ ಮಳೆ ಹೆಚ್ಚಾಗುತ್ತದೆ. ಆದರೆ ದೇಶದ ಮಧ್ಯ, ಪಶ್ಚಿಮ ಮತ್ತು ದಕ್ಷಿಣದ ಭಾಗಗಳಲ್ಲಿ ಮಳೆ ಗಣನೀಯವಾಗಿ ಕಡಿಮೆಯಾಗುತ್ತದೆ.

ಮಳೆಯನ್ನು ಕುಂಠಿತಗೊಳಿಸಲು ಪ್ರಮುಖವಾಗಿ ಮೂರು ಅಂಶಗಳು ಒಟ್ಟಿಗೆ ಕಾರಣವಾಗಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅವುಗಳೆಂದರೆ

ಸೃಷ್ಟಿಯಾಗುತ್ತಿರುವ ಎಲ್ ನಿನೊ, ಮುಂಗಾರು ಮಾರುತಗಳ ಚಲನೆಯನ್ನು ದುರ್ಬಲಗೊಳಿಸುತ್ತಿದೆ.

ಪ್ರತಿಕೂಲವಾಗಿರುವ 'ಮ್ಯಾಡೆನ್-ಜೂಲಿಯನ್ ಆಸಿಲೇಶನ್' (MJO), ಇದು ಮಾರುತಗಳು ಮತ್ತು ಮೋಡಗಳ ಚಲನೆಯ ಒಂದು ವ್ಯವಸ್ಥೆಯಾಗಿದ್ದು, ಪ್ರಸ್ತುತ ಭಾರತದಲ್ಲಿ ಮಳೆಯನ್ನು ತಡೆಯುತ್ತಿದೆ.

ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಜಾಗಗಳು ಕಡಿಮೆ ಸಂಖ್ಯೆಯಲ್ಲಿ ಸೃಷ್ಟಿಯಾಗುತ್ತಿರುವುದು. ಇವು ಸಾಮಾನ್ಯವಾಗಿ ತೇವಾಂಶವನ್ನು ಭೂಭಾಗದ ಕಡೆಗೆ ಎಳೆದುಕೊಂಡು ಬಂದು ಮುಂಗಾರು ಚುರುಕಾಗಲು ಸಹಾಯ ಮಾಡುತ್ತವೆ.

ಜುಲೈ ಮಧ್ಯಭಾಗದಲ್ಲಿ ಬಂಗಾಳ ಕೊಲ್ಲಿಯಲ್ಲಿ ಈ ಹಂಗಾಮಿನ ಎರಡನೇ ಕಡಿಮೆ ಒತ್ತಡದ ಪ್ರದೇಶ ಮಾತ್ರ ನಿರ್ಮಾಣವಾಗಿದ್ದು, ಇದು ಪೂರ್ವ ಮತ್ತು ಮಧ್ಯ ಭಾರತದಲ್ಲಿ ತಾತ್ಕಾಲಿಕವಾಗಿ ಮಳೆ ಚುರುಕಾಗುವ ಭರವಸೆ ಮೂಡಿಸಿದೆ. ಇದು ಎಲ್ ನಿನೊ ಉಂಟುಮಾಡುವ ದೀರ್ಘಕಾಲದ ಪರಿಣಾಮಗಳನ್ನು ಸರಿದೂಗಿಸಲು ಸಾಕಾಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಎಲ್ ನಿನೊ ಹವಾಮಾನ ವ್ಯವಸ್ಥೆಯು ಬಲಗೊಳ್ಳುತ್ತಿದ್ದಂತೆ ಮುಂಗಾರಿನ ಮೇಲಿನ ಅದರ ಕೆಟ್ಟ ಪ್ರಭಾವವು ಹೆಚ್ಚಾಗುತ್ತಾ ಹೋಗುತ್ತದೆ.

ಇಂಡಿಯನ್ ಓಷನ್ ಡೈಪೋಲ್ ಎಲ್ ನಿನೊ ಪ್ರಭಾವವನ್ನು ಕಡಿಮೆ ಮಾಡಬಲ್ಲದೇ?

ಗಮನಿಸಬೇಕಾದ ಮತ್ತೊಂದು ಪ್ರಮುಖ ಹವಾಮಾನ ವಿದ್ಯಮಾನವೆಂದರೆ ಇಂಡಿಯನ್ ಓಷನ್ ಡೈಪೋಲ್ (IOD). ಇದು ಆಫ್ರಿಕಾದ ಸಮೀಪವಿರುವ ಪಶ್ಚಿಮ ಹಿಂದೂ ಮಹಾಸಾಗರ ಮತ್ತು ಇಂಡೋನೇಷ್ಯಾದ ಸಮೀಪವಿರುವ ಪೂರ್ವ ಹಿಂದೂ ಮಹಾಸಾಗರದ ಮೇಲ್ಮೈ ನೀರಿನ ತಾಪಮಾನದಲ್ಲಿನ ವ್ಯತ್ಯಾಸವನ್ನು ಅಳೆಯುತ್ತದೆ.

'ಪಾಸಿಟಿವ್ ಐಒಡಿ'ಪರಿಸ್ಥಿತಿಯು ಭಾರತದ ಕಡೆಗೆ ತೇವಾಂಶಭರಿತ ಮಾರುತಗಳನ್ನು ಬಲಪಡಿಸುತ್ತದೆ ಮತ್ತು ಮುಂಗಾರು ಮಳೆಯನ್ನು ಹೆಚ್ಚಿಸುತ್ತದೆ. 'ನೆಗೆಟಿವ್ ಐಒಡಿ' ಮಳೆಯನ್ನು ಕುಂಠಿತಗೊಳಿಸುತ್ತದೆ. ಈ ಕಾರಣದಿಂದಾಗಿ, ಈ ವರ್ಷದ ಕೊನೆಯಲ್ಲಿ ಪಾಸಿಟಿವ್ ಐಒಡಿ ಸೃಷ್ಟಿಯಾಗಲಿದೆಯೇ ಎಂದು ಹವಾಮಾನ ತಜ್ಞರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇದು ಸೃಷ್ಟಿಯಾದರೆ ಎಲ್ ನಿನೊ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸಬಹುದು.

ಇದ್ದಕ್ಕೆ ಅತ್ಯುತ್ತಮ ಉದಾಹರಣೆ 1997ರಲ್ಲಿ ಕಂಡುಬಂದಿತ್ತು. ಆಗ ಸೃಷ್ಟಿಯಾಗಿದ್ದ ಪ್ರಬಲ ಪಾಸಿಟಿವ್ ಐಒಡಿ, ಇತಿಹಾಸದಲ್ಲೇ ಅತ್ಯಂತ ಪ್ರಬಲವಾಗಿದ್ದ ಎಲ್ ನಿನೊ ಪ್ರಭಾವವನ್ನು ತಡೆಯಲು ಸಹಾಯ ಮಾಡಿತ್ತು. ಇದರಿಂದಾಗಿ ಭಾರತವು ಭೀಕರ ಬರಗಾಲದಿಂದ ಪಾರಾಗಿತ್ತು.

ಈ ವರ್ಷದ ನೈಋತ್ಯ ಮುಂಗಾರು ಹಂಗಾಮಿನ ಬಹುಪಾಲು ಅವಧಿಯಲ್ಲಿ ಐಒಡಿ ತಟಸ್ಥವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ.

ದಿ ನ್ಯೂಸ್ ಮಿನಿಟ್ ಜತೆ ಮಾತನಾಡಿದ ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮಹಾಪಾತ್ರ, ಕೇವಲ ಪ್ರಬಲವಾದ ಪಾಸಿಟಿವ್ ಐಒಡಿ ಮಾತ್ರ ಎಲ್ ನಿನೊ ಪ್ರಭಾವವನ್ನು ಗಣನೀಯವಾಗಿ ಕಡಿಮೆ ಮಾಡಬಲ್ಲದು . ಪ್ರಬಲವಾದ ಎಲ್ ನಿನೊ ಉಂಟುಮಾಡುವ ನಷ್ಟವನ್ನು ಐಒಡಿ "ಸಂಪೂರ್ಣವಾಗಿ ಸರಿದೂಗಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾದ ಹವಾಮಾನ ಇಲಾಖೆ ಸೇರಿದಂತೆ ಕೆಲವು ಅಂತರರಾಷ್ಟ್ರೀಯ ಸಂಸ್ಥೆಗಳು ಈ ಅವಧಿಯ ಕೊನೆಯಲ್ಲಿ ಪಾಸಿಟಿವ್ ಐಒಡಿ ಸೃಷ್ಟಿಯಾಗಬಹುದು ಎಂದು ಸೂಚಿಸಿವೆಯಾದರೂ, ಅದರ ತೀವ್ರತೆಯ ಬಗ್ಗೆ ಸಾಕಷ್ಟು ಅನಿಶ್ಚಿತತೆ ಇದೆ.

ಪ್ರಬಲ ಎಲ್ ನಿನೊ ವಿದ್ಯಮಾನದಿಂದ ರೈತರು, ಆಹಾರ ಪದಾರ್ಥಗಳ ಬೆಲೆ ಮತ್ತು ಆರ್ಥಿಕತೆಯ ಮೇಲಾಗುವ ಪರಿಣಾಮಗಳೇನು?

ಇದರಿಂದ ಎದುರಾಗಲಿರುವ ಅತಿ ದೊಡ್ಡ ಆತಂಕವೆಂದರೆ ಕೃಷಿ ವಲಯದ್ದು. ಭಾರತವು ತನ್ನ ವಾರ್ಷಿಕ ಮಳೆಯ ಸುಮಾರು ಮುಕ್ಕಾಲು ಭಾಗವನ್ನು ನೈಋತ್ಯ ಮುಂಗಾರು ಅವಧಿಯಲ್ಲೇ ಪಡೆಯುತ್ತದೆ. ದೇಶದ ಒಟ್ಟು ಸಾಗುವಳಿ ಭೂಮಿಯ ಅರ್ಧಕ್ಕಿಂತ ಹೆಚ್ಚು ಭಾಗ ಇಂದಿಗೂ ಮಳೆಯನ್ನೇ ಆಶ್ರಯಿಸಿದೆ.

ಮುಂಗಾರು ಮಳೆ ಕುಂಠಿತಗೊಂಡರೆ ದೇಶದ ಆರ್ಥಿಕತೆಗೆ ಮೂರು ಪ್ರಮುಖ ರೀತಿಯಲ್ಲಿ ಹೊಡೆತ ಬೀಳುತ್ತದೆ.

ಇದರಿಂದಾಗಿ ಕೃಷಿ ಉತ್ಪಾದನೆ ಕಡಿಮೆಯಾಗುವುದು, ಗ್ರಾಮೀಣ ಭಾಗದ ಆದಾಯ ಮತ್ತು ಖರೀದಿ ಸಾಮರ್ಥ್ಯ ಕುಗ್ಗುವುದು, ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವುದು.

ಈ ಪರಿಣಾಮಗಳಲ್ಲಿ ಕೆಲವು ಈಗಾಗಲೇ ಕಾಣಿಸಿಕೊಳ್ಳಲು ಆರಂಭಿಸಿವೆ.

ಕೇಂದ್ರ ಕೃಷಿ ಸಚಿವಾಲಯವು ದೇಶದ 315 ಜಿಲ್ಲೆಗಳನ್ನು ಪರಿಸ್ಥಿತಿಗೆ ತುತ್ತಾಗಬಹುದಾದ ಜಿಲ್ಲೆಗಳೆಂದು ಗುರುತಿಸಿದೆ. ಇವುಗಳಲ್ಲಿ ಶೇಕಡಾ 25 ಕ್ಕಿಂತ ಕಡಿಮೆ ನೀರಾವರಿ ಸೌಲಭ್ಯ ಹೊಂದಿರುವ 111 ಜಿಲ್ಲೆಗಳು ಸೇರಿದ್ದು, ಇಲ್ಲಿನ ರೈತರು ಸಂಪೂರ್ಣವಾಗಿ ಮಳೆಯನ್ನೇ ನೆಚ್ಚಿಕೊಂಡಿದ್ದಾರೆ.

'ಡೌನ್ ಟು ಅರ್ಥ್' ನಡೆಸಿದ ವಿಶ್ಲೇಷಣೆಯ ಪ್ರಕಾರ, ಈ 111 ಜಿಲ್ಲೆಗಳ ಪೈಕಿ 69 ಜಿಲ್ಲೆಗಳಲ್ಲಿ ಈಗಾಗಲೇ ಮಳೆಯ ಕೊರತೆ ದಾಖಲಾಗಿದೆ. ಅದರಲ್ಲಿಯೂ 12 ಜಿಲ್ಲೆಗಳಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಮಳೆ ಕೊರತೆಯಾಗಿದೆ.

ದುರ್ಬಲ ಮುಂಗಾರು ಖಾರಿಫ್ ಬಿತ್ತನೆಯ ವೇಗವನ್ನು ಕಡಿಮೆ ಮಾಡಿದೆ. ಜುಲೈ ಮಧ್ಯಭಾಗದವರೆಗಿನ ಮಾಹಿತಿಯ ಪ್ರಕಾರ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಬಿತ್ತನೆ ಪ್ರಮಾಣವು ಸುಮಾರು ಶೇಕಡಾ 16 ರಷ್ಟು ಕಡಿಮೆಯಾಗಿದೆ. ಮುಖ್ಯವಾಗಿ ಭತ್ತದ ಬಿತ್ತನೆ ಕಾರ್ಯ ಮಂದಗತಿಯಲ್ಲಿ ಸಾಗಿದೆ.

ಭತ್ತ, ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ತರಕಾರಿಗಳ ಉತ್ಪಾದನೆ ಕಡಿಮೆಯಾದರೆ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಬಹುದು ಮತ್ತು ಹಣದುಬ್ಬರ ನಿಯಂತ್ರಣ ತಪ್ಪಬಹುದು ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ಪ್ರತಿಕೂಲ ಮುಂಗಾರು ಪರಿಸ್ಥಿತಿಯು ಭಾರತದ ಆರ್ಥಿಕ ಬೆಳವಣಿಗೆ ಮತ್ತು ಹಣದುಬ್ಬರದ ಮುನ್ಸೂಚನೆಯನ್ನು ಸಂಕೀರ್ಣಗೊಳಿಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಎಚ್ಚರಿಸಿದೆ.

ಈ ಪರಿಣಾಮಗಳು ಕೇವಲ ಕೃಷಿ ವಲಯಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ.

ಗ್ರಾಮೀಣ ಭಾಗದ ಆದಾಯ ಕಡಿಮೆಯಾದಾಗ ಟ್ರ್ಯಾಕ್ಟರ್‌ಗಳು, ದ್ವಿಚಕ್ರ ವಾಹನಗಳು, ನಿರ್ಮಾಣ ಸಾಮಗ್ರಿಗಳು ಮತ್ತು ದೈನಂದಿನ ಬಳಕೆಯ ವಸ್ತುಗಳ ಬೇಡಿಕೆ ಕುಸಿಯುತ್ತದೆ. ಮಳೆಯ ಕೊರತೆ ಹೀಗೆಯೇ ಮುಂದುವರಿದು ಬರಗಾಲದ ಪರಿಸ್ಥಿತಿ ನಿರ್ಮಾಣವಾದರೆ, ಭಾರತದ ಜಿಡಿಪಿ ಬೆಳವಣಿಗೆಯ ಮೇಲೆಯೂ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಬಹುದು ಎಂದು ಕೆಲವು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ.

ಭಾರತದ ಎಲ್ಲಾ ಭಾಗಗಳಿಗೂ ಇದರಿಂದ ಒಂದೇ ರೀತಿಯ ಪರಿಣಾಮ ಉಂಟಾಗಲಿದೆಯೇ?

ಖಂಡಿತ ಇಲ್ಲ. ಎಲ್ ನಿನೊ ದೇಶದ ಎಲ್ಲಾ ಪ್ರದೇಶಗಳ ಮೇಲೂ ಒಂದೇ ರೀತಿಯ ಪ್ರಭಾವ ಬೀರುವುದಿಲ್ಲ.

ತಮಿಳುನಾಡು ರಾಜ್ಯವು ಇದಕ್ಕೆ ಅಪವಾದವಾಗಿದೆ. ಏಕೆಂದರೆ ತಮಿಳುನಾಡು ತನ್ನ ವಾರ್ಷಿಕ ಮಳೆಯ ಸುಮಾರು ಶೇಕಡಾ 60 ರಷ್ಟು ಭಾಗವನ್ನು ಜೂನ್-ಸೆಪ್ಟೆಂಬರ್‌ನ ನೈಋತ್ಯ ಮುಂಗಾರಿನಿಂದ ಪಡೆಯುವ ಬದಲಿಗೆ, ಅಕ್ಟೋಬರ್ ಮತ್ತು ಡಿಸೆಂಬರ್ ನಡುವಿನ ಹಿಂಗಾರುನಿಂದ ಪಡೆಯುತ್ತದೆ.

ಹಿಂದಿನ ಇತಿಹಾಸವನ್ನು ಗಮನಿಸಿದರೆ, 1997, 2015 ಮತ್ತು 2023 ರಂತಹ ಬಲಿಷ್ಠ ಎಲ್ ನಿನೊ ವರ್ಷಗಳಲ್ಲಿ ತಮಿಳುನಾಡಿನಲ್ಲಿ ವಾಡಿಕೆಗಿಂತ ಹೆಚ್ಚು ಹಿಂಗಾರು ಮಳೆಯಾಗಿತ್ತು.

ಆದರೆ, ಅಂತಿಮ ಫಲಿತಾಂಶವು ಬಂಗಾಳ ಕೊಲ್ಲಿಯ ವಾಯುಭಾರ ಕುಸಿತಗಳು, ಐಒಡಿ ಮತ್ತು ಎಂಜಿಯೊ ನಂತಹ ಇತರ ಹವಾಮಾನ ವ್ಯವಸ್ಥೆಗಳ ಮೇಲೆಯೂ ಆಧಾರಪಟ್ಟಿರುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಮಳೆಯ ಹೊರತಾಗಿ, ಎಲ್ ನಿನೊ ಸಮುದ್ರದ ಜೀವಿಗಳ ಮೇಲೂ ಪರಿಣಾಮ ಬೀರಬಹುದು.

ದೀರ್ಘಕಾಲದ ಎಲ್ ನಿನೊ ಪರಿಸ್ಥಿತಿಯು ಸಮುದ್ರದ ಉಷ್ಣ ಅಲೆಯನ್ನು ತೀವ್ರಗೊಳಿಸಬಹುದು, ಹವಳದ ದಿಬ್ಬಗಳು ನಾಶವಾಗಲು ಕಾರಣವಾಗಬಹುದು ಮತ್ತು ಉತ್ತರ ಹಿಂದೂ ಮಹಾಸಾಗರದಲ್ಲಿ ಮೀನುಗಳ ಸಂತತಿ ಹಾಗೂ ಅವುಗಳ ವಲಸೆಯ ಹಾದಿಯನ್ನು ಬದಲಾಯಿಸಬಹುದು ಎಂದು ಇನ್ಕಾಯ್ಸ್ (INCOIS) ವರದಿ ಎಚ್ಚರಿಸಿದೆ. ಇದು ಮೀನುಗಾರಿಕೆ ಉದ್ಯಮಕ್ಕೆ ನಷ್ಟ ಉಂಟುಮಾಡಬಹುದು.

ಜಾಗತಿಕ ಮಟ್ಟದಲ್ಲಿ ಗಮನಿಸುವುದಾದರೆ, ಎಲ್ ನಿನೊ ಪ್ರಭಾವದಿಂದಾಗಿ ಹಲವು ಉಷ್ಣವಲಯದ ದೇಶಗಳಲ್ಲಿ ಕೋಕೋ, ಕಾಫಿ ಮತ್ತು ಸಕ್ಕರೆ ಉತ್ಪಾದನೆ ಕಡಿಮೆಯಾಗಬಹುದು. ಇದು ವಿಶ್ವಾದ್ಯಂತ ಇವುಗಳ ಬೆಲೆ ಏರಿಕೆಗೆ ಕಾರಣವಾಗಬಹುದು ಎಂದು ವರದಿಗಳು ಹೇಳಿವೆ.

ಭಾರತವು ಈ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆಯೇ?

ಆತಂಕಗಳ ನಡುವೆಯೂ, ಒಂದು ದಶಕದ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಭಾರತವು ದುರ್ಬಲ ಮುಂಗಾರನ್ನು ಎದುರಿಸಲು ಈಗ ಉತ್ತಮ ಸ್ಥಿತಿಯಲ್ಲಿದೆ ಎಂದು ತಜ್ಞರು ಹೇಳುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯಗಳಲ್ಲಿ ಉತ್ತಮ ನೀರಿನ ಸಂಗ್ರಹವಿದೆ. ಇದರೊಂದಿಗೆ ಸುಧಾರಿತ ಹವಾಮಾನ ಮುನ್ಸೂಚನೆ, ನವೀಕರಿಸಬಹುದಾದ ಇಂಧನದ ಬಳಕೆ ಮತ್ತು ಜಲ ಸಂರಕ್ಷಣೆಯಲ್ಲಿ ಹೆಚ್ಚಿನ ಹೂಡಿಕೆ ಮಾಡಿರುವುದು ದೇಶಕ್ಕೆ ಸಹಕಾರಿಯಾಗಿದೆ.

ಏತನ್ಮಧ್ಯೆ ಕೆಲವು ಮೂಲಭೂತ ಸವಾಲುಗಳು ಹಾಗೇ ಉಳಿದುಕೊಂಡಿವೆ. ಭಾರತದ ಅರ್ಧಕ್ಕಿಂತ ಹೆಚ್ಚು ಕೃಷಿ ಭೂಮಿ ಇಂದಿಗೂ ಮಳೆಯನ್ನೇ ಅವಲಂಬಿಸಿದೆ, ಹಲವು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಲೇ ಇದೆ ಮತ್ತು ನೂರಾರು ಜಿಲ್ಲೆಗಳಲ್ಲಿ ನೀರಾವರಿ ಸೌಲಭ್ಯ ಇನ್ನೂ ಅಪೂರ್ಣವಾಗಿದೆ. ಕೇವಲ ಬೆಳೆ ವಿಮೆ ಮತ್ತು ವಿಪತ್ತು ಪರಿಹಾರಗಳನ್ನೇ ನೆಚ್ಚಿಕೊಳ್ಳುವ ಬದಲು, ದೇಶಕ್ಕೆ ನೀರಾವರಿ ಮೂಲಸೌಕರ್ಯ, ಬರನಿರೋಧಕ ಬೆಳೆಗಳು ಮತ್ತು ದೀರ್ಘಕಾಲದ ಹವಾಮಾನ ಬದಲಾವಣೆ ತಡೆ ಯೋಜನೆಗಳಲ್ಲಿ ನಿರಂತರ ಹೂಡಿಕೆಯ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮುಂಬರುವ ಕೆಲವು ವಾರಗಳಲ್ಲಿ ಮುಂಗಾರು ಹೇಗೆ ಮುಂದುವರಿಯುತ್ತದೆ ಎಂಬುದರ ಮೇಲೆ ಮುಂದಿನ ದಿನಗಳು ನಿರ್ಧಾರವಾಗಲಿವೆ. ಬಂಗಾಳ ಕೊಲ್ಲಿಯ ಹವಾಮಾನ ವ್ಯವಸ್ಥೆಗಳು ಚುರುಕಾಗುವುದು ಅಥವಾ ನಿರೀಕ್ಷೆಗಿಂತ ಬಲಿಷ್ಠವಾದ ಪಾಸಿಟಿವ್ ಇಂಡಿಯನ್ ಓಷನ್ ಡೈಪೋಲ್ ಸೃಷ್ಟಿಯಾಗುವುದು ಸದ್ಯದ ಒಣಹವೆಯ ಪ್ರಭಾವವನ್ನು ಕಡಿಮೆ ಮಾಡಬಹುದು. ಒಂದು ವೇಳೆ ಇಂತಹ ಪೂರಕ ಅಂಶಗಳು ಸಿಗದೆ ಎಲ್ ನಿನೊ ಮತ್ತಷ್ಟು ತೀವ್ರಗೊಂಡರೆ, ಭಾರತವು ಮುಂಗಾರಿನ ಎರಡನೇ ಅವಧಿಯಲ್ಲಿ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಇದರ ಪರಿಣಾಮಗಳು ಕೇವಲ ಹವಾಮಾನಕ್ಕೆ ಮಾತ್ರ ಸೀಮಿತವಾಗಿರದೆ ಇಡೀ ದೇಶದ ಮೇಲೆ ಉಂಟಾಗಲಿವೆ.

ಕೃಪೆ: thenewsminute.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News