FACT CHECK | ಜನನ ಪ್ರಮಾಣಪತ್ರಗಳಿಗೆ ಅರ್ಜಿ ಸಲ್ಲಿಸಲು ಸರಕಾರ ಕೊನೆಯ ದಿನಾಂಕ ಪ್ರಕಟಿಸಿದೆಯೇ?
ಜನನ ಮತ್ತು ಮರಣ ನೋಂದಣಿ ವಿಳಂಬ ಮಾಡಿದವರು ಯಾವಾಗ ಬೇಕಾದರೂ ದಾಖಲೆ ಪಡೆಯಬಹುದು…
ಜನನ ನೋಂದಣಿ ಇಲ್ಲದವರು ತಕ್ಷಣವೇ ಅದನ್ನು ಪಡೆದುಕೊಳ್ಳಬೇಕು ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
“ಜನನ ನೋಂದಣಿ ಮಾಡಿಸದ ನಾಗರಿಕರು 27 ಎಪ್ರಿಲ್ 2026ರೊಳಗೆ ಮಾತ್ರ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಹೇಳಲಾಗಿದೆ. ಈ ದಿನಾಂಕದ ನಂತರ ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆ ಮಾಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ” ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸರಕಾರ ಇಂತಹ ಯಾವುದೇ ಅಧಿಸೂಚನೆಯನ್ನು ಹೊರಡಿಸಿರುವುದಿಲ್ಲ
ಸರ್ಕಾರದಿಂದ ಅಧಿಸೂಚನೆಯಿಲ್ಲ:
ಸರ್ಕಾರ ಇಂತಹ ಯಾವುದೇ ಅಧಿಸೂಚನೆಯನ್ನು ಹೊರಡಿಸಿರುವುದಿಲ್ಲ. ಜನನ ಮತ್ತು ಮರಣ ಪತ್ರ ಇಲ್ಲದವರು ಅಗತ್ಯ ಬಂದಾಗ ಸೂಕ್ತ ವಿಧಾನವನ್ನು ಅನುಸರಿಸಿ ದಾಖಲೆ ಪಡೆಯಬಹುದು. ಅಗತ್ಯವಿದ್ದವರು ಯಾವಾಗ ಬೇಕಾದರೂ ಜನನ ಮತ್ತು ಮರಣ ದಾಖಲೆ ಪಡೆದುಕೊಳ್ಳಬಹುದು. ದಾಖಲೆ ಇಲ್ಲದವರು ಅದಕ್ಕೆ ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಿ ತಹಶೀಲ್ದಾರ್ ಕಚೇರಿಯಿಂದ ದಾಖಲೆಯನ್ನು ಪಡೆದುಕೊಳ್ಳಬೇಕು.
ಜನನ ನೋಂದಣಿ ಕಡ್ಡಾಯವೇ?
ಈಗ ಜನನ ಪ್ರಮಾಣಪತ್ರವನ್ನು ಸರ್ಕಾರದ ವಿವಿಧ ಸೇವೆಗಳಿಗಾಗಿ ಅತ್ಯಂತ ಪ್ರಮುಖ ದಾಖಲೆ ಎಂದು ಪರಿಗಣಿಸಲಾಗುತ್ತದೆ. ಜನನ ಪ್ರಮಾಣಪತ್ರವನ್ನು ನಾಗರಿಕತ್ವಕ್ಕೆ ಬಲವಾದ ಸಾಕ್ಷಿಯಾಗಿ ಪರಿಗಣಿಸಲಾಗುತ್ತದೆ. ಬಹಳ ಜನರು ಶಾಲಾ ಪ್ರಮಾಣಪತ್ರದಲ್ಲಿನ ಜನ್ಮದಿನಾಂಕವೇ ಸಾಕು ಎಂದು ತಪ್ಪಾಗಿ ಭಾವಿಸಿದ್ದಾರೆ. ಆದರೆ ಜನನ ಪ್ರಮಾಣಪತ್ರದ ಅಗತ್ಯವಿದೆ.
ಮುಖ್ಯವಾಗಿ ಆಧಾರ್ ನೋಂದಣಿಗೆ, ಪಾಸ್ಪೋರ್ಟ್ ಪಡೆಯಲು, ಮತದಾರರ ಗುರುತಿನ ಚೀಟಿ ಪಡೆಯಲು ಜನನ ಪ್ರಮಾಣಪತ್ರದ ಅಗತ್ಯವಿದೆ. ಉಳಿದಂತೆ ಪಿಂಚಣಿ ಪಡೆಯಲು, ವಿದ್ಯಾವೇತನ, ಮನಸ್ವಿನಿ ಅಥವಾ ಸಂಧ್ಯಾಸುರಕ್ಷೆಯಂತಹ ಸೌಲಭ್ಯಗಳನ್ನು ಪಡೆಯಲು ಜನನ ಪ್ರಮಾಣಪತ್ರದ ಅಗತ್ಯವಿದೆ. ಆಧಾರ್ ಸಾಕ್ಷ್ಯವಾಗಿ ನೀಡಿದರೂ ಜನನ ಪ್ರಮಾಣಪತ್ರ ಅಥವಾ ಶಾಲಾ ಪ್ರಮಾಣಪತ್ರವನ್ನು ಎರಡನೇ ಸಾಕ್ಷಿಯಾಗಿ ಕೇಳಲಾಗುತ್ತದೆ. ಕೆಲವೊಮ್ಮೆ ಜನಗಣತಿ ಮತ್ತು ವಿಮೆ ಪಡೆಯುವಾಗಲೂ ಜನನ ಪ್ರಮಾಣಪತ್ರ ಕೇಳುವುದಿದೆ.
ಜನನ ಮತ್ತು ಮರಣ ದಾಖಲೆ ಪತ್ರ ಪಡೆಯುವ ವಿಧಾನ
ಜನನ ಮತ್ತು ಮರಣ ದಾಖಲೆ ಪತ್ರ ಇಲ್ಲದವರು ಅದನ್ನು ಪಡೆಯಬೇಕಾದರೆ ತಹಶೀಲ್ದಾರ್ ಬಳಿ ಹೋಗಿ ಅಲಭ್ಯ ದೃಢೀಕರಣ ಪತ್ರವನ್ನು ಪಡೆದುಕೊಳ್ಳಬೇಕು. ತಹಶೀಲ್ದಾರ್ ಅವರಿಗೆ ಅಲಭ್ಯ ದೃಢೀಕರಣ ಪತ್ರ ಬೇಕೆಂದು ಅರ್ಜಿ ಹಾಕಿದರೆ, ಅದನ್ನು ಗ್ರಾಮ ಲೆಕ್ಕಿಗರಿಗೆ ಕಳುಹಿಸಲಾಗುತ್ತದೆ. ಗ್ರಾಮ ಲೆಕ್ಕಿಗರು ಜನನ ಅಥವಾ ಮರಣದ ವಿವರಗಳಿಗೆ ಸಾಕ್ಷಿಯ ಮಹಜರು ನೀಡುತ್ತಾರೆ. ಅದಕ್ಕಾಗಿ ಕುಟುಂಬಸ್ಥರ ಹೇಳಿಕೆ ತೆಗೆದುಕೊಂಡು, ಗ್ರಾಮಸ್ಥರ ಸಹಿ ತೆಗೆದುಕೊಂಡು ಮಹಜರು ನಡೆಸಿ ತಹಶೀಲ್ದಾರ್ ಗೆ ಕಳುಹಿಸುತ್ತಾರೆ. ಅವರು ಅದನ್ನು ಕಳುಹಿಸಿದ ನಂತರ ಅಲಭ್ಯ ದೃಢೀಕರಣ ಪತ್ರ ನ್ಯಾಯಾಲಯಕ್ಕೆ ಹೋಗುತ್ತದೆ. ಅದನ್ನು ಸಂಬಂಧಿತರು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಅಲ್ಲಿ ಇಬ್ಬರು ವಕೀಲರ ಹಿಯರಿಂಗ್ ಆದ ನಂತರ ತಹಶೀಲ್ದಾರ್ ರಿಗೆ ನ್ಯಾಯಾಲಯದ ಆದೇಶ ಬರುತ್ತದೆ. ಆ ಆದೇಶವನ್ನು ಅವರು ಗ್ರಾಮ ಲೆಕ್ಕಿಗರಿಗೆ ಕಳುಹಿಸುತ್ತಾರೆ. ನಂತರ ಗ್ರಾಮ ಲೆಕ್ಕಿಗರು ಆನ್ಲೈನ್ನಲ್ಲಿ ವಿವರ ನಮೂದಿಸಿ ನ್ಯಾಯಾಲಯದ ಆದೇಶದ ಸಂಖ್ಯೆಯನ್ನು ನಮೂದಿಸಿ ಜನನ ಮತ್ತು ಮರಣ ದಾಖಲೆಯನ್ನು ನೀಡುತ್ತಾರೆ.