ಅಮೆರಿಕದ ನಿರ್ಬಂಧಗಳ ನಡುವೆಯೂ Microsoft ಚೀನಾದಲ್ಲಿ ವ್ಯವಹಾರ ವಿಸ್ತರಿಸುತ್ತಿರುವುದೇಕೆ?
Photo Credit : Microsoft logo
ಮೈಕ್ರೋಸಾಫ್ಟ್ ಸದ್ದಿಲ್ಲದೆ ಚೀನಾದ ಕೆಲವು ದೊಡ್ಡ ತಂತ್ರಜ್ಞಾನ ಕಂಪನಿಗಳಿಗೆ AI ಮಾದರಿಗಳು ಮತ್ತು ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳಿಗೆ ಆ್ಯಕ್ಸೆಸ್ ಅನ್ನು ಮಾರಾಟ ಮಾಡುವ ಅತಿದೊಡ್ಡ ವ್ಯವಹಾರವನ್ನು ನಿರ್ಮಿಸಿದೆ.
ಅಮೆರಿಕ ತನ್ನ ಮುಂದುವರಿದ ಕೃತಕ ಬುದ್ಧಿಮತ್ತೆಯ ಕ್ಷೇತ್ರದ ಸುತ್ತ ಗೋಡೆ ಕಟ್ಟುತ್ತಿದೆ. ಪ್ರಬಲ AI ಸೌಲಭ್ಯಗಳನ್ನು ವಿದೇಶಿಯರು ಬಳಸದಂತೆ ನಿರ್ಬಂಧಗಳನ್ನು ಹೇರಿದೆ. ಜಾಗತಿಕ AI ಓಟದಲ್ಲಿ ಚೀನಾ ತನ್ನ ವಿರುದ್ಧ ಲಾಭ ಪಡೆಯದಂತೆ ತಡೆಯಲು ಫೇಬಲ್ 5 ಮತ್ತು ಮೈಥೋಸ್ ಎಂದು ಕರೆಯಲಾಗುವ ಸಮರ್ಥ AI ಮಾದರಿಗಳನ್ನು ಅಮೆರಿಕರನ್ನಲ್ಲದೆ ಇತರರು ಬಳಸುವುದರಿಂದ ದೂರವಿಡುತ್ತಿದೆ. ಆದರೆ ಅದೇ ಸಮಯದಲ್ಲಿ ಅಮೆರಿಕದ ಅತಿದೊಡ್ಡ ಕಂಪನಿಗಳಲ್ಲಿ ಒಂದಾದ ಮೈಕ್ರೋಸಾಫ್ಟ್ ಚೀನಾದ ಜೊತೆಗೆ ವ್ಯವಹಾರವನ್ನು ಬಿಗಿಗೊಳಿಸುತ್ತಿದೆ!
ಬ್ಲೂಮ್ಬರ್ಗ್ ವರದಿಯ ಪ್ರಕಾರ ಮೈಕ್ರೋಸಾಫ್ಟ್ ಸದ್ದಿಲ್ಲದೆ ಚೀನಾದ ಕೆಲವು ದೊಡ್ಡ ತಂತ್ರಜ್ಞಾನ ಕಂಪನಿಗಳಿಗೆ AI ಮಾದರಿಗಳು ಮತ್ತು ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳಿಗೆ ಆ್ಯಕ್ಸೆಸ್ ಅನ್ನು ಮಾರಾಟ ಮಾಡುವ ಅತಿದೊಡ್ಡ ವ್ಯವಹಾರವನ್ನು ನಿರ್ಮಿಸಿದೆ. ಮೈಕ್ರೋಸಾಫ್ಟ್ನ ಅತಿದೊಡ್ಡ ಗ್ರಾಹಕ ಬೈಟ್ಡ್ಯಾನ್ಸ್ ಆಗಿದೆ. ಬೈಟ್ಡ್ಯಾನ್ಸ್ ಟಿಕ್ಟಾಕ್ನ ಮಾಲೀಕತ್ವ ಹೊಂದಿರುವ ಕಂಪನಿಯಾಗಿದೆ. ಬೈಟ್ ಡ್ಯಾನ್ಸ್ ಇದೀಗ ಮೈಕ್ರೋಸಾಫ್ಟ್ನ AI ಮತ್ತು ಕ್ಲೌಡ್ ಸೇವೆಗಳಿಗೆ ವಾರ್ಷಿಕ 1 ಶತಕೋಟಿ ಡಾಲರ್ಗಳಷ್ಟು ವೆಚ್ಚ ಮಾಡಲಿದೆ. ಚೀನಾದ ಇನ್ನೂ ಕೆಲವು ದೈತ್ಯ ತಂತ್ರಜ್ಞಾನ ಕಂಪನಿಗಳಾದ ಆಂಟ್ ಗ್ರೂಪ್, ಮೈತುವಾನ್ ಮತ್ತು ಟೆನ್ಸೆಂಟ್ ಕೂಡ ಮೈಕ್ರೋಸಾಫ್ಟ್ನ ಆಜೂರ್ ಕ್ಲೌಡ್ ಪ್ಲಾಟ್ಫಾರ್ಮ್ ಮೂಲಕ AI ಮಾಡೆಲ್ಗಳನ್ನು ಬಳಸುತ್ತಿವೆ.
ಇದೇ ವಿಷಯಕ್ಕಾಗಿ ಮೈಕ್ರೋಸಾಫ್ಟ್ ಭಿನ್ನವಾಗಿದೆ. ಒಂದೆಡೆ ಅಮೆರಿಕವು ಚೀನಾದ AI ಮಹಾತ್ವಾಂಕ್ಷೆಗಳನ್ನು ತನ್ನ ಅರ್ಥವ್ಯವಸ್ಥೆ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಪರಿಗಣಿಸುತ್ತಿದ್ದು, ಅಮೆರಿಕದ ಸಂಸದರು ಪದೇಪದೆ ಚೀನಾ AI ಸ್ಪರ್ಧೆಯಲ್ಲಿ ಅಮೆರಿಕವನ್ನು ಹಿಂದಿಕ್ಕಲಿದೆ ಎಂದು ಎಚ್ಚರಿಸುತ್ತಿದ್ದರೂ ಸಹ ಮೈಕ್ರೋಸಾಫ್ಟ್ ತನ್ನ ಉದ್ಯಮವನ್ನು ಚೀನಾಗೆ ವಿಸ್ತರಿಸಿದೆ. OpenAI ಮತ್ತು Anthropic ನಂತಹ ಕಂಪನಿಗಳು ತಮ್ಮ ಅತ್ಯಾಧುನಿಕ ಮಾಡೆಲ್ಗಳನ್ನು ಚೀನೀ ಗ್ರಾಹಕರಿಗೆ ನೀಡದಿರಲು ನಿರ್ಧರಿಸಿರುವಾಗ ಮೈಕ್ರೋಸಾಫ್ಟ್ ಉದ್ಯಮ ಕಾರ್ಯಯೋಜನೆ ಚೀನಾವನ್ನು ಬೆದರಿಕೆಯಾಗಿ ನೋಡುತ್ತಿಲ್ಲ. ಚೀನಾ ಅತಿದೊಡ್ಡ ಮಾರುಕಟ್ಟೆ ಎನ್ನುವುದನ್ನು ಮಾತ್ರ ಗಮನಿಸುತ್ತಿದೆ.
ಮೈಕ್ರೋಸಾಫ್ಟ್ ತನ್ನ AI ಚಾಲಿತ ಕೋಪೈಲಟ್ ಕೋವರ್ಕ್ ಪ್ಲಾಟ್ಫಾರ್ಮ್ಗೆ ಉದ್ಯಮಗಳು ಪಾವತಿಸುವ ವಿಧಾನವನ್ನು ಬದಲಿಸುತ್ತಿದೆ. ತನ್ನ ವೆಚ್ಚವನ್ನು ಕಡಿಮೆಗೊಳಿಸಲು ಅಗ್ಗದ AI ಮಾಡೆಲ್ಗಳಾದ DeepSeek ನಂತಹವುಗಳನ್ನು ಅನ್ವೇಷಿಸುತ್ತಿದೆ. ಏಜೆಂಟಿಕ್ AI ಸಾಧನಗಳಿಗೆ ಬೇಡಿಕೆ ಹೆಚ್ಚುತ್ತಿರುವ ನಡುವೆ ಈ ಕ್ರಮ ಬಂದಿದೆ. ಸಾಂಪ್ರದಾಯಿಕ ಚಾಟ್ಬಾಟ್ ಗಳಿಗಿಂತ ಭಿನ್ನವಾಗಿ ಕೋ ಪೈಲಟ್ ಕೋವರ್ಕ್, Anthropic ನ ಕ್ಲೌಡ್ ಕೋಡ್ ಮತ್ತು OpenAI ನ ಕೋಡೆಕ್ಸ್ ನಂತಹ ಸಾಧನಗಳನ್ನು AI ಮಾಡೆಲ್ ಗಳೆಂದು ಕರೆಯಲಾಗುತ್ತದೆ. ಏಕೆಂದರೆ ಅವುಗಳು ಸಂಕೀರ್ಣ ಕಾರ್ಯಗಳನ್ನೂ ಸ್ವಾಯತ್ತವಾಗಿ ಮಾಡಬಲ್ಲವು. ಆದರೆ ಇದು ಉತ್ಪಾದಕತೆಯನ್ನು ಗಮನಾರ್ಹವಾಗಿ ಹೆಚ್ಚಿಸಬಹುದಾದರೂ, ವೇಗವಾಗಿ ಹೆಚ್ಚುತ್ತಿರುವ ಕಂಪ್ಯೂಟಿಂಗ್ ವೆಚ್ಚಗಳಿಗೆ ಕಾರಣವಾಗಬಹುದು. ಇದೀಗ ಕೋಪೈಲಟ್ ಕೋವರ್ಕ್ ಬಳಸುವ ಕಂಪನಿಗಳು ಈಗ ಅವರು ಎಷ್ಟು ಕಂಪ್ಯೂಟ್ ಮತ್ತು AI ಸಂಸ್ಕರಣೆಯನ್ನು ಬಳಸುತ್ತಾರೆ ಎಂಬುದರ ಆಧಾರದ ಮೇಲೆ ಪಾವತಿಸುತ್ತಿವೆ ಎಂದು ಮೈಕ್ರೋಸಾಫ್ಟ್ ಹೇಳಿದೆ.
ಹೀಗೆ ವೆಚ್ಚವನ್ನು ಕಡಿಮೆ ಮಾಡಲು ಮೈಕ್ರೋಸಾಫ್ಟ್ ಇದೀಗ ತನ್ನ ಮಾಡೆಲ್ ಗೆ ಶಕ್ತಿ ತುಂಬುತ್ತಿರುವ OpenAI ಮತ್ತು Anthropic ಗೆ ಪರ್ಯಾಯವಾಗಿ DeepSeek V4 ಅಥವಾ ಬೇರೆ ಮಾರ್ಗಗಳನ್ನು ಹುಡುಕುತ್ತಿದೆ. ಮುಂಬರುವ ವಾರಗಳಲ್ಲಿ ಕಂಪನಿ ತನ್ನ ಅಂತಿಮ ಆಯ್ಕೆ ಘೋಷಿಸುವ ಸಾಧ್ಯತೆಯಿದೆ. ಚೀನಾದ ಜೊತೆಗಿನ ಮೈಕ್ರೋಸಾಫ್ಟ್ನ ಈ ವ್ಯವಹಾರ ಅಮೆರಿಕದ ಆಡಳಿತದ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯಿದೆ. ಆದರೆ ಮೈಕ್ರೋಸಾಫ್ಟ್ ಈಗಾಗಲೇ ತನ್ನ ಉದ್ದೇಶವನ್ನು ಸ್ಪಷ್ಟವಾಗಿ ಹೇಳಿದೆ. 2025ರಲ್ಲಿ ನಡೆದ ಆಂತರಿಕ ಮಾರಾಟ ಸಭೆಯಲ್ಲಿ ಆಗಿನ ಮುಖ್ಯ ವಾಣಿಜ್ಯ ಅಧಿಕಾರಿ ಜಡ್ಸನ್ ಆಲ್ಥಾಫ್ ಉದ್ಯೋಗಿಗಳಿಗೆ ಹೇಳಿರುವ ಪ್ರಕಾರ, “ವಿಶ್ವದ ಅತ್ಯಂತ ಗಣ್ಯ AI ಪರಿಹಾರಗಳನ್ನು ಅಮೆರಿಕದ ಪಶ್ಚಿಮ ಕರಾವಳಿ ಮತ್ತು ಚೀನಾದ ಪೂರ್ವ ಕರಾವಳಿಗಳಲ್ಲಿ ನಿರ್ಮಿಸಲಾಗುತ್ತಿದೆ. ಈ ಎರಡು ಸ್ಥಳಗಳನ್ನು ಒಟ್ಟಿಗೆ ತರುವ ಕಂಪನಿ ಮೈಕ್ರೋಸಾಫ್ಟ್ ಎನ್ನುವುದು ಅದ್ಭುತ ವಿಷಯ!”
ವರದಿಯ ಪ್ರಕಾರ ಚೀನಾದಲ್ಲಿ ಮೈಕ್ರೋಸಾಫ್ಟ್ ನ AI ಆದಾಯವು ಇತರ ಪ್ರದೇಶಗಳಿಗಿಂತ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಜೂನ್ 2025ರಲ್ಲಿ ಕೊನೆಗೊಂಡ ಹಣಕಾಸು ವರ್ಷದಲ್ಲಿ ಮೂರುಪಟ್ಟು ಹೆಚ್ಚಾಗಿದೆ.
ಆದರೆ, ಯಾವುದೇ DeepSeek ಆಧಾರಿತ ಆಕ್ಸೆಸ್ ಗ್ರಾಹಕರಿಗೆ ಐಚ್ಛಿಕವಾಗಿರುತ್ತದೆ ಎಂದು ಮೈಕ್ರೋಸಾಫ್ಟ್ ಹೇಳಿದೆ. ಗ್ರಾಹಕರ ಡೇಟಾ ಮೈಕ್ರೋಸಾಫ್ಟ್ನ ಕ್ಲೌಡ್ ಮೂಲಸೌಕರ್ಯದಲ್ಲಿ ಉಳಿಯುತ್ತದೆ. ತಾರತಮ್ಯ ಕಡಿಮೆ ಮಾಡಲು ಮತ್ತು ವಿಶ್ವಾಸಾರ್ಹತೆ ಹೆಚ್ಚು ಮಾಡುವಂತೆ ಕೋಪೈಲಟ್ ಕೋವರ್ಕ್ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.