×
Ad

ಯುಎಸ್ ಇಂಡೋ-ಪೆಸಿಫಿಕ್ ಕಮಾಂಡ್ ಇನ್ಮುಂದೆ ಯುಎಸ್ ಪೆಸಿಫಿಕ್ ಕಮಾಂಡ್: ಈ ಮರುನಾಮಕರಣದಿಂದ ಏಷ್ಯಾದಲ್ಲಿ ಅಮೆರಿಕದ ಭದ್ರತಾ ಹಿತಾಸಕ್ತಿಗಳ ಮೇಲಾಗುವ ಪರಿಣಾಮಗಳೇನು?

Update: 2026-06-18 19:09 IST

Photo Credit: X/INDOPACOM

ಯುಎಸ್ ಇಂಡೋ-ಪೆಸಿಫಿಕ್ ಕಮಾಂಡ್ (USINDOPACOM) ಅನ್ನು ಅಧಿಕೃತವಾಗಿ ಮತ್ತೆ 'ಯುಎಸ್ ಪೆಸಿಫಿಕ್ ಕಮಾಂಡ್' (USPACOM) ಎಂದು ಬದಲಾಯಿಸಲಾಗುವುದು ಎಂದು ಯುನೈಟೆಡ್ ಸ್ಟೇಟ್ಸ್ ರಕ್ಷಣಾ ಇಲಾಖೆ ಮಂಗಳವಾರ (ಜೂನ್ 16) ತಡರಾತ್ರಿ ಪ್ರಕಟಿಸಿದೆ. ಆರಂಭದಲ್ಲಿ ‘ಯುಎಸ್‌ಪಿಎಕಾಂ’ ಎಂದಿದ್ದ ಈ ಕಮಾಂಡ್ ಅನ್ನು ಮೊದಲ ಡೊನಾಲ್ಡ್ ಟ್ರಂಪ್ ಆಡಳಿತವು (2017-21) ಮೇ 2018 ರಲ್ಲಿ ‘ಯುಎಸ್ ಇಂಡೋ– ಪೆಸಿಫಿಕ್ ಕಮಾಂಡ್’ ಎಂದು ಮರುನಾಮಕರಣ ಮಾಡಿತ್ತು. ಈಗ ಸುಮಾರು ಎಂಟು ವರ್ಷಗಳ ನಂತರ ಹಳೆಯ ಹೆಸರನ್ನೇ ಮರುಸ್ಥಾಪಿಸಲಾಗಿದೆ.

USPACOM ಎಂದರೇನು, ಅದರ ಇತಿಹಾಸ ಮತ್ತು ಈ ಹೊಸ ಹೆಸರು ಬದಲಾವಣೆಯ ಹಿಂದಿನ ಭೂರಾಜಕೀಯ ಮಹತ್ವವೇನು ಎಂಬ ವಿವರಗಳು ಇಲ್ಲಿವೆ.

►ಒಂದು ರೋಚಕ ಇತಿಹಾಸ

USPACOM ಅಮೆರಿಕದ ಸಶಸ್ತ್ರ ಪಡೆಗಳ ಆರು ಪ್ರಮುಖ ಭೌಗೋಳಿಕ ಕಮಾಂಡ್‌ಗಳಲ್ಲಿ ಒಂದಾಗಿದೆ. ಅದರ ಅಧಿಕೃತ ವೆಬ್‌ಸೈಟ್ ಪ್ರಕಾರ, ಈ ಕಮಾಂಡ್‌ನ ಜವಾಬ್ದಾರಿಯು ಭೂಮಿಯ ಅರ್ಧದಷ್ಟು ಭಾಗವನ್ನು ಒಳಗೊಂಡಿದೆ. ಇದು ಅಮೆರಿಕದ ಪಶ್ಚಿಮ ಕರಾವಳಿಯ ಜಲಪ್ರದೇಶದಿಂದ ಭಾರತದ ಪಶ್ಚಿಮ ಗಡಿಯವರೆಗೆ ಮತ್ತು ಅಂಟಾರ್ಕ್ಟಿಕಾದಿಂದ ಉತ್ತರ ಧ್ರುವದವರೆಗೆ ಹರಡಿದೆ. ಇದನ್ನು 1947 ಜನವರಿ 1 ರಂದು ಯುಎಸ್ ಅಧ್ಯಕ್ಷ ಹ್ಯಾರಿ ಎಸ್ ಟ್ರೂಮನ್ ಸ್ಥಾಪಿಸಿದರು. ಹಲವು ವರ್ಷಗಳ ಕಾಲ ಈ ಕಮಾಂಡ್ ತನ್ನ ಮೂಲ ಹೆಸರಾದ USPACOM ಅಡಿಯಲ್ಲೇ ಕಾರ್ಯನಿರ್ವಹಿಸಿತ್ತು. ಇದು ಅಮೆರಿಕದ ಆರು ಭೌಗೋಳಿಕ ಕಮಾಂಡ್‌ಗಳಲ್ಲಿ ಅತ್ಯಂತ ಹಳೆಯದು ಮತ್ತು ದೊಡ್ಡದಾಗಿದ್ದು, ಹವಾಯಿಯಲ್ಲಿ ಇದರ ಪ್ರಧಾನ ಕಚೇರಿ ಇದೆ.

ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, "ಕೊರಿಯಾ ಯುದ್ಧ, ವಿಯೆಟ್ನಾಂ ಯುದ್ಧ ಮತ್ತು ಹಲವಾರು ಮಾನವೀಯ ಕಾರ್ಯಾಚರಣೆಗಳ ಸಮಯದಲ್ಲಿ ಜಂಟಿ ಪಡೆಗಳನ್ನು ಸಂಯೋಜಿಸುವುದರ ಜೊತೆಗೆ, ಎರಡನೇ ಮಹಾಯುದ್ಧದ ನಂತರದ ಪ್ರಾದೇಶಿಕ ಭದ್ರತಾ ವ್ಯವಸ್ಥೆಯನ್ನು ರೂಪಿಸುವಲ್ಲಿ" ಈ ಕಮಾಂಡ್ ಪ್ರಮುಖ ಪಾತ್ರ ವಹಿಸಿದೆ ಎಂದು ಯುಎಸ್‌ಪಿಎಕಾಂ ತಿಳಿಸಿದೆ

► 2018ರಲ್ಲಿ ಮರುನಾಮಕರಣ

2018 ಮೇ 30ರಂದು, ಈ ಕಮಾಂಡ್ ಅನ್ನು 'ಯುಎಸ್ ಇಂಡೋ-ಪೆಸಿಫಿಕ್ ಕಮಾಂಡ್' ಎಂದು ಮರುನಾಮಕರಣ ಮಾಡಲಾಯಿತು. ಆ ಸಮಯದಲ್ಲಿ, ಆಗಿನ ಯುಎಸ್ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಎನ್ ಮ್ಯಾಟಿಸ್ ಅವರು ಈ ಕಮಾಂಡ್‌ನ ಜವಾಬ್ದಾರಿಯ ವ್ಯಾಪ್ತಿಗೆ ಬರುವ ಹಿಂದೂ ಮಹಾಸಾಗರ ಪ್ರದೇಶದ ಮಹತ್ವವನ್ನು ಒತ್ತಿಹೇಳಿದ್ದರು.

"ಹಿಂದೂ ಮತ್ತು ಪೆಸಿಫಿಕ್ ಮಹಾಸಾಗರಗಳ ನಡುವೆ ಹೆಚ್ಚುತ್ತಿರುವ ಸಂಪರ್ಕ"ವನ್ನು ಅವರು ಎತ್ತಿ ತೋರಿಸಿದ್ದರು. ಹಲವು ದಶಕಗಳಿಂದ, ಈ ಕಮಾಂಡ್ ಬದಲಾಗುತ್ತಿರುವ ಸಂದರ್ಭಗಳಿಗೆ ತಕ್ಕಂತೆ ಪದೇ ಪದೇ ಹೊಂದಿಕೊಂಡಿದೆ. ಅಮೆರಿಕವು ಪಶ್ಚಿಮದತ್ತ ಗಮನ ಹರಿಸುತ್ತಿರುವ ಈ ಸಮಯದಲ್ಲಿ, ಇಂದು ಆ ಪರಂಪರೆಯನ್ನು ಮುಂದುವರಿಸುತ್ತಿದೆ ಎಂದು ಅವರು ಹೇಳಿದ್ದರು.

ಅವರು ಯುಎಸ್‌ನ ರಾಷ್ಟ್ರೀಯ ರಕ್ಷಣಾ ಕಾರ್ಯತಂತ್ರದಲ್ಲಿ ಈ ಕಮಾಂಡ್‌ನ ಮಹತ್ವವನ್ನು ಪ್ರಸ್ತಾಪಿಸಿದ್ದರು. ದಶಕದಲ್ಲೇ ಮೊದಲ ಬಾರಿಗೆ ರೂಪಿಸಲಾದ 2018 ರ ರಾಷ್ಟ್ರೀಯ ರಕ್ಷಣಾ ಕಾರ್ಯತಂತ್ರವು ಪೆಸಿಫಿಕ್ ಸವಾಲುಗಳನ್ನು ಒಪ್ಪಿಕೊಳ್ಳುತ್ತದೆ. ಜೊತೆಗೆ ಇಂಡೋ-ಪೆಸಿಫಿಕ್ ಪ್ರದೇಶದ ಬಗ್ಗೆ ಅಮೆರಿಕದ ದೃಢಸಂಕಲ್ಪ ಮತ್ತು ದೀರ್ಘಕಾಲದ ಬದ್ಧತೆಯನ್ನು ತೋರಿಸುತ್ತದೆ ಎಂದು ಅವರು ತಿಳಿಸಿದ್ದರು.

ಈ ಹೆಸರು ಬದಲಾವಣೆಯು ಯುಎಸ್‌ನ ಭೂರಾಜಕೀಯ ಕಾರ್ಯತಂತ್ರದಲ್ಲಿ ಭಾರತದ ಹೆಚ್ಚುತ್ತಿರುವ ಮಹತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು.

ಚೀನಾ ಜೊತೆಗಿನ ಉದ್ವಿಗ್ನತೆ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ, ವಿಶೇಷವಾಗಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ 2018 ರ ಹೆಸರು ಬದಲಾವಣೆ ನಡೆದಿತ್ತು. ಮ್ಯಾಟಿಸ್ ತಮ್ಮ ಪ್ರಕಟಣೆಯಲ್ಲಿ, ಚೀನಾದ 'ಒನ್ ಬೆಲ್ಟ್, ಒನ್ ರೋಡ್' ಯೋಜನೆಯ ಮೂಲಕ ಆ ದೇಶವು ಈ ಪ್ರದೇಶದಲ್ಲಿ ಹೆಚ್ಚಿಸಿಕೊಳ್ಳುತ್ತಿದ್ದ ಭೂರಾಜಕೀಯ ಮತ್ತು ಆರ್ಥಿಕ ಉಪಸ್ಥಿತಿಯನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದರು. ಅವರ ಪ್ರಕಾರ, ಈ ಕಮಾಂಡ್ "ಹೂಡಿಕೆ ಮತ್ತು ಮುಕ್ತ, ನ್ಯಾಯೋಚಿತ ಹಾಗೂ ಪರಸ್ಪರ ವ್ಯಾಪಾರಕ್ಕೆ ಮುಕ್ತವಾಗಿರುವ ಪ್ರದೇಶದ ಪ್ರಮುಖ ಆಧಾರಸ್ತಂಭವಾಗಿದೆ. ಇದು ಯಾವುದೇ ದೇಶದ ಶೋಷಣೆಯ ಆರ್ಥಿಕತೆ ಅಥವಾ ಬಲವಂತದ ಬೆದರಿಕೆಗೆ ಒಳಗಾಗಿಲ್ಲ. ಏಕೆಂದರೆ ಇಂಡೋ-ಪೆಸಿಫಿಕ್ ಅನೇಕ ಬೆಲ್ಟ್‌ಗಳನ್ನು ಮತ್ತು ಅನೇಕ ರಸ್ತೆಗಳನ್ನು ಹೊಂದಿದೆ" ಎಂದಿದ್ದರು.

►ಏಷ್ಯಾದ ಮೇಲಾಗುವ ಪರಿಣಾಮಗಳೇನು?

ತನ್ನ "ವಿಶಾಲವಾದ ಜವಾಬ್ದಾರಿಯ ಪ್ರದೇಶವು ಮೊದಲಿನಂತೆಯೇ ಇರುತ್ತದೆ" ಮತ್ತು "ಪ್ರಾದೇಶಿಕ ಮಿತ್ರರಾಷ್ಟ್ರಗಳು ಹಾಗೂ ಪಾಲುದಾರರೊಂದಿಗೆ ಮುಕ್ತ ಮತ್ತು ಸೌಹಾರ್ದಯುತ ವಾತಾವರಣವನ್ನು ಕಾಯ್ದುಕೊಳ್ಳುವ ತನ್ನ ದೃಢವಾದ ಬದ್ಧತೆಯಲ್ಲಿ ಯಾವುದೇ ಬದಲಾವಣೆಯಿಲ್ಲ" ಎಂದು ಯುಎಸ್‌ಪಿಎಕಾಂ ಪ್ರತಿಪಾದಿಸಿದೆ. ಆದರೆ, ಈ ಕ್ರಮವು ಮುಂದಿನ ದಿನಗಳಲ್ಲಿ ಅಮೆರಿಕವು ಚೀನಾ ದೇಶದ ವಿರುದ್ಧ ಕಡಿಮೆ ಆಕ್ರಮಣಕಾರಿ ಧೋರಣೆಯನ್ನು ಅಳವಡಿಸಿಕೊಳ್ಳಬಹುದು ಎಂಬುದನ್ನು ಸೂಚಿಸುತ್ತದೆ ಎಂದು ಭೂರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಪ್ರೊಫೆಸರ್ ಹಾಗೂ ಚೀನಾ-ಗ್ಲೋಬಲ್ ಸೌತ್ ಪ್ರಾಜೆಕ್ಟ್‌ನ ಹಿರಿಯ ಸಂಶೋಧಕ ಡೆರೆಕ್ ಗ್ರೋಸ್‌ಮನ್ ಅವರು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ: "ಟ್ರಂಪ್ 2.0 ಆಡಳಿತವು 'ಇಂಡೋ-ಪೆಸಿಫಿಕ್' ಅನ್ನು ಭೂರಾಜಕೀಯ ಚೌಕಟ್ಟಾಗಿ ಸಕ್ರಿಯವಾಗಿ ಮರುಪರಿಶೀಲಿಸುತ್ತಿದೆ. ವಾಸ್ತವವಾಗಿ, ಇದು ಈಗಾಗಲೇ ತನ್ನ ಅಧಿಕೃತ ವರದಿಗಳಲ್ಲಿ 'ಏಷ್ಯಾ-ಪೆಸಿಫಿಕ್' ಎಂಬ ಪದವನ್ನು ಹಲವು ಬಾರಿ ಬಳಸಿದೆ. ಇದು ಹೆಚ್ಚಿನ ಸಹಭಾಗಿತ್ವದ ಪರವಾಗಿ ಚೀನಾ ಕಡೆಗೆ ಕಡಿಮೆ ಆಕ್ರಮಣಕಾರಿ ಧೋರಣೆಯನ್ನು ಹೊಂದುವ ಸಾಧ್ಯತೆಯನ್ನು ಬಲವಾಗಿ ಸೂಚಿಸುತ್ತದೆ.

ಈ ಹೆಸರು ಬದಲಾವಣೆಯು 'ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡೈಲಾಗ್' ಅಥವಾ 'ಕ್ವಾಡ್' (Quad) ಸಂಘಟನೆಯ ಭವಿಷ್ಯದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದೆ. ಕ್ವಾಡ್ ಎಂಬುದು ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಯುಎಸ್ ಒಳಗೊಂಡ ನಾಲ್ಕು ದೇಶಗಳ ಒಕ್ಕೂಟವಾಗಿದೆ. ಇದನ್ನು 2007 ರಲ್ಲಿ ಪ್ರಾರಂಭಿಸಲಾಯಿತಾದರೂ, ಟ್ರಂಪ್ ಅವರ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ಇದು ಮರುಜೀವ ಪಡೆದುಕೊಂಡಿತು. ಚೀನಾದ ಹೆಚ್ಚುತ್ತಿರುವ ಆರ್ಥಿಕ ಮತ್ತು ಭೂರಾಜಕೀಯ ಪ್ರಭಾವಕ್ಕೆ ರಾಜತಾಂತ್ರಿಕ ಪ್ರತಿಕ್ರಿಯೆಯಾಗಿ ಇದನ್ನು ವ್ಯಾಪಕವಾಗಿ ಪರಿಗಣಿಸಲಾಗಿತ್ತು.

ಇದಲ್ಲದೆ, ನವೆಂಬರ್ 2025 ರಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರದ (NSS) ಕೆಲವೇ ತಿಂಗಳುಗಳಲ್ಲಿ ಈ ಬದಲಾವಣೆ ನಡೆದಿದೆ. ಆ ಕಾರ್ಯತಂತ್ರವು ವಿದೇಶಗಳಲ್ಲಿ, ಅದರಲ್ಲೂ ಮುಖ್ಯವಾಗಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಅಮೆರಿಕದ ಭದ್ರತಾ ಆದ್ಯತೆಗಳು ಬದಲಾಗಬಹುದು ಎಂಬ ಮುನ್ಸೂಚನೆ ನೀಡಿತ್ತು. 'ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್' ಸಂಸ್ಥೆಗಾಗಿ ಬರೆದ ಲೇಖನದಲ್ಲಿ ಹಿರಿಯ ಸಂಶೋಧಕಿ ಸ್ತುತಿ ಬ್ಯಾನರ್ಜಿ ಅವರು, "ನಾಲ್ಕು ದೇಶಗಳ ಒಕ್ಕೂಟದ ಮೂಲಕ ಈ ಭಾಗದ ಭದ್ರತೆಗೆ ಭಾರತವು ಹೆಚ್ಚಿನ ಕೊಡುಗೆ ನೀಡಬೇಕು ಎಂದು ಅಮೆರಿಕ ನಿರೀಕ್ಷಿಸುತ್ತದೆ" ಎಂದು ಎನ್‌ಎಸ್‌ಎಸ್ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಹೇಳಿದ್ದಾರೆ. ಆದರೆ, ಇದೇ ದಾಖಲೆಯಲ್ಲಿ ಈ ಪ್ರದೇಶವನ್ನು 'ಇಂಡೋ-ಪೆಸಿಫಿಕ್' ಎಂದು ಕರೆಯುವ ಬದಲ ಕೇವಲ 'ಏಷ್ಯಾ' ಎಂದು ಬಳಸಿರುವುದು, ಪ್ರಸ್ತುತ ಅಮೆರಿಕ ಆಡಳಿತದ ಆಸಕ್ತಿ ಮತ್ತು ಆದ್ಯತೆಗಳು ಬದಲಾಗುತ್ತಿರುವುದನ್ನು ತೋರಿಸುತ್ತದೆ ಎಂದು ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News