Photo Credit : PTI 

ಗತಕಾಲದ ಮತ್ತು ಸಮಕಾಲೀನ ಇತಿಹಾಸವನ್ನು ಪ್ರತಿಬಿಂಬಿಸುವ ಕೊಲ್ಕತ್ತಾ, ಮುಂಬೈ ಮತ್ತು ಚೆನ್ನೈನಂತಹ ಪ್ರಮುಖ ನಗರಗಳು ಅಥವಾ ಜೈಪುರ ಮತ್ತು ಪಣಜಿಯಂತಹ ಸಣ್ಣ ನಗರಗಳು ಸೇರಿದಂತೆ ದೇಶದ ಪ್ರತಿಯೊಂದು ನಗರ ಪ್ರದೇಶವೂ ತನ್ನದೇ ಆದ ಪ್ರತಿಭಟನಾ ಸ್ಥಳವನ್ನು ಹೊಂದಿದೆ. ವರ್ಷಗಳಲ್ಲಿ, ಸಾರ್ವಜನಿಕ ಸೌಕರ್ಯದ ಹೆಸರಿನಲ್ಲಿ ಹಲವು ಸ್ಥಳಗಳನ್ನು ನಿಗದಿತ ಪಟ್ಟಿಯಿಂದ ಕೈಬಿಡಲಾಗಿದೆ. ಇನ್ನೂ ಕೆಲವು ಮುಕ್ತ ಅಭಿವ್ಯಕ್ತಿ ಮತ್ತು ಪ್ರತಿಭಟನಾ ವಲಯಗಳಾಗಿ ಮುಂದುವರಿಯುತ್ತಿವೆ.

ಕೆಲವು ಸ್ಥಳಗಳು ಬ್ರಿಟಿಷರ ದೌರ್ಜನ್ಯಕ್ಕೆ ಸಾಕ್ಷಿಯಾಗಿದ್ದರೆ, ಇನ್ನು ಕೆಲವು ಮಹಾತ್ಮ ಗಾಂಧಿಯವರ ಒಡನಾಟದಿಂದಾಗಿ ಐತಿಹಾಸಿಕ ಪ್ರಾಮುಖ್ಯತೆ ಪಡೆದಿವೆ. ನಗರದ ಹೃದಯಭಾಗದಲ್ಲಿದ್ದ ಜಂತರ್ ಮಂತರ್ ಅನ್ನು ದಿಲ್ಲಿ ಪೊಲೀಸರು ಸೋಮವಾರ ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಕೈಬಿಡುತ್ತಿದ್ದಂತೆ, ದೇಶದಾದ್ಯಂತ ಅಧಿಕಾರದ ಕೇಂದ್ರಗಳ ಬಳಿ ಇರುವ ಇತರ 'ಜಂತರ್ ಮಂತರ್'ಗಳತ್ತ ಗಮನ ಹರಿದಿದೆ.

ಇತಿಹಾಸದ ಸವಿನೆನಪನ್ನು ಹೊತ್ತಿರುವ ಅಂತಹ ಕೆಲವು ಪ್ರಮುಖ ಸ್ಥಳಗಳ ವಿವರ ಇಲ್ಲಿದೆ:

ಆಜಾದ್ ಮೈದಾನ, ಮುಂಬೈ

ಮೂಲತಃ 'ಎಸ್‌ಪ್ಲನೇಡ್' ಎಂಬ ವಿಶಾಲವಾದ ಬಯಲು ಪ್ರದೇಶದ ಭಾಗವಾಗಿದ್ದ ಇದು, 1857ರ ದಂಗೆಯ ಸಮಯದಲ್ಲಿ ಸಾರ್ವಜನಿಕವಾಗಿ ಮರಣದಂಡನೆ ವಿಧಿಸುತ್ತಿದ್ದ ಸ್ಥಳವಾಗಿತ್ತು. ಬಳಿಕ ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ರಾಷ್ಟ್ರೀಯತಾವಾದಿ ಪ್ರತಿಭಟನೆಗಳ ಪ್ರಮುಖ ಕೇಂದ್ರವಾಯಿತು. ಮಹಾತ್ಮ ಗಾಂಧಿಯವರು 1931ರಲ್ಲಿ ಇಲ್ಲಿ ಬೃಹತ್ ರ‍್ಯಾಲಿ ನಡೆಸಿದ್ದರು.

ಇಲ್ಲಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಮುಂಬೈನ ಮತ್ತೊಂದು ಪ್ರತಿಭಟನಾ ಸ್ಥಳವಾದ 'ಆಗಸ್ಟ್ ಕ್ರಾಂತಿ ಮೈದಾನ'ವಿದೆ. ಇಲ್ಲಿಂದಲೇ ಗಾಂಧೀಜಿಯವರು 1942ರಲ್ಲಿ 'ಭಾರತ ಬಿಟ್ಟು ತೊಲಗಿ' ಚಳವಳಿಯನ್ನು ಪ್ರಾರಂಭಿಸಿದ್ದರು. ಹತ್ತಿರದಲ್ಲೇ ಇರುವ ಶಿವಾಜಿ ಪಾರ್ಕ್ ಕೂಡ ಪ್ರಮುಖ ರಾಜಕೀಯ ಸಮಾವೇಶಗಳು ಮತ್ತು ಸಾರ್ವಜನಿಕ ರ‍್ಯಾಲಿಗಳಿಗೆ ಹೆಸರಾಗಿದೆ.

ಫ್ರೀಡಂ ಪಾರ್ಕ್, ಬೆಂಗಳೂರು

ಲಂಡನ್‌ನ ಹೈಡ್ ಪಾರ್ಕ್ ಮಾದರಿಯಲ್ಲಿ ನಿರ್ಮಿಸಲಾದ ಈ ಉದ್ಯಾನವು ಸಾರ್ವಜನಿಕ ರ‍್ಯಾಲಿಗಳು ಮತ್ತು ಪ್ರತಿಭಟನೆಗಳಿಗಾಗಿ ಪ್ರತ್ಯೇಕ ಸ್ಥಳವನ್ನು ಹೊಂದಿದೆ. ಮೂಲತಃ ಇಲ್ಲಿ ಬ್ರಿಟಿಷರು ನಿರ್ಮಿಸಿದ ಕೇಂದ್ರ ಕಾರಾಗೃಹವಿತ್ತು. ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಇಲ್ಲಿ ಬಂಧಿಸಲಾಗಿತ್ತು ಮತ್ತು ಗಲ್ಲಿಗೇರಿಸಲಾಗಿತ್ತು. ಸ್ವಾತಂತ್ರ್ಯದ ಬಳಿಕ, ತುರ್ತುಪರಿಸ್ಥಿತಿಯ ಸಮಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್. ಕೆ. ಅಡ್ವಾಣಿ ಸೇರಿದಂತೆ ಅನೇಕ ವಿರೋಧ ಪಕ್ಷದ ನಾಯಕರನ್ನು ಇಲ್ಲಿ ಬಂಧಿಸಲಾಗಿತ್ತು. 2008ರಲ್ಲಿ ಈ ಸ್ಥಳವನ್ನು 'ಫ್ರೀಡಂ ಪಾರ್ಕ್' ಆಗಿ ಪರಿವರ್ತಿಸಲಾಯಿತು. ಇಲ್ಲಿ ಜೈಲು ವಸ್ತುಸಂಗ್ರಹಾಲಯವೂ ಇದೆ.

ಬ್ರಿಗೇಡ್ ಪೆರೇಡ್ ಗ್ರೌಂಡ್, ಕೊಲ್ಕತ್ತಾ

ಪ್ಲಾಸಿ ಕದನದಲ್ಲಿ ಜಯಗಳಿಸಿದ ಬಳಿಕ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಪಡೆಗಳಿಗಾಗಿ ಪೆರೇಡ್ ಮೈದಾನವಾಗಿ ರೂಪಿಸಲಾದ ಇದು, ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಪ್ರಮುಖ ಪ್ರತಿಭಟನಾ ವೇದಿಕೆಯಾಯಿತು. ರೌಲತ್ ಕಾಯ್ದೆಯ ವಿರುದ್ಧ ದೇಶಬಂಧು ಚಿತ್ತರಂಜನ್ ದಾಸ್ ಆಯೋಜಿಸಿದ್ದ ರ‍್ಯಾಲಿ ಸೇರಿದಂತೆ ಹಲವು ಪ್ರತಿಭಟನೆಗಳು ಇಲ್ಲಿ ನಡೆದವು.

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಸೋವಿಯತ್ ನಾಯಕರಿಗೆ ಇಲ್ಲಿ ಸಾರ್ವಜನಿಕ ಸ್ವಾಗತ ಕೋರಿದ್ದರು. ಪಾಕ್ ವಿರುದ್ಧದ ಯುದ್ಧದಲ್ಲಿ ಭಾರತದ ಗೆಲುವಿನ ಬಳಿಕ ಬಾಂಗ್ಲಾದೇಶ ರಚನೆಯಾದ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು ಮುಜಿಬುರ್ ರೆಹಮಾನ್ ಅವರನ್ನು ಇಲ್ಲಿನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಅಲ್ಲದೆ, ಎಡಪಕ್ಷಗಳು, ಟಿಎಂಸಿ ಮತ್ತು ಈಗಿನ ಬಿಜೆಪಿ ಸೇರಿದಂತೆ ಇಲ್ಲಿ ಅಧಿಕಾರಕ್ಕೆ ಬಂದ ಸತತ ರಾಜ್ಯ ಸರಕಾರಗಳ ಬೃಹತ್ ರ‍್ಯಾಲಿಗಳಿಗೂ ಈ ಮೈದಾನ ಸಾಕ್ಷಿಯಾಗಿದೆ.

ಕೊಲ್ಕತ್ತಾದಲ್ಲಿ ಎಸ್‌ಪ್ಲನೇಡ್ ಬಳಿಯ ರಾಣಿ ರಾಶ್ಮೋಣಿ ಅವೆನ್ಯೂ, ಶಹೀದ್ ಮಿನಾರ್ ಮೈದಾನ ಮತ್ತು ಕಾಲೇಜ್ ಸ್ಕ್ವೇರ್ ಸೇರಿದಂತೆ ಇತರ ಪ್ರತಿಭಟನಾ ಸ್ಥಳಗಳೂ ಇವೆ.

ಗಾಂಧಿ ಮೈದಾನ, ಪಾಟ್ನಾ

ಹಿಂದೆ 'ಪಾಟ್ನಾ ಲಾನ್ಸ್' ಮತ್ತು 'ಬಂಕಿಪುರ್ ಮೈದಾನ' ಎಂದು ಕರೆಯಲ್ಪಡುತ್ತಿದ್ದ, ಗಂಗಾ ನದಿಯ ದಡದ ಸಮೀಪವಿರುವ ಈ ವಿಶಾಲ ಮೈದಾನವು ಹಲವು ಐತಿಹಾಸಿಕ ಪ್ರತಿಭಟನೆಗಳು ಮತ್ತು ರ‍್ಯಾಲಿಗಳಿಗೆ ಆತಿಥ್ಯ ವಹಿಸಿದೆ. ಮಿಲಿಟರಿ ಕವಾಯತು, ಕುದುರೆ ರೇಸ್, ಪೋಲೊ ಮತ್ತು ಗಾಲ್ಫ್‌ಗಾಗಿ ಬ್ರಿಟಿಷರು ಇದನ್ನು ಅಭಿವೃದ್ಧಿಪಡಿಸಿದ್ದರು. ಬಳಿಕ ಇದು ಸ್ವಾತಂತ್ರ್ಯ ಚಳವಳಿಯ ಪ್ರಮುಖ ರ‍್ಯಾಲಿ ಕೇಂದ್ರವಾಯಿತು. ಚಂಪಾರಣ್ ಚಳವಳಿ ಮತ್ತು 'ಭಾರತ ಬಿಟ್ಟು ತೊಲಗಿ' ಚಳವಳಿಯ ರ‍್ಯಾಲಿಗಳೂ ಇಲ್ಲಿ ನಡೆದವು.

ಮುಹಮ್ಮದ್ ಅಲಿ ಜಿನ್ನಾ ಅವರು 1938ರಲ್ಲಿ ಇಲ್ಲಿ ಪ್ರಮುಖ ಮುಸ್ಲಿಂ ಲೀಗ್ ಅಧಿವೇಶನ ನಡೆಸಿದರೆ, ಸುಭಾಷ್ ಚಂದ್ರ ಬೋಸ್ ಅವರು 1939ರಲ್ಲಿ ಫಾರ್ವರ್ಡ್ ಬ್ಲಾಕ್ ಸಭೆ ನಡೆಸಿದರು. ಸ್ವಾತಂತ್ರ್ಯದ ಬಳಿಕ, ತುರ್ತುಪರಿಸ್ಥಿತಿಯ ವಿರುದ್ಧ ಜಯಪ್ರಕಾಶ್ ನಾರಾಯಣ್ ಅವರು 'ಸಂಪೂರ್ಣ ಕ್ರಾಂತಿ'ಗೆ ಕರೆ ನೀಡಿದಾಗ, ಈ ಸ್ಥಳವೇ ಜೆಪಿ ಚಳವಳಿಯ ಆರಂಭದ ವೇದಿಕೆಯಾಯಿತು.

ತಿಲಕ್ ಘಾಟ್, ಚೆನ್ನೈ

ಬಾಲ ಗಂಗಾಧರ ತಿಲಕ್ ಅವರ ಹೆಸರನ್ನು ಹೊಂದಿರುವ ಮತ್ತು ಮರೀನಾ ಬೀಚ್‌ನಲ್ಲಿರುವ ಈ ಸ್ಥಳವು ಸ್ವಾತಂತ್ರ್ಯ ಹೋರಾಟದ ಪ್ರಮುಖ ಪ್ರತಿಭಟನಾ ತಾಣವಾಗಿತ್ತು. ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್ ಮತ್ತು ಆ್ಯನಿ ಬೆಸೆಂಟ್ ಅವರಂತಹ ಹಲವು ಪ್ರಮುಖ ನಾಯಕರು ಇಲ್ಲಿ ಸಭೆ ನಡೆಸಿದ್ದರು. ಆದರೆ, ಈಗ ಇದು ಅಧಿಕೃತ ಪ್ರತಿಭಟನಾ ಸ್ಥಳವಾಗಿ ಉಳಿದಿಲ್ಲ.

ಚೆನ್ನೈನಲ್ಲಿರುವ ಇತರ ಪ್ರತಿಭಟನಾ ಸ್ಥಳಗಳಲ್ಲಿ ವಲ್ಲುವರ್ ಕೋಟ್ಟಂ ಮತ್ತು ಸ್ವಾಮಿ ಶಿವಾನಂದ ಸಾಲೈ ಸೇರಿವೆ. ವಲ್ಲುವರ್ ಕೋಟ್ಟಂನಲ್ಲಿ ಪ್ರತಿಭಟನೆಗಳಿಗೆ ಅನುಮತಿ ನೀಡುವುದನ್ನು ನಿಲ್ಲಿಸಿದ ಬಳಿಕ, ಮಾರ್ಚ್ 2025ರಲ್ಲಿ ಪೊಲೀಸರು ಸ್ವಾಮಿ ಶಿವಾನಂದ ಸಾಲೈ ಪ್ರದೇಶವನ್ನು ಪರ್ಯಾಯ ಪ್ರತಿಭಟನಾ ವೇದಿಕೆಯಾಗಿ ಗುರುತಿಸಿದರು.

ಬೋಟ್ ಕ್ಲಬ್, ದಿಲ್ಲಿ

ಪ್ರತಿಭಟನಾ ಸ್ಥಳವಾಗಿ ಜಂತರ್ ಮಂತರ್ ಗುರುತಿಸಲ್ಪಡುವುದಕ್ಕೂ ಬಹಳ ಹಿಂದೆಯೇ, ಸಂಸತ್ ಮತ್ತು ರಾಷ್ಟ್ರಪತಿ ಭವನದ ಸಮೀಪದಲ್ಲಿದ್ದ ವಿಶಾಲವಾದ ಬೋಟ್ ಕ್ಲಬ್ ಹುಲ್ಲುಹಾಸುಗಳು ರ‍್ಯಾಲಿಗಳು, ಪ್ರದರ್ಶನಗಳು ಮತ್ತು ಆಂದೋಲನಗಳ ಪ್ರಮುಖ ವೇದಿಕೆಯಾಗಿದ್ದವು.

ಟ್ರ್ಯಾಕ್ಟರ್‌ಗಳು ಹಾಗೂ ಜಾನುವಾರುಗಳೊಂದಿಗೆ ಐದು ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿ ಮಹೇಂದ್ರ ಸಿಂಗ್ ಟಿಕಾಯತ್ ಅವರ ನೇತೃತ್ವದಲ್ಲಿ 1988ರಲ್ಲಿ ನಡೆದ ರೈತ ಹೋರಾಟವು, ಬೋಟ್ ಕ್ಲಬ್‌ನಲ್ಲಿ ಪ್ರತಿಭಟನೆಗಳ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲು ಕಾರಣವಾಯಿತು. ಬಾಬರಿ ಮಸೀದಿ ಧ್ವಂಸದ ಬಳಿಕ 1993ರಲ್ಲಿ ಬೋಟ್ ಕ್ಲಬ್‌ನಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಲಾಯಿತು. 2018ರಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಜಂತರ್ ಮಂತರ್ ಜೊತೆಗೆ ಬೋಟ್ ಕ್ಲಬ್ ಕೂಡ ಸ್ವಲ್ಪ ಕಾಲ ಪ್ರತಿಭಟನೆಗಳಿಗೆ ಮುಕ್ತವಾಗಿತ್ತು.

ಲುಟಿಯನ್ಸ್ ದಿಲ್ಲಿಯ ಈ ಎರಡು ಸ್ಥಳಗಳಿಂದ ಹೆಚ್ಚು ದೂರವಿಲ್ಲದ ರಾಮಲೀಲಾ ಮೈದಾನವು, ಕೆಲವು ನಿರ್ಬಂಧಗಳ ನಡುವೆಯೂ ಇಂದಿಗೂ ಅಧಿಕೃತ ಪ್ರತಿಭಟನಾ ಸ್ಥಳವಾಗಿ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರವನ್ನು ಭಾರತ ಒಕ್ಕೂಟದೊಂದಿಗೆ ಸಂಪೂರ್ಣವಾಗಿ ವಿಲೀನಗೊಳಿಸುವಂತೆ ಒತ್ತಾಯಿಸಿ ಶ್ಯಾಮಪ್ರಸಾದ್ ಮುಖರ್ಜಿ ಅವರು 1952ರಲ್ಲಿ ರಾಮಲೀಲಾ ಮೈದಾನದಲ್ಲಿ ಸತ್ಯಾಗ್ರಹ ಆರಂಭಿಸಿದ್ದರು. ತುರ್ತುಪರಿಸ್ಥಿತಿ ಘೋಷಣೆಯಾದ ದಿನವಾದ 1975ರ ಜೂನ್ 25ರಂದು ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ಅವರು ಇಲ್ಲಿ ಬೃಹತ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. 2011ರ ಭ್ರಷ್ಟಾಚಾರ ವಿರೋಧಿ ಚಳವಳಿಗೂ ಇದೇ ಮೈದಾನ ವೇದಿಕೆಯಾಗಿತ್ತು.

ಇತರ ನಗರಗಳೂ ತಮ್ಮದೇ ಆದ ನಿಗದಿತ ಪ್ರತಿಭಟನಾ ಸ್ಥಳಗಳನ್ನು ಹೊಂದಿವೆ.

ಲಕ್ನೋದಲ್ಲಿ ಇಕೋ ಗಾರ್ಡನ್, ಪಣಜಿಯಲ್ಲಿ ಆಜಾದ್ ಮೈದಾನ ಮತ್ತು ಕ್ಯಾಂಪಾಲ್ ಪೆರೇಡ್ ಮೈದಾನ, ಹೈದರಾಬಾದ್‌ನಲ್ಲಿ ಧರ್ನಾ ಚೌಕ್, ಗನ್ ಪಾರ್ಕ್ ಮತ್ತು ಲಿವರಿ ಸರ್ಕಲ್ ಹಾಗೂ ಜೈಪುರದಲ್ಲಿ ಶಹೀದ್ ಸ್ಮಾರಕ ಇವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor