Photo: x.com/GBA_office

ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ ತ್ಯಾಜ್ಯ ಸಂಗ್ರಹಣೆ, ಪ್ರಾಥಮಿಕ, ದ್ವಿತೀಯ ಹಂತದ ಸಾಗಣೆಗೆ ಸಂಬಂಧಿಸಿದಂತೆ ಈ ಹಿಂದೆ ಕರೆದಿದ್ದ ಟೆಂಡರ್‌ಗೆ ಆರ್ಥಿಕ ಇಲಾಖೆಯ ಅಭಿಪ್ರಾಯವನ್ನೇ ಪಡೆದಿರಲಿಲ್ಲ. ಅಷ್ಟೇ ಏಕೆ ಈ ಸಂಬಂಧ ಸಚಿವ ಸಂಪುಟದ ಅನುಮೋದನೆಯನ್ನೂ ಪಡೆದಿರಲಿಲ್ಲ. 4,791.95 ಕೋಟಿ ರೂ. ಮೊತ್ತವನ್ನು ಯಾವ ಆಧಾರದ ಮೇಲೆ ನಿರ್ಧರಿಸಲಾಗಿದೆ ಎಂಬ ಅಂಶವನ್ನೂ ಆರ್ಥಿಕ ಇಲಾಖೆಗೆ ತಿಳಿಸಿರಲಿಲ್ಲ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

ಶೇ. 14ಕ್ಕಿಂತ ಹೆಚ್ಚಿನ ಟೆಂಡರ್ ಪ್ರೀಮಿಯಂ ಕುರಿತು ಎದ್ದಿದ್ದ ಪ್ರಶ್ನೆಗಳ ಕುರಿತು ಸಮಿತಿಯನ್ನು ರಚಿಸಬಾರದು, 21 ಪ್ಯಾಕೇಜ್‌ಗಳಿಗೆ ಪರಿಷ್ಕೃತ ಅಂದಾಜು ಮೊತ್ತದ ಆಡಳಿತಾತ್ಮಕ ಅನುಮೋದನೆ ಮತ್ತು ಶೇ.5ಕ್ಕಿಂತ ಹೆಚ್ಚಿನ ಟೆಂಡರ್ ಪ್ರೀಮಿಯಂ ಮಂಜೂರಾತಿ ನೀಡಬೇಕು ಎಂದು ಅಂದು ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರೇ ಅಧಿಕಾರಿಗಳ ಸಭೆಯಲ್ಲಿ ಹೇಳಿರುವುದು ಸಹ ಬಯಲಾಗಿದೆ.

ಘನ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ 4,791.95 ಕೋಟಿ ರೂ. ಮೊತ್ತದ ಟೆಂಡರ್ ಪ್ರಕ್ರಿಯೆಯಲ್ಲಿ ಹಲವು ಅಕ್ರಮ, ಭ್ರಷ್ಟಾಚಾರ ನಡೆದಿದೆ ಎಂದು ಗುರುತರವಾದ ಆರೋಪ ಕೇಳಿ ಬಂದಿದ್ದವು. ಈ ಆರೋಪಗಳನ್ನು ಪರಿಶೀಲಿಸಲು ಸರಕಾರದ ಹಿರಿಯ ಐಎಎಸ್ ಅಧಿಕಾರಿ ಅಂಜುಂ ಪರ್ವೇಝ್ ಅವರ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯೂ ಸಹ ವರದಿಯನ್ನೂ ನೀಡಿದೆ. ಈ ವರದಿಯಲ್ಲಿನ ಅಂಶಗಳ ಕುರಿತು ಸರಕಾರವು ಇನ್ನೂ ಪರಿಶೀಲನೆಯನ್ನು ನಡೆಸುತ್ತಿದೆ.

ಈ ಬೆಳವಣಿಗೆ ನಡುವೆಯೇ ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ ಈ ಹಿಂದಿನ ಟೆಂಡರ್ಗಳಿಗೆ ಆರ್ಥಿಕ ಇಲಾಖೆಯ ಅಭಿಪ್ರಾಯವನ್ನೇ ಪಡೆದಿರಲಿಲ್ಲ. ಮತ್ತು ಹಿರಿಯ ಅಧಿಕಾರಿಗಳ ಸಮಿತಿ ರಚಿಸಬಾರದು ಎಂದು ಡಿ.ಕೆ.ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿದ್ದಾಗಲೇ ವ್ಯಕ್ತಪಡಿಸಿದ್ದ ಅಭಿಪ್ರಾಯವೂ ಮುನ್ನೆಲೆಗೆ ಬಂದಿದೆ.

ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ ತ್ಯಾಜ್ಯ ಸಂಗ್ರಹಣೆ, ಪ್ರಾಥಮಿಕ, ದ್ವಿತೀಯ ಹಂತದ ಸಾಗಣೆಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಗುತ್ತಿಗೆದಾರ ಬಾಲಸುಬ್ರಮಣಿಯಂ ಎಂಬವರು ಆರ್ಥಿಕ ಇಲಾಖೆಯಿಂದ ಆರ್‌ಟಿಐ ಮೂಲಕ 776 ಪುಟಗಳ ಸಮಗ್ರ ಕಡತವನ್ನು ಪಡೆದುಕೊಂಡಿದ್ದಾರೆ. ಈ ಸಮಗ್ರ ಕಡತವು "the-file.in'ಗೆ ಲಭ್ಯವಾಗಿದೆ.

ಬೆಂಗಳೂರು ನಗರದ ಹಿತದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ ತ್ಯಾಜ್ಯ ಸಂಗ್ರಹಣೆ, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಣೆ ಸೇವೆಯನ್ನು ಸಮರ್ಪಕವಾಗಿ ನಿರ್ವಹಿಸಲು ಮರು ಟೆಂಡರ್ ಆಹ್ವಾನಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ಈ ಪ್ರಸ್ತಾವಕ್ಕೆ ಅಗತ್ಯವಿರುವ ಅನುದಾನವನ್ನು ಬಿಬಿಎಂಪಿಯು ತನ್ನ ಆಯವ್ಯಯದಲ್ಲಿ ಹೊಂದಿಸಿಕೊಳ್ಳಲಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಯಾವುದೇ ಆರ್ಥಿಕ ಹೊರೆ ಇರುವುದಿಲ್ಲ ಎಂದು ಪ್ರಸ್ತಾವದಲ್ಲಿ ಹೇಳಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಆರ್ಥಿಕ ಇಲಾಖೆಯು ‘ಈ ಹಿಂದೆ ಮೊದಲ ಬಾರಿಗೆ ಟೆಂಡರ್ ಕರೆಯಲಾದ ಸಂದರ್ಭದಲ್ಲಿ ಆರ್ಥಿಕ ಇಲಾಖೆಯ ಅಭಿಪ್ರಾಯವನ್ನಾಗಲಿ ಹಾಗೂ ಸಚಿವ ಸಂಪುಟದ ಅನುಮೋದನೆ ಪಡೆದಿರುವುದು ಕಂಡು ಬಂದಿರುವುದಿಲ್ಲ. ಪ್ರಸ್ತುತ ಉಚ್ಛ ನ್ಯಾಯಾಲಯದ ನಿರ್ದೇಶನ ಹಾಗೂ ಯೋಜನೆ ಮೊತ್ತ 4,791.95 ಕೋಟಿ ಬೃಹತ್ ಮೊತ್ತವಾಗಿರುವ ಕಾರಣ ಆರ್ಥಿಕ ಇಲಾಖೆ ಮತ್ತು ಸಚಿವ ಸಂಪುಟದ ಅನುಮೋದನೆಗೆ ಸಲ್ಲಿಸಿದೆ, ಆರ್ಥಿಕ ಇಲಾಖೆಯು ಟಿಪ್ಪಣಿಯಲ್ಲಿ ದಾಖಲಿಸಿರುವುದು ಗೊತ್ತಾಗಿದೆ.

ಮತ್ತೊಂದು ವಿಶೇಷ ಸಂಗತಿ ಎಂದರೇ ಆಡಳಿತ ಇಲಾಖೆಯಾದ ನಗರಾಭಿವೃದ್ಧಿ ಇಲಾಖೆಯ ಕಡತದಲ್ಲಿ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಟಿಪ್ಪಣಿ ಹಾಳೆಗಳು ಲಭ್ಯವಿಲ್ಲ. ಹಾಗೂ ವಾರ್ಷಿಕ 588.54 ಕೋಟಿ ರೂ. ಮೊತ್ತದಂತೆ 7 ವರ್ಷಗಳಿಗೆ 4,791.95 ಕೋಟಿ ರೂ. ಮೊತ್ತವನ್ನು ಯಾವ ಆಧಾರದ ಮೇಲೆ ನಿರ್ಧರಿಸಲಾಗಿದೆ ಎಂಬ ಅಂಶವೂ ಸಹ ಆರ್ಥಿಕ ಇಲಾಖೆಗೂ ಲಭ್ಯವಿಲ್ಲವಾಗಿದೆ.

ಹಾಗೆಯೇ ಕೇವಲ ಪ್ಯಾಕೇಜ್‌ವಾರು ಮೊತ್ತವನ್ನು ಮಾತ್ರ ಒದಗಿಸಿದೆ. ಮತ್ತು 21ನೇ ಆಡಳಿತ ಮಂಡಳಿ ಸಭೆಗೆ ಮಂಡಿಸಲಾದ ಅಂಶಗಳಿಗೆ ಅನುಮೋದನೆ ಪಡೆದಿರುವ ಕುರಿತು ಯಾವುದೇ ಮಾಹಿತಿಯೂ ಆರ್ಥಿಕ ಇಲಾಖೆಗೆ ಲಭ್ಯವಿಲ್ಲ ಎಂದು ಆರ್ಥಿಕ ಇಲಾಖೆಯು 2025ರ ಮೇ 17ರಂದೇ ಟಿಪ್ಪಣಿಯಲ್ಲಿ ದಾಖಲಿಸಿತ್ತು.

ಅದೇ ರೀತಿ ದರ ಸಂಧಾನದ ನಂತರ ಅಂತಿಮಗೊಳಿಸಲಾದ ಮೊತ್ತಗಳು ಆರಂಭಿಕ ಟೆಂಡರ್ ಮೊತ್ತಕ್ಕಿಂತ ಶೇ. 14ರಷ್ಟು ಹೆಚ್ಚಾಗಿವೆ ಎಂದು ಆಡಳಿತ ಇಲಾಖೆಯು ತಿಳಿಸಿದೆ. ಆದರೆ, ಹಣಕಾಸು ಇಲಾಖೆಯು (10-05-2022 ಮತ್ತು 30-07-2022_ ಹೊರಡಿಸಿದ್ದ ಸುತ್ತೋಲೆಗಳ ಪ್ರಕಾರ, ಟೆಂಡರ್ ಮೊತ್ತಕ್ಕಿಂತ ಶೇ.5ಕ್ಕಿಂತ ಹೆಚ್ಚಿನ ಪ್ರೀಮಿಯಂ ಹೊಂದಿರುವ ಟೆಂಡರ್‌ಗಳನ್ನು ಸಾಮಾನ್ಯವಾಗಿ ಅಂಗೀಕರಿಸಬಾರದು. ಅಂತಹ ಟೆಂಡರ್‌ಗಳನ್ನು ಅಂಗೀಕರಿಸಬೇಕಾದರೆ, ಅದಕ್ಕೆ ಸಮರ್ಥನೀಯ ಕಾರಣಗಳನ್ನು ಲಿಖಿತವಾಗಿ ದಾಖಲಿಸಬೇಕು ಮತ್ತು ಉನ್ನತ ಪ್ರಾಧಿಕಾರದ ಅನುಮೋದನೆಯನ್ನು ಪಡೆಯಬೇಕು. ಆದರೆ, ಸುತ್ತೋಲೆಯಲ್ಲಿ ಉಲ್ಲೇಖಿಸಿರುವ ‘ಉನ್ನತ ಪ್ರಾಧಿಕಾರ’ದ ವ್ಯಾಖ್ಯಾನದ ಕುರಿತು ಸ್ಪಷ್ಟತೆ ಇಲ್ಲದ ಕಾರಣ, ಶೇ. 5ಕ್ಕಿಂತ ಹೆಚ್ಚಿನ ಟೆಂಡರ್ ಪ್ರೀಮಿಯಂ ಹೊಂದಿರುವ ಪ್ರಕರಣಗಳನ್ನು ಸಚಿವ ಸಂಪುಟದ ಅನುಮೋದನೆಗಾಗಿ ಮಂಡಿಸಲು ಉನ್ನತಾಧಿಕಾರ ಸಮಿತಿಯು ನಿರ್ಧರಿಸಿತು ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

ಅಲ್ಲದೇ ನಗರಾಭಿವೃದ್ಧಿ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವವನ್ನು ಕೂಲಂಕಷವಾಗಿ ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಹಲವು ಮಾಹಿತಿಗಳನ್ನು ಒದಗಿಸಲು ಸೂಚಿಸಿತ್ತು.

ಬಹುತೇಕ ಎಲ್ಲಾ ಬಿಡ್‌ಗಳ ದರಗಳು ನಿಖರವಾಗಿ ಶೇ.14ರಷ್ಟು ಹೆಚ್ಚಳದ ಮಿತಿಯಲ್ಲಿವೆ. ಇದು ಸ್ಪರ್ಧಾತ್ಮಕ ಮಾರುಕಟ್ಟೆಯ ಆಧಾರದ ಮೇಲೆ ಬೆಲೆಯನ್ನು ನಿರ್ಧರಿಸುವ ಬದಲು, ಪೂರ್ವನಿರ್ಧರಿತ ಗರಿಷ್ಠ ಮಿತಿಯನ್ನು ಆಧರಿಸಿ ದರವನ್ನು ನಿಗದಿಪಡಿಸಿರುವುದನ್ನು ಸೂಚಿಸುತ್ತದೆ. ಇದು ನೈಜ ಬೆಲೆ ಸ್ಪರ್ಧೆಯ ಕೊರತೆಯನ್ನು ತೋರಿಸುತ್ತದೆ. ಶೇ.14ರಷ್ಟು ಹೆಚ್ಚುವರಿ ದರ ಏಕೆ ಅಗತ್ಯವಿದೆ ಎಂಬುದರ ಕುರಿತು ಆಡಳಿತ ಇಲಾಖೆಯು ಪ್ರತಿ ಅಂಶವಾರು ವಿವರವಾದ ಲೆಕ್ಕಾಚಾರವನ್ನು ಒದಗಿಸಬೇಕು. ಅಲ್ಲದೆ, ಪರಿಷ್ಕೃತ ದರಗಳೊಂದಿಗೆ ಯೋಜನೆಯನ್ನು ಮರುಟೆಂಡರ್ ಮಾಡುವ ಮೂಲಕ ಇನ್ನೂ ಉತ್ತಮ ದರವನ್ನು ಪಡೆಯಲು ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸಲು ಮರುಟೆಂಡರ್ ಏಕೆ ಕರೆಯಲಿಲ್ಲ ಎಂಬುದನ್ನೂ ವಿವರಿಸಬೇಕು ಎಂದು ಸೂಚಿಸಿತ್ತು.

2025ರ ವೆಚ್ಚದ ಅಂದಾಜುಗಳು ಕೇವಲ ಒಂದು ವರ್ಷದೊಳಗೆ ಏಕೆ ಹಳೆಯದಾದವು ಎಂಬುದನ್ನು ವಿವರಿಸಲು ನಗರಾಭಿವೃದ್ಧಿ ಇಲಾಖೆಯು ಯಾವುದೇ ದತ್ತಾಂಶವನ್ನು ಒದಗಿಸಿಲ್ಲ. ಮೂಲ ವೆಚ್ಚಗಳಿಗೆ ಸಂಬಂಧಿಸಿದಂತೆ ಎರಡು ಪ್ರಮುಖ ಪ್ರಶ್ನೆಗಳನ್ನು ಎತ್ತಿತ್ತು. 2025ರ ದರಗಳ ವೇಳಾಪಟ್ಟಿಯನ್ನು ಆರಂಭದಲ್ಲಿಯೇ ತಪ್ಪಾಗಿ ಲೆಕ್ಕಾಚಾರ ಮಾಡಲಾಗಿತ್ತೇ? ಸಾಮಾನ್ಯವಾಗಿ ಅನುಮತಿಸಲಾದ ಶೇ. 5ರ ಮಿತಿಯನ್ನು ಮೀರಿ ಶೇ.14ಕ್ಕೆ ಹೆಚ್ಚಿಸುವುದನ್ನು ಸಮರ್ಥಿಸುವಷ್ಟು ಕಾರ್ಮಿಕರ ಅಥವಾ ಇಂಧನದ ವೆಚ್ಚಗಳು ನಿಜವಾಗಿಯೂ ಏರಿಕೆಯಾಗಿವೆಯೇ ಎಂದು ಪ್ರಶ್ನೆ ಎತ್ತಿತ್ತು.

ಅದೇ ರೀತಿ ಶೇ. 14ರಷ್ಟು ಹೆಚ್ಚುವರಿ ದರವನ್ನು ಅಂಗೀಕರಿಸುವುದರಿಂದ ವೆಚ್ಚವನ್ನು ನಿಯಂತ್ರಣದಲ್ಲಿಡಲು ರೂಪಿಸಲಾದ ಹಣಕಾಸು ಇಲಾಖೆಯ ನಿಯಮಗಳನ್ನು ನಿರ್ಲಕ್ಷಿಸಿದಂತಾಗುತ್ತದೆ. ನಿಯಮಗಳು ‘ಸ್ಪಷ್ಟವಾಗಿಲ್ಲ’ ಎಂಬ ಕಾರಣ ನೀಡಿ ಇದಕ್ಕೆ ಅನುಮತಿ ನೀಡಿದರೆ, ಇತರ ಇಲಾಖೆಗಳೂ ಬಜೆಟ್ ಮಿತಿಗಳನ್ನು ಉಲ್ಲಂಘಿಸಲು ಇದು ಅಪಾಯಕಾರಿ ನಿದರ್ಶನವಾಗುತ್ತದೆ ಎಂದು ಎಚ್ಚರಿಸಿತ್ತು.

ಶೇ. 14ರ ದರಕ್ಕೆ ಒಪ್ಪಿಗೆ ನೀಡುವ ಮೊದಲು, ‘ಉನ್ನತ ಪ್ರಾಧಿಕಾರ’ ಎಂಬ ಪದದ ಅಧಿಕೃತ ವ್ಯಾಖ್ಯಾನವನ್ನು ಹಣಕಾಸು ಇಲಾಖೆಯಿಂದ ಪಡೆಯಲು ಏಕೆ ಕೋರಲಿಲ್ಲ ಎಂಬುದನ್ನು ಆಡಳಿತ ಇಲಾಖೆಯು ವಿವರಿಸಬೇಕು ಎಂದು ಸೂಚಿಸಿತ್ತು.

ದಾಸರಹಳ್ಳಿಯ ಪ್ಯಾಕೇಜ್ 22ಕ್ಕೆ ಸಂಬಂಧಿಸಿದಂತೆ ಇದು ಕಡ್ಡಾಯವಾದ ಶೇ.5ರ ಮಿತಿಗಿಂತ ಕಡಿಮೆ ಇರುವುದರಿಂದ ಈ ದರವನ್ನು ಆರ್ಥಿಕ ಇಲಾಖೆಯು ಪರಿಗಣಿಸಿತ್ತು. ಉಳಿದ 20 ಪ್ಯಾಕೇಜ್‌ಗಳಿಗೆ ಸಂಬಂಧಿಸಿದಂತೆ, ಅನುಮತಿಸಬಹುದಾದ ಶೇ.5ರ ಮಿತಿಗಿಂತ ಹೆಚ್ಚಿನ ದರದಲ್ಲಿ ಬಿಡ್ ಸಲ್ಲಿಸಿರುವುದಕ್ಕೆ ಸೂಕ್ತ ಕಾರಣಗಳನ್ನು ನಗರಾಭಿವೃದ್ಧಿ ಇಲಾಖೆಯು ನೀಡಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಡೀಸೆಲ್ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲದ ಕಾರಣ, ಇಂಧನ ಬೆಲೆ ಏರಿಕೆ ಮುಂತಾದ ಕಾರಣಗಳನ್ನು ಮುಂದಿಟ್ಟು ನೀಡುವ ಸಮರ್ಥನೆಗಳು ಮಾನ್ಯವಾಗುವುದಿಲ್ಲ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯಿಸಿತ್ತು.

‘ಆದ್ದರಿಂದ ಈ ಬಿಡ್‌ಗಳು ಯಾವುದೇ ಸಮಂಜಸವಾದ ಸಮರ್ಥನೆ ಇಲ್ಲದೆ ಹೆಚ್ಚಿನ ದರದಲ್ಲಿ ಸಲ್ಲಿಕೆಯಾಗಿವೆ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ, ಹಣಕಾಸು ಇಲಾಖೆಯ ಪರವಾಗಿ ಆಡಳಿತ ಇಲಾಖೆಗೆ ಟೆಂಡರ್ ಪ್ರೀಮಿಯಂ ಅನ್ನು ಶೇ.5ಕ್ಕೆ ಮಿತಿಗೊಳಿಸುವಂತೆ ಸೂಚಿಸಬಹುದು. ಬಿಡ್‌ದಾರರು ಇದಕ್ಕೆ ಒಪ್ಪದಿದ್ದಲ್ಲಿ, ಸಂಬಂಧಿತ ಪ್ಯಾಕೇಜ್‌ಗಳಿಗೆ ಮರುಟೆಂಡರ್ ಕರೆಯಬಹುದು,’ ಎಂದು ಆರ್ಥಿಕ ಇಲಾಖೆಯ ಕಾರ್ಯದರ್ಶಿ ಎಸ್.ಎಸ್.ನಕುಲ್ ಅವರು ಅಭಿಪ್ರಾಯಪಟ್ಟಿರುವುದು ಟಿಪ್ಪಣಿಯಿಂದ ಗೊತ್ತಾಗಿದೆ. ಇದೇ ಅಭಿಪ್ರಾಯವನ್ನು ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಿತೀಶ್ ಕುಮಾರ್ ಸಿಂಗ್ ಅವರು ಅನುಮೋದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ. ಮಹಾಂತೇಶ್

contributor