ಸೌದಿ ವಿಮಾನ ನಿಲ್ದಾಣಗಳ ಮೇಲೆ ಹೌತಿಗಳ ಸರಣಿ ದಾಳಿ : ಏರ್ಪೋರ್ಟ್ಗಳೇ ಟಾರ್ಗೆಟ್ ಆಗಿದ್ದೇಕೆ?
ಇರಾನ್ ಸಂಧಾನದ ಅಸಲಿ ಉದ್ದೇಶವೇನು?
Photo Credit : X
ಯೆಮೆನ್‌ನಲ್ಲಿ ಕದನ ವಿರಾಮ ಮುರಿದುಬಿದ್ದ ಬೆನ್ನಲ್ಲೇ ಹೌತಿ ಬಂಡುಕೋರರು ಸೌದಿ ಅರೇಬಿಯಾದ ನಾಗರಿಕ ವಿಮಾನ ನಿಲ್ದಾಣಗಳ ಮೇಲೆ ಸರಣಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ತೀವ್ರಗೊಳಿಸಿದ್ದಾರೆ.
ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ಭೀಕರ ದಾಳಿಯಲ್ಲಿ ಹದಿನಾಲ್ಕು ಜನರು ಮೃತಪಟ್ಟು, ಮುನ್ನೂರಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ. ಮೃತರ ಪೈಕಿ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಫೆಲೆಸ್ತೀನ್ ಪ್ರಜೆಗಳು ಸೇರಿದ್ದಾರೆ.
ಸೌದಿ ರಾಜಧಾನಿಯ ವಿಮಾನ ನಿಲ್ದಾಣ ಮಾತ್ರವಲ್ಲದೆ ದಮ್ಮಾಮ್, ಅಭಾ, ಜಿಜಾನ್ ಮತ್ತು ನಜ್ರಾನ್ ನಗರಗಳ ವಿಮಾನ ನಿಲ್ದಾಣಗಳ ಮೇಲೂ ಹೌತಿಗಳು ದಾಳಿ ನಡೆಸಿದ್ದಾರೆ. ಈ ವಿದ್ಯಮಾನವು ಕಳೆದ ಒಂದು ದಶಕದಲ್ಲಿ ಸೌದಿ ನೆಲದ ಮೇಲೆ ನಡೆದ ಅತ್ಯಂತ ಮಾರಕ ದಾಳಿಯಾಗಿದ್ದು, ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ತೀವ್ರ ಹಿನ್ನಡೆ ಉಂಟುಮಾಡಿದೆ.
ದಾಳಿಗಳ ಪರಿಣಾಮವಾಗಿ ರಾಜಧಾನಿ ರಿಯಾದ್‌ನಲ್ಲಿ ವಿಮಾನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜರ್ಮನಿಯ ಲುಫ್ಥಾನ್ಸಾ ಮತ್ತು ಏರ್ ಫ್ರಾನ್ಸ್-ಕೆಎಲ್ಎಂ ಸೇರಿದಂತೆ ಪ್ರಮುಖ ಜಾಗತಿಕ ವಿಮಾನಯಾನ ಸಂಸ್ಥೆಗಳು ರಿಯಾದ್‌ಗೆ ತೆರಳುವ ವಿಮಾನಗಳನ್ನು ರದ್ದುಗೊಳಿಸಿವೆ. ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್ ಮತ್ತು ಜರ್ಮನಿ ದೇಶಗಳು ತಮ್ಮ ಪ್ರಜೆಗಳಿಗೆ ರಿಯಾದ್ ಪ್ರವಾಸ ಮಾಡದಂತೆ ಎಚ್ಚರಿಕೆ ನೀಡಿವೆ.
ವಿಶ್ವ ಪೆಟ್ರೋಲಿಯಂ ಕಾಂಗ್ರೆಸ್ ಮತ್ತು ಫ್ಯೂಚರ್ ಇನ್ವೆಸ್ಟ್‌ಮೆಂಟ್ ಇನಿಶಿಯೇಟಿವ್‌ನಂತಹ ಮಹತ್ವದ ಅಂತಾರಾಷ್ಟ್ರೀಯ ಹೂಡಿಕೆ ಸಮಾವೇಶಗಳನ್ನು ಸೌದಿ ಅರೇಬಿಯಾ ಆಯೋಜಿಸುತ್ತಿರುವ ಸಂದರ್ಭದಲ್ಲೇ ಈ ದಾಳಿಗಳು ಸಂಭವಿಸಿವೆ. 2032ರ ಫಿಫಾ ವಿಶ್ವಕಪ್ ಆಯೋಜನೆಗೆ ಸಿದ್ಧತೆ ನಡೆಸುತ್ತಿರುವ ಸೌದಿ ಅರೇಬಿಯಾದ ಸುರಕ್ಷತೆಯ ಭರವಸೆಗೆ ಇದು ದೊಡ್ಡ ಸವಾಲಾಗಿದೆ.
ಈ ಪ್ರಸ್ತುತ ಸಂಘರ್ಷಕ್ಕೆ ಸೌದಿ ಬೆಂಬಲಿತ ಯೆಮೆನ್ ಸರಕಾರಿ ಪಡೆಗಳು ಆರಂಭಿಸಿದ ‘ಆಪರೇಷನ್ ಡಾನ್ ಆಫ್ ಯೆಮೆನ್’ ಪ್ರಮುಖ ಕಾರಣವಾಗಿದೆ. ಹೌತಿಗಳ ವಶದಲ್ಲಿರುವ ಸನಾ ಮತ್ತು ಇತರ ಪ್ರದೇಶಗಳನ್ನು ಮರುವಶಪಡಿಸಿಕೊಳ್ಳಲು ಸರಕಾರಿ ಪಡೆಗಳು ಈ ಕಾರ್ಯಾಚರಣೆ ರೂಪಿಸಿವೆ. ಪ್ರಮುಖ ವ್ಯಾಪಾರ ಮಾರ್ಗವಾದ ಬಾಬ್ ಅಲ್-ಮಂದಬ್ ಜಲಸಂಧಿ, ಮೊಖಾ ಮತ್ತು ಧುಬಾಬ್ ಕರಾವಳಿ ಪ್ರದೇಶಗಳಲ್ಲಿ ಭೀಕರ ಕದನ ನಡೆಯುತ್ತಿದೆ ಎಂದು ವರದಿಯಾಗಿದೆ.
ಯೆಮೆನ್ ಪಡೆಗಳು ಹೌತಿ ನಿಯಂತ್ರಣದಲ್ಲಿರುವ ಸನಾ ವಿಮಾನ ನಿಲ್ದಾಣದ ಏಕೈಕ ರನ್‌ವೇ ಮೇಲೆ ಬಾಂಬ್ ದಾಳಿ ನಡೆಸಿ ನಾಶಪಡಿಸಿದೆ. ಜೊತೆಗೆ ಕೆಂಪು ಸಮುದ್ರ ತೀರದ ಹುದೈದಾ ವಿಮಾನ ನಿಲ್ದಾಣವನ್ನೂ ಗುರಿಯಾಗಿಸಲಾಗಿದೆ. ಈ ವಿಮಾನ ನಿಲ್ದಾಣಗಳು ಇರಾನ್ ಜತೆ ಸಂಪರ್ಕ ಕಲ್ಪಿಸಲು ಬಳಕೆಯಾಗುತ್ತಿವೆ ಎಂಬುದು ಸೌದಿ ಮೈತ್ರಿಕೂಟದ ಆರೋಪವಾಗಿದೆ.
ತಮ್ಮ ನಿಯಂತ್ರಣದಲ್ಲಿರುವ ಸಾರಿಗೆ ಮೂಲಸೌಕರ್ಯಗಳ ಮೇಲಿನ ದಾಳಿಗೆ ಪ್ರತಿಯಾಗಿ ಹೌತಿಗಳು ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿದ್ದಾರೆ. ಸೌದಿ ನೆಲದ ಪ್ರಮುಖ ನಾಗರಿಕ ಕೇಂದ್ರಗಳನ್ನು ಹೊಡೆಯುವ ಮೂಲಕ ರಿಯಾದ್ ಆಡಳಿತದ ಮೇಲೆ ಗರಿಷ್ಠ ರಾಜಕೀಯ ಮತ್ತು ಆರ್ಥಿಕ ಒತ್ತಡ ಹೇರುವುದು ಅವರ ತಂತ್ರವಾಗಿದೆ. ನಾಗರಿಕ ವಿಮಾನ ಸಂಚಾರವನ್ನು ಸ್ಥಗಿತಗೊಳಿಸುವುದರಿಂದ ಜಾಗತಿಕ ಮಟ್ಟದಲ್ಲಿ ವ್ಯಾಪಕ ಸಾರ್ವಜನಿಕ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬ ಲೆಕ್ಕಾಚಾರ ಹೌತಿಗಳಲ್ಲಿದೆ ಎಂದು aljazeera.com ವರದಿ ಮಾಡಿದೆ.
ಮುಂದಿನ ದಿನಗಳಲ್ಲಿ ತೈಲ ಕೊಳವೆಮಾರ್ಗಗಳು ಮತ್ತು ಇಂಧನ ಸಂಸ್ಕರಣಾಗಾರಗಳ ಮೇಲೂ ದಾಳಿ ಮುಂದುವರಿಸುವ ಸಾಧ್ಯತೆಗಳನ್ನು ಯುದ್ಧ ವಿಶ್ಲೇಷಕರು ಗುರುತಿಸಿದ್ದಾರೆ. ಯಾವುದೇ ಷರತ್ತುಗಳಿಲ್ಲದೆ ಸೌದಿ ಆಡಳಿತದಿಂದ ಹೆಚ್ಚಿನ ರಿಯಾಯಿತಿಗಳನ್ನು ಪಡೆಯುವುದು ಹೌತಿಗಳ ಮುಖ್ಯ ಉದ್ದೇಶ ಎಂದೂ aljazeera.com ವರದಿ ಮಾಡಿದೆ.
ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ ಇರಾನ್ ರಾಜತಾಂತ್ರಿಕ ಮಧ್ಯಸ್ಥಿಕೆಗೆ ಮುಂದಾಗಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಸೌದಿ ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಮಿಲಿಟರಿ ಕ್ರಮದಿಂದ ಬಿಕ್ಕಟ್ಟು ಇನ್ನಷ್ಟು ಜಟಿಲವಾಗಲಿದ್ದು, ರಾಜಕೀಯ ಸಂಧಾನದ ಅಗತ್ಯವಿದೆ ಎಂದು ಟೆಹ್ರಾನ್ ಎಚ್ಚರಿಸಿದೆ.
ಇರಾನ್‌ನ ವಿದೇಶಾಂಗ ವಕ್ತಾರ ಎಸ್ಮಾಯಿಲ್ ಬಘಾಯಿ ಕೂಡ ಮುಸ್ಲಿಂ ರಾಷ್ಟ್ರಗಳ ನಡುವಿನ ಯುದ್ಧ ನಿಲ್ಲಬೇಕೆಂದು ಪ್ರತಿಪಾದಿಸಿದ್ದಾರೆ. ಯೆಮೆನ್ ಸಂಘರ್ಷವು ಪ್ರಾದೇಶಿಕ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದ್ದು, ಮಾತುಕತೆ ಮೂಲಕವೇ ಬಿಕ್ಕಟ್ಟು ಶಮನಗೊಳಿಸಬೇಕು ಎಂಬ ನಿಲುವನ್ನು ಇರಾನ್ ತಳೆದಿದೆ.
ಇರಾನ್‌ನ ಈ ಸಂಧಾನದ ಆಫರ್ ಹಿಂದೆ ಪ್ರಾದೇಶಿಕ ಭೌಗೋಳಿಕ ರಾಜಕೀಯ ಹಿತಾಸಕ್ತಿ ಅಡಗಿದೆ. ಹೌತಿಗಳಿಗೆ ಶಸ್ತ್ರಾಸ್ತ್ರ ಮತ್ತು ಹಣಕಾಸು ನೆರವು ನೀಡುತ್ತಿರುವ ಟೆಹ್ರಾನ್, ಈ ಬಿಕ್ಕಟ್ಟನ್ನು ರಾಜತಾಂತ್ರಿಕ ಶಕ್ತಿಯಾಗಿ ಪರಿವರ್ತಿಸಲು ಬಯಸುತ್ತಿದೆ. ಅಮೆರಿಕ ಮತ್ತು ಇಸ್ರೇಲ್ ಜತೆಗಿನ ಸಂಘರ್ಷದ ಹಿನ್ನೆಲೆಯಲ್ಲಿ ಗಲ್ಫ್ ಪ್ರದೇಶದಲ್ಲಿ ಹೊಸ ಶತ್ರುತ್ವ ಬೆಳೆಯುವುದನ್ನು ತಪ್ಪಿಸುವುದು ಇರಾನ್ ಉದ್ದೇಶವಾಗಿದೆ. ಅಮೆರಿಕ ವಿಧಿಸಿರುವ ಕಠಿಣ ಆರ್ಥಿಕ ನಿರ್ಬಂಧಗಳ ಮಧ್ಯೆ, ಹಾರ್ಮುಝ್ ಜಲಸಂಧಿ ಮತ್ತು ಪ್ರಾದೇಶಿಕ ಭದ್ರತಾ ಒಪ್ಪಂದಗಳಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಇರಾನ್ ಈ ಬಿಕ್ಕಟ್ಟನ್ನು ಬಳಸಿಕೊಳ್ಳುತ್ತಿದೆ. ಸೌದಿ ಅರೇಬಿಯಾ ಮತ್ತು ಅಮೆರಿಕ ನಡುವಿನ ಭದ್ರತಾ ಮೈತ್ರಿಯ ಅಂತರವನ್ನು ಬಳಸಿಕೊಳ್ಳುವ ಇರಾದೆಯೂ ಇದರಲ್ಲಿದೆ ಎಂದು ವರದಿಯಾಗಿದೆ.
ಬಾಬ್ ಅಲ್-ಮಂದಬ್ ಮತ್ತು ತೈಜ್ ಪ್ರಾಂತ್ಯಗಳಲ್ಲಿ ಸಾಧಿಸಿರುವ ಸೇನಾ ಹಿಡಿತವು ತಮ್ಮ ಸಂಧಾನದ ಬಲವನ್ನು ಹೆಚ್ಚಿಸಿದೆ ಎಂದು ಹೌತಿಗಳು ನಂಬಿದ್ದಾರೆ. ಇರಾನ್ ರಾಜತಾಂತ್ರಿಕ ನೆರವು ನೀಡಬಹುದಾದರೂ, ಯುದ್ಧಭೂಮಿಯಲ್ಲಿ ಗಳಿಸಿದ ಪ್ರದೇಶಗಳನ್ನು ಬಿಟ್ಟುಕೊಡುವಂತೆ ಹೌತಿಗಳಿಗೆ ಆದೇಶಿಸಲು ಅದಕ್ಕೂ ಸಾಧ್ಯವಿಲ್ಲ. ಪ್ರಾದೇಶಿಕ ಭದ್ರತೆಯನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಈ ವಿದ್ಯಮಾನಗಳು ನೀಡುತ್ತಿವೆ.
ಯೆಮೆನ್‌ನಲ್ಲಿ 2022ರಲ್ಲಿ ಏರ್ಪಟ್ಟಿದ್ದ ವಿಶ್ವಸಂಸ್ಥೆ ಪ್ರಾಯೋಜಿತ ಕದನ ವಿರಾಮ ಸಂಪೂರ್ಣವಾಗಿ ಕುಸಿದಿದೆ. ವಿಶ್ವಸಂಸ್ಥೆಯ ವಿಶೇಷ ರಾಯಭಾರಿ ಹಾನ್ಸ್ ಗ್ರುಂಡ್‌ಬರ್ಗ್ ದೇಶವು ಮತ್ತೆ ಪೂರ್ಣ ಪ್ರಮಾಣದ ಅಂತರ್ಯುದ್ಧಕ್ಕೆ ಮರಳಿದೆ ಎಂದು ಘೋಷಿಸಿದ್ದಾರೆ. ಸೌದಿ ಬೆಂಬಲಿತ ಪಡೆಗಳು ಯೆಮೆನ್‌ನ ವಿಮಾನ ನಿಲ್ದಾಣಗಳ ಮೇಲೆ ದಾಳಿ ಮುಂದುವರಿಸಿದರೆ, ಸೌದಿ ನಗರಗಳ ಮೇಲಿನ ಕ್ಷಿಪಣಿ ದಾಳಿ ನಿಲ್ಲುವ ಸಾಧ್ಯತೆಗಳಿಲ್ಲ. ವಿಮಾನ ನಿಲ್ದಾಣಗಳನ್ನು ಗುರಿಯಾಗಿಸುವ ಮೂಲಕ ಆರಂಭವಾಗಿರುವ ಈ ಹೊಸ ಹಂತದ ಯುದ್ಧವು ಕೆಂಪು ಸಮುದ್ರದ ಜಾಗತಿಕ ಹಡಗು ಸಂಚಾರ ಮತ್ತು ಮಧ್ಯಪ್ರಾಚ್ಯದ ಒಟ್ಟಾರೆ ಆರ್ಥಿಕ ಸ್ಥಿರತೆಯನ್ನು ನೇರ ಅಪಾಯಕ್ಕೆ ತಳ್ಳಿದೆ.
ಕೃಪೆ: aljazeera.com