ರಾಹುಲ್ ಗಾಂಧಿ , ಸುಪ್ರೀಂ ಕೋರ್ಟ್‌ | Photo Credit : PTI 

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರ ವಿರೋಧ ಪಕ್ಷದ ಮುಖಂಡರು ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣಾ ಪ್ರಕ್ರಿಯೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಖ್ಯಾತ ಸಾಂವಿಧಾನಿಕ ತಜ್ಞ ಮತ್ತು ಕಾನೂನು ಪ್ರಾಧ್ಯಾಪಕ ಪ್ರೊ. ಫೈಝಾನ್ ಮುಸ್ತಫಾ ಅವರು ತಮ್ಮ ‘ಲೀಗಲ್ ಅವೇರ್‌ನೆಸ್ ವೆಬ್ ಸೀರೀಸ್’ನಲ್ಲಿ ಈ ಅರ್ಜಿಯ ವಸ್ತುಸ್ಥಿತಿ, ಅದರ ಕಾನೂನು ಮೌಲ್ಯ, ಪ್ರಸ್ತಾಪಿಸಲಾಗಿರುವ ಸಾಂವಿಧಾನಿಕ ಪ್ರಶ್ನೆಗಳು ಮತ್ತು ನ್ಯಾಯಾಲಯದಲ್ಲಿ ಇದರ ಸಂಭವನೀಯ ಪರಿಣಾಮಗಳ ಕುರಿತು ಆಳವಾದ ವಿಶ್ಲೇಷಣೆ ನಡೆಸಿದ್ದಾರೆ. ಈ ಅರ್ಜಿಯ ತಿರುಳು ಕೇವಲ ರಾಜಕೀಯ ವಿವಾದವಾಗಿರದೆ, ಸಾಂವಿಧಾನಿಕ ಸಂಸ್ಥೆಯೊಂದರ ಆಂತರಿಕ ಕಾರ್ಯವಿಧಾನ ಮತ್ತು ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಮತದಾರರ ಪಟ್ಟಿಯ ಪಾವಿತ್ರ್ಯತೆಯ ಪ್ರಶ್ನೆಯಾಗಿದೆ ಎಂದು ಅವರು ಹೇಳುತ್ತಾರೆ.

ರಾಹುಲ್ ಗಾಂಧಿ ಈ ಹಿಂದೆ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಜ್ಞಾಪಕ ಪತ್ರ ಸಲ್ಲಿಸಲು ಪ್ರಯತ್ನಿಸಿದ್ದರು. ಆದರೆ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ಅಂತಹ ಜ್ಞಾಪಕ ಪತ್ರ ನೀಡುವ ಯಾವುದೇ ಅಧಿಕೃತ ಸಂಪ್ರದಾಯ ಅಥವಾ ಕಾರ್ಯವಿಧಾನವಿಲ್ಲ ಎಂದು ಸಿಜೆಐ ಸ್ಪಷ್ಟಪಡಿಸಿದ್ದರು. ನ್ಯಾಯಾಂಗದಿಂದ ಪರಿಹಾರವನ್ನು ಬಯಸುವುದಾದರೆ ಸುಪ್ರೀಂ ಕೋರ್ಟ್‌ನ ಅಧಿಕಾರ ವ್ಯಾಪ್ತಿಯನ್ನು ಬಳಸಿ ವಿಧ್ಯುಕ್ತವಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಈ ರಿಟ್ ಅರ್ಜಿಯನ್ನು ಸಲ್ಲಿಸಲಾಗಿದೆ. ನಲ್ಸಾರ್ ಕಾನೂನು ವಿಶ್ವವಿದ್ಯಾಲಯದ ಪದವೀಧರ ಪ್ರಸನ್ನ ಎಸ್. ಅವರು ಈ ಅರ್ಜಿಯನ್ನು ಸಿದ್ಧಪಡಿಸಿದ್ದು, ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ನ್ಯಾಯಾಲಯದಲ್ಲಿ ಅರ್ಜಿದಾರರ ಪರವಾಗಿ ವಾದ ಮಂಡಿಸುವ ನಿರೀಕ್ಷೆ ಇದೆ. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಸೇರಿದಂತೆ ಪ್ರಮುಖ ವಿಪಕ್ಷ ಮುಖಂಡರು ಈ ಹೋರಾಟದಲ್ಲಿ ಕೈಜೋಡಿಸಿದ್ದಾರೆ.

ಅರ್ಜಿಯ ಮೂಲ ಆಶಯ ಮತ್ತು ಆಯೋಗದ ಆಂತರಿಕ ಭಿನ್ನಾಭಿಪ್ರಾಯ

ಈ ಅರ್ಜಿಯ ಪ್ರಮುಖ ಕಾನೂನು ಸೂಕ್ಷ್ಮತೆಯನ್ನು ವಿವರಿಸುವ ಪ್ರೊ. ಮುಸ್ತಫಾ, ರಾಹುಲ್ ಗಾಂಧಿ ಅವರು ಈ ಹಿಂದೆ ಬಿಹಾರದ ಎಸ್‌ಐಆರ್ ಕುರಿತು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಎಲ್ಲೂ ಪ್ರಶ್ನಿಸುತ್ತಿಲ್ಲ ಎಂಬುದು ಗಮನಾರ್ಹ ಅಂಶ ಎಂದಿದ್ದಾರೆ. ಬಿಹಾರ ತೀರ್ಪನ್ನು ಸವಾಲು ಮಾಡದೆ, ದೇಶಾದ್ಯಂತ ಮತದಾರರ ಪಟ್ಟಿಯಿಂದ ನಡೆದಿರುವ ಬೃಹತ್ ಪ್ರಮಾಣದ ಹೆಸರುಗಳ ಅಳಿಸುವಿಕೆ ಮತ್ತು ಆಯೋಗದಲ್ಲಿ ನಡೆದಿರುವ ಆಡಳಿತಾತ್ಮಕ ಅಕ್ರಮಗಳ ವಿರುದ್ಧ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಅರ್ಜಿಯು ಪ್ರಮುಖವಾಗಿ ಚುನಾವಣಾ ಆಯೋಗದ ಆಂತರಿಕ ಪ್ರಕ್ರಿಯೆಗಳು ಹೇಗೆ ಕುಸಿದುಬಿದ್ದಿವೆ ಎಂಬುದನ್ನು ಬಯಲಿಗೆಳೆದಿದೆ.

ಕಳೆದ 10 ರಿಂದ 11 ತಿಂಗಳುಗಳಲ್ಲಿ ಸುಮಾರು 14 ಬಾರಿ ಇತರ ಇಬ್ಬರು ಚುನಾವಣಾ ಆಯುಕ್ತರು ಮುಖ್ಯ ಚುನಾವಣಾ ಆಯುಕ್ತರ ನಿರ್ಧಾರಗಳಿಗೆ ತೀವ್ರ ವಿರೋಧ ಅಥವಾ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ ಎಂಬುದು ಅರ್ಜಿಯಲ್ಲಿ ಮಾಡಲಾದ ಅತ್ಯಂತ ಗಂಭೀರ ಆಪಾದನೆಯಾಗಿದೆ. ಚುನಾವಣಾ ಆಯೋಗದ ಕಾಯ್ದೆ ಮತ್ತು ಸಾಂವಿಧಾನಿಕ ನಿಯಮಗಳ ಪ್ರಕಾರ, ಆಯೋಗದಲ್ಲಿ ಯಾವುದೇ ಭಿನ್ನಾಭಿಪ್ರಾಯ ತಲೆದೋರಿದಾಗ ಬಹುಮತದ ನಿರ್ಧಾರವೇ ಮಾನ್ಯವಾಗಬೇಕಿರುತ್ತದೆ. ಇಬ್ಬರು ಆಯುಕ್ತರು ಒಂದು ನಿಲುವು ತೆಗೆದುಕೊಂಡು, ಸಿಇಸಿ ವಿರುದ್ಧ ನಿಲುವು ಹೊಂದಿದ್ದರೆ, ಬಹುಮತದ ನಿಲುವೇ ಆಯೋಗದ ಅಧಿಕೃತ ನಿರ್ಧಾರವಾಗಬೇಕು. ಆದರೆ ಮುಖ್ಯ ಚುನಾವಣಾ ಆಯುಕ್ತರು ಸರ್ವಾನುಮತ ಅಥವಾ ಬಹುಮತವಿಲ್ಲದೆ, ಇತರ ಆಯುಕ್ತರ ಸಮ್ಮತಿಯನ್ನು ಪಡೆಯದೆ ಏಕಪಕ್ಷೀಯವಾಗಿ ಆದೇಶಗಳನ್ನು ಹೊರಡಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆಪಾದಿಸಲಾಗಿದೆ. ಆಯುಕ್ತರಾದ ಜೋಷಿ ಮತ್ತು ಸಂಧು ಅವರು ಸಭೆಯ ಅಜೆಂಡಾಗಳನ್ನು ಮುಂಚಿತವಾಗಿ ಹಂಚಿಕೊಳ್ಳುತ್ತಿಲ್ಲ ಮತ್ತು ಸಭೆಯ ನಡಾವಳಿಗಳನ್ನು ದಾಖಲಿಸಿ ಹಂಚುತ್ತಿಲ್ಲ ಎಂದು ಕ್ಯಾಬಿನೆಟ್ ಕಾರ್ಯದರ್ಶಿಗೆ ದೂರು ನೀಡಿದ್ದನ್ನು ಪ್ರೊ. ಫೈಝಾನ್ ಮುಸ್ತಫಾ ಉಲ್ಲೇಖಿಸಿದ್ದಾರೆ.

‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ಪತ್ರಕರ್ತೆ ರಿತಿಕಾ ಚೋಪ್ರಾ ಅವರ ತನಿಖಾ ವರದಿಯ ನಂತರ ಆಯೋಗವು ಸೆಪ್ಟೆಂಬರ್ 26 ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯು ಪರೋಕ್ಷವಾಗಿ ತನ್ನ ತಪ್ಪುಗಳನ್ನು ಒಪ್ಪಿಕೊಂಡಂತಿದೆ ಎಂದು ಪ್ರೊ. ಮುಸ್ತಫಾ ವಿಶ್ಲೇಷಿಸುತ್ತಾರೆ. ವರದಿಯಲ್ಲಿ ಎತ್ತಲಾದ ಹಲವು ಗಂಭೀರ ಪ್ರಶ್ನೆಗಳಿಗೆ ಸಮಜಾಯಿಷಿ ನೀಡಲು ಯತ್ನಿಸಿದ ಆಯೋಗ, ಇನ್ಮುಂದೆ ಅಜೆಂಡಾ ರೂಪಿಸಲಾಗುವುದು ಮತ್ತು ಮಿನಿಟ್ಸ್ ಹಂಚಿಕೊಳ್ಳಲಾಗುವುದು ಎಂದು ಹೇಳುವ ಮೂಲಕ ಈ ಹಿಂದೆ ಅಂತಹ ನಿಯಮ ಪಾಲನೆಯಾಗುತ್ತಿರಲಿಲ್ಲ ಎಂಬುದನ್ನು ಒಪ್ಪಿಕೊಂಡಿದೆ. ದೆಹಲಿಯಲ್ಲಿ ಸುಮಾರು 20 ಲಕ್ಷ ಜನರ ಹೆಸರುಗಳು ಮತದಾರರ ಪಟ್ಟಿಯಿಂದ ಹೊರ ಗುಳಿಸಿ, ನಂತರ ಆತುರಾತುರವಾಗಿ ಸೇರಿಸಲಾಗುತ್ತಿದೆ ಎಂಬ ವರದಿಗಳನ್ನೂ ಪ್ರೊ. ಮುಸ್ತಫಾ ಪ್ರಸ್ತಾಪಿಸುತ್ತಾರೆ.

ಮತದಾರರ ಪಟ್ಟಿಯ ಸಮಗ್ರತೆಯು ನಿಷ್ಪಕ್ಷಪಾತವಾಗಿರಬೇಕು; ಸೂಕ್ತ ಕಾನೂನು ಪ್ರಕ್ರಿಯೆಯಿಲ್ಲದೆ ಹೆಸರುಗಳನ್ನು ತೆಗೆದುಹಾಕುವುದು ಎಷ್ಟು ತಪ್ಪೋ, ಅದೇ ರೀತಿ ನಿಯಮಬಾಹಿರವಾಗಿ ಹೆಸರುಗಳನ್ನು ಸೇರಿಸುವುದೂ ಅಷ್ಟೇ ತಪ್ಪು. ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಹೆಸರುಗಳು ಮತ್ತು ನಿರ್ದಿಷ್ಟ ಸಮುದಾಯಗಳ ಹೆಸರುಗಳು ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೊರಗುಳಿದಿರುವುದು ಗಂಭೀರ ಕಳವಳಕ್ಕೆ ಕಾರಣವಾಗಿದೆ ಎಂದು ಪ್ರೊ. ಮುಸ್ತಫಾ ಹೇಳುತ್ತಾರೆ.

ಫಾರ್ಮ್ 6, ಕೇಂದ್ರೀಕೃತ ಸಾಫ್ಟ್‌ವೇರ್ ಮತ್ತು ಆರ್‌ಟಿಐ ದಾಖಲೆಗಳ ಕಾನೂನು ಮಹತ್ವ

ಹೊಸ ಮತದಾರರ ನೋಂದಣಿಗೆ ಬಳಸುವ ‘ಫಾರ್ಮ್ 6’ ಗೆ ತರಲಾದ ಬದಲಾವಣೆಗಳನ್ನು ರಾಹುಲ್ ಗಾಂಧಿ ಅವರ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. 1960ರ ಮತದಾರರ ನೋಂದಣಿ ನಿಯಮಗಳಿಗೆ ಯಾವುದೇ ಸಾಂವಿಧಾನಿಕ ತಿದ್ದುಪಡಿ ತರದೆ ಈ ಫಾರ್ಮ್‌ನಲ್ಲಿ ಇಂತಹ ಕಠಿಣ ಷರತ್ತುಗಳನ್ನು ಹೇಗೆ ಸೇರಿಸಲಾಯಿತು ಎಂದು ಕೇಳಲಾಗಿದೆ. ಈ ಫಾರ್ಮ್ ಅನ್ನು ಸುಪ್ರೀಂ ಕೋರ್ಟ್ ಈಗಾಗಲೇ ಅನುಮೋದಿಸಿದೆ ಎಂಬಂತೆ ಚುನಾವಣಾ ಆಯೋಗ ಬಿಂಬಿಸಲು ಯತ್ನಿಸಿತ್ತು. ಆದರೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, ಬಿಹಾರ ತೀರ್ಪಿನ ಸಂದರ್ಭದಲ್ಲಿದ್ದ ಫಾರ್ಮ್ ಬೇರೆ, ಜುಲೈನಲ್ಲಿ ತರಲಾದ ಹೊಸ ಫಾರ್ಮ್ ಅನ್ನು ಸುಪ್ರೀಂ ಕೋರ್ಟ್ ಪರೀಕ್ಷಿಸಿಲ್ಲ, ಅದನ್ನು ಮಾನ್ಯ ಎಂದಾಗಲೀ ಅಮಾನ್ಯ ಎಂದಾಗಲೀ ಘೋಷಿಸಿಲ್ಲ ಎಂದು ಸ್ಪಷ್ಟಪಡಿಸಿದ್ದನ್ನು ಪ್ರೊ. ಮುಸ್ತಫಾ ನೆನಪಿಸುತ್ತಾರೆ. ಹೊಸ ಫಾರ್ಮ್‌ನಲ್ಲಿ ಮೊದಲ ಬಾರಿಗೆ ಮತದಾರರಾಗುವ ಯುವಜನರಿಂದ ಅವರ ಪೋಷಕರು ಮತ್ತು ಅಜ್ಜ-ಅಜ್ಜಿಯರ ದಾಖಲೆಗಳನ್ನು ಕೇಳಲಾಗುತ್ತಿದ್ದು, ಇದು ಹೊಸ ಮತದಾರರ ನೋಂದಣಿಗೆ ಅನಗತ್ಯ ತೊಡಕುಗಳನ್ನು ಸೃಷ್ಟಿಸುತ್ತಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಚುನಾವಣಾ ಆಯೋಗದ ಕೇಂದ್ರೀಕೃತ ತಂತ್ರಜ್ಞಾನ ವ್ಯವಸ್ಥೆಯಾದ 'ECI-Net' ಮತ್ತು 'ERONet' ಕಾರ್ಯವೈಖರಿಯನ್ನು ಅರ್ಜಿಯಲ್ಲಿ ಕಟುವಾಗಿ ಆಕ್ಷೇಪಿಸಲಾಗಿದೆ. ಈ ಹಿಂದೆ ಮತದಾರರ ಪಟ್ಟಿಯ ಮೇಲೆ ಒಂದೇ ಕೇಂದ್ರೀಕೃತ ನಿಯಂತ್ರಣ ಇರಲಿಲ್ಲ. ಆದರೆ ಹೊಸ ಸಾಫ್ಟ್‌ವೇರ್ ಮೂಲಕ ದೆಹಲಿಯ ಐಟಿ ವಿಭಾಗದಿಂದಲೇ ಇಡೀ ದೇಶದ ಮತದಾರರ ಪಟ್ಟಿಯನ್ನು ನಿಯಂತ್ರಿಸಲಾಗುತ್ತಿದೆ. ಇದು ಸ್ಥಳೀಯ ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಕಾನೂನುಬದ್ಧವಾಗಿ ಇರುವ ಶಾಸನಬದ್ಧ ಅಧಿಕಾರವನ್ನು ಕಸಿದುಕೊಂಡಿದೆ ಎಂದು ಪ್ರೊ. ಮುಸ್ತಫಾ ವಿವರಿಸುತ್ತಾರೆ. ಗೋವಾ ಸೇರಿದಂತೆ ಹಲವು ರಾಜ್ಯಗಳ ಉದಾಹರಣೆಗಳನ್ನು ನೀಡಿರುವ ಅವರು, ಸ್ಥಳೀಯ ಅಧಿಕಾರಿಯು ಒಬ್ಬ ವ್ಯಕ್ತಿಯ ಹೆಸರನ್ನು ಸೇರಿಸಲು ಅರ್ಹವೆಂದು ದೃಢಪಡಿಸಿದರೂ, ದೆಹಲಿಯ ಕೇಂದ್ರೀಕೃತ ಸಾಫ್ಟ್‌ವೇರ್ ಹಂತದಲ್ಲಿ ಅದನ್ನು ಅನುಮೋದಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಜೊತೆಗೆ, ಯಾರೋ ಒಬ್ಬ ಅಪರಿಚಿತ ವ್ಯಕ್ತಿಯು ನೂರಾರು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಆನ್‌ಲೈನ್ ಮೂಲಕ ಆಕ್ಷೇಪಣೆ ಅರ್ಜಿ ಸಲ್ಲಿಸುವಂತಹ ಗಂಭೀರ ಲೋಪಗಳು ನಡೆದಿವೆ. ನಂತರ ಆಯೋಗವು ಇದಕ್ಕೆ ಮಿತಿ ಹೇರಿದ್ದರೂ, ಅಷ್ಟರಲ್ಲಾಗಲೇ ಹಾನಿ ಸಂಭವಿಸಿದೆ.

ಈ ಇಡೀ ಪ್ರಕರಣದಲ್ಲಿ ಅತ್ಯಂತ ಸ್ಫೋಟಕ ಕಾನೂನು ಆಧಾರವೆಂದರೆ ಮಾಹಿತಿ ಹಕ್ಕು ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಪಡೆದಿರುವ ದಾಖಲೆ ಎಂದು ಪ್ರೊ. ಮುಸ್ತಫಾ ಒತ್ತಿಹೇಳುತ್ತಾರೆ. 2025ರ ಜೂನ್ 24ರಂದು ದೇಶಾದ್ಯಂತ ಎಸ್‌ಐಆರ್ ಜಾರಿಗೊಳಿಸಲು ತೆಗೆದುಕೊಂಡ ತೀರ್ಮಾನದ ಕಡತವನ್ನು ಅಂಜಲಿ ಭಾರದ್ವಾಜ್ ಕೇಳಿದ್ದರು. ಆದರೆ ಆಯೋಗದ ಪ್ರಥಮ ಮೇಲ್ಮನವಿ ಪ್ರಾಧಿಕಾರವೇ ನೀಡಿದ ಲಿಖಿತ ಉತ್ತರದಲ್ಲಿ, "2025ರಲ್ಲಿ ದೇಶಾದ್ಯಂತ ಎಸ್‌ಐಆರ್ ನಡೆಸುವ ಯಾವುದೇ ಅಧಿಕೃತ ನಿರ್ಧಾರವನ್ನು ಚುನಾವಣಾ ಆಯೋಗ ತೆಗೆದುಕೊಂಡಿಲ್ಲ" ಎಂದು ಸ್ಪಷ್ಟವಾಗಿ ತಿಳಿಸಿದೆ. ಪ್ರೊ. ಮುಸ್ತಫಾ ಅವರ ವಿಶ್ಲೇಷಣೆಯಂತೆ, ಅಧಿಕೃತ ಆದೇಶ ಅಥವಾ ಕಡತದ ನಿರ್ಧಾರವೇ ಇಲ್ಲದೆ ಇಡೀ ದೇಶದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆದಿದೆ ಎಂಬುದು ನ್ಯಾಯಾಲಯದಲ್ಲಿ ಸಾಬೀತಾದರೆ, ಈ ಇಡೀ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸುವುದು ನಿಶ್ಚಿತ ಮತ್ತು ಮುಖ್ಯ ಚುನಾವಣಾ ಆಯುಕ್ತರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾಗಬಹುದು.

ಸಾಂವಿಧಾನಿಕ ವಿಧಿಗಳು ಮತ್ತು ಅರ್ಜಿಯಲ್ಲಿ ಕೋರಲಾದ ಪರಿಹಾರಗಳು

ಅರ್ಜಿಯಲ್ಲಿ ಸಂವಿಧಾನದ 324ನೇ ವಿಧಿ, ಮುಖ್ಯ ಚುನಾವಣಾ ಆಯುಕ್ತರ ಕಾಯ್ದೆ 2023ರ ಸೆಕ್ಷನ್ 18 ಮತ್ತು ಐತಿಹಾಸಿಕ ಟಿ.ಎನ್. ಶೇಷನ್ ಪ್ರಕರಣದ ತೀರ್ಪನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಮುಖ್ಯ ಚುನಾವಣಾ ಆಯುಕ್ತರು ಇತರ ಆಯುಕ್ತರಿಗಿಂತ ಶ್ರೇಷ್ಠರಲ್ಲ, ಆಯೋಗದ ಎಲ್ಲ ಸದಸ್ಯರೂ ಸಮಾನರು ಎಂದು ಶೇಷನ್ ಪ್ರಕರಣದಲ್ಲೇ ಸಾಂವಿಧಾನಿಕ ಪೀಠ ಸ್ಪಷ್ಟಪಡಿಸಿದೆ. ಆಯುಕ್ತರಾದ ಜೋಷಿ ಮತ್ತು ಸಂಧು ಅವರ ಅಸಮ್ಮತಿಯ ಹೊರತಾಗಿಯೂ ಸಿಇಸಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆಯೇ ಎಂಬುದನ್ನು ನ್ಯಾಯಾಲಯ ತನಿಖೆ ಮಾಡಬೇಕೆಂದು ಕೋರಲಾಗಿದೆ. ಜೊತೆಗೆ 1950ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 32ರ ಉಲ್ಲಂಘನೆಯನ್ನು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ. ಯಾವುದೇ ಸಕಾರಣವಿಲ್ಲದೆ ಮತದಾರರ ನೋಂದಣಿ ಅಧಿಕಾರಿಯು ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟರೆ ಅಥವಾ ಅನಧಿಕೃತವಾಗಿ ಸೇರಿಸಿದರೆ, ಅದು ಮೂರು ತಿಂಗಳಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾದ ಅಪರಾಧವಾಗಿದೆ ಎಂದು ಪ್ರೊ. ಮುಸ್ತಫಾ ವಿವರಿಸುತ್ತಾರೆ.

ರಾಹುಲ್ ಗಾಂಧಿ ಅವರ ಅರ್ಜಿಯು ಸುಪ್ರೀಂ ಕೋರ್ಟ್‌ನಿಂದ ಹಲವು ಪ್ರಮುಖ ನಿರ್ದೇಶನಗಳನ್ನು ಕೋರಿದೆ:

* ಎಸ್‌ಐಆರ್ ಕುರಿತಾದ ಆಯೋಗದ ಎಲ್ಲಾ ಆಂತರಿಕ ಕಡತಗಳು, ಅಜೆಂಡಾಗಳು, ಸಭೆಯ ನಡಾವಳಿಗಳು, ಫೈಲ್ ನೋಟಿಂಗ್‌ಗಳು ಮತ್ತು ECI-Net ಹಾಗೂ ERONet ಲಾಗ್‌ಗಳನ್ನು ನ್ಯಾಯಾಲಯವು ಮುಟ್ಟುಗೋಲು ಹಾಕಿಕೊಳ್ಳಬೇಕು.

* ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಮತದಾರರ ಹೆಸರು ಅಳಿಸುವಿಕೆ ಕುರಿತು ಸ್ವತಂತ್ರ ಲೆಕ್ಕಪರಿಶೋಧನೆ ನಡೆಸಬೇಕು ಮತ್ತು ಈ ಕುರಿತ ಜಾಗತಿಕ ಅತ್ಯುತ್ತಮ ಪದ್ಧತಿಗಳನ್ನು ಪರಿಶೀಲಿಸಬೇಕು.

* ದೇಶಾದ್ಯಂತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ಮಧ್ಯಂತರವಾಗಿ ತಕ್ಷಣವೇ ತಡೆಹಿಡಿಯಬೇಕು.

* ಬೂತ್‌ವಾರು ಅಳಿಸಲಾದ ಹೆಸರುಗಳ ಪಟ್ಟಿಯನ್ನು ಅಳಿಸುವಿಕೆಗೆ ಕಾರಣ, ಲಿಂಗ ಮತ್ತು ವಯಸ್ಸಿನ ವರ್ಗೀಕರಣದೊಂದಿಗೆ ಸಾರ್ವಜನಿಕವಾಗಿ ಪ್ರಕಟಿಸಬೇಕು.

* ಯಾವುದೇ ಮತದಾರನಿಗೆ ಮುನ್ಸೂಚನೆ ಅಥವಾ ವಿಚಾರಣೆಯ ನೋಟಿಸ್ ನೀಡದೆ ಹೆಸರನ್ನು ಅಳಿಸಬಾರದು ಮತ್ತು ಮುಂಬರುವ ಪಂಜಾಬ್ ಚುನಾವಣೆಯ ಹಿನ್ನೆಲೆಯಲ್ಲಿ ಹೆಸರು ಸೇರ್ಪಡೆಗೆ ಮುಕ್ತ ಅವಕಾಶ ಕಲ್ಪಿಸಬೇಕು.

ಪ್ರೊ. ಫೈಝಾನ್ ಮುಸ್ತಫಾ ಅವರು ಅರ್ಜಿಯ ಸಂಭಾವ್ಯ ಫಲಿತಾಂಶದ ಕುರಿತು ವಸ್ತುನಿಷ್ಠ ವಿಶ್ಲೇಷಣೆ ನೀಡುತ್ತಾರೆ. ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ತಕ್ಷಣವೇ ರಾಹುಲ್ ಗಾಂಧಿ ಅಥವಾ ವಿರೋಧ ಪಕ್ಷಗಳು ಈ ಪ್ರಕರಣವನ್ನು ಸುಲಭವಾಗಿ ಗೆದ್ದುಬಿಡುತ್ತವೆ ಎಂದು ಭಾವಿಸುವುದು ತಪ್ಪು ಎಂದು ಅವರು ಎಚ್ಚರಿಸುತ್ತಾರೆ. ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆಯು ಸುದೀರ್ಘವಾಗಿರುತ್ತದೆ. ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಯಾಗಬೇಕು, ಅವರ ಲಿಖಿತ ಉತ್ತರಗಳು ಬರಬೇಕು. ಸರ್ಕಾರವು ಎಲ್ಲವೂ ನಿಯಮಾನುಸಾರವೇ ನಡೆದಿದೆ ಎಂದು ಆಯೋಗವನ್ನು ಸಮರ್ಥಿಸಿಕೊಳ್ಳುವುದು ಖಚಿತ. ಆಯೋಗದ ಪರವಾಗಿ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರಂತಹ ಅನುಭವಿ ವಕೀಲರು ವಾದ ಮಂಡಿಸಲಿದ್ದಾರೆ. ಅಲ್ಲದೆ ದಸರಾ ಮತ್ತು ದೀಪಾವಳಿ ರಜೆಗಳಿರುವುದರಿಂದ ಯಾವುದೇ ತ್ವರಿತ ತೀರ್ಪು ಹೊರಬರುವುದಿಲ್ಲ.

ಅರ್ಜಿಯಲ್ಲಿ ಮಾಡಲಾದ ಪ್ರತಿಯೊಂದು ಗಂಭೀರ ಆರೋಪಕ್ಕೂ ನ್ಯಾಯಾಲಯವು ನಿಖರವಾದ ಸಾಕ್ಷ್ಯಾಧಾರಗಳನ್ನು ಕೇಳುತ್ತದೆ. ಆದ್ದರಿಂದ ಈ ಅರ್ಜಿಯು ಕೇವಲ ತಕ್ಷಣದ ಕಾನೂನು ಗೆಲುವಿಗಿಂತ ಹೆಚ್ಚಾಗಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ರಾಜಕೀಯ ಕಾರ್ಯತಂತ್ರದ ಭಾಗವಾಗಿ ಕಾಣುತ್ತಿದೆ ಎಂದು ಪ್ರೊ. ಫೈಝಾನ್ ಮುಸ್ತಫಾ ಅಭಿಪ್ರಾಯಪಡುತ್ತಾರೆ. ರಾಷ್ಟ್ರಪತಿಗಳ ಬಳಿ ಹೋದೆವು, ಸುಪ್ರೀಂ ಕೋರ್ಟ್‌ ಬಾಗಿಲನ್ನೂ ತಟ್ಟಿದೆವು ಎಂದು ಸಾಬೀತುಪಡಿಸುವ ಮೂಲಕ ಚುನಾವಣಾ ಆಯೋಗದ ಪಾರದರ್ಶಕತೆಯಲ್ಲಿ ಲೋಪಗಳಿವೆ ಎಂಬುದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವುದು ಇದರ ಉದ್ದೇಶವಾಗಿದೆ. ಆದರೂ, ಅರ್ಜಿಯಲ್ಲಿ ಉಲ್ಲೇಖಿಸಲಾದ ಸಾಂವಿಧಾನಿಕ ಉಲ್ಲಂಘನೆಗಳು ನ್ಯಾಯಾಲಯದಲ್ಲಿ ಸಾಬೀತಾದರೆ, ಅದು ಭಾರತದ ಪ್ರಜಾಪ್ರಭುತ್ವ ಮತ್ತು ಗಣತಂತ್ರ ವ್ಯವಸ್ಥೆಯ ವಿಶ್ವಾಸಾರ್ಹತೆಯ ಮೇಲೆಯೇ ಜಾಗತಿಕ ಮಟ್ಟದಲ್ಲಿ ಅತ್ಯಂತ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಲಿದೆ ಎಂದು ಪ್ರೊ. ಫೈಝಾನ್ ಮುಸ್ತಫಾ ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ನಿಹಾಲ್ ಮುಹಮ್ಮದ್ ಕುದ್ರೋಳಿ

contributor