ಹೆಚ್ಚು ಉಪಯುಕ್ತ, ಅಷ್ಟೇ ಅಪಾಯಕಾರಿ; ತಂತ್ರಜ್ಞಾನ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿದ ‘Muse’ AI ಏಜೆಂಟ್!
Muse ಬಗ್ಗೆ ನಿಮಗೆ ತಿಳಿದಿರಬೇಕಾದ ವಿವರ ಇಲ್ಲಿದೆ!
ಮಾರ್ಕ್ ಝುಕರ್ಬರ್ಗ್ | Photo Credit : muse.ai
ಮೆಟಾ ಸಿಇಒ ಮಾರ್ಕ್ ಝುಕರ್ಬರ್ಗ್ ಅವರ ಮ್ಯೂಸ್ ಅಮೆರಿಕದಲ್ಲಿ ಹೊಸ ಸಂಚಲನೆ ಮೂಡಿಸಿದೆ. ಮ್ಯೂಸ್ ನಿಮ್ಮ ಡಿಜಿಟಲ್ ಜೀವನಕ್ಕೆ ನೆರವಾಗಬಲ್ಲದು. ಆದರೆ ಗೌಪ್ಯತೆಯ ಕಳವಳಗಳೂ ಹೆಚ್ಚಾಗಿವೆ. ಮ್ಯೂಸ್ ಬಗ್ಗೆ ನಿಮಗೆ ತಿಳಿದಿರಬೇಕಾದ ವಿವರ ಇಲ್ಲಿದೆ!
ಅಮೆರಿಕದಲ್ಲಿ ಬಿಡುಗಡೆಯಾದ ನಂತರ ಮೆಟಾದ ‘ಮ್ಯೂಸ್’ ಎನ್ನುವ ವೈಯಕ್ತಿಕ ಸಹಾಯಕ ಅಥವಾ ಉಚಿತ AI ಏಜೆಂಟ್ ಬಹಳ ಜನಪ್ರಿಯವಾಗುತ್ತಿದೆ. ಮ್ಯೂಸ್ ಬಿಡುಗಡೆ ಸಂದರ್ಭದಲ್ಲಿ ಮೆಟಾ ಸಿಇಒ ಮಾರ್ಕ್ ಝುಕರ್ಬರ್ಗ್ ಅವರು “ನಿಮ್ಮ ಗುರಿಗಳನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ನಿಮಗಾಗಿ 24/7 ಕೆಲಸ ಮಾಡುತ್ತದೆ” ಎಂದು ಹೇಳಿದ್ದರು. ಇದೀಗ ಬಿಡುಗಡೆಯಾದ ನಂತರ ಅಮೆರಿಕದ ಆಪ್ ಸ್ಟೋರ್ನಲ್ಲಿ ನಂ 1 ಅಪ್ಲಿಕೇಶನ್ ಸ್ಥಾನವನ್ನು ತಲುಪಿದೆ. ಸಾಂಪ್ರದಾಯಿಕ ಚಾಟ್ಬಾಟ್ಗೆ ಭಿನ್ನವಾಗಿ ನೀವು ಸೂಚನೆ ನೀಡಿದ ಮೇಲೂ ಕಾರ್ಯನಿರ್ವಹಿಸುವ ವೈಯಕ್ತಿಕ ಏಜೆಂಟ್ ಆಗಿ ಮ್ಯೂಸ್ ಅನ್ನು ಮೆಟಾ ಮುಂದಿಟ್ಟಿದೆ.
ಮ್ಯೂಸ್ ಅನ್ನು ಚಾಟ್ಜಿಪಿಟಿಗಿಂತಲೂ ಹೆಚ್ಚಿನ ರೀತಿಯಲ್ಲಿ ಬಳಸಬಹುದು. ಅದು ಇಮೇಲ್ ಕಳುಹಿಸಬಹುದು, ಆನ್ಲೈನ್ ಶಾಪಿಂಗ್ ಮಾಡಬಹುದು, ವೇಳಾಪಟ್ಟಿ ನಿರ್ವಹಿಸಬಹುದು, ವಿಮಾನದ ಟಿಕೆಟ್ ಬುಕ್ ಮಾಡಬಹುದು, ಇಮೇಲ್, ಕ್ಯಾಲೆಂಡರ್, ಪಾವತಿ ಪ್ಲಾಟ್ಫಾರ್ಮ್, ಶಾಪಿಂಗ್ ಅಪ್ಲಿಕೇಶನ್ಗಳು ಮತ್ತು ಸ್ಮಾರ್ಟ್-ಹೋಮ್ ಸಿಸ್ಟಂನಂತಹ ಸೇವೆಗಳೊಂದಿಗೆ ಸಂಪರ್ಕ ಸಾಧಿಸಬೇಕಾಗುತ್ತದೆ. ಮೆಟಾದ ಮ್ಯೂಸ್ ಅನ್ನು ಉಚಿತವಾಗೂ ಬಳಸಬಹುದು. ತಿಂಗಳಿಗೆ 2000 ರೂ.ನಿಂದ 10,000 ರೂ. ನಡುವೆ ಬೆಲೆ ತೆತ್ತೂ ಬಳಸಬಹುದು.
OpenAI ಮತ್ತು Anthropic ನಿಂದ ನಾವು ನೋಡಿದ ಬಹುತೇಕ ಕೋಡಿಂಗ್ ಕೇಂದ್ರಿತ AI ಏಜೆಂಟ್ಗಳಿಗೆ ಭಿನ್ನವಾಗಿ ಮೆಟಾದ ಮ್ಯೂಸ್ ನಿಮ್ಮ ವೈಯಕ್ತಿಕ ಚಟುವಟಿಕೆಗಳ ಮೇಲೆ ಹೆಚ್ಚು ಗಮನರಿಸಹುತ್ತದೆ. ಮ್ಯೂಸ್ ಹೊಂದಿಸುವುದೂ ಸುಲಭ. ಮೆಟಾ AI ಏಜೆಂಟ್ ಅಮೆರಿಕದಲ್ಲಿರುವ ವಯಸ್ಕರಿಗೆ ಸ್ವತಂತ್ರ ಅಪ್ಲಿಕೇಶನ್ ಮತ್ತು ವಾಟ್ಸ್ಆಪ್ ಮೂಲಕ ಲಭ್ಯವಿದೆ. ಅಪ್ಲಿಕೇಶನ್ನಲ್ಲಿ AI ಏಜೆಂಟ್ಗಾಗಿ ನಿಮ್ಮ ಫೋಟೋ ಆಯ್ಕೆ ಮಾಡಬಹುದು. ನಂತರ ನೀವು ಬಳಸಲು ಬಯಸುವ ಸೇವೆಗಳ ಜೊತೆಗೆ ಅದನ್ನು ಸಂಪರ್ಕಿಸಬಹುದು. ಫೇಸ್ಬುಕ್, ಇನ್ಸ್ಟಾಗ್ರಾಂ ಅಥವಾ ಥ್ರೆಡ್ಗಳಿಂದ ಮಾಹಿತಿ ವರ್ಗಾಯಿಸಬಹುದು. ನೀವು ಮ್ಯೂಸ್ಗೆ ಪ್ರಾಂಪ್ಟ್ಗಳನ್ನು ಕಳುಹಿಸಿದರೆ ಸಾಕು. ಉಳಿದಿದ್ದನ್ನು AI ಮಾಡುತ್ತದೆ.
ಮ್ಯೂಸ್ ಸೆಪ್ಟೆಂಬರ್ 8ರಂದು ಅಮೆರಿಕದಲ್ಲಿ ಬಿಡುಗಡೆಯಾದ ಸುಮಾರು ಐದೇ ದಿನಗಳಲ್ಲಿ 730,000 ಡೌನ್ಲೋಡ್ಗಳನ್ನು ಲಾಗ್ ಮಾಡಿದೆ. 13 ದಿನಗಳಲ್ಲಿ ಕ್ಲೌಡ್ನ 400,000 ಮತ್ತು ಗ್ರೋಕ್ನ 200,000 ಡೌನ್ಲೋಡ್ಗಳನ್ನು ಮೀಡಿದೆ. ಇದೇ ಅವಧಿಯಲ್ಲಿ ಚಾಟ್ಜಿಪಟಿಯ 3.1 ಮಿಲಿಯನ್ಗಿಂತ ಇನ್ನೂ ಹಿಂದಿದೆ.
ಮ್ಯೂಸ್ ಬಿಡುಗಡೆಯ ನಂತರ ಮೆಟಾದ ಷೇರುಗಳು ಶೇ 11ರಷ್ಟು ಏರಿಕೆಯಾಗಿವೆ. ಅದೇ ಸಮಯದಲ್ಲಿ AI ಸುರಕ್ಷತೆ, ಸೈಬರ್ ಭದ್ರತೆ ಮತ್ತು ಗೌಪ್ಯತೆಯ ಬಗ್ಗೆ ವ್ಯಾಪಕ ಕಳವಳ ಹೆಚ್ಚಿಸಿದೆ. ಕಾರ್ಯಗಳನ್ನು ಪೂರ್ಣಗೊಳಿಸಲು ಮ್ಯೂಸ್ಗೆ ಇಮೇಲ್ಗಳು ಮತ್ತು ಇತರ ಸೇವೆಗಳಂತಹ ವೈಯಕ್ತಿಕ ಡೇಟಾ ಪ್ರವೇಶದ ಅಗತ್ಯವಿದೆ. ಹೀಗಾಗಿ ಗೌಪ್ಯತೆಯ ಆತಂಕ ಸೃಷ್ಟಿಯಾಗಿದೆ. ಮ್ಯೂಸ್ ಯಾವ ಅಪ್ಲಿಕೇಶನ್ಗಳನ್ನು ಪ್ರವೇಶಿಸಬಹುದು ಮತ್ತು ಅನುಮತಿ ರದ್ದುಗೊಳಿಸಬಹುದು ಎಂದು ಬಳಕೆದಾರರು ಆಯ್ಕೆ ಮಾಡಬಹುದು ಎಂದು ಮೆಟಾ ಹೇಳುತ್ತದೆ. AI ಮಾಡೆಲ್ಗಳಿಗೆ ತರಬೇತಿ ನೀಡಲು ಸಂಭಾಷಣೆಗಳನ್ನು ಬಳಸುವುದನ್ನು ತಡೆಯಬಹುದು. ಆದರೆ ಮಾಧ್ಯಮಗಳ ಪ್ರಕಾರ ಒಂದು ಪರೀಕ್ಷೆಯ ಸಮಯದಲ್ಲಿ ಮ್ಯೂಸ್ AI ಏಜೆಂಟ್ ಹೆಚ್ಚಿನ ವೈಯಕ್ತಿಕ ಡೇಟಾ ಸೇರಿಸಲು ಮತ್ತು ಹಣಕಾಸಿನ ಮಾಹಿತಿ ಓದಲು ಅನುಮತಿ ನೀಡುವಂತೆ ಪದೇಪದೆ ಸೂಚಿಸಿದೆ. AI ಏಜೆಂಟ್ ಇನ್ಬಾಕ್ಸ್ ಮೇಲ್ವಿಚಾರಣೆಗೆ ಮತ್ತು ಕ್ಯಾಲರಿ ಅಂದಾಜಿಗೆ ಊಟದ ಫೋಟೋ ನೀಡಲು ಸಹ ಸೂಚಿಸಿದೆ.
ತರಬೇತಿಗಾಗಿ ಬಳಸುವ ಬಳಕೆದಾರರ ಯಾವುದೇ ಡೇಟಾವನ್ನು ಗುರುತಿಸುವ ಮಾಹಿತಿಯನ್ನು ತೆಗೆದುಹಾಕಲಾಗುವುದು (ಸ್ಯಾನಿಟೈಸ್) ಎಂದು ಮೆಟಾ ಹೇಳುತ್ತದೆ. ಆದರೆ ಇಮೇಲ್ ಇನ್ಬಾಕ್ಸ್ ಮತ್ತು ಬ್ಯಾಂಕ್ ಖಾತೆಗಳಂತಹ ಸಂಪರ್ಕಿತ ಮೂಲಗಳಿಂದ ಪಡೆದ ಮಾಹಿತಿ ಉಳಿಯುವ ಬಗ್ಗೆ ಕಳವಳ ವ್ಯಕ್ತವಾಗಿದೆ.
ಅಲ್ಲದೆ ಮ್ಯೂಸ್ ಕಂಪನಿಯ macOS ಆಪ್ನಲ್ಲಿ ಜೀರೋಡೇ (ಮುಂಚಿತವಾಗಿ ಬಗೆಹರಿಸಲಾಗದ ದೋಷ) ಸುರಕ್ಷತಾ ದೋಷ ಪತ್ತೆಯಾಗಿದ್ದು, ಬಳಕೆದಾರರ ಖಾತೆಯ ಭದ್ರತೆಗೆ ಆತಂಕ ಎದುರಾಗಿದೆ. ಅಂದರೆ, ಬಳಕೆದಾರರ ಕಂಪ್ಯೂಟರ್ನಲ್ಲಿರುವ ಯಾವುದೇ ಸ್ಥಳೀಯ ಆ್ಯಪ್ ಅಥವಾ ಟರ್ಮಿನಲ್ ಕಮಾಂಡ್ ಮೂಲಕ ಮ್ಯೂಸ್ ಆ್ಯಪ್ನ ರಹಸ್ಯ ಅಥವಾ ದಾಖಲಿಸದ ಸೆಟ್ಟಿಂಗ್ಗಳನ್ನು ಬದಲಿಸಬಹುದು. ಆಡಿಯೋವನ್ನು ಪಠ್ಯವಾಗಿ ಪರಿವರ್ತಿಸಲು ಆ್ಯಪ್ ಬಳಸುವ ಸರ್ವರ್ ಲಿಂಕ್ ಮತ್ತು ಎಂಡ್ಪಾಯಿಂಟ್ ಅನ್ನು ಹ್ಯಾಕರ್ಗಳು ತಮಗೆ ಬೇಕಾದಂತೆ ಬದಲಿಸಬಹುದು. ಹ್ಯಾಕರ್ಗಳು ಈ ಲಿಂಕ್ ಅನ್ನು ತಮ್ಮದೇ ಸರ್ವರ್ಗೆ ಮರುನಿರ್ದೇಶಿಸುವ ಮೂಲಕ ಬಳಕೆದಾರರ ಮ್ಯೂಸ್ ಖಾತೆಯ ಅಥೆಂಟಿಕೇಶನ್ ಟೋಕನ್ (ಲಾಗಿನ್ ವಿವರಗಳ ರಹಸ್ಯ ಕೋಡ್) ಅನ್ನು ಸುಲಭವಾಗಿ ಕದಿಯಬಹುದು. ಈ ಟೋಕನ್ ಸಿಕ್ಕರೆ ಹ್ಯಾಕರ್ಗಳು ಬಳಕೆದಾರರ ಮ್ಯೂಸ್ ಏಜೆಂಟ್ ಅಥವಾ ಇಡೀ ಖಾತೆ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಸಾಧ್ಯವಾಗಲಿದೆ.
ಇಂತಹ ಏಜೆಂಟ್ಗಳ ಹೆಚ್ಚುತ್ತಿರುವ ಬಳಕೆಯು ಈಗಾಗಲೇ ಆನ್ಲೈನ್ ವೇದಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ. ಅಮೆಜಾನ್ ಈಗಾಗಲೇ ಗೌಪ್ಯತೆ ಮತ್ತು ಭದ್ರತಾ ಅಪಾಯ ಉಲ್ಲೇಖಿಸಿ ಮ್ಯೂಸ್ ಅನ್ನು ತನ್ನ ಶಾಪಿಂಗ್ ಸೈಟ್ನಿಂದ ನಿರ್ಬಂಧಿಸಿದೆ. “ಮ್ಯೂಸ್ ವೈಯಕ್ತೀಕರಣದ ಫೀಚರ್ಗಳನ್ನು ಬೈಪಾಸ್ ಮಾಡುತ್ತದೆ. ಗ್ರಾಹಕರ ರುಜುವಾತುಗಳನ್ನು ಸೆರೆಹಿಡಿಯುತ್ತದೆ ಮತ್ತು ಸಂಗ್ರಹಿಸುತ್ತದೆ. ಅಲ್ಲದೆ ಖಾತೆಯ ಡೇಟಾವನ್ನು ಸ್ಕ್ರ್ಯಾಪ್ ಮಾಡುತ್ತದೆ” ಎಂದು ಅಮೆಜಾನ್ ಆರೋಪಿಸಿದೆ. ಆದರೆ ಶಾಪಿಫೈ ಮೆಟಾ ಜೊತೆಗೆ ಕೆಲಸ ಮಾಡುತ್ತಿದೆ.
ಕೃಪೆ: www.indiatoday.in