ಚಳಿಯಿಂದಾಗಿ ಏರಿದೆ ಸೋಂಕುಗಳ ಅಪಾಯ
PC :freepik
ಚಳಿಗಾಲದ ಹವೆಯಿಂದ ಸೋಂಕುಗಳ ಅಪಾಯ ಹೆಚ್ಚಾಗಿದೆ. ಅಧಿಕ ರಕ್ತದೊತ್ತಡ ಇರುವವರು ಮತ್ತು ಹೃದಯರೋಗ ಹೊಂದಿರುವವರು ಜಾಗರೂಕರಾಗಿರಬೇಕು ಎಂದು ವೈದ್ಯರು ಎಚ್ಚರಿಸಿದ್ದಾರೆ.
ದೇಹದಲ್ಲಿ ಸಾಕಷ್ಟು ಜಲಸಂಚಯನವನ್ನು ನಿರ್ವಹಿಸುವುದು, ಸಂಸ್ಕರಿತ ಆಹಾರ ಸೇವನೆಯನ್ನು ತೊರೆಯುವುದು ಹಾಗೂ ಪೊಟ್ಯಾಶಿಯಂ–ಸಮೃದ್ಧ ಆಹಾರಗಳು ಮತ್ತು ತರಕಾರಿಗಳ ಬಳಕೆಯನ್ನು ಹೆಚ್ಚಿಸುವುದು ಚಳಿಗಾಲದಲ್ಲಿ ಕಿಡ್ನಿ (ಮೂತ್ರಪಿಂಡ) ಕಾರ್ಯ ಸುಗಮವಾಗಲು ಮತ್ತು ಎಲೆಕ್ಟ್ರೊಲೈಟ್ ಸಮತೋಲನಕ್ಕೆ ಸಹಾಯ ಮಾಡಲಿದೆ ಎಂದು ವೈದ್ಯರು ಹೇಳಿದ್ದಾರೆ.
►ಹೆಚ್ಚಾಗುತ್ತಿರುವ ರೋಗಿಗಳ ಸಂಖ್ಯೆ
ಚಳಿಗಾಲದ ಶೀತ ಹವಾಮಾನ ಪರಿಸ್ಥಿತಿಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಫ್ಲೂ, ನ್ಯುಮೋನಿಯಾ ಅಥವಾ ಶ್ವಾಸಕೋಶದ ಅನಾರೋಗ್ಯದಂತಹ ಅಪಾಯಗಳು ಹೆಚ್ಚಾಗಿದ್ದು, ಅವು ಅಧಿಕ ರಕ್ತದೊತ್ತಡ ಮತ್ತು ಹೃದಯರೋಗ ಇರುವವರಲ್ಲಿ ದೀರ್ಘಕಾಲೀನ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಶ್ವಾಸಕೋಶದ ಕಾಯಿಲೆ) ಸೇರಿದಂತೆ ಪ್ರತಿಕೂಲ ಪರಿಣಾಮಗಳನ್ನು ಬೀರಲಿವೆ.
“ಚಳಿಯಿಂದಾಗಿ ರಕ್ತನಾಳಗಳು ಕಿರಿದಾಗುತ್ತವೆ. ಇದರಿಂದ ರಕ್ತದೊತ್ತಡದಲ್ಲಿ ಏರಿಕೆಯಾಗುತ್ತದೆ ಮತ್ತು ಹೃದಯದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದೇ ಸಂದರ್ಭದಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗಿದ್ದು, ಉಪ್ಪುಭರಿತ ಆಹಾರವನ್ನು ಹೆಚ್ಚು ಸೇವಿಸಿದರೆ ನಿರ್ಜಲೀಕರಣಕ್ಕೆ ಕಾರಣವಾಗಿ, ಚಳಿಗಾಲದ ರೋಗಗಳ ಜೊತೆಗೆ ಹೃದಯ–ರಕ್ತನಾಳ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡವನ್ನು ಹೇರಬಹುದು. ಶೀತ ಹವಾಮಾನವು ಅಡ್ರೆನಲಿನ್ ಸೇರಿದಂತೆ ಒತ್ತಡದ ಹಾರ್ಮೋನ್ಗಳಿಗೂ ಪ್ರಚೋದನೆ ನೀಡುತ್ತದೆ. ಇದರಿಂದ ರಕ್ತದೊತ್ತಡ ಮತ್ತು ಹೃದಯದ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ” ಎಂದು ತಜ್ಞರು ಎಚ್ಚರಿಸಿದ್ದಾರೆ.
►ಸೋಡಿಯಂ–ಪೊಟ್ಯಾಶಿಯಂ ಮಟ್ಟದಲ್ಲಿ ಏರಿಳಿತ
ವೈದ್ಯರ ಪ್ರಕಾರ, ಚಳಿಗಾಲದಲ್ಲಿ ದೇಹದ ಸೋಡಿಯಂ ಮತ್ತು ಪೊಟ್ಯಾಶಿಯಂ ಮಟ್ಟಗಳಲ್ಲಿ ಏರಿಳಿತ ಉಂಟಾಗುತ್ತದೆ. ಹೆಚ್ಚು ದ್ರವಾಹಾರವನ್ನು ಸೇವಿಸದೆ ಇರುವುದು ಮತ್ತು ನಿರ್ಜಲೀಕರಣದಿಂದ ಸೋಡಿಯಂ ಮಟ್ಟ ಏರಬಹುದು. ಅದೇ ಸಮಯದಲ್ಲಿ ಆಹಾರ ಪದ್ಧತಿಯಲ್ಲಿ ಬದಲಾವಣೆ, ಅಂದರೆ ಹೆಚ್ಚು ಮೂತ್ರವಿಸರ್ಜನೆಗೆ ಕಾರಣವಾಗುವ ಆಹಾರ ಸೇವನೆ ಹಾಗೂ ಹಣ್ಣು–ತರಕಾರಿಗಳನ್ನು ಕಡಿಮೆ ಸೇವಿಸಿದರೆ ಪೊಟ್ಯಾಶಿಯಂ ಅಸಮತೋಲನಕ್ಕೆ ಕಾರಣವಾಗಬಹುದು. ಮುಖ್ಯವಾಗಿ ಹೃದಯರೋಗಿಗಳಲ್ಲಿ ಈ ಅಪಾಯ ಹೆಚ್ಚಿರುತ್ತದೆ.
►ಶ್ವಾಸಕೋಶದ ರೋಗಗಳ ಅಪಾಯ
ಸಾಮಾನ್ಯ ಚಳಿಗಾಲದ ಶ್ವಾಸಕೋಶದ ರೋಗಗಳ ಜೊತೆಗೆ ಜಠರದ ವೈರಸ್ಗಳಾದ ನೋರೋವೈರಸ್ಗಳನ್ನು ಶೀತ, ಒಣ ಗಾಳಿ ಉಲ್ಬಣಗೊಳಿಸುತ್ತದೆ. ಇದರಿಂದ ರೋಗನಿರೋಧಕ ವ್ಯವಸ್ಥೆಯ ಮೇಲೆ ಒತ್ತಡ ಬೀರುತ್ತದೆ. ಹೀಗಾಗಿ ಆಸ್ತಮಾ, ಹೃದಯರೋಗ ಮತ್ತು ಒಣಚರ್ಮದಂತಹ ದೀರ್ಘಕಾಲೀನ ಸಮಸ್ಯೆ ಇರುವವರಿಗೆ ಅಪಾಯ ಹೆಚ್ಚಾಗುತ್ತದೆ.
“ದೇಹದಲ್ಲಿ ಸಾಕಷ್ಟು ಜಲಸಂಚಯನವನ್ನು ನಿರ್ವಹಿಸಬೇಕು. ಉಪ್ಪುಭರಿತ ಅಥವಾ ಸಂಸ್ಕರಿತ ಆಹಾರಗಳ ಸೇವನೆಯನ್ನು ಕಡಿಮೆ ಮಾಡುವುದು ಹಾಗೂ ಪೊಟ್ಯಾಶಿಯಂ–ಸಮೃದ್ಧ ಉತ್ಪನ್ನಗಳ (ಹಣ್ಣುಗಳು/ತರಕಾರಿಗಳು) ಸೇವನೆಯನ್ನು ಹೆಚ್ಚಿಸುವುದರಿಂದ ಸೆಳೆತಗಳು, ಸುಸ್ತು ಮತ್ತು ಕಿಡ್ನಿ ಸ್ಟೋನ್ಗಳಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಜೊತೆಗೆ ಎಲೆಕ್ಟ್ರೊಲೈಟ್ ಸಮತೋಲನ ಮತ್ತು ಕಿಡ್ನಿ ಕಾರ್ಯ ಸುಧಾರಿಸಬಹುದು” ಎಂದು ತಜ್ಞರು ಹೇಳಿದ್ದಾರೆ.
►ಮಕ್ಕಳು ಮತ್ತು ವೃದ್ಧರಿಗೆ ಅಪಾಯ
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ವಿಶೇಷವಾಗಿ ಹಸುಗೂಸುಗಳು, 65 ವರ್ಷ ಮೇಲ್ಪಟ್ಟ ವಯಸ್ಕರು, ದೀರ್ಘಕಾಲೀನ ಹೃದಯ, ಶ್ವಾಸಕೋಶ, ಕಿಡ್ನಿ ಅಥವಾ ಲಿವರ್ ರೋಗ ಹೊಂದಿರುವವರು, ಮಧುಮೇಹಿಗಳು ಹಾಗೂ ರೋಗನಿರೋಧಕ ಶಕ್ತಿಯ ಸಮಸ್ಯೆ ಇರುವವರು (ಕ್ಯಾನ್ಸರ್ ಥೆರಪಿ ಪಡೆಯುತ್ತಿರುವವರು, ಸ್ಟೆರಾಯ್ಡ್ ಬಳಸುತ್ತಿರುವವರು), ಗರ್ಭಿಣಿಯರು ಮತ್ತು ಬೊಜ್ಜು ಅಥವಾ ಅಧಿಕ ತೂಕ ಹೊಂದಿರುವವರಿಗೆ ಹೆಚ್ಚು ಅಪಾಯವಿರುತ್ತದೆ.
►ಹೆಚ್ಚಾಗಿರುವ ಚಳಿಯ ದಿನಗಳು
ಭಾರತದಲ್ಲಿ ಈಗ ತಾಪಮಾನಗಳು ಹಲವು ರಾಜ್ಯಗಳಲ್ಲಿ 3°C ರಿಂದ 5°C ಕ್ಕಿಂತ ಕೆಳಗೆ ಇಳಿಯುತ್ತಿವೆ. ದೀರ್ಘಕಾಲೀನ ಸರ್ಕಾರಿ ದತ್ತಾಂಶದ ಪ್ರಕಾರ, ಜಮ್ಮು ಮತ್ತು ಕಾಶ್ಮೀರ, ದಿಲ್ಲಿ ಹಾಗೂ ಒಡಿಶಾ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಚಳಿಯ ದಿನಗಳ ಸಂಖ್ಯೆ ಹೆಚ್ಚಾಗಿದೆ.