ಜ್ಞಾನೇಶ್ ಕುಮಾರ್ | Photo Credit : PTI 

ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಕೇಳಿಬಂದಿರುವ ಲಂಚದ ಆರೋಪಕ್ಕೆ ಸಂಬಂಧಿಸಿದಂತೆ ಹೊಸ ದೂರು ಸಲ್ಲಿಕೆಯಾಗಿದ್ದು, ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸುವಂತೆ ಕೇರಳ ಸರ್ಕಾರವು ತನ್ನ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮಂಗಳವಾರ ನಿರ್ದೇಶನ ನೀಡಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

1988ರ ಬ್ಯಾಚ್ನ ಕೇರಳ ಕೆಡರ್ ನ IAS ಅಧಿಕಾರಿಯಾಗಿರುವ ಜ್ಞಾನೇಶ್ ಕುಮಾರ್ ಅವರು 2006ರಲ್ಲಿ ರಾಜ್ಯದ ಸಾರ್ವಜನಿಕ ನಿರ್ಮಾಣ ಇಲಾಖೆ (PWD) ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಎಸಗಿದ್ದಾರೆನ್ನಲಾದ ಅಕ್ರಮದ ತನಿಖೆಯನ್ನು ಮರುಆರಂಭಿಸಲು ಅಕ್ಟೋಬರ್ನಲ್ಲಿ ಆದೇಶಿಸಲಾಗಿತ್ತು. ಇದರ ಬೆನ್ನಲ್ಲೇ ಈ ಹೊಸ ಬೆಳವಣಿಗೆ ನಡೆದಿದೆ.

►ಪ್ರಕರಣದ ಹಿನ್ನೆಲೆ ಏನು?

2002ರಲ್ಲಿ ವಿಶ್ವ ಬ್ಯಾಂಕ್ ನೆರವಿನ 'ಕೇರಳ ರಾಜ್ಯ ಸಾರಿಗೆ ಯೋಜನೆ' (KSTP) ಅಡಿಯಲ್ಲಿ ರಸ್ತೆ ಕಾಮಗಾರಿ ನಡೆಸಲು ‘ಪಾಟಿ-ಬೆಲ್’ (PATI-BEL) ಎಂಬ ಇಂಡೋ-ಮಲೇಷ್ಯನ್ ಜಂಟಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಈ ಸಂಸ್ಥೆಯ ಮುಖ್ಯ ಯೋಜನಾ ವ್ಯವಸ್ಥಾಪಕರಾಗಿದ್ದ ಮಲೇಷ್ಯಾದ ಇಂಜಿನಿಯರ್ ಲೀ ಸೀ ಬೀನ್ ಅವರಿಂದ ಕಾಮಗಾರಿಯ ಬಾಕಿ ಬಿಲ್ ಬಿಡುಗಡೆ ಮಾಡಲು ಕುಮಾರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದು ಮುಖ್ಯ ಆರೋಪ.

ಆ ಸಮಯದಲ್ಲಿ ಕುಮಾರ್ ಅವರು KSTPಯ ಯೋಜನಾ ನಿರ್ದೇಶಕ ಹಾಗೂ PWD ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು.

2006ರ ನವೆಂಬರ್ ನಲ್ಲಿ ಮಲೇಷ್ಯಾದಲ್ಲಿ ಲೀ ಸೀ ಬೀನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಬರೆದಿಟ್ಟಿದ್ದ ಡೆತ್ನೋಟ್ನಲ್ಲಿ ಈ ವಿಷಯ ಪ್ರಸ್ತಾಪವಾಗಿತ್ತು. ಈ ಡೆತ್ನೋಟ್ ಬಹಿರಂಗವಾಗದಿದ್ದರೂ, ಸಿಪಿಐ(ಎಂ) ನೇತೃತ್ವದ ಅಂದಿನ ಸರ್ಕಾರ 2006ರ ಡಿಸೆಂಬರ್ ನಲ್ಲಿ ಕುಮಾರ್ ಅವರನ್ನು PWD ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಿ ತನಿಖೆಗೆ ಆದೇಶಿಸಿತ್ತು.

►ಮತ್ತೆ ಮುನ್ನೆಲೆಗೆ ಬಂದಿದ್ದು ಹೇಗೆ?

ಇದೀಗ ಹೊಸ ದೂರು ಸಲ್ಲಿಕೆಯಾದ ಬೆನ್ನಲ್ಲೇ, ತಡೆಹಿಡಿಯಲಾಗಿದ್ದ 2006ರ ತನಿಖಾ ಪ್ರಕ್ರಿಯೆ ಮತ್ತೆ ಶುರುವಾಗಿದ್ದು, ವಿಜಿಲೆನ್ಸ್ ಸಂಸ್ಥೆಯು ಪ್ರಾಥಮಿಕ ಪರಿಶೀಲನೆಯನ್ನು ಕೈಗೆತ್ತಿಕೊಂಡಿದೆ.

ಇಂಜಿನಿಯರ್ ಲೀ ಅವರ ಡೆತ್ನೋಟ್ನಲ್ಲಿ ಕುಮಾರ್ ಅವರ ಹೆಸರು ಪ್ರಸ್ತಾಪವಾಗಿತ್ತು. ಆದರೆ, ಅಂದಿನ ತನಿಖೆಯು ಬಾಹ್ಯ ಒತ್ತಡದಿಂದಾಗಿ ದಾರಿ ತಪ್ಪಿತ್ತು ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ಎಂ. ವೇಣುಗೋಪಾಲ್ ಅವರು ಅಂದಿನ ಕೇರಳ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರಿಗೆ ದೂರು ನೀಡಿದ್ದರು. ಈ ದೂರನ್ನು ಗೃಹ ಸಚಿವರು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ರವಾನಿಸಿದ್ದು, ಪ್ರಕರಣದ ಮರುತನಿಖೆಗೆ ಕಾನೂನು ಸಲಹೆ ಪಡೆಯಲಾಗಿತ್ತು. ಆದರೆ, ವೇಣುಗೋಪಾಲ್ ಅವರು ತಮ್ಮ ಆರೋಪಕ್ಕೆ ಬೆಂಬಲವಾಗಿ ಯಾವುದೇ ದಾಖಲೆಗಳನ್ನು ಒದಗಿಸಿರಲಿಲ್ಲ.

►ಎರಡನೇ ದೂರುದಾರರ ಆರೋಪವೇನು?

ಕುಮಾರ್ ವಿರುದ್ಧ ತನಿಖೆಗೆ ಆಗ್ರಹಿಸಿ ಸಾಜನ್ ವಿ.ಒ. ಎಂಬುವವರು ಎರಡನೇ ದೂರು ನೀಡಿದ್ದಾರೆ. ಇವರು 2000ರ ಆರಂಭದಲ್ಲಿ 'ಪಾಟಿ-ಬೆಲ್' ಸಂಸ್ಥೆಗೆ ನಿರ್ಮಾಣ ಸಾಮಗ್ರಿಗಳನ್ನು ಪೂರೈಸುತ್ತಿದ್ದರು.

ಕೊಲ್ಲಂನಲ್ಲಿದ್ದ ಪಾಟಿ-ಬೆಲ್ ಯೋಜನಾ ಕಚೇರಿಯು ತಮ್ಮ ಮನೆಯ ಸಮೀಪದಲ್ಲೇ ಇದ್ದು, ಲೀ ಅವರೊಂದಿಗೆ ನಿಕಟ ಸಂಬಂಧವಿತ್ತು ಎಂದು ಸಾಜನ್ ತಿಳಿಸಿದ್ದಾರೆ.

"ಕಾಮಗಾರಿಯ ಬಾಕಿ ಬಿಲ್ಗಳನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡದ ಕಾರಣ, ಸ್ಥಳೀಯ ಗುತ್ತಿಗೆದಾರರು ಮತ್ತು ಸರಬರಾಜುದಾರರಿಗೆ ಹಣ ಪಾವತಿಸಲು ಲೀ ಅವರಿಗೆ ಸಾಧ್ಯವಾಗಲಿಲ್ಲ. ಬಿಲ್ ಬಿಡುಗಡೆ ಮಾಡಲು ಕುಮಾರ್ 2 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಲೀ ಸ್ವತಃ ನನಗೆ ತಿಳಿಸಿದ್ದರು. ಆದರೆ, ಲಂಚ ನೀಡಲು ಪಾಟಿ-ಬೆಲ್ ಸಂಸ್ಥೆ ಸಿದ್ಧವಿರಲಿಲ್ಲ. ಲೀ ಅವರ ಡೆತ್ ನೋಟ್ ನಲ್ಲಿ ಕುಮಾರ್ ಹೆಸರು ಉಲ್ಲೇಖವಾಗಿದೆ ಎಂದು ಅವರ ಕುಟುಂಬಸ್ಥರು ಸಂಸ್ಥೆಯ ಉದ್ಯೋಗಿಗಳಿಗೆ ತಿಳಿಸಿದ್ದರು" ಎಂದು ಅಕ್ಟೋಬರ್ 23ರಂದು ಗೃಹ ಸಚಿವರಿಗೆ ನೀಡಿದ ದೂರಿನಲ್ಲಿ ಸಾಜನ್ ಆರೋಪಿಸಿದ್ದಾರೆ.

"ಸರ್ಕಾರ ತನಿಖೆಗೆ ಸಿದ್ಧವಿದ್ದರೆ, ಲೀ ಕುಟುಂಬಸ್ಥರು ಸೇರಿದಂತೆ ಅಗತ್ಯ ಸಾಕ್ಷ್ಯಾಧಾರಗಳನ್ನು ತನಿಖಾಧಿಕಾರಿಗಳ ಮುಂದೆ ಹಾಜರುಪಡಿಸಲು ನಾನು ಸಿದ್ಧ" ಎಂದು ಸಾಜನ್ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಉಲ್ಲೇಖಿಸಿದೆ.

ಮಲೇಷ್ಯಾದಲ್ಲಿ ಲೀ ಬರೆದಿಟ್ಟಿದ್ದರೆನ್ನಲಾದ ಡೆತ್ನೋಟ್ ಅನ್ನು ಸಾಜನ್ ನೋಡಿಲ್ಲ. ಅಲ್ಲದೆ, 2006ರ ಲಂಚದ ಆರೋಪದ ತನಿಖೆಗೆ ಸಂಬಂಧಿಸಿದಂತೆ ವಿಜಿಲೆನ್ಸ್ ಇಲಾಖೆಯು ತಮ್ಮನ್ನು ಸಂಪರ್ಕಿಸಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಲಂಚದ ಬೇಡಿಕೆ ಮತ್ತು ಸ್ಥಳೀಯ ಸರಬರಾಜುದಾರರಿಗೆ ಪಾವತಿಸಬೇಕಿದ್ದ ಬಾಕಿ ಹಣದಿಂದಾಗಿ ಲೀ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಕೇರಳದ ಕಾಮಗಾರಿಗಳ ಪಾವತಿಗಾಗಿ ಪಾಟಿ ಸಂಸ್ಥೆಯ ಮತ್ತೊಂದು ಯೋಜನೆಯ ಹಣವನ್ನು ಅವರು ಬಳಸಿಕೊಂಡಿದ್ದರು. ಈ ವಿಷಯವಾಗಿ ಮಲೇಷ್ಯಾದಲ್ಲಿದ್ದ ಸಂಸ್ಥೆಯ ಮೇಲಧಿಕಾರಿಗಳು ಲೀ ಅವರನ್ನು ಕರೆಸಿಕೊಂಡಿದ್ದರು. ಅಲ್ಲಿಗೆ ತೆರಳಿದ ಬಳಿಕ ಅವರು ಆತ್ಮಹತ್ಯೆ ಮಾಡಿಕೊಂಡರು ಎಂದು ಸಾಜನ್ ವಿವರಿಸಿದ್ದಾರೆ.

►2006ರ ತನಿಖೆಗೆ ಏನಾಯಿತು?

2006ರಲ್ಲಿ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳವು ಕೇರಳ ರಾಜ್ಯ ಸಾರಿಗೆ ಯೋಜನೆಗೆ (KSTP) ಸಂಬಂಧಿಸಿದ ವಿವಿಧ ಆರೋಪಗಳ ತನಿಖೆ ನಡೆಸಿತ್ತು. ಪೂರ್ಣಗೊಂಡ ಕಾಮಗಾರಿಗಳ ಬಿಲ್ ಬಿಡುಗಡೆ ಮಾಡಲು PWD ಅಧಿಕಾರಿಗಳು ಗುತ್ತಿಗೆದಾರರಿಂದ 2 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪವೂ ಇದರಲ್ಲಿ ಸೇರಿತ್ತು ಎಂದು ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು ಅಕ್ಟೋಬರ್ 14ರಂದು ಕೇರಳ ವಿಧಾನಸಭೆಗೆ ತಿಳಿಸಿದ್ದರು. ಆದರೆ, ಆರೋಪಗಳು ಸಾಬೀತಾಗದ ಕಾರಣ ಮುಂದಿನ ಕ್ರಮದ ಅಗತ್ಯವಿಲ್ಲ ಎಂದು ಇಲಾಖೆ ಶಿಫಾರಸು ಮಾಡಿತ್ತು.

2003 ಮತ್ತು 2006ರ ನಡುವೆ ಟೆಂಡರ್ ಪ್ರಕ್ರಿಯೆಯಿಲ್ಲದೆ ಹಂಚಿಕೆ ಮಾಡಲಾದ 76 ಕಾಮಗಾರಿಗಳಿಗೆ ಸಂಬಂಧಿಸಿದ ಮತ್ತೊಂದು ವಿಜಿಲೆನ್ಸ್ ತನಿಖೆಯಲ್ಲೂ ಕುಮಾರ್ ಹೆಸರು ಕೇಳಿಬಂದಿತ್ತು. ಕುಮಾರ್ ವಿರುದ್ಧದ ಆರೋಪ ಸೇರಿದಂತೆ ಈ ಎಲ್ಲ ಕಾಮಗಾರಿಗಳ ಕುರಿತು ವಿಜಿಲೆನ್ಸ್ ಇಲಾಖೆ ವಿಚಾರಣೆ ಆರಂಭಿಸಿತ್ತು. ಅಕ್ರಮಗಳನ್ನು ಸಾಬೀತುಪಡಿಸಲು ಸಾಧ್ಯವಾಗದ ಕಾರಣ, ಇಲಾಖೆಯು ಎಲ್ಲ ನಡಾವಳಿಗಳನ್ನು ಕೈಬಿಟ್ಟು, ಮುಂದಿನ ಕ್ರಮದ ಅಗತ್ಯವಿಲ್ಲ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

2012ರಲ್ಲಿ ಕೇರಳದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ವಿಜಿಲೆನ್ಸ್ ಇಲಾಖೆಯು 8 ಪ್ರಕರಣಗಳಿಗೆ ಸಂಬಂಧಿಸಿದಂತೆ "ಸಾಕ್ಷ್ಯಾಧಾರಗಳ ಕೊರತೆ" ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ನ್ಯಾಯಾಲಯವು ಈ ವರದಿಯನ್ನು ಸ್ವೀಕರಿಸಿದ್ದು, ಇದನ್ನು ಯಾರೂ ಪ್ರಶ್ನಿಸಿರಲಿಲ್ಲ.

►ಜ್ಞಾನೇಶ್ ಕುಮಾರ್ ವಿರುದ್ಧ ಭುಗಿಲೆದ್ದ ಪ್ರತಿಭಟನೆ

ಚುನಾವಣಾ ಆಯೋಗದ ಕಾರ್ಯಾಚರಣೆ ವೈಖರಿ ಮತ್ತು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳನ್ನು ಖಂಡಿಸಿ, ಸಿಇಸಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 2ರಿಂದ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.

ಸೆಪ್ಟೆಂಬರ್ 23ರಂದು ದಿ ಇಂಡಿಯನ್ ಎಕ್ಸ್ಪ್ರೆಸ್ ಪ್ರಕಟಿಸಿದ ತನಿಖಾ ವರದಿಯು ಈ ಪ್ರತಿಭಟನೆಗೆ ಮುಖ್ಯ ಕಾರಣವಾಯಿತು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ತಮ್ಮ ಗಮನಕ್ಕೆ ತರದೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿ, ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳುಗಳಲ್ಲಿ 14 ಬಾರಿ ಅಧಿಕೃತವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬುದನ್ನು ಈ ವರದಿ ಬಹಿರಂಗಪಡಿಸಿತ್ತು.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor