ಪಂಚಾಯತ್ ಚುನಾವಣೆಯಲ್ಲಿ 'ಇಬ್ಬರು ಮಕ್ಕಳ ನಿಯಮ': 2003ರ ತೀರ್ಪಿನ ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ಮುಂದಾಗಿದ್ದೇಕೆ?
ಅಮಾಲ್ ಶೇಖ್ – indianexpress. com ವರದಿ
Photo Credit : indianexpress.com
ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ಅನರ್ಹಗೊಳಿಸುವುದನ್ನು ಎತ್ತಿಹಿಡಿದಿದ್ದ 2003ರ ‘ಜಾವೇದ್ vs ಹರಿಯಾಣ ಸರ್ಕಾರ’ ಪ್ರಕರಣದ ತೀರ್ಪನ್ನು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್ ಬುಧವಾರ (ನವೆಂಬರ್ 4) ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆಲೋಕ್ ಅರಾಧೆ ಅವರನ್ನೊಳಗೊಂಡ ಪೀಠವು, “ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ದಂಡ ಅಥವಾ ಅನರ್ಹತೆ ವಿಧಿಸುವ ಕಾಯ್ದೆಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡಿವೆ. ಕಳೆದ ಕೆಲವು ದಶಕಗಳಲ್ಲಿ ದೇಶದ ಜನಸಂಖ್ಯಾ ಸ್ವರೂಪದಲ್ಲಿ ಆದ ಬದಲಾವಣೆಗಳಿಂದಾಗಿ ಜನಸಂಖ್ಯಾ ಸ್ಫೋಟದ ಭೀತಿ ದೂರವಾಗಿದೆ” ಎಂದು ಅಭಿಪ್ರಾಯಪಟ್ಟಿದೆ.
‘ಜಾವೇದ್’ ಪ್ರಕರಣದ ತೀರ್ಪನ್ನು ಮರುಪರಿಶೀಲಿಸುವ ಸಮಯ ಬಂದಿದೆ. ನಾವು ಸತ್ತ ಕುದುರೆಯ ಮೇಲೆ ಕುಳಿತು ಭವಿಷ್ಯದತ್ತ ಸಾಗಲು ಸಾಧ್ಯವಿಲ್ಲ. ಪ್ರಕೃತಿಯಲ್ಲಿ ಅತಿ ಬಲಶಾಲಿ ಅಥವಾ ಅತಿ ಬುದ್ಧಿವಂತ ಜೀವಿಯಷ್ಟೇ ಉಳಿಯುವುದಿಲ್ಲ; ಬದಲಿಗೆ, ಬದಲಾವಣೆಗೆ ತಕ್ಕಂತೆ ತಕ್ಷಣ ಸ್ಪಂದಿಸುವ ಜೀವಿಯಷ್ಟೇ ಉಳಿಯುತ್ತದೆ” ಎಂದು ನ್ಯಾಯಪೀಠ ಹೇಳಿದೆ.
►ಪ್ರಕರಣದ ಹಿನ್ನೆಲೆ ಏನು?
2022ರಲ್ಲಿ ಮಹಾರಾಷ್ಟ್ರದ ಕಾಕೋಡಾ ಗ್ರಾಮ ಪಂಚಾಯತ್ ಸರಪಂಚ್ ಆಗಿ ಆಯ್ಕೆಯಾಗಿದ್ದ ಮಂಗಳಾ ಭೀಮರಾವ್ ಇಂಗಳೆ ಅವರ ಆಯ್ಕೆಯನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಕೆಯಾಗಿತ್ತು. 1959ರ ಮಹಾರಾಷ್ಟ್ರ ಗ್ರಾಮ ಪಂಚಾಯತ್ ಕಾಯ್ದೆಯ ಪ್ರಕಾರ, ಇಬ್ಬರಿಗಿಂತ ಹೆಚ್ಚು ಮಕ್ಕಳಿರುವವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಮಂಗಳಾ ಅವರಿಗೆ 2014ರಲ್ಲಿ ಜನಿಸಿದ ಮಗು ಸೇರಿದಂತೆ ಒಟ್ಟು ಮೂರು ಮಕ್ಕಳಿದ್ದ ಕಾರಣ, ಹೆಚ್ಚುವರಿ ಜಿಲ್ಲಾಧಿಕಾರಿಯವರು 2024ರ ಅಕ್ಟೋಬರ್ನಲ್ಲಿ ಅವರನ್ನು ಅನರ್ಹಗೊಳಿಸಿದ್ದರು.
ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯನ್ನು ಹೆಚ್ಚುವರಿ ಆಯುಕ್ತರು 2025ರ ಏಪ್ರಿಲ್ನಲ್ಲಿ ವಜಾಗೊಳಿಸಿದ್ದರು. ಬಳಿಕ ಮುಂಬೈ ಹೈಕೋರ್ಟ್ ಕೂಡ 2025ರ ಆಗಸ್ಟ್ನಲ್ಲಿ ತಹಶೀಲ್ದಾರ್ ಮತ್ತು ಕಮಿಷನರ್ ಅವರ ಆದೇಶವನ್ನು ಎತ್ತಿಹಿಡಿದು, ಜನನ ಪ್ರಮಾಣಪತ್ರಗಳ ಆಧಾರದ ಮೇಲೆ ಅನರ್ಹತೆಯನ್ನು ಎತ್ತಿಹಿಡಿದಿತ್ತು.
►ಕಾನೂನು ಏನು ಹೇಳುತ್ತದೆ?
ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಂದ ಅಥವಾ ಹುದ್ದೆಗಳಿಂದ ಅನರ್ಹಗೊಳಿಸುವ ನಿಯಮ ಜಾರಿಯಲ್ಲಿರುವ ಹಲವು ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಒಂದು. ಜನಸಂಖ್ಯೆ ನಿಯಂತ್ರಣದ ಭಾಗವಾಗಿ 1995ರಲ್ಲಿ 'ಮಹಾರಾಷ್ಟ್ರ ಗ್ರಾಮ ಪಂಚಾಯತ್ ಕಾಯ್ದೆ 1959'ಕ್ಕೆ ತಿದ್ದುಪಡಿ ತರುವ ಮೂಲಕ ಈ ನಿಯಮವನ್ನು ಮೊದಲ ಬಾರಿಗೆ ಜಾರಿಗೆ ತರಲಾಯಿತು.
ಈ ಕಾಯ್ದೆಯ ನಿಯಮ 14(1)(j-1) ಪ್ರಕಾರ, ಇಬ್ಬರಿಗಿಂತ ಹೆಚ್ಚು ಮಕ್ಕಳಿರುವ ವ್ಯಕ್ತಿಯು ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಲು ಅನರ್ಹರಾಗುತ್ತಾರೆ. ಆದರೆ, ಈ ತಿದ್ದುಪಡಿ ಜಾರಿಗೆ ಬರುವ ವೇಳೆಗೆ ಈಗಾಗಲೇ ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದವರಿಗೆ ಇದರಿಂದ ವಿನಾಯಿತಿ ನೀಡಲಾಗಿತ್ತು. ಆದರೆ, ತಿದ್ದುಪಡಿಯ ನಂತರ ಮಕ್ಕಳ ಸಂಖ್ಯೆ ಹೆಚ್ಚಾಗಬಾರದು ಎಂಬ ಷರತ್ತು ವಿಧಿಸಲಾಗಿತ್ತು.
ತಿದ್ದುಪಡಿ ಜಾರಿಗೆ ಬಂದ ಒಂದು ವರ್ಷದೊಳಗೆ ಒಂದೇ ಹೆರಿಗೆಯಲ್ಲಿ ಹುಟ್ಟಿದ ಮಕ್ಕಳಿಗೂ ಈ ಅನರ್ಹತೆಯಿಂದ ವಿನಾಯಿತಿ ನೀಡಲಾಗಿದೆ.
ದಂಪತಿಗೆ ಈಗಾಗಲೇ ಒಂದು ಮಗುವಿದ್ದು, ನಂತರದ ಹೆರಿಗೆಯಲ್ಲಿ ಅವಳಿ ಅಥವಾ ಅದಕ್ಕಿಂತ ಹೆಚ್ಚು ಮಕ್ಕಳು ಹುಟ್ಟಿದರೆ, ಈ ಕಾನೂನಿನ ಅಡಿಯಲ್ಲಿ ಅವರನ್ನು 'ಒಂದೇ ಮಗು' ಎಂದು ಪರಿಗಣಿಸಲಾಗುತ್ತದೆ. ದತ್ತು ಮಕ್ಕಳನ್ನು ಈ ನಿಯಮದಿಂದ ಹೊರಗಿಡಲಾಗಿದೆ.
ಹರಿಯಾಣ, ರಾಜಸ್ಥಾನ, ಒಡಿಶಾ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಇಂತಹದ್ದೇ 'ಇಬ್ಬರು ಮಕ್ಕಳ ನಿಯಮ' ಜಾರಿಯಲ್ಲಿದೆ.
►2003ರ ‘ಜಾವೇದ್’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದೇನು?
‘ಜಾವೇದ್ vs ಹರಿಯಾಣ ಸರ್ಕಾರ’ (2003) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೊದಲ ಬಾರಿಗೆ ಇಬ್ಬರು ಮಕ್ಕಳ ಅನರ್ಹತೆ ನಿಯಮವನ್ನು ಎತ್ತಿಹಿಡಿದಿತ್ತು. ಹರಿಯಾಣ ಪಂಚಾಯತ್ ರಾಜ್ ಕಾಯ್ದೆ 1994ರ ನಿಯಮ 175(1)(q) ಪ್ರಕಾರ, ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಸರಪಂಚ್, ಪಂಚ್, ಪಂಚಾಯತ್ ಸಮಿತಿ ಅಥವಾ ಜಿಲ್ಲಾ ಪಂಚಾಯತ್ ಸದಸ್ಯ ಹುದ್ದೆಗಳನ್ನು ಹೊಂದಲು ಅನರ್ಹರಾಗಿದ್ದರು.
ಮೂವರು ನ್ಯಾಯಮೂರ್ತಿಗಳ ಪೀಠವು, ಇಬ್ಬರಿಗಿಂತ ಹೆಚ್ಚು ಮಕ್ಕಳಿರುವವರನ್ನು ಅನರ್ಹಗೊಳಿಸುವುದು ಕುಟುಂಬ ಯೋಜನೆಯನ್ನು ಪ್ರೋತ್ಸಾಹಿಸುವ ಸೂಕ್ತ ಮಾರ್ಗ ಎಂದು ಹೇಳಿತ್ತು. ಈ ನಿಯಮವು ಹೆಚ್ಚಿನ ಮಕ್ಕಳನ್ನು ಹೊಂದುವುದನ್ನು ತಡೆಯುವುದಿಲ್ಲ, ಬದಲಿಗೆ ಆ ನಿರ್ಧಾರಕ್ಕೆ ಚುನಾವಣಾ ಪರಿಣಾಮವನ್ನು ಜೋಡಿಸುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿತ್ತು.
"ಯಾರಾದರೂ ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಲು ಬಯಸಿದರೆ, ಪ್ರಸ್ತುತ ಕಾನೂನಿನ ಅಡಿಯಲ್ಲಿ ಅವರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಆದರೆ, ಅದಕ್ಕೆ ಸಣ್ಣ ಬೆಲೆ ತೆರಬೇಕಾಗುತ್ತದೆ. ಅದೇನೆಂದರೆ, ಪಂಚಾಯತ್ ಹುದ್ದೆಯನ್ನು ಕಳೆದುಕೊಳ್ಳುವುದು. ಇದರಲ್ಲಿ ಯಾವುದೇ ಕಾನೂನುಬಾಹಿರ ಕ್ರಮ ಇಲ್ಲ ಮತ್ತು ಇದು ಸಂವಿಧಾನಬಾಹಿರವೂ ಅಲ್ಲ" ಎಂದು ಕೋರ್ಟ್ ತೀರ್ಪು ನೀಡಿತ್ತು.
ಸಂವಿಧಾನದ 21ನೇ ವಿಧಿಯಡಿ ವೈಯಕ್ತಿಕ ಸ್ವಾತಂತ್ರ್ಯದ ಸವಾಲನ್ನು ನಿರಾಕರಿಸಿದ್ದ ಪೀಠ, ಹುದ್ದೆ ಕಳೆದುಕೊಳ್ಳುವ ಭೀತಿಯಿಲ್ಲದೆ ಮಕ್ಕಳಿಗೆ ಜನ್ಮ ನೀಡುವ ಹಕ್ಕು ವೈಯಕ್ತಿಕ ಸ್ವಾತಂತ್ರ್ಯದಲ್ಲಿ ಸೇರುತ್ತದೆ ಎಂಬ ವಾದವನ್ನು ತಳ್ಳಿಹಾಕಿತ್ತು.
ಅಲ್ಲದೆ, ಚುನಾವಣೆಗೆ ಸ್ಪರ್ಧಿಸುವ ಹಕ್ಕು ಸಂವಿಧಾನಾತ್ಮಕ ಮೂಲಭೂತ ಹಕ್ಕಲ್ಲ, ಅದೊಂದು ಶಾಸನಬದ್ಧ ಹಕ್ಕು. ಹೀಗಾಗಿ, ಶಾಸಕಾಂಗವು ಇದಕ್ಕೆ ಷರತ್ತುಗಳನ್ನು ವಿಧಿಸಬಹುದು ಎಂದು ಕೋರ್ಟ್ ಪ್ರತಿಪಾದಿಸಿತ್ತು. "ಜನಸಾಮಾನ್ಯರ ಸಾಮಾಜಿಕ-ಆರ್ಥಿಕ ಕಲ್ಯಾಣ ಮತ್ತು ಆರೋಗ್ಯ ರಕ್ಷಣೆಯಂತಹ ಶ್ಲಾಘನೀಯ ಉದ್ದೇಶವನ್ನು ಸಾಧಿಸುವ ಗುರಿಯನ್ನು ಈ ಕಾಯ್ದೆ ಹೊಂದಿದ್ದು, ಇದು ರಾಷ್ಟ್ರೀಯ ಜನಸಂಖ್ಯಾ ನೀತಿಗೆ ಪೂರಕವಾಗಿದೆ. ಇದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗುವುದಿಲ್ಲ" ಎಂದು ಪೀಠ ತಿಳಿಸಿತ್ತು.
►ಈಗ ಸುಪ್ರೀಂ ಕೋರ್ಟ್ ಹೇಳುತ್ತಿರುವುದೇನು?
'ಜಾವೇದ್' ಪ್ರಕರಣದ ತೀರ್ಪು ನೀಡಿದ್ದ ಸಂದರ್ಭದಲ್ಲಿದ್ದ ಜನಸಂಖ್ಯಾ ಸನ್ನಿವೇಶಕ್ಕೂ ಈಗಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಭಾರತದ ಒಟ್ಟು ಸಂತಾನೋತ್ಪತ್ತಿ ದರ (TFR) 2003ರಲ್ಲಿ 3.0 ಇತ್ತು. ಈಗ ಅದು 1.9ಕ್ಕೆ ಕುಸಿದಿದೆ. ಇದು ಜನಸಂಖ್ಯೆ ಸ್ಥಿರವಾಗಿರಲು ಅಗತ್ಯವಿರುವ ಬದಲಿ ಪ್ರಮಾಣದ 2.1 ಮಟ್ಟಕ್ಕಿಂತ ಕಡಿಮೆಯಾಗಿದೆ.
ಬದಲಿ ಪ್ರಮಾಣ ಎಂದರೆ, ಒಂದು ಪೀಳಿಗೆಯ ಜನಸಂಖ್ಯೆಯನ್ನು ಮುಂದಿನ ಪೀಳಿಗೆಯು ಅಷ್ಟೇ ಪ್ರಮಾಣದಲ್ಲಿ ಭರ್ತಿ ಮಾಡಲು ಬೇಕಾಗುವ ಸಂತಾನೋತ್ಪತ್ತಿ ದರ (ಪ್ರತಿ ಮಹಿಳೆಗೆ ಸರಾಸರಿ 2.1 ಮಕ್ಕಳು). ಈ ದರಕ್ಕಿಂತ ಕಡಿಮೆಯಿದ್ದರೆ ಕಾಲಕ್ರಮೇಣ ಜನಸಂಖ್ಯೆ ಕುಸಿಯುತ್ತದೆ; ಹೆಚ್ಚಿದ್ದರೆ ಜನಸಂಖ್ಯೆ ವೃದ್ಧಿಯಾಗುತ್ತದೆ.
ಭಾರತದಲ್ಲಿ ಇಂದಿಗೂ ಹೆಚ್ಚಿನ ಜನಸಂಖ್ಯೆಯಿದೆ ಎಂಬ ಒಂದೇ ಕಾರಣಕ್ಕೆ ಈ ಧನಾತ್ಮಕ ಬದಲಾವಣೆಯನ್ನು ನಿರ್ಲಕ್ಷಿಸುವುದು ಅಪಾಯಕಾರಿ ನಿರ್ಲಕ್ಷ್ಯವಾಗುತ್ತದೆ. ಪ್ರಸ್ತುತ ನೈಜ ಪರಿಸ್ಥಿತಿಗೆ ತಕ್ಕಂತೆ ನೀತಿ-ನಿಯಮಗಳನ್ನು ರೂಪಿಸುವುದು ಇಂದಿನ ಅಗತ್ಯವಾಗಿದೆ ಎಂದು ಪೀಠ ತಿಳಿಸಿದೆ.
ಇಂತಹ ನಿರ್ಬಂಧಗಳನ್ನು ಕೇವಲ ಪಂಚಾಯತ್ ಮಟ್ಟದ ಜನಪ್ರತಿನಿಧಿಗಳಿಗೆ ಮಾತ್ರ ಅನ್ವಯಿಸಿ, ಸಂಸತ್ ಅಥವಾ ಶಾಸನಸಭೆಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಅನ್ವಯಿಸದಿರುವುದನ್ನು ಪೀಠ ಪ್ರಶ್ನಿಸಿದೆ. ತಳಮಟ್ಟದ ಜನಪ್ರತಿನಿಧಿಗಳ ಮೇಲೆ ಮಾತ್ರ ಇಂತಹ ನಿಯಮ ಹೇರುವುದು ಪೂರ್ವಾಗ್ರಹಪೀಡಿತ ನಿರ್ಧಾರ ಎಂದು ಅಭಿಪ್ರಾಯಪಟ್ಟಿದೆ.
ಪ್ರಾತಿನಿಧ್ಯದ ಹಕ್ಕು ಮತ್ತು ಸರ್ಕಾರದ ಅಡಿಯಲ್ಲಿ ಹುದ್ದೆ ಹೊಂದುವ ಹಕ್ಕು ನಾಗರಿಕತ್ವವನ್ನು ವ್ಯಾಖ್ಯಾನಿಸುವ ಅತ್ಯಂತ ಪ್ರಮುಖ ಎರಡು ಹಕ್ಕುಗಳಾಗಿವೆ ಎಂದು ಕೋರ್ಟ್ ಹೇಳಿದೆ.
'ಜಾವೇದ್' ಪ್ರಕರಣದಲ್ಲಿ, ಈ ಅನರ್ಹತೆ ನಿಯಮವು ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ, ಪ್ರಸ್ತುತ ಪೀಠವು ಈ ವಾದವನ್ನು ನಿರಾಕರಿಸಿದ್ದು, ಈ ವಾದ ದೇಶದ ಸಾಮಾಜಿಕ ಪರಿಸ್ಥಿತಿಗೆ ಹತ್ತಿರವಾಗಿಲ್ಲ ಎಂದಿದೆ. 2009ರ ಪಂಚಾಯತ್ ರಾಜ್ ಸಚಿವಾಲಯದ ಅಧ್ಯಯನವನ್ನು ಉಲ್ಲೇಖಿಸಿದ ಪೀಠ, ಪುರುಷಪ್ರಧಾನ ಸಮಾಜದಲ್ಲಿ ಇಬ್ಬರು ಮಕ್ಕಳ ನಿಯಮವು ಮಹಿಳೆಯರನ್ನು ಸಬಲೀಕರಣಗೊಳಿಸುವ ಬದಲು ಅವರ ಸ್ಥಾನಮಾನವನ್ನು ಇನ್ನಷ್ಟು ದುರ್ಬಲಗೊಳಿಸಿದೆ ಎಂದು ಹೇಳಿದೆ.
ಮಹಿಳೆಯರಿಗೆ ತಮ್ಮ ಸಂತಾನೋತ್ಪತ್ತಿಯ ನಿರ್ಧಾರಗಳ ಮೇಲೆ ಪೂರ್ಣ ನಿಯಂತ್ರಣವಿಲ್ಲದಿರುವಾಗ, ಅವರು ಚುನಾವಣಾ ಅನರ್ಹತೆಯನ್ನು ಎದುರಿಸಬೇಕಾಗುತ್ತದೆ. ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಬಲವಂತದ ಗರ್ಭಪಾತ, ಗರ್ಭಿಣಿ ಪತ್ನಿಯರನ್ನು ತೊರೆಯುವುದು ಮತ್ತು ಮಗುವಿನ ಪಿತೃತ್ವವನ್ನೇ ನಿರಾಕರಿಸುವಂತಹ ಘಟನೆಗಳು ನಡೆಯುತ್ತಿರುವುದನ್ನು ಈ ಅಧ್ಯಯನ ತೋರಿಸಿದೆ.
ಈ ಕಾಯ್ದೆಯು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಸಿಗುವ ಸಂತಾನೋತ್ಪತ್ತಿಯ ಸ್ವಾಯತ್ತತೆಯ ಹಕ್ಕನ್ನು ಕಸಿಯುತ್ತದೆ ಎಂದು ಪೀಠ ಕಳವಳ ವ್ಯಕ್ತಪಡಿಸಿದೆ. "ಯಾವಾಗ, ಎಷ್ಟು ಮಕ್ಕಳನ್ನು ಹೊಂದಬೇಕು ಎಂಬುದು ವ್ಯಕ್ತಿಯ ತೀರಾ ವೈಯಕ್ತಿಕ ನಿರ್ಧಾರ. ಇದು ಯಾವುದೇ ಬಾಹ್ಯ ಒತ್ತಡಗಳಿಲ್ಲದೆ ವ್ಯಕ್ತಿಯ ಸ್ವತಂತ್ರ ವ್ಯಾಪ್ತಿಯಲ್ಲಿ ಇರಬೇಕು" ಎಂದು ಕೋರ್ಟ್ ಹೇಳಿದೆ.
ಹಳ್ಳಿಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಬಯಸುವವರನ್ನು ಮಾತ್ರವೇ ಗುರಿಯಾಗಿಸಿಕೊಂಡು, ಪಂಚಾಯತ್ ಹುದ್ದೆ ಮತ್ತು ಜನಸಂಖ್ಯೆ ನಿಯಂತ್ರಣವನ್ನು ಪರಸ್ಪರ ಜೋಡಿಸಿರುವುದು ಸೂಕ್ತವಲ್ಲ. ಗರಿಷ್ಠ ಸಂತಾನೋತ್ಪತ್ತಿ ದರಕ್ಕೆ ಸಿಕ್ಕಾಪಟ್ಟೆ ಸಂಕೀರ್ಣ ಕಾರಣಗಳಿವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಮೂರನೇ ಮಗುವಿನ ಜನನವನ್ನು ಚುನಾವಣಾ ಅನರ್ಹತೆಗೆ ಜೋಡಿಸುವುದರಿಂದ, ವ್ಯಕ್ತಿಯೊಬ್ಬರು ತಮ್ಮ ಸಂತಾನೋತ್ಪತ್ತಿಯ ಸ್ವತಂತ್ರ ಹಕ್ಕು ಅಥವಾ ಪ್ರಜಾಪ್ರಭುತ್ವದ ಆಡಳಿತದಲ್ಲಿ ಭಾಗವಹಿಸುವಿಕೆ – ಇವೆರಡರಲ್ಲಿ ಒಂದನ್ನು ಆಯ್ದುಕೊಳ್ಳುವ ಕಠಿಣ ಸನ್ನಿವೇಶ ಎದುರಾಗುತ್ತದೆ. ಇದು ಸಂವಿಧಾನದ 21ನೇ ವಿಧಿಗೆ ಧಕ್ಕೆ ತರುತ್ತದೆ ಎಂದು ಪೀಠ ಹೇಳಿದೆ.
'ಜಾವೇದ್' ಪ್ರಕರಣದ ತಾರ್ಕಿಕತೆಯನ್ನು ಮುಂದುವರಿಸಲು ಬಿಟ್ಟರೆ, ಸಾರ್ವಜನಿಕ ಹುದ್ದೆ ನಿರ್ವಹಿಸುವ ಸಾಮರ್ಥ್ಯಕ್ಕೂ ಯಾವುದೇ ಸಂಬಂಧವಿಲ್ಲದ ಕಾರಣಗಳನ್ನು ನೀಡಿ ನಾಗರಿಕರ ಒಂದು ಇಡೀ ಸಮುದಾಯವನ್ನೇ ರಾಜಕೀಯ ಪ್ರಾತಿನಿಧ್ಯದಿಂದ ಹೊರಗಿಟ್ಟಂತಾಗುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ.
ಕಾಯ್ದೆಗಳನ್ನು ಜಾರಿಗೆ ತಂದಾಗ ಅವು ಸಮಂಜಸವಾಗಿದ್ದರೂ, ಕಾಲಕ್ರಮೇಣ ಅವು ಅಸಮಂಜಸ ಮತ್ತು ಅನಿಯಂತ್ರಿತವಾಗಬಹುದು ಎಂದಿದೆ.
ಮಹಾರಾಷ್ಟ್ರ ಕಾಯ್ದೆಯ ಷರತ್ತು ಅಥವಾ 'ಜಾವೇದ್' ಪ್ರಕರಣದ ಸಿಂಧುತ್ವ ನೇರವಾಗಿ ತಮ್ಮ ಮುಂದೆ ಸವಾಲಾಗಿ ಬಂದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಆದರೆ, ಶಾಸಕಾಂಗಕ್ಕೆ ಕಾನೂನು ತಿದ್ದುಪಡಿ ಮಾಡಿ ಅಥವಾ ರದ್ದುಗೊಳಿಸಿ ಎಂದು ನ್ಯಾಯಾಲಯಗಳು ನಿರ್ದೇಶನ ನೀಡಲು ಸಾಧ್ಯವಿಲ್ಲದಿದ್ದರೂ, ಬದಲಾದ ಸನ್ನಿವೇಶದಲ್ಲಿ ಆ ಕಾನೂನುಗಳ ಜಾರಿ ಸಂವಿಧಾನಾತ್ಮಕವಾಗಿ ಸಮಂಜಸವಾಗಿದೆಯೇ ಎಂಬುದನ್ನು ನ್ಯಾಯಾಲಯಗಳು ಪರಿಶೀಲಿಸಬಹುದು ಎಂದು ಪೀಠ ಹೇಳಿದೆ.
ಸೌಜನ್ಯ: indianexpress.com