US ಮಧ್ಯಂತರ ಚುನಾವಣೆಯಿಂದಾಗಿ ತೈಲ ದರ ಇಳಿಕೆ ಸಾಧ್ಯತೆ; ಭಾರತದ ರಷ್ಯಾ ತೈಲ ಆಮದಿನ ಮೇಲೆ ಇದು ಯಾವ ರೀತಿ ಪರಿಣಾಮ ಬೀರಲಿದೆ?
ಸುಕಲ್ಪ್ ಶರ್ಮಾ – indianexpress. com ವರದಿ
ಸಾಂದರ್ಭಿಕ ಚಿತ್ರ | Photo Credit : magnific
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಾರ್ಟಿ ಭರ್ಜರಿ ಜಯ ಸಾಧಿಸಿ, ಅಮೆರಿಕನ್ ಕಾಂಗ್ರೆಸ್ನ ಎರಡೂ ಸದನಗಳ (ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್) ಮೇಲೆ ನಿಯಂತ್ರಣ ಸಾಧಿಸಿದೆ. ಈ ರಾಜಕೀಯ ಬದಲಾವಣೆಯು ಇರಾನ್ ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವ ಮತ್ತು ಹಾರ್ಮುಝ್ ಜಲಸಂಧಿಯ ಮೂಲಕ ಇಂಧನ ಪೂರೈಕೆಯನ್ನು ಪುನರಾರಂಭಿಸುವ ಭರವಸೆಯನ್ನು ಹೆಚ್ಚಿಸಿದೆ. ಇದರ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ನಿರಂತರವಾಗಿ ಕುಸಿಯುವ ಸಾಧ್ಯತೆಯಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ವಿಶ್ವದಲ್ಲೇ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ನಾಲ್ಕನೇ ಅತಿದೊಡ್ಡ ರಿಫೈನಿಂಗ್ ರಾಷ್ಟ್ರವಾಗಿರುವ ಭಾರತಕ್ಕೆ, ತೈಲ ದರ ಕುಸಿತವು ದೊಡ್ಡ ಮಟ್ಟದ ಆರ್ಥಿಕ ಅನುಕೂಲ ಒದಗಿಸಲಿದೆ. ಇದು ಭಾರತದ ಆಮದು ವೆಚ್ಚವನ್ನು ತಗ್ಗಿಸುವುದಲ್ಲದೆ, ಹಣದುಬ್ಬರದ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಶೀಯ ತೈಲ ಮಾರುಕಟ್ಟೆ ಕಂಪೆನಿಗಳ (OMCs) ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ.
ಡೆಮಾಕ್ರಟಿಕರು ಕಾಂಗ್ರೆಸ್ ನಲ್ಲಿ ಬಹುಮತ ಪಡೆದಿರುವುದು ಭಾರತಕ್ಕೆ ಸವಾಲಿನ ಪರಿಸ್ಥಿತಿಯನ್ನೂ ಸೃಷ್ಟಿಸಬಹುದು. ರಷ್ಯಾ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸುವುದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ರಾಜಕೀಯವಾಗಿ ಸವಾಲಾಗಲಿದೆ. ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ರಷ್ಯಾದ ಮೇಲೆ ಇನ್ನಷ್ಟು ಕಠಿಣ ನಿಯಮಗಳನ್ನು ಹೇರಲು ಡೆಮಾಕ್ರಟಿಕರು ಒತ್ತಡ ಹೇರುವ ಸಾಧ್ಯತೆಯಿದೆ. ಇದು ಭಾರತದ ಅತಿದೊಡ್ಡ ತೈಲ ಪೂರೈಕೆದಾರ ದೇಶವಾದ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಬಹುದು.
ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ, ಬುಧವಾರ ಜಾಗತಿಕ ಬೆಂಚ್ಮಾರ್ಕ್ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ. 8.7ರಷ್ಟು ಕುಸಿದು ಪ್ರತಿ ಬ್ಯಾರೆಲ್ ಗೆ 94.62 ಡಾಲರ್ ಗೆ ತಲುಪಿತ್ತು. ಗುರುವಾರ ಮಧ್ಯಾಹ್ನದ ವೇಳೆಗೆ ತೈಲ ಬೆಲೆ ಸ್ಥಿರವಾಗಿ ಮುಂದುವರಿದಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಯುದ್ಧ ತಕ್ಷಣವೇ ಕೊನೆಗೊಳ್ಳುತ್ತದೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ವಿದೇಶಾಂಗ ನೀತಿಯ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೊಡ್ಡ ಮಟ್ಟದ ಅಧಿಕಾರ ಹೊಂದಿದ್ದು, ಚುನಾವಣೆಯ ಈ ಹಿನ್ನಡೆಯು ಪಶ್ಚಿಮ ಏಷ್ಯಾ ಬಿಕ್ಕಟ್ಟಿನಲ್ಲಿ ಅವರು ಇನ್ನಷ್ಟು ಆಕ್ರಮಣಕಾರಿ ನಿಲುವು ತಳೆಯುವಂತೆ ಮಾಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
►ಇರಾನ್ ಬಿಕ್ಕಟ್ಟು: ಇಂಧನ ಮಾರುಕಟ್ಟೆಗೆ ಸದ್ಯದ ದೊಡ್ಡ ಚಿಂತೆ
ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಹಿನ್ನಡೆ ಅನುಭವಿಸಿರುವುದು ಯುದ್ಧಕ್ಕೆ ತೆರೆ ಎಳೆಯುವ ಸಂಬಂಧ ಇರಾನ್ ಜೊತೆ ಸಂಧಾನ ನಡೆಸಲು ಅಮೆರಿಕದ ಮೇಲೆ ಒತ್ತಡವನ್ನು ಹೆಚ್ಚಿಸಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಇರಾನ್ ಯುದ್ಧದ ವಿಷಯದಲ್ಲಿ ರಿಪಬ್ಲಿಕನ್ ಪಕ್ಷದ ಒಳಗಡೆಯೇ ಭಿನ್ನಾಭಿಪ್ರಾಯಗಳು ಮೂಡುತ್ತಿವೆ. ಚುನಾವಣೆಯ ಸೋಲಿಗೆ ಯುದ್ಧವೇ ಕಾರಣ ಎಂದು ಟ್ರಂಪ್ ಆಡಳಿತದ ವಿದೇಶಾಂಗ ನೀತಿಯನ್ನು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಬಹಿರಂಗವಾಗಿಯೇ ಟೀಕಿಸಿದ್ದಾರೆ.
"ಮಿಲಿಟರಿ ದಾಳಿ, ತಡೆಗೋಡೆ ಮತ್ತು ನಿರ್ಬಂಧಗಳ ವಿಷಯದಲ್ಲಿ ಅಧ್ಯಕ್ಷರು ಪೂರ್ಣ ಅಧಿಕಾರ ಹೊಂದಿರುತ್ತಾರೆ. ಯಾವುದೇ ವಾರ್ ಪವರ್ಸ್ ರೆಸಲ್ಯೂಶನ್ ಕೂಡ ಅಧ್ಯಕ್ಷರ ವಿಟೋ ಅಧಿಕಾರವನ್ನು ಮೀರಿಸಲು ಸಾಧ್ಯವಾಗಿಲ್ಲ. ಎರಡೂ ಸದನಗಳಲ್ಲಿ ಡೆಮಾಕ್ರಟಿಕರ ಬಲವೂ ವಿಟೋ ಮೀರಿಸುವಷ್ಟಿಲ್ಲ. ಆದರೆ ಡೆಮಾಕ್ರಟಿಕ್ ಆಡಳಿತದ ಅಮೆರಿಕನ್ ಕಾಂಗ್ರೆಸ್ ಯುದ್ಧ ಮುಂದುವರಿಸುವುದನ್ನು ಹೆಚ್ಚು ವೆಚ್ಚದಾಯಕವನ್ನಾಗಿ ಮಾಡಬಹುದು. ಸೇನಾ ವೆಚ್ಚಕ್ಕೆ ಷರತ್ತು ವಿಧಿಸುವುದು ಮತ್ತು ಪ್ರಮುಖ ಅಧಿಕಾರಿಗಳ ನೇಮಕಾತಿಯನ್ನು ತಡೆಹಿಡಿಯುವ ಅಧಿಕಾರ ಕಾಂಗ್ರೆಸ್ಗೆ ಇದೆ. ಹಾಗಾಗಿ, ಮತ್ತೆ ದಾಳಿ ನಡೆಸುವ ಬದಲು ಹಾರ್ಮುಝ್ ಜಲಸಂಧಿಯಲ್ಲಿ ಸಂಧಾನ ಒಪ್ಪಂದ ಮಾಡಿಕೊಳ್ಳಲು ಟ್ರಂಪ್ ಆಡಳಿತದ ಮೇಲೆ ಸಾಂಸ್ಥಿಕ ಒತ್ತಡ ಹೆಚ್ಚಲಿದೆ" ಎಂದು ಇಂಧನ ಕ್ಷೇತ್ರದ ಸಂಶೋಧನಾ ಸಂಸ್ಥೆ 'ರೈಸ್ಟಾಡ್ ಎನರ್ಜಿ' ಹೇಳಿದೆ.
ಅಬುಧಾಬಿ ಮೂಲದ ಇಂಧನ ವಿಶ್ಲೇಷಕಿ ನಟಾಲಿಯಾ ಕಟೋನಾ ಮಾತನಾಡಿ, ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಕೊನೆಗೊಂಡು ಇಂಧನ ಪೂರೈಕೆ ಸಾಮಾನ್ಯ ಸ್ಥಿತಿಗೆ ಮರಳುವ ಭರವಸೆ ಮೂಡಿದ್ದರೂ, ತಕ್ಷಣಕ್ಕೆ ಸಂಪೂರ್ಣ ಬದಲಾವಣೆ ನಿರೀಕ್ಷಿಸುವುದು ಸೂಕ್ತವಲ್ಲ ಎಂದು ಎಚ್ಚರಿಸಿದ್ದಾರೆ.
"ಯುದ್ಧದಿಂದಾದ ರಾಜಕೀಯ ನಷ್ಟವನ್ನು ಟ್ರಂಪ್ ಒಪ್ಪಿಕೊಂಡಿದ್ದರೂ, ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಮತದಾನ ಮುಗಿದ ಮರುದಿನವೇ (ನವೆಂಬರ್ 4) ಇರಾನ್ ತೈಲ ಸಾಗಿಸುವ ಹಡಗುಗಳಿಗೆ ನಕಲಿ ಬಾವುಟಗಳನ್ನು ನೀಡುತ್ತಿದ್ದ ಜಾಲದ ಮೇಲೆ ವಾಷಿಂಗ್ಟನ್ ನಿರ್ಬಂಧ ಹೇರಿದೆ. ಜನವರಿ 3ರಂದು ಅಧಿಕಾರ ವಹಿಸಿಕೊಂಡ ನಂತರ ಡೆಮಾಕ್ರಟಿಕರು ಕಠಿಣ ಪ್ರಶ್ನೆಗಳನ್ನು ಕೇಳಬಹುದು. ಆದರೆ ಅಲ್ಲಿಯವರೆಗೆ ಟ್ರಂಪ್ ತಮ್ಮ ನಿರ್ಧಾರಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಕ್ತ ಅವಕಾಶ ಹೊಂದಿದ್ದಾರೆ" ಎಂದು ಅವರು ಹೇಳಿದ್ದಾರೆ.
►ತೈಲ ದರ ಇಳಿದರೆ ಭಾರತಕ್ಕೆ ಲಾಭ
ಹಾರ್ಮುಝ್ ಜಲಸಂಧಿಯ ಮೂಲಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಇಂಧನ ಆಮದಿಗಾಗಿ ಪಶ್ಚಿಮ ಏಷ್ಯಾದ ಮೇಲೆಯೇ ಹೆಚ್ಚು ಅವಲಂಬಿತವಾಗಿರುವ ಭಾರತದ ದುರ್ಬಲತೆಯನ್ನು ಎತ್ತಿಹಿಡಿದಿದೆ.
ಯುದ್ಧ ಆರಂಭವಾಗುವ ಮುನ್ನ, ಭಾರತ ಆಮದು ಮಾಡಿಕೊಳ್ಳುತ್ತಿದ್ದ ಶೇ. 40ರಷ್ಟು ಕಚ್ಚಾ ತೈಲ, ಶೇ. 60ರಷ್ಟು ಎಲ್ಎನ್ಜಿ (LNG) ಮತ್ತು ಶೇ. 90ರಷ್ಟು ಎಲ್ಪಿಜಿ (LPG) ಹಾರ್ಮುಝ್ ಜಲಸಂಧಿಯ ಮೂಲಕವೇ ಸರಬರಾಜಾಗುತ್ತಿತ್ತು. ಭಾರತವು ತನ್ನ ಬಳಕೆಯ ಶೇ. 88ಕ್ಕೂ ಹೆಚ್ಚು ಕಚ್ಚಾ ತೈಲ, ಶೇ. 60ರಷ್ಟು ಎಲ್ಪಿಜಿ ಮತ್ತು ಶೇ. 50ರಷ್ಟು ನೈಸರ್ಗಿಕ ಅನಿಲಕ್ಕಾಗಿ ಆಮದನ್ನೇ ಅವಲಂಬಿಸಿದೆ.
ಭಾರತೀಯ ರಿಫೈನರಿಗಳು ರಷ್ಯಾದಿಂದ ಹೆಚ್ಚಿನ ತೈಲ ಖರೀದಿಸುವ ಮೂಲಕ ಆಮದು ಮೂಲಗಳನ್ನು ವಿಸ್ತರಿಸಿದ್ದರೂ, ಗಲ್ಫ್ ರಾಷ್ಟ್ರಗಳ ತೈಲವು ಭಾರತದ ಇಂಧನ ಅಗತ್ಯಕ್ಕೆ ಇಂದಿಗೂ ಅತ್ಯಂತ ಪ್ರಮುಖವಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಗಲ್ಫ್ ಕಚ್ಚಾ ತೈಲ ಪೂರೈಕೆ ಸುಧಾರಿಸಿದೆಯಾದರೂ, ಯುದ್ಧದ ಅಪಾಯದಿಂದಾಗಿ ಸಾಗಣೆ ವೆಚ್ಚ ಹೆಚ್ಚಿರುವುದರಿಂದ ತೈಲ ದರ ದುಬಾರಿಯಾಗಿಯೇ ಉಳಿದಿದೆ.
"ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಶಮನಗೊಂಡರೆ ಭಾರತಕ್ಕೆ ಲಾಭವಾಗಲಿದೆ. ಇದರಿಂದ ತೈಲ ಪೂರೈಕೆ ಹೆಚ್ಚು ಭರವಸೆಯಿಂದ ನಡೆಯಲಿದ್ದು, ಸಾಗಣೆ ವೆಚ್ಚವೂ ಕಡಿಮೆಯಾಗಲಿದೆ" ಎಂದು ಕಟೋನಾ ಅಭಿಪ್ರಾಯಪಟ್ಟಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಉಲ್ಲೇಖಿಸಿದೆ.
ತೈಲ ಸಾಗಣೆ ಹಡಗುಗಳ ಸಂಚಾರ ಸಂಪೂರ್ಣ ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ಮತ್ತು ಮುಂದಿನ ಅಡಚಣೆಗಳ ಭೀತಿ ತಪ್ಪುವವರೆಗೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಮೂಲ ಬೆಲೆ ಕಡಿಮೆಯಾದರೂ ಭಾರತಕ್ಕೆ ತಲುಪುವ ಇಂಧನದ ದರದಲ್ಲಿ ಅನಿಶ್ಚಿತತೆ ಮುಂದುವರಿಯಲಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಭಾರತದ ತೈಲ ಆಮದು ವೆಚ್ಚ ಶೇ. 46.4ರಷ್ಟು ಹೆಚ್ಚಾಗಿ 90.6 ಬಿಲಿಯನ್ ಡಾಲರ್ ಗೆ ತಲುಪಿದೆ. (ಕಳೆದ ಇಡೀ ಹಣಕಾಸು ವರ್ಷದಲ್ಲಿ ಒಟ್ಟು ತೈಲ ಆಮದು ವೆಚ್ಚ ಸುಮಾರು 135 ಬಿಲಿಯನ್ ಡಾಲರ್ ಆಗಿತ್ತು). ಎಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಎಲ್ಎನ್ಜಿ ಆಮದು ವೆಚ್ಚ ಶೇ. 23.2ರಷ್ಟು ಹೆಚ್ಚಾಗಿ 8.5 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.
ಭಾರತವು ವರ್ಷಕ್ಕೆ 1.8ರಿಂದ 2 ಬಿಲಿಯನ್ ಬ್ಯಾರಲ್ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಪ್ರತಿ ಬ್ಯಾರೆಲ್ ತೈಲ ಬೆಲೆಯಲ್ಲಿ 1 ಡಾಲರ್ ಹೆಚ್ಚಳವಾದರೂ ಭಾರತದ ವಾರ್ಷಿಕ ಆಮದು ವೆಚ್ಚ ಸುಮಾರು 2 ಬಿಲಿಯನ್ ಡಾಲರ್ ನಷ್ಟು ಹೆಚ್ಚಾಗುತ್ತದೆ. ನೊಮುರಾ ಸಂಸ್ಥೆಯ ವರದಿಯ ಪ್ರಕಾರ, ತೈಲ ದರ ಏರಿಕೆಯಿಂದ ಹೆಚ್ಚು ಸಂಕಷ್ಟಕ್ಕೊಳಗಾಗುವ ಏಷ್ಯಾದ ಮೂರು ಪ್ರಮುಖ ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಿದೆ. ಕಚ್ಚಾ ತೈಲ ದರದಲ್ಲಿ ಶೇ. 10ರಷ್ಟು ಏರಿಕೆಯಾದರೆ ದೇಶದ ಪ್ರಸಕ್ತ ಖಾತೆ ಕೊರತೆ GDPಯ ಶೇ. 0.4ರಷ್ಟು ವಿಸ್ತರಿಸುತ್ತದೆ. ಕಚ್ಚಾ ತೈಲವೇ ಭಾರತದ ಅತಿದೊಡ್ಡ ಆಮದು ವಸ್ತುವಾಗಿದೆ.
►ಮಧ್ಯಂತರ ಚುನಾವಣೆಯಿಂದ ರಷ್ಯಾ ಇಂಧನ ವಲಯಕ್ಕಾಗುವ ಪರಿಣಾಮಗಳು
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾಗುವುದು ಭಾರತಕ್ಕೆ ಅನುಕೂಲಕರವಾದರೂ, ರಷ್ಯಾ ವಿರುದ್ಧ ಅಮೆರಿಕ ಕಠಿಣ ನಿರ್ಬಂಧಗಳನ್ನು ಹೇರುವ ಸಾಧ್ಯತೆಯು ಭಾರತಕ್ಕೆ ತೊಡಕಾಗಬಹುದು. ಕೆಪ್ಲರ್ ಸಂಸ್ಥೆಯ ಸರಕು ಸಾಗಣೆ ಮಾಹಿತಿಯ ಪ್ರಕಾರ, ಪಶ್ಚಿಮ ಏಷ್ಯಾದಿಂದ ತೈಲ ಆಮದು ಚೇತರಿಸಿಕೊಂಡಿದ್ದರೂ, ಸೆಪ್ಟೆಂಬರ್ ಒಂದೇ ತಿಂಗಳಿನಲ್ಲಿ ಭಾರತವು ರಷ್ಯಾದಿಂದ ದಿನಕ್ಕೆ 1.9 ಮಿಲಿಯನ್ ಬ್ಯಾರಲ್ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿತ್ತು. ಇದು ದೇಶದ ಒಟ್ಟು ಆಮದಿನ ಶೇ. 35ಕ್ಕಿಂತ ಹೆಚ್ಚಾಗಿದೆ. ಜುಲೈನಲ್ಲಿ ಈ ಪ್ರಮಾಣವು ಸಾರ್ವಕಾಲಿಕ ಗರಿಷ್ಠ ಮಟ್ಟವಾದ ದಿನಕ್ಕೆ 2.8 ಮಿಲಿಯನ್ ಬ್ಯಾರಲ್ ಗೆ ತಲುಪಿತ್ತು.
ಉಕ್ರೇನ್ ಯುದ್ಧ ಆರಂಭವಾದ ನಂತರ ರಷ್ಯಾದಿಂದ ಭಾರತದ ತೈಲ ಆಮದು ಗಣನೀಯವಾಗಿ ಹೆಚ್ಚಾಯಿತು. 2022ರ ಫೆಬ್ರವರಿಯಲ್ಲಿ ಉಕ್ರೇನ್ ಮೇಲಿನ ದಾಳಿಯ ನಂತರ ಪಾಶ್ಚಿಮಾತ್ಯ ದೇಶಗಳು ರಷ್ಯಾದ ತೈಲವನ್ನು ನಿರಾಕರಿಸಿದಾಗ, ರಷ್ಯಾ ರಿಯಾಯಿತಿ ದರದಲ್ಲಿ ತೈಲ ಮಾರಾಟ ಮಾಡಲು ಮುಂದಾಯಿತು. ಭಾರತದ ತೈಲ ರಿಫೈನರಿಗಳು ಈ ಅವಕಾಶವನ್ನು ಬಳಸಿಕೊಂಡವು. ಪರಿಣಾಮವಾಗಿ, ಹಿಂದೆ ಅಲ್ಪ ಪ್ರಮಾಣದಲ್ಲಿ ತೈಲ ಪೂರೈಸುತ್ತಿದ್ದ ರಷ್ಯಾ, ಪಶ್ಚಿಮ ಏಷ್ಯಾದ ಸಾಂಪ್ರದಾಯಿಕ ಪೂರೈಕೆದಾರರನ್ನು ಹಿಂದಿಕ್ಕಿ ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಸುವ ದೇಶವಾಗಿ ಹೊರಹೊಮ್ಮಿತು.
ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸುತ್ತಿದ್ದ ಭಾರತವನ್ನು ಟ್ರಂಪ್ ಆಡಳಿತವು ಈ ಹಿಂದೆ ನಿರಂತರವಾಗಿ ಟೀಕಿಸುತ್ತಿತ್ತು. ಆದರೆ ಇತ್ತೀಚಿನ ತಿಂಗಳುಗಳಲ್ಲಿ ರಷ್ಯಾದ ಇಂಧನ ರಫ್ತಿನ ಮೇಲಿನ ವಾಷಿಂಗ್ಟನ್ನ ನಿಲುವು ಸಾಕಷ್ಟು ಸಡಿಲಗೊಂಡಿದೆ. ಕೆಲವೇ ವಾರಗಳ ಹಿಂದೆ ರಷ್ಯಾದ ಡೀಸೆಲ್ ರಫ್ತಿನ ಮೇಲಿನ ನಿರ್ಬಂಧ ಸಡಿಲಿಸಿದ್ದ ಟ್ರಂಪ್, ಅಮೆರಿಕ ಕೂಡ ರಷ್ಯಾದಿಂದ ಡೀಸೆಲ್ ಖರೀದಿಸಲಿದೆ ಎಂದಿದ್ದರು. ಅಲ್ಲದೆ, ರಷ್ಯಾ ತೈಲದ ಪ್ರಮುಖ ಗ್ರಾಹಕರಾದ ಭಾರತ ಮತ್ತು ಚೀನಾದ ಮೇಲೆ ಶೇ. 100ರಷ್ಟು ಸುಂಕ ವಿಧಿಸಲು ಅವಕಾಶ ನೀಡುತ್ತಿದ್ದ 'ಲಿಂಡ್ಸೆ ಓ. ಗ್ರಹಾಂ ಕಾಯ್ದೆ'ಯ ಕೆಲವು ಪ್ರಮುಖ ಷರತ್ತುಗಳ ಜಾರಿಗೂ ವಿನಾಯಿತಿ ನೀಡಿದ್ದರು.
ಆದರೆ, ಡೆಮಾಕ್ರಟಿಕರ ನಿಯಂತ್ರಣದಲ್ಲಿರುವ ಅಮೆರಿಕನ್ ಕಾಂಗ್ರೆಸ್, ರಷ್ಯಾದ ತೈಲ ಆದಾಯವನ್ನು ತಡೆಯಲು ಮಾಸ್ಕೋ ವಿರುದ್ಧ ಕಠಿಣ ನಿಲುವು ತಳೆಯಲು ಒತ್ತಡ ಹೇರಬಹುದು. ರಷ್ಯಾ ತೈಲದ ಲಾಭದಾಯಕತೆಯು ಕೇವಲ ಅದರ ಕಚ್ಚಾ ಬೆಲೆಯನ್ನು ಆಧರಿಸಿಲ್ಲ. ಪಾವತಿ ವ್ಯವಸ್ಥೆ, ಹಡಗುಗಳ ಲಭ್ಯತೆ, ವಿಮೆ ವೆಚ್ಚ ಮತ್ತು ನಿರ್ಬಂಧಗಳ ಪಾಲನೆ – ಇವೆಲ್ಲವೂ ಭಾರತ ತಲುಪುವಾಗ ತೈಲದ ಒಟ್ಟು ವೆಚ್ಚವನ್ನು ನಿರ್ಧರಿಸುತ್ತವೆ.
ಟ್ರಂಪ್ ನೀಡಿರುವ ನಿರ್ಬಂಧ ಸಡಿಲಿಕೆಯನ್ನು ಮರುಪರಿಶೀಲಿಸುವಂತೆ ಮತ್ತು ರಷ್ಯಾದ ಇಂಧನ ಕಂಪೆನಿಗಳು, ಬ್ಯಾಂಕುಗಳು ಹಾಗೂ ಸಾಗಣೆ ಜಾಲಗಳ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸುವಂತೆ ಡೆಮಾಕ್ರಟಿಕರು ಒತ್ತಡ ಹೇರಲಿದ್ದಾರೆ ಎಂದು ತಜ್ಞರು ಅಂದಾಜಿಸಿದ್ದಾರೆ. ಅಮೆರಿಕ ಕಠಿಣ ನಿರ್ಬಂಧಗಳನ್ನು ಹೇರಿದರೆ ಭಾರತೀಯ ಸಂಸ್ಥೆಗಳಿಗೆ ಹಣ ಪಾವತಿಸುವುದು, ತೈಲ ವಾಹಕ ಹಡಗುಗಳನ್ನು ಪಡೆಯುವುದು ಮತ್ತು ವಿಮೆ ಮಾಡಿಸುವುದು ಹೆಚ್ಚು ಕಷ್ಟಕರ ಹಾಗೂ ದುಬಾರಿಯಾಗಲಿದೆ.
"ಗ್ರಹಾಂ ಕಾಯ್ದೆಯಡಿ ನೀಡಿರುವ ಸುಂಕ ವಿನಾಯಿತಿಗೆ ಯಾವುದೇ ನಿರ್ದಿಷ್ಟ ಗಡುವನ್ನು ನಿಗದಿಪಡಿಸಿಲ್ಲ, ಅದನ್ನು ಹಿಂಪಡೆಯುವ ಸಂಪೂರ್ಣ ಅಧಿಕಾರ ಅಧ್ಯಕ್ಷರ ಆಡಳಿತಕ್ಕೆ ಇದೆ. ಡೆಮಾಕ್ರಟಿಕರು ರಷ್ಯಾದ ತೈಲ ಕಂಪೆನಿಗಳು ಮತ್ತು ಬ್ಯಾಂಕುಗಳ ಮೇಲೆ ನೇರ ಕಠಿಣ ನಿರ್ಬಂಧಗಳಿಗೆ ಒತ್ತಾಯಿಸುವ ಸಾಧ್ಯತೆಯಿದೆ. ಇದರಿಂದ ರಷ್ಯಾ ತೈಲದ ರಿಯಾಯಿತಿ ದರ ಮುಂದುವರಿದರೂ, ಹಣ ರವಾನೆ ಕಷ್ಟಕರವಾಗಲಿದೆ. ಜೊತೆಗೆ ಕಪ್ಪು ಸಮುದ್ರದ ಮೂಲಕ ಸಾಗಣೆ ವೆಚ್ಚ ಮತ್ತು ಅಪಾಯವೂ ಹೆಚ್ಚಲಿದೆ. ಹೀಗಾಗಿ, ರಷ್ಯಾದ ಬಂದರಿನಲ್ಲಿ ತೈಲದ ಬೆಲೆ ಕಡಿಮೆಯಿದ್ದರೂ, ಅದು ಭಾರತದ ಬಂದರು ತಲುಪುವ ವೇಳೆಗೆ ಸಂಸ್ಥೆಗಳಿಗೆ ಸಿಗುವ ಒಟ್ಟು ಲಾಭ ಅತ್ಯಲ್ಪವಾಗಿರಲಿದೆ" ಎಂದು ನಟಾಲಿಯಾ ಕಟೋನಾ ಅಭಿಪ್ರಾಯಪಟ್ಟಿದ್ದಾರೆ.
ಸೌಜನ್ಯ: indianexpress.com