Photo Credit : PTI 

ಉತ್ತರ ಪ್ರದೇಶದ ಸಹಾರನ್ ಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಸ್ವಾತಂತ್ರ್ಯಪೂರ್ವದ ಮಸೀದಿಯನ್ನು ಅಕ್ರಮ ಒತ್ತುವರಿ ಎಂದು ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದ ಬೆನ್ನಲ್ಲೇ, ಶನಿವಾರ ಮುಂಜಾನೆ ಆಡಳಿತ ಮಂಡಳಿಯು ಅದನ್ನು ಕೆಡವಿಹಾಕಿದೆ. ಮುಂಜಾನೆಯ ಕಾರ್ಯಾಚರಣೆ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಶಸ್ತ್ರ ಕಾನ್ಸ್ಟೆಬ್ಯುಲರಿ ಮತ್ತು ಗಲಭೆ ನಿಗ್ರಹ ಪಡೆ ಸೇರಿದಂತೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಸುಮಾರು 115 ವರ್ಷ ಹಳೆಯದು ಎನ್ನಲಾದ ಈ ಮಸೀದಿಯನ್ನು ನ್ಯಾಯಾಲಯದ ಆದೇಶ ಬಂದ ಮೂರೇ ದಿನಗಳಲ್ಲಿ ಬುಲ್ಡೋಝರ್ ಬಳಸಿ ಧ್ವಂಸಗೊಳಿಸಿರುವುದು ಹಾಗೂ ವಿರೋಧ ಪಕ್ಷದ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡದಂತೆ ತಡೆದಿರುವುದು ತೀವ್ರ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.

ಸರ್ಕಾರದ ಈ ಕ್ರಮವನ್ನು ವಿಪಕ್ಷಗಳು ಒಮ್ಮತದಿಂದ ಖಂಡಿಸಿದ್ದು, ಇದು ಕಾನೂನುಬಾಹಿರ ಮತ್ತು ಅನಗತ್ಯ ಎಂದು ಕರೆದಿವೆ. 2027ರ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಕೋಮು ಧ್ರುವೀಕರಣ ಮಾಡಲು ಮುಖ್ಯಮಂತ್ರಿ ಆದಿತ್ಯನಾಥ ನೇತೃತ್ವದ ಸರ್ಕಾರ ಮತ್ತು ಆಡಳಿತ ಯಂತ್ರವು ಮುಸ್ಲಿಂ ಸಮುದಾಯದ ಪ್ರಾರ್ಥನಾ ಮಂದಿರಗಳನ್ನು ಗುರಿಮಾಡುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ.

ನಗರ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜುಲೈನಲ್ಲಿ ನೀಡಿದ್ದ ತೆರವು ಆದೇಶವನ್ನು ಪ್ರಶ್ನಿಸಿ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಮೇಲ್ಮನವಿಯನ್ನು ಜಿಲ್ಲಾ ನ್ಯಾಯಾಲಯವು ಸೆಪ್ಟೆಂಬರ್ 2ರಂದು ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಸೆಪ್ಟೆಂಬರ್ 5ರಂದು ಅಧಿಕಾರಿಗಳು ಮಸೀದಿ ಧ್ವಂಸ ಕಾರ್ಯಾಚರಣೆ ನಡೆಸಿದರು. 315 ಚದರ ಮೀಟರ್ ಸರ್ಕಾರಿ ಜಾಗವನ್ನು ‘ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಕ್ಕಾಗಿ’ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 6.41 ಕೋಟಿ ರೂ.ದಂಡ ವಿಧಿಸಿತ್ತು ಹಾಗೂ ಜಾಗ ತೆರವುಗೊಳಿಸಲು 30 ದಿನಗಳ ಕಾಲಾವಕಾಶ ನೀಡಿತ್ತು.

ಬೆಳಿಗ್ಗೆ 7 ಗಂಟೆಗೆ ಮಸೀದಿ ಕೆಡವುವ ಕಾರ್ಯಾಚರಣೆ ಪ್ರಾರಂಭವಾಯಿತು ಎಂದು ಸಹಾರನ್ಪುರದ ಉಪವಿಭಾಗಾಧಿಕಾರಿ ಸುಬೋಧ್ ಕುಮಾರ್ ತಿಳಿಸಿದ್ದಾರೆ. ಆದರೆ, ಬೆಳಿಗ್ಗೆ 5 ಗಂಟೆಗೇ ಈ ಪ್ರಕ್ರಿಯೆ ಶುರುವಾಗಿತ್ತು ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ. ನ್ಯಾಯಾಲಯ ವಿಧಿಸಿರುವ ದಂಡವನ್ನು ವಸೂಲಿ ಮಾಡುವ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಸುಬೋಧ್ ಕುಮಾರ್ ಹೇಳಿದ್ದಾರೆ.

ಮಸೀದಿಯ ಆವರಣದಲ್ಲಿ ಕಾರ್ಯಾಚರಿಸುತ್ತಿದ್ದ ಮತ್ತು ನಿಯಮಿತವಾಗಿ ಬಾಡಿಗೆ ಪಾವತಿಸುತ್ತಿದ್ದ ಅಂಚೆ ಕಚೇರಿಯನ್ನು ತೆರವುಗೊಳಿಸಿ, ಅದರ ವಸ್ತುಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

‘ದಿ ವೈರ್’ ಪರಿಶೀಲಿಸಿದ 26 ಪುಟಗಳ ತೀರ್ಪಿನ ಪ್ರತಿಯಲ್ಲಿ, ಜುಲೈ 16ರಂದು 1972ರ ಉತ್ತರ ಪ್ರದೇಶ ಸಾರ್ವಜನಿಕ ಆಸ್ತಿ (ಅನಧಿಕೃತ ಆಕ್ರಮಣಕಾರರ ತೆರವು) ಕಾಯ್ದೆಯಡಿ ನಗರ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸಿದ್ದ ತೆರವು ಆದೇಶವನ್ನು ಜಿಲ್ಲಾ ನ್ಯಾಯಾಧೀಶ ಸತೇಂದ್ರ ಕುಮಾರ್ ಎತ್ತಿಹಿಡಿದಿದ್ದಾರೆ. ಈ ಆಸ್ತಿಯ ಮಾಲೀಕತ್ವ ಮತ್ತು ಕಾನೂನುಬದ್ಧ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಗಳನ್ನು ಒದಗಿಸಲು ಮಸೀದಿ ಆಡಳಿತ ಮಂಡಳಿ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.

"ದಾಖಲೆಗಳಲ್ಲಿರುವ ಸಾಕ್ಷ್ಯಗಳು ಮತ್ತು ಕಾನೂನು ತತ್ವಗಳನ್ನು ಪರಿಶೀಲಿಸಿದ ನಂತರ, ಮೇಲ್ಮನವಿಯಲ್ಲಿ ಎತ್ತಲಾದ ಅಂಶಗಳನ್ನು ಹಾಗೂ ಆಸ್ತಿಯ ಮಾಲೀಕತ್ವ ಮತ್ತು ಕಾನೂನುಬದ್ಧ ಸ್ವಾಧೀನವನ್ನು ಸೂಕ್ತ ಆಧಾರಗಳ ಮೂಲಕ ಸಾಬೀತುಪಡಿಸಲು ಮೇಲ್ಮನವಿದಾರರು ವಿಫಲರಾಗಿದ್ದಾರೆ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬಂದಿದೆ" ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಬಜರಂಗದಳ ದೂರಿನ ನಂತರ ದಾವೆ ಹೂಡಿದ್ದ ಸಹಾರನ್ಪುರ ಜಿಲ್ಲಾಧಿಕಾರಿ

2025ರಲ್ಲಿ ಬಜರಂಗದಳದ ಕಾರ್ಯಕರ್ತ ವಿಕಾಸ್ ತ್ಯಾಗಿ ನೀಡಿದ ದೂರಿನ ನಂತರ ಈ ಮಸೀದಿಯು ಆಡಳಿತಾಧಿಕಾರಿಗಳ ಗಮನಕ್ಕೆ ಬಂದಿತ್ತು. ತರುವಾಯ ಕಂದಾಯ ಇಲಾಖೆ ತನಿಖೆ ನಡೆಸಿ, ಸಹಾರನ್ಪುರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರವು ದಾವೆ ಹೂಡಿತ್ತು.

ಕಂದಾಯ ದಾಖಲೆಗಳ ಪ್ರಕಾರ, ಪಠಾನ್ಪುರ ಗ್ರಾಮದ ಖಸ್ರಾ ಸಂಖ್ಯೆ 539ರಲ್ಲಿರುವ ಈ ಆಸ್ತಿಯು ಸ್ಥಳೀಯ ನ್ಯಾಯಾಲಯ ಮತ್ತು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಸೇರಿದ ಸರ್ಕಾರಿ ಜಾಗವಾಗಿದೆ ಎಂಬುದು ಸರ್ಕಾರದ ವಾದವಾಗಿತ್ತು. ಈ ಜಾಗವನ್ನು ಮೂಲತಃ ನ್ಯಾಯಾಲಯಕ್ಕೆ ಬರುವ ಸಾರ್ವಜನಿಕರ ವಿಶ್ರಾಂತಿ ಗೃಹವಾಗಿ ನಿರ್ಮಿಸಲಾಗಿತ್ತು, ಕಾಲಕ್ರಮೇಣ ಇದನ್ನು ಅಕ್ರಮವಾಗಿ ಪ್ರಾರ್ಥನಾ ಮಂದಿರವನ್ನಾಗಿ ಪರಿವರ್ತಿಸಲಾಗಿದೆ ಎಂದು ಸರ್ಕಾರ ಹೇಳಿತ್ತು.

ಮಸೀದಿಯ ಉಸ್ತುವಾರಿಗಳು ಮೇಲ್ಛಾವಣಿ ಮತ್ತು ನೆಲಮಹಡಿಯ ಕೊಠಡಿಗಳನ್ನು ‘ಅನಧಿಕೃತ ವ್ಯಕ್ತಿಗಳಿಗೆ’ ಬಾಡಿಗೆಗೆ ನೀಡಿದ್ದು, ಆವರಣದಲ್ಲಿದ್ದ ಉಪ-ಅಂಚೆ ಕಚೇರಿಯಿಂದ ಅಕ್ರಮವಾಗಿ ಬಾಡಿಗೆ ವಸೂಲಿ ಮಾಡುತ್ತಿದ್ದರು ಎಂದೂ ಸರ್ಕಾರ ಆರೋಪಿಸಿತ್ತು.

ಈ ವಾದವನ್ನು ನಿರಾಕರಿಸಿರುವ ಮಸೀದಿಯ ಆಡಳಿತಾಧಿಕಾರಿ ಮೊಹಮ್ಮದ್ ತನ್ವೀರ್ ಅಹಮದ್, ಈ ಕಟ್ಟಡವು 115 ವರ್ಷಗಳಿಗಿಂತಲೂ ಹಳೆಯದಾಗಿದ್ದು, 1911ಕ್ಕಿಂತ ಮುಂಚೆಯೇ ಸ್ಥಾಪಿತವಾಗಿದೆ. ಹೀಗಾಗಿ ಇದು 1991ರ ಆರಾಧನಾ ಸ್ಥಳಗಳ ಕಾಯ್ದೆಯಡಿ ರಕ್ಷಣೆ ಪಡೆದಿದೆ ಎಂದು ವಾದಿಸಿದ್ದಾರೆ.

ಈ ಜಾಗವು ಜಮೀನ್ದಾರಿ ಭೂಮಿಯಾಗಿದ್ದು, ಸರ್ಕಾರದ ಸಾರ್ವಜನಿಕ ಆಸ್ತಿಯಲ್ಲ ಎಂದು ಅಹಮದ್ ತಮ್ಮ ಮೇಲ್ಮನವಿಯಲ್ಲಿ ವಾದಿಸಿದ್ದರು. 28 ಬಿಘಾಕ್ಕೂ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಈ ಜಾಗವು 1971ರ ಉತ್ತರ ಪ್ರದೇಶ ಸಾರ್ವಜನಿಕ ಆಸ್ತಿ (ಅನಧಿಕೃತ ಆಕ್ರಮಣಕಾರರ ತೆರವು) ಕಾಯ್ದೆಯಡಿ ಸಾರ್ವಜನಿಕ ಆಸ್ತಿಯ ವ್ಯಾಪ್ತಿಗೆ ಬರುವುದಿಲ್ಲ ಎಂದಿದ್ದರು.

ಈ ಕಟ್ಟಡವನ್ನು ‘ವಕ್ಫ್ ಸಂಖ್ಯೆ 451’ ಎಂದು ನೋಂದಾಯಿಸಲಾಗಿದ್ದು, 1957ರಿಂದಲೇ ಪುರಸಭೆಯ ದಾಖಲೆಗಳಲ್ಲಿ ಮನ್ನಣೆ ಪಡೆದುಕೊಂಡಿದೆ ಎಂದು ಅವರು ತಿಳಿಸಿದ್ದರು. ಆವರಣದಲ್ಲಿದ್ದ ಉಪ-ಅಂಚೆ ಕಚೇರಿಗಾಗಿ ಕೇಂದ್ರ ಸರ್ಕಾರವೇ ಗುತ್ತಿಗೆ ಒಪ್ಪಂದ ಮಾಡಿಕೊಂಡಿದ್ದು, 1960ರಿಂದ ಮಸೀದಿಗೆ ಬಾಡಿಗೆ ಪಾವತಿಸುತ್ತಿತ್ತು ಎಂದು ಸಮಿತಿ ಪೀಠಕ್ಕೆ ತಿಳಿಸಿತ್ತು.

1957ರಿಂದ ಮಹಾನಗರ ಪಾಲಿಕೆ ದಾಖಲೆಗಳಲ್ಲಿದ್ದರೂ, ವಕ್ಫ್ ಎಂದು ನೋಂದಾಯಿತವಾಗಿದ್ದರೂ ಮತ್ತು ‘ಉಮ್ಮೀದ್’ (Umeed) ಪೋರ್ಟಲ್ ನಲ್ಲಿ ಪಟ್ಟಿಯಾಗಿದ್ದರೂ ಸಹ, ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯನ್ನು ಪ್ರಕರಣದಲ್ಲಿ ಮುಖ್ಯ ಕಕ್ಷಿದಾರರಾಗಿ ಸೇರಿಸಲಾಗಿಲ್ಲ ಎಂದು ಮಸೀದಿ ಆಡಳಿತ ಮಂಡಳಿ ವಾದಿಸಿತ್ತು. ಈ ಕಾರಣದಿಂದಾಗಿ, ಸಹಾರನ್ಪುರ ಆಡಳಿತ ಮಂಡಳಿ ಹೂಡಿದ ದಾವೆಯು ವಕ್ಫ್ ಕಾಯ್ದೆಯ ಸೆಕ್ಷನ್ 85ರ ಅಡಿಯಲ್ಲಿ ಸಿಂಧುವಾಗುವುದಿಲ್ಲ ಎಂದು ಹೇಳಿತ್ತು.

ಕೆಳ ನ್ಯಾಯಾಲಯ ಜುಲೈ 16ರಂದು ನೀಡಿದ್ದ ತೀರ್ಪು ಮತ್ತು ಆದೇಶಗಳು "ದಾಖಲೆಯಲ್ಲಿರುವ ಸಾಕ್ಷ್ಯಗಳಿಗೆ ಪೂರಕವಾಗಿವೆ" ಎಂದು ನ್ಯಾಯಾಧೀಶ ಕುಮಾರ್ ತೀರ್ಪು ನೀಡಿದ್ದಾರೆ. ಇದರಲ್ಲಿ ಯಾವುದೇ ಕಾನೂನು ಅಥವಾ ವಾಸ್ತವಿಕ ದೋಷ ಕಂಡುಬಂದಿಲ್ಲ ಎಂದು ಅವರು ಹೇಳಿದ್ದಾರೆ. ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಸಿವಿಲ್ ಮೇಲ್ಮನವಿಯಲ್ಲಿ ಯಾವುದೇ ಆಧಾರವಿಲ್ಲ ಎಂದು ಹೇಳಿದ ನ್ಯಾಯಾಧೀಶರು, ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದರು.

ತಾನು ನಡೆಸಿದ ತನಿಖೆಯಲ್ಲಿ ಸರ್ಕಾರಿ ಜಾಗದಲ್ಲಿ ಎದುರುದಾರರು ವಾಸಿಸುತ್ತಿರುವುದಕ್ಕೆ, ಹೊರಗಿನವರಿಗೆ ಆಶ್ರಯ ನೀಡಿರುವುದಕ್ಕೆ ಅಥವಾ ಸರ್ಕಾರಿ ಕಟ್ಟಡವನ್ನು ಪ್ರಾರ್ಥನಾ ಮಂದಿರವನ್ನಾಗಿ ಪರಿವರ್ತಿಸಿರುವುದಕ್ಕೆ ಯಾವುದೇ ಅಧಿಕೃತ ಅನುಮತಿ ಪತ್ರಗಳು ಪತ್ತೆಯಾಗಿಲ್ಲ ಎಂದು ಜಿಲ್ಲಾಡಳಿತವು ದಾವೆಯಲ್ಲಿ ತಿಳಿಸಿತ್ತು.

ಮಸೀದಿ ಧ್ವಂಸದ ವೇಳೆ ಪ್ರಮುಖ ನಾಯಕರ ಗೃಹಬಂಧನ

ಉತ್ತರ ಪ್ರದೇಶ ಪೊಲೀಸರು ತಮ್ಮನ್ನು ಗೃಹಬಂಧನದಲ್ಲಿರಿಸಿ, ಮಸೀದಿ ಕೆಡವುತ್ತಿದ್ದಾಗ ಸಹಾರನ್ಪುರಕ್ಕೆ ಭೇಟಿ ನೀಡದಂತೆ ತಡೆದಿದ್ದಾರೆ ಎಂದು ಸಹಾರನ್ ಪುರ ಜಿಲ್ಲೆಯ ಭಾಗಗಳನ್ನು ಒಳಗೊಂಡಿರುವ ಕೈರಾನಾ ಕ್ಷೇತ್ರದ ಸಮಾಜವಾದಿ ಪಾರ್ಟಿ ಸಂಸದೆ ಇಕ್ರಾ ಹಸನ್ ಆರೋಪಿಸಿದ್ದಾರೆ. ಕೆಳ ಸಿವಿಲ್ ನ್ಯಾಯಾಲಯದ ಆದೇಶ ಬಂದ ನಂತರ ಇಡೀ ಮಸೀದಿಯನ್ನು ಸೀಲ್ ಮಾಡಲಾಗಿತ್ತು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಈ ವಿಷಯದಲ್ಲಿ ಕಾಲಾವಕಾಶ ನೀಡುವಂತೆ ಸಾರ್ವಜನಿಕರು ಅಧಿಕಾರಿಗಳೊಂದಿಗೆ ಮಾತನಾಡಲು ಬಯಸಿದ್ದರು ಎಂದು ಇಕ್ರಾ ಹಸನ್ ಹೇಳಿದ್ದಾರೆ. "ಜನರು ಹೈಕೋರ್ಟ್ ಮೆಟ್ಟಿಲೇರಲು ಬಯಸಿದ್ದರು. ಆದರೆ ಯಾವುದೇ ಕಾಲಾವಕಾಶ ನೀಡದ ಕಾರಣ ಸಹಾರನ್ಪುರ ಜಿಲ್ಲೆಯ ಪ್ರಮುಖ ನಾಯಕರನ್ನೆಲ್ಲಾ ಮನೆಗಳಲ್ಲೇ ಬಂಧಿಸಿಡಲಾಯಿತು. ನಂತರ ಮುಂಜಾನೆ ಮಸೀದಿಯನ್ನು ಧ್ವಂಸಗೊಳಿಸಲಾಯಿತು. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. ಇದೊಂದು ದೊಡ್ಡ ಪಾಪ ಕಾರ್ಯವಾಗಿದ್ದು, ಇದಕ್ಕೆ ತಕ್ಕ ಶಿಕ್ಷೆಯನ್ನು ಅವರು ಖಂಡಿತ ಅನುಭವಿಸಲಿದ್ದಾರೆ; ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಅವರು ಕಿಡಿಕಾರಿದ್ದಾರೆ.

ಈ ವಿಷಯವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವುದಾಗಿ ಹಸನ್ ಹೇಳಿದ್ದಾರೆ. "ಆದರೆ ಈ ಕ್ರಮವನ್ನು ಜಾರಿಗೊಳಿಸಿದ ರೀತಿ ಪ್ರಜಾಪ್ರಭುತ್ವದ ಕೊಲೆಯಾಗಿದೆ ಎಂಬುದನ್ನು ತೋರಿಸುತ್ತದೆ. ‘ತಕ್ಷಣದ ನ್ಯಾಯ’ ಎಂಬ ಧೋರಣೆಯನ್ನು ಸಾಮಾನ್ಯ ಕ್ರಮವನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ಪ್ರತಿಯೊಂದು ನಿರ್ಧಾರವೂ ಸರ್ಕಾರದ ಆದೇಶದ ಮೇಲೆಯೇ ಆಗುವುದಾದರೆ, ದೇಶದಲ್ಲಿ ಕಾನೂನು ವ್ಯವಸ್ಥೆಯ ಅಗತ್ಯವೇ ಇಲ್ಲ... ಈ ಘಟನೆ ತೀವ್ರ ಖಂಡನೀಯ" ಎಂದು ಅವರು ಸುದ್ದಿ ಸಂಸ್ಥೆ ‘ANI’ಗೆ ತಿಳಿಸಿದ್ದಾರೆ.

ಗೃಹಬಂಧನದ ಕುರಿತು ANI ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಹಾರನ್ಪುರ ಡಿಐಜಿ ಅಭಿನೇಕ್ ಸಿಂಗ್, "ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪಾಲಿಸಿಯೇ ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ಹೇಳಿದ್ದಾರೆ.

ನ್ಯಾಯಾಲಯದ ಆದೇಶ ಮತ್ತು ಸರ್ಕಾರದ ಉದ್ದೇಶವನ್ನು ಪ್ರಶ್ನಿಸಿದ ವಿಪಕ್ಷಗಳು

ಧಾರ್ಮಿಕ ಸ್ವಾತಂತ್ರ್ಯದ ಸಂವಿಧಾನಾತ್ಮಕ ಹಕ್ಕು ಮುಸ್ಲಿಮರಿಗೆ ಇನ್ನು ಮುಂದೆ ಅನ್ವಯಿಸುವುದಿಲ್ಲವೇ ಎಂದು ಅಸದುದ್ದೀನ್ ಉವೈಸಿ ಪ್ರಶ್ನಿಸಿದ್ದಾರೆ. "ಸಣ್ಣಪುಟ್ಟ ಕಾರಣಗಳನ್ನು ನೀಡಿ ನಮ್ಮ ಪ್ರಾರ್ಥನಾ ಮಂದಿರಗಳನ್ನು ಏಕಾಏಕಿ ಧ್ವಂಸಗೊಳಿಸುತ್ತಿರುವುದು ಏಕೆ?" ಎಂದು ಅವರು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.

ಮಸೀದಿಯ ಅಸ್ತಿತ್ವ ಮತ್ತು ಅಲ್ಲಿ ನೂರು ವರ್ಷಕ್ಕೂ ಹೆಚ್ಚು ಕಾಲದಿಂದ ನಿರಂತರವಾಗಿ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ಸಾಬೀತುಪಡಿಸಲು ಆಡಳಿತ ಮಂಡಳಿಯು 1911ರವರೆಗಿನ ದಾಖಲೆಗಳನ್ನು ಸಲ್ಲಿಸಿತ್ತು ಎಂದು ಉವೈಸಿ ತಿಳಿಸಿದ್ದಾರೆ. "ಕಾನೂನಿನಡಿ ಇದನ್ನು ‘ಬಳಕೆಯ ಆಧಾರದ ಮೇಲಿನ ವಕ್ಫ್’ ಎಂದು ಪರಿಗಣಿಸಲಾಗುತ್ತದೆ. 1963ರ ಸಮಯ ಪರಿಮಿತಿ ಕಾಯ್ದೆಯು ಸರ್ಕಾರಕ್ಕೆ ಅಪರಿಮಿತ ಕಾಲಾವಕಾಶ ನೀಡುವುದಿಲ್ಲ. ಸರ್ಕಾರವು ಇದ್ದಕ್ಕಿದ್ದಂತೆ ಒಂದು ದಿನ ಎಚ್ಚರಗೊಂಡು ಸ್ಥಿರಾಸ್ತಿಯ ಮೇಲೆ ತನ್ನ ಹಕ್ಕನ್ನು ಸ್ಥಾಪಿಸಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.

"ಒಂದು ಶತಮಾನಕ್ಕೂ ಹೆಚ್ಚು ಕಾಲ ಈ ಜಾಗದಲ್ಲಿ ಬಹಿರಂಗವಾಗಿ ಮತ್ತು ನಿರಂತರವಾಗಿ ಪ್ರಾರ್ಥನೆ ನಡೆದಿದೆ. ಸರ್ಕಾರದ ವಾದವನ್ನೇ ಒಪ್ಪಿಕೊಂಡರೂ, ಇಲ್ಲಿ ‘ವಿರುದ್ಧ ಸ್ವಾಧೀನ’ ನಿಯಮ ಅನ್ವಯಿಸುತ್ತದೆ. ಮಸೀದಿ ಮೊದಲು ಬಂದಿದ್ದು, ಜಿಲ್ಲಾಧಿಕಾರಿ ಕಚೇರಿ ಆಮೇಲೆ ಬಂದಿದ್ದು" ಎಂದು ಉವೈಸಿ ವಾದಿಸಿದ್ದಾರೆ.

ರಾಮಮಂದಿರದ ದೇಣಿಗೆ ಕಳವು ಪ್ರಕರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಆದಿತ್ಯನಾಥ ಸರ್ಕಾರವು ಕೋಮು ಸೂಕ್ಷ್ಮ ವಿಷಯವನ್ನು ಬಳಸಿಕೊಳ್ಳುತ್ತಿದೆ ಎಂದು ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಕೆಳ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದನ್ನು ತಡೆಯಲು ರಾಜ್ಯ ಸರ್ಕಾರದ ಸೂಚನೆಯಂತೆ ಸಹಾರನ್ಪುರ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅವರು ದೂರಿದ್ದಾರೆ.

"ಇತರ ಧರ್ಮಗಳನ್ನು ಗೌರವಿಸದವರು ಎಂದಿಗೂ ಸನಾತನಿಗಳಾಗಲು ಸಾಧ್ಯವಿಲ್ಲ. ಇತರರ ನಂಬಿಕೆಯೊಂದಿಗೆ ಆಟವಾಡುವವರು ಸನಾತನಿಗಳಲ್ಲ. ಒಬ್ಬ ನಿಜವಾದ ಹಿಂದೂ ಎಂದಿಗೂ ಇನ್ನೊಬ್ಬರನ್ನು ಅವಮಾನಿಸುವುದಿಲ್ಲ, ಸನಾತನ ಧರ್ಮ ನಮಗೆ ಇದನ್ನೇ ಕಲಿಸಿಕೊಟ್ಟಿದೆ. ಸೌಹಾರ್ದತೆಯನ್ನು ಬಯಸುವವರೇ ನಿಜವಾದ ಸನಾತನಿಗಳು. ಸೌಹಾರ್ದತೆಯನ್ನು ಕಾಯ್ದುಕೊಳ್ಳುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು" ಎಂದಿದ್ದಾರೆ ಅಖಿಲೇಶ್ ಯಾದವ್.

ಉತ್ತರ ಪ್ರದೇಶದಲ್ಲಿ ಮಸೀದಿಗಳನ್ನು ಅಕ್ರಮ ಎಂದು ಘೋಷಿಸಿ, ತರಾತುರಿಯಲ್ಲಿ ಕೆಡವುವ ಪ್ರವೃತ್ತಿ ಸರಿಯಲ್ಲ ಎಂದು ಬಹುಜನ ಸಮಾಜ ಪಾರ್ಟಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. "ಅಹಿತಕರ ಪರಿಸ್ಥಿತಿಗಳನ್ನು ತಡೆಯಲು ಸರ್ಕಾರ ಈ ಕ್ರಮವನ್ನು ತಕ್ಷಣವೇ ತಡೆಹಿಡಿಯಬೇಕು ಮತ್ತು ಸಮಸ್ಯೆಯನ್ನು ಪರಿಹರಿಸಲು ಇತರ ಮಾರ್ಗಗಳನ್ನು ಕಂಡುಕೊಳ್ಳಬೇಕು" ಎಂದು ಅವರು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.

ಈ ಧ್ವಂಸ ಕಾರ್ಯಾಚರಣೆಯು ಸಂವಿಧಾನದ ಉಲ್ಲಂಘನೆ ಎಂದು ಸಹಾರನ್ಪುರದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಹೇಳಿದ್ದಾರೆ. ಮಸೀದಿಯು ವಕ್ಫ್ ಮಂಡಳಿಯಲ್ಲಿ ನೋಂದಾಯಿತವಾಗಿದ್ದರೂ, ಪ್ರಕರಣದಲ್ಲಿ ವಕ್ಫ್ ಮಂಡಳಿಯನ್ನು ಕಕ್ಷಿದಾರರನ್ನಾಗಿ ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ. "ಈ ಜಾಗ ನಿಮ್ಮದು ಎಂದು ಸಾಬೀತುಪಡಿಸಲು ನಿಮ್ಮಿಂದ ಸಾಧ್ಯವಿಲ್ಲ. ಖಸ್ರಾ ದಾಖಲೆಗಳನ್ನು ಇಟ್ಟುಕೊಂಡು ಇದು ಜಿಲ್ಲಾಧಿಕಾರಿ ಕಚೇರಿಯ ಜಾಗ ಎಂದು ನೀವು ಪ್ರತಿಪಾದಿಸುತ್ತಿದ್ದೀರಿ. ಆದರೆ ಇಂದಿಗೂ ಆ ಜಾಗವು ವಹೀದ್ ಖಾನ್ ಮತ್ತು ಯಾಕೂಬ್ ಖಾನ್ ಹೆಸರಿನಲ್ಲಿದೆ. ಅವರ ಜಮೀನ್ದಾರಿಯಲ್ಲಿಯೇ ಮಸೀದಿಯನ್ನು ನಿರ್ಮಿಸಲಾಗಿತ್ತು. ಇಂದಿಗೂ ಅವರ ಹೆಸರೇ ದಾಖಲೆಯಲ್ಲಿದೆ" ಎಂದು ಅವರು ಹೇಳಿದ್ದಾರೆ.

ಖಸ್ರಾ ಸಂಖ್ಯೆ 539ರ ಜಾಗವು ಯಾಕೂಬ್ ಖಾನ್ ಮತ್ತು ವಹೀದ್ ಖಾನ್ ಅವರ ಹೆಸರಿನಲ್ಲಿದೆ. ಈ ಸಂಕೀರ್ಣದಲ್ಲಿ ದೇವಾಲಯ, ಮಸೀದಿ ಮತ್ತು ಜಿಲ್ಲಾಧಿಕಾರಿ ಕಚೇರಿ ಮೂರೂ ಇವೆ ಎಂದು ಆಮ್ ಆದ್ಮಿ ಪಾರ್ಟಿ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.

"ಈ ಮಸೀದಿಯನ್ನು 1947ಕ್ಕಿಂತ ಮುಂಚೆಯೇ ನಿರ್ಮಿಸಲಾಗಿದ್ದು, ವಕ್ಫ್ ಮಂಡಳಿಯಲ್ಲಿ ನೋಂದಾಯಿಸಲಾಗಿದೆ. ವಕ್ಫ್ ಮಂಡಳಿಯನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಮಸೀದಿಯನ್ನು ಧ್ವಂಸಗೊಳಿಸಲಾಗಿದೆ. ಮುಂಬರುವ ಚುನಾವಣೆಗೂ ಮುನ್ನ ಉತ್ತರ ಪ್ರದೇಶದಲ್ಲಿ ದ್ವೇಷವನ್ನು ಹರಡಲು ನಡೆಯುತ್ತಿರುವ ಆಟವನ್ನು ಗಮನಿಸಿ. ಶಾಸನಬದ್ಧ ಎಚ್ಚರಿಕೆ: ಬಿಜೆಪಿ ಗಲಭೆಕೋರರಿಂದ ಎಚ್ಚರದಿಂದಿರಿ" ಎಂದು ಅವರು ‘ಎಕ್ಸ್’ನಲ್ಲಿ ಬರೆದಿದ್ದಾರೆ.

ಕಾನೂನು ತನ್ನ ಕೆಲಸವನ್ನು ಮಾಡುತ್ತಿದೆ ಎಂದು ಹೇಳುವ ಮೂಲಕ ಸಹಾರನ್ಪುರ ನಗರದ ಬಿಜೆಪಿ ಶಾಸಕ ರಾಜೀವ್ ಗುಂಬರ್ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ನಗರ ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾ ನ್ಯಾಯಾಲಯ ಎರಡೂ ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿವೆ ಎಂದು ಅವರು ಹೇಳಿದ್ದಾರೆ.

ಮಸೀದಿಗೆ ಸೂಕ್ತ ನೋಟಿಸ್ ನೀಡಲಾಗಿತ್ತು ಮತ್ತು ನಿಯಮಾನುಸಾರ ನೀಡಲಾದ ಕಾಲಾವಕಾಶ ಮುಗಿದ ಬಳಿಕವೇ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು SDM ಸುಬೋಧ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸೌಜನ್ಯ: thewire.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor