ಕೊಲೆ, ಅತ್ಯಾಚಾರ ಆರೋಪಿಗಳನ್ನು ಪ್ರತಿಭಟನಾ ಸ್ಥಳದಲ್ಲಿ ಕ್ಯಾಮೆರಾಗಳು ‘ಗುರುತಿಸಿವೆ’ ಎಂದ ಪೊಲೀಸರು; ಆದರೆ ಕೆಲವರು ವಾಸ್ತವವಾಗಿ ಜೈಲಿನಲ್ಲಿದ್ದರು!
ಮಹೇಂದರ್ ಸಿಂಗ್ ಮನ್ರಾಲ್ - indianexpress. com ವರದಿ
Photo: PTI
ವಿದ್ಯಾರ್ಥಿಗಳ ಪರೀಕ್ಷಾ ಅಕ್ರಮ ಖಂಡಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದ ಎಲ್ಲಾ FIRಗಳನ್ನು ಮಂಗಳವಾರ ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ಆದರೆ ಜುಲೈ 20ರಿಂದ 26ರ ನಡುವೆ ಜಂತರ್ ಮಂತರ್ ನಲ್ಲಿ ನಡೆದ ಮುಖ್ಯ ಪ್ರತಿಭಟನಾ ಸ್ಥಳದಲ್ಲಿ ಮುಖ ಗುರುತಿಸುವ ತಂತ್ರಜ್ಞಾನ (Facial Recognition System–FRS) ಮೂಲಕ ದಿಲ್ಲಿ ಪೊಲೀಸರು ಗುರುತಿಸಿದ್ದ, ಅಪರಾಧ ಹಿನ್ನೆಲೆಯುಳ್ಳ 2,873 ಜನರ ವಿರುದ್ಧ ಕಾನೂನು ಕ್ರಮ ಮುಂದುವರಿಸಲು ಸರ್ಕಾರಕ್ಕೆ ನ್ಯಾಯಾಲಯ ಅನುಮತಿ ನೀಡಿದೆ. ತನಿಖೆ ಕುರಿತು ಸ್ಪಷ್ಟನೆ ನೀಡಿರುವ ಪೊಲೀಸರು, ಕೇವಲ ತಂತ್ರಜ್ಞಾನದ ಆಧಾರದ ಮೇಲಷ್ಟೇ ಅಲ್ಲದೆ ‘ಸ್ಥಳೀಯ ತನಿಖೆ’ ನಡೆಸಿದ ಬಳಿಕವಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪೊಲೀಸರ ಮುಂದಿರುವ ಕೆಲಸ ಸವಾಲಿನಿಂದ ಕೂಡಿದೆ.
ಕೊಲೆ, ಕೊಲೆ ಯತ್ನ, ಅತ್ಯಾಚಾರ ಮತ್ತು ಬಾಲಕರ ಮೇಲಿನ ಲೈಂಗಿಕ ದೌರ್ಜನ್ಯದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವವರ ತನಿಖೆ ನಡೆಸಿದಾಗ, ಜಂತರ್ ಮಂತರ್ ನಲ್ಲಿ ತಂತ್ರಜ್ಞಾನದ ಮೂಲಕ ಗುರುತಿಸಲಾದ ಪಟ್ಟಿಯಲ್ಲಿದ್ದ ಕನಿಷ್ಠ 25 ಜನರು ಪೊಲೀಸ್, ಜೈಲು ಮತ್ತು ನ್ಯಾಯಾಲಯದ ದಾಖಲೆಗಳ ಪ್ರಕಾರ ಆ ಸಮಯದಲ್ಲಿ ಜೈಲಿನಲ್ಲಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
ಪೊಲೀಸರು ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದ್ದ 2,873 ಜನರ ಪೈಕಿ, ಕೊಲೆ, ಕೊಲೆ ಯತ್ನ ಮತ್ತು ಅತ್ಯಾಚಾರದಂತಹ ಆರೋಪ ಎದುರಿಸುತ್ತಿರುವವರ ಮೇಲೆ ‘ದಿ ಇಂಡಿಯನ್ ಎಕ್ಸ್ಪ್ರೆಸ್’ ಗಮನ ಹರಿಸಿತು. ಇವರ ಸಂಖ್ಯೆ ಒಟ್ಟು 205 ಆಗಿತ್ತು. ಇದರಲ್ಲಿ 101 (ಕೊಲೆ), 61 (ಅತ್ಯಾಚಾರ), ಆರು (POCSO ಕಾಯ್ದೆ) ಮತ್ತು ಕೊಲೆ ಯತ್ನ ಪ್ರಕರಣದಡಿ ಪ್ರಮಾಣಪತ್ರದಲ್ಲಿ ಪಟ್ಟಿ ಮಾಡಲಾದ 62 ಜನರ ಪೈಕಿ 37 ಜನರು ಸೇರಿದ್ದಾರೆ.
ದಾಖಲೆಗಳ ಪ್ರಕಾರ, ಈ ಗುಂಪಿನಲ್ಲಿ ಕೊಲೆ ಆರೋಪ ಎದುರಿಸುತ್ತಿದ್ದ 17, ಎರಡು POCSO ಪ್ರಕರಣಗಳು ಸೇರಿದಂತೆ ಅತ್ಯಾಚಾರ ಆರೋಪದ ನಾಲ್ವರು ಮತ್ತು ಕೊಲೆ ಯತ್ನದ ನಾಲ್ವರು ಆರೋಪಿಗಳು ಜಂತರ್ ಮಂತರ್ ನಲ್ಲಿ FRS ತಂತ್ರಜ್ಞಾನಕ್ಕೆ ಸಿಕ್ಕಿಬಿದ್ದ ದಿನಗಳಲ್ಲಿ ದಿಲ್ಲಿಯ ತಿಹಾರ್, ಮಂಡೋಲಿ ಮತ್ತು ರೋಹಿಣಿ ಜೈಲುಗಳಲ್ಲಿದ್ದರು.
ತಂತ್ರಜ್ಞಾನದಿಂದ ಗುರುತಿಸಲ್ಪಟ್ಟ ಈ 25 ಜನರಲ್ಲಿ ಮೂವರು ಜುಲೈ 24ರಂದು, 21 ಜನರು ಜುಲೈ 25ರಂದು ಮತ್ತು ಒಬ್ಬರು ಜುಲೈ 26ರಂದು ಪ್ರತಿಭಟನೆಯ ಕೊನೆಯ ದಿನದಂದು ಸಿಕ್ಕಿಬಿದ್ದರು.
ಈ ಕುರಿತು ಎಕ್ಸ್ಪ್ರೆಸ್ ಕೇಳಿದ ಪ್ರಶ್ನೆಗಳಿಗೆ ಸೋಮವಾರ ಪ್ರತಿಕ್ರಿಯಿಸಿದ ದಿಲ್ಲಿ ಪೊಲೀಸರು, “ಪ್ರತಿಭಟನೆಯ ಸಮಯದಲ್ಲಿ ಅಪರಾಧ ಹಿನ್ನೆಲೆ ಹೊಂದಿರುವ 2,873 ಜನರನ್ನು ಮೊದಲ ನೋಟಕ್ಕೆ ಗುರುತಿಸಲಾಗಿದೆ. ಈ ಕುರಿತು ಹೆಚ್ಚಿನ ಪರಿಶೀಲನೆ ಬಾಕಿಯಿದೆ” ಎಂದು ತಿಳಿಸಿದ್ದಾರೆ.
ಆಗಸ್ಟ್ 17ರಂದು ಸಲ್ಲಿಸಲಾದ ಪೊಲೀಸ್ ಪ್ರಮಾಣಪತ್ರದ ಪ್ರಕಾರ, ಅವರ FRS ತಂತ್ರಜ್ಞಾನವು ಪ್ರತಿಭಟನಾ ಸ್ಥಳದಲ್ಲಿ ಅಪರಾಧ ಹಿನ್ನೆಲೆಯುಳ್ಳವರನ್ನು ಗುರುತಿಸಿದ್ದು, “ಅವರ ವಿವರಗಳು ಅಧಿಕೃತ ಪೊಲೀಸ್ ಡೇಟಾ ಬೇಸ್ ನಲ್ಲಿದ್ದ ದಾಖಲೆಗಳಿಗೆ ತಾಳೆಯಾಗಿದ್ದವು.” ದಿಲ್ಲಿ ಪೊಲೀಸರ ಬಯೋಮೆಟ್ರಿಕ್ ಡೇಟಾಬೇಸ್ ‘ಕ್ರೈಮ್ ಕುಂಡ್ಲಿ’ ಮೂಲಕ 2,402 ಜನರನ್ನು ಮತ್ತು ಅಪರಾಧ ದಾಖಲೆಗಳ ಮೂಲಕ 471 ಜನರನ್ನು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣಗಳಲ್ಲಿ ಕನಿಷ್ಠ ಒಂದಾದರೂ ರಾಜಧಾನಿಯಲ್ಲಿ ನಡೆದ ಹೈಫ್ರೊಫೈಲ್ ಕೊಲೆಗೆ ಸಂಬಂಧಿಸಿದೆ. ದಕ್ಷಿಣ ದಿಲ್ಲಿಯ ಗ್ರೇಟರ್ ಕೈಲಾಶ್-1ರಲ್ಲಿ ಜಿಮ್ ಮಾಲೀಕ ನಾದಿರ್ ಶಾ ಕೊಲೆಯಲ್ಲಿ ಭಾಗಿಯಾದ ಆರೋಪದ ಮೇಲೆ ಯೋಗೇಶ್ ಅಲಿಯಾಸ್ ರಾಜುನನ್ನು ಬಂಧಿಸಲಾಗಿತ್ತು.
ದಾಖಲೆಗಳ ಪ್ರಕಾರ, ಈತ ಗ್ಯಾಂಗ್ ಸ್ಟರ್ ಗಳಾದ ಲಾರೆನ್ಸ್ ಬಿಷ್ಣೋಯ್ ಮತ್ತು ಹಾಶಿಮ್ ಬಾಬಾ ಪಡೆಯ ಶಾರ್ಪ್ ಶೂಟರ್ ಆಗಿದ್ದ. ಗುಂಡಿನ ಚಕಮಕಿಯ ವೇಳೆ ಎಡಕಾಲಿಗೆ ಗುಂಡೇಟು ಬಿದ್ದ ಬಳಿಕ ಈತನನ್ನು ಬಂಧಿಸಲಾಗಿತ್ತು.
►ತಂತ್ರಜ್ಞಾನಕ್ಕೆ ‘ಸಿಕ್ಕಿಬಿದ್ದ’ 25 ಜನ ಈಗಾಗಲೇ ಜೈಲಿನಲ್ಲಿದ್ದರು
ಈ ಎಲ್ಲಾ 25 ಜನರ ನ್ಯಾಯಾಲಯ ಮತ್ತು ಜೈಲು ದಾಖಲೆಗಳನ್ನು ಪರಿಶೀಲಿಸಿದಾಗ, ಅವರು ಪ್ರತಿಭಟನೆಗೂ ವಾರಗಳು, ತಿಂಗಳುಗಳು ಮತ್ತು ಕೆಲವು ಪ್ರಕರಣಗಳಲ್ಲಿ ವರ್ಷಗಳ ಮುಂಚಿತವಾಗಿಯೇ ಜೈಲಿನಲ್ಲಿರುವುದು ತಿಳಿದುಬಂದಿದೆ. ಆದರೆ ಪೊಲೀಸ್ ದಾಖಲೆಗಳು ಇವರನ್ನು ಜುಲೈ 24ರಿಂದ 26ರ ನಡುವೆ ಗುರುತಿಸಿವೆ.
►17 ಕೊಲೆ ಪ್ರಕರಣಗಳು
‘ದಿ ಇಂಡಿಯನ್ ಎಕ್ಸ್ಪ್ರೆಸ್’ ಪರಿಶೀಲಿಸಿದ 205 ಜನರ ಪೈಕಿ, ಪ್ರತಿಭಟನೆಯ ಸಮಯದಲ್ಲಿ ಜೈಲಿನಲ್ಲಿದ್ದರೂ ತಂತ್ರಜ್ಞಾನದ ಮೂಲಕ ಪತ್ತೆಯಾಗಿದ್ದಾರೆ ಎನ್ನಲಾದ ಕೊಲೆ ಪ್ರಕರಣದ 17 ಆರೋಪಿಗಳ ವಿವರ ಇಲ್ಲಿದೆ:
ಕಿಶನ್ (26): ಜುಲೈ 24ರ ಸಂಜೆ 6.36ಕ್ಕೆ FRS ಈತನನ್ನು ಗುರುತಿಸಿದೆ. ಈಶಾನ್ಯ ದಿಲ್ಲಿಯ ಕರಾವಲ್ ನಗರದಲ್ಲಿ ಬಂಧಿತನಾಗಿದ್ದ ಈತನ ವಿರುದ್ಧ ಸಶಸ್ತ್ರ ದರೋಡೆ ಪ್ರಕರಣಗಳೂ ಇವೆ. ಈತನನ್ನು ಮೊದಲ ಬಾರಿಗೆ 2022ರ ಜುಲೈ 9ರಂದು ಮತ್ತು ಎರಡನೇ ಬಾರಿಗೆ 2023ರ ಅಕ್ಟೋಬರ್ 17ರಂದು ಜೈಲಿಗೆ ಕಳುಹಿಸಲಾಗಿತ್ತು.
ಮುಷ್ತಾಕ್ (29): ಜುಲೈ 24ರ ಸಂಜೆ 6.31ಕ್ಕೆ ಗುರುತಿಸಲಾಗಿದೆ. ಈಶಾನ್ಯ ದಿಲ್ಲಿಯ ಗೋಕುಲ್ಪುರಿಯಿಂದ ಬಂಧಿತನಾಗಿದ್ದ ಈತನ ವಿರುದ್ಧ ಕೊಲೆ ಯತ್ನ ಪ್ರಕರಣಗಳಿವೆ. 2024ರ ಜನವರಿ 1ರಂದು ಮೊದಲ ಬಾರಿಗೆ ಹಾಗೂ 2026ರ ಜೂನ್ 23ರಂದು ಮತ್ತೊಮ್ಮೆ ಜೈಲು ಸೇರಿದ್ದ.
ಅಂಕಿತ್ ಕುಮಾರ್ (22): ಜುಲೈ 24ರ ಸಂಜೆ 5.58ಕ್ಕೆ ಗುರುತಿಸಲಾಗಿದೆ. ಉತ್ತರ ದಿಲ್ಲಿಯ ವಜೀರಾಬಾದ್ನಿಂದ ಬಂಧಿತನಾದ ಈತ, 2022ರ ನವೆಂಬರ್ 11ರಂದು ಮೊದಲ ಬಾರಿಗೆ ಮತ್ತು ಈ ವರ್ಷದ ಜೂನ್ 24ರಂದು ಎರಡನೇ ಬಾರಿಗೆ ಜೈಲು ಸೇರಿದ್ದ.
ಯೋಗೇಶ್ (27): ಜುಲೈ 25ರ ಮಧ್ಯಾಹ್ನ 4.24ಕ್ಕೆ ಗುರುತಿಸಲಾಗಿದೆ. ದಕ್ಷಿಣ ದಿಲ್ಲಿಯಿಂದ ಬಂಧಿತನಾದ ಈತನನ್ನು 2024ರ ನವೆಂಬರ್ 17ರಂದು ಮೊದಲ ಬಾರಿಗೆ ಮತ್ತು 2024ರ ನವೆಂಬರ್ 29ರಂದು ಎರಡನೇ ಬಾರಿಗೆ ಜೈಲಿಗೆ ಕಳುಹಿಸಲಾಗಿತ್ತು.
ಪ್ರತಾಪ್ ಸಿಂಗ್ ಸಿಸೋಡಿಯಾ (31): ಜುಲೈ 25ರ ಮಧ್ಯಾಹ್ನ 3.35ಕ್ಕೆ ಸಿಕ್ಕಿಬಿದ್ದಿದ್ದಾನೆ. ಪೂರ್ವ ದಿಲ್ಲಿಯ ಗಾಂಧಿ ನಗರದಲ್ಲಿ ಸಹಚರನೊಂದಿಗೆ ಬಂಧಿತನಾದ ಈತನನ್ನು 2014ರ ನವೆಂಬರ್ 28ರಂದು ಮೊದಲ ಬಾರಿಗೆ ಜೈಲಿಗೆ ಕಳುಹಿಸಲಾಯಿತು. ನಂತರ ಹಲವು ಬಾರಿ ಜೈಲು ಸೇರಿದ್ದ ಈತನನ್ನು 2026ರ ಆಗಸ್ಟ್ 5ರಂದು ಮಂಡೋಲಿಯಿಂದ ತಿಹಾರ್ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಅರ್ಜುನ್ (28): ಜುಲೈ 25ರ ಮಧ್ಯಾಹ್ನ 1.48ಕ್ಕೆ ಗುರುತಿಸಲಾಗಿದೆ. ಪಶ್ಚಿಮ ದಿಲ್ಲಿಯ ಪಂಜಾಬಿ ಬಾಗ್ನಲ್ಲಿ ಬಂಧಿತನಾದ ಈತ 2021ರ ಮಾರ್ಚ್ 10ರಂದು ಮೊದಲ ಬಾರಿಗೆ ಮತ್ತು 2023ರ ಮಾರ್ಚ್ 9ರಂದು ಎರಡನೇ ಬಾರಿಗೆ ಜೈಲು ಸೇರಿದ್ದ.
ಸೋನು ಕುಮಾರ್ (34): ಜುಲೈ 25ರ ರಾತ್ರಿ 8.39ಕ್ಕೆ ಸಿಕ್ಕಿಬಿದ್ದಿದ್ದಾನೆ. ಆಗ್ನೇಯ ದಿಲ್ಲಿಯ ಓಖ್ಲಾ ಕೈಗಾರಿಕಾ ಪ್ರದೇಶದಲ್ಲಿ ಬಂಧಿತನಾದ ಈತನನ್ನು 2020ರ ಜನವರಿ 30ರಂದು ಮೊದಲ ಬಾರಿಗೆ ಮತ್ತು 2025ರ ಅಕ್ಟೋಬರ್ 27ರಂದು ಎರಡನೇ ಬಾರಿಗೆ ಜೈಲಿಗೆ ಕಳುಹಿಸಲಾಗಿತ್ತು.
ವಿಜಯ್ (26): ಜುಲೈ 25ರ ರಾತ್ರಿ 11.40ಕ್ಕೆ ಗುರುತಿಸಲಾಗಿದೆ. ವಾಯುವ್ಯ ದಿಲ್ಲಿಯ ಶಾಲಿಮಾರ್ ಬಾಗ್ನಲ್ಲಿ ಬಂಧಿತನಾದ ಈತ 2024ರ ಆಗಸ್ಟ್ 29ರಂದು ಮೊದಲ ಬಾರಿಗೆ ಹಾಗೂ 2026ರ ಜನವರಿ 19ರಂದು ಎರಡನೇ ಬಾರಿಗೆ ಜೈಲು ಸೇರಿದ್ದ.
ರಾಕೇಶ್ (42): ಜುಲೈ 25ರ ಮಧ್ಯಾಹ್ನ 1.30ಕ್ಕೆ ಸಿಕ್ಕಿಬಿದ್ದಿದ್ದಾನೆ. ವಾಯುವ್ಯ ದಿಲ್ಲಿಯಲ್ಲಿ ಬಂಧಿತನಾದ ಈತನ ವಿರುದ್ಧ ದರೋಡೆ, ಕಳವು ಮತ್ತು ಅಬಕಾರಿ ಕಾಯ್ದೆಯಡಿ ಪ್ರಕರಣಗಳಿವೆ. 2008ರ ಡಿಸೆಂಬರ್ 7ರಂದು ಮೊದಲ ಬಾರಿಗೆ ಮತ್ತು 2024ರ ಫೆಬ್ರವರಿ 18ರಂದು ಎರಡನೇ ಬಾರಿಗೆ ಜೈಲು ಸೇರಿದ್ದ.
ಭೋಲಾ ಅಲಿಯಾಸ್ ಶ್ಯಾಮ್ ಕುಮಾರ್ (32): ಜುಲೈ 25ರ ಸಂಜೆ 4.58ಕ್ಕೆ ಗುರುತಿಸಲಾಗಿದೆ. ವಾಯುವ್ಯ ದಿಲ್ಲಿಯಲ್ಲಿ ಬಂಧಿತನಾದ ಈತನ ವಿರುದ್ಧ ಕಳ್ಳತನ ಮತ್ತು ಕನ್ನಹಾಕಿದ ಪ್ರಕರಣಗಳಿವೆ. 2015ರ ಎಪ್ರಿಲ್ 26ರಂದು ಮೊದಲ ಬಾರಿಗೆ ಮತ್ತು 2025ರ ಮಾರ್ಚ್ 29ರಂದು ಎರಡನೇ ಬಾರಿಗೆ ಜೈಲು ಸೇರಿದ್ದ.
ರಾಜಾ (27): ಜುಲೈ 25ರ ಮಧ್ಯಾಹ್ನ 2.22ಕ್ಕೆ ಸಿಕ್ಕಿಬಿದ್ದಿದ್ದಾನೆ. ಉತ್ತರ ದಿಲ್ಲಿಯ ಸಬ್ಜಿ ಮಂಡಿಯಲ್ಲಿ ಬಂಧಿತನಾದ ಈತ 2020ರ ಸೆಪ್ಟೆಂಬರ್ 1ರಂದು ಮೊದಲ ಬಾರಿಗೆ ಮತ್ತು 2024ರ ಜುಲೈ 1ರಂದು ಎರಡನೇ ಬಾರಿಗೆ ಜೈಲು ಸೇರಿದ್ದ.
ವಿಕ್ಕಿ ಅಲಿಯಾಸ್ ಮನೋಜ್ ಠಾಕೂರ್ (34): ಜುಲೈ 25ರ ರಾತ್ರಿ 11.12ಕ್ಕೆ ಗುರುತಿಸಲಾಗಿದೆ. ಉತ್ತರ ದಿಲ್ಲಿಯ ಕೊತ್ವಾಲಿಯಲ್ಲಿ ಬಂಧಿತನಾದ ಈತನನ್ನು 2015ರ ಜನವರಿ 2ರಂದು ಮೊದಲ ಬಾರಿಗೆ ಮತ್ತು 2016ರ ಮೇ 7ರಂದು ಎರಡನೇ ಬಾರಿಗೆ ಜೈಲಿಗೆ ಕಳುಹಿಸಲಾಗಿತ್ತು.
ಮೊಹಮ್ಮದ್ ಫರಾಜ್ (23): ಜುಲೈ 25ರ ಮಧ್ಯಾಹ್ನ 2.59ಕ್ಕೆ ಸಿಕ್ಕಿಬಿದ್ದಿದ್ದಾನೆ. ಉತ್ತರ ದಿಲ್ಲಿಯ ವಜೀರಾಬಾದ್ನಲ್ಲಿ ಬಂಧಿತನಾದ ಈತನ ವಿರುದ್ಧ ಪ್ರತ್ಯೇಕ ದರೋಡೆ ಪ್ರಕರಣವಿದೆ. 2022ರ ಜನವರಿ 20ರಂದು ಮೊದಲ ಬಾರಿಗೆ ಮತ್ತು 2024ರ ಅಕ್ಟೋಬರ್ 9ರಂದು ಎರಡನೇ ಬಾರಿಗೆ ಜೈಲು ಸೇರಿದ್ದ.
ಮನೀಶ್ (28): ಜುಲೈ 25ರ ಸಂಜೆ 4.25ಕ್ಕೆ ಗುರುತಿಸಲಾಗಿದೆ. ಸೆಂಟ್ರಲ್ ದಿಲ್ಲಿಯ ರಂಜಿತ್ ನಗರದಲ್ಲಿ ಬಂಧಿತನಾದ ಈತನನ್ನು 2023ರ ಎಪ್ರಿಲ್ 24ರಂದು ಮೊದಲ ಬಾರಿಗೆ ಮತ್ತು 2024ರ ಅಕ್ಟೋಬರ್ 23ರಂದು ಎರಡನೇ ಬಾರಿಗೆ ಜೈಲಿಗೆ ಕಳುಹಿಸಲಾಗಿತ್ತು.
ಧರ್ಮೇಂದ್ರ ಯಾದವ್ (37): ಜುಲೈ 25ರ ಮಧ್ಯಾಹ್ನ 1.20ಕ್ಕೆ ಸಿಕ್ಕಿಬಿದ್ದಿದ್ದಾನೆ. ದ್ವಾರಕಾ ಪ್ರದೇಶದಲ್ಲಿ ಕೊಲೆ ಪ್ರಕರಣದಲ್ಲಿ ಬಂಧಿತನಾದ ಈತನ ವಿರುದ್ಧ ಕಳವು ಮತ್ತು ಕೊಲೆ ಯತ್ನ ಪ್ರಕರಣಗಳೂ ಇವೆ. 2016ರ ಜುಲೈ 22ರಂದು ಮೊದಲ ಬಾರಿಗೆ ಹಾಗೂ 2026ರ ಮೇ 14ರಂದು ಎರಡನೇ ಬಾರಿಗೆ ಜೈಲು ಸೇರಿದ್ದ.
ಸೋನು (29): ಜುಲೈ 25ರ ಮಧ್ಯಾಹ್ನ 3.44ಕ್ಕೆ ಗುರುತಿಸಲಾಗಿದೆ. ಶಹದಾರ ಜಿಲ್ಲೆಯ ಜಿಟಿಬಿ ಎನ್ಕ್ಲೇವ್ನಲ್ಲಿ ಬಂಧಿತನಾದ ಈತನ ವಿರುದ್ಧ ದರೋಡೆ ಪ್ರಕರಣಗಳಿವೆ. 2018ರ ಫೆಬ್ರವರಿ 11ರಂದು ಮೊದಲ ಬಾರಿಗೆ ಮತ್ತು 2022ರ ಎಪ್ರಿಲ್ 26ರಂದು ಎರಡನೇ ಬಾರಿಗೆ ಜೈಲು ಸೇರಿದ್ದ.
ರಾಯಲ್ ಮಾಸ್ಸಿ (25): ಜುಲೈ 26ರ ಸಂಜೆ 5.45ಕ್ಕೆ ಸಿಕ್ಕಿಬಿದ್ದಿದ್ದಾನೆ. ದಕ್ಷಿಣ ದಿಲ್ಲಿಯ ತಿಗ್ರಿಯಲ್ಲಿ ಬಂಧಿತನಾದ ಈತ 2021ರ ಆಗಸ್ಟ್ 20ರಂದು ಮೊದಲ ಬಾರಿಗೆ ಮತ್ತು 2023ರ ಎಪ್ರಿಲ್ 4ರಂದು ಎರಡನೇ ಬಾರಿಗೆ ಜೈಲು ಸೇರಿದ್ದ.
ಈ ಪ್ರಕರಣಗಳಲ್ಲಿ ಕನಿಷ್ಠ ಒಂದಾದರೂ ರಾಜಧಾನಿಯಲ್ಲಿ ನಡೆದ ಹೈಫ್ರೊಫೈಲ್ ಕೊಲೆಗೆ ಸಂಬಂಧಿಸಿದೆ. ದಕ್ಷಿಣ ದಿಲ್ಲಿಯ ಗ್ರೇಟರ್ ಕೈಲಾಶ್-1ರಲ್ಲಿ ಜಿಮ್ ಮಾಲೀಕ ನಾದಿರ್ ಶಾ ಕೊಲೆಯಲ್ಲಿ ಭಾಗಿಯಾದ ಆರೋಪದ ಮೇಲೆ ಯೋಗೇಶ್ ಅಲಿಯಾಸ್ ರಾಜುನನ್ನು ಬಂಧಿಸಲಾಗಿತ್ತು. ದಾಖಲೆಗಳ ಪ್ರಕಾರ, ಈತ ಗ್ಯಾಂಗ್ಸ್ಟರ್ಗಳಾದ ಲಾರೆನ್ಸ್ ಬಿಷ್ಣೋಯ್ ಮತ್ತು ಹಾಶಿಮ್ ಬಾಬಾ ಪಡೆಯ ಶಾರ್ಪ್ ಶೂಟರ್ ಆಗಿದ್ದು, ಗುಂಡಿನ ಚಕಮಕಿಯ ವೇಳೆ ಎಡಕಾಲಿಗೆ ಗುಂಡೇಟು ಬಿದ್ದ ಬಳಿಕ ಈತನನ್ನು ಬಂಧಿಸಲಾಗಿತ್ತು.
►POCSO ಕಾಯ್ದೆಯಡಿ ಬಂಧಿತರಾದ ಮೂವರು ಸೇರಿದಂತೆ ಅತ್ಯಾಚಾರ ಆರೋಪ ಹೊತ್ತಿರುವವರು
ಅಂಕಿತ್ ಅಲಿಯಾಸ್ ಮೊಗ್ಲಿ (34): ಜುಲೈ 25ರ ಮಧ್ಯಾಹ್ನ 3.28ಕ್ಕೆ FRS ಗುರುತಿಸಿದೆ. 2022ರಲ್ಲಿ ಪಶ್ಚಿಮ ದಿಲ್ಲಿಯ ತಿಲಕ್ ನಗರದಲ್ಲಿ ಈತನನ್ನು ಬಂಧಿಸಲಾಗಿತ್ತು. 2022ರ ಫೆಬ್ರವರಿ 15ರಂದು ಮೊದಲ ಬಾರಿಗೆ ಮತ್ತು 2024ರ ಜುಲೈ 16ರಂದು ಎರಡನೇ ಬಾರಿಗೆ ತಿಹಾರ್ ಜೈಲು ಸೇರಿದ್ದ.
ಸುನಿಲ್ ಕುಮಾರ್ (26): ಜುಲೈ 25ರ ಸಂಜೆ 4.04ಕ್ಕೆ ಗುರುತಿಸಲಾಗಿದೆ. POCSO ಕಾಯ್ದೆಯಡಿ ದಕ್ಷಿಣ ದಿಲ್ಲಿಯಲ್ಲಿ ಬಂಧಿತನಾದ ಈತನನ್ನು 2021ರ ಅಕ್ಟೋಬರ್ 15ರಂದು ಮೊದಲ ಬಾರಿಗೆ ಮತ್ತು 2025ರ ಆಗಸ್ಟ್ 30ರಂದು ಎರಡನೇ ಬಾರಿಗೆ ಜೈಲಿಗೆ ಕಳುಹಿಸಲಾಗಿತ್ತು.
ಹೀರಾ ಸಿಂಗ್: ಜುಲೈ 25ರ ಮಧ್ಯಾಹ್ನ 3.31ಕ್ಕೆ ಸಿಕ್ಕಿಬಿದ್ದಿದ್ದಾನೆ. POCSO ಕಾಯ್ದೆಯಡಿ ಈಶಾನ್ಯ ದಿಲ್ಲಿಯಲ್ಲಿ ಬಂಧಿತನಾದ ಈತ 2023ರ ಜುಲೈ 11ರಿಂದ ಜೈಲಿನಲ್ಲಿದ್ದಾನೆ.
ಕುಂದನ್: ಜುಲೈ 25ರ ರಾತ್ರಿ 11.48ಕ್ಕೆ ಗುರುತಿಸಲಾಗಿದೆ. POCSO ಕಾಯ್ದೆಯಡಿ ಈಶಾನ್ಯ ದಿಲ್ಲಿಯಲ್ಲಿ ಬಂಧಿತನಾದ ಈತನನ್ನು 2024ರ ಮಾರ್ಚ್ 30ರಂದು ಮೊದಲ ಬಾರಿಗೆ ಮತ್ತು 2024ರ ಮೇ 29ರಂದು ಎರಡನೇ ಬಾರಿಗೆ ಜೈಲಿಗೆ ಕಳುಹಿಸಲಾಗಿತ್ತು.
►ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳು
ಮಹೇಶ್ (33): ಜುಲೈ 25ರ ಮಧ್ಯಾಹ್ನ 3.34ಕ್ಕೆ ಗುರುತಿಸಲಾಗಿದೆ. ಉತ್ತರ ದಿಲ್ಲಿಯ ಕೊತ್ವಾಲಿಯಲ್ಲಿ ಬಂಧಿತನಾದ ಈತ 2022ರ ಮೇ 23ರಂದು ಮೊದಲ ಬಾರಿಗೆ ಮತ್ತು 2024ರ ಎಪ್ರಿಲ್ 29ರಂದು ಎರಡನೇ ಬಾರಿಗೆ ಜೈಲು ಸೇರಿದ್ದ.
ಬಾಬಿ (24): ಜುಲೈ 25ರ ಸಂಜೆ 4.23ಕ್ಕೆ ಸಿಕ್ಕಿಬಿದ್ದಿದ್ದಾನೆ. ದಕ್ಷಿಣ ದಿಲ್ಲಿಯ ಸಂಗಮ್ ವಿಹಾರದಲ್ಲಿ ಬಂಧಿತನಾದ ಈತನ ವಿರುದ್ಧ ದರೋಡೆ ಪ್ರಕರಣವೂ ಇದೆ. 2021ರ ಮೇ 3ರಂದು ಮೊದಲ ಬಾರಿಗೆ ಹಾಗೂ 2024ರ ಫೆಬ್ರವರಿ 21ರಂದು ಎರಡನೇ ಬಾರಿಗೆ ಜೈಲಿಗೆ ಕಳುಹಿಸಲಾಗಿತ್ತು.
ಜಿಶಾನ್ ಅಹಮದ್ ಇದ್ರಿಷಿ (25): ಜುಲೈ 25ರ ಸಂಜೆ 4.55ಕ್ಕೆ ಗುರುತಿಸಲಾಗಿದೆ. ನೈಋತ್ಯ ದಿಲ್ಲಿಯ ಸಾಗರಪುರದಲ್ಲಿ ಬಂಧಿತನಾದ ಈತನ ವಿರುದ್ಧ ಕಳ್ಳತನ ಪ್ರಕರಣವೂ ಇದೆ. 2020ರ ಫೆಬ್ರವರಿ 17ರಂದು ಮೊದಲ ಬಾರಿಗೆ ಮತ್ತು 2026ರ ಮಾರ್ಚ್ 19ರಂದು ಎರಡನೇ ಬಾರಿಗೆ ಜೈಲು ಸೇರಿದ್ದ.
ಅನ್ನು ಗಿಲೋಡಿಯಾ ಅಲಿಯಾಸ್ ಪಹಲ್ವಾನ್ (27): ಜುಲೈ 25ರ ಮಧ್ಯಾಹ್ನ 3.13ಕ್ಕೆ ಸಿಕ್ಕಿಬಿದ್ದಿದ್ದಾನೆ. ನೈಋತ್ಯ ದಿಲ್ಲಿಯ ಕಿಶನ್ಗಢದಲ್ಲಿ ಬಂಧಿತನಾದ ಈತ 2021ರ ಅಕ್ಟೋಬರ್ 23ರಂದು ಮೊದಲ ಬಾರಿಗೆ ಮತ್ತು 2022ರ ಮಾರ್ಚ್ 25ರಂದು ಎರಡನೇ ಬಾರಿಗೆ ಜೈಲು ಸೇರಿದ್ದ.
►‘ಕೇವಲ FRS ಆಧಾರದ ಮೇಲೆ ಯಾವುದೇ ಕ್ರಮವಿಲ್ಲ’
ದಿಲ್ಲಿ ಪೊಲೀಸರ ಮುಖ ಗುರುತಿಸುವ ತಂತ್ರಜ್ಞಾನದಲ್ಲಿ ಸಿಕ್ಕಿಬೀಳುವ ಮುಖಗಳ ಸುತ್ತ ಚೌಕಗಳನ್ನು ನಿರ್ಮಿಸಿ, ಪೊಲೀಸ್ ಡೇಟಾಬೇಸ್ ನಲ್ಲಿರುವ ಚಿತ್ರಗಳೊಂದಿಗೆ ಹೋಲಿಸಿ ನೋಡುತ್ತದೆ. 2022ರಲ್ಲಿ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗೆ ನೀಡಿದ ಉತ್ತರದಲ್ಲಿ, ವ್ಯವಸ್ಥೆಯು ಶೇಕಡಾ 80ರಷ್ಟು ನಿಖರತೆ ತೋರಿಸಿದರೆ ಅದನ್ನು ಪಾಸಿಟಿವ್ ಫಲಿತಾಂಶ ಎಂದು ಪರಿಗಣಿಸುವುದಾಗಿ ಪೊಲೀಸರು ಬಹಿರಂಗಪಡಿಸಿದ್ದರು. ಆದರೆ ಈ ಫಲಿತಾಂಶವೊಂದೇ ವ್ಯಕ್ತಿಯ ಗುರುತಿಗೆ ಸಾಕ್ಷಿಯಾಗುವುದಿಲ್ಲ. ಅಲ್ಗಾರಿದಂ, ಕ್ಯಾಮೆರಾ ಕೋನ, ಬೆಳಕು, ಚಿತ್ರದ ಗುಣಮಟ್ಟ, ಮಾಸ್ಕ್ ಧರಿಸುವುದು ಮತ್ತು ಪರಿಶೀಲಿಸಲಾಗುವ ಡೇಟಾಬೇಸ್ ಅನ್ನು ಆಧರಿಸಿ ನಿಖರತೆ ಬದಲಾಗುತ್ತದೆ.
ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಅತಿಯಾದ ಬಲಪ್ರಯೋಗ ಮತ್ತು ಕಣ್ಗಾವಲು ಬಳಸಲಾಗಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳಿಗೆ ಸ್ಪಂದಿಸಿ ದಿಲ್ಲಿ ಪೊಲೀಸರು ಸುಪ್ರೀಂ ಕೋರ್ಟ್ ಗೆ ಈ ಪ್ರಮಾಣಪತ್ರ ಸಲ್ಲಿಸಿದ್ದರು.
ಜಿಲ್ಲಾವಾರು ಮಾಹಿತಿ ಪ್ರಕಾರ, ದೆಹಲಿಯ ಉತ್ತರ ಜಿಲ್ಲೆಯಲ್ಲಿ ಗರಿಷ್ಠ ಅಂದರೆ 285 ಜನರನ್ನು ಗುರುತಿಸಲಾಗಿದೆ. ನಂತರದ ಸ್ಥಾನಗಳಲ್ಲಿ ಹೊರವಲಯ (257), ವಾಯುವ್ಯ (256), ಈಶಾನ್ಯ (174), ಪೂರ್ವ (173) ಮತ್ತು ನೈಋತ್ಯ (166) ಜಿಲ್ಲೆಗಳಿವೆ. ಇತರ ಜಿಲ್ಲೆಗಳು ಮತ್ತು ವಿಭಾಗಗಳಾದ ರೈಲ್ವೆ, ಶಹದಾರ, ಸೆಂಟ್ರಲ್, ಆಗ್ನೇಯ, ಪಶ್ಚಿಮ, ದ್ವಾರಕಾ, ದಕ್ಷಿಣ, ರೋಹಿಣಿ, ಹೊಸದಿಲ್ಲಿ, ಕ್ರೈಮ್ ಬ್ರಾಂಚ್, ಐಜಿಐ ವಿಮಾನ ನಿಲ್ದಾಣ, ಮೆಟ್ರೊ ಮತ್ತು ಸ್ಪೆಷಲ್ ಸೆಲ್ ಆಡಳಿತ ವ್ಯಾಪ್ತಿಯೂ ಈ ಪಟ್ಟಿಯಲ್ಲಿದೆ.
ಆದರೆ, ಗುರುತಿಸಲಾದ ವ್ಯಕ್ತಿಗಳು ಆರೋಪಿಗಳೇ, ಶಿಕ್ಷೆಗೆ ಒಳಗಾದವರೇ ಅಥವಾ ಕೇವಲ ಅಪರಾಧ ಪ್ರಕರಣಗಳಲ್ಲಿ ಹೆಸರು ಹೊಂದಿರುವವರೇ ಎಂಬುದನ್ನು ಪ್ರಮಾಣಪತ್ರದಲ್ಲಿ ಸ್ಪಷ್ಟಪಡಿಸಿಲ್ಲ.
ಪ್ರಮಾಣಪತ್ರದ ಪ್ರಕಾರ, “ಸಂಚಾರ ನಿಯಮ ಉಲ್ಲಂಘನೆಯಂತಹ ಸಣ್ಣಪುಟ್ಟ ಅಪರಾಧಗಳಲ್ಲಿ ಭಾಗಿಯಾದವರ ಬದಲಿಗೆ, ಗಂಭೀರ ಅಪರಾಧಗಳನ್ನು ಎದುರಿಸುತ್ತಿರುವ ಆರೋಪಿಗಳ ಮುಖ ಮತ್ತು ವಿವರಗಳು ಮಾತ್ರ ಪೊಲೀಸ್ ದಾಖಲೆಗಳಲ್ಲಿ ಲಭ್ಯವಿರುತ್ತವೆ.”
“ಜನಸಂದಣಿಯಲ್ಲಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯನ್ನು ಗುರುತಿಸಲು ಮುಖ ಗುರುತಿಸುವ ತಂತ್ರಜ್ಞಾನವು ಮೊದಲ ಹಂತವಷ್ಟೇ. ಕೇವಲ ಈ ತಂತ್ರಜ್ಞಾನದ ಫಲಿತಾಂಶದ ಆಧಾರದ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ತಂತ್ರಜ್ಞಾನದ ಮೂಲಕ ಮುಖವನ್ನು ಗುರುತಿಸಿದ ಬಳಿಕ, ಸಂಬಂಧಪಟ್ಟ ವ್ಯಕ್ತಿಯ ವಿವರಗಳು ಈಗಾಗಲೇ ಪೊಲೀಸ್ ದಾಖಲೆಗಳಲ್ಲಿ ಇರುವುದರಿಂದ ಅವರ ಬಗ್ಗೆ ಸ್ಥಳೀಯ ತನಿಖೆ ನಡೆಸಲಾಗುತ್ತದೆ. ಸ್ಥಳೀಯ ತನಿಖೆಯಲ್ಲಿ ಆ ವ್ಯಕ್ತಿ ಪ್ರತಿಭಟನಾ ಸ್ಥಳದಲ್ಲಿ ಇರುವುದು ದೃಢಪಟ್ಟರೆ ಮಾತ್ರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಪೊಲೀಸರು ಹೇಳಿದ್ದಾರೆ.
ಸೌಜನ್ಯ: indianexpress.com