ನೇಪಾಳದಲ್ಲಿ ಪ್ರವಾಹ: 9 ದಿನಗಳ ನಂತರ ಸುರಂಗದಿಂದ ಇಬ್ಬರನ್ನು ರಕ್ಷಿಸಿದ ರಕ್ಷಣಾ ಕಾರ್ಯಾಚರಣೆ ಹೇಗೆ ನಡೆಯಿತು?
Photo Credit : AP
ಪ್ರಕೃತಿಯ ನಿಯಮಗಳನ್ನೇ ಮೀರಿ ನಡೆಯುವ ಅಸಾಧಾರಣ ಘಟನೆಯನ್ನು ಬಣ್ಣಿಸಲು ಸಾಮಾನ್ಯವಾಗಿ ‘ಪವಾಡ’ ಎಂಬ ಪದವನ್ನು ಬಳಸಲಾಗುತ್ತದೆ. ಶುಕ್ರವಾರ (ಸೆಪ್ಟೆಂಬರ್ 4) ನೇಪಾಳದ ತ್ರಿಶೂಲಿ 3A ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಇಂತಹುದೇ ಒಂದು ಪವಾಡ ಸಂಭವಿಸಿದೆ. ಹಿಮಾಲಯ ಪ್ರದೇಶದಲ್ಲಿ ಸಾವಿರಾರು ಜನರನ್ನು ಬಲಿಪಡೆದ ಅಥವಾ ನಾಪತ್ತೆ ಮಾಡಿದ ಭೀಕರ ಪ್ರವಾಹದ ಒಂಭತ್ತು ದಿನಗಳ ಬಳಿಕ, ರಕ್ಷಣಾ ಸಿಬ್ಬಂದಿ ಇಬ್ಬರು ವ್ಯಕ್ತಿಗಳನ್ನು ಜೀವಂತವಾಗಿ ಹೊರತೆಗೆದಿದ್ದಾರೆ.
ನೇಪಾಳದ ಸೈನ್ಯವು ಈ ಸಾಹಸಿಕ ರಕ್ಷಣಾ ಕಾರ್ಯಾಚರಣೆಯ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಕೆಸರಿನಲ್ಲಿ ಮುಳುಗಿದ್ದ ಮೊದಲ ಕಾರ್ಮಿಕನನ್ನು ರಕ್ಷಣಾ ಸಿಬ್ಬಂದಿ ಹೆಗಲ ಮೇಲೆ ಹೊತ್ತು ತರುತ್ತಿರುವುದು ಕಂಡುಬಂದಿದೆ. “ಆಶಾವಾದ ಜೀವಂತವಾಗಿದ್ದಾಗ, ಅಸಾಧ್ಯವಾದದ್ದು ಕೂಡ ಸಾಧ್ಯವಾಗುತ್ತದೆ” ಎಂದು ಆ ಚಿತ್ರಕ್ಕೆ ಅಡಿಬರಹ ನೀಡಲಾಗಿತ್ತು.
ರಕ್ಷಿಸಲ್ಪಟ್ಟ ಇಬ್ಬರೂ ವ್ಯಕ್ತಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪವಾಡಸದೃಶ ರಕ್ಷಣೆಯು, ಈ ಸುರಂಗಗಳಲ್ಲಿ ಸಿಲುಕಿರುವ ನೂರಾರು ಜನರು ಶೀಘ್ರದಲ್ಲೇ ಬೆಳಕನ್ನು ಕಾಣಲಿದ್ದಾರೆ ಎಂಬ ಭರವಸೆಯನ್ನು ಮೂಡಿಸಿದೆ.
►ಆ ಇಬ್ಬರು ಕಾರ್ಮಿಕರು ಯಾರು?
ಮಧ್ಯ ನೇಪಾಳದ ತ್ರಿಶೂಲಿ ನದಿ ಪಾತ್ರದಲ್ಲಿ ದಿಢೀರ್ ಪ್ರವಾಹ ಅಪ್ಪಳಿಸಿದ ನಂತರ, ನೇಪಾಳದ ಹಲವು ಜಲವಿದ್ಯುತ್ ಸುರಂಗಗಳ ಒಳಗೆ ನೂರಾರು ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಅವುಗಳಲ್ಲಿ ತ್ರಿಶೂಲಿ 3A ಜಲವಿದ್ಯುತ್ ಯೋಜನೆಯ ಸುರಂಗವೂ ಒಂದಾಗಿದೆ.
ಅಂದಿನಿಂದ, ನೇಪಾಳ ಸೈನ್ಯದ ನೇತೃತ್ವದ ರಕ್ಷಣಾ ತಂಡಗಳು ಜೀವಂತವಾಗಿರುವವರನ್ನು ಹುಡುಕಲು, ಸುರಂಗಕ್ಕೆ ಅಡ್ಡಲಾಗಿದ್ದ ಬಂಡೆಗಳು ಮತ್ತು ಕೆಸರನ್ನು ತೆರವುಗೊಳಿಸಲು ಹಗಲಿರುಳು ಶ್ರಮಿಸುತ್ತಿದ್ದವು. ಆ ಪ್ರದೇಶದಲ್ಲಿ ಜಲಪ್ರಳಯ ಸಂಭವಿಸಿದ ಒಂಭತ್ತು ದಿನಗಳ ಬಳಿಕ, ಶುಕ್ರವಾರ ರಕ್ಷಣಾ ಅಧಿಕಾರಿಗಳು ತ್ರಿಶೂಲಿ 3A ಜಲವಿದ್ಯುತ್ ಕೇಂದ್ರದ ಬಂದ್ ಆಗಿದ್ದ ಸುರಂಗದಿಂದ ಇಬ್ಬರು ವ್ಯಕ್ತಿಗಳನ್ನು ಹೊರತೆಗೆದಿದ್ದಾರೆ.
ಮೊದಲು ರಕ್ಷಿಸಲ್ಪಟ್ಟ ವ್ಯಕ್ತಿ ಸಂಜಯ್ ಸಾಹ್. ಬಳಿಕ ಕಬೀರ್ ಮಹರ್ಜನ್ ಎಂಬ ಮತ್ತೊಬ್ಬ ಕಾರ್ಮಿಕನನ್ನು ರಕ್ಷಿಸಲಾಯಿತು. 30 ವರ್ಷದ ಸಾಹ್ ನೇಪಾಳ ವಿದ್ಯುತ್ ಪ್ರಾಧಿಕಾರದಲ್ಲಿ (NEA) ಮೆಕ್ಯಾನಿಕಲ್ ಫೋರ್ಮನ್ ಆಗಿದ್ದರೆ, 45 ವರ್ಷದ ಮಹರ್ಜನ್ ತ್ರಿಶೂಲಿ-3A ಜಲವಿದ್ಯುತ್ ಯೋಜನೆಯಲ್ಲಿ ಮೇಲ್ವಿಚಾರಕರಾಗಿದ್ದಾರೆ.
ಪ್ರಸ್ತುತ ಇಬ್ಬರನ್ನೂ ವಾಯುಮಾರ್ಗದ ಮೂಲಕ ಕಾಠ್ಮಂಡುವಿಗೆ ಕರೆತರಲಾಗಿದೆ. ಸಾಹ್ ಅವರಿಗೆ ಛೌನಿಯ ಬೀರೇಂದ್ರ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಹರ್ಜನ್ ಅವರನ್ನು ರಾಷ್ಟ್ರೀಯ ಟ್ರಾಮಾ ಸೆಂಟರ್ಗೆ ದಾಖಲಿಸಲಾಗಿದೆ.
ಅವರ ರಕ್ಷಣೆಯ ಸುದ್ದಿ ಕೇಳಿ ಸಾಹ್ ಮತ್ತು ಮಹರ್ಜನ್ ಅವರ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. “ನನಗೆ ತುಂಬಾ ಸಂತೋಷವಾಗಿದೆ, ಮನಸ್ಸಿನ ಭಾರ ಕಡಿಮೆಯಾಯಿತು” ಎಂದು ರಕ್ಷಿಸಲ್ಪಟ್ಟ ಕಬೀರ್ ಅವರ ಸಹೋದರ ಅಮೀರ್ ಮಹರ್ಜನ್ ಎಎಫ್ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮಹರ್ಜನ್ ಅವರ ನಾದಿನಿ ಲಕ್ಷ್ಮಿ ನೈನಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, “ಇದು ನಿಜಕ್ಕೂ ಪವಾಡ! ನನಗೆ ತುಂಬಾ ಸಂತೋಷವಾಗಿದೆ. ಅವರು ಜೀವಂತವಾಗಿದ್ದಾರೆ ಎಂಬ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿ ನಂಬಲೇ ಆಗಲಿಲ್ಲ” ಎಂದು ಹೇಳಿದ್ದಾರೆ.
►ಅಷ್ಟು ದಿನ ಸುರಂಗದಲ್ಲಿ ಇಬ್ಬರೂ ಬದುಕುಳಿದಿದ್ದು ಹೇಗೆ?
ಪ್ರವಾಹ ಅಪ್ಪಳಿಸಿದಾಗ ಸಾಹ್ ಯೋಜನೆಯ ಕಂಟ್ರೋಲ್ ರೂಂನಲ್ಲಿ ಕೆಲಸ ಮಾಡುತ್ತಿದ್ದರು. ಪ್ರವಾಹದ ನೀರು ಮತ್ತು ಕಸ-ಕಡ್ಡಿಗಳು ಸುರಂಗ ಪ್ರವೇಶಿಸಲು ಪ್ರಾರಂಭಿಸುತ್ತಿದ್ದಂತೆ ಪರಿಸ್ಥಿತಿ ವೇಗವಾಗಿ ಬಿಗಡಾಯಿಸಿತು. ಹಿರಿಯ ಅಧಿಕಾರಿಯಾಗಿದ್ದರಿಂದ ಒಳಗಿದ್ದ ಇತರ ಕಾರ್ಮಿಕರಿಗೆ ಸಹಾಯ ಮಾಡುವುದು ತಮ್ಮ ಜವಾಬ್ದಾರಿಯಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಇತರರು ಪಾರಾಗಲು ಸಹಾಯ ಮಾಡುವಾಗ ತಮಗೆ ಹೊರಬರಲು ಸಾಧ್ಯವಾಗಲಿಲ್ಲ. “ಅವರನ್ನು ರಕ್ಷಿಸಲು ಪ್ರಯತ್ನಿಸುವಾಗ ಎಲ್ಲರನ್ನೂ ಓಡುವಂತೆ ಮಾಡಿದೆ. ಇದರಿಂದ ನನಗೆ ಸಮಯ ವ್ಯರ್ಥವಾಯಿತು. ಕೊನೆಯಲ್ಲಿ ನನಗೆ ಹೊರಬರಲು ಸಾಧ್ಯವಾಗಲಿಲ್ಲ” ಎಂದು ಸಾಹ್ ‘ಕಾಠ್ಮಂಡು ಪೋಸ್ಟ್’ಗೆ ತಿಳಿಸಿದ್ದಾರೆ.
ಸಿಲುಕಿಕೊಂಡ ಬಳಿಕ ಸಾಹ್ ಬದುಕುಳಿಯಲು ʼಮಹಾಮಂತ್ರ’ ಜಪಿಸುತ್ತಿದ್ದರು. ಇದು ಅವರಿಗೆ ಬದುಕುಳಿಯುವ ಶಕ್ತಿ ನೀಡಿತು. “ನಾನು ಮಹಾಮಂತ್ರವನ್ನು ಜಪಿಸುತ್ತಿದ್ದೆ” ಎಂದು ಅವರು ‘ಇಂಡಿಯಾ ಟುಡೇ’ಗೆ ತಿಳಿಸಿದ್ದಾರೆ.
ಇನ್ನೊಂದೆಡೆ, ಮಹರ್ಜನ್ ಅವರು ನಿಗದಿತ ನಿರ್ವಹಣಾ ಕೆಲಸಕ್ಕಾಗಿ ಕುಲೇಖಾನಿ ಜಲವಿದ್ಯುತ್ ಯೋಜನೆಯಿಂದ ಇಲ್ಲಿಗೆ ಬಂದಿದ್ದರು. ಅವರು ಜಲವಿದ್ಯುತ್ ಸ್ವಯಂಚಾಲಿತ ಯೋಜನೆಯಡಿ ಮೆಕ್ಯಾನಿಕಲ್ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಇಬ್ಬರೂ ಈ ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದಾರೆ.
►ಸುರಂಗದಿಂದ ಅವರ ರಕ್ಷಣಾ ಕಾರ್ಯಾಚರಣೆ ನಡೆದಿದ್ದು ಹೇಗೆ?
ಆಸ್ಟ್ರೇಲಿಯಾದ ಸುರಂಗ ತಜ್ಞ ಆರ್ನಾಲ್ಡ್ ಡಿಕ್ಸ್ ಹೇಳುವಂತೆ, ಸಾಹ್ ಮತ್ತು ಮಹರ್ಜನ್ ಅವರ ರಕ್ಷಣೆಯು “ಸಾಲು ಸಾಲು ಪವಾಡಗಳ ಸರಣಿ”ಯಾಗಿದೆ.
ರಕ್ಷಣಾ ಅಧಿಕಾರಿಗಳು ಎದುರಿಸಿದ ಮೊದಲ ಸವಾಲೆಂದರೆ ಸುರಂಗವನ್ನು ಪತ್ತೆ ಮಾಡುವುದು. ಏಕೆಂದರೆ ದಿಢೀರ್ ಪ್ರವಾಹದಿಂದಾಗಿ ಆ ಪ್ರದೇಶದ ಭೌಗೋಳಿಕ ಸ್ವರೂಪವೇ ಸಂಪೂರ್ಣವಾಗಿ ಬದಲಾಗಿತ್ತು.
“ಬೆಟ್ಟದ ಮೇಲಿದ್ದ ಸುರಂಗದ ಬಾಗಿಲು ಪ್ರವಾಹದ ಬಳಿಕ ಮಣ್ಣಿನಿಂದ ಮುಚ್ಚಿ, ಅದನ್ನು ಹುಡುಕಬೇಕಾಗಿ ಬಂದ ಇಂತಹ ರಕ್ಷಣಾ ಕಾರ್ಯಾಚರಣೆಯನ್ನು ನಾನು ಹಿಂದೆಂದೂ ನೋಡಿರಲಿಲ್ಲ. ಹಿಮಪಾತ ಮತ್ತು ಪ್ರವಾಹದ ಭೀಕರತೆಯನ್ನು ನೀವು ಊಹಿಸಬಹುದು. ಅದು ಸುರಂಗದ ದ್ವಾರವನ್ನೇ ಸಂಪೂರ್ಣವಾಗಿ ಮುಚ್ಚಿಹಾಕಿತ್ತು” ಎಂದು ಇಂಟರ್ನ್ಯಾಷನಲ್ ಟನಲಿಂಗ್ ಆ್ಯಂಡ್ ಅಂಡರ್ಗ್ರೌಂಡ್ ಸ್ಪೇಸ್ ಅಸೋಸಿಯೇಷನ್ನ ಅಧ್ಯಕ್ಷರೂ ಆಗಿರುವ ಡಿಕ್ಸ್ ಬಿಬಿಸಿಗೆ ತಿಳಿಸಿದ್ದಾರೆ.
ಎಂಜಿನಿಯರಿಂಗ್ ತಂತ್ರಜ್ಞಾನಗಳು, ನಕ್ಷೆಗಳು ಮತ್ತು ಉಪಗ್ರಹ ಚಿತ್ರಗಳನ್ನು ಬಳಸಿ ಅವರು ಸುರಂಗದ ದ್ವಾರವನ್ನು ನಿಖರವಾಗಿ ಪತ್ತೆ ಮಾಡಿದರು. ಆದರೆ ಅಲ್ಲಿಗೆ ಮುಂದಿನ ಸವಾಲು ಎದುರಾಯಿತು.
ಸುರಂಗದ ದ್ವಾರವನ್ನು ಮುಚ್ಚಿದ್ದ ಕೆಸರು ಮತ್ತು ಕಸ-ಕಡ್ಡಿಗಳನ್ನು ತೆರವುಗೊಳಿಸಲು ಹಲವು ದಿನಗಳು ಬೇಕಾದವು. ಕಾರುಗಳಷ್ಟೇ ದೊಡ್ಡದಾಗಿದ್ದ ಬಂಡೆಗಳನ್ನು ಸ್ಫೋಟಿಸಲು ಅವರು ಸ್ಫೋಟಕಗಳನ್ನು ಬಳಸಬೇಕಾಯಿತು. ಸುರಂಗ ರಕ್ಷಣಾ ಕಾರ್ಯಾಚರಣೆಯಲ್ಲಿ ಇದು ಅಭೂತಪೂರ್ವ ಹೆಜ್ಜೆಯಾಗಿತ್ತು. ಸುರಂಗಕ್ಕೆ ಯಾವುದೇ ಹಾನಿಯಾಗದಂತೆ ಅತ್ಯಂತ ನಿಖರತೆಯಿಂದ ಸ್ಫೋಟಗಳನ್ನು ನಿರ್ವಹಿಸಿದ ನೇಪಾಳ ಸೈನ್ಯವನ್ನು ಡಿಕ್ಸ್ ಶ್ಲಾಘಿಸಿದ್ದಾರೆ.
ಇದರ ಬಳಿಕ, ಸುರಂಗದೊಳಗೆ ಪೂರ್ತಿ ನೀರು ತುಂಬಿರುವುದು ಕಂಡುಬಂದಿತು. ಹಿಟಾಚಿ ಮತ್ತು ನೀರು ಎತ್ತುವ ಯಂತ್ರಗಳನ್ನು ಬಳಸಿ, ನೇಪಾಳಿ ರಕ್ಷಣಾ ಸಿಬ್ಬಂದಿ ನೀರನ್ನು ಹೊರಹಾಕಲು ಸುರಂಗದಿಂದ ಹೊರಗಿನ ನದಿಯವರೆಗೆ ಸರಣಿ ಕಾಲುವೆಗಳನ್ನು ತೋಡಿದರು. ಕೊನೆಯದಾಗಿ, ಅವರು ಸುರಂಗದ ಮೇಲ್ಭಾಗದಲ್ಲಿದ್ದ ತ್ಯಾಜ್ಯದ ನಡುವೆ “ಒಬ್ಬ ವ್ಯಕ್ತಿ ಹೋಗಲು ಸಾಧ್ಯವಾಗುವ ಸಣ್ಣ ಸುರಂಗ ಮಾರ್ಗವನ್ನು” ನಿರ್ಮಿಸಿದರು.
ಅಂತಿಮವಾಗಿ, ಶುಕ್ರವಾರದ ಮುಂಜಾನೆ ರಕ್ಷಣಾ ಸಿಬ್ಬಂದಿಗೆ ಜನರ ಧ್ವನಿ ಕೇಳಿಸಿದಂತಾಯಿತು. ಅದಾದ ಕೆಲವೇ ಕ್ಷಣಗಳಲ್ಲಿ, ಸುರಂಗದ ದ್ವಾರದಿಂದ ಸುಮಾರು 60 ಮೀಟರ್ ಒಳಗೆ ಬದುಕುಳಿದಿದ್ದ ಇಬ್ಬರನ್ನು ಪತ್ತೆಹಚ್ಚಿ, ಯಶಸ್ವಿಯಾಗಿ ಹೊರಗೆ ಕರೆತರಲಾಯಿತು.
ಈ ರಕ್ಷಣಾ ಕಾರ್ಯಾಚರಣೆಯನ್ನು ಕೊಂಡಾಡಿದ ಡಿಕ್ಸ್ ಎಬಿಸಿ ನ್ಯೂಸ್ಗೆ ಪ್ರತಿಕ್ರಿಯಿಸಿ, “ಇದು ನಿಜಕ್ಕೂ ಅಸಾಮಾನ್ಯವಾದುದು. ಇದನ್ನು ಸಾಧಿಸಲು ನಾವು ರಾತ್ರಿಪೂರ್ತಿ ಜಾಗರಣೆ ಮಾಡಿ ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ” ಎಂದು ಹೇಳಿದರು.
“ನೇಪಾಳದ ವಿವಿಧ ಸುರಂಗಗಳ ಅಡಿಯಲ್ಲಿ ಸಿಲುಕಿರುವ ಇನ್ನುಳಿದ ಅನೇಕ ಜನರನ್ನು ರಕ್ಷಿಸಲು ಇದು ಭರವಸೆ ನೀಡಿದೆ. ಅಲ್ಲಿ ಜನರು ಜೀವಂತವಾಗಿದ್ದರೆ, ನಮಗೆ ಇನ್ನಷ್ಟು ಒಳ್ಳೆಯ ಸುದ್ದಿಗಳು ಸಿಗುವ ಭರವಸೆಯಿದೆ” ಎಂದಿದ್ದಾರೆ ಅವರು.
►ನೇಪಾಳದಲ್ಲಿನ ಸಾವು-ನೋವಿನ ಪ್ರಮಾಣವೆಷ್ಟು?
ಇಬ್ಬರು ಕಾರ್ಮಿಕರ ರಕ್ಷಣೆಯು ಸಂತಸ ತಂದಿದೆಯಾದರೂ, ನೇಪಾಳದಲ್ಲಿ ಸರಣಿ ಸಾವುಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ.
ನೇಪಾಳದಲ್ಲಿ ಇದುವರೆಗೆ ಕನಿಷ್ಠ 1,287 ಜನರು ಪ್ರಾಣ ಕಳೆದುಕೊಂಡಿದ್ದು, 5,083 ಜನರು ಪತ್ತೆಯಾಗಿಲ್ಲ. ಹಿಮಾಲಯ ಪರ್ವತ ಶ್ರೇಣಿಯಲ್ಲಿ ಚಾರಣಕ್ಕೆ ತೆರಳಿದ್ದವರು ಮತ್ತು ಹಿಂದೂ ಹಾಗೂ ಬೌದ್ಧರಿಗೆ ಪವಿತ್ರವಾದ ಟಿಬೆಟ್ನ ಕೈಲಾಸ ಪರ್ವತ ಯಾತ್ರೆಗೆ ಬಂದಿದ್ದ ಯಾತ್ರಾರ್ಥಿಗಳು ಸೇರಿದಂತೆ 800 ಕ್ಕೂ ಹೆಚ್ಚು ವಿದೇಶಿಯರ ಸುಳಿವು ಇನ್ನೂ ಸಿಕ್ಕಿಲ್ಲ.
ಕಳೆದ ವಾರ ಸಂಭವಿಸಿದ ಈ ಜಲಪ್ರಳಯದಿಂದ ಕನಿಷ್ಠ 3,875 ಕೋಟಿ ನೇಪಾಳಿ ರೂಪಾಯಿ (ಸುಮಾರು 2.56 ಶತಕೋಟಿ ಡಾಲರ್) ಮೌಲ್ಯದ ಆಸ್ತಿಪಾಸ್ತಿ, ಮನೆಗಳು ಮತ್ತು ಮೂಲಸೌಕರ್ಯಗಳು ನಾಶವಾಗಿವೆ ಎಂದು ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ತಗ್ಗಿಸುವಿಕೆ ಮತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ಧರ್ಮರಾಜ್ ಉಪ್ರೇತಿ ತಿಳಿಸಿದ್ದಾರೆ.
ದೇಶದ ಪ್ರಮುಖ ವಿಮಾ ಸಂಸ್ಥೆಯೊಂದರ ಉನ್ನತ ಅಧಿಕಾರಿಯ ಪ್ರಕಾರ, ಈ ವಿಪತ್ತಿನಿಂದಾಗಿ ವಿಮಾ ಕಂಪನಿಗಳಿಗೆ 13.23 ಕೋಟಿ ಡಾಲರ್ಗೂ ಹೆಚ್ಚು ನಷ್ಟವಾಗುವ ಸಾಧ್ಯತೆಯಿದ್ದು, ಬಹುತೇಕ ವಿಮಾ ಕ್ಲೈಮ್ಗಳು ಜಲವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿವೆ.
ಸೌಜನ್ಯ: firstpost.com