India | ಪಾಸ್‌ಪೋರ್ಟ್ ಹೊಂದಿರುವವರಲ್ಲಿ ಹತ್ತನೇ ಒಂದು ಭಾಗದಷ್ಟು ಜನರಿಗೆ ಇ-ಪಾಸ್‌ಪೋರ್ಟ್; ಏನಿದೆ ಇದರ ವಿಶೇಷತೆ?
ಸಾಂದರ್ಭಿಕ ಚಿತ್ರ | Photo Credit : freepik
ಕಳೆದ ವರ್ಷ ಮೇ ತಿಂಗಳಲ್ಲಿ ಮುಂದಿನ ಪೀಳಿಗೆಯ ಪಾಸ್‌ಪೋರ್ಟ್ ಯೋಜನೆಯನ್ನು ಪ್ರಾರಂಭಿಸಿದ ಬಳಿಕ ಸುಮಾರು ಒಂದು ಕೋಟಿ ಇ-ಪಾಸ್‌ಪೋರ್ಟ್‌ಗಳನ್ನು ಭಾರತೀಯ ನಾಗರಿಕರಿಗೆ ನೀಡಲಾಗಿದೆ. ಭಾರತದಲ್ಲಿ ಸುಮಾರು 10 ಕೋಟಿ ಜನರು ಪಾಸ್‌ಪೋರ್ಟ್ ಹೊಂದಿರುವವರು ಎಂದು ಅಂದಾಜಿಸಲಾಗಿದೆ. 2035ರ ವೇಳೆಗೆ ಅಸ್ತಿತ್ವದಲ್ಲಿರುವ ಎಲ್ಲ ಪಾಸ್‌ಪೋರ್ಟ್‌ಗಳನ್ನು ಇ-ಪಾಸ್‌ಪೋರ್ಟ್‌ಗಳಿಗೆ ಬದಲಾಯಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಏನಿದು ಇ-ಪಾಸ್‌ಪೋರ್ಟ್? ಇದು ಸಾಮಾನ್ಯ ಪಾಸ್‌ಪೋರ್ಟ್‌ಗಳಿಗಿಂತ ಹೇಗೆ ಭಿನ್ನವಾಗಿದೆ? ಸಾಮಾನ್ಯ ಪಾಸ್‌ಪೋರ್ಟ್‌ಗಳನ್ನು ಇ-ಪಾಸ್‌ಪೋರ್ಟ್‌ಗಳಿಗೆ ಬದಲಾಯಿಸಬೇಕಾದರೆ ಏನು ಮಾಡಬೇಕು ಎಂಬುದನ್ನು ಇಲ್ಲಿ ನೋಡೋಣ.
ಇ-ಪಾಸ್‌ಪೋರ್ಟ್
ಭಾರತದಲ್ಲಿ 2025ರ ಮೇ ತಿಂಗಳಿಂದ ನೀಡಲಾಗುತ್ತಿರುವ ಎಲ್ಲಾ ಹೊಸ ಪಾಸ್‌ಪೋರ್ಟ್‌ಗಳು ಇ-ಪಾಸ್‌ಪೋರ್ಟ್‌ಗಳಾಗಿವೆ. ಇ-ಪಾಸ್‌ಪೋರ್ಟ್ ಸಾಮಾನ್ಯ ಪಾಸ್‌ಪೋರ್ಟ್‌ನಂತೆಯೇ ಕಾಣಿಸುತ್ತದೆ. ಆದರೆ ಅದರೊಳಗೆ RFID (ರೇಡಿಯೊ–ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್) ಚಿಪ್ ಮತ್ತು ಆಂಟೆನಾವನ್ನು ಎಂಬೆಡ್ ಮಾಡಲಾಗಿದೆ. ಈ ಚಿಪ್ ಫೋಟೋ, ಬೆರಳಚ್ಚುಗಳು ಸೇರಿದಂತೆ ಎನ್‌ಕ್ರಿಪ್ಟ್ ಮಾಡಲಾದ ಬಯೋಮೆಟ್ರಿಕ್ ಡೇಟಾವನ್ನು ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ (ICAO) ಮಾನದಂಡಗಳಿಗೆ ಅನುಗುಣವಾಗಿ ಸಂಗ್ರಹಿಸುತ್ತದೆ.
ವಲಸೆ ಕೌಂಟರ್‌ಗಳಲ್ಲಿ ಇರುವ ಯಂತ್ರಗಳಿಗೆ ಸಂಪರ್ಕಿಸದೆಯೇ ಈ ಮಾಹಿತಿಯನ್ನು ಪರಿಶೀಲಿಸಬಹುದು. ಇದರಿಂದ ವೇಗವಾದ ಮತ್ತು ವಿಶ್ವಾಸಾರ್ಹ ಗುರುತಿನ ಪರಿಶೀಲನೆ ಸಾಧ್ಯವಾಗುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
Read-only ಮೆಮೊರಿಯನ್ನು ಹೊಂದಿರುವ ಈ ಚಿಪ್ ಯಂತ್ರದ ಬಳಿ ಇರುವಾಗ ಮಾತ್ರ ಕಾರ್ಯನಿರ್ವಹಿಸುತ್ತದೆ. ಬಳಕೆದಾರರ ಇರುವಿಕೆಯನ್ನು ಪತ್ತೆಹಚ್ಚಲು ಇದನ್ನು ಬಳಸಲಾಗುವುದಿಲ್ಲ.
ಇ-ಪಾಸ್‌ಪೋರ್ಟ್ ನಲ್ಲಿ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಮುಂಭಾಗದ ಕವರ್ ನಲ್ಲಿ ಶೀರ್ಷಿಕೆಯ ಕೆಳಗೆ ಚಿನ್ನದ ಬಣ್ಣದ ಇಲೆಕ್ಟ್ರಾನಿಕ್ ಪಾಸ್‌ಪೋರ್ಟ್ ಚಿಹ್ನೆ ಇರುತ್ತದೆ. ಇತರ ಭದ್ರತಾ ವೈಶಿಷ್ಟ್ಯಗಳಲ್ಲಿ ಇಂಟರ್ ಲಾಕಿಂಗ್ ಮೈಕ್ರೋ-ಲೆಟರ್ ಗಳು ಮತ್ತು ರಿಲೀಫ್ ಟಿಂಟ್ ಗಳು ಸೇರಿವೆ.
ಪರಿಷ್ಕೃತ ವ್ಯವಸ್ಥೆಯು ಪಾಸ್‌ಪೋರ್ಟ್ ವಂಚನೆಯನ್ನು ತಡೆಗಟ್ಟುವ ಹಾಗೂ ಬಹು ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ವ್ಯಕ್ತಿಗಳ ಪ್ರಕರಣಗಳನ್ನು ಪತ್ತೆಹಚ್ಚುವ ಗುರಿಯನ್ನು ಹೊಂದಿದೆ. ಈ ವ್ಯವಸ್ಥೆಯು ಸೆಂಟ್ರಲ್ ಸರ್ವರ್ ನಲ್ಲಿ ಅರ್ಜಿದಾರರ ಬಯೋಮೆಟ್ರಿಕ್ ಡೇಟಾವನ್ನು ಪರಿಶೀಲಿಸುತ್ತದೆ. ಈ ವೇಳೆ ಅರ್ಜಿದಾರರ ಹೆಸರಿನಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಯಾವುದೇ ಪಾಸ್‌ಪೋರ್ಟ್ ಕಂಡುಬಂದರೆ ತಕ್ಷಣವೇ ಗಮನಕ್ಕೆ ತರಲಾಗುತ್ತದೆ.
ಭಾರತದಲ್ಲಿ ಎಷ್ಟು ಜನರಿಗೆ ಇ-ಪಾಸ್‌ಪೋರ್ಟ್‌ಗಳಿವೆ?
ವಿದೇಶಾಂಗ ಸಚಿವಾಲಯ ಒದಗಿಸಿದ ಇತ್ತೀಚಿನ ಮಾಹಿತಿಯ ಪ್ರಕಾರ, 2025ರ ಮೇ 1 (ಯೋಜನೆ ಪ್ರಾರಂಭವಾದ ದಿನ) ಮತ್ತು 2026ರ ಜನವರಿ 18ರ ನಡುವೆ ಭಾರತದಲ್ಲಿ 93 ಲಕ್ಷಕ್ಕೂ ಹೆಚ್ಚು ಇ-ಪಾಸ್‌ಪೋರ್ಟ್‌ಗಳನ್ನು ನೀಡಲಾಗಿದೆ.
ದೇಶದಲ್ಲಿನ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಮತ್ತು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗಳಲ್ಲದೆ, ಹೆಚ್ಚಿನ ವಿದೇಶಿ ರಾಯಭಾರ ಕಚೇರಿಗಳು ಕಳೆದ ವರ್ಷ ಅಕ್ಟೋಬರ್ ನಿಂದ ಇ-ಪಾಸ್‌ಪೋರ್ಟ್‌ಗಳನ್ನು ನೀಡಲು ಸಜ್ಜಾಗಿವೆ. 2026ರ ಜನವರಿ 18ರವರೆಗೆ ವಿದೇಶದಲ್ಲಿರುವ ರಾಯಭಾರ ಕಚೇರಿಗಳಿಂದ ಮೂರು ಲಕ್ಷಕ್ಕೂ ಹೆಚ್ಚು ಇ-ಪಾಸ್‌ಪೋರ್ಟ್‌ಗಳನ್ನು ನೀಡಲಾಗಿದೆ. ಇದುವರೆಗೆ ನೀಡಲಾದ ಒಟ್ಟು ಇ-ಪಾಸ್‌ಪೋರ್ಟ್‌ಗಳ ಸಂಖ್ಯೆ ಸುಮಾರು ಒಂದು ಕೋಟಿ.
ರಾಯಭಾರ ಕಚೇರಿಗಳ ಮಾಹಿತಿಯ ಪ್ರಕಾರ, ಭಾರತದಲ್ಲಿ ಪ್ರತಿದಿನ ಸುಮಾರು 45,000 ಇ-ಪಾಸ್‌ಪೋರ್ಟ್‌ಗಳನ್ನು ಹಾಗೂ ವಿದೇಶದಲ್ಲಿರುವ ರಾಯಭಾರ ಕಚೇರಿಗಳಿಂದ ಪ್ರತಿದಿನ ಸುಮಾರು 8,000 ಇ-ಪಾಸ್‌ಪೋರ್ಟ್ ಗಳನ್ನು ನೀಡಲಾಗುತ್ತಿದೆ.
ಇ-ಪಾಸ್‌ಪೋರ್ಟ್‌ನೊಂದಿಗೆ ನವೀಕರಿಸಿದ ಪಾಸ್‌ಪೋರ್ಟ್ ಪ್ರೋಗ್ರಾಂ ಆವೃತ್ತಿ 2.0 (PSP V2.0) ಯ ಪರೀಕ್ಷಾರ್ಥ ಬಿಡುಗಡೆಯನ್ನು 2024ರ ಏಪ್ರಿಲ್ 1ರಂದು ಭುವನೇಶ್ವರ ಮತ್ತು ನಾಗ್ಪುರದ RPOಗಳಲ್ಲಿ ಪ್ರಾರಂಭಿಸಲಾಯಿತು. ಭಾರತದಲ್ಲಿ PSP V2.0ಯ ಸಂಪೂರ್ಣ ಬಿಡುಗಡೆಯು 2025ರ ಮೇ 26ರಂದು ಪೂರ್ಣಗೊಂಡಿದ್ದು, ನಂತರ ಇ-ಪಾಸ್‌ಪೋರ್ಟ್ ಗಳನ್ನು ನೀಡಲು ಪ್ರಾರಂಭಿಸಲಾಗಿದೆ. ಎಲ್ಲಾ ಮಿಷನ್ ಗಳು ಮತ್ತು ಪೋಸ್ಟ್ ಗಳಲ್ಲಿ ಇದರ ಬಿಡುಗಡೆಯು 2025ರ ಅಕ್ಟೋಬರ್ 28ರಂದು ಪೂರ್ಣಗೊಂಡಿತು.
ಸಾಮಾನ್ಯ ಪಾಸ್‌ಪೋರ್ಟ್‌ಗಳು ಏನಾಗುತ್ತವೆ?
ಅಸ್ತಿತ್ವದಲ್ಲಿರುವ ಎಲೆಕ್ಟ್ರಾನಿಕ್ ಅಲ್ಲದ ಪಾಸ್‌ಪೋರ್ಟ್‌ಗಳು ಅವುಗಳ ಅವಧಿ ಮುಗಿಯುವವರೆಗೆ ಮಾನ್ಯವಾಗಿರುತ್ತವೆ. ಭಾರತದಲ್ಲಿ ನೀಡಲಾಗುವ ಪಾಸ್‌ಪೋರ್ಟ್‌ಗಳಿಗೆ 10 ವರ್ಷಗಳ ಮಾನ್ಯತೆ ಇರುತ್ತದೆ. ಸರ್ಕಾರವು ಜೂನ್ 2035ರ ವೇಳೆಗೆ ಇ-ಪಾಸ್‌ಪೋರ್ಟ್‌ಗಳಿಗೆ ಸಂಪೂರ್ಣ ಪರಿವರ್ತನೆ ಮಾಡುವ ಯೋಜನೆಯನ್ನು ಹೊಂದಿದೆ.
ನೀವು ಸಾಮಾನ್ಯ ಪಾಸ್‌ಪೋರ್ಟ್ ಹೊಂದಿದ್ದರೆ ಅದನ್ನು ತಕ್ಷಣ ಬದಲಾಯಿಸುವುದು ಕಡ್ಡಾಯವಲ್ಲ. ಆದರೆ ಮುಂದಿನ ದಿನಗಳಲ್ಲಿ ಇ-ಪಾಸ್‌ಪೋರ್ಟ್‌ಗಳು ನಿಯಮವಾಗಲಿದ್ದು, ಆಯ್ಕೆಯಾಗಿರುವುದಿಲ್ಲ. ಅರ್ಜಿದಾರರು ಸಾಂಪ್ರದಾಯಿಕ ಪಾಸ್‌ಪೋರ್ಟ್ ಅಥವಾ ಇ-ಪಾಸ್‌ಪೋರ್ಟ್ ಆಯ್ಕೆ ಮಾಡುವ ಅವಕಾಶವಿಲ್ಲ. ಅರ್ಜಿಯನ್ನು ಪ್ರಕ್ರಿಯೆಗೊಳಿಸುವ ಪಾಸ್‌ಪೋರ್ಟ್ ಕಚೇರಿ ಇ-ಪಾಸ್‌ಪೋರ್ಟ್ ವಿತರಣೆಗೆ ಸಜ್ಜಾಗಿದ್ದರೆ ಮಾತ್ರ ಇ-ಪಾಸ್‌ಪೋರ್ಟ್ ಲಭ್ಯವಾಗುತ್ತದೆ.
ಇ-ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸಾಮಾನ್ಯ ಪಾಸ್‌ಪೋರ್ಟ್‌ನಂತೆಯೇ ಇರುತ್ತದೆ. ಇದಕ್ಕೆ ಯಾವುದೇ ಹೆಚ್ಚುವರಿ ದಾಖಲೆಗಳು ಅಥವಾ ವಿಶೇಷ ಶುಲ್ಕಗಳು ಅಗತ್ಯವಿಲ್ಲ.
ಇ-ಪಾಸ್‌ಪೋರ್ಟ್‌ಗಳ ಪ್ರಯೋಜನಗಳು
ಇ-ಪಾಸ್‌ಪೋರ್ಟ್ ಬಳಸುವುದರಿಂದ ವಿಮಾನ ನಿಲ್ದಾಣಗಳಲ್ಲಿ ಪಾಸ್‌ಪೋರ್ಟ್ ಪರಿಶೀಲನೆ ವೇಗವಾಗಿ ಮತ್ತು ಸುಗಮವಾಗಿ ನಡೆಯುತ್ತದೆ.
ಸ್ವಯಂಚಾಲಿತ ಇ-ಗೇಟ್ ಗಳು ಹಸ್ತಚಾಲಿತ ಪರಿಶೀಲನೆಗಳ ಅಗತ್ಯವನ್ನು ಕಡಿಮೆ ಮಾಡುವುದರಿಂದ ಪ್ರಯಾಣಿಕರು ತ್ವರಿತವಾಗಿ ವಲಸೆ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಬಯೋಮೆಟ್ರಿಕ್ ಡೇಟಾ, ಡಿಜಿಟಲ್ ಸಹಿಗಳು ಮತ್ತು ICAO ಮಾನದಂಡಗಳ ಅನುಸರಣೆ ದಾಖಲೆಗಳ ಭದ್ರತೆಯನ್ನು ಬಲಪಡಿಸುತ್ತವೆ. ಇದರಿಂದ ನಕಲಿ ಪಾಸ್‌ಪೋರ್ಟ್‌ಗಳ ಅಪಾಯ ಕಡಿಮೆಯಾಗುತ್ತದೆ.
ಸ್ಪಷ್ಟ ಗುರುತಿನ ಪರಿಶೀಲನೆ, ಕಡಿಮೆ ದೋಷಗಳು ಮತ್ತು ಸಂಚಾರದ ಸುಗಮ ನಿರ್ವಹಣೆ ಸಾಧ್ಯವಾಗುತ್ತದೆ. ಈ ವ್ಯವಸ್ಥೆಗಳು ದೇಶಗಳ ನಡುವಿನ ಪರಸ್ಪರ ಕಾರ್ಯಸಾಧ್ಯತೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುತ್ತವೆ. ಇದರಿಂದ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಹೆಚ್ಚು ವಿಶ್ವಾಸಾರ್ಹ ಅಂತರರಾಷ್ಟ್ರೀಯ ಪ್ರಯಾಣ ಅನುಭವ ಲಭ್ಯವಾಗುತ್ತದೆ.
ಇ-ಪಾಸ್‌ಪೋರ್ಟ್ ಬಳಸುವ ರಾಷ್ಟ್ರಗಳು
1. ಅಮೆರಿಕ
ಅಮೆರಿಕ 2007 ರಲ್ಲಿ ಚಿಪ್-ಎಂಬೆಡೆಡ್ ಪಾಸ್‌ಪೋರ್ಟ್ ಗಳನ್ನು ನೀಡಲು ಪ್ರಾರಂಭಿಸಿತು. ಈ ಪಾಸ್‌ಪೋರ್ಟ್‌ಗಳು RFID ಚಿಪ್‌ನಲ್ಲಿ ಡಿಜಿಟಲ್ ಫೋಟೋ ಮತ್ತು ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತವೆ. ಇದು ಪರಿಶೀಲನೆಗಳನ್ನು ಸುಗಮವಾಗಿಸುತ್ತವೆ. ಇದು ಹಲವಾರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸ್ವಯಂಚಾಲಿತ ಪ್ರಕ್ರಿಯೆಗಳನ್ನು ಬೆಂಬಲಿಸುತ್ತದೆ.
2. ಫ್ರಾನ್ಸ್
ಸುರಕ್ಷಿತ ಗುರುತಿಸುವಿಕೆಗಾಗಿ ICAO ಮಾನದಂಡಗಳನ್ನು ಅನುಸರಿಸಿ ಫ್ರಾನ್ಸ್ ಏಪ್ರಿಲ್ 2006 ರಲ್ಲಿ ಬಯೋಮೆಟ್ರಿಕ್ ಪಾಸ್‌ಪೋರ್ಟ್‌ಗಳನ್ನು ಪರಿಚಯಿಸಿತು. ಫ್ರೆಂಚ್ ಪಾಸ್‌ಪೋರ್ಟ್‌ಗಳಲ್ಲಿ ಮುಖದ ಚಿತ್ರಗಳು ಮತ್ತು ಅಗತ್ಯವಿದ್ದಾಗ, ಫಿಂಗರ್‌ಪ್ರಿಂಟ್ ಬಯೋಮೆಟ್ರಿಕ್‌ಗಳು ಸೇರಿವೆ.
3. ಜಪಾನ್
ಜಪಾನ್ 2006 ರಲ್ಲಿ ಇ-ಪಾಸ್‌ಪೋರ್ಟ್‌ಗಳನ್ನು ಪ್ರಾರಂಭಿಸಿತು. ಇದು ಅತ್ಯುತ್ತಮ ಚಿಪ್ ಎನ್‌ಕ್ರಿಪ್ಶನ್ ಮತ್ತು ಸಂಯೋಜಿತ ಬಯೋಮೆಟ್ರಿಕ್‌ಗಳೊಂದಿಗೆ ತನ್ನ ತಂತ್ರಜ್ಞಾನವನ್ನು ಪರಿಷ್ಕರಿಸುವುದನ್ನು ಮುಂದುವರೆಸಿದೆ.
4. ಬ್ರೆಝಿಲ್
ಬ್ರೆಜಝಿಲ್ 2010 ರಲ್ಲಿ ಇ-ಪಾಸ್‌ಪೋರ್ಟ್‌ಗಳನ್ನು ನೀಡಲು ಪ್ರಾರಂಭಿಸಿತು. ಇದು ಜಾಗತಿಕ ಭದ್ರತಾ ಮಾನದಂಡಗಳಿಗೆ ಹೊಂದಿಕೆಯಾಗುವಂತೆ ಮುಖದ ಚಿತ್ರಗಳು ಮತ್ತು ಫಿಂಗರ್‌ಪ್ರಿಂಟ್ ಗಳಂತಹ ಬಯೋಮೆಟ್ರಿಕ್ ಡೇಟಾವನ್ನು ಎಂಬೆಡ್ ಮಾಡಿತು. ಈ ಬದಲಾವಣೆಯು ಬ್ರೆಜಿಲಿಯನ್ ಪ್ರಯಾಣ ದಾಖಲೆಗಳ ವಿಶ್ವಾಸಾರ್ಹತೆಯನ್ನು ಸುಧಾರಿಸಿತು.
5. ಮೆಕ್ಸಿಕೊ
ಮೆಕ್ಸಿಕೊ 2021 ರ ಸುಮಾರಿಗೆ ಇ-ಪಾಸ್‌ಪೋರ್ಟ್‌ಗಳನ್ನು ಪರಿಚಯಿಸಿದೆ. ಈ ದಾಖಲೆಗಳು ICAO ಮಾನದಂಡಗಳನ್ನು ಪೂರೈಸುತ್ತವೆ. ಜಾಗತಿಕ ಹೊಂದಾಣಿಕೆಗಾಗಿ ವಿನ್ಯಾಸಗೊಳಿಸಲಾದ RFID ಚಿಪ್‌ಗಳನ್ನು ಒಳಗೊಂಡಿವೆ.
6. ಜರ್ಮನಿ
ಜರ್ಮನಿ ತನ್ನ ಮೊದಲ ಬಯೋಮೆಟ್ರಿಕ್ ಪಾಸ್‌ಪೋರ್ಟ್‌ಗಳನ್ನು 2005 ರಲ್ಲಿ ಬಿಡುಗಡೆ ಮಾಡಿದ್ದು ಇದು ಎನ್‌ಕ್ರಿಪ್ಶನ್ ಮತ್ತು ದಾಖಲೆ ಭದ್ರತೆಗಾಗಿ ಕಟ್ಟುನಿಟ್ಟಾದ ಮಾನದಂಡಗಳನ್ನು ಕಾಯ್ದುಕೊಂಡಿದೆ. ಜರ್ಮನ್ ಪಾಸ್‌ಪೋರ್ಟ್‌ಗಳು ಸುಧಾರಿತ ಚಿಪ್‌ಗಳು ಮತ್ತು ಬಯೋಮೆಟ್ರಿಕ್ ವೈಶಿಷ್ಟ್ಯಗಳನ್ನು ಬಳಸುತ್ತವೆ.
7. ಆಸ್ಟ್ರೇಲಿಯಾ
ಆಸ್ಟ್ರೇಲಿಯಾ 2005 ರ ಸುಮಾರಿಗೆ ಇ-ಪಾಸ್‌ಪೋರ್ಟ್‌ಗಳನ್ನು ಆರಂಭಿಸಿತು.
ಇ-ಪಾಸ್‌ಪೋರ್ಟ್‌ಗೆ ಯಾರು ಅರ್ಜಿ ಸಲ್ಲಿಸಬಹುದು?
ನಿಯಮಿತ ಪಾಸ್‌ಪೋರ್ಟ್‌ಗೆ ಅರ್ಹರಾಗಿರುವ ಯಾವುದೇ ಭಾರತೀಯ ನಾಗರಿಕರು ಇ-ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ಹೊಸ ಅರ್ಜಿದಾರರು ಹಾಗೂ ಪಾಸ್‌ಪೋರ್ಟ್ ನವೀಕರಿಸುವವರು ಇಬ್ಬರೂ ಅರ್ಹರು.
ಪ್ರಸ್ತುತ ದೇಶದಾದ್ಯಂತ ಆಯ್ದ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು (PSK) ಮತ್ತು ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು (POPSK)ಗಳಲ್ಲಿ ಈ ಸೇವೆ ಲಭ್ಯವಿದೆ. ಆದ್ದರಿಂದ ಅರ್ಜಿದಾರರು ಅರ್ಜಿ ಸಲ್ಲಿಸುವ ಮೊದಲು ತಮ್ಮ ಹತ್ತಿರದ ಕೇಂದ್ರಗಳು ಇ-ಪಾಸ್‌ಪೋರ್ಟ್ ನೀಡುತ್ತವೆಯೇ ಎಂಬುದನ್ನು ಪರಿಶೀಲಿಸಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಇ-ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸಾಮಾನ್ಯ ಪಾಸ್‌ಪೋರ್ಟ್‌ನಂತೆಯೇ ಇರುತ್ತದೆ:
ಅಧಿಕೃತ ಪಾಸ್‌ಪೋರ್ಟ್ ಸೇವಾ ಪೋರ್ಟಲ್ ನಲ್ಲಿ ನೋಂದಾಯಿಸಿ ಅಥವಾ ಲಾಗಿನ್ ಮಾಡಿ
ಹೊಸ ಪಾಸ್‌ಪೋರ್ಟ್ ಅಥವಾ ನವೀಕರಣಕ್ಕಾಗಿ ಆನ್‌ಲೈನ್ ಫಾರ್ಮ್ ಭರ್ತಿ ಮಾಡಿ
ಅಗತ್ಯ ಶುಲ್ಕ ಪಾವತಿಸಿ ಮತ್ತು PSK/POPSKನಲ್ಲಿ ಅಪಾಯಿಂಟ್‌ಮೆಂಟ್ ಬುಕ್ ಮಾಡಿ
ಅಗತ್ಯ ದಾಖಲೆಗಳೊಂದಿಗೆ ಕೇಂದ್ರಕ್ಕೆ ಭೇಟಿ ನೀಡಿ; ಫೋಟೋ, ಬೆರಳಚ್ಚುಗಳು ಮತ್ತು ಬಯೋಮೆಟ್ರಿಕ್ ಡೇಟಾ ನೀಡಿರಿ
ಪ್ರಕ್ರಿಯೆ ಪೂರ್ಣಗೊಂಡ ನಂತರ ಎಂಬೆಡೆಡ್ ಚಿಪ್ ಹೊಂದಿರುವ ಇ-ಪಾಸ್‌ಪೋರ್ಟ್ ನಿಮ್ಮ ವಿಳಾಸಕ್ಕೆ ಕಳುಹಿಸಲಾಗುತ್ತದೆ
ಶುಲ್ಕ
36 ಪುಟಗಳ ಪಾಸ್‌ಪೋರ್ಟ್: ರೂ. 1,500
60 ಪುಟಗಳ ಪಾಸ್‌ಪೋರ್ಟ್: ರೂ. 2,000
ತತ್ಕಾಲ್ ಅಥವಾ ತ್ವರಿತ ಸೇವೆಗಳಿಗೆ ಹೆಚ್ಚುವರಿ ಶುಲ್ಕ ಅನ್ವಯವಾಗಬಹುದು.
ಇ-ಪಾಸ್‌ಪೋರ್ಟ್‌ಗಳನ್ನು ಎಲ್ಲಿ ನೀಡಲಾಗುತ್ತಿದೆ?
ಪ್ರಸ್ತುತ ಜಮ್ಮು, ಗೋವಾ, ನಾಗ್ಪುರ, ಶಿಮ್ಲಾ, ಭುವನೇಶ್ವರ, ದೆಹಲಿ, ರಾಂಚಿ, ಸೂರತ್, ಹೈದರಾಬಾದ್, ಚೆನ್ನೈ, ಜೈಪುರ, ಅಮೃತಸರ ಮತ್ತು ರಾಯ್‌ಪುರ ಸೇರಿದಂತೆ ಹಲವು ನಗರಗಳ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗಳಲ್ಲಿ ಇ-ಪಾಸ್‌ಪೋರ್ಟ್‌ಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ದೇಶದಾದ್ಯಂತ ಈ ಸೇವೆಯನ್ನು ವಿಸ್ತರಿಸುವ ಯೋಜನೆಯನ್ನು ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ.