ದುಬಾರಿ ವೇತನದ ದಾದಿಯರು! ಯುವಜನತೆಯ ಭಿನ್ನ ವೃತ್ತಿ ನೋಟ
ಸಾಂದರ್ಭಿಕ ಚಿತ್ರ | Photo Credit : freepik
ಆಧುನಿಕ ತಲೆಮಾರು ಕೆಲಸದಲ್ಲಿ ಹೊಂದಾಣಿಕೆ ಬಯಸುತ್ತಿದ್ದಾರೆ. ಸಮತೋಲನ ಬೇಕು ಎನ್ನುತ್ತಿದ್ದಾರೆ. ಜೊತೆಗೆ ಅರ್ಥಪೂರ್ಣ ಯಶಸ್ಸು ಬೇಗನೇ ಸಿಗಬೇಕು ಎಂದು ಬಯಸುತ್ತಾರೆ.
ಇತ್ತೀಚೆಗೆ ಯುವಜನರು ಭಿನ್ನ ರೀತಿಯ ವೃತ್ತಿಜೀವನವನ್ನು ಆರಿಸಿಕೊಳ್ಳುತ್ತಿದ್ದಾರೆ. ಬಹಳಷ್ಟು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಮಾನಸಿಕ ಆರೋಗ್ಯ ಮತ್ತು ವೃತ್ತಿ-ಜೀವನ ಸಮತೋಲನದ ಬಗ್ಗೆ ಮಾತನಾಡುತ್ತಿರುವುದರ ಜೊತೆಗೆ ನಿಜ ಜೀವನದಲ್ಲಿ ಸಾಂಪ್ರದಾಯಿಕ ವೃತ್ತಿಜೀವನವನ್ನು ತೊರೆಯಲು ಬಯಸಿದ್ದಾರೆ. ದೀರ್ಘ ಸಮಯ ಕೆಲಸ ಮಾಡುವುದು ಕಠಿಣ ಕಾರ್ಪೋರೇಟ್ ಉದ್ಯೋಗಗಳು, ಅಧಿಕ ಒತ್ತಡದ ಮ್ಯಾನೇಜ್ಮೆಂಟ್ ಉದ್ಯೋಗಗಳು ಆದ್ಯತೆಯಿಂದ ಹೊರ ಬರುತ್ತಿವೆ. ಬದಲಾಗಿ ಆಧುನಿಕ ತಲೆಮಾರು ಕೆಲಸದಲ್ಲಿ ಹೊಂದಾಣಿಕೆ ಬಯಸುತ್ತಿದ್ದಾರೆ. ಸಮತೋಲನ ಬೇಕು ಎನ್ನುತ್ತಿದ್ದಾರೆ. ಜೊತೆಗೆ ಅರ್ಥಪೂರ್ಣ ಯಶಸ್ಸು ಬೇಗನೇ ಸಿಗಬೇಕು ಎಂದು ಬಯಸುತ್ತಾರೆ.
ಕಾರ್ಪೋರೇಟ್ ಉದ್ಯೋಗಕ್ಕೆ ಪರ್ಯಾಯ
ಕುತೂಹಲಕಾರಿ ವಿಚಾರವೆಂದರೆ ಮಕ್ಕಳನ್ನು ನೋಡಿಕೊಳ್ಳುವ ದಾದಿಯರ ಕೆಲಸ! ಕೆಲವು ಯುವ ವೃತ್ತಿಪರರಿಗೆ ಶ್ರೀಮಂತ ಕುಟುಂಬಗಳಿಗೆ ದಾದಿಯರಾಗಿ ಕೆಲಸ ಮಾಡುವುದು ಕಾರ್ಪೋರೇಟ್ ಉದ್ಯೋಗಗಳಿಗೆ ಪರ್ಯಾಯವಾದ ಆಕರ್ಷಕ ಉದ್ಯೋಗ ಆಯ್ಕೆಯಾಗುತ್ತಿದೆ. ಈ ಕೆಲಸದಲ್ಲಿ ಆಕರ್ಷಕ ಹಣ ಪಾವತಿಯಾಗುತ್ತದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಯಾಣ ಮಾಡುವ ಅವಕಾಶ ಸಿಗುತ್ತಿದೆ. ಹಿತಕರವಾಗಿ ಜೀವನ ನಡೆಸುವ ವ್ಯವಸ್ಥೆಯೂ ಇರುತ್ತದೆ. ಬಹುತೇಕ ಆರಂಭಿಕ ಮಟ್ಟದ ಉದ್ಯೋಗಗಳಲ್ಲಿ ಇವುಗಳ ಕೊರತೆ ಇರುತ್ತದೆ. ಎಐ ತಮ್ಮ ಕೆಲಸವನ್ನು ಬದಲಿಸುವ ಆತಂಕ ಮತ್ತು ಅನಿಶ್ಚಿತತೆ ಕಾಡುತ್ತಿರುವ ಸಂದರ್ಭದಲ್ಲಿ ದುಬಾರಿ ವೇತನದ ದಾದಿಯರ ಕೆಲಸ ಪ್ರಾಯೋಗಿಕ ಮತ್ತು ಉತ್ತಮ ಆಯ್ಕೆ ಎಂದು ಕಾಣುತ್ತಿದೆ. ಈ ಉದ್ಯೋಗದಲ್ಲಿ ಅತಿಯಾದ ನಿರೀಕ್ಷೆಗಳಿದ್ದರೂ ಮತ್ತು ದೀರ್ಘ ಕೆಲಸ ಮಾಡಬೇಕಾಗಿದ್ದರೂ ಅವರು ಸಿದ್ಧರಾಗುತ್ತಿದ್ದಾರೆ.
ಮಾಧ್ಯಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಕ್ಯಾಸ್ಡಿ ಒ ಹಾಗನ್, ಕಳೆದ ವರ್ಷ ಬಿಲಿಯನೇರ್ ಕುಟುಂಬವೊಂದಕ್ಕೆ ದಾದಿಯಾಗಿ ಕೆಲಸ ಮಾಡಿ ಸುದ್ದಿಯಾಗಿದ್ದರು. 28ರ ವಯಸ್ಸಿನಲ್ಲಿ ಅವರು ಆರೋಗ್ಯಸೇವೆ, ನಿವೃತ್ತಿ ಯೋಜನೆ, ವೇತನಸಹಿತ ವಿರಾಮ, ಖಾಸಗಿ ಅಡುಗೆಭಟ್ಟರಿಂದ ತಯಾರಾದ ಉತ್ತಮ ಆಹಾರ, ಮತ್ತು ಕಾರ್ಯಸ್ಥಳದಲ್ಲಿರುವಾಗ ಧರಿಸಬೇಕಾದ ಸಮವಸ್ತ್ರವನ್ನೂ ಪಡೆದುಕೊಂಡಿದ್ದಾರೆ. ಇವೆಲ್ಲದರ ಜೊತೆಗೆ ಅಂತಾರಾಷ್ಟ್ರೀಯ ಪ್ರಯಾಣವೂ ಸಿಗುತ್ತಿದೆ.
ದುಬಾರಿ ದಾದಿಯಾಗುವ ನಿರ್ಧಾರಕ್ಕೆ ಕಾರಣವೇನು?
ಹೀಗಾಗಿ ದುಬಾರಿ ದಾದಿಯಾಗುವ ಕೆಲಸ ಯುವ ವೃತ್ತಿಪರರಿಗೆ ಉತ್ತಮ ಆಯ್ಕೆ ಎಂದು ಅನಿಸುತ್ತಿದೆ. ಆದರೆ ಕಾರ್ಪೋರೇಟ್ ಉದ್ಯೋಗದಲ್ಲಿ ಯುವಜನರು ಆಸಕ್ತಿ ಹೊಂದಿರದೆ ಇರಲು ಕಾರಣವೇನು? ಕಾರ್ಪೋರೇಟ್ ತರಬೇತುದಾರರು ಮತ್ತು ವೃತ್ತಿ ಪ್ರಗತಿಯ ತರಬೇತುದಾರರಾಗಿರುವ ಶಿವಾಂಗಿ ಶ್ರೀವಾಸ್ತವ ಪ್ರಕಾರ ಯುವಜನತೆ ತಮ್ಮ ಹಿರಿಯರು ದೀರ್ಘಕಾಲ ಕೆಲಸ ಮಾಡಿ ಸುಸ್ತಾಗಿರುವುದನ್ನು ಕಂಡಿದ್ದಾರೆ. “ಜನರು 10-12 ಗಂಟೆಗಳ ಕಾಲ ಕೆಲಸ ಮಾಡಿ ಕಂಪನಿಗಳಿಗೆ ಬದ್ಧತೆಯನ್ನು ತೋರಿಸಿದರೂ ಭವಿಷ್ಯದ ಪ್ರಗತಿಯನ್ನು ಕಾಣುತ್ತಿಲ್ಲ. ಕೆಲಸ ಕಳೆದುಕೊಳ್ಳುವ ಆತಂಕ, ಕೆಲಸದಲ್ಲಿ ಪ್ರಗತಿಯಾಗದೆ ಇರುವುದು ಮತ್ತು ಒತ್ತಡವನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಕೆಲಸ ಕಠಿಣವಾಗಿದ್ದರೆ ಬಹುಮಾನವೂ ಸ್ಪಷ್ಟವಾಗಿರಬೇಕಲ್ಲವೆ?” ಎನ್ನುತ್ತಾರೆ ಶಿವಾಂಗಿ.
ಬಹಳಷ್ಟು ಮಂದಿಗೆ ಇಂದು ಕಾರ್ಪೋರೇಟ್ ಉದ್ಯೋಗವೆಂದರೆ ದೀರ್ಘಾವಧಿ ಕೆಲಸ ಮಾಡುವುದು, ಸ್ವಾತಂತ್ರ್ಯ ಇಲ್ಲದಿರುವುದು ಮತ್ತು ಪಾವತಿಸಿದ ಹಣ ಬಾಡಿಗೆ ಮತ್ತು ಸಾಧಾರಣ ಜೀವನಶೈಲಿಗೂ ಸಾಕಾಗುವುದಿಲ್ಲ. ಪ್ರಗತಿಯ ಭರವಸೆ ಇದ್ದರೂ, ಬಹಳ ದೂರವಿರುತ್ತದೆ. ಅನಿಶ್ಚಿತತೆ ಇರುತ್ತದೆ ಮತ್ತು ಷರತ್ತುಗಳು ಇರುತ್ತವೆ. “ಹೊಸ ತಲೆಮಾರು ಸೋಮಾರಿಗಳಲ್ಲ. ಆದರೆ, ಭವಿಷ್ಯ ಚೆನ್ನಾಗಿರುತ್ತದೆ ಎಂದುಕೊಂಡು ಹೆಚ್ಚು ತ್ಯಾಗ ಮಾಡಲು ಸಿದ್ಧರಿರುವುದಿಲ್ಲ. ಜೀವನದೊಳಗೆ ತುಂಬಿಕೊಳ್ಳುವಂತಹ ವೃತ್ತಿಯನ್ನು ಬಯಸುತ್ತಾರೆ. ಜೀವನ ವೃತ್ತಿಯಲ್ಲಿ ಕಳೆದುಹೋಗುವುದು ಅವರಿಗೆ ಬೇಕಿಲ್ಲ” ಎನ್ನುತ್ತಾರೆ ಶಿವಾಂಗಿ.
ಸುಸ್ತಾಗುವ ಕಾರ್ಪೋರೇಟ್ ಉದ್ಯೋಗ ಬೇಕಿಲ್ಲ!
ಮನಶ್ಶಾಸ್ತ್ರಜ್ಞ ಡಾ ರಾಹುಲ್ ಚಂಢಾಕ್ ಹೇಳುವ ಪ್ರಕಾರ ಕಾರ್ಪೋರೇಟ್ ಉದ್ಯೋಗಗಳು ಮೌಲ್ಯಗಳು ಅಥವಾ ನಿರೀಕ್ಷೆಗೆ ತಕ್ಕಂತೆ ಇರುವುದಿಲ್ಲ. ಹೀಗಾಗಿ ಯುವಜನತೆ ಅದನ್ನು ಬಯಸುತ್ತಿಲ್ಲ. “ಬಹಳಷ್ಟು ಯುವಕರು ವೇತನ ಅಥವಾ ಹುದ್ದೆಯ ಹೆಸರಿಗಿಂತ ಮಿಗಿಲಾದುದನ್ನು ಬಯಸುತ್ತಾರೆ. ಕೆಲಸಕ್ಕೆ ಉದ್ದೇಶ ಬೇಕು, ಹೊಂದಾಣಿಕೆಗೆ ಅವಕಾಶವಿರಬೇಕು ಮತ್ತು ವ್ಯತ್ಯಾಸ ತರಲು ಬಯಸಿದ್ದಾರೆ. ಕಠಿಣ ಶ್ರೇಣಿ ವ್ಯವಸ್ಥೆ, ಕಠಿಣ ಕೆಲಸದ ಸಮಯ ಮತ್ತು ಸೀಮಿತವಾಗಿರುವ ಸೃಜನಶೀಲ ಸ್ವಾತಂತ್ರ್ಯ ಹಳೇ ಫ್ಯಾಷನ್ ಎಂದು ನಂಬಿದ್ದಾರೆ.”
“ದೀರ್ಘಕಾಲ ಕೆಲಸ ಮಾಡುವುದು, ಒತ್ತಡ ಎದುರಿಸುವುದು ಮತ್ತು ಕೆಲಸಕ್ಕೆ ಪ್ರಶಂಸೆ ದೊರೆಯದೆ ಇದ್ದಾಗ ಮಾನಸಿಕವಾಗಿ ಮತ್ತು ದೈಹಿಕವಾಗಿ ಸುಸ್ತು ಆವರಿಸುತ್ತದೆ” ಎನ್ನುತ್ತಾರೆ ರಾಹುಲ್.
ಬಹುತೇಕ ಯುವಜನರು ದೀರ್ಘ ಕೆಲಸದ ಸಮಯ ಮತ್ತು ಕಡಿಮೆ ವೇತನ, ಗುರುತಿಸುವಿಕೆ ತಡವಾಗುವ ಕಾರ್ಪೋರೇಟ್ ಉದ್ಯೋಗಗಳ ಬದಲಾಗಿ ಉತ್ತಮ ಹಣ ಸಿಗುವ, ಸ್ಪಷ್ಟವಾದ ಜವಾಬ್ದಾರಿಗಳಿರುವ ಮತ್ತು ವೃತ್ತಿಪರ ರಾಜಕೀಯ ಕಡಿಮೆ ಇರುವ ಸಾಂಪ್ರದಾಯಿಕವಲ್ಲದ ಉದ್ಯೋಗಗಳನ್ನು ಬಯಸುತ್ತಿದ್ದಾರೆ. ಹೀಗಾಗಿ ದಾದಿಯಂತಹ ವೃತ್ತಿ ಹೆಚ್ಚು ನೇರ ಉದ್ಯೋಗವಾಗಿ ಕಾಣುತ್ತಿರುವುದರಲ್ಲಿ ತಪ್ಪೇನಿಲ್ಲ.
ಮಗುವಿನ ಆರೈಕೆಗೆ ಸೀಮಿತವಾಗಿಲ್ಲ
ದಾದಿಯರು ಎನ್ನುವ ಪಾತ್ರ ಇದೀಗ ಕೇವಲ ಮಗುವನ್ನು ಗಮನಿಸುವುದು ಎನ್ನುವ ಪಾತ್ರಕ್ಕೆ ಸೀಮಿತವಾಗಿಲ್ಲ. ಸ್ಥಿತಿವಂತರ ಕುಟುಂಬಗಳಲ್ಲಿ ಮತ್ತು ಮುಖ್ಯವಾಗಿ ಮೆಟ್ರೋ ನಗರಗಳಲ್ಲಿ ಶಿಕ್ಷಿತ, ವಿಶ್ವಾಸಾರ್ಹ, ಇಂಗ್ಲಿಷ್ ಮಾತನಾಡುವ ದಾದಿಯರ ಅಗತ್ಯ ಹೆಚ್ಚಿದೆ. ಕಲಿಕೆಗೆ ಅವಕಾಶ, ಕುಟುಂಬದ ಜೊತೆಗೆ ಪ್ರಯಾಣದ ಅವಕಾಶ ಮತ್ತು ಮಕ್ಕಳ ಅಭಿವೃದ್ಧಿಯಲ್ಲಿ ಭಾಗವಹಿಸುವ ನಿಜವಾದ ಜವಾಬ್ದಾರಿ ಅವರದ್ದಾಗಿರುತ್ತದೆ. ಹೀಗಾಗಿ ಜೀವನಶೈಲಿ ಮತ್ತು ಹಣ ಮಾತ್ರ ಮುಖ್ಯವಾಗಿರುವುದಿಲ್ಲ, ಕೆಲಸದ ಕುರಿತ ಸ್ಪಷ್ಟತೆಯೂ ಮುಖ್ಯವಾಗುತ್ತದೆ.
ಇತ್ತೀಚೆಗಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದ ಅಭಿಪ್ರಾಯವೂ ಮುಖ್ಯವಾಗಿರುತ್ತದೆ. ಬಹುತೇಕ ದಾದಿಯರು ಶಾಂತ ಪರಿಸರ, ಸುಂದರ ಮನೆಗಳು, ಖುಷಿಯಾಗಿರುವ ಮಕ್ಕಳ ಜೊತೆಗೆ ಕಳೆಯುವುದನ್ನು ಇಷ್ಟಪಡುತ್ತಾರೆ. ಇದು ಒಂದು ತರಹ ಸಂತೋಷ ಮತ್ತು ಭಾವನಾತ್ಮಕವಾಗಿ ಸಮಾಧಾನದಿಂದ ಇರುವ ಜೀವನವೆಂದು ಕಾಣುತ್ತದೆ.
ಯುವಜನರಿಗೆ ಗೌರವ, ಸ್ಪಷ್ಟವಾದ ಕೆಲಸದ ಸಮಯ, ನಿರೀಕ್ಷಿತ ದೈನಂದಿನ ಚಟುವಟಿಕೆಗಳು ಇಷ್ಟವಾಗುತ್ತವೆ. ಇಂತಹ ಕೆಲಸದ ಪರಿಸರ ಇಲ್ಲದ ದೀರ್ಘ ಕೆಲಸದ ಸಮಯ ಅಥವಾ ನಿರಂತರವಾಗಿ ಲಭ್ಯವಿರಬೇಕಾಗಿರುವ ಅಗತ್ಯವು ಮಾನಸಿಕ ಸುಸ್ತಿಗೆ ಕಾರಣವಾಗಬಹುದು.
“ಯುವಜನರಿಗೆ ದಾದಿಯರಂತಹ ಕೆಲಸ ತಾತ್ಕಾಲಿಕವಾದ ವೃತ್ತಿಯ ಹಂತವಾಗಿರಬಹುದು. ಮುಂದಿನ ಹಂತವನ್ನು ನಿರ್ಧರಿಸುವ ಮೊದಲು ಕಾರ್ಪೋರೇಟ್ ಒತ್ತಡದಿಂದ ದೂರವಾಗಿ ಗೌರವಯುತವಾಗಿ ಹಣ ಗಳಿಸುವ ಸಂತೋಷ ಇರಬಹುದು. ಇನ್ನು ಕೆಲವರಿಗೆ ಇದು ದೀರ್ಘಾವಧಿಯ ವೃತ್ತಿಯೂ ಆಗಿರಬಹುದು” ಎನ್ನುತ್ತಾರೆ ಶಿವಾಂಗಿ.
ಕೃಪೆ: ಇಂಡಿಯಾ ಟುಡೆ