ವಯಸ್ಸಿಗೆ ಅನುಗುಣವಾಗಿ ನಿತ್ಯವೂ ಎಷ್ಟು ನೀರು ಕುಡಿಯಬೇಕು?
ಸಾಂದರ್ಭಿಕ ಚಿತ್ರ | Photo Credit : freepik
ವ್ಯಕ್ತಿಯ ವಯಸ್ಸು, ದೇಹದ ಗಾತ್ರ, ಜೀವನಶೈಲಿ ಮತ್ತು ಹವಾಮಾನದಂತಹ ಅಂಶಗಳೂ ನೀರು ಕುಡಿಯುವ ಪ್ರಮಾಣದ ಮೇಲೆ ಪರಿಣಾಮ ಬೀರುತ್ತವೆ.
ಮಾನವ ದೇಹದಲ್ಲಿ ಶೇ 60ರಿಂದ 70ರಷ್ಟು ನೀರಿನಂಶವೇ ಇರುತ್ತದೆ. ಉಸಿರಾಟ, ಬೆವರು ಮತ್ತು ಮೂತ್ರದ ಮೂಲಕ ದ್ರವ ನಮ್ಮ ದೇಹವನ್ನು ತೊರೆದು ಹೋಗುತ್ತಿರುತ್ತದೆ. ಹೀಗಾಗಿ ಎಷ್ಟು ನೀರು ಕುಡಿಯಬೇಕು ಎಂದು ತಿಳಿದುಕೊಳ್ಳುವುದು ಕೇವಲ ಬಾಯಾರಿಕೆಯ ವಿಚಾರವಲ್ಲ. ಇದು ಹಂತ-ಹಂತವಾಗಿ ದೇಹ ಚೆನ್ನಾಗಿ ಕೆಲಸ ಮಾಡುತ್ತಿದೆಯೇ ಎನ್ನುವುದನ್ನು ಗಮನಿಸುವುದು ಆಗಿರುತ್ತದೆ.
ದಿನಕ್ಕೆ ಎಂಟು ಗ್ಲಾಸ್ ನೀರು ಕುಡಿಯಬೇಕು ಎನ್ನುವುದು ಹಳೆಯ ಕಲ್ಪನೆ. ವಾಸ್ತವದಲ್ಲಿ ದೈನಂದಿನ ನೀರು ಸೇವನೆಯು ಪ್ರತಿಯೊಬ್ಬ ವ್ಯಕ್ತಿಗೂ ವಿಭಿನ್ನವಾಗಿರುತ್ತದೆ. ವ್ಯಕ್ತಿಯ ವಯಸ್ಸು, ದೇಹದ ಗಾತ್ರ, ಜೀವನಶೈಲಿ ಮತ್ತು ಹವಾಮಾನದಂತಹ ಅಂಶಗಳೂ ನೀರು ಕುಡಿಯುವ ಪ್ರಮಾಣದ ಮೇಲೆ ಪರಿಣಾಮ ಬೀರುತ್ತವೆ.
ವಯೋಮಾನಕ್ಕೆ ತಕ್ಕಂತೆ ಎಷ್ಟು ನೀರು ಕುಡಿಯಬೇಕು?
ವಯಸ್ಸಿಗೆ ಅನುಗುಣವಾಗಿ ವಿಂಗಡಿಸಿ ನೋಡಿದಾಗ ಎಷ್ಟು ನೀರು ಕುಡಿಯಬೇಕು ಎಂದು ಅರ್ಥ ಮಾಡಿಕೊಳ್ಳುವುದು ಸರಳವಾಗುತ್ತದೆ.
ಮಕ್ಕಳು ಮತ್ತು ಹದಿಹರೆಯದವವರು
• 1-3ರ ವಯಸ್ಸು: ಪ್ರತಿ ದಿನ 1 ಲೀಟರ್ (ಆಹಾರದ ನೀರು ಸೇರಿದಂತೆ)
• 4-8ರ ವಯಸ್ಸು: ಪ್ರತಿ ದಿನ ಸುಮಾರು 1.2 ಲೀಟರ್ಗಳು
• 9-13ರ ವಯಸ್ಸು: ಪ್ರತಿ ದಿನ ಸುಮಾರು 1.6ನಿಂದ 1.9 ಲೀಟರ್ಗಳು
• ಹದಿಹರೆಯದವರು (14-18): ಪ್ರತಿ ದಿನ ಸುಮಾರು 1-9-2.6 ಲೀಟರ್ಗಳು, ಬಾಲಕರು ಬಾಲಕಿಯರಿಗಿಂತ ಹೆಚ್ಚು ನೀರು ಕುಡಿಯಬೇಕು.
ಈ ಶಿಫಾರಸುಗಳು ಮಕ್ಕಳು ತೇವಾಂಶದ ಕೊರತೆ ಇಲ್ಲದೆ ಬೆಳೆಯಲು ಮತ್ತು ಸಕ್ರಿಯವಾಗಿರಲು ನೆರವಾಗುತ್ತದೆ.
ವಯಸ್ಕರಿಗೆ ನೀರಿನ ಪ್ರಮಾಣ
• ಪುರುಷರು (19+): ಪ್ರತಿ ದಿನ ಸುಮಾರು 3.1 ಲೀಟರ್ಗಳು
• ಮಹಿಳೆಯರು (19+): ಪ್ರತಿ ದಿನ ಸುಮಾರು 2.7 ಲೀಟರ್ಗಳು
ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರು
ತಾಯಂದಿರು ಹೆಚ್ಚು ನೀರು ಕುಡಿಯಬೇಕಾಗುತ್ತದೆ. ಗರ್ಭಿಣಿಯರು ಸುಮಾರು 3 ಲೀಟರ್ಗಳಷ್ಟು ನೀರು ಕುಡಿಯಬೇಕು, ಹಾಲುಣಿಸುವವರು 3.1 ಲೀಟರ್ಗಳಷ್ಟು ನೀರು ಕುಡಿಯಬೇಕು.
ಹಿರಿಯ ಪ್ರಜೆಗಳು (60+)
ವಯಸ್ಸಿಗೆ ಅನುಗುಣವಾಗಿ ಬಾಯಾರಿಕೆಯನ್ನು ಗ್ರಹಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಆದ್ದರಿಂದ ನಿರ್ಜಲೀಕರಣವನ್ನು ತಪ್ಪಿಸಲು ವಯಸ್ಸಾದವರು ದಿನಕ್ಕೆ 1.6- 2 ಲೀಟರ್ ನೀರನ್ನು ಕುಡಿಯಬೇಕಾಗುತ್ತದೆ.
ಸಾಕಷ್ಟು ನೀರು ಕುಡಿಯದೆ ಇರುವ ಸಂಕೇತಗಳು
ಅತಿ ಕಡಿಮೆ ನೀರು ಕುಡಿಯುವುದರಿಂದ ಆಯಾಸ, ತಲೆ ತಿರುಗುವುದು ಮತ್ತು ತಲೆನೋವು ಬರಬಹುದು. ದೇಹದಲ್ಲಿ ಸಾಕಷ್ಟು ಜಲಸಂಚಯನವಾಗದೆ ಇದ್ದರೆ ಮೂತ್ರಪಿಂಡದ ಕಲ್ಲುಗಳು, ಮೂತ್ರದ ಸೋಂಕು ಅಥವಾ ಹೃದಯ ಸ್ತಂಭನಕ್ಕೆ ಕಾರಣವಾಗಬಹುದು. ಮುಖ್ಯವಾಗಿ ವಯಸ್ಕರಿಗೆ ಮತ್ತು ಬಿಸಿ ವಾತಾವರಣದಲ್ಲಿ ಇಂತಹ ಸಮಸ್ಯೆಗಳು ಉಂಟಾಗಬಹುದು.
ಎಲೆಕ್ಟ್ರೋಲೈಟ್ ಸಮತೋಲನವಿಲ್ಲದೆ ಅತಿಯಾಗಿ ನೀರು ಕುಡಿಯುವುದು ಒಂದು ಸಮಸ್ಯೆಯಾಗಲಿದ್ದು, ರಕ್ತದಲ್ಲಿನ ಸೋಡಿಯಂ ಮಟ್ಟ ಕಡಿಮೆಯಾಗಿ ಹೈಪೊನಾಟ್ರಿಮಿಯ ಎನ್ನುವ ಅಪರೂಪದ ಗಂಭೀರ ರೋಗಕ್ಕೂ ಕಾರಣವಾಗಲಿದೆ.
ನೀರಿನ ಅಭ್ಯಾಸ ಸುಧಾರಿಸಲು ಸಲಹೆಗಳು
• ಯಾವಾಗಲೂ ಜೊತೆಗೆ ನೀರಿನ ಬಾಟಲಿ ಇರಲಿ, ಆಗಾಗ ನೀರು ಕುಡಿಯುತ್ತಿರಿ.
• ಊಟಕ್ಕೆ ಮೊದಲು ಒಂದು ಗ್ಲಾಸ್ ನೀರು ಕುಡಿಯಿರಿ.
• ಬಿಸಿ ವಾತಾವರಣದಲ್ಲಿದ್ದರೆ ಹೆಚ್ಚು ನೀರು ಕುಡಿಯಿರಿ.
• ಮೂತ್ರದ ಬಣ್ಣ ತಿಳಿ ಹಳದಿ ಇದ್ದರೆ ಉತ್ತಮ ನೀರಿನಂಶ ದೇಹದಲ್ಲಿದೆ ಎಂದು ಅರ್ಥ ಮಾಡಿಕೊಳ್ಳಬಹುದು.
ಕೃಪೆ: indiatoday.in