×
Ad

Kerala | ದೀಪಕ್ ಆತ್ಮಹತ್ಯೆ ಪ್ರಕರಣ: ಶಿಮ್ಜಿತಾಳ ವೈರಲ್ ವೀಡಿಯೋ ಮತ್ತು ಸೋಷಿಯಲ್ ಮೀಡಿಯಾ ನ್ಯಾಯ

Update: 2026-01-21 23:00 IST

 ಶಿಮ್ಜಿತಾ ಮುಸ್ತಫಾ , ದೀಪಕ್ | Screengrab : instagram.com


ಕೇರಳದಲ್ಲಿ 41 ವರ್ಷದ ದೀಪಕ್ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯೊಬ್ಬರಿಗೆ ದೀಪಕ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಅವರ ಮೇಲೆ ಹೋರಿಸಲಾಗಿದೆ. ಶಿಮ್ಜಿತಾ ಮುಸ್ತಫಾ ಎಂಬ ಮಹಿಳೆ, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ದೀಪಕ್ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದರು.

ಆ ವೀಡಿಯೋದಲ್ಲಿ ದೀಪಕ್ ಅವರ ಮೊಣಕೈ ತನ್ನ ಎದೆಗೆ ತಾಗುತ್ತಿರುವಂತೆ ಕಾಣುವ ಸೆಲ್ಫಿ ವಿಡಿಯೋ ಆಗಿತ್ತು. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ದೀಪಕ್ ಆತ್ಮಹತ್ಯೆ ಮಾಡಿದ್ದಾರೆ.

ವೀಡಿಯೋ ರೀಚ್ ಗಾಗಿ ಸುಳ್ಳು ಆರೋಪಗಳನ್ನು ಮಾಡಿ ಅಮಾಯಕ ವ್ಯಕ್ತಿಯೊಬ್ಬನ ಸಾವಿಗೆ ಕಾರಣಳಾದ ಶಿಮ್ಜಿತಾ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದು, ಆಕೆಯನ್ನು ಬಂಧಿಸಿದ್ದಾರೆ. ಬಂಧನದ ನಂತರ, ಕೋಝಿಕ್ಕೋಡ್‌ನ ಕುನ್ನಮಂಗಲಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಶಿಮ್ಜಿತಾ ಅವರಿಗೆ 14 ದಿನಗಳ ಕಾಲ ರಿಮಾಂಡ್ ವಿಧಿಸಿದ್ದು, ಅವರನ್ನು ಮಂಜೇರಿ ಜೈಲಿಗೆ ವರ್ಗಾಯಿಸಲಾಗುವುದು.

ಜನವರಿ 19 ರಂದು, ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಪೊಲೀಸರು ದೀಪಕ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶಿಮ್ಜಿತಾ ವಿರುದ್ಧ ಪ್ರಥಮ ಮಾಹಿತಿ ವರದಿ ಸಲ್ಲಿಸಿದರು. ಎಫ್‌ಐಆರ್ ನಂತರ ಶಿಮ್ಜಿತಾ ಪರಾರಿಯಾಗಿದ್ದಾರೆ ಎಂದು ವರದಿಯಾಗಿತ್ತು. ವರದಿಗಳ ಪ್ರಕಾರ, ಬುಧವಾರ ವಡಗರದಲ್ಲಿ ಸಂಬಂಧಿಕರ ಮನೆಯಿಂದ ಆಕೆಯನ್ನು ಬಂಧಿಸಲಾಯಿತು. ಅವರ ಬಂಧನಕ್ಕೆ ಕೆಲವು ಗಂಟೆಗಳ ಮೊದಲು, ಪೊಲೀಸರು ಅವರ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಿದ್ದರು. ಆಕೆ ಪರಾರಿಯಾಗಿದ್ದ ನಂತರ ಪೊಲೀಸರು ರಾಜ್ಯದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯವು ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪರಿಗಣಿಸುವ ಒಂದು ದಿನದ ಮೊದಲು ಬಂಧನ ನಡೆದಿದೆ.

ಶಿಮ್ಜಿತಾ ಆನ್‌ಲೈನ್‌ನಲ್ಲಿ ವೀಡಿಯೊ ಪೋಸ್ಟ್ ಮಾಡಿದ ಕೆಲವು ದಿನಗಳ ನಂತರ ಅಂದರೆ ಜನವರಿ 18 ರಂದು ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ದೀಪಕ್ ಅವರ ಕುಟುಂಬದವರ ಪ್ರಕಾರ, ಜನವರಿ 16 ರಂದು ದೀಪಕ್ ಕೋಝಿಕ್ಕೋಡ್ ನಿಂದ ಕಣ್ಣೂರಿಗೆ ಕೆಲಸಕ್ಕಾಗಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಶಿಮ್ಜಿತಾ ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು.

ವಿಡಿಯೊದಲ್ಲೇನಿದೆ?

ಶಮ್ಜಿತಾ ಪೋಸ್ಟ್ ಮಾಡಿರುವ ವೀಡಿಯೋದಲ್ಲಿ ಆಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಒಬ್ಬ ವ್ಯಕ್ತಿ ಆಕೆಗೆ ತಾಕುತ್ತಿರುವಂತೆ ಕಾಣುತ್ತದೆ. ಆಮೇಲೆ ಸೆಲ್ಫಿ ವಿಡಿಯೋದಲ್ಲಿ ಆತನ ಮೊಣಕೈ ಆಕೆಯ ಎದೆಭಾಗಕ್ಕೆ ತಾಗುವಂತೆ ಕಾಣುತ್ತದೆ. ಆ ವ್ಯಕ್ತಿ ಇದು ಬೇಕೂಂತ ಮಾಡಿದ್ದು. ಇಂಥವರಿಗೆ ಬುದ್ಧಿ ಕಲಿಸುವುದಕ್ಕಾಗಿ ವೀಡಿಯೋ ಶೇರ್ ಮಾಡಿದ್ದು ಅಂತ ಶಿಮ್ಜಿತಾ ವೀಡಿಯೋದಲ್ಲಿ ಹೇಳಿದ್ದಾರೆ.

ವೀಡಿಯೋ ವೈರಲ್ ಆದ ನಂತರ ದೀಪಕ್ ಮಾನಸಿಕವಾಗಿ ನೊಂದಿದ್ದರು. ಅವರು ಸಾರ್ವಜನಿಕವಾಗಿ ಅವಮಾನಿಸಲ್ಪಟ್ಟರು ಎಂದು ದೀಪಕ್ ಅವರ ಕುಟುಂಬ ಆರೋಪಿಸಿದೆ. ಈ ಬಗ್ಗೆ ದೂರು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ದೀಪಕ್ ಕುಟುಂಬ ಒತ್ತಾಯಿಸಿತ್ತು. ತನಿಖೆಯ ಭಾಗವಾಗಿ ಪೊಲೀಸರು ಜನವರಿ 19 ರಂದು ದೀಪಕ್ ಅವರ ಪೋಷಕರ ಹೇಳಿಕೆಗಳನ್ನು ದಾಖಲಿಸಿದ್ದಾರೆ.

ಏತನ್ಮಧ್ಯೆ, ಮಾನವ ಹಕ್ಕುಗಳ ಆಯೋಗವು ವಕೀಲರಾದ ವಿ ದೇವದಾಸ್ ಮತ್ತು ಅಬ್ದುಲ್ ರಹೀಮ್ ಪೂಕತ್ ಅವರು ಸಲ್ಲಿಸಿದ ದೂರುಗಳ ಮೇರೆಗೆ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಉತ್ತರ ವಲಯ ಡಿಐಜಿಗೆ ನಿರ್ದೇಶನ ನೀಡಿದೆ. ಆಯೋಗದ ನ್ಯಾಯಾಂಗ ಸದಸ್ಯ ಕೆ ಬೈಜುನಾಥ್ ಅವರು ಒಂದು ವಾರದೊಳಗೆ ವರದಿ ಕೋರಿದ್ದಾರೆ.

ಅನುಚಿತ ವರ್ತನೆಗೆ ವೀಡಿಯೋ ಸಾಕ್ಷಿ?

ಇಲ್ಲಿ ವಿವಾದದ ಪ್ರಾಥಮಿಕ ಅಂಶವೆಂದರೆ ಶಿಮ್ಜಿತಾ ಅವರ ವೀಡಿಯೊ. ದೀಪಕ್ ಉದ್ದೇಶಪೂರ್ವಕವಾಗಿ ತನ್ನ ಎದೆಗೆ ಮೊಣಕೈ ತಾಗಿಸಿದ್ದಾರೆ ಎಂಬ ಆರೋಪದಲ್ಲಿ ಅವರು ದೃಢವಾಗಿ ನಿಂತಿದ್ದರೂ, ವೀಡಿಯೊವನ್ನು ವೀಕ್ಷಿಸಿದ ಹಲವಾರು ಇಂಟರ್ನೆಟ್ ಬಳಕೆದಾರರು ಅದು ಆಕಸ್ಮಿಕ ಎಂದು ಹೇಳಿಕೊಂಡಿದ್ದಾರೆ. ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ ಮತ್ತು ಇನ್‌ಸ್ಟಾಗ್ರಾಮ್ ಇನ್ ಫ್ಲೂಯೆನ್ಸರ್ ಯಾವ ರೀತಿ ಸುಳ್ಳು ಆಪಾದನೆ ಮಾಡಿದ್ದಾರೆ? ದೀಪಕ್ ಎಂಬ ಪ್ರಯಾಣಿಕ ಯಾವ ರೀತಿ ಬಸ್ಸಿನಲ್ಲಿ ನಿಂತಿದ್ದರು. ಶಿಮ್ಜಿತಾ ಯಾವ ರೀತಿ ನಿಂತಿದ್ದಾರೆ ಎಂಬುದರ ಬಗ್ಗೆ ಹಲವಾಪು ಬಳಕೆದಾರರು ವಿಶ್ಲೇಷಣೆ ಮಾಡಿದ್ದಾರೆ .

ಕೆಲವು ಬಳಕೆದಾರರು ಅನುಚಿತವಾಗಿ ಸ್ಪರ್ಶಿಸಲ್ಪಟ್ಟಾಗ ಮಹಿಳೆ ಹೇಗೆ ಇಷ್ಟೊಂದು ಕೂಲ್ ಆಗಿ ಕಾಣಿಸಿಕೊಳ್ಳಬಹುದು ಎಂದು ಕೇಳಿದ್ದಾರೆ. ಶಿಮ್ಜಿತಾ ಅವರು ವೀಡಿಯೊ ರೆಕಾರ್ಡ್ ಮಾಡಿದ ನಂತರ ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದೆ ಎಂದು ಹೇಳುತ್ತಿದ್ದರೂ, ಅದರ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಬಸ್ಸಿನಲ್ಲಿ ಅಂಥಾ ಘಟನೆ ನಡೆದಿರುವ ಬಗ್ಗೆ ನಮ್ಮ ಗಮನಕ್ಕೂ ಆಕೆ ತಂದಿರಲಿಲ್ಲ ಎಂದು ಬಸ್ಸಿನ ಕಂಡೆಕ್ಟರ್ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ನ್ಯಾಯ ಕೇಳುವ ದಾರಿ

ಯಾವುದೇ ವಿಷಯಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರದೇ ಏಕಾಏಕಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಶಿಮ್ಜಿತಾ ತಪ್ಪು ಮಾಡಿದ್ದಾರೆ. ಬಸ್ಸಿನಲ್ಲಿ ಕಿರುಕುಳ ನೀಡುವವರಿಗೆ ಬುದ್ಧಿ ಕಲಿಸಬೇಕು ಎಂದೇ ವಿಡಿಯೊ ಪೋಸ್ಟ್ ಮಾಡಿದ್ದು ಎಂದು ಹೇಳುವ ಕಂಟೆಂಟ್ ಕ್ರಿಯೇಟರ್ ಗಳ ಸಂಖ್ಯೆಯೂ ಹೆಚ್ಚಾಗಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಸೈಬರ್ ದಾಳಿಮಾಡುತ್ತಾರೆ. ಇದರಲ್ಲಿ ತಪ್ಪು ಮಾಡದೇ ಇದ್ದ ಅಮಾಯಕ ವ್ಯಕ್ತಿ ಇದ್ದರೆ ಆತನಿಗೆ ಆಗುವ ಮಾನಸಿಕ ನೋವನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ

ಇದು ಆರೋಪವನ್ನು ಕಟ್ಟುನಿಟ್ಟಾಗಿ ಸ್ಥಾಪಿಸದಿದ್ದಾಗ ಅಥವಾ ಎರಡೂ ಕಡೆಯಿಂದ ಪ್ರತಿಕ್ರಿಯೆಯನ್ನು ಪಡೆಯದೇ ಮಾಡಿದಾಗ ಅಂತಹ ವ್ಯಾಖ್ಯಾನವು ವಿಶೇಷವಾಗಿ ಸಮಸ್ಯಾತ್ಮಕವಾಗಿರುತ್ತದೆ. ಇಂಥಾ ವಿಡಿಯೋ ಆರೋಪ ಮತ್ತು ಪುರಾವೆಗಳ ನಡುವಿನ ರೇಖೆಯನ್ನು ಮಸುಕುಗೊಳಿಸುತ್ತದೆ.

ಆದಾಗ್ಯೂ, ನಾವು ಸಾಮಾಜಿಕ ಮಾಧ್ಯಮದ ಗದ್ದಲವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾದರೂ, ಸಾರ್ವಜನಿಕ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯದ ವೀಡಿಯೊಗಳನ್ನು ಪೋಸ್ಟ್ ಮಾಡಲು ಹಲವಾರು ಮಹಿಳೆಯರು ಹೆಚ್ಚಾಗಿ ಸಾಮಾಜಿಕ ಮಾಧ್ಯಮವನ್ನು ಏಕೆ ಆಶ್ರಯಿಸುತ್ತಾರೆ ಎಂಬುದನ್ನು ಪರಿಶೀಲಿಸುವುದು ಸಹ ಅಗತ್ಯವಾಗಿದೆ.

ಮಹಿಳೆಯರು ಇಂತಹ ವೀಡಿಯೊಗಳನ್ನು ಏಕೆ ಪೋಸ್ಟ್ ಮಾಡುತ್ತಾರೆ?

ಶಿಮ್ಜಿತಾ ಅವರನ್ನು ಬೆಂಬಲಿಸಿರುವ ಹಲವಾರು ಮಹಿಳೆಯರು, ಸಾರ್ವಜನಿಕ ಸಾರಿಗೆಯಲ್ಲಿ ಇಂಥಾ ಘಟನೆಗಳು ಆಗಾಗ್ಗೆ ಆಗುತ್ತಿರುತ್ತವೆ ಎಂದು ಹೇಳುತ್ತಾರೆ. ಅಂತಹ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯ ವೈಫಲ್ಯ ಅನೇಕ ಮಹಿಳೆಯರು ಈ ರೀತಿ ವೀಡಿಯೊವನ್ನು ಪೋಸ್ಟ್ ಮಾಡಲು ಪ್ರಚೋದಿಸುತ್ತದೆ. ಇದು ಸಂಭಾವ್ಯ ಅಪರಾಧಿಗಳನ್ನು ನಿಯಂತ್ರಣದಲ್ಲಿಡುತ್ತದೆ ಎಂದು ಅವರು ವಾದಿಸುತ್ತಾರೆ.

2023 ರಲ್ಲಿ ಕೇರಳದಲ್ಲಿ ಬಸ್ಸಿನೊಳಗೆ ಹಸ್ತಮೈಥುನ ಮಾಡಿದ್ದ ಸವಾದ್ ಎಂಬ ವ್ಯಕ್ತಿಯ ಪ್ರಕರಣ ನೆನಪಿರಬಹುದು. ನಟಿ ಮತ್ತು ಮಾಡೆಲ್ ಆಗಿರುವ ನಂದಿತಾ ಶಂಕರ್ ಈ ಘಟನೆಯನ್ನು ವಿವರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ ನಂತರ ಈ ಘಟನೆ ಸಾರ್ವಜನಿಕ ಗಮನಕ್ಕೆ ಬಂದಿತು. ಆದರೆ ನಂತರದ ದಿನಗಳಲ್ಲಿ, ಆಕೆಯ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಫೋಟೋದಲ್ಲಿ ಆಕೆ ಧರಿಸಿದ ಬಟ್ಟೆ ಬಗ್ಗೆ ಹಲವಾರು ಮಂದಿ ಟೀಕಿಸಿದ್ದರು. 2025 ರಲ್ಲಿ, ಬೇರೆ ಬಸ್ಸಿನೊಳಗೆ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಸವಾದ್ ಮೇಲೆ ಮತ್ತೊಮ್ಮೆ ಪ್ರಕರಣ ದಾಖಲಾದಾಗ, ಎರಡು ವರ್ಷಗಳ ಕಾಲ ಸಾಮಾಜಿಕವಾಗಿ ಅನುಭವಿಸಿದ ಆಘಾತದ ಬಗ್ಗೆ ಹೇಳಿಕೊಂಡಿದ್ದರು ನಂದಿತಾ.

ಸಮಾಜದಿಂದ ಸಾಕ್ಷ್ಯಾಧಾರಗಳಿಗಾಗಿ ಸಾಮೂಹಿಕ ಬೇಡಿಕೆ ಇರುವುದರಿಂದ ಮಹಿಳೆಯರು ಇಂತಹ ವೀಡಿಯೊಗಳನ್ನು ಚಿತ್ರೀಕರಿಸುವುದು ಈಗ ಹೆಚ್ಚಾಗಿದೆ. ಆದರೆ ನಂತರದ ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆಗಳು ಹೆಚ್ಚಾಗಿ ವಿರೋಧಾತ್ಮಕವಾಗಿರುತ್ತವೆ. ಮಹಿಳೆಯ ಹೇಳಿಕೆಗಳ ಸತ್ಯಾಸತ್ಯತೆಯನ್ನು ಲೆಕ್ಕಿಸದೆ, ಹೆಚ್ಚಿನ ಸಂದರ್ಭಗಳಲ್ಲಿ, ಅವಳ ಮೇಲೆ ಸೈಬರ್ ದಾಳಿ ನಡೆಯುತ್ತದೆ. ಸಾಮಾಜಿಕ ಮಾಧ್ಯಮ ಚರ್ಚೆಗಳು ನಮ್ಮ ಸಾಮಾಜಿಕ-ರಾಜಕೀಯ ತಿಳುವಳಿಕೆ ನೀಡುತ್ತವೆ, ಧೈರ್ಯ ತುಂಬುತ್ತವೆ ಎಂಬುದು ನಿಜ. ಆದರೆ ಅಗತ್ಯವಿದ್ದಾಗ ನಾವು ಸಂಯಮವನ್ನು ಕಾಪಾಡಿಕೊಳ್ಳಬೇಕಿದೆ. ಎಲ್ಲಾ ವಿಷಯಗಳಿಗೆ ತಕ್ಷಣದ ಪ್ರತಿಕ್ರಿಯೆಗಳು ಅಗತ್ಯವಿಲ್ಲ, ಏಕೆಂದರೆ ಕೆಲವು ವಿಷಯಗಳಿಗೆ ಎಚ್ಚರಿಕೆಯ ವಿಶ್ಲೇಷಣೆ ಮತ್ತು ಸೂಕ್ಷ್ಮತೆ ಅಗತ್ಯ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News